Health Vision

Health Vision

SUBSCRIBE

Magazine

Click Here

ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ?

ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ? ಔಷಧಿ ಮತ್ತು ಲಸಿಕೆ ಇಲ್ಲದ ರೊಗವನ್ನು ಗೆಲ್ಲಲು ಇರುವುದೊಂದೇ ಉಪಾಯ ಎಂದರೆ ರೋಗಕ್ಕೆ ತುತ್ತಾಗದಿರುವುದು ಮತ್ತು ರೋಗಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು.ಇಡೀ ಮನುಕುಲವೇ ಕಣ್ಣಿಗೆ ಕಾಣದ ವೈರಾಣುವಿನ ಮುಂದೆ ಮಕಾಡೆ ಮಲಗಿದೆ.ಬದಲಾದ ಸನ್ನಿವೇಶದಲ್ಲಿ ಪ್ರಕೃತಿಗೆ ಪೂರಕವಾಗಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಲೇಬೇಕು.

doctors-working-during-coronaಕೋವಿಡ್-19 ಎಂಬ ರೋಗ SARS-CoV-2 ಎಂಬ ಕೊರೋನಾ ಗುಂಪಿಗೆ ಸೇರಿದ ವೈರಾಣುವಿನಿಂದ ಬರುತ್ತದೆ. ಈ ವೈರಾಣುವಿನ ವಿರುದ್ಧ ನಿರ್ದಿಷ್ಟವಾಗಿ ಹೋರಾಡುವ ಆಂಟಿವೈರಲ್ ಔಷಧಿಯನ್ನು ಇನ್ನು ಕಂಡು ಹಿಡಿದಿಲ್ಲದ ಕಾರಣ, ರೋಗದ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದು ವೈರಾಣು ಸೋಂಕು ಆಗಿರುವ ಕಾರಣ ಆಂಟಿಬಯೋಟಿಕ್ ಈ ರೋಗದ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ. ಆದರೆ ವೈರಾಣು ಸೋಂಕು ಇರುವಾಗ ಬ್ಯಾಕ್ಟೀರಿಯಾ ಸೋಂಕು ತಗುಲಿ ನ್ಯೂಮೋನಿಯಾ ಸೋಂಕು ಉಂಟಾದಲ್ಲಿ ಆಂಟಿಬಯೋಟಿಕ್ ಬಳಸಲಾಗುತ್ತದೆ. ಒಟ್ಟಿನಲ್ಲಿ ಹಲವಾರು ಔಷಧಿಗಳನ್ನು ಬೇರೆ ಬೇರೆ ರೀತಿಯಲ್ಲಿ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಬಳಸಲಾಗುತ್ತದೆ. ಜ್ವರ ನಿವಾರಕ ಔಷಧಿಗಳು, ನೋವು ನಿವಾರಕ ಔಷಧಿಗಳು, ಕೆಮ್ಮು ನಿವಾರಕ ಔಷಧಿಗಳು ದೇಹದ ರಕ್ಷಣಾ ವ್ಯವಸ್ಥೆ ನಿಯಂತ್ರಿಸುವ ಔಷಧಿಗಳು ಹೀಗೆ ಹಲವಾರು ಔಷಧಿಗಳನ್ನು ವೈದ್ಯರು ರೋಗಿಯ ದೇಹದ ಸ್ಥಿತಿ, ತೂಕ, ವಯಸ್ಸು, ಇತರ ಲಕ್ಷಣಗಳನ್ನು ತಾಳೆ ಹಾಕಿ ನಿರ್ಧರಿಸುತ್ತಾರೆ.

ಕೋವಿಡ್-19 ರೋಗಕ್ಕೆ ರೆಡಿಮೇಡ್ ಚಿಕಿತ್ಸೆ ಲಭ್ಯವಿಲ್ಲ. ಪ್ರತಿಯೊಬ್ಬ ರೋಗಿಯ ರೋಗದ ಲಕ್ಷಣ ಮತ್ತು ದೇಹದ ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಶೀತ, ಜ್ವರ, ಮೈಕೈನೋವು ಸುಸ್ತು, ಆಯಾಸ, ತಲೆನೋವು, ಮೂಗು ಕಟ್ಟುವುದು, ಸೀನುವುದು ಕಂಡು ಬರುತ್ತದೆ. ಇವೆಲ್ಲವೂ ಸಾಮಾನ್ಯ ವೈರಲ್ ಜ್ವರ ಬಂದಾಗ (ಕಾಮನ್‍ಕೋಲ್ಡ್ ಅಥವಾ ಪ್ಲೂ) ಇರುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ರೀತಿಯಲ್ಲಿ ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಉಳಿದು ಇತರರಿಗೆ ರೋಗ ಹರಡದಂತೆ ದಿಗ್ಭಂಧನ ಹಾಕಿಕೊಂಡು ಇರಬೇಕಾಗುತ್ತದೆ. ವೈದ್ಯರಿಗೆ ರೋಗದ ಲಕ್ಷಣಗಳನ್ನು ತಿಳಿಸಿ, ಅವರ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಆದರೆ ಯಾವಾಗ ಕೆಮ್ಮಿನ ತೀವ್ರತೆ ಜಾಸ್ತಿಯಾಗುತ್ತದೋ ಮತ್ತು ಉಸಿರಾಟದ ಸಮಸ್ಯೆ ಕಂಡು ಬರುತ್ತದೋ ತಕ್ಷಣವೇ ವೈದ್ಯರನ್ನು ಸಂದರ್ಶಿಸಬೇಕಾದ ಅನಿವಾರ್ಯತೆ ಇರುತ್ತದೆ.

ವಿಪರೀತ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದಾಗ ಮನೆಯಲ್ಲಿಯೇ ಉಳಿಯಬಾರದು. ತಕ್ಷಣವೇ ವೈದ್ಯರನ್ನು ಕಂಡು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇರುತ್ತದೆ. ಇದಲ್ಲದೆ, ನಿಮ್ಮ ದೇಹದ ರಕ್ಷಣಾ ವ್ಯವಸ್ಥೆ ಕುಸಿದಿದ್ದಲ್ಲಿ (ಮಧುಮೇಹಿಗಳು, ಹೃದಯ ವೈಫಲ್ಯ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ರೋಗಿಗಳು ಸ್ಥೂಲಕಾಯದವರು ಇತ್ಯಾದಿ) ಯಾವುದೇ ಕಾರಣಕ್ಕೂ ಮನೆಮದ್ದು, ನಿರ್ಲಕ್ಷ್ಯ ಮಾಡಬಾರದು. ಎಲ್ಲ ಔಷಧಿಗಳನ್ನು ವೈದ್ಯರ ಉಸ್ತುವಾರಿಯಲ್ಲಿಯೇ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಅದೇನೇ ಇರಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನುರಿತ ವೈದ್ಯರಿಂದ ದೊರೆತಲ್ಲಿ ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ರೋಗದಿಂದ ಸಂಪೂರ್ಣವಾಗಿ ಗುಣಮುಖವಾಗುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ.

ಕೋವಿಡ್-19 ರೋಗಕ್ಕೆ ಬಳಸುವ ಔಷಧಿಗಳು:

ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ?1. ನೋವು ನಿವಾರಕ ಔಷಧಿಗಳು ಮತ್ತು ಜ್ವರ ಶಮನ ಮಾಡುವ ಔಷಧಿಗಳು: ಕೋವಿಡ್-19 ವೈರಾಣು ಸೋಂಕು ಆಗಿದ್ದು ಎಲ್ಲಾ ವೈರಾಣು ಸೋಂಕಿನಲ್ಲಿರುವಂತೆ ಜ್ವರ, ಮೈಕೈ ನೋವು, ಸುಸ್ತು, ತಲೆ ನೋವು, ಹೊಟ್ಟೆನೋವು ಇರುತ್ತದೆ. ನೋವು ನಿಯಂತ್ರಣ ಮಾಡಲು ಮತ್ತು ಜ್ವರ ನಿಯಂತ್ರಿಸಲು ಹೆಚ್ಚಾಗಿ ಪಾರಾಸಿಟಮಾಲ್ ಔಷಧಿ ಬಳಸಲಾಗುತ್ತದೆ. ಯಾವ ನೋವು ನಿವಾರಕ ನೀಡಬೇಕು ಎನ್ನುವುದನ್ನು ವೈದ್ಯರು ರೋಗಿಯ ದೇಹ ಪ್ರಕೃತಿಯನ್ನು ಆಧರಿಸಿ ನಿರ್ಧರಿಸುತ್ತಾರೆ.

2. ಕೆಮ್ಮು ನಿವಾರಕ ಔಷಧಿಗಳು: ಕೋವಿಡ್-19 ರೋಗ ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡಿ ಕೆಮ್ಮು ಉಲ್ಬಣಿಸುವಂತೆ ಮಾಡುತ್ತದೆ. ವಿಪರೀತವಾದ ಒಣಕೆಮ್ಮು ಇರುತ್ತದೆ. ಕೆಮ್ಮು ನಿವಾರಣೆಗಾಗಿ ಕೆಮ್ಮು ಶಮನ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ವೈದ್ಯರ ಸಲಹೆ ಸೂಚನೆ ಇಲ್ಲದೆ ನೇರವಾಗಿ ಮೆಡಿಕಲ್‍ಶಾಪ್‍ನಲ್ಲಿ ಹೋಗಿ ಕೆಮ್ಮು ಶಮನ ಔಷಧಿ ಸೇವಿಸುವುದು ಬಹಳ ಅಪಾಯಕಾರಿ. ಕೋವಿಡ್-19 ರೋಗದಲ್ಲಿ ಆಮ್ಲಜನಕದ ಸಾಂದ್ರತೆ ಕುಸಿಯುವ ಕಾರಣದಿಂದ ವೈದ್ಯರನ್ನು ಭೇಟಿ ಮಾಡಿ ಅವರ ಆದೇಶದಂತೆ ಔಷಧಿ ಸೇವಿಸತಕ್ಕದ್ದು.

3. ಆಂಟಿಬಯೋಟಿಕ್: ಶ್ವಾಸಕೋಶಕ್ಕೆ ವೈರಾಣು ಸೋಂಕು ಹರಡಿ ತಗಲಿದ ಬಳಿಕ ಅದರ ಜೊತೆಗೆ ಬ್ಯಾಕ್ಟೀರಿಯಾ ಸೋಂಕು ಸೇರಿಕೊಂಡು ನ್ಯೂಮೋನಿಯಾ (ಪಪ್ಪುಸ ಜ್ವರ) ಇದ್ದಲ್ಲಿ ಆಂಟಿಬಯೋಟಿಕ್ ಬಳಸಲಾಗುತ್ತದೆ. ಸಾಮಾನ್ಯವಾಗಿ ಅಜಿಥ್ರೋಮೈಸಿನ್ ಎಂಬ ಆಂಟಿಬಯೋಟಿಕ್ ಬಳಸುತ್ತಾರೆ. ಯಾವ ಔಷಧಿ, ಎಷ್ಟು ಬಾರಿ, ಹೇಗೆ ಕೊಡಬೇಕು ಎಂದು ವೈದ್ಯರೇ ನಿರ್ಧರಿಸುತ್ತಾರೆ.

4. ಹೈಡ್ರೋಕ್ಸಿಕ್ಲೊರೋಕ್ವಿನ್: ಇದೊಂದು ದೇಹದ ರಕ್ಷಣಾ ವ್ಯವಸ್ಥೆಯನ್ನು ಬದಲಿಸುವ ಸಾಮಥ್ರ್ಯ ಇರುವ ಔಷಧಿಯಾಗಿದ್ದು, ಮಲೇರಿಯಾ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿಯನ್ನು ಬಹಳಷ್ಟು ಮಂದಿ ಕರೋನಾ ಸೋಂಕಿತರಲ್ಲಿ ಬಳಸಿ ಒಂದಷ್ಟು ಯಶಸ್ಸನ್ನು ಪಡೆಯಲಾಗಿದೆ. ಇದರ ಬಳಕೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರಕಬೇಕಾಗಿದೆ. ಎಷ್ಟು ಔಷಧಿ ಹೇಗೆ ಬಳಸಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ದಾದಿಯರು ತಮ್ಮನ್ನು ರಕ್ಷಿಸಿಕೊಳ್ಲುವ ಸಲುವಾಗಿಯೂ ಈ ಔಷಧಿಯನ್ನು ಕೋವಿಡ್ ರೋಗ ಬರದಂತೆ ತಡೆಯಲು ಬಳಸುತ್ತಿದ್ದಾರೆ. ಈ ಔಷಧಿಯ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರಕಬೇಕಾಗಿದೆ.

5. ಆಂಟಿವೈರಲ್ ಔಷಧಿ: Ren desivir ಎಂಬ ಆಂಟಿ ವೈರಲ್ ಔಷಧಿಯನ್ನು ಕೋವಿಡ್-19 ರೋಗದ ತೀವ್ರತೆಯನ್ನು ತಗ್ಗಿಸಲು ಬಳಸಲಾಗುತ್ತಿದೆ. ಇದೂ ಕೂಡಾ ಪ್ರಯೋಗಾತ್ಮಕ ವಾಗಿ ಬಳಸುವ ಔಷಧಿಯಾಗಿದ್ದು, ಇದರ ಕಾರ್ಯಕ್ಷಮತೆ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಇನ್ನೂ ಪರಿಪೂರ್ಣ ಮಾಹಿತಿ ಇರುವುದಿಲ್ಲ.

6. ವೆಂಟಿಲೇಟರ್ ಚಿಕಿತ್ಸೆ: ಕೋವಿಡ್-19 ರೋಗ ಉಲ್ಬಣಿಸಿದಾಗ ದೇಹದಲ್ಲಿ ಆಮ್ಲಜನಕದ ಸಾಂಧ್ರತೆ ಕುಸಿಯುತ್ತದೆ. ಶ್ವಾಸಕೋಶದ ಉರಿಯೂತದಿಂದಾಗಿ ರಕ್ತಕ್ಕೆ ಆಮ್ಲಜನಕದ ಸರಬರಾಜು ಶ್ವಾಸಕೋಶದ ಮೂಲಕ ಸಾಧ್ಯವಾಗುವುದಿಲ್ಲ. ಇಂತಹಾ ಸಂದರ್ಭದಲ್ಲಿ ದೇಹಕ್ಕೆ ಅತೀ ಅಗತ್ಯವಾದ ಆಮ್ಲಜನಕದ ಪೂರೈಕೆಗಾಗಿ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ರೋಗಿಯ ಶ್ವಾಸಕೋಶಕ್ಕೆ ಬಾಯಿ ಅಥವಾ ಮೂಗಿನ ಮುಖಾಂತರ ಹಾಕಿದ ನಳಿಕೆ (ಟ್ಯೂಬ್) ಗಳ ಮುಖಾಂತರ ವೆಂಟಿಲೇಟರ್ ಎಂಬ ಜೀವರಕ್ಷಕ ಯಂತ್ರಕ್ಕೆ ಜೋಡಿಸಲಾಗುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತದೆ. ವೆಂಟಿಲೇಟರ್ ಚಿಕಿತ್ಸೆ ತುಂಬಾ ತೀವ್ರತರವಾದ ಕೋವಿಡ್-19 ರೋಗ ಇರುವವರಿಗೆ ಮಾತ್ರ ನೀಡಲಾಗುತ್ತದೆ.

7. ಪ್ಲಾಸ್ಮಾ ಥೆರಪಿ: ಇದೊಂದು ವಿಶೇಷ ರೀತಿಯ ಚಿಕಿತ್ಸೆ ಆಗಿರುತ್ತದೆ. ಈ ಚಿಕಿತ್ಸೆಯನ್ನು ಕೋವಿಡ್-19 ರೋಗದಿಂದ ಬಳಲುತ್ತಿರುವವರಿಗೆ ಪ್ರಯೋಗಾತ್ಮಕವಾಗಿ ನೀಡಲಾಗುತ್ತಿದೆ. ಒಮ್ಮೆ ಕೋವಿಡ್-19 ರೋಗದಿಂದ ಗುಣಮುಖನಾದ ವ್ಯಕ್ತಿಯಿಂದ ಗುಣಮುಖನಾದ 2 ವಾರಗಳ ಬಳಿಕ ಆತನಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಲಾಗುತ್ತದೆ. ಈ ಪ್ಲಾಸ್ಮಾದಲ್ಲಿ ಕೊರೋನಾ ವೈರಾಣು ವಿರುದ್ಧ ಹೋರಾಡಲು ಬೇಕಾದ ಆಂಟಿಬಾಡಿಗಳು ಇರುತ್ತದೆ. ಈ ಆಂಟಿಬಾಡಿಗಳನ್ನು ವೈರಾಣುಗಳ ವಿರುದ್ಧ ಹೋರಾಡಲು ಬಳಸಲಾಗುತ್ತದೆ. ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಬಗ್ಗೆ ಇನ್ನು ಸಂಶೋಧನೆಗಳು ನಡೆಯುತ್ತದೆ. ಕೆಲವೊಂದು ರೋಗಿಗಳು ಈ ರೀತಿಯ ಪ್ಲಾಸ್ಮಾಥೆರಪಿಯಿಂದ ಗುಣಮುಖವಾಗಿದ್ದು, ಜನರಲ್ಲಿ ಹೊಸತೊಂದು ಆಶಾವಾದವನ್ನು ಮೂಡಿಸಿದೆ.

8. ಸಾಕಷ್ಟು ವಿಶ್ರಾಂತಿ: ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ವೈರಸ್ ರೋಗಗಳಲ್ಲಿ ವಿಪರೀತ ಸುಸ್ತು, ಆಯಾಸ ಇರುತ್ತದೆ. ಈ ಕಾರಣದಿಂದ ರೊಗಿಗಳಿಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಸೂಚಿಸಲಾಗುತ್ತದೆ. ದೇಹದ ಮೇಲೆ, ಹೃದಯದ ಮೇಲೆ, ಜೀವಕೋಶಗಳ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿ ರೋಗ ಬೇಗ ಗುಣಮುಖವಾಗಲು ಸಹಾಯ ಮಾಡಲಾಗುತ್ತದೆ.

9. ಸಾಕಷ್ಟು ದ್ರವಾಹಾರ: ಸಾಮಾನ್ಯವಾಗಿ ವೈರಾಣು ಸೋಂಕು ತಗಲಿದಾಗ, ಜ್ವರ ಹೆಚ್ಚಾದಾಗ ಬೇಗನೆ ನಿರ್ಜಲೀಕರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಕಷ್ಟು ದ್ರವಾಹಾರ ಸೇವಿಸಬೇಕಾಗುತ್ತದೆ. ಶುದ್ಧವಾದ ನೀರು, ಎಳನೀರು, ಹಣ್ಣಿನರಸ, ಮುಂತಾದ ಪೋಷಕಾಂಶಯುಕ್ತ, ಪ್ರೊಟೀನ್‍ಯುಕ್ತ ಪೇಯಗಳನ್ನು ಸೇವಿಸಬೇಕು. ಕೃತಕ ಪಾನೀಯಗಳನ್ನು ಸೇವಿಸಬಾರದು.

10. 6ರಿಂದ 8 ಗಂಟೆಗಳ ನಿದ್ರೆ: ದೇಹಕ್ಕೆ ಜ್ವರ ಬಂದು ದಣಿವಾದಾಗ ಸೂಕ್ತವಾದ ವಿಶ್ರಾಂತಿ ಅತೀ ಅಗತ್ಯ. ಈ ನಿಟ್ಟಿನಲ್ಲಿ ದೇಹಕ್ಕೆ ಸೋಂಕು ತಗಲಿದಾಗ ಸಾಕಷ್ಟು ನಿದ್ರೆ ಮಾಡಿದಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ದೊರಕಿ, ಬೇಗನೆ ಗುಣಮುಖರಾಗುವ ಸಾಧ್ಯತೆ ಇರುತ್ತದೆ.

11. ಪೋಷಕಾಂಶಯುಕ್ತ ಆಹಾರ: ದೇಹಕ್ಕೆ ಸೋಂಕು ತಗಲಿ ಬಳಲಿದಾಗ, ಅತ್ಯಂತ ಪೌಷ್ಟಿಕಾಂಶಯುಕ್ತ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು. ಕರಿದ ತಿಂಡಿಗಳು ಎಣ್ಣೆಭರಿತ ಆಹಾರಗಳನ್ನು ತಿನ್ನಬಾರದು. ಹಸಿ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ವಿಟಮಿನ್, ಪ್ರೋಟೀನ್ ಹಾಗೂ ಖನಿಜಾಂಶಯುಕ್ತ ಆಹಾರ ಸೇವಿಸಬೇಕು. ವಿಟಮಿನ್ ಸಿ. ಜಾಸ್ತಿ ಇರುವ ಸೇವನೆ ಅತೀ ಅಗತ್ಯ. ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಡಗೊಳಿಸುವ ಎಲ್ಲಾ ರೀತಿಯ ಆಹಾರ ಸೇವಿಸಬಹುದಾಗಿದೆ.

12. ಮಾನಸಿಕ ಆರೋಗ್ಯ ವೃದ್ಧಿಸುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು. ಸಾಮಾನ್ಯವಾಗಿ ಚಿಕಿತ್ಸೆ ಇಲ್ಲದ, ಮಾರಾಣಾಂತಿಕ ರೋಗ ಬಂದಾಗ ಜನರು ದಿಗಿಲು ಬೀಳುವುದು ಸಹಜ. ಋಣಾತ್ಮಕವಾದ ವಿಚಾರವನ್ನು ವೈಭವೀಕರಿಸುವ ಟಿ.ವಿ. ಚಾನೆಲ್‍ಗಳನ್ನು ನೋಡಬಾರದು. ಸಾಮಾಜಿಕ ಜಾಲತಾಣಗಳಿಂದಲೂ ದೂರವಿದ್ದಷ್ಟು ಒಳ್ಳೆಯದು. ಮನಸ್ಸಿಗೆ ಮುದನೀಡುವ ಪುಸ್ತಕ ಓದುವಿಕೆ, ಚಲನಚಿತ್ರ ವೀಕ್ಷಣೆ, ಸಂಗೀತ ಕೇಳುವುದು, ಯೋಗಾಸನ ಮಾಡುವುದು, ಧ್ಯಾನ, ಪ್ರಾಣಾಯಾಮ ಮಾಡುವುದನ್ನು ರೂಢಿಮಾಡಿಕೊಳ್ಳಬೇಕು. ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸುವ ವ್ಯಾಯಾಮಗಳಾದ ದೀರ್ಘ ಉಸಿರಾಡುವಿಕೆಯನ್ನು ಹೆಚ್ಚು ಹೆಚ್ಚು ಮಾಡಬೇಕು. ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಮಾತನಾಡಬೇಕು. ಇಳಿ ವಯಸ್ಸಿನ ವಯಸ್ಕರನ್ನು ರೂಮಿನಲ್ಲಿ ಕೂಡಿ ಹಾಕಿ, ಯಾರೂ ಅವರ ಸನಿಹ ಹೋಗದಂತೆ ಮಾಡಿ, ದಿಗ್ಭಂಧನ ಮಾಡುವುದು ಬಹಳ ಅಪಾಯಕಾರಿ. ಅವರ ಎಲ್ಲಾ ಬೇಕು ಬೇಡಗಳನ್ನು ಕಾಲಕಾಲಕ್ಕೆ ಪೂರೈಸಬೇಕು. ಅದಕ್ಕೆ ಬೇಕಾದ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಸೋಂಕು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಿನಲ್ಲಿ ಅವರಲ್ಲಿ ಒಬ್ಬಂಟಿತನ ಏಕಾಂಗಿ ಭಾವನೆ ಬಾರದಂತೆ ಮಾಡಬೇಕು. ಅವರಲ್ಲಿ ಅನಾಥಪ್ರಜ್ಞೆ ಕಾಡಿದಲ್ಲಿ ಅವರ ರಕ್ಷಣಾ ವ್ಯವಸ್ಥೆ ಮತ್ತಷ್ಟು ಕುಸಿದು ರೋಗ ಉಲ್ಭಣವಾಗುವ ಸಾಧ್ಯತೆಯೂ ಇರುತ್ತದೆ.

ಪ್ರಕೃತಿಗೆ ಪೂರಕವಾಗಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಲೇಬೇಕು:

ATTACHMENT DETAILS Corona-art-Rajesh-C
ಕಲಾವಿದ ರಾಜೇಶ್ ಸಿ ಅವರಿಂದ ಕೋವಿಡ್ 19 ರ ಕಲಾತ್ಮಕ ನೋಟ

ಆಧುನಿಕತೆ, ತಂತ್ರಜ್ಞಾನ, ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತದೆ. ಹೊಸ ಔಷಧಿಗಳು ತಯಾರಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ವೈರಾಣು ಕೂಡಾ ತಮ್ಮ ರೂಪಾಂತರವನ್ನು ಮಾಡಿಕೊಂಡು ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತದೆ. ಇದರ ಪರಿಣಾಮವೇ ಇದೀಗ ನಮ್ಮ ಇಡೀ ಜಗತ್ತನ್ನೇ ನಡುಗಿಸಿ ಮನುಕುಲವನ್ನು ನುಂಗಿ ನೀರು ಕುಡಿಯುವ ‘ಕರೋನಾಸುರ’ ಎಂಬ ವೈರಾಣಾಸುರನ ಅಟ್ಟಹಾಸ ಎಂದರೂ ತಪ್ಪಾಗಲಾರದು. ಮನುಷ್ಯ ಸಂಘ ಜೀವಿ ಆತ ಏಕಾಂಗಿಯಾಗಿ ಬದುಕಲಾರ. ಎಲ್ಲರ ಜೊತೆ ಬೆರೆತು, ಭೂಮಂಡಲದಲ್ಲಿ ಪ್ರಾಣಿಪಕ್ಷಿಗಳ ಜೊತೆ ಸಹಬಾಳ್ವೆ ನಡೆಸಿ ಪ್ರಕೃತಿಗೆ ಪೂರಕವಾಗಿ ಬದುಕುವುದನ್ನು ಮನುಷ್ಯ ರೂಢಿಸಿಕೊಳ್ಳಬೇಕು. ಯಾವಾಗ ಮನುಷ್ಯನ ಆಸೆ ದುರಾಸೆಗಳು ಮಿತಿಮೀರಿ ಹೋಗಿ ಪ್ರಕೃತಿಯಲ್ಲಿ ಇರುವುದೆಲ್ಲವೂ ತನ್ನ ಬಳಕೆಗೆ ಎಂಬ ಹಠಮಾರಿ ಧೋರಣೆ ಬೆಳೆಸಿಕೊಂಡಾಗ ತನ್ನ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳನ್ನು ಬಿಡದೆ ತಿನ್ನುವ ಅಪಾಯಕಾರಿ ಪ್ರವೃತ್ತಿಗೆ ಮುಂದಾಗುತ್ತಾನೆ. ಅದರ ಪರಿಣಾಮವಾಗಿಯೇ ಇವತ್ತು ಇಡೀ ಜಗತ್ತೇ ಸಾವು ನೋವು, ಸಂಕಟ ಅನುಭವಿಸುತ್ತಿದೆ.

ಇಡೀ ಮನುಕುಲವೇ ಕಣ್ಣಿಗೆ ಕಾಣದ ವೈರಾಣುವಿನ ಮುಂದೆ ಮಕಾಡೆ ಮಲಗಿದೆ. ಇಡೀ ಮನುಕುಲವೇ ಬೆಚ್ಚಿಬಿದ್ದಿದೆ. ಮನುಷ್ಯ ತನ್ನ ಅತಿಯಾದ ಆಸೆಯಿಂದ, ದುರಾಸೆಯಿಂದ ಸ್ವಚ್ಛಂಧವಾಗಿ ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದು, ಬಾವಲಿ, ಹಕ್ಕಿ, ಮುಳ್ಳು ಹಂದಿ, ಹಾವು, ಹಂದಿ ಹೀಗೆ ಎಲ್ಲಾ ಪ್ರಾಣಿಗಳನ್ನು ಹಿಡಿದು ಭಕ್ಷಿಸಿದ ಪರಿಣಾಮವಾಗಿಯೇ ಇಡೀ ಜಗತ್ತು ಮನುಷ್ಯ ಮನುಕುಲ ವಿನಾಶದ ಅಂಚಿಗೆ ಬಂದು ನಿಂತಿದೆ. ಈ ಪ್ರಾಣಿಗಳಲ್ಲಿ ನಿರುಪದ್ರವಿಯಾಗಿ ಜೀವಿಸುತ್ತಿದ್ದ ವೈರಾಣುಗಳು ಮನುಷ್ಯನ ದೇಹಕ್ಕೆ ಸೇರಿಕೊಂಡು ತನ್ನ ವಂಶಾಭಿವೃದ್ಧಿ ಮಾಡಿಕೊಂಡು ಮನುಷ್ಯ ಮೇಲೆ ತನ್ನ ಅಧಿಪತ್ಯವನ್ನು ಸಾರಲು ಪ್ರಯತ್ನಿಸುತ್ತಿದೆ.

ಅತ್ತ ಜೀವ ಇರುವ ಇತ್ತ ಜೀವವಿಲ್ಲದ ಅತ್ಯಂತ ಸೂಕ್ಷ್ಮಾಣುಸೂಕ್ಷ್ಮ ಗಾತ್ರದ ಕಣ್ಣಿಗೆ ಗೋಚರಿಸಿದ ಈ SARS Cov-2 ಎಂಬ ವೈರಾಣು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿದೆ. ಮನುಷ್ಯ ಈ ವೈರಾಣುವಿನ ಹೊಡೆತಕ್ಕೆ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದ್ದಾನೆ. ಪ್ರಾಣಭಯದಿಂದ ಮನೆಯೊಳಗೆ ಕುಳಿತು ತನ್ನ ತಪ್ಪಿಗೆ ಪಶ್ಚಾತ್ತಾಪಪಡುತ್ತಿದ್ದಾನೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳಲೇಬೇಕು. ಪ್ರಕೃತಿಗೆ ಪೂರಕವಾಗಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಲೇಬೇಕು. ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಾ ತನ್ನ ಸಾಮ್ರಾಜ್ಯವನ್ನು ಎಲ್ಲೆಂದರಲ್ಲಿ ವಿಸ್ತರಿಸುತ್ತಾ, ರಾಜಾರೋಷವಾಗಿ ತಾನು ಮಾಡಿದ್ದೇ ಸರಿ ಎಂಬ ಹುಂಬತನದಿಂದ ಹೊರಬರಬೇಕು. ಪ್ರಕೃತಿಯನ್ನು ಗೌರವಿಸಬೇಕು. ಪ್ರಕೃತಿಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಜಗತ್ತಿನ ಇತರ ಎಲ್ಲಾ ಜೀವಸಂಕುಲಗಳಿಗಾಗಿ ಗೌರವ ನೀಡಬೇಕು. ನಮಗೆ ಬದುಕಲು ಈ ಭೂಮಂಡಲದಲ್ಲಿ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಪ್ರಾಣಿ-ಪಕ್ಷಿಗಳಿಗೂ ಇದೆ ಎಂಬ ಸತ್ಯವನ್ನು ಅರಿತು ಬದುಕಬೇಕು. ಜಗತ್ತಿನ ಇತರ ಎಲ್ಲಾ ಪ್ರಾಣಿ-ಪಕ್ಷಿಗಳು ತನ್ನ ಹೊಟ್ಟೆ ತುಂಬಿಸಲು ಇರುವ ಆಹಾರ ವಸ್ತುಗಳು ಎಂಬ ಭ್ರಮೆಯಿಂದ ಹೊರಬರಬೇಕು. ಮನುಷ್ಯ ತಿನ್ನುವುದಕ್ಕಾಗಿ ಬದುಕಬಾರದು. ಬದುಕಲಿಕ್ಕಾಗಿ ತಿನ್ನಬೇಕು. ಮನುಷ್ಯನ ನಾಲಗೆಯ ಛಪಲ ಮತ್ತು ತಿನ್ನುವ ಖಯಾಲಿಯಿಂದಾಗಿ ಜಗತ್ತು ಇವತ್ತು ಕಣ್ಣಿಗೆ ಕಾಣುವ ವೈರಾಣುವಿನ ಮುಂದೆ ಮಂಡಿಯೂರಿ ಕುಳಿತಿದೆ. ನಮ್ಮ ಹಿರಿಯರು ಹೇಳಿದ ‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತು ಇಲ್ಲಿ ಬಹಳ ಉಲ್ಲೇಖನೀಯ ಮತ್ತು ಪ್ರಸ್ತುತ ವಿದ್ಯಮಾನಕ್ಕೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.

ಮನುಕುಲಕ್ಕೆ ಬಂದೆರಗಿದ ಬಹುದೊಡ್ಡ ವಿಪತ್ತನ್ನು ನಿಯಂತ್ರಿಸೋಣ:

ಮನುಷ್ಯ ತನ್ನ ದುರಾಸೆಯಿಂದಾಗಿ ಕಾಡು ಕಡಿದು ಕಾಂಕ್ರೀಟ್ ನಾಡನ್ನು ಕಟ್ಟಿದ ಕೈಗಾರೀಕರಣ ಮತ್ತು ಬೆಳವಣಿಗೆ ಎಂಬ ಸಬೂಬು ನೀಡಿ ಪರಿಸರವನ್ನು ಹಾಳು ಮಾಡಿದೆ. ಎಲ್ಲಿ ನೋಡಿದರೂ ವಿಷಕಾರಕ ಗಾಳಿ, ವಿಷಪೂರಿತ ನೀರು, ಪ್ರಾಣಿಪಕ್ಷಿಗಳಿಗೆ ಬದುಕುವ ಹಕ್ಕನ್ನೇ ಕಿತ್ತುಕೊಂಡ ಭೂಮಂಡಲದ ಜೀವವೈವಿಧ್ಯಗಳ ಸಮತೋಲನವನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಅದರ ಫಲವಾಗಿಯೇ ಜಗತ್ತಿಗೆ ಈಗ ಈ ‘ಕರೋನಾಸುರ’ ಎಂಬ ಕಂಟಕ ಬಂದಿದೆ ಎಂದರೆ ತಪ್ಪಾಗಲಾರದು. ಇನ್ನಾದರೂ ನಾವೆಲ್ಲಾ ಎಚ್ಚೆತ್ತುಕೊಳ್ಳಲೇಬೇಕು. ಇಲ್ಲವಾದಲ್ಲಿ ಹೊಸಹೊಸ ವೈರಾಣುಗಳು, ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು ಹೊಸ ಹೊಸ ರೋಗಗಳು ಹುಟ್ಟಿಕೊಳ್ಳಬಹುದು. ಹೀಗೆ ಹೊಸದಾಗಿ ಹುಟ್ಟಿಕೊಂಡ ರೋಗಕ್ಕೆ ಔಷಧಿ ಕಂಡು ಹಿಡಿಯುವುದು ಸುಲಭದ ಮಾತಲ್ಲ. ಈ ಹೊಸ ರೋಗಗಳಿಗೆ ಲಸಿಕೆ ಕಂಡು ಹಿಡಿಯಲು ವರ್ಷಗಟ್ಟಲೆ ಶ್ರಮಪಡಬೇಕು. ವಿಜ್ಞಾನಿಗಳು ಹಗಲು ರಾತ್ರಿ ವರ್ಷಗಟ್ಟಲೆ ನಿದ್ರೆ ಇಲ್ಲದ ರಾತ್ರಿಗಳನು ಕಳೆಯಬೇಕು. ಲಸಿಕೆ ಕಂಡು ಹಿಡಿದು ಈ ವೈರಾಣುಗಳ ಮೇಲೆ ಮನುಷ್ಯ ನಿಯಂತ್ರಣ ಸಾಧಿಸುವಷ್ಟರಲ್ಲಿ ಮತ್ತೊಂದು ಹೊಸ ವೈರಾಣು ಹುಟ್ಟಿಕೊಂಡು ಮನುಕುಲದ ಮೇಲೆ ಸವಾರಿ ಮಾಡಲು ಸಜ್ಜಾಗಿರುತ್ತವೆ ಎನ್ನುವುದೇ ಸೋಜಿಗದ ಪರಮಾವಧಿ. ಒಟ್ಟಿನಲ್ಲಿ ಈ ಹೊಸ ವೈರಾಣುಗಳ ಆರ್ಭಟದಿಂದಾಗಿ ಮನುಷ್ಯ ಹೈರಾಣಾಗಿರುವುದಂತೂ ಸೂರ್ಯಚಂದ್ರರಷ್ಟೆ ಸತ್ಯವಾದ ಮಾತು.

ತಂತ್ರಜ್ಞಾನ, ಆಧುನಿಕತೆ ಮತ್ತು ವಿಜ್ಞಾನ ಬೆಳೆದಂತೆಲ್ಲಾ ಜಗತ್ತು ಕಿರಿದಾಗುತ್ತಿದೆ. ಎಲ್ಲೋ ಚೀನಾ ದೇಶದ ಯಾವುದೋ ನಗರದ ಸಣ್ಣ ಹಳ್ಳಿಯಲ್ಲಿ ಹುಟ್ಟಿಕೊಂಡು ಸಾಂಕ್ರಾಮಿಕ ರೋಗವೊಂದು ದಿನಬೆಳಗಾವುದರೊಳಗೆ ಜಗತ್ತಿನೆಲ್ಲೆಡೆ ಪಸರಿಸಿ ತನ್ನ ಆರ್ಭಟವನ್ನು ಆರಂಭಿಸುತ್ತದೆ. ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಕರೋನಾಸುರನ ಆರ್ಭಟ ಇವತ್ತು ಜಗತ್ತಿನ 210ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹಬ್ಬಿದೆ. 50 ಲಕ್ಷಕ್ಕೂ ಹೆಚ್ಚು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಈ ರೋಗದ ಆರ್ಭಟ ನಿಂತಿಲ್ಲ. ಯಾವ ಔಷಧಿಯ ನಿಯಂತ್ರಣಕ್ಕೂ ಈ ರೋಗ ಬರುತ್ತಿಲ್ಲ. ಲಸಿಕೆಯಂತೂ ಇನ್ನೂ ಕಂಡು ಹಿಡಿದಿಲ್ಲ. ಜಗತ್ತು ಇತಿಹಾಸದಲ್ಲಿಯೇ ಕಂಡು ಕೇಳರಿಯದ ರೀತಿಯಲ್ಲಿ ಈ ಸಾಂಕ್ರಾಮಿಕ ರೋಗ ಕಾಡ್ಗಿಚ್ಚಿನಂತೆ ಜಗತ್ತಿನೆಲ್ಲೆಡೆ ಹರಡುತ್ತಿದೆ.

ಈ ಹಿಂದೆ ಬಂದಂತಹ ಸಾಂಕ್ರಾಮಿಕ ರೋಗಗಳಾದ ಪ್ಲೇಗ್, ಪಾಂಡೆಮಿಕ್ ಇನ್‍ಪ್ಲೂಯೆಂಜಾ ಪ್ಲೂ, ಎಬೋಲಾ, MERS, SARS ಮುಂತಾದ ಎಲ್ಲಾ ರೋಗಗಳ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಲೇ ಇದೆ. ಹೀಗೆ ಮುಂದುವರಿದಲ್ಲಿ ಕೋಟ್ಯಾಂತರ ಜನರು ಈ ಕರೋನಾಸುರನ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪುವುದು ನಿಶ್ಚಿತ. ಇನ್ನಾದರೂ ನಾವೆಲ್ಲಾ ಎಚ್ಚೆತ್ತುಕೊಳ್ಳೋಣ. ಸಾಂಕ್ರಾಮಿಕ ರೋಗ ಹರಡದಂತೆ ಸಾಕಷ್ಟು ಪೂರ್ಣ ಸಿದ್ಧತೆ ಮಾಡಿ ಮನೆಯೊಳಗೆ ಇದ್ದು ರೋಗದ ಸಂಕೋಲೆಯನ್ನು ತುಂಡರಿಸೋಣ. ಔಷಧಿ ಮತ್ತು ಲಸಿಕೆ ಇಲ್ಲದ ರೊಗವನ್ನು ಗೆಲ್ಲಲು ಇರುವುದೊಂದೇ ಉಪಾಯ ಎಂದರೆ ರೋಗಕ್ಕೆ ತುತ್ತಾಗದಿರುವುದು ಮತ್ತು ರೋಗಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು, ಇನ್ನು ಕಾಲಮಿಂಚಿಲ್ಲ. ನಮ್ಮ ಎಲ್ಲ ಇತರ ವಿಚಾರಗಳನ್ನು ಬದಿಗಿಟ್ಟು ರೋಗ ನಿಯಂತ್ರಣಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸೋಣ. ಆ ಮೂಲಕ ಮನುಕುಲಕ್ಕೆ ಬಂದೆರಗಿದ ಬಹುದೊಡ್ಡ ವಿಪತ್ತನ್ನು ನಿಯಂತ್ರಿಸೋಣ.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Back To Top