ಚಂದ್ರನ ಮೇಲೆ ಜೀವನ ಸಾಧ್ಯವೇ?

ಚಂದ್ರನ ಮೇಲೆ ಜೀವನ ಸಾಧ್ಯವೇ? ಅಲ್ಲಿ ಆರೋಗ್ಯ ಸಮಸ್ಯೆಗಳು ಆಗಬಹುದೇ? ಸೌರ ಧೂಳು ದೇಹ ಸೇರಿ ಶ್ವಾಸಕೋಶದ ತೊಂದರೆ ಹಾಗೂ ಕೆಲ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದೆಂದು ಹೇಳುತ್ತಾರೆ ತಜ್ಞರು.

ಚಂದ್ರಯಾನ ಸೌರಯಾನಗಳು ಒಂದಾನೊಂದು ಕಾಲದಲ್ಲಿ ಬಲಾಢ್ಯ ರಾಷ್ಟ್ರಗಳ ಪ್ರತಿಷ್ಠೆಯ ಸಂಕೇತಗಳಾಗಿದ್ದವು. ಇಂದು ಸೌರಯಾನ ಸುಲಭದ ಪ್ರಯಾಣದಂತೆ ಸಾಮಾನ್ಯ. ಪೈಪೋಟಿಯಲ್ಲಿದ್ದ ಬಲಿಷ್ಠ ರಾಷ್ಟ್ರಗಳ ಜೊತೆ ನವೀನ ಶಕ್ತಿಶಾಲಿಗಳು ತಿಂಗಳ ಅಂಗಳದಲ್ಲಿ ಹೆಜ್ಜೆಗುರುತು ಮೂಡಿಸಲು ಹಾತೋರೆಯುತ್ತಿದ್ದರೆ, ಚಂದ್ರ ಪಕ್ಕದೂರಿನಷ್ಟು ಸನಿಹ. ತಂತ್ರಜ್ಞಾನ ಸಿರಿವಂತಿಕೆ, ಉತ್ಸಾಹ, ಜಿಜ್ಞಾಸೆ ಗಳು ಅಂತರಗಳನ್ನು ಕಡಿಮೆಗೊಳಿಸಿ, ಹೊಸ ಹೊಸ ಆಸೆ, ಪ್ರಯೋಗಗಳನ್ನು ಹುಟ್ಟುಹಾಕಿವೆ. ಜ್ಯೋತಿರ್ವರ್ಷಗಳ ಅಂತರ ತಂತ್ರಜ್ಞಾನದಿಂದ ಕಡಿತಗೊಳ್ಳುತ್ತಿದೆ.

Congradulations to ISRO - chandrayaana-3

ಸಿರಿವಂತ ರಾಷ್ಟ್ರದ ವಿಜ್ಞಾನಿಗಳು ಚಂದ್ರನಮೇಲೆ ವಸಾಹತು ಸ್ಥಾಪಿಸುವ ಪೈಪೋಟಿಗಿಳಿದರೆ, ಸಿರಿವಂತರು ಬೇರೆ ಗ್ರಹ ಉಪಗ್ರಹಗಳಲ್ಲಿ ಜೀವಿಸುವ ಉತ್ಸುಕತೆ ತೋರಿಸುತಿದ್ದಾರೆ. ಭೂಮಿಯ ಮೇಲೆ ಹುಟ್ಟಿ, ಬೆಳೆದು, ಬಾಳಿ, ಭೂಮಿಯಲ್ಲೆ ಲೀನವಾಗಬೇಕಾದ ಮನುಷ್ಯದೇಹ ಸೌರ ಜೀವನಕ್ಕೆ ಮಾಡಿಸಿದ್ದಲ್ಲ. ಇಲ್ಲಿಯವರೆಗಿನ ಒಟ್ಟು ಮಂಗಳಯಾನ, ಚಂದ್ರ ಯಾನಗಳಲ್ಲಿ ಸೌರಯಾನಿಗಳು ಚಂದ್ರನ ಮೇಲ್ಮೈ ಮೇಲೆ ಇಳಿದು ಓಡಾಡಿದ ಸರಾಸರಿ ಸಮಯ ಕೆಲ ಗಂಟೆಗಳು ಮಾತ್ರ, ಉಳಿದ ಸಮಯವೆಲ್ಲ ತಮ್ಮ ಸೌರವಾಹನದಲ್ಲಿ ಕುಳಿತು ಪ್ರಯೋಗಮಾಡುತ್ತಾ ಅಥವಾ ರೋಬಾಟ್ಗಳನ್ನು ನಿಯಂತ್ರಿಸುವಲ್ಲಿ ಕಳೆದಿದ್ದಾರೆ. ಹಾಗಾಗಿ ಚಂದಮಾಮನ ಚಂದದ ಮುಖದ ಪರಿಚಯವಷ್ಟೆ ನಮಗೆಲ್ಲ. ನಾಣ್ಯದ ಎರಡನೆ ಮುಖದ ಪರಿಚಯ ಅಥವಾ ಅನುಭವ ತೀರ ಕಡಿಮೆ.

Also read: ಆರೋಗ್ಯ ಸಲಹೆ 

ಶೀತಲ ಚಂದ್ರನಿಗೆ ಇನ್ನೊಂದು ಮುಖವಿದೆಯಾ? ಅದು ಹೇಗಿರಬಹುದು?

ತಂಪು ಚಂದಿರನ ಮೇಲೆ ಜೀವನ ಮಕ್ಕಳ ಕಲ್ಪನೆಯಂತೆ ಮಧುರವಲ್ಲ. ಚಂದ್ರನ ಮೇಲಿಳಿದರೆ ನಮಗರಿವಿಲ್ಲದ ಹಲವಾರು ಅಪಾಯಗಳು. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಹಾರಿದರೆ, ಸಮಯ, ವಾತಾವರಣಕ್ಕೆ ದೇಹ ಹೊಂದಿಕೊಳ್ಳಲು ಕೆಲ ದಿನಗಳೆ ಬೇಕಾದರೆ ಲಕ್ಷಕೋಟಿ ಮೈಲಿಗಳಷ್ಟು ದೂರದ (ಆಳದ?) ಸೌರಯಾನ, ಚಂದ್ರಯಾನ ಮಾನವನ ದೇಹದ ಮೇಲೆ ಅತ್ಯಂತ ಪ್ರಕ್ಷುಬ್ಧ ಪರಿಣಾಮ ಬೀರಬಹುದು.

ತ್ವರಿತ ದುಷ್ಪರಿಣಾಮಗಳಲ್ಲಿ ಮೊಟ್ಟಮೊದಲಿಗೆ ಅತೀವೇಗದ ರಾಕೆಟ್ ಪ್ರಯಾಣ ಹಾಗೂ ಶೂನ್ಯಗುರುತ್ವಾಕರ್ಷಣೆಯಿಂದ ಉಂಟಾಗುವ ವಾಂತಿಯ ಅನುಭವ ಹಾಗೂ ಅಸಾಧ್ಯ ವಾಂತಿಗಳು. ಚಂದ್ರನ ಮೇಲೆ ವಾಹನ ಇಳಿಸುವಾಗ ಉಂಟಾಗುವ ಅಫಘಾತಗಳು ಪ್ರಾಣಕ್ಕೆ ಮಾರಕವಾಗಬಹುದು. ಸಂಪೂರ್ಣ ನಿರ್ವಾತ ಹಾಗೂ ಶೂನ್ಯ ಸಾಂದ್ರತೆ ಹಾಗೂ ಒತ್ತಡ ರಹಿತ ಪರಿಸರಗಳು ಪ್ರತಿ ಘಟನೆಯ ತೀವ್ರತೆ ಹೆಚ್ಚಿಸಬಹುದು.

ಅಪೋಲೋ ಚಂದ್ರಯಾನಿಗಳು ಚಂದ್ರನ ಮೇಲೆ ಕಾಲಿಟ್ಟಾಗ, ಅವರ ಶಿರಸ್ತ್ರಾಣದ ಗಾಜುಗಳು (Visor) ಹಾಗೂ, ಸೌರ ದಿರಿಸುಗಳು ಅಲ್ಲಿನ ಸೂಕ್ಷ್ಮ ಸೌರ ಧೂಳಿನಿಂದ ಅಪಾರ ಹಾನಿಗೊಳಗಾದವು. ಕಣ್ಣುಗಳಿಗೆ ತೀವ್ರ ಮಾರ್ಜನವಾದಂತಾಗಿ ಕಣ್ಣೀರು ಸುರಿದರೆ, ತೀವ್ರ ತುರಿಕೆಯ ಗಂಟಲು ಕಟ್ಟಿಕೊಂಡಂತಹ ಅನುಭವ. ಸೌರ ಧೂಳು ಸೂಕ್ಷ್ಮವಾದಷ್ಟು ತೀಕ್ಷ್ಣ, ಸೋಕಿದ ಮೇಲ್ಮೈಗೆ ಅಪಾರ ತೊಂದರೆ ಉಂಟು ಮಾಡಬಹುದು. ಸೌರನೌಕೆ, ವ್ಯೋಮವಾಹನ, ಸಲಕರಣೆಗಳಿಗೆ ಅಂಟಿಕೊಂಡು, ಅನಹ್ವಾನಿತ ಅತಿಥಿಯಂತೆ ಭೂಮಿಗೆ ಬಂದ ಸೌರಧೂಳಿಗೆ ಕೊಂಚ ಮದ್ದಿನಪುಡಿಯ (Gun powder) ವಾಸನೆ.

ಸಿಲಿಕಾ ಕಣಗಳನ್ನು ಹೆಚ್ಚಾಗಿ ಹೊಂದಿದ ಧೂಳಿನ ಪ್ರತಿ ಕಣವೂ ಗಾಜಿನ ಪುಡಿಗಿಂತ ಹಲವಾರು ಪಟ್ಟು ಶಕ್ತಿಶಾಲಿ ಹಾಗೂ ಅಪಾಯಕಾರಿ. ಸಿಲಿಕಾದಿಂದಲೇ ಗಾಜುಗಳನ್ನು ತಯಾರಿಸುತ್ತಾರೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಭೂಮಿಯ ಮೇಲೆ ನೈಸರ್ಗಿಕವಾಗಿ ಸಿಲಿಕಾ ಸಿಗುವುದು ಮರಳಿನಲ್ಲಿ. ಕಣ್ಣು ಮೂಗುಗಳಲ್ಲಿ ಸೂಕ್ಷ್ಮ ಮರಳು ಹೋದರೆ ಉಂಟಾಗುವ ಬಾಧೆಯನ್ನು ನಾವು ಕಲ್ಪಿಸಿಕೊಳ್ಳಬಹುದು. ಸೌರಧೂಳು ಚಂದ್ರಯಾನಿಗಳ ದೇಹ ಪ್ರವೇಶಿಸಿ ಜ್ವರಗಳನ್ನೂ ಉಂಟು ಮಾಡಿದ ವರದಿಗಳಿವೆ. (Cosmic Hay dust fever) ಚಂದ್ರನ ಮೇಲೆ ಹೆಚ್ಚಿನ ಸಮಯ ಕಳೆದಷ್ಟು ಅಪಾಯದ ಮಿತಿ ಹೆಚ್ಚು. ಸೌರ ಧೂಳು ದೇಹ ಸೇರಿ ಶ್ವಾಸಕೋಶದ ತೊಂದರೆ ಹಾಗೂ ಕೆಲ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದೆಂದು ಹೇಳುತ್ತಾರೆ ತಜ್ಞರು.

ಚಂದ್ರನ ಮೇಲೆ ನಡೆದಾಟ

ನಾವೆಂದುಕೊಂಡಂತೆ ಚಂದ್ರನ ಮೇಲ್ಮೈ ಮರುಭೂಮಿಯಂತಿರದೆ, ಉಬ್ಬರದ ಸಾಗರ ಸ್ಥಬ್ಧವಾಂದತಿದೆ. ಮೇಲ್ಮೈಯ ಉಬ್ಬುತಗ್ಗುಗಳ ಮೇಲೆ ಬೆಳಕು ನೆರಳಿನ ಕಣ್ಕಟ್ಟು ಮನುಷ್ಯರ ದೃಷ್ಟಿಯನ್ನು ಯಾಮಾರಿಸಿ, ಕ್ಲಿಷ್ಟ ನಿರ್ಧಾರಗಳ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟುಮಾಡುತ್ತವೆ. ಚಂದ್ರಯಾನಿಯೊಬ್ಬರು ಚಿಕ್ಕ ತಗ್ಗಿನಲ್ಲುಂಟಾದ ನೆರಳಿನಂದ ಗೊಂದಲಕ್ಕಿಡಾಗಿ ಮುಂದೆ ಹೆಜ್ಜೆ ಇಡಲು ಹಿಂಜರಿದು, ಮುಂದೆ ಇದ್ದ ಚಿಕ್ಕ ಕುಳಿಯನ್ನು ಆಳವಾದ ಪ್ರಪಾತವೆಂದು ವರದಿ ಮಾಡಿದರೆ, ಭೂಮಿಯ ಮೇಲಿನ ವಿಜ್ಞಾನಿಗಳು ಅದೆ ಕುಳಿಯ ಆಳ ಅಳೆದಾಗ ಅದು ಕೇವಲ 21 ಡಿಗ್ರಿಯ ಕೋನದ ಇಳಿಜಾರನ್ನು ಹೊಂದಿತ್ತು. ನೆರಳು ಬೆಳಕಿನ ಗೊಂದಲ ಪ್ರಾಣಕ್ಕೆ ಮಾರಕವಾಗಬಹುದು. ಹಾಗಾಗಿ ಚಂದ್ರನ ಮೇಲಿನ ಸಾಮಾನ್ಯ ನಡಿಗೆಯೆ ಮಾರಕವಾಗಬಹುದು. ಅಷ್ಟೆ ಅಲ್ಲ ಚಂದ್ರನ ನೆಲದ ಕೆಳಪದುರುಗಳಲ್ಲಿ ಸತತ ಕಂಪನಗಳುಂಟಾಗುತ್ತಿರುತ್ತವೆ. ಸಾಮಾನ್ಯ ಚಂದ್ರಕಂಪನಗಳು ಭೂಕಂಪಗಳಿಗೆ ಹೋಲಿಸಿದರೆ 5.5 ರಿಕ್ಟರ್ ಪ್ರಮಾಣದಷ್ಟು ಇರಬಹುದು. ಭವಿಷ್ಯದ ಚಂದ್ರ ವಸಾಹತಿನ ಕನಸು ಕಾಣುವವರಿಗೆ ಇದೊಂದು ಕೆಟ್ಟ ಸುದ್ದಿ. ನಿರಂತರ ಕಂಪಿಸುವ ನೆಲದ ಮೇಲೆ ವಸಾಹತು ನಿರ್ಮಾಣ ಕಷ್ಟಕರ ಅಥವಾ ಅಸಾಧ್ಯವಾಗಿ ಪರಿಣಮಿಸಬಹುದು.

ನಿದ್ರಾಹೀನ ಚಂದ್ರಯಾನಿ:

ಸೂರ್ಯನ ಬೆಳಕಿನ ಮೇಲೆ ಅವಲಂಬಿತವಾಗಿರುವ ನಮ್ಮ ಜೈವಿಕ ಗಡಿಯಾರ ಚಂದ್ರನ ಮೇಲೆ ತೀವ್ರ ಗೊಂದಲಕ್ಕೀಡಾಗಬಹುದು. ಇಪ್ಪತ್ನಾಲ್ಕು ಗಂಟೆಗಳ ಕತ್ತಲು ಬೆಳಕಿಗೆ ಹೊಂದಿಕೊಂಡ ಜೈವಿಕ ಗಡಿಯಾರ ಹುಚ್ಚನಾಗಬಹುದು. ಚಂದ್ರನ ಒಂದು ದಿನ ಭೂಮಿಯ 28 ದಿನಗಳಿಗೆ ಸಮಾನ. ಹಗಲು ಕತ್ತಲಾಗಲು ಇಪ್ಪತ್ತೆಂಟು ದಿನ ಕಾಯಬೇಕು. ಹಾಗೆ ನೋಡಿದರೆ ಚಂದ್ರನ ಮೇಲಿನ ಒಂದು ಗಂಟೆಯ ಸಮಯ ಭೂಮಿಯ ಮೇಲಿನ ಒಂದು ದಿನಕ್ಕೆ ಸಮಾನವಿದ್ದಂತೆ (ಅಜಮಾಸು). ಕಾಲ ಸ್ತಬ್ಧವಾದ ನಿಜವಾದ ಅನುಭವ ಉಂಟಾದರೂ ದೇಹದ ಹೊಂದಾಣಿಕೆಗಳು ಕಷ್ಟ. ಇಂತಹ ತೀವ್ರ ಗೊಂದಲದ ನಡುವೆ, ಗಂಡಾಂತರದ ಕ್ಷಣಗಳಲ್ಲಿ ಸೌರಯಾನಿಗಳ ನಿರ್ಧಾರ, ಪ್ರತಿಕ್ರಿಯೆಗಳು ಏರುಪೇರಾಗಿ ಪ್ರಾಣಾಪಾಯವಾಗಬಹುದು.

ವಿಕಿರಣಗಳ ಕಾಟ

ಕ್ಯೂರಿಯಾಸಿಟಿ ರೋವರ್ 2011 ರಲ್ಲಿ ಮಂಗಳ ಗ್ರಹದತ್ತ ಪ್ರಯಾಣಿಸುವಾಗ, ವಿಶೇಷವಾಗಿ ಸೌರ ವಿಕಿರಣದ ಪ್ರಮಾಣ ಅಳೆಯಿತು. ಭುವಿಯ ರಕ್ಷಾದವಚದ ಹೊರಗೆ ಬಂದರೆ ವಿಕಿರಣಗಳ ತೀವ್ರತೆ ಇನ್ನೂರು ಪಟ್ಟು ಹೆಚ್ಚಾಗುತ್ತವೆ. ಚಂದ್ರನ ಮೇಲೆ ಭೂಮಿಯಂತೆ ಪರಿಸರವಿಲ್ಲ. ಭೂಮಿಗೆ ಹತ್ತಿರದ ಅಂತರಾಷ್ಟ್ರೀಯ ಸೌರ ಕೇಂದ್ರವು ಕೊಂಚಮಟ್ಟಿಗೆ ಇಂತಹ ವಿಕಿರಣಗಳಿಂದ ಸುರಕ್ಷಿತವಾಗಿದ್ದರೂ ಸಹ, ಕೆಲ ಶಕ್ತಿಶಾಲಿಗಳು ವಿಕಿರಣಗಳು ಎಲ್ಲ ಕವಚಗಳನ್ನು ಭೇದಿಸಿ ಸೌರವಿಜ್ಞಾನಿಗಳ ದೇಹ ಸೇರಿಬಿಡುತ್ತವೆ. ಹಾಗಾಗಿ ಮಲಗಿದ ಗಗನಯಾನಿಗಳ ಕಣ್ಣಿನ ನರವನ್ನು ವಿಕಿರಣಗಳು ನೇರವಾಗಿ ಪ್ರವೇಶಿಸಿ ನಿದ್ರೆಯಲ್ಲೂ ಮಿಂಚಿನ ಅನುಭವ ನೀಡುತ್ತವೆ.

ಇಂತಹ ವಿಪರೀತ ಶಕ್ತಿಶಾಲಿ ವಿಕಿರಣಗಳು ಇಡಿ ದೇಹವನ್ನು ಸತತವಾಗಿ ಪ್ರವೇಶಿಸುತಿದ್ದರೆ ಅದರ ಪರಿಣಾಮಗಳನ್ನು ಬರೆಯಲು ಒಂದು ಪುಸ್ತಕವೆ ಬೇಕು. ವಂಶವಾಹಿನಿಗಳಲ್ಲಿ ರೂಪಾಂತರವಾದರೆ (Mutation) ಜೀವಕೋಶ ವಿಭಜನೆಯ ವೇಗ ಏರುಪೇರಾಗಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಮೆದುಳಿನ ಮೇಲೆ ಸತತ ವಿಕಿರಣ ಪರಿಣಾಮದಿಂದ ಖಿನ್ನತೆ ಅಥವಾ ಡಿಮೆನ್ಷಿಯಾದಂತಹ ಅಪಾರ ಮರೆವಿನಕಾಯಿಲೆಗಳು ಆರಂಭವಾಗಿ ಕ್ಲಿಷ್ಟ ಸಮಯದಲ್ಲಿನ ತುರ್ತು ನಿರ್ಧಾರದ ಕ್ಷಮತೆ ಕುಂಠಿತವಾಗಬಹುದು.

ಉಲ್ಕಾಪಾತಗಳು; ಗಾತ್ರ ಚಿಕ್ಕದು ಹಾನಿ ದೊಡ್ಡದು :

ಚಂದ್ರನ ಮೇಲ್ಮೈ ನಿರಂತರ ಉಲ್ಕಾಪಾತಗಳ ಕೇಂದ್ರ. ಚಿಕ್ಕ ದೊಡ್ಡ ಸೌರ ದೇಹಗಳು ನಿರಂತರವಾಗಿ ಬಂದು ಅಪ್ಪಳಿಸುವ ಸಾಕ್ಷಿಗಳು ಗೋಚರಿಸಿವೆ. ಚಂದ್ರ ಗ್ರಹಣದ ಸಮಯದಲ್ಲಿ ಕಂಡ ತೀಕ್ಷ್ಣ ಮಿಂಚುಗಳು ಉಲ್ಕಾಪಾತಗಳಿಗೆ ಸಾಕ್ಷಿ. ಶೂನ್ಯ ಪರಿಸರ ಆಥವಾ ಪರಿಸರದ ಶೂನ್ಯ ಸಾಂದ್ರತೆಯಿಂದ ಪ್ರತಿ ಉಲ್ಕೆಯ ಅಪ್ಪಳಿಸುವಿಕೆ ಹಲವಾರು ಅಣುಬಾಂಬ್ ಗಳ ಸ್ಪೋಠದಂತೆ ಶಕ್ತಿಶಾಲಿಯಾಗಿರಬಹುದು. ಹಾಗಾಗಿ ಅತೀ ಚಿಕ್ಕ ಉಲ್ಕೆ, ಸೌರ ದೇಹಗಳು ಅಪಾರಪ್ರಮಾಣದ ತೊಂದರೆಯುಂಟುಮಾಡಬಹುದು. ಸದ್ಯದ ವಿನ್ಯಾಸದ ಸೌರ ದಿರಿಸು, ಇಂತಹ ಉಲ್ಕಾಪಘಾತಗಳನ್ನು ಸಂಪೂರ್ಣವಾಗಿ ತಡೆಯಲಾರದು.

ಚಂದ್ರನ ಮೇಲೆ ಜೀವನ ಹೇಗೆ ?

ಚಂದ್ರನ ಮೇಲೆ ವಸಾಹತು ಸ್ಥಾಪಿಸಬೇಕೆಂದರೆ ಕೃತಕ ರಕ್ಷಣಾ ಪರಿಸರ ಅಗತ್ಯ. ಸಿಲಿಕಾ ಕಣಗಳಿಂದ ಗಗನಯಾತ್ರಿಗಳನ್ನು ರಕ್ಷಿಸಲು ಸೂಕ್ಷ್ಮ ಕಣಗಳನ್ನು ತಡೆಹಿಡಿಯವ ಜರಡಿ ಅಥವಾ ಫಿಲ್ಟರ್ಗಳು ಹಾಗೂ ಸಿಲಿಕಾ ಕಣಗಳನ್ನು ಕೊಚ್ಚಿಕೊಂಡು ಹೋಗಿ ಉಸಿರಾಡುವ ಗಾಳಿಯನ್ನು ಶುದ್ಧವಾಗಿಸುವ ಪ್ರಬಲ ಹರಿವಿನ ಗಾಳಿ ಅವಶ್ಯ. ಹಾಗಾಗಿ ಇದಕ್ಕೆ ಪ್ರಬಲ ವಾಯುಪ್ರವಾಹದ ಪರಿಸರ ನಿರ್ಮಿಸಬೇಕು. ವಸಾಹತುಗಳಲ್ಲಿನ ನಿವಾಸಗಳನ್ನು ಪ್ರವೇಶಿಸುವಾಗ ಮೈಮೇಲಿನ ಸಿಲಿಕಾ ಧೂಳನ್ನು ಸ್ವಚ್ಛಗೊಳಿಸುವ ಪ್ರಬಲ ಹರಿವಿನ ವಾಯುಪ್ರವಾಹದ ರಕ್ಷಾ ಕೋಟೆ ಅಗತ್ಯ.

ಕೃತಕ ರಾತ್ರಿ ಹಾಗೂ ದಿನಗಳನ್ನು ಅನುಕರಿಸುವಂತಹ ಬೆಳಕು ಕತ್ತಲಿನ ವ್ಯವಸ್ಥೆ ಅವಶ್ಯ. ಪ್ರತಿ ವಸ್ತುವನ್ನು ವಿಕಿರಣಗಳು ಭೇದಿಸುವದರಿಂದ, ಚಂದ್ರನ ಮೇಲಿನ ವಸಾಹತುಗಳನ್ನು ವಿಕಿರಣ ನಿರೋಧಿಯಾಗಿ ಮಾಡಲು, ನಿವಾಸಗಳ ಸುತ್ತ ನೀರಿನ ರಕ್ಷಾಗೋಡೆ ನಿರ್ಮಿಸಬೇಕಾಗುತ್ತದೆ. ನೀರಿನಲ್ಲಿನ ಜಲಜನಕ ಬಹತೇಕ ವಿಕಿರಣಗಳನ್ನು ತಡೆಹಿಡಿಯುತ್ತದೆ. ನಿವಾಸಗಳ ಸುತ್ತಲೂ ಜಲ ಅಥವಾ ಜಲಜನಕದ ಗೋಡೆ ಕಲ್ಪನಾತೀತವಾದ ವಿಷಯ. ವಿಕಿರಣ, ದಿನ ರಾತ್ರಿಗಳ ತೊಂದರೆ, ಉಲ್ಕಾಪಾತಗಳನ್ನು ಲೆಕ್ಕದಲ್ಲಿಟ್ಟುಕೊಂಡರೆ ಚಂದ್ರನ ನೆಲದಾಳದಲ್ಲಿ ಗುಹೆಯಂತೆ ಮನೆಗಳ ನಿರ್ಮಿಸುವುದು ಒಂದು ಆಯ್ಕೆಯಾಗಬಹುದು. ಚಂದ್ರಗರ್ಭದಲ್ಲಿನ ಲಾವಾರಸದ ಹರಿವಿಕೆಯಿಂದಾದ ಬೃಹತ್ ಸುರಂಗ ರಂಧ್ರಗಳು ಸುಮಾರು ತೊಂದರೆಗಳಿಗೆ ಪರಿಹಾರವೆನಿಸಿದರು, ಚಂದ್ರಕಂಪನಗಳನ್ನು ಮರೆಯುವಂತಿಲ್ಲ.

ಒಟ್ಟಿನಲ್ಲಿ ಚಂದ್ರನ ಮೇಲಿನ ವಸಾಹತು ಸದ್ಯಕ್ಕೆ ಕಲ್ಪನಾತೀತವಾದರೂ ಶೀಘ್ರದಲ್ಲೆ ವಾಸ್ತವವಾಗಬಹುದು. ಅಸಾಮಾನ್ಯ ಪ್ರಯೋಗ ಸಾಹಸಗಳಿಗೆ ಅನುಗುಣವಾಗಿ ಅಪಾಯಗಳೂ ಅಸಾಮಾನ್ಯ ಹಾಗೂ ಅಷ್ಟೆ ಅನಿರೀಕ್ಷಿತ. ಮನುಷ್ಯನ ಜಿಜ್ಞಾಸೆಗೆ ಕೊನೆಯಿಲ್ಲ. ಕನಸುಗಳು ಆಕಾಶವನ್ನು ಲಂಘಿಸಿಯಾಯ್ತು. ಚಂದ್ರ ನಿವೇಷನಗಳ ಮಾರಾಟದ ಜಾಹಿರಾತುಗಳ ದಿನಗಳು ದೂರವಿಲ್ಲ.

ಡಾ. ಸಲೀಮ್ ನದಾಫ್‌
ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!