ಚಳಿಗಾಲದಲ್ಲಿ ದಂತ ಸಂಬಂಧಿ ಸಮಸ್ಯೆಗಳು ಸರ್ವೇ ಸಾಮಾನ್ಯ

ಚಳಿಗಾಲದಲ್ಲಿ ದಂತ ಸಂಬಂಧಿ ಸಮಸ್ಯೆಗಳು – ದಂತ ಅತಿ ಸಂವೇದನೆ, ಬಾಯಿ ಒಣಗುವುದು, ಹಲ್ಲಿನ ನೋವು ಜಾಸ್ತಿಯಾಗುವುದು, ತುಟಿ ಒಡೆಯುವುದು, ಬಾಯಿಯಲ್ಲಿ ಹುಣ್ಣಾಗುವುದು, ಹಲ್ಲು ಹುಳುಕಾಗುವುದು, ವಸಡುಗಳಲ್ಲಿ ಊರಿಯೂತದಿಂದ ರಕ್ತ ಜಿನುಗುವುದು, ಬಾಯಿ ವಾಸನೆ ಮತ್ತು ವಸಡುಗಳಲ್ಲಿ ಕೀವಾಗುವುದು ಇವೆಲ್ಲಾ ಸರ್ವೇ ಸಾಮಾನ್ಯವಾಗಿರುತ್ತದೆ.

dental-care-children

ಮಳೆಗಾಲ ಮುಗಿದು ಚಳಿಗಾಲ ಆರಂಭವಾದಂತೆ ವಾತಾವರಣದ ಉಷ್ಣತೆ ಕಡಮೆಯಾಗುವುದು ಸಹಜ. ಮನುಷ್ಯ ಉಷ್ಣ ಜೀವಿಯಾಗಿರುವುದರಿಂದ ಬಾಹ್ಯ ವಾತಾರಣಕ್ಕನುಗುಣವಾಗಿ ದೇಹದ ಉಷ್ಣತೆಯನ್ನು ಬದಲಾಯಿಸುವ ಸಾಮಥ್ರ್ಯ ಹೊಂದಿದ್ದರೂ, ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜವೇ. ಅತೀ ಕಡಮೆ ಉಷ್ಣತೆಯಿಂದ ನಮ್ಮ ದೇಹದ ಬಾಹ್ಯ ಅಂಗಗಳಾದ ಚರ್ಮ ಬಿರುಕು ಬಿಡುವುದು, ಚರ್ಮ ಒಣಗುವುದು, ತುಟಿಗಳು ಒಡೆದುಕೊಂಡು ಬಿರಿಯುವುದು, ರಕ್ತ ಒಸರುವುದು ಇವೆಲ್ಲಾ ಸಾಮಾನ್ಯವೇ.

ಹೊರಗಿನ ತಾಪಮಾನ ಕಡಮೆಯಾದಂತೆ ಅದಕ್ಕೆ ಹೊಂದಿಕೊಳ್ಳಲು ಪೂರಕವಾಗುವಂತೆ ದೇಹದಲ್ಲಿ ಸ್ರವಿಸುವ ರಸದೂತಗಳಲ್ಲಿ ಏರುಪೇರಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹೊರಗಿನ ಉಷ್ಣತೆ ಕಡಮೆಯಾದಾಗ ದೇಹದಲ್ಲಿನ ರಕ್ತನಾಳಗಳು ಕುಗ್ಗಿಕೊಂಡು ರಕ್ತ ಪರಿಚಾಲನೆ ಅಂಗಾಂಗಗಳಿಗೆ ಕಡಮೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಚಳಿಗಾಲದಲ್ಲಿ ಗಾಯ ಒಣಗುವುದು ಸ್ವಲ್ಪ ನಿಧಾನವಾಗಿರುತ್ತದೆ. ಬೇಸಗೆಯಲ್ಲಿ ಬಾಹ್ಯ ಉಷ್ಣತೆಗೆ ರಕ್ತನಾಳಗಳು ಹಿಗ್ಗಿಕೊಂಡು ಗಾಯ ಬೇಗ ಗುಣವಾಗುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ.

ಸಾಮಾನ್ಯವಾಗಿ ಶರದೃತು ಆರಂಭವಾಗುವಾಗ ಚಳಿಗಾಲದಲ್ಲಿ ಹಲವಾರು ದಂತ ಸಂಬಂಧಿ ರೋಗಗಳಾದ ದಂತ ಅತಿ ಸಂವೇದನೆ, ಬಾಯಿ ಒಣಗುವುದು, ಹಲ್ಲಿನ ನೋವು ಜಾಸ್ತಿಯಾಗುವುದು, ತುಟಿ ಒಡೆಯುವುದು, ಬಾಯಿಯಲ್ಲಿ ಹುಣ್ಣಾಗುವುದು, ಹಲ್ಲು ಹುಳುಕಾಗುವುದು, ವಸಡುಗಳಲ್ಲಿ ಊರಿಯೂತದಿಂದ ರಕ್ತ ಜಿನುಗುವುದು, ಬಾಯಿ ವಾಸನೆ ಮತ್ತು ವಸಡುಗಳಲ್ಲಿ ಕೀವಾಗುವುದು ಇವೆಲ್ಲಾ ಸರ್ವೇ ಸಾಮಾನ್ಯವಾಗಿರುತ್ತದೆ.

ದಂತ ಅತಿ ಸಂವೇದನೆ :

ಚಳಿಗಾಲದಲ್ಲಿ ಅತಿ ಸಾಮಾನ್ಯವಾದ ದಂತ ಸಂಬಂಧಿ ರೋಗವೆಂದರೆ ದಂತ ಅತಿ ಸಂವೇದನೆ. ಸಾಮಾನ್ಯ ಆಡು ಭಾಷೆಯಲ್ಲಿ ಹಲ್ಲು ಜುಂ ಎನ್ನುವುದು ಎನ್ನುತ್ತಾರೆ. ದಂತ ವೈದ್ಯರ ಅದೇಶದಂತೆ ಅತಿ ಸಂವೇದನೆ ಕಡಿಮೆ ಮಾಡುವ ಟೂತ್‍ಪೇಸ್ಟ್‍ಗಳನ್ನು ಉಪಯೋಗಿಸತಕ್ಕದ್ದು. ಚಳಿಗಾಲ ಆರಂಭವಾಗುವ ಮೊದಲು ದಂತ ವೈದ್ಯರ ಬಳಿ ತೋರಿಸಿಕೊಂಡು ತುಂಡಾದ ಹಲ್ಲುಗಳು, ಹಳಿಯ ಫಿಲ್ಲಿಂಗ್‍ಗಳನ್ನು ಸರಿಪಡಿಸಿಕೊಳ್ಳತಕ್ಕದ್ದು.

ಒಣ ಬಾಯಿ:

ಚಳಿಗಾಲದಲ್ಲಿ ಬಾಯಿ ಒಣಗುವುದು ಅತೀ ಸಾಮಾನ್ಯವಾದ ತೊಂದರೆ. ಬಾಯಿಯಿಂದ ಉಸಿರಾಡಲೇ ಬಾರದು ಮೂಗಿನಿಂದಲೇ ಉಸಿರಾಡತಕ್ಕದ್ದು ಬಾಯಿಯಿಂದ ಉಸಿರಾಡಿದಲ್ಲಿ ತಂಪಗಿನ ಒಣಗಾಳಿ ಬಾಯಿಯಲ್ಲಿನ ನೀರಿನಾಂಶ ಹೀರಿಕೊಂಡು ಒಣ ಬಾಯಿಯಾಗಿಸಿ, ಶುಷ್ಕ ಬಾಯಿಯಾಗಿ ಪರಿವರ್ತನೆ ಹೊಂದಬಹುದು. ಹೀಗೆ ಬಾಯಿ ಒಣಗುವುದರಿಂದ ಹಲ್ಲಿನಲ್ಲಿ ಸದಾ ತಾಗುವ, ಹುಳುತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೇ ಚಳಿಗಾಲದಲ್ಲಿ ದಂತ ವೈದ್ಯರು ಫೋರೈಡ್ ಇರುವ ಬಾಯಿ ಮುಕ್ಕಳಿಸುವ ಔಷಧಿಯನ್ನು ನೀಡುತ್ತಾರೆ.

ಹೀಗೆ ಮಾಡಿದಲ್ಲಿ ಬಾಯಿಯಲ್ಲಿ ಹಲ್ಲುಗಳು ಹುಳುಕಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅದೇ ರೀತಿ ಇಂಗಾಲಯುಕ್ತ ಪೇಯಗಳು ಕೆಫೇನ್‍ಯುಕ್ತ ಕಾಫಿ, ಆಲ್ಕೊಹಾಲ್‍ಯುಕ್ತ ಪೇಯಗಳನ್ನು ಸೇವಿಸಬಾರದು. ಇವುಗಳನ್ನು ಸೇವಿಸಿದಲ್ಲಿ ಮತ್ತಷ್ಟು ಒಣಬಾಯಿಯಾಗುವ ಸಾಧ್ಯತೆ ಇರುತ್ತದೆ. ಸಾಕಷ್ಟು ನೀರು ಕುಡಿಯತಕ್ಕದ್ದು. ಬಾಯಿಯಲ್ಲಿ ಜೊಲ್ಲುರಸ ಜಾಸ್ತಿ ಸೇವಿಸುವಂತೆ ಮಾಡುವ ಚ್ಯೂಯಿಂಗ್ ಗಮ್, ವಿಟಮಿನ್ – ಸಿ ಇರುವ ಹಣ್ಣು ಹಂಪಲುಗಳನ್ನು ಜಾಸ್ತಿ ಸೇವಿಸತಕ್ಕದ್ದು.

ವಸಡುಗಳ ಉರಿಯೂತ :

ಚಳಿಗಾಲದಲ್ಲಿ ವಸಡುಗಳ ತೊಂದರೆ ಸ್ವಲ್ಪ ಜಾಸ್ತಿಯೇ ಇರುತ್ತದೆ. ವಸಡುಗಳಲ್ಲಿ ರಕ್ತ ಪರಿಚಲನೆ ಕಡಿಮೆಯಾದಾಗ ಉರಿಯೂತ ಉಂಟಾಗಿ ರಕ್ತದ ಒಸರಬಹುದು. ಬಾಯಿ ಒಣಗುವುದರಿಂದ, ಜೊಲ್ಲುರಸದ ಅಭಾವದಿಂದ ವಸಡುಗಳಲ್ಲಿ ರಕ್ತ ಒಸರಿಕೊಂಡು, ಬಾಯಿವಾಸನೆ ಇರುವ ಸಾಧ್ಯತೆಯೂ ಇರುತ್ತದೆ. ಈ ಕಾರಣಕ್ಕಾಗಿಯೇ ಸಾಕಷ್ಟು ದ್ರವಾಹಾರ, ವಿಟಮಿನ್-ಸಿ ಜಾಸ್ತಿ ಇರುವ ಕಿತ್ತಲೆ, ಮುಸಂಬಿ ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಜಾಸ್ತಿ ಚಳಿಗಾಲದಲ್ಲಿ ಸೇವಿಸುವುದು ಉತ್ತಮ. ಚಳಿಗಾಲದಲ್ಲಿ ದೇಹದ ರಕ್ತ ಪರಿಚಲನೆ ಕಡಿಮೆಯಾಗುವುದರಿಂದ ವಸಡಿನ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಲ್ಲುಜ್ಜಿದ ಬಳಿಕ ವಸಡುಗಳನ್ನು ಕೈ ಬೆರಳಿನಿಂದ ದಿನಕ್ಕೆರಡು ಬಾರಿ ಚೆನ್ನಾಗಿ ಮಸಾಜ್ ಮಾಡತಕ್ಕದ್ದು. ಹೀಗೆ ಮಾಡಿದಾಗ ರಕ್ತ ಪರಿಚಲನೆ ಜಾಸ್ತಿಯಾಗಿ ವಸಡಿನ  ಆರೋಗ್ಯ ವೃದ್ದಿಸುತ್ತದೆ.

ಹಲ್ಲು ಹುಳುಕಾಗುವುದು :

ಚಳಿಗಾಲದಲ್ಲಿ ಜೊಲ್ಲುರಸದ ಸ್ರವಿಸುವಿಕೆ ಕಡಿಮೆಯಾಗುವುದರಿಂದ ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಂತ ವೈದ್ಯರ ಸಲಹೆಯಂತೆ ಫ್ಲೋರೈಡ್ ಇರುವ ಬಾಯಿ ಮುಕ್ಕುಳಿಸುವ ಔಷಧಿ ಬಳಸತಕ್ಕದ್ದು. ಅದೇ ರೀತಿ ಚಳಿಗಾಲದಲ್ಲಿ ಹಲ್ಲುನೋವು ಜಾಸ್ತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತ ಪರಿಚಲನೆ ಕಡಿಮೆಯಾಗುವುದು, ರಕ್ತನಾಳಗಳು ಕುಗ್ಗುವಿಕೆ ದೇಹದ ರಕ್ಷಣಾ ವ್ಯವಸ್ಥೆಯಲ್ಲಿನ ಏರುಪೇರು ಮುಂತಾದ ಕಾರಣದಿಂದಾಗಿ ಚಳಿಗಾಲದಲ್ಲಿ ದಂತ ವೈದ್ಯರ ಬೇಟಿ ಅತೀ ಅವಶ್ಯಕ. ಅದೇ ರೀತಿ ಹಲ್ಲಿನ ಸುತ್ತಲಿನ ವಸಡು, ಎಲುಬುಗಳು ಕೂಡಾ ಹೆಚ್ಚಿನ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ಅತೀ ಅವಶ್ಯಕ.

ಬಾಯಿ ಹುಣ್ಣು

ಚಳಿಗಾಲದಲ್ಲಿ ಬಾಯಿ ಹುಣ್ಣು ಸರ್ವೆ ಸಾಮಾನ್ಯ. ಬಾಯಿಒಳಗಿನ ತೆಳುವಾದ ಪದರ ಬಹಳ ಬೇಗನೆ ಘಾಸಿಯಾಗುವ ಸಾಧ್ಯತೆ ಚಳಿಗಾಲದಲ್ಲಿ ಜಾಸ್ತಿಯಾಗಿರುತ್ತದೆ. ಅದೇ ರೀತಿ ಗಾಯ ಒಣಗಲು ಬಹಳ ಸಮಯ ಹಿಡಿಯುವುದರಿಂದ ಬಾಯಿ ಹುಣ್ಣಾಗದಂತೆ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು. ಒತ್ತಡರಹಿತ ಜೀವನ, ಸಾಕಷ್ಟು ದ್ರವಾಹಾರ, ವಿಟಮಿನ್-ಸಿ ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆ ಮತ್ತು ದಿನಕ್ಕೆ 7 ರಿಂದ 8ಗಂಟೆಗಳ ನಿದ್ರೆ ಇವುಗಳಿಗೆ ಹೆಚ್ಚಿನ ಗಮನ ನೀಡಿದಲ್ಲಿ ಬಾಯಿ ಹುಣ್ಣು ಬರದಂತೆ ತಡೆಗಟ್ಟಬಹುದು.

dr-muralee-mohan

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!