ಕೋವಿಡ್ ರೋಗದ ಬದಲಾದ ಲಕ್ಷಣಗಳು ಮನುಕುಲವನ್ನು ತನ್ನ ಕಪಿಮುಷ್ಠಿಯಲ್ಲಿ ವಿಲವಿಲನೆ ಒದ್ದಾಡುವಂತೆ ಮಾಡುತ್ತಿರುವುದಂತೂ ನಿಜವಾದ ವಿಚಾರವಾಗಿದೆ.2020 ಏಪ್ರಿಲ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 32 ಲಕ್ಷವನ್ನೂ ಮೀರುವ ಸಾಧ್ಯತೆ ಇದೆ. ಜಗತ್ತಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಕೋಟಿಗೆ ತಲುಪುವ ಸಾಧ್ಯತೆ ಇದೆ.
SARS-CoV-2 ಎಂಬ ಕೊರೋನಾ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುವ ಕೋವಿಡ್-19 ರೋಗ 2019 ರಿಂದ ಆರಂಭವಾಗಿ 2020ರಲ್ಲಿ ವಿಶ್ವವ್ಯಾಪಿಯಾಗಿ ಹರಡಿ 2021 ರಲ್ಲಿಯೂ ಜಗತ್ತನ್ನು ತನ್ನ ಕದಂಬಬಾಹುಗಳಲ್ಲಿ ಹಿಡಿದಿಟ್ಟುಕೊಂಡು ಮನುಕುಲವನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಈಗ ಜಗತ್ತಿನೆಲ್ಲೆಡೆ ಎರಡನೇ ಅಲೆಯ ಆರ್ಭಟ ಜೋರಾಗಿದೆ. 2021ರ ಆರಂಭದಲ್ಲಿ, ಅಬ್ಬಾ ಈ ಕೊರೋನಾದ ಕಾಟ ಮುಗಿಯಿತಲ್ಲಾ ಎಂದು ಜನರು ನೆಮ್ಮದಿಯಿಂದ ಉಸಿರು ತೆಗೆದುಕೊಂಡು ಒಂದೆರಡು ತಿಂಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದೇ ಈಗಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಯ್ತು. ಬದಲಾದ ಕಾಲಘಟ್ಟದಲ್ಲಿ ಹೊಸ ಲಸಿಕೆ ಔಷಧಿಗಳಿಂದ ವೈರಾಣುವಿನ ಮೇಲೆ ಮಾನವ ಏರಿ ಹೋದಾಗ ಚಾಣಾಕ್ಷಮತಿ ವೈರಾಣು ರೂಪಾಂತರ ಮಾಡಿಕೊಂಡು ಮತ್ತಷ್ಟು ಕೆರಳಿ ಉಗ್ರವಾಗಿ ಮನುಕುಲದ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುತ್ತಿದೆ.
ಸಾವು ನೋವಿನ ಸಂಖ್ಯೆ ಮಿತಿಮೀರಿ ಹೋಗುತ್ತಿದೆ. 2020 ಏಪ್ರಿಲ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 32 ಲಕ್ಷವನ್ನೂ ಮೀರುವ ಸಾಧ್ಯತೆ ಇದೆ. ಜಗತ್ತಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಕೋಟಿಗೆ ತಲುಪುವ ಸಾಧ್ಯತೆ ಇದೆ. ಭಾರತ ದೇಶವೊಂದರಲ್ಲಿ 18 ಲಕ್ಷ ಮಂದಿ ಸೋಂಕಿತರು ಮತ್ತು ಎರಡು ಲಕ್ಷ ಸಾವು ಸಂಭವಿಸಿದೆ. 16 ಲಕ್ಷ ಮಂದಿ ಚೇತರಿಸಿಕೊಂಡಿರುವುದು ಸಮಾಧಾನಕರ ಅಂಶ. ಒಟ್ಟಿನಲ್ಲಿ ಎರಡನೇ ಅಲೆಯು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಮನುಕುಲವನ್ನು ತನ್ನ ಕಪಿಮುಷ್ಠಿಯಲ್ಲಿ ವಿಲವಿಲನೆ ಒದ್ದಾಡುವಂತೆ ಮಾಡುತ್ತಿರುವುದಂತೂ ನಿಜವಾದ ವಿಚಾರವಾಗಿದೆ.
ಕೋವಿಡ್-19 ರೋಗದ ಹೊಸದಾದ ಲಕ್ಷಣಗಳು:
ಸಾಮಾನ್ಯವಾಗಿ ಕೊರೋನಾ ವೈರಾಣು ಸೋಂಕಿತರು ಜ್ವರ, ಮೈಕೈ ನೋವು ಮತ್ತು ಸುಸ್ತುನಿಂದ ಬಳಲಿ ಗುಣಮುಖರಾಗುತ್ತಾರೆ. ಬೇರೆ ಬೇರೆ ವ್ಯಕ್ತಿಗಳಲ್ಲಿ ಆ ವ್ಯಕ್ತಿಯ ದೇಹದ ರಕ್ಷಣಾ ವ್ಯವಸ್ಥೆಯನ್ನು ಅವಲಂಬಿಸಿ ರೋಗ ಲಕ್ಷಣಗಳು ಕಂಡುಬರುತ್ತದೆ.
ಸಾಮಾನ್ಯವಾಗಿ ಹೆಚ್ಚು ಕಾಣಿಸುವ ಲಕ್ಷಣಗಳು:
ಜ್ವರ, ಒಣ ಕೆಮ್ಮು, ಸುಸ್ತು ಮತ್ತು ಮೈಕೈ ನೋವು ಕಂಡುಬರುತ್ತದೆ.
ಕಡಿಮೆ ಕಾಣುವ ಲಕ್ಷಣಗಳು:
ಗಂಟಲು ಕೆರೆತ, ತಲೆನೋವು, ವಾಸನೆ ಗ್ರಹಣಶಕ್ತಿ ಇಲ್ಲದಿರುವುದು ಮತ್ತು ರುಚಿ ಇಲ್ಲದಿರುವುದು ರೋಗ ಮುಂದುವರಿದ ಹಂತದಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತದೆ. ಇತ್ತೀಚೆಗೆ ಕಣ್ಣು ಉರಿ, ಬೇಧಿ, ಚರ್ಮದಲ್ಲಿ ಉರಿತ ಮತ್ತು ಕೆರೆತ ಹಾಗೂ ಕೈಬೆರಳು ಮತ್ತು ಹೆಬ್ಬೆರಳು ಗಳು ಕಪ್ಪಗಾಗುವುದು ಕಂಡುಬರುತ್ತಿದೆ. ಆರಂಭದಲ್ಲಿ ಎಲ್ಲಾ ವೈರಾಣು ಜ್ವರದಂತೆ ಕಂಡು ಬರುತ್ತದೆ. ಮುಂದುವರಿದ ಹಂತದಲ್ಲಿ ವಿಪರೀತ ಸುಸ್ತು, ದಮ್ಮುಕಟ್ಟುವುದು, ಉಸಿರಾಟದ ತೊಂದರೆ, ಎದೆನೋವು, ಮಾತು ಬರದಿರುವುದು ಮತ್ತು ನಿಶ್ಚಲವಾಗುವುದು ಕಂಡುಬರುತ್ತದೆ. ಸಾಮಾನ್ಯವಾಗಿ ವೈರಾಣು ದೇಹದೊಳಗೆ ಸೇರಿದ 5 ರಿಂದ 6 ದಿನಗಳ ಒಳಗಾಗಿ ರೋಗದ ಲಕ್ಷಣಗಳು ಕಂಡು ಬರುತ್ತದೆ. ಆದರೆ ಕೆಲವೊಮ್ಮೆ 10 ರಿಂದ 14 ದಿನಗಳ ಬಳಿಕವೂ ಕಂಡುಬರುವ ಸಾಧ್ಯತೆ ಇರುತ್ತದೆ.
ಬಾಯಿಯಲ್ಲಿ ಕಂಡು ಬರುವ ಕೋವಿಡ್ ರೋಗದ ಲಕ್ಷಣಗಳು:
ಸುಮಾರು 60 ಶೇಕಡಾ ರೋಗಿಗಳಲ್ಲಿ ಆಹಾರದ ವಾಸನೆ ಇಲ್ಲದಿರುವುದು ಮತ್ತು ರುಚಿ ಗ್ರಹಣ ಶಕ್ತಿ ಇಲ್ಲದಿರುವುದು ಕಂಡು ಬಂದಿದೆ. ಇದರ ಜೊತೆಗೆ ಕೆಲವು ಕೋವಿಡ್-19 ರೋಗಿಗಳಲ್ಲಿ ಒಣಬಾಯಿ ಸಮಸ್ಯೆ ಕಂಡು ಬಂದಿದೆ. ಬಾಯಿಯಲ್ಲಿ ದಿನವೊಂದಕ್ಕೆ 1100 ರಿಂದ 1500 ml ಜೊಲ್ಲುರಸ ಬಿಡುಗಡೆಯಾಗುತ್ತದೆ. ಕೋವಿಡ್-19 ಸೋಂಕು ತಗುಲಿದಾಗ ಈ ಜೊಲ್ಲು ರಸ ಪ್ರಮಾಣ ವಿಪರೀತವಾಗಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಅದೇ ರೀತಿ ಬಾಯಿಯಲ್ಲಿ ವಾಸನೆ ಕೂಡಾ ಕಂಡುಬಂದಿದೆ. ಬಾಯಿಯಲ್ಲಿ ಜೊಲ್ಲುರಸದ ಪ್ರಮಾಣ ಕಡಿಮೆಯಾದಾಗ ಬಾಯಿ ಒಣಗುವುದು, ಮಾತನಾಡಲು ಕಷ್ಟವಾಗುವುದು ಮತ್ತು ಬಾಯಿ ವಾಸನೆ ಹೆಚ್ಚು ಕಂಡು ಬರುತ್ತದೆ. ಕೋವಿಡ್-19 ರೋಗಿಗಳಲ್ಲಿಯೂ ಈ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಅದೇ ರೀತಿ ಕೆಲವೊಂದು ಕೋವಿಡ್-19 ರೋಗಿಗಳಲ್ಲಿ ನಾಲಗೆ ಮೇಲೆ ದಪ್ಪಗಾದ ಕೆಂಪು ಮತ್ತು ಬಿಳಿ ಪದರ ಕಂಡು ಬಂದಿದೆ. ಸಾಮಾನ್ಯವಾಗಿ ಆರೋಗ್ಯವಂತ ನಾಲಗೆ ಪಿಂಕ್ (ಗುಲಾಬಿ) ಹೊಂದಿರುತ್ತದೆ. ಯಾವಾಗ ನಿಮ್ಮ ನಾಲಗೆ ಬಣ್ಣ ಕೆಂಪು ಅಥವಾ ಬಿಳಿ ಬಣ್ಣಕ್ಕೆ ತಿರುಗಿದಾಗ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳತಕ್ಕದ್ದು. ಕೆಲವೊಂದು ಕೋವಿಡ್-19 ರೋಗಿಗಳಲ್ಲಿ ಬಾಯಿಯ ಒಳಭಾಗದ ಪದರ ಕಳಚಿ ಹೋಗಿ ಬಾಯಿ ಉರಿ ಕಂಡುಬಂದಿದೆ ಮತ್ತು ಬಾಯಿಯ ಎರಡು ಬದಿಯಲ್ಲಿ ಚರ್ಮ ಬಿರುಕು ಬಿಟ್ಟಿರುವುದು ವರದಿಯಾಗಿದೆ. ಚರ್ಮದ ಉರಿತ, ಉರಿ ಊತದ ಜೊತೆಗೆ ಬಾಯಿಯಲ್ಲಿ ಉರಿತ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು.
ಕೊನೆಮಾತು: ಬದಲಾದ ಪರಿಸ್ಥಿತಿಯಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕೊರೋನಾ ವೈರಾಣು ರೂಪಾಂತರ ಮಾಡಿಕೊಂಡು ರೋಗದ ಲಕ್ಷಣಗಳನ್ನು ಬದಲು ಮಾಡಿಕೊಂಡಿರುವುದು ಈಗ ಸಾಬೀತಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ರೋಗ ನಿರ್ಣಯ ಮಾಡುವ ಅನಿವಾರ್ಯತೆ ಇದೆ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com