ಸೆಂಟ್ರಲ್ ಒಬೆಸಿಟಿ (ಅಥವಾ ಹೊಟ್ಟೆ ಕೊಬ್ಬು) ಕರಗಿಸುವುದು ಹೇಗೆ?

ಸೆಂಟ್ರಲ್ ಒಬೆಸಿಟಿ ಅಥವಾ ಹೊಟ್ಟೆ ಕೊಬ್ಬು ಬಹಳ ಅಪಾಯಕಾರಿ.ಸೆಂಟ್ರಲ್ ಒಬೆಸಿಟಿ ಇರುವವರಲ್ಲಿ 50 ಶೇಕಡಾ ಮಂದಿಯಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

Obesityನಮ್ಮ ದೇಹದ ಮಧ್ಯಭಾಗದಲ್ಲಿರುವ ಹೊಟ್ಟೆಯ ಸ್ನಾಯಗಳ ಸುತ್ತ ಮತ್ತು ಹೊಟ್ಟೆಯ ಒಳಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು “ಸೆಂಟ್ರಲ್ ಒಬೆಸಿಟಿ” ಎಂದು ಕರೆಯತ್ತಾರೆ. ನಮ್ಮ ದೇಹಕ್ಕೆ ಅಗತ್ಯವಿರುವುದಕ್ಕಿಂತ ಜಾಸ್ತಿ ಆಹಾರ ಅಥವಾ ಕ್ಯಾಲರಿ ಸೇವಿಸಿ, ದೈಹಿಕ ಪರಿಶ್ರಮ ಮಾಡದಿದ್ದಲ್ಲಿ ಈ ರೀತಿ ಕೊಬ್ಬು ಹೊಟ್ಟೆಯ ಸುತ್ತ ಸೇರಿಕೊಂಡು ಅನಾಹುತಕ್ಕೆ ಕಾರಣವಾಗುತ್ತದೆ. ಸೆಂಟ್ರಲ್ ಒಬೆಸಿಟಿ ಇರುವವರಲ್ಲಿ ಹೃದಯಾಘಾತ ಹೆಚ್ಚು ಉಂಟಾಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಹೊಟ್ಟೆಯ ಸುತ್ತಳತೆಗೂ ಮಧುಮೇಹಕ್ಕೂ ನೇರ ಸಂಬಂಧವಿದ್ದು ಸುತ್ತಳತೆ ಜಾಸ್ತಿಯಾದಂತೆ ಮದುಮೇಹದ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸಬ್‍ಕ್ಯುಟೆನಿಯಸ್ ಕೊಬ್ಬು ಎನ್ನುವುದು ಚರ್ಮದ ಕೆಳಭಾಗದಲ್ಲಿ ಮತ್ತು ಹೊಟ್ಟೆಯ ಸ್ನಾಯಗಳ ನಡುವೆ ಸೇರಿಕೊಂಡು ಹೊಟ್ಟೆಯ ಸುತ್ತಳೆತೆಯನ್ನು ಹೆಚ್ಚಿಸುತ್ತದೆ. ಇನ್ನು ವಿಸರಲ್ ಪ್ಯಾಟ್ ಅಥವಾ ಹೊಟ್ಟೆಯೊಳಗಿನ ಕೊಬ್ಬು ಎಂಬುದು ಪೆರಿಟೊನಿಯಲ್ ಕುಹರದೊಳಗೆ ಇರುವ ಕೊಬ್ಬು ಆಗಿರುತ್ತದೆ. ಇದು ಹೆಚ್ಚು ಶೇಖರಣೆಯಾದಲ್ಲಿ ಹೊಟ್ಟೆಯ ಆಕಾರ ಬದಲಾಗುತ್ತದೆ. ಅತಿಯಾದ ಕೊಬ್ಬು ಇಲ್ಲಿ ಶೇಖರಣೆಯಾದಾಗ ಆ್ಯಪಲ್ ಆಕಾರದ ಹೊಟ್ಟೆ ಉಂಟಾಗುತ್ತದೆ. ಹೊಟ್ಟೆ ಊದಿಕೊಂಡು ಸುತ್ತಳತೆ ಹೆಚ್ಚಾಗುತ್ತದೆ. ಇದನ್ನು ತಂಬಿಗೆ ಹೊಟ್ಟೆ (Pot Belly) ಅಥವಾ ಬಿಯರ್ ಹೊಟ್ಟೆ (Beer Belly) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆ ಜೊತು ಬಿದ್ದು ಅಸಹ್ಯವಾಗಿ ಕಾಣುತ್ತದೆ. ಇನ್ನೂ ತೊಡೆ, ನಿತಂಬಗಳ ಸುತ್ತ ಕೊಬ್ಬು ಶೇಖರಣೆಯಾದಲ್ಲಿ ಹೊಟ್ಟೆ ಪಿಯರ್ ಆಕೃತಿ (Pear Belly)ಯಂತೆ ಕಾಣುತ್ತದೆ. ಒಟ್ಟಿನಲ್ಲಿ ಈ ಕೊಬ್ಬು ಬಹಳ ಅಪಾಯಕಾರಿ.

ಕಾರಣಗಳು ಏನು?

1. ನಾವು ಆಹಾರ ಸೇವಿಸುವಾಗ ನಮ್ಮ ದೇಹಕ್ಕೆ ಅಗತ್ಯವಿರುವಷ್ಟೇ ತಿನ್ನಬೇಕು. ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸಿದಲ್ಲಿ ಅತಿಯಾದ ಕ್ಯಾಲರಿ, ಕೊಬ್ಬಾಗಿ ಪರಿವರ್ತನೆಗೊಂಡು ದೇಹದೆಲ್ಲೆಡೆ ಶೇಖರಣೆಯಾಗುತ್ತದೆ. ಒಬ್ಬ ಆರೋಗ್ಯವಂಥ ಪುರುಷನಿಗೆ 2500 ಕ್ಯಾಲರಿ ಮತ್ತು ಮಹಿಳೆಗೆ 2300 ಕ್ಯಾಲರಿ ದಿನವೊಂದಕ್ಕೆ ಅಗತ್ಯವಿರುತ್ತದೆ. ಮತ್ತು ನಾವು ಬಳಸಿದ ಕ್ಯಾಲರಿಯನ್ನು ಕರಗಿಸುವ ಪ್ರಯತ್ನವನ್ನು ಮಾಡಬೇಕು. ಅಗತ್ಯಕ್ಕಿಂತ ಜಾಸ್ತಿ ಕ್ಯಾಲರಿ ಕೊಬ್ಬಿಗಾಗಿ ಪರಿವರ್ತನೆಯಾಗಿ ಎಲ್ಲೆಡೆ ಶೇಖರಣೆಯಾಗುತ್ತದೆ.

2. ಅತಿಯಾದ ಪ್ರತ್ಟೋಸ್ ಎಂಬ ಕಾರ್ಬೋಹೈಡ್ರೇಟ್ ಬಳಕೆ ಕೂಡಾ ಸಾಧುವಲ್ಲ. ನಮ್ಮ ಆಹಾರದಲ್ಲಿ ಬರಿ ಕಾರ್ಬೋಹೈಡ್ರೇಟ್ ಇರಬಾರದು. ಅದರಲ್ಲಿ ವಿಟಮಿನ್ ಪ್ರೋಟೀನ್, ಕಾರ್ಬೊಹೈಡ್ರೇಟ್, ಲವಣ, ಕ್ಯಾಲ್ಸಿಯಂ ಎಲ್ಲವೂ ಹಿತಮಿತವಾಗಿ ಇರತಕ್ಕದ್ದು. ಇಲ್ಲವಾದಲ್ಲಿ ದೇಹದೊಳಗೆ ಅಸಮತೋಲನವಾಗಿ ಅಪೌಷ್ಟಿಕತೆ ಮತ್ತು ಅನಾರೋಗ್ಯಕ್ಕೆ ನಾಂದಿ ಹಾಡುತ್ತದೆ.

3. ಅತಿಯಾದ ಮಾಂಸ ಸೇವನೆಯಿಂದ, ಅತಿಯಾದ ಅಲ್ಕೋಹಾಲ್ ಸೇವನೆಯಿಂದಲೂ ದೇಹದ ತೂಕ ಜಾಸ್ತಿಯಾಗಿ ದೇಹದ ಕೊಬ್ಬಿನಂಶ ಜಾಸ್ತಿಯಾಗಲು ಕಾರಣವಾಗುತ್ತದೆ.

4. ದೇಹದ ಜೀವಕೋಶಗಳು ಇನುಸಿಲಿನ್ ರಸದೂತಕ್ಕೆ ಸರಿಯಾಗಿ ಸ್ಪಂದಿಸದಿದ್ದಲ್ಲಿ ನಾವು ತಿಂದ ಆಹಾರದಲ್ಲಿನ ಗ್ಲೂಕೋಸ್ ಸರಿಯಾಗಿ ಬಳಕೆಯಾಗದೆ ಕೊಬ್ಬಾಗಿ ಪರಿವರ್ತನೆಯಾಗಿ ಹೊಟ್ಟೆಯ ಸುತ್ತ ಶೇಖರಣೆಯಾಗುತ್ತದೆ. ಮದುಮೇಹ ರೋಗಿಗಳಲ್ಲಿ ಇದೇ ಕಾರಣದಿಂದ ಹೊಟ್ಟೆ ದೊಡ್ಡದಾಗಿರುತ್ತದೆ.

5. ಅತಿಯಾದ ಕೃತಕ ರಸದೂತಗಳ ಬಳಕೆ, ತಾಯಂದಿರು ಗರ್ಭ ಧರಿಸಿದ ಸಮಯದಲ್ಲಿ ಅತಿಯಾದ ಧೂಮಪಾನ ಮತ್ತು ಮಧ್ಯಪಾನ ಮಾಡುವುದರಿಂದಲೂ ಸೆಂಟ್ರಲ್ ಒಬೆಸಿಟಿ ಉಂಟಾಗಬಹುದು.

6. ಅತಿಯಾದ ಸ್ಥಿರಾಯ್ಡು ಬಳಕೆಯಿಂದಲೂ, ಇನುಸಿಲಿನ್ ಕಾರ್ಯ ಕ್ಷಮತೆ ವ್ಯತ್ಯಯವಾಗಿ ಇನುಸಿಲಿನ್ ಅಂಶ ಜಾಸ್ತಿಯಾಗಿ ಸೆಂಟ್ರಲ್ ಒಬೆಸಿಟಿ ಬರುತ್ತದೆ.

ಪತ್ತೆ ಹಚ್ಚುವುದು ಹೇಗೆ?

1. ಹೊಟ್ಟೆಯ ಸುತ್ತಳತೆ ಪುರುಷರಲ್ಲಿ 102 ಸೆಂಟಮಿಟರ್ (40ಇಂಚು) ಮತ್ತು ಮಹಿಳೆಯರಲ್ಲಿ 8 ಸೆಂಟಿಮಿಟರ್ (35 ಇಂಚು)ಗಿಂತ ಕಡಿಮೆಯಿರಬೇಕು.

2. ಹೊಟ್ಟೆಯ ಮತ್ತು ಸೊಂಟದ ಸುತ್ತಳತೆಯ ಅನುಪಾತ ಪುರುಷರಲ್ಲಿ 0.9 ಮತ್ತು ಮಹಿಳೆಯರಲ್ಲಿ 0.85ಗಿಂತ ಕಡಿಮೆಯಿರಬೇಕು.

3. BMI ಅಥವಾ ದೇಹದ ತೂಕ ಮತ್ತು ಎತ್ತರದ ಅನುಪಾತ 30ಕ್ಕಿಂತ ಕಡಿಮೆಯಿರಬೇಕು. 30ಕ್ಕಿಂತ ಜಾಸ್ತಿ ಇದ್ದಲ್ಲಿ ಹೆಚ್ಚಿನವರಲ್ಲಿ ಸೆಂಟ್ರಲ್ ಒಬೆಸಿಟಿ ಇರುತ್ತದೆ.

4. ದೇಹದ ಎತ್ತರ ಮತ್ತು ತೂಕಕ್ಕೆ ನೇರವಾದ ಸಂಬಂಧವಿದೆ. ಇವುಗಳಲ್ಲಿ ಏರುಪೇರಾದಲ್ಲಿ ಸೆಂಟ್ರಲ್ ಒಬೆಸಿಟಿ ಉಂಟಾಗುತ್ತದೆ. ದೇಹದ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕವಿರಬೇಕು.

5. ಸೆಂಟ್ರಲ್ ಒಬೆಸಿಟಿ ಇಂಡೆಕ್ಸ್ ಅತ್ಯಂತ ನಿಖರವಾಗಿ ದೇಹದ ಹೊಟ್ಟೆಯ ಕೊಬ್ಬಿನ ಪ್ರಮಾಣವನ್ನು ಗುರುತಿಸುತ್ತದೆ. ಇದು ಹೊಟ್ಟೆಯ ಸುತ್ತಳತೆ ಮತ್ತು ವ್ಯಕ್ತಿಯ ಎತ್ತರದ ಅನುಪಾತ ಆಗಿರುತ್ತದೆ. ಈ ಇಂಡೆಕ್ಸ್ 0.53ಕ್ಕಿಂತ ಕಡಿಮೆ ಇರತಕ್ಕದ್ದು. ಇದಕ್ಕಿಂತ ಜಾಸ್ತಿಯಿದ್ದಲ್ಲಿ ಸೆಂಟ್ರಲ್ ಒಬೆಸಿಟಿ ಇದೆ ಎಂದರ್ಥ. ಇದರಲ್ಲಿ ಹೊಟ್ಟೆಯ ಸುತ್ತಳತೆಯ ಬಗ್ಗೆ ವೈದ್ಯರು ಹೆಚ್ಚಿನ ಒಮ್ಮತವಿರುವುದಿಲ್ಲ. ಮಕ್ಕಳಲ್ಲಿ ಹೊಟ್ಟೆಯ ಸುತ್ತಳತೆಯನ್ನು ಪರಿಗಣಿಸಲಾಗುವುದಿಲ್ಲ ಮತ್ತು ಬೇರೆ ಬೇರೆ ಧರ್ಮ, ಕೋಮಿನ ಮತ್ತು ಜನಾಂಗದ ಜನರಲ್ಲಿ ಈ ಹೊಟ್ಟೆ ಸುತ್ತಳತೆ ಬದಲಾಗುತ್ತದೆ. ಭಾರತಿಯರಲ್ಲಿ ಈ ಹೊಟ್ಟೆಯ ಸುತ್ತಳತೆ 90 ಸೆಂಟಿಮೀಟರ್ (35 Inch) ಪುರುಷರಲ್ಲಿ ಮತ್ತು 80 ಸೆಂಟಿಮೀಟರ್ (31 Inch) ಮಹಿಳೆಯರಲ್ಲಿ ಇರಬೇಕು, ಇದಕ್ಕಿಂತ ಜಾಸ್ತಿ ಇದ್ದಲ್ಲಿ ಸೆಂಟ್ರಲ್ ಒಬೆಸಿಟಿ ಎಂದು ಪಂಗಡಿಸಲಾಗುತ್ತದೆ.

ತಡೆಗಟ್ಟುವುದು ಹೇಗೆ?

ಸೆಂಟ್ರಲ್ ಒಬೆಸಿಟಿ (ಅಥವಾ ಹೊಟ್ಟೆ) ಕರಗಿಸುವುದು ಹೇಗೆ?1. ದಿನಕ್ಕೆ ಕನಿಷ್ಟ ಪಕ್ಷ 2 ರಿಂದ 3 ಲೀಟರ್ ನೀರು ಕಡ್ಡಾಯವಾಗಿ ಕುಡಿಯತಕ್ಕದ್ದು. ನೀರು ದೇಹದ ಹಸಿವೆಯನ್ನು ಇಂಗಿಸಿ, ಕ್ಯಾಲರಿ ಜಾಸ್ತಿ ಬಳಸದಂತೆ ತಡೆಯುತ್ತದೆ.

2. ದಿನವೊಂದರಲ್ಲಿ 30 ರಿಂದ 45 ನಿಮಿಷಗಳ ಕಡ್ಡಾಯ ದೈಹಿಕ ಕಸರತ್ತು ಮಾಡತಕ್ಕದ್ದು ಇದು ಬಿರುಸುನಡಿಗೆ, ಸ್ಲಿಮಿಂಗ್, ಸೈಕ್ಲಿಂಗ್ ಅಥವಾ ಇನ್ನಾವುದೇ ಕಸರತ್ತು ಆಗಿರಬಹುದು.

3. ಕೃತಕ ಪಾನೀಯಗಳು, ಮೈದಾ ಪದಾರ್ಥಗಳನ್ನು ವಿಸರ್ಜಿಸಬೇಕು. ಸಕ್ಕರೆ ಸೇವನೆ ಕಡಿಮೆ ಮಾಡಬೇಕು.

4. ಆಲ್ಕೋಹಾಲ್ ಮತ್ತು ಧೂಮಪಾನ ಸಂಪೂರ್ಣ ವರ್ಜಿಸತಕ್ಕದ್ದು. ಆಲ್ಕೋಹಾಲ್ ಸೇವನೆಗೂ ಹೊಟ್ಟೆಯ ಕೊಬ್ಬಿಗೂ ನೇರವಾದ ಸಂಬಂಧವಿದೆ.

5. ಆಹಾರ ಸೇವನೆಯನ್ನು ಅಗತ್ಯವಿದ್ದಷ್ಟೆ ಮಾಡಬೇಕು. ಏನು ತಿನ್ನುತ್ತೇವೆ ಎನ್ನುವುದರ ಪರಿವೆ ಇರಬೇಕು. ಕರಿದ ತಿಂಡಿಗಳನ್ನು ಸೇವಿಸಬಾರದು. ದಿನಕ್ಕೆ 2500ಕ್ಕಿಂತ ಜಾಸ್ತಿ ಕ್ಯಾಲರಿ ಸೇವನೆ ಮಾಡಬಾರದು. ನಿಧಾನವಾಗಿ ಆರಾಮವಾಗಿ ಆಹಾರ ಸೇವನೆ ಮಾಡಿ. ಆಹಾರ ಪ್ರಮಾಣಕ್ಕಿಂತ ಆಹಾರದ ಕ್ಯಾಲರಿ ಬಗ್ಗೆ ಹೆಚ್ಚಿನ ಗಮನಕೊಡಬೇಕು.

6. ಹಸಿ ತರಕಾರಿ, ತಾಜಾ ಹಣ್ಣುಗಳು, ನಾರುಯುಕ್ತ ಪದಾರ್ಥಗಳನ್ನು ಸೇವಿಸಬೇಕು, ಇವುಗಳಲ್ಲಿ ಕ್ಯಾಲರಿ ಅಂಶ ಕಡಿಮೆ ಇರುತ್ತದೆ ಮತ್ತು ಹೊಟ್ಟೆ ಬೇಗನೆ ತುಂಬಿದಂತೆ ಭಾಸವಾಗುತ್ತದೆ.

7. ದೈನಂದಿನ ಜೀವನದಲ್ಲಿ ವಿಲಾಸಿ ಜೀವನಕ್ಕೆ ತಿಲಾಂಜಲಿ ಇಟ್ಟು, ದೈಹಿಕ ಪರಿಶ್ರಮವಿರುವ ಜೀವನ ಶೈಲಿ ಅಳವಡಿಸಿಕೊಳ್ಳತಕ್ಕದ್ದು. ದಿನನಿತ್ಯ ಲಿಪ್ಟ್ ಬಳಕೆಸಲ್ಲದು, ಸಾಧ್ಯವಾದಷ್ಟು ಮೆಟ್ಟಲುಗಳನ್ನು ಬಳಸಿ. ವ್ಯಾಯಮ, ನಡಿಗೆ ಜೀವನದ ಅವಿಬಾಜ್ಯ ಅಂಗವಾಗಿರಲಿ, ಮಾನಸಿಕ ಒತ್ತಡ ಕಡಿಮೆಯಾಗಿಸುವ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು.

ನೆನಪಿರಲಿ ಒಂದು ಪೌಂಡು ಕೊಬ್ಬಿನಿಂದ ಏನಿಲ್ಲವೆಂದರೂ 3500 ಕ್ಯಾಲರಿ ಶಕ್ತಿ ದೇಹಕ್ಕೆ ಸಿಗುತ್ತದೆ. ಕೊಬ್ಬಿನಂಶ ಕಡಿಮೆ ಇರುವ ವಸ್ತುಗಳಿಗೆ ಆದ್ಯತೆ ನೀಡಿ. ಯಾವುದೇ ಔಷಧಿಯಿಂದ ದೇಹದ ತೂಕ ಕಳೆಯುವುದು ವೈಜ್ಞಾನಿಕವಾಗಿ ಒಳ್ಳೆಯದಲ್ಲ. ದೈಹಿಕ ಪರಿಶ್ರಮದಿಂದಲೇ ದೇಹದ ತೂಕ ಕರಗಿಸುವುದೇ ಅತ್ಯುತ್ತಮವಾದ ಆಯ್ಕೆಯಾಗಿರಲಿ.

ತೊಂದರೆಗಳು ಏನು?

ದೇಹದಲ್ಲಿ ಕೊಬ್ಬಿನ ಪ್ರಮಾಣ ಜಾಸ್ತಿಯಾದಂತೆ ಅಧಿಕ ರಕ್ತದೊತ್ತಡ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ರಹದಾರಿ ನೀಡಿದಂತಾಗುತ್ತದೆ. ಸೆಂಟ್ರಲ್ ಒಬೆಸಿಟಿ ಇರುವವರಲ್ಲಿ 50 ಶೇಕಡಾ ಮಂದಿಯಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಹೊಟ್ಟೆಯಲ್ಲಿನ ಕೊಬ್ಬಿನ ಪ್ರಮಾಣ ಜಾಸ್ತಿಯಾದಂತೆ ಉಸಿರಾಟದ ತೀವ್ರತೆ ಮತ್ತು ಉಸಿರಾಟದ ಗಾತ್ರ ಕಡಿಮೆಯಾಗುತ್ತದೆ. ಈ ಕಾರಣದಿಂದ ಕೊಬ್ಬಿನಂಶ ಜಾಸ್ತಿ ಇರುವವರು ಜಾಸ್ತಿ ಅಸ್ತಮಾ ರೋಗಕ್ಕೆ ತುತ್ತಾಗುತ್ತಾರೆ ಎಂದೂ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇನ್ನೂ ದೇಹದಲ್ಲಿನ ಕೊಬ್ಬಿನಂಶ ಜಾಸ್ತಿಯಾದಂತೆ ರಕ್ತನಾಳಗಳು ಪೆಡಸಾಗುತ್ತದೆ ಹಾಗೂ ದೇಹದಲ್ಲಿನ ವಸ್ತುಗಳ ಪಚನಕ್ರಿಯೆಯಲ್ಲಿ ವ್ಯತ್ಯಯವಾಗುತ್ತದೆ. ಇಂತಹಾ ವ್ಯಕ್ತಿಗಳು ಆಲ್‍ಜೈಮರ್ಸ್ ರೋಗಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುತ್ತದೆ.

ಕೊನೆಮಾತು:

ನಮ್ಮ ದೇಹಕ್ಕೆ ಬರುವ ರೋಗಕ್ಕೂ ನಾವು ತಿನ್ನುವ ಆಹಾರಕ್ಕೂ ನೇರವಾದ ಸಂಬಂಧವಿದೆ. ಈ ಕಾರಣದಿಂದಲೇ ನಮ್ಮ ಹಿರಿಯರು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂದು ಆಗಾಗ ಹೇಳುತ್ತಿರುತ್ತಾರೆ. ನಾವು ಏನು ತಿನ್ನುತ್ತೇವೆ ಎಷ್ಟು ತಿನ್ನುತ್ತೇವೆ ಎಂಬುದರ ಪರಿವೆ ನಮಗಿರಲೇಬೇಕು. ಇಲ್ಲವಾದಲ್ಲಿ ನಾವು ತಿನ್ನುವ ಆಹಾರವೇ ನಮಗೆ ವಿಷವಾಗುವ ದಿನಗಳು ದೂರವಿಲ್ಲ. ನಾವು ತಿನ್ನುವಾಗ ನೂರುಕಾಲ ಬದುಕಬೇಕು ಎಂದು ತಿನ್ನಬೇಕು ಮತ್ತು ದುಡಿಯುವಾಗ ನಾಳೆ ಸಾಯುತ್ತೇವೆ ಎಂದು ದುಡಿಯಬೇಕು. ಆದರೆ ನಾವು ಇದಕ್ಕೆ ತದ್ವಿರುದ್ದವಾಗಿ ವ್ಯವಹರಿಸುತ್ತೇವೆ. ನಾವು ತಿನ್ನುವುದಕ್ಕಾಗಿ ಬದುಕದೆ ಬದುಕುವುದಕ್ಕಾಗಿ ತಿನ್ನಬೇಕು. ನಾವು ಸೇವಿಸುವ ಆಹಾರವನ್ನು ಔಷಧಿಯಂತೆ ತಿನ್ನಬೇಕು ಇಲ್ಲವಾದರೆ ನಾವು ಔಷಧವನ್ನೇ ಆಹಾರದಂತೆ ತಿನ್ನುವ ಕಾಲ ಬಂದರೂ ಬರಬಹುದು. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮಗೆಷ್ಟು ಬೇಕೋ ಅಷ್ಟು ಮಾತ್ರ ತಿಂದು, ದೈಹಿಕ ಪರಿಶ್ರಮವಿರುವ ಆರೋಗ್ಯವಂತ ಜೀವನ ಶೈಲಿ ರೂಡಿಸಿಕೊಂಡು ಒಂದು ಸುಂದರ ಸುದೃಡ ಸಮಾಜವನ್ನು ನಿರ್ಮಿಸೋಣ. ಅದರಲ್ಲಿಯೇ ನಮ್ಮ ನಿಮ್ಮೆಲ್ಲರ ಹಿತ ಮತ್ತು ನೆಮ್ಮದಿ ಅಡಗಿದೆ.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!