ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ? ಸಂಜೆ ಆಟದ ತರಬೇತಿ, ಮನೆ ಪಾಠ, ಗೃಹಾಭ್ಯಾಸಗಳ ನಡುವೆ ಅವರಿಗೆ ಇಷ್ಟವಾದ ಚಟುವಟಿಕೆಯಲ್ಲಿ ತೊಡಗಲು ಅಥವಾ ಮನರಂಜನೆ ಪಡೆಯಲು ಅವರಿಗೆ ಸಮಯವಿದೆಯೆ? ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಒತ್ತಡಕ್ಕೆ ನಿಮ್ಮ ಮಕ್ಕಳು ಒಳಗಾಗಿದ್ದಾರೆಯೆ? ಹೌದು ಅನ್ನಿಸುತ್ತಲ್ಲವೆ?
ಈ ವೇಗದ ಯುಗದಲ್ಲಿ ದೊಡ್ಡವರು ಚಿಕ್ಕವರು ಅನ್ನದೆ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ನಗರವಾಸಿಗಳಲ್ಲಿ ಒತ್ತಡ ಇನ್ನೂ ಹೆಚ್ಚು. ನಾವು ಸಾಕಷ್ಟು ಸಮಯವನ್ನು ನಮ್ಮ ಕುಟುಂಬ ಮತ್ತು ಮಕ್ಕಳಿಗೆ ನೀಡಲಾಗುತ್ತಿಲ್ಲ. ನಮಗೆ ನಿಗದಿಯಾದ ಕೆಲಸದ ಗುರಿಯನ್ನು ತಲುಪುವ ಧಾವಂತದಲ್ಲಿ ನಾವಿರುತ್ತೇವೆ. ನಮಗೆ ಸಮಯ ಯಾವಾಗಲೂ ಸಾಲದಾಗಿರುತ್ತದೆ. ಮಕ್ಕಳೂ ಸಹ ಒತ್ತಡದಿಂದ ತಪ್ಪಿಸುಕ್ಕೊಳ್ಳಲಾಗುತ್ತಿಲ್ಲ. ಅವರು ಹಾಸಿಗೆಯಿಂದ ಏಳುತ್ತಲೇ ಒತ್ತಡ ಆರಂಭವಾಗುತ್ತದೆ. ಶಾಲೆಗೆ ಹೊರಡವ ತರಾತುರಿಯಲ್ಲಿ ಸಿದ್ಧವಾದ ಮೇಲೆ, ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆ ತಲುಪುವ ಆತಂಕ ಅವರಲ್ಲಿ ಆರಂಭವಾಗುತ್ತದೆ. ಶಾಲೆಯಲ್ಲಿ ಒಂದಾದ ಮೇಲೊಂದು ತರಗತಿಗಳ ಒತ್ತಡ , ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಪ್ರಥಮ ಸ್ಥಾನ ಗಳಿಸುವ ಒತ್ತಡ ಯಾವಾಗಲೂ ಮಕ್ಕಳ ಮೇಲೆ ಇರುತ್ತದೆ. ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕೆಂದು ನಾವು ಅವರ ಮೇಲೆ ಹಾಕುವ ಒತ್ತಡದ ಕಡೆ ನಮ್ಮ ಗಮನವಿರುವುದಿಲ್ಲ. ಪೋಷಕರು ಕೆಲಸದ ಒತ್ತಡದಲ್ಲಿರುವಾಗ ಮಕ್ಕಳ ಮೇಲೂ ಅದರ ಪ್ರಭಾವ ಬೀಳುತ್ತದೆ. ಅವರೂ ಒತ್ತಡಕ್ಕೆ ಒಳಗಾಗುತ್ತಾರೆ.
ಮಕ್ಕಳು ಪಾಠ ಪ್ರವಚನಗಳಲ್ಲಿ ಮುಂದಿರಬೇಕೆಂದು ಪೋಷಕರು ಬಯಸುವಾಗ ಪೋಷಕರ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಈ ಒತ್ತಡವನ್ನುಸರಿಯಾಗಿ ನಿರ್ವಹಿಸುವುದಕ್ಕಾಗಿ ಪೋಷಕರೂ ಸಮಾಧಾನವಾಗಿ ಇರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೋಷಕರಿಗೆ ಕೆಲವು ಆರೋಗ್ಯ ಸಲಹೆಗಳನ್ನು ನೀಡುವುದು ಮತ್ತು ಅವರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸುವುದು ಈ ಲೇಖನದ ಉದ್ದೇಶವಾಗಿದೆ. ಪೋಷಕರು ಇವನ್ನು ಅನುಸರಿಸಿ ಮಕ್ಕಳಿಗೂ ಅಭ್ಯಾಸ ಮಾಡಿಸಿದರೆ ಹಿರಿಯರು ಮತ್ತು ಕಿರಿಯರಲ್ಲಿ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ. ಒತ್ತಡದ ಜೀವನಶೈಲಿಯ ದುಷ್ಫರಿಣಾಮಗಳು ಹಲವು. ಅವು ದೈಹಿಕವೂ, ಮಾನಸಿಕವೂ, ಭಾವನಾತ್ಮಕವೂ ಆಗಿರುತ್ತವೆ. ಆತಂಕ, ಕೋಪ, ತಲೆನೋವು, ನಿರುತ್ಸಾಹ, ಆಯಾಸ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳು ನಮ್ಮನ್ನು ಪೀಡಿಸುತ್ತವೆ. ಭಾರತೀಯ ಆರೋಗ್ಯ ವಿಜ್ಞಾನ ನಮಗೆ ಉತ್ತಮ ಜೀವನಶೈಲಿಯ ನಿರ್ವಚನ ನೀಡಿದೆ. ಉತ್ತಮ ಆಹಾರ, ವಿಚಾರ ಹಾಗೂ ಪಂಚಕರ್ಮ ಚಿಕಿತ್ಸೆಗಳ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದಾಗಿದೆ.
ಒತ್ತಡ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ
ನಾವು ರಜಾಕಾಲದಲ್ಲಿ ಅರಣ್ಯಗಳಿಗೆ,ಪರ್ವತ ಪ್ರದೇಶಗಳಿಗೆ,ಸಮುದ್ರತೀರಗಳಿಗೆ ಪ್ರವಾಸ ಹೋಗಲು ಬಯಸುತ್ತೇವೆ.ಇದೆಲ್ಲಾ ನಮ್ಮ ದೈನಂದಿನ ಬದುಕಿನ ಒತ್ತಡದಿಂದ ತಪ್ಪಿಸಿಕೊಳ್ಳುವ ಉಪಾಯಗಳಾಗಿರುತ್ತವೆ.ಈ ರೀತಿಯ ಪ್ರವಾಸಗಳನ್ನು ಯಾವಾಗಲೂ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ಒತ್ತಡ ನಿವಾರಣೆಗೆ ಇದು ಉತ್ತಮ ಪರಿಹಾರವೂ ಅಲ್ಲ. ಸುಲಭ ಮತ್ತು ಪರಿಣಾಮಕಾರಿ ಉಪಾಯವೆಂದರೆ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಬೆಳಗಿನ ಜಾವ ಬೇಗ ಏಳುವುದು, ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದು- ನಂತರ ಒಳ್ಳೆಯ ಅಭ್ಯಂಜನ ಸ್ನಾನ ಮಾಡುವುದು, ಆರೋಗ್ಯಕರವಾದ ಆಹಾರಸೇವನೆ ಇತ್ಯಾದಿ ಕ್ರಮಗಳಿಂದ ಒತ್ತಡ ನಿವಾರಣೆ ಸಾಧ್ಯ.
೧.ಬ್ರಾಹ್ಮೀ ಮುಹೂರ್ತ ಉತ್ತಿಷ್ಠ
ಬ್ರಾಹ್ಮೀ ಮುಹೂರ್ತ ಅಥವಾ ಬೆಳಗಿನ ಜಾವದಲ್ಲಿ ಏಳುವುದು ಒಂದು ಉತ್ತಮ ಅಭ್ಯಾಸವಾಗಿದೆ. ಬೆಳಗಿನ ಜಾವ ೩ರಿಂದ ೬ ಗಂಟೆಯ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ. ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದು ಅಧ್ಯಯನದಲ್ಲಿ ತೊಡಗಿದರೆ ’ಜ್ಞಾನ’ ಅಥವಾ ’ಬ್ರಹ್ಮ’ ವನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ. ಸೂರ್ಯೋದಯಪೂರ್ವ ಸಮಯದಲ್ಲಿ ಮೆದುಳಿನ ನರಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ ಎಂದು ಅಧ್ಯಯನಗಳು ದೃಢಪಡಿಸಿವೆ. ಬೆಳಗಿನ ಜಾವದ ಹವಾಮಾನ ಹಿತವಾಗಿದ್ದು ಅದು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಒತ್ತಡರಹಿತ ಅಧ್ಯಯನ ಸಾಧ್ಯವಾಗುತ್ತದೆ.
೨.ಯೋಗ
ದೇಹವನ್ನು ನೇರವಾಗಿಸಿ, ನಿಯಂತ್ರಿತ ಉಸಿರಾಟ ನಡೆಸುತ್ತಾ ವಿವಿಧ ಭಂಗಿಗಳನ್ನು ರಚಿಸುವುದೇ ಯೋಗ. ಯೋಗಾಭ್ಯಾಸ ಒತ್ತಡ ನಿವಾರಣೆಗೆ ಸಹಾಯಕ. ಯೋಗ ಮನಸ್ಸನ್ನು ಶಾಂತಗೊಳಿಸುತ್ತದೆ. ಮನಸ್ಸಿನ ಗ್ರಹಣಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗದಿಂದ ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳಿವೆ. ಇದರಿಂದ ದೈನಂದಿನ ಚಟುವಟಿಕೆಗಳನ್ನು ಶಾಂತಚಿತ್ತದಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಎದುರಾಗುವ ಸಮಸ್ಯೆಗಳ ಸುಲಭ ಪರಿಹಾರವೂ ಸಾಧ್ಯವಾಗುತ್ತದೆ. ಯೋಗ ದೇಹವನ್ನು ಸುಸ್ಥಿತಿಯಲ್ಲಿರುಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿಸುವುದು ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಸಹಾಯಕವಾಗುತ್ತದೆ.
೩.ಪ್ರಾಣಾಯಾಮ:
ಕ್ರಮಬದ್ಧ ಉಸಿರಾಟದ ಅಭ್ಯಾಸವೇ ಪ್ರಾಣಾಯಾಮ. ದಿನ ನಿತ್ಯ ಪ್ರಾಣಾಯಾಮ ಮಾಡುವುದರಿಂದ ಒತ್ತಡ ತಹಬಂದಿಗೆ ಬರುತ್ತದೆ.ಆತಂಕಭಾವ ದೂರವಾಗುತ್ತದೆ. ಪ್ರಾಣಾ ಮತ್ತು ಆಯಾಮ ಪ್ರಾಣಾಯಾಮವಾಗಿದೆ.ಅಂದರೆ ಉಸಿರು ತೆಗೆದುಕೊಂಡು ಅದನ್ನು ವಿಸ್ತರಿಸಿಕೊಳ್ಳುವುದೇ ಪ್ರಾಣಾಯಾಮ. ಇದರಿಂದ ಜೀವನವೂ ವಿಸ್ತೃತಗೊಳ್ಳುತ್ತದೆ. ಉಸಿರಾಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದಾಗ ಇತರ ಯೋಚನಾಕಲ್ಮಷಗಳೂ ದೂರವಾಗುತ್ತವೆ. ಪ್ರಾಣಾಯಾಮದಲ್ಲಿ ವಿವಿಧ ರೀತಿಗಳಿವೆ. ಅವುಗಳಲ್ಲಿ ಮುಖ್ಯವಾದವು ನಾಡಿಶುದ್ಧಿ, ಶೀತಾಲಿ, ಶೀತಕಾರಿ ಮತ್ತು ಬ್ರಾಹ್ಮರಿ. ಇವುಗಳಲ್ಲಿ ಬ್ರಾಹ್ಮರಿ ಪ್ರಾಣಾಯಾಮ ತಕ್ಷಣ ಪರಿಣಾಮಕಾರಿ. ಇದರ ಅಭ್ಯಾಸದಿಂದ ಆತಂಕ ನಿವಾರಣೆಯಾಗುತ್ತದೆ. ಮುಂಗೋಪ ಕಡಿಮೆಯಾಗುತ್ತದೆ. ಈ ಪ್ರಾಣಾಯಾಮ ಮಾಡುವಾಗ ಉಂಟಾಗುವ ಕಂಪನಗಳು ಮನಸ್ಸನ್ನು ಶಾಂತಗೊಳಿಸಿ ನರಮಂಡಲವನ್ನು ಕ್ರಿಯಾಶೀಲಗೊಳಿಸುತ್ತವೆ. ಬ್ರಹ್ಮರಿ ಪ್ರಾಣಾಯಾಮವನ್ನು ಯಾವಾಗ ಬೇಕಾದರೂ ಪ್ರಾರಂಭಿಸಬಹುದು. ಅನುಸರಿಸಬೇಕಾದ ಕ್ರಮಗಳು ಹೀಗಿವೆ.
ಅ) ಪದ್ಮಾಸನ ಅಥವಾ ಸಿದ್ಧಾಸನದಲ್ಲಿ ಧ್ಯಾನಮುದ್ರೆಯಲ್ಲಿ ಕೈಜೋಡಿಸಿಕೊಂಡು ನೆಲದ ಮೇಲೆ ಕುಳಿತುಕೊಳ್ಳಬೇಕು.ಕೈಗಳು ಮಡಿಚಿರುವ ಮೊಳಕಾಲ ಮೇಲೆ ಇಟ್ಟುಕೊಳ್ಳಬೇಕು. ಹಸ್ತಗಳು ಮೇಲೆ ಚಾಚಿದ್ದು ಹೆಬ್ಬೆರಳು ಮತ್ತು ತೋರು ಬೆರಳು ಸೊನ್ನೆಯಾಕಾರದಲ್ಲಿ ತಾಕಿಕೊಂಡಿರಬೇಕು. ಇದು ಚಿನ್ಮುದ್ರೆ.
ಆ) ಕಣ್ಣುಗಳನ್ನು ಮುಚ್ಚಿ ಸಂಪೂರ್ಣ ಶರೀರವನ್ನು ಸಡಿಲಬಿಟ್ಟು ವಿಶ್ರಾಂತಗೊಳಿಸಬೇಕು.ತುಟಿಗಳು ಸಡಿಲವಾಗಿ ಮುಚ್ಚಿರಬೇಕು.ಕೆಳ ಹಲ್ಲು ಮೇಲಿನ ಹಲ್ಲನ್ನು ತಾಕಿರಬಾರದು. ಇದರಿಂದ ಉಸಿರಾಟದ ಶಬ್ದ ಸ್ವಲ್ಪವೇ ಕೇಳಿಸುವಂತೆ ಇರಬೇಕು.
ಇ) ಮೊಣಕೈಗಳನ್ನು ಮಡಚಿ ಕೈಗಳನ್ನು ಮೇಲಕ್ಕೆ ಎತ್ತಬೇಕು.ಕೈಗಳನ್ನು ಕಿವಿಗಳ ಹತ್ತಿರ ತಂದು ಹೆಬ್ಬೆರಳುಗಳನ್ನು ಕಿವಿಗೆ ತಾಕಿಸಬೇಕು. ಬೆರಳುಗಳನ್ನು ಕಿವಿಗಳ ಒಳಕ್ಕೆ ತೂರಿಸಬಾರದು. ಉಳಿದ ನಾಲ್ಕು ಬೆರಳುಗಳು ಎರಡೂ ಕಣ್ಣುಗಳನ್ನು ಮುಚ್ಚಿರಬೇಕು.
ಈ) ಪ್ರಜ್ಞೆಯನ್ನು ಶಿರೋಮಧ್ಯದಲ್ಲಿ ಕೇಂದ್ರೀಕರಿಸಬೇಕು.ಇಲ್ಲಿ ಆಜ್ಞಾಚಕ್ರವಿರುತ್ತದೆ. ದೇಹವನ್ನು ಸ್ಥಿರವಾಗಿಸಿ ಮೂಗಿನಿಂದ ಉಸಿರು ಎಳೆದುಕೊಳ್ಳಬೇಕು. ಉಸಿರು ಹೊರ ಬಿಡುವಾಗ ನಿದಾನವಾಗಿ ದುಂಬಿಯಂತೆ ಶಬ್ದ ಮಾಡುತ್ತಾ ಹೊರಬಿಡಬೆಕು. ಶಬ್ದ ಸೂಕ್ಷ್ಮವೂ ಮಧುರವೂ ಆಗಿರಬೇಕು. ಶಿರೋಮುಂಭಾಗ ತುಸು ಕಂಪಿತವಾಗಬೇಕು. ನಿಶ್ವಾಸ ಬಿಡುವಾಗ ಕೈಗಳನ್ನು ಮುಂಚಾಚಬಹುದು. ಇಲ್ಲವೇ ಮೊಳಕಾಲ ಮೇಲೆ ವಿಶ್ರಾಂತಗೊಳಿಸಬಹುದು. ನಂತರ ಹಿಂದಿನಂತೆ ಕೈಗಳನ್ನು ಮೇಲೆತ್ತಿ ಪ್ರಾಣಾಯಾಮವನ್ನು ಮುಂದುವರಿಸಬಹುದು.
ಬ್ರಾಹ್ಮರಿಪ್ರಾಣಾಯಾಮಕ್ರಿಯೆ ವ್ಯಕ್ತಿಯನ್ನು ಸಂಮೋಹನಗೊಳಿಸುವಂತಹ ಪರಿಣಾಮವನ್ನು ಬೀರುತ್ತದೆ. ಧ್ಯಾನಸಹಿತ ಪ್ರಾಣಾಯಾಮ ಮನಸ್ಸನ್ನು ಹಗುರಾಗಿಸಿ ಒತ್ತಡವನ್ನು ನಿವಾರಿಸುತ್ತದೆ. ಮಕ್ಕಳಿಗೆ ನಿದಾನವಾಗಿ ಈ ಪ್ರಾಣಾಯಾಮದ ಅಭ್ಯಾಸ ಮಾಡಿಸಬಹುದಾಗಿದೆ.
೪. ಅಭ್ಯಂಜನ
ಮೈಗೆ ತೈಲ ಲೇಪಿಸಿಕೊಂಡು ಸ್ವತಹ ಒತ್ತಿಕೊಳ್ಳುವುದು ಒತ್ತಡ ನಿವಾರಣೆಯ ಉತ್ತಮ ಉಪಾಯ. ತೈಲ ಲೇಪನ ಮನಸ್ಸು ಮತ್ತು ದೇಹವನ್ನು ಹಗುರಗೊಳಿಸುತ್ತದೆ. ನಿತ್ಯ ಅಭ್ಯಂಜನ ಅಭ್ಯಾಸ ಒಳ್ಳೆಯದು. ಇದರಿಂದ ಮುಪ್ಪು ಮುಂದೂಡಲ್ಪಡುತ್ತದೆ. ದೃಷ್ಟಿದೋಷ ನಿವಾರಣೆಯಾಗುತ್ತದೆ. ಸುಖನಿದ್ರೆಗೆ ಸಹಾಯಕವಾಗುತ್ತದೆ. ಮಕ್ಕಳಿಗೆ ಅಭ್ಯಂಜನ ಮಾಡಿಸಲು ತಂದೆ ತಾಯಿ,ಅಜ್ಜ ಅಜ್ಜಿ ಸಹಾಯ ಮಾಡಬಹುದು. ಬೆಳೆದ ಮಕ್ಕಳು, ಹದಿಹರೆಯದವರು ಸ್ವತಹ ಅಭ್ಯಂಜನ ಮಾಡಿಕೊಳ್ಳಬಹುದು.
೫.ಪಾದಾಭ್ಯಂಗ
ಕಾಲು ಮತ್ತು ಪಾದಗಳಿಗೆ ಎಣ್ಣೆ ಸವರಿ ಒತ್ತುವುದು ಪಾದಾಭ್ಯಂಗ. ಇದನ್ನು ಸ್ವಯಂ ಮಾಡಿಕೊಳ್ಳಬಹುದು. ಇದರಿಂದ ಆಯಾಸ ಪರಿಹಾರವಾಗಿ ಪುನರುತ್ಸಾಹ ಪ್ರಾಪ್ತವಾಗುತ್ತದೆ. ಇದನ್ನು ಮಕ್ಕಳಿಗೆ ತಂದೆ ತಾಯಿ ಮಾಡಬಹುದು. ಬೆಳೆದ ಮಕ್ಕಳು ತಾವೇ ಮಾಡಿಕೊಳ್ಳಬಹುದು.ರಾತ್ರಿ ವೇಳೆ ಪಾದಾಭ್ಯಂಗಕ್ಕೆಉತ್ತಮ.
೬.ಸ್ನಾನ
ಸ್ನಾನ ತ್ವರಿತ ಆಯಾಸ ಪರಿಹಾರಕ. ಶರೀರ ಮತ್ತು ಮನಸ್ಸಿಗೆ ಉಲ್ಲಾಸದಾಯಕ. ನಿತ್ಯ ಬೆಳಗು ಮತ್ತು ಸಂಜೆಯ ಸ್ನಾನ ದೇಹವನ್ನು ಹಗುರಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಿಸುತ್ತದೆ.
ಒತ್ತಡ ನಿವಾರಣೆಗೆ ಆಯುರ್ವೇದ ಚಿಕಿತ್ಸಾ ವಿಧಾನಗಳು
ಆಯುರ್ವೇದ ಹಿರಿಯರು ಮತ್ತು ಮಕ್ಕಳ ಒತ್ತಡ ನಿವಾರಣೆಗೆ ವಿವಿಧ ಚಿಕಿತ್ಸಾಕ್ರಮಗಳನ್ನು ಹೊಂದಿದೆ. ಅದರಲ್ಲಿ ಅಭ್ಯಂಗ ಶಿರೋಬಸ್ತಿ, ಶಿರೋಧಾರ,ಪಿಚು,ನ್ಯಸ್ಯ ಮುಖ್ಯವಾದವು. ಶಿರೋಬಸ್ತಿ, ಶಿರೋಧಾರ ಚಿಕಿತ್ಸಾ ವಿಧಾನಗಳಿಂದ ಆಯಾಸ ಪರಿಹಾರವಾಗುತ್ತದೆ. ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಶಿರೋಪಿಚು ಸಹ ಇದೇ ರೀತಿಯ ಉಪಯೋಗಗಳನ್ನು ಹೊಂದಿದೆ. ಈ ಚಿಕಿತ್ಸಾ ವಿಧಾನಗಳಿಂದ ಕತ್ತಿನ ಸೆಳೆತ, ತಲೆನೋವು ನಿವಾರಣೆಯಾಗುತ್ತದೆ.ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ನಾಸಿಕದ ಮೂಲಕ ಔಷಧ ಪ್ರಯೋಗವೇ ನಸ್ಯ. ಆಯುರ್ವೇದದಲ್ಲಿ ’ನಾಸೋಹಿ ಶಿರಸಾ ದ್ವಾರಮ್’ ಎಂದು ಹೇಳಿದೆ. ಅಂದರೆ ಮೂಗು ಮೆದುಳಿಗೆ ದಾರಿ ಎಂದು ಅರ್ಥ. ಈ ಚಿಕಿತ್ಸಾ ವಿಧಾನವನ್ನು ಮಾನಸಿಕ ಸಮಸ್ಯೆಗಳ ಚಿಕಿತ್ಸೆಗಾಗಿ ಬಳಸಬಹುದು. ಸಾಮಾನ್ಯ ಶೀತಬಾಧೆಗೂ ಬಳಸಬಹುದು. ಮಕ್ಕಳ ಶೀತ ಸಮಸ್ಯೆಗೆ ಇದು ಸುಲಭ ಪರಿಹಾರ.ಇದರಿಂದ ಮೂಗು ತೆರೆದು ಉಸಿರಾಟ ಸರಳವಾಗುತ್ತದೆ. ದಿನನಿತ್ಯ ಕ್ರಮವಾದ ನಸ್ಯ ಚಿಕಿತ್ಸೆ ಆಯಾಸ ಪರಿಹಾರಕ ಮತ್ತು ಒತ್ತಡ ನಿವಾರಕ.ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಆದರೆ ನಸ್ಯ ಚಿಕಿತ್ಸಾ ಕ್ರಮವನ್ನು ಆಯುರ್ವೇದ ವೈದ್ಯರಿಂದಲೇ ಕಲಿಯಬೇಕು. ಏಳು ವರ್ಷದ ಕೆಳಗಿನ ಮಕ್ಕಳಿಗೆ ,ಗರ್ಭಿಣಿಯರಿಗೆ ಮತ್ತುಎಂಭತ್ತು ವರ್ಷದ ಮೇಲಿನ ವೃದ್ಧರಿಗೆ ಈ ಚಿಕಿತ್ಸಾಕ್ರಮ ಸೂಕ್ತವಲ್ಲ.
ಮೇಲೆ ಹೇಳಿರುವ ಚಿಕಿತ್ಸಾಕ್ರಮಗಳನ್ನು ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲೇ ಪಡೆದುಕೊಳ್ಳಬೇಕು.
ರೋಗನಿವಾರಕ ಮೂಲಿಕೆಗಳು ಮತ್ತು ಕಷಾಯಗಳು
ಆಯುರ್ವೇದ ಚಿಕಿತ್ಸೆಯಲ್ಲಿ ಹಲವಾರು ಮೂಲಿಕೆಗಳು ಮತ್ತು ಕಷಾಯಗಳನ್ನು ಬಳಸುತ್ತಾರೆ. ಬ್ರಾಹ್ಮೀ, ಮಂಡೂಕಪರ್ಣಿ,ಯಷ್ಟಿಮಧು,ಶಂಖಪುಷ್ಪಿಗಳನ್ನು ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಬಳಸುತ್ತಾರೆ. ಮಕ್ಕಳಿಗಾಗಿ ಇವು ಕಷಾಯ ರೂಪದಲ್ಲೂ ದೊರಕುತ್ತವೆ.
ಈ ಚಿಕಿತ್ಸಾವಿಧಾನಗಳಲ್ಲದೆ ಮಕ್ಕಳ ಒತ್ತಡ ನಿವಾರಣೆಗೆ ತಂದೆ ತಾಯಿಗಳ ಒಡನಾಟ ಉತ್ತಮ ಪರಿಹಾರವಾಗಬಲ್ಲದು. ಮಕ್ಕಳಿಗೆ ಮನೆಯಲ್ಲಿ ಒತ್ತಡದ ವಾತಾವರಣ ಇರಬಾರದು. ಮಕ್ಕಳ ಜೊತೆ ನೀವು ಕಳೆಯುವ ಸಮಯ ಅಮೂಲ್ಯವಾದುದು. ಅವರ ಆಸಕ್ತಿಗಳನ್ನು ಗಮನಿಸುವುದು,ಅವರ ಹವ್ಯಾಸಗಳನ್ನು ಪ್ರೋತ್ಸಾಹಿಸುವುದು ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಪ್ರವಾಸ ಮಾಡುವುದು, ಉದ್ಯಾನವನ, ಪ್ರಾಣಿಸಂಗ್ರಹಾಲಯ, ಪ್ರಕೃತಿರಮ್ಯ ಸ್ಥಳಗಳಿಗೆ ಭೇಟಿ ಕೊಡುವುದು ನಿಮಗೂ ನಿಮ್ಮ ಮಕ್ಕಳಿಗೂ ಒಟ್ಟಿಗೇ ಒತ್ತಡ ನಿವಾರಕಗಳಾಗುತ್ತವೆ. ಈಗ ಕೋಶ ಕುಟುಂಬಗಳು ಹೆಚ್ಚು. ಮಕ್ಕಳಲ್ಲಿ ಒಂಟಿತನ ಹೆಚ್ಚಲು ಇದೂ ಒಂದು ಕಾರಣ. ಹೀಗಾಗದಂತೆ ತಂದೆ ತಾಯಿಗಳು ಎಚ್ಚರ ವಹಿಸಬೇಕು. ಅಜ್ಜ ಅಜ್ಜಿಯರ ಜೊತೆ ಇರುವುದು ಮಕ್ಕಳ ಮನೋವಿಕಾಸಕ್ಕೆ ಸಹಾಯಕ. ಮಕ್ಕಳಿಗೆ ಕುಟುಂಬ ಪ್ರೇಮದ ವಾತಾವರಣ ಕಲ್ಪಿಸಬೇಕು. ಎಲ್ಲರೊಡನೆ ಬೆರೆಯುವುದು, ಹಂಚಿ ತಿನ್ನುವ ಅಭ್ಯಾಸ ಮಕ್ಕಳಿಗೆ ಕಲಿಸಬೇಕು. ನೆರೆಹೊರೆಯವರನ್ನು ಗೌರವಿಸುವುದು ಕಲಿಸಬೇಕು.ಮಕ್ಕಳಲ್ಲಿ ಕರುಣೆ ಅಹಿಂಸಾ ಭಾವ ಬೆಳೆಸಬೇಕು.
ಆರೋಗ್ಯಕರ ಆಹಾರ ಪದ್ಧತಿ
ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯಕರ ಆಹಾರ ಮುಖ್ಯ ಪಾತ್ರ ವಹಿಸುತ್ತದೆ. ಸಾತ್ವಿಕ ಆಹಾರ ಪದ್ಧತಿ, ಅಂದರೆ ಹಾಲು, ತುಪ್ಪ, ಮಜ್ಜಿಗೆ, ಹಣ್ಣು ,ತರಕಾರಿ, ಸೊಪ್ಪು ಇತರ ಪದಾರ್ಥ ಸೇವನೆ ಹಾಗು ತಾಮಸಿಕ ಆಹಾರದಿಂದ ದೂರವಿರುವುದು ಮನಸ್ಸಿನ ತೇಜಸ್ಸನ್ನು ಉತ್ತುಂಗ ಮಾಡಲು ಸಹಾಯಕವಾಗಿದೆ. ತಾಮಸಿಕ ಆಹಾರವೆಂದರೆ “ರೆಡಿ ಟು ಈಟ್” ಆಹಾರ, ರಾತ್ರಿ ತಯಾರಿಸಿ ಬೆಳಿಗ್ಗೆ ಸೇವಿಸುವುದು, ಹಳಸಿದ ತಿಂಡಿ, ಫ಼್ರಿಡ್ಜ್ ನಲ್ಲಿ ಇರಿಸಿದ ಆಹಾರದ ಸೇವನೆ, ಈರುಳ್ಳಿ, ಬೆಳ್ಳುಳ್ಳಿ, ಮತ್ತು ಮಾಂಸಾಹಾರ. ಇದು ಮಕ್ಕಳನ್ನು ಮಂಕು ಮಾಡುತ್ತದೆ. ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಹಣ್ಣು ತರಕಾರಿಗಳು ಅಂದರೆ ಎಲೆಕೋಸು, ಹೂಕೋಸು, ಬ್ರೊಕೋಲಿ, ಟೊಮೆಟೊ, ಕ್ಯಾರೆಟ್, ಮೂಸಂಬಿ, ಆರೇಂಜ್, ಕಿವಿ, ಸ್ಟ್ರಾಬೆರಿ ಇತ್ಯಾದಿ ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಒಂದೆಲಗದ ಮಹತ್ವ ಯಾರಿಗೆ ಗೊತ್ತಿಲ್ಲ? ಒಂದೆಲಗದಿಂದ ತಯಾರಿಸಿದ ಚಟ್ನಿ, ತಂಬುಳಿ, ತಂಪಾದ ಪಾನೀಯ, ಸಲಾಡ್ ಗಳು ಸೇವಿಸಲು ಮಕ್ಕಳಿಗೆ ಕೊಡಬಹುದು. ಒಂದೆಲದದಿಂದ ಸ್ಮ್ರಿತಿ ಹೆಚ್ಚಾಗುವುದಲ್ಲದೆ ಒತ್ತಡಕ್ಕೂ ಸಹಾಯಕವಾಗಿದೆ. ಗಸಗಸೆಯಿಂದ ತಯಾರಿಸಿದ ಪಾಯಸ ಮತ್ತು ಇತರ ಸಿಹಿ ಪದಾರ್ಥಗಳು ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡಲು ಉಪಯುಕ್ತವಾಗಿದೆ. ಕಡಿಮೆ ಕ್ಯಾಲೊರಿಗಳಿಂದ ಕೂಡಿದ ಪೌಷ್ಟಿಕ ಆಹಾರ ಅವರಿಗೆ ಕೊಡಬೇಕು. ಅಪೌಷ್ಟಿಕ ಅನಾರೋಗ್ಯಕರ ಆಹಾರದಿಂದ ದೂರವಿರಬೇಕು. ಐಸ್ ಕ್ರೀಮ್, ಕೂಲ್ ಡ್ರಿಂಕ್ಸ್ ಬದಲಾಗಿ ತಾಜಾ ಹಣ್ಣಿನ ರಸ, ಎಳೆನೀರು, ಮಜ್ಜಿಗೆ, ರಸಾಯನ ಮಕ್ಕಳಿಗೆ ಕೊಡುವುದು ಒಳ್ಳೆಯದು. ಹೆಚ್ಚು ಪ್ರೊಟೀನ್ ಮತ್ತು ಕಾರ್ಬೊಹೈಡ್ರೇಟ್ ಆಹಾರ ಅವರಿಗೆ ಅಗತ್ಯ. ಹಾಲು, ಸೋಯ, ವಿವಿಧ ಧಾನ್ಯಗಳು, ಉದ್ದು, ಕಡಲೆ, ಹೆಸರುಕಾಳು, ಉರುಳಿ ಅವರ ಆಹಾರದ ಭಾಗವಾಗವಾಗಿರಬೇಕು.
ತಾಜಾ ಹಣ್ಣು, ತರಕಾರಿಗಳು ದಿನ ನಿತ್ಯದ ಆಹಾರವಾಗಿರಬೇಕು. ಮಾಂಸ, ಮೊಟ್ಟೆ, ಮೀನು ಮಿತವಾದ ಪ್ರಮಾಣದಲ್ಲಿ ಸೇವಿಸಬಹುದು. ಸಿಹಿ ಪದಾರ್ಥ ಹೆಚ್ಚು ಸೇವಿಸಬಾರದು. ಉತ್ತಮ ಆಹಾರದ ಜೊತೆಗೆ ಮಕ್ಕಳಿಗೆ ಸಾಕಷ್ಟು ನಿದ್ದೆಯೂ ಅಗತ್ಯ. ಅವರು ದಿನಕ್ಕೆ ೯ ರಿಂದ ೧೦ ಗಂಟೆ ನಿದ್ರಿಸಬೇಕು. ಸಾಕಷ್ಟು ವಿಶ್ರಾಂತಿ ಮಾರನೆ ದಿನದ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತದೆ. ಕಡೆಯದಾಗಿ ಹೇಳುವುದಾದರೆ ಮಕ್ಕಳೊಡನೆ ಸಂತೋಷದ, ವಿನೋದದ ಕ್ಷಣಗಳನ್ನು ಸದಾ ಅನುಭವಿಸಿ. ಮಕ್ಕಳೊಡನೆ ಬೆರೆತು ಆಟವಾಡಿ. ಆಟದಲ್ಲಿ ಅವರದೇ ನಿಯಮಗಳಿದ್ದರೂ ಸರಿಯೇ, ಅವರಂತೆ ಆಟವಾಡಿ. ಆ ಮಧುರ ಕ್ಷಣಗಳೇ ಮಕ್ಕಳ ಮನಸ್ಸಿನಲ್ಲಿ ಕಡೆಯ ತನಕ ಉಳಿದು ಅವರನ್ನು ಮುನ್ನಡೆಸುತ್ತವೆ.
ಡಾ. ಚೈತ್ರಾ.ಎಸ್
ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಬೆಂಗಳೂರು
ಈ ಮೇಲ್: ayur.chytra@gmail.com