ಬೇಸಿಗೆಯಲ್ಲಿ ತ್ವಚೆಯ ಆರೈಕೆ

ಬೇಸಿಗೆಯಲ್ಲಿ ತ್ವಚೆಯ ಆರೈಕೆ ಸಾಮಾನ್ಯರನ್ನು ಕಾಡುವ ಸಮಸ್ಯೆ. ಸೂರ್ಯ ರಶ್ಮಿ ಏಕೆ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಈ ತೊಂದರೆಗಳಿಂದ ಹೊರ ಬರುವುದು ಹೇಗೆ ಎಂಬುದರ ಮೇಲೆ ಬೆಳಕು ಚೆಲ್ಲುವ ವಿಶೇಷ ಲೇಖನವಿದು.

besige-twache-ಬೇಸಿಗೆಯಲ್ಲಿ ತ್ವಚೆಯ ಆರೈಕೆಬೇಸಿಗೆ ಕಾಲ ಬಂತೆಂದರೆ, ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಚರ್ಮ ಕಡು ಬಣ್ಣಕ್ಕೆ ತಿರುಗುವ, ಕಪ್ಪಾಗುವ ಮತ್ತು ಒರಟಾಗುವ ಆತಂಕ. ಬೇಸಿಗೆಯಲ್ಲಿ ಸಾಮಾನ್ಯರನ್ನು ಕಾಡುವ ಸಮಸ್ಯೆಗಳಲ್ಲಿ ಚರ್ಮ ಸಮಸ್ಯೆ, ತ್ವಚೆಯ ತೊಂದರೆಯೂ ಒಂದು. ಈ ಸಮಸ್ಯೆಗಳಿಗೆ ಕಾರಣವೆಂದರೆ ಸೂರ್ಯನ ಪ್ರಖರ ಬೆಳಕು.
ನಾವು ಪಡೆಯುವ ಸೂರ್ಯನ ಬೆಳಕಿನಲ್ಲಿ ಮೂರು ಬಗೆಯ ಕಿರಣಗಳಿರುತ್ತವೆ. ಆಲ್ಟ್ರಾವಯಲೆಟ್ ಕಿರಣ, ಗೋಚರಿಸುವ ಕಿರಣ ಮತ್ತು ಇನ್‍ಫ್ರಾರೆಡ್ ಕಿರಣ. ಆಲ್ಟ್ರಾವಯಲೆಟ್ ಕಿರಣವು 200-400 ಎನ್‍ಎಂ ತರಂಗಾಂತರವುಳ್ಳ ಅನ್ಯ ಸೌರಾ ವಿಕರಣದ ಶೇ.5ರಷ್ಟು ಪ್ರಭಾವವನ್ನು ಒಳಗೊಂಡಿರುತ್ತದೆ. ಮಾನವರು ಅನುಭವಿಸುವ ಎಲ್ಲ ರೀತಿಯ ಚರ್ಮ ಸಮಸ್ಯೆಗಳಿಗೆ ಕಾರಣವಾಗುವುದೇ ಈ ಆಲ್ಟ್ರಾವಯಲೆಟ್ ಕಿರಣಗಳು.

ಚರ್ಮ ರೋಗ ಉಲ್ಬಣವಾಗುವುದಕ್ಕೆ ಸೂರ್ಯನ ಪ್ರಖರ ಕಿರಣಗಳೇ ಕಾರಣ:
ಆಲ್ಟ್ರಾವಯಲೆಟ್ ಕಿರಣಗಳನ್ನು ಮತ್ತೆ ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು. ಯುವಿಎ (320-400 ಎನ್‍ಎಂ), ಯುಎಬಿ (280-320 ಎನ್‍ಎಂ) ಹಾಗೂ ಯುವಿಸಿ (200-280 ಎನ್‍ಎಂ). ಈ ಪೈಕಿ ಯುವಿಸಿ ಓಜೋನ್ ಪದರದಿಂದ ಹೀರಿಕೊಳ್ಳಲ್ಪಡುತ್ತದೆ. ಯುವಿಎ ಮತ್ತು ಯುವಿಬಿ ಮಾತ್ರ ಚರ್ಮ ಪದರವನ್ನು ತಲುಪುತ್ತದೆ. ಇದರಲ್ಲಿ ಯುವಿಎ ಶೇ.95-98 ಮತ್ತು ಯುವಿಬಿ ಶೇ.2-5ರಷ್ಟು ಪ್ರಭಾವ ಹೊಂದಿರುತ್ತವೆ. ಈ ಎರಡು ಬಗೆಯ ಕಿರಣಗಳು ಸೂರ್ಯ ರಶ್ಮಿಯಿಂದ ಉಂಟಾಗುವ ಸಮಸ್ಯೆಗಳಿಗೆ ಮುಖ್ಯ ಕಾರಣವಾಗುತ್ತದೆ.
ಆಲ್ಟ್ರಾವಯಲೆಟ್ ಕಿರಣಗಳಿಂದ ಉಂಟಾಗುವ ಹಾನಿಯನ್ನು ಸೂರ್ಯ ರಶ್ಮಿಯಿಂದಾಗುವ ಚರ್ಮ ಸುಡುವಿಕೆ, ಚರ್ಮ ಕಪ್ಪಾಗುವಿಕೆ ಮತ್ತು ಕೆಲವು ಅಲರ್ಜಿ ದೋಷಗಳ ರೂಪದಲ್ಲಿ ತಕ್ಷಣವೇ ತಿಳಿದುಕೊಳ್ಳಬಹುದು. ದೀರ್ಘಕಾಲ ಚರ್ಮವನ್ನು ಸೂರ್ಯನ ತೀಕ್ಷ್ಣ ಬೆಳಕಿಗೆ ಒಡ್ಡುವುದರಿಂದ ಅವಧಿಗೆ ಮುನ್ನವೇ ವೃದ್ದಾಪ್ಯ, ಚರ್ಮ ಸುಕ್ಕಾಗುವಿಕೆ ಮತ್ತು ಕೆಲವು ಚರ್ಮ ಕ್ಯಾನ್ಸರ್‍ಗಳಿಗೂ ಕಾರಣವಾಗಬಹುದು. ಮಾನವರಲ್ಲಿ ಕಂಡುಬರುವ ಸುಮಾರು 40 ಚರ್ಮ ರೋಗಗಳಿಗೆ ಅಥವಾ ಅದು ಉಲ್ಬಣವಾಗುವುದಕ್ಕೆ ಸೂರ್ಯನ ಪ್ರಖರ ಕಿರಣಗಳೇ ಕಾರಣವಾಗುತ್ತವೆ. ಹೀಗಾಗಿ ನಾವು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಣೆ ಪಡೆಯಬೇಕೆಂಬ ವಿಷಯ ಬಂದಾಗ ಅಪಾಯಕಾರಿ ಯುವಿ ಎ ಮತ್ತು ಯುವಿ ಬಿ ಕಿರಣಗಳ ತಕ್ಷಣ ಮತ್ತು ದೀರ್ಘಾವಧಿಯ ಪರಿಣಾಮಗಳಿಂದ ಕೂಡಲೇ ರಕ್ಷಣೆ ಪಡಯಬೇಕಾಗುವುದು ಅಗತ್ಯ.
besige-twache-aarikeಓಜೋನ್ ಲೇಯರ್ ಪರಿಸರದ ಸ್ಪ್ರಾಟೋಸ್ಫೆರಿಕ್ ಪದರದಲ್ಲಿರುತ್ತದೆ. ಅಂದರೆ, ಭೂಮಿಯ ಮೇಲ್ಮೈನಿಂದ ಮೇಲೆ ಸರಾಸರಿ 15 ರಿಂದ 25 ಕಿ.ಮೀ. ಅಂತರದಲ್ಲಿ ಇರುತ್ತದೆ. ಕೈಗಾರಿಕಾ ಮಾಲಿನ್ಯ, ಕೀಟನಾಶಕಗಳ ಹೊರಸೂಸುವಿಕೆ ಮುಂತಾದ 1.ಪರಿಸರದ ಮಾಲಿನ್ಯದಿಂದಾಗಿ ಓಜೋನ್ ಪದರ ಕರಗುತ್ತಿದ್ದು, ಅದರ ರಂಧ್ರ ದೊಡ್ಡದಾಗುತ್ತಿದೆ. ಇದರಿಂದಾಗಿ ಸೂರ್ಯನ ತೀಕ್ಷ್ಣ ಕಿರಣಗಳಲ್ಲಿ ಇರುವ ಅಪಾಯಕಾರಿ ಆಲ್ಟ್ರಾವಯಲೆಟ್ ಕಿರಣಗಳು ಭೂಮಿಯನ್ನು ಸುಲಭವಾಗಿ, ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತಿದ್ದು, ಚರ್ಮ ಕ್ಯಾನ್ಸರ್ ರೋಗದಂಥ ಸಮಸ್ಯೆಗಳನ್ನು ತಂದೊಡ್ಡುತ್ತಿವೆ.

2. ಮಾರಕ ಆಲ್ಟ್ರಾವಯಲೆಟ್ ರಶ್ಮಿಯ ಅಪಾಯ ಇನ್ನಷ್ಟು ಹೆಚ್ಚಾಗಲು ಕೆಲುವ ಅಂಶಗಳೂ ಕಾರಣವಾಗುತ್ತದೆ. ಕಡು ವರ್ಣದ ಬಟ್ಟೆ ಧರಿಸುವಿಕೆ, ಹೊರಾಂಗಣ ನೌಕರಿ, ಎತ್ತರ ಪ್ರದೇಶದಲ್ಲಿ ವಾಸಿಸುವಿಕೆ, ಹೊರಾಂಗಣ ಮನರಂಜನಾ ಚಟುವಟಿಕೆ, ಸೂರ್ಯನ ತಾಪ ಹೆಚ್ಚಾಗಿರುವ ಸ್ಥಳಗಳು, ವಿಪರೀತ ಬಿಸಿಲು, ಧೂಮಪಾನ ಈ ಎಲ್ಲ ಕಾರಣಗಳು ಸೂರ್ಯ ರಶ್ಮಿಯಿಂದ ಉಂಟಾಗುವ ಹಾನಿಯನ್ನು ಮತ್ತಷ್ಟು ಹೆಚ್ಚಾಗಿಸುತ್ತದೆ.

3.ಉಷ್ಣಾಂಶ, ಗಾಳಿಯಲ್ಲಿನ ತೇವಾಂಶ, ಪರಿಸರ ನಾಶಕಗಳು, ಮೋಡ ಮುಸುಕಿದ ವಾತಾವರಣ, ಬಿಸಿಲಿನ ಝಳ (ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ಈ ಸಮಯದಲ್ಲಿ ಆಲ್ಟ್ರಾವಯಲೆಟ್ ಕಿರಣಗಳು ಭೂಮಿಗೆ ಹೆಚ್ಚಾಗಿ ತಲುಪುತ್ತದೆ) ಇಂಥ ಕೆಲವು ವಾತಾವರಣ ಅಂಶಗಳು ಕೂಡ ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗುವುದನ್ನು ಇಮ್ಮಡಿಗೊಳಿಸುತ್ತವೆ.

4.ನೋವು ನಿವಾರಕ ಗುಳಿಗೆಗಳು, ಆಂಟಿಬಯೋಟಿಕ್‍ಗಳು, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಸಲಾಗುವ ಔಷಧಿಗಳು ಕೂಡ ಸೂರ್ಯ ಕಿರಣಗಳಿಗೆ ಸ್ಪಂದಿಸಿ ಚರ್ಮಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ.

5. ಸೋಪುಗಳು, ಸುಗಂಧ ದ್ರವ್ಯಗಳು, ಪರಿಮಳ ಸಾಧನಗಳು ಮತ್ತು ಮುಖಕ್ಕೆ ಹಚ್ಚುವ ಇತರ ಪ್ರಸಾಧನಗಳಂಥ ಕಾಸ್ಮೆಟಿಕ್‍ಗಳೂ ಕೂಡ, ಸೂರ್ಯನ ಕಿರಣಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಚರ್ಮ ಆಲರ್ಜಿ ಉಂಟು ಮಾಡುತ್ತವೆ.

6.ನಮ್ಮ ದೇಶ ವಿಭಿನ್ನ ಮತ್ತು ವೈವಿಧ್ಯಮಯ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಪರ್ವತಗಳು, ಮರುಭೂಮಿಗಳು, ಸಮುದ್ರ, ನದಿ, ಸರೋವರ ಇತ್ಯಾದಿ ನಮ್ಮ ಭಾರತವನ್ನು ವ್ಯಾಪಿಸಿಕೊಂಡಿವೆ. ಹೀಗಾಗಿ ಇಂಥ ಪ್ರದೇಶಗಳು ಸೂರ್ಯನ ಕಿರಣಗಳನ್ನು ಪ್ರತಿಫಲಿಸುವಂತೆ ಮಾಡುತ್ತವೆ. ಇದರಿಂದ ಆಲ್ಟ್ರಾವಯಲೆಟ್ ವಿಕಿರಣದ ಪರೋಕ್ಷ ಮೂಲಗಳು ಕಾರ್ಯನಿರ್ವಹಿಸುತ್ತವೆ.

7. ಹೊರಾಂಗಣ ಕ್ರೀಡೆಗಳು ಮತ್ತು ಮನರಂಜನಾ ಚಟುವಟಿಕೆಗಳಿಂದಾಗಿಯೂ ಸೂರ್ಯನ ತೀಕ್ಷ್ಣ ಕಿರಣಗಳು ಸೃಷ್ಟಿಸುವ ಚರ್ಮ ದೋಷಗಳು ಮತ್ತಷ್ಟು ವೃದ್ದಿಯಾಗಲು ಕಾರಣವಾಗುತ್ತವೆ.

ರಕ್ಷಣಾ ವಿಧಾನಗಳು

1.ಪ್ರಖರ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಿ ಅಥವಾ ನಿಯಂತ್ರಿಸಿ. ಕೆಲವು ರಕ್ಷಣಾ ಕ್ರಮಗಳನ್ನು ಅನುಸರಿಸಿ. ಆಲ್ಪ್ರಾವಯಲೆಟ್ ಕಿರಣಗಳ ತೀವ್ರತೆ ಹೆಚ್ಚಾಗಿರುವ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ತನಕ ಹೊರಗೆ ಹೋಗುವುದನ್ನು ನಿಯಂತ್ರಿಸಿ.

2.ನೀವು ಧರಿಸುವ ಬಟ್ಟೆಗಳು ಬಿಗಿಯಾಗಿ ಹೆಣೆದಿರಲಿ ಮತ್ತು ತಿಳಿ ಬಣ್ಣದ್ದಾಗಿದ್ದು, ಸಡಿಲವಾಗಿರಲಿ. ಬಟ್ಟೆಗಳು ನಿಮ್ಮ ದೇಹದ ಬಹುಭಾಗವನ್ನು ಮುಚ್ಚುವಂತಿರಲಿ. ಉದಾಹರಣೆಗೆ ಕುರ್ತಾ, ಪೈಜಾಮ, ಸಲ್ವಾರ್, ತುಂಬು ತೋಳಿನ ಅಂಗಿ, ಉದ್ದನೆಯ ಪ್ಯಾಂಟ್ ಇತ್ಯಾದಿ.

3. ಅಗಲವಾದ ಅಂಚಿರುವ ಟೋಪಿಗಳು, ಕೈಗವಸು (ಗ್ಲೌವ್ಸ್), ಮತ್ತು ಅಗಲವಾದ ತಂಪು ಕನ್ನಡಕಗಳನ್ನು ಉಪಯೋಗಿಸಿ.

4. ನೆರಳು ಇಲ್ಲದಿದ್ದಾಗ ಛತ್ರಿ/ಕೊಡೆಗಳೊಂದಿಗೆ ರಕ್ಷಣೆ ಪಡೆಯುವುದು ತುಂಬಾ ಪರಿಣಾಮಕಾರಿ ವಿಧಾನ.

5. ಬಿಸಿಲಿನಲ್ಲಿ ಹೊರ ಹೋಗುವುದಕ್ಕೆ 20 ನಿಮಿಷಗಳ ಮುನ್ನ ಸನ್‍ಸ್ಕ್ರೀನ್‍ಗಳನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಬಳಸಿದರೆ ಸೂರ್ಯನ ತೀಕ್ಷ್ಣ ಕಿರಣಗಳಿಂದ ಉಂಟಾಗುವ ಹಾನಿಗಳನ್ನು ತಡೆಗಟ್ಟಬಹುದು. ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್‍ಪಿಎಫ್) 15 ಇರುವ ಸನ್‍ಸ್ಕ್ರೀನ್, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆ ಪಡೆಯಲು ಸೂಕ್ತ. ಉತ್ತಮ ಸನ್‍ಸ್ಕ್ರೀನ್ ಯುವಿ ಎ ಮತ್ತು ಯುವಿ ಬಿ ಅಪಾಯಕಾರಿ ಕಿರಣಗಳನ್ನು ತಡೆಯಬೇಕಾಗುತ್ತದೆ ಹಾಗೂ ಇದು ಜಲ ಪ್ರತಿರೋಧಕವಾಗಿರುತ್ತದೆ (ಅಂದರೆ, ನೀರಿನೊಂದಿಗೆ ಸಂಪರ್ಕಕ್ಕೆ ಬಂದ 40 ನಿಮಿಷಗಳ ನಂತರವೂ ಸನ್‍ಸ್ಕ್ರೀನ್‍ನ ಸೂರ್ಯ ರಕ್ಷಣಾ ಅಂಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ). ಇದು ವಿಶೇಷವಾಗಿ ಕೃಷಿ ಕಾರ್ಮಿಕರಿಗೆ, ರೈತರು, ಮಾರುಕಟ್ಟೆ ಪ್ರತಿನಿಧಿಗಳು, ಸೆಲ್ಸ್‍ಮನ್ ಮತ್ತು ಹೊರಾಂಗಣ ವಿಭಾಗದ ನೌಕರರಿಗೆ ಉಪಯುಕ್ತ.

6. ಸ್ವಲ್ಪ ಪ್ರಮಾಣದಲ್ಲಿ (2 ಎಂಜಿ/ಸಿಎಂ) ಸನ್‍ಸ್ಕ್ರೀನ್‍ನನ್ನು ಮುಖದ ಮೇಲೆ ಲೇಪಿಸುವುದರಿಂದ 4 ಗಂಟೆಗಳ ಕಾಲ ರಕ್ಷಣೆ ನೀಡುತ್ತದೆ. ತುಂಬಾ ಅಪರೂಪಕ್ಕೆ ಕೆಲವು ಸನ್‍ಸ್ಕ್ರೀನ್‍ಗಳು ತನ್ನ ರಾಸಾಯನಿಕ ಸ್ವರೂಪ ಮತ್ತು ಇತರೆ ವಸ್ತುಗಳಿಂದಾಗಿ ಅಲರ್ಜಿ ಪರಿಣಾಮಗಳನ್ನು ಉಂಟು ಮಾಡಬಹುದು.

7. ಸೂರ್ಯ ರಶ್ಮಿ ನಮ್ಮ ಚರ್ಮದ ಆರೋಗ್ಯ ಮತ್ತು ಪೋಷಣೆಗೆ ಅಗತ್ಯವಾದರೂ, ಅದರ ಹಾನಿಕಾರಕ ದುಷ್ಪರಿಣಾಮಗಳನ್ನು ನಿರ್ಲಕ್ಷಿಸುವಂತಿಲ್ಲ. ಪರಿಣಾಮಕಾರಿ ರಕ್ಷಣೆಯಿಂದ ಚರ್ಮ ಸಮಸ್ಯೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಯಲು ಮತ್ತು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ. ಚರ್ಮ ಸಮಸ್ಯೆಗಳು ಗುಣಮುಖವಾಗದಿದ್ದರೆ ಅಥವಾ ಉಲ್ಬಣಗೊಂಡರೆ, ಆರಂಭದಲ್ಲೇ ರೋಗಿಗಳು ಚರ್ಮರೋಗ ತಜ್ಞರನ್ನು ಭೇಟಿ ಮಾಡುವುದು ಸೂಕ್ತ.

dr Bhanuprakash ಡಾ. ಭಾನುಪ್ರಕಾಶ್ ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, #82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್ : +91-80-49069000 Extn: 1147 / 1366   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!