ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು

ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು.

ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು

ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್ ಕಾರ್ನಿಯ’ ಉಬ್ಬಿ ಸ್ವೇದ/ಬೆವರು ನಾಳಗಳನ್ನು ಮುಚ್ಚಿ ಬಿಡುತ್ತದೆ. ಇದರಿಂದ ಬೆವರು ಹೊರಕ್ಕೆ ಬರಲಾಗದೆ ಚರ್ಮವು ಬಾಡಿ ಹೋಗಿ, ಉರಿ, ಕೆರೆತ, ಗುಳ್ಳೆಗಳು, ಬೆವರು ಕಾಯಿಗಳು ಪ್ರಾಪ್ತವಾಗುತ್ತವೆ.

ಈ ಬೆವರು ಕಾಯಿಗಳು ಕೆಂಪು ಇಲ್ಲವೆ ಬಿಳಿಯ ಬಣ್ಣದಲ್ಲಿ ಇರುತ್ತವೆ. ಬಿಸಿ ಸೆಖೆಯನ್ನು ತಡೆಯುವುದು ಕಷ್ಟವಾಗುತ್ತದೆ. ಇದು ದೀರ್ಘ ಸಮಯ ಹೀಗೇ ಇದ್ದರೆ ಚರ್ಮವು ಹಾನಿಗೊಳಗಾಗಿ, ಹೊರಗಿನಿಂದ ಬ್ಯಾಕ್ಟೀರಿಯಾ ಒಳ ಪ್ರವೇಶಿಸಿ ಕೀವಿನ ಗುಳ್ಳೆಗಳು, ರಕ್ತದ ಗಡ್ಡೆಗಳು, ಬಿಸಿಲ ಗುಳ್ಳೆಗಳು ಬರುತ್ತವೆ. (ಅಷ್ಟೇ ವಿನಾಃ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಖಂಡಿತಾ ಅಲ್ಲ) ಇವು ಬರದಂತೆ ತಡೆಗಟ್ಟಬೇಕಾದರೆ ಎರಡು ಹೊತ್ತು ಶುಭ್ರವಾಗಿ ಸ್ನಾನ ಮಾಡುತ್ತಿದ್ದು ನೆರಳಿನಲ್ಲಿದ್ದು, ಬೀಸಣಿಕೆಯಲ್ಲಿ ಬೀಸುತ್ತಾ ಇರಬೇಕು ಅಥವಾ ಕೂಲರ್ಸ್, ಎ.ಸಿ. ಗಳನ್ನು ಬಳಸಿಕೊಳ್ಳಬಹುದು. ಎಳನೀರು ನೀರನ್ನು ಹೆಚ್ಚಾಗಿ ಕುಡಿಯುತ್ತಿರಬೇಕು. ಕಾಯಿಗಳು ಗಡ್ಡೆಗಳಾಗಿ ಬಿಟ್ಟರೆ ಆಂಟಿಬಯೋಟಿಕ್ಸ್ ಬಳಸಬೇಕು.

ಬಿಸಿಲುಗಾಳಿ: ದೇಹದಲ್ಲಿನ ಬಿಸಿಗೆ ಉಷ್ಣಾಗ್ರತೆ ಹೆಚ್ಚಾಗುವುದರ ಜೊತೆಗೆ, ನಿಯಂತ್ರಿಸುವ ಯಂತ್ರಾಂಗ ಬಲಹೀನವಾಗಿ ಬಿಟ್ಟರೆ ಜ್ವರ, ನಾಡಿಬಡಿತ ಏರುವುದು ಉಂಟಾಗುತ್ತದೆ. ಇದು ಬಿಸಿಲು ಗಾಳಿಗೆ ಮೂಲ. ಹೈಟೆಂಪರೇಚರ್ ಜ್ವರ, ಹೃದಯಬಡಿತ ಏರುವುದು, ತಲೆನೋವು, ಹಿಂಸೆ, ಚರ್ಮ ಕೆಂಪಗಾಗುವುದು. ಚರ್ಮದಿಂದ ಹೊಟ್ಟು ಉದುರುವುದು, ಕಣ್ಣುಗಳು ಕೆಂಪಾಗುವುದು. ಇವು ಬಿಸಿಲು ಗಾಳಿ ವ್ಯಾದಿಯ ಲಕ್ಷಣಗಳು.

ಬಿಸಿಲು ಹೊಡೆತ: ಬಿಸಿಲಿನ ಝಳಕ್ಕೆ ವಿಪರೀತವಾದ ನಿತ್ರಾಣ, ಬಳಲಿಕೆ, ಸುಸ್ತು, ಆಲಸಿಕೆ ಉಂಟಾಯಿತೆಂದರೆ ಬಿಸಿಲಿನ ಹೊಡೆತ ಬಡಿದಿದೆಯೆಂತಲೇ ಅರ್ಥ. ವಾಂತಿ, ತಲೆನೋವು, ತಲೆಸುಸ್ತು, ಪಿತ್ತ, ವಾತ, ಮೈ ಇರಿಸುಮುರಿಸು ಇವು ಸಹಾ ಸರ್ವೋತ್ತಮ. ಅಥವಾ ಮುಖ ಮೈ ಮೇಲೆಲ್ಲಾ ಒದ್ದೆ ಬಟ್ಟೆ ಹಾಕುವುದೋ, ಫ್ಯಾನ್ ಬೀಸುವುದೋ ಮಾಡಬೇಕು.

ಭೇದಿ: ನೀರಿನ ಕೊರತೆಯ ಕಾರಣವಾಗಿ, ಕುಡಿಯುವ ನೀರು ಕಲುಷಿತವಾಗಿ ಇನ್‍ಫೆಕ್ಷನ್‍ನಿಂದ ಬೇಸಿಗೆಯಲ್ಲಿ ಭೇದಿಯಾಗುವುದು ಸಹಜ. ಶುಭ್ರವಾದ ನೀರು (ಕಾದಾರಿಸಿದ) ಕುಡಿಯಬೇಕು. ಭೇದಿ ಪ್ರಾರಂಭವಾಗುತ್ತಲೇ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ದ್ರವ್ಯ ಪಾನೀಯಗಳು, ತಿಳಿಮಜ್ಜಿಗೆ, ಎಳನೀರು, ಹಣ್ಣಿನ ರಸ, ಅಕ್ಕಿ/ರಾಗಿ ಗಂಜಿ… ಮುಂತಾದವನ್ನು ಸೇವಿಸುತ್ತಿರಬೇಕು ಅಥವಾ ‘ಓಆರ್‍ಎಸ್’ ಕುಡಿಯಬಹುದು.

ಕಾಮಾಲೆ: ಕಲುಷಿತವಾದ ನೀರು, ಆಹಾರ ಸೇವನೆಯ ಕಾರಣವಾಗಿ ಬೇಸಿಗೆಯಲ್ಲಿ ಹೆಪಟೈಟಿಸ್ ‘ಎ’, ‘ಇ’ ಥರಹವಾದ ಕಾಮಾಲೆಗಳು ಬಂದು ಅಂಟಿಕೊಳ್ಳುತ್ತದೆ. ಆದ್ದರಿಂದ ಪರಿಶುಭ್ರವಾದ ನೀರು, ಆಹಾರವನ್ನು ತೆಗೆದುಕೊಳ್ಳಬೇಕು. ಕೈ ಮತ್ತು ಬಾಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ನೀರಿನ ಜೊತೆ ಅತಿ ಅಮೂಲ್ಯ ಲವಣಗಳಾಗಿ ಸೋಡಿಯಂ, ಪೊಟಾಶಿಯಂ, ಕ್ಯಾಲ್ಸಿಯಂ, ಕ್ಲೋರೈಡ್… ಮುಂತಾದವುಗಳು ದೇಹದಿಂದ ಹೊರಕ್ಕೆ ಹೋಗುತ್ತಿರುತ್ತವೆ. ಇದರಿಂದ ಡೀಹೈಡ್ರೇಷನ್ ಬಂದು ವಕ್ಕರಿಸುತ್ತದೆ. ಬಾಯಿ ಒಣಗುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು. ಕಣ್ಣುರಿ, ಚರ್ಮವನ್ನು ಎಳೆದು ಬಿಟ್ಟರೆ ಮತ್ತೆ ಮೊದಲಿನಂತಾಗಲು ಹೆಚ್ಚು ಸಮಯ ಹಿಡಿಸುವುದು. ನಾಡಿ ವೇಗವಾಗಿ ಹೊಡೆದುಕೊಳ್ಳುವುದು ಮುಂತಾದವು ಇದರ ಲಕ್ಷಣಗಳು.

ಇಂಥ ಪರಿಸ್ಥಿತಿಗಳು ತಲೆ ಎತ್ತದಂತೆ ನಿತ್ಯವೂ ಯಥೇಚ್ಛವಾಗಿ ನೀರು ಕುಡಿಯಬೇಕು. ನಿಜಕ್ಕೂ ನಮಗೆ ದಾಹವಾಗಿದೆಯೆಂದರೆ ಆಗಲೇ ನಮಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯ ಇದೆಯೆಂದು ಅರ್ಥ. ಆದ್ದರಿಂದ ದಾಹವಾಗುವುದಕ್ಕೆ ಕಾಯದೆ, ನಿತ್ಯವೂ 8-10 ಗ್ಲಾಸ್‍ಗಳಷ್ಟು ನೀರನ್ನು ಕಡ್ಡಾಯವಾಗಿ ಕುಡಿಯಲೇಬೇಕು. ಮೂತ್ರವು ಸ್ವಲ್ಪ ಹಳದಿ ಬಣ್ಣದಲ್ಲಿ ಬರುತ್ತಿದೆ ಎಂದರೂ ದೇಹಕ್ಕೆ ನೀರಿನ ಕೊರತೆ ಇದೆಯೆಂದು ಅರಿತು ನೀರನ್ನು ಕೂಡಲೇ ಕುಡಿಯಬೇಕು.

ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು

ಆಯುರ್ವೇದದ ಪ್ರಕಾರ ಬೇಸಿಗೆ ಕಾಲದಲ್ಲಿ ನಮ್ಮ ದೇಹದಿಂದ ಸಾಕಷ್ಟು ಶಕ್ತಿ ಆಚೆಗೆ ಹೋಗಿ ಬಿಡುತ್ತದೆ. ಆದ್ದರಿಂದ ಗ್ರೀಷ್ಮ ಋತುವಿನಲ್ಲಿ ಶಕ್ತಿ ವರ್ಧನೆಗಾಗಿ, ಆರೋಗ್ಯ ರಕ್ಷಣೆಯ ಸಲುವಾಗಿ ಮುಂಚಿತವಾಗಿಯೇ ಕೆಲವು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಬಿಸಿಲಿನ ಝಳಕ್ಕೆ ದೇಹದಲ್ಲಿ ಕಫ ಕಟ್ಟಿ, ‘ಜಠರಾಗ್ನಿ’ ವಿಜೃಂಭಿಸುತ್ತದೆ. ಅದಕ್ಕೆ ಬೇಸಿಗೆಯಲ್ಲಿ ವಿಪರೀತ ದಾಹವಿರುತ್ತದಾದರೂ ಹಸಿವು ಕಡಿಮೆ ಇರುತ್ತದೆ. ಈ ಅಗ್ನಿಮಾಂದ್ಯವೇ ದೇಹದಲ್ಲಿ ಎಲ್ಲಾ ರೀತಿಯ ವ್ಯಾಧಿಗಳಿಗೆ ಕಾರಣವಾಗುತ್ತದೆ ಎಂದು ಆಯುರ್ವೇದ ಸ್ಪಷ್ಟವಾಗಿ ತಿಳಿಸುತ್ತದೆ. ಆದ್ದರಿಂದ ವ್ಯಾಧಿಗಳು ಹತ್ತಿರ ಸುಳಿಯದಂತೆ ಕ್ಲುಪ್ತವಾದ ಆಹಾರಾಭ್ಯಾಸಗಳನ್ನು ಪಾಲಿಸಬೇಕು.

1. ಗಂಧವನ್ನು ಸಾಣೆ ಕಲ್ಲಿನ ಮೇಲೆ ಅರೆದು, ಒಂದು ಗ್ಲಾಸ್ ನೀರಿಗೆ ಬೆರೆಸಿ ಸೇವಿಸಿದರೆ (ನಿತ್ಯವೂ) ಬಿಸಿಲಿನಿಂದುಂಟಾಗುವ ಬಹುತೇಕ ವ್ಯಾಧಿಗಳನ್ನು ನಿವಾರಿಸಬಹುದು.

2. ‘ಭೃಂಗರಾಜ’ ಎಲೆಯಿಂದ ಲೇಹ್ಯ ತಯಾರಿಸಿ ದಿನಕ್ಕೆರಡು ಹೊತ್ತು ಗುಳಿಗೆ ಮಾಡಿ ನುಂಗಿದರೆ ಬೇಸಿಗೆಯಲ್ಲಿ ಆರೋಗ್ಯವನ್ನು ಬಲಿಷ್ಠವಾಗಿರಿಸುತ್ತದೆ.

3. ಬಹುತೇಕ ಮಂದಿ ಬಾಯಾರಿದೆ ಎಂದ ತಕ್ಷಣವೇ ಕೂಲ್‍ಡಿಂಕ್ಸ್‍ನ್ನು ಕುಡಿಯುತ್ತಾರೆ. ಆದರೆ ಕೂಲ್‍ಡ್ರಿಂಕ್ಸ್‍ಲ್ಲಿ ಆಸ್ಪರೇಟಮ್ ಎನ್ನುವ ಕೃತಕ ಸಿಹಿಯನ್ನು ಬೆರೆಸುತ್ತಾರೆ. ಇದರಿಂದ ದೇಹಕ್ಕೆ ನೀರಿನ ಅಗತ್ಯ ಮತ್ತಷ್ಟು ಹೆಚ್ಚಿಸುತ್ತದೆ. ಹಾಗೇ ಕೆಲವು ಕೋಲ್ಡ್‍ಡ್ರಿಂಕ್ಸ್‍ಗಳಲ್ಲಿನ ಕೆಫಿನ್ ನೀರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ದೇಹದಿಂದ ಹೊರಗೆ ಹಾಕುತ್ತದೆ.

4. ಆಲ್ಕೋಹಾಲ್‍ನಿಂದಾಗಿ ಮೂತ್ರವು ಹೆಚ್ಚಾಗಿ ಇದು ದೇಹದಿಂದ ನೀರಿನಾಂಶವನ್ನು ಹೊರದಬ್ಬುತ್ತದೆ.

5. ಹಾಲು, ಜ್ಯೂಸು, ಮಜ್ಜಿಗೆ, ಹಣ್ಣುಗಳು ದೇಹದಲ್ಲಿ ನೀರಿನಾಂಶಗಳನ್ನು ಹೆಚ್ಚಿಸುವ ಪದಾರ್ಥಗಳು. ದಾಹವನ್ನು ತೀರಿಸಿಕೊಳ್ಳಲು ಕೂಲ್‍ಡ್ರಿಂಕ್ಸ್‍ಗಿಂತ ನೀರೇ ಉತ್ತಮ.

6. ಬೇಸಿಗೆಯಲ್ಲಿ ಬೆಳಿಗ್ಗೆ ಅಲ್ಪಾಹಾರದೊಂದಿಗೆ ದ್ರವ ಪದಾರ್ಥ ಸೇವಿಸುವುದು ಒಳ್ಳೆಯದು. ಸಜ್ಜೆ, ಜೋಳ, ಗೋಧಿಹಿಟ್ಟು, ರಾಗಿಹಿಟ್ಟು, ಅನ್ನ ಗಂಜಿ ಇವುಗಳಿಗೆ ಲೈಟಾಗಿ ಸಕ್ಕರೆ ಅಥವಾ ಉಪ್ಪು ಬೆರೆಸುವುದು, ಇಲ್ಲವೇ ಮಜ್ಜಿಗೆ ಬೆರೆಸಿ ಕುಡಿಯುವುದು ಒಳ್ಳೆಯದು.

7. ಇಡ್ಲಿಗಳು, ತೆಳುವಾಗಿ ಮಾಡಿದ ಮೆಂತ್ಯ, ಉದ್ದಿನ ದೋಸೆಗಳನ್ನು ತಿನ್ನಬಹುದು. ಇದರಲ್ಲಿ ಎಣ್ಣೆಯ ಅಂಶ ಕಡಿಮೆ, ನೀರಿನ ಅಂಶ ಹೆಚ್ಚಾಗಿರುವುದರಿಂದ ದಾಹವು ಹೆಚ್ಚಾಗಿ ಆಗುವುದಿಲ್ಲ. ಮೊಸರಿಗೆ ಉಪ್ಪು ಅಥವಾ ಸಕ್ಕರೆ ಹಾಕಿ ಸೇವಿಸುವುದು ಬಹಳ ಆರೋಗ್ಯಕರ.

8. ಅಲ್ಪಾಹಾರದ ಜೊತೆಗೆ ಒಂದು ಕಪ್ ಹಣ್ಣಿನ ಹೋಳುಗಳನ್ನು ತಿನ್ನುವುದು ಅತ್ಯಗತ್ಯ.

9. ಮಧ್ಯಾಹ್ನ ಊಟಕ್ಕೆ ಅನ್ನ, ಸಾರು, ಮುದ್ದೆ, ಹುಳಿ, ಚಪಾತಿ ಚಟ್ನಿ ….. ಇಂಥವು ಆರೋಗ್ಯಪೂರ್ಣ ಆಹಾರಗಳು. ಈರುಳ್ಳಿ, ಮೆಣಸಿನಕಾಯಿ (ಉಪ್ಪು), ಉಪ್ಪಿನಕಾಯಿ ನೆಂಚಿಕೊಳ್ಳಲು ಇರಲಿ.

10. ಸೌತೆಕಾಯಿ, ಹೀರೆಕಾಯಿ, ಸೋರೆಕಾಯಿ, ನುಗ್ಗೆಕಾಯಿ (ಸೊಪ್ಪು), ಗೋರಿಕಾಯಿ ಇಂಥ ನೀರು ಮತ್ತು ನಾರಿನಾಂಶವಿರುವ ತರಕಾರಿಗಳನ್ನು ಸೇವಿಸುವುದು ಅತ್ಯುತ್ತಮ. ಹಣ್ಣುಗಳು ಫ್ರೂಟ್ ಸಲಾಡ್ಸ್ ಮತ್ತು ಐಸ್‍ಕ್ರೀಂಗಳು ಮನಸ್ಸಿಗೆ ಉಲ್ಲಾಸವೆನ್ನೀಯುತ್ತವೆ.

11. ರಾತ್ರಿ ಊಟದಲ್ಲಿ ಸಾಧ್ಯವಾದಷ್ಟು ಚೆನ್ನಾಗಿ ಬೇಯಿಸಿ, ಜಿಡ್ಡು ಎಣ್ಣೆ ಇಲ್ಲದ ಗ್ರೇವಿ ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಒಟ್ಟಾರೆ ಸದಾ ಲೈಟಾಗಿ, ಜಿಡ್ಡು ರಹಿತವಾಗಿ ಸುಲಭವಾಗಿ ಜೀರ್ಣವಾಗುವಂತ ಆಹಾರಗಳನ್ನು ಸೇವಿಸುವುದರಿಂದ ಬೆವರುವುದು ಕಡಿಮೆಯಾಗುತ್ತದೆ.

ಸೂರ್ಯನ ದಿನನಿತ್ಯದ ಕಾರ್ಯಗಳು ನಿರಂತರವಾಗಿ ನಡೆಯುತ್ತಾ ನಿರಂತರವಾಗಿ ರೇಡಿಯೇಷನ್ (ರೇಡಿಯೋ ಕಣಗಳು) ನ್ನು ಹೊರ ಚಿಮ್ಮುವ ಒಂದು ಅದ್ಭುತ ಅಗ್ನಿಕುಂಡ! ಸೂರ್ಯ ರಶ್ಮಿಯಲ್ಲಿ ಬೆಳಕಿನ ಕಿರಣಗಳು ಇರುತ್ತವೆ. ಜೊತೆಗೆ ಶಾಖವೂ ಇರುತ್ತದೆ. ಬೆಳಕಿನಲ್ಲಿ ಅಪಾಯಕಾರಿ ಅನಿಲಗಳು ಇರುತ್ತವೆ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು, ಬೆವರು ಕಾಯಿಗಳು ಬರುತ್ತದೆ. ಕೆಲವು ರೀತಿಯ ಕಾಸ್ಮೆಟಿಕ್ಸ್ ಬಳಸುವುದರಿಂದ ಸ್ಕಿನ್ ಅಲರ್ಜಿಯೂ ಉಂಟಾಗುತ್ತದೆ. ಆದ್ದರಿಂದ ಸಂಜೆ 4 ಗಂಟೆಯಾದ ನಂತರವಷ್ಟೆ ಮನೆ ಹೊರಗೆ ಬರುವುದು ಕ್ಷೇಮಕರ.

ಕೆಲವು ಆರೋಗ್ಯ ಸಲಹೆಗಳು:

1.ಬಿಸಿಲು ರಣವಾಗಿರುವಾಗ ಮನೆ ಹೊರಗೆ ಬರದಿರುವುದು ಲೇಸು.

2.ಆಳಕವಾಗಿ ಹೊಲಿದ, ಗಾಳಿಯಾಡುವಂತ ಧಿರಿಸುಗಳನ್ನು ತೊಡುವುದೇ ಒಳ್ಳೆಯದು.

3.ಶ್ವೇತ ವಸ್ತ್ರಗಳು, ಕಪ್ಪನೆಯ ಕೂಲಿಂಗ್ ಗ್ಲಾಸ್, ಕಪ್ಪನೆಯ ಕೊಡೆಯನ್ನು ಬಳಸಿರಿ.

4.ಮನೆಯಿಂದ ಹೊರಗೆ ಹೋಗುವ ಅರ್ಧಗಂಟೆ ಮುಂಚೆ ಮೈಕೈ ಕಾಲುಗಳಿಗೆಲ್ಲಾ ಸನ್‍ಸ್ಕ್ರೀನ್‍ಲೋಷನ್‍ನ್ನು ಲೇಪಿಸಿರಬೇಕು.

5.ಒದ್ದೆ ಬಟ್ಟೆಯ ಡೋರ್ ಮತ್ತು ವಿಂಡೋ ಕರ್ಟನ್ ಕಟ್ಟುವುದರಿಂದ ಮನೆ ಒಳಗೆ ತಣ್ಣನೆಯ ವಾತಾವರಣ ಇರುತ್ತದೆ.

6.2 ಗಂಟೆಗಳಿಗೆ ಒಮ್ಮೆಯಂತೆ ನೆಲವನ್ನು ಒದ್ದೆ ಬಟ್ಟೆಯಿಂದ ಒರಸುತ್ತಿದ್ದರೆ ಮನೆ ಒಳಗೆ ತಂಪಾಗಿರುತ್ತದೆ. ಮನೆ ಸುತ್ತಮುತ್ತಲೂ/ಟೆರೆಸ್ ಮೇಲೂ ಹೂಗಿಡ, ತರಕಾರಿಗಳ ಗಿಡವನ್ನು ಬೆಳೆಯುವುದರಿಂದ ಮನೆಯ ವಾತಾವರಣ ತಂಪಾಗಿರುತ್ತದೆ.

7.ಬೆಳಿಗ್ಗೆ ವಾಕಿಂಗ್ ಹೋಗುವಾಗ ಬಾಟ್ಲಿಯಲ್ಲಿ ನೀರು ಒಯ್ಯಿರಿ.

8.ನಿಂಬೆ ಹಣ್ಣು, ಕಲ್ಲಂಗಡಿ, ಪೈನಾಪಲ್, ತುಳಸಿ ಬೀಜ, ಬಾಳೆಹಣ್ಣುಗಳನ್ನು ಹೇರಳವಾಗಿ ಸೇವಿಸಿರಿ.

9.ವಯಸ್ಸಾದ ಮಧುಮೇಹಿಗಳು, ಹೈಬಿಪಿ ಇರುವಂತಹವರು ವಿಶೇಷ ಎಚ್ಚರಿಕೆ ವಹಿಸಬೇಕು. ಹೆಚ್ಚು ಸಾರಿ ಮೂತ್ರ, ಬೆವರು ಹೋಗುವುದರಿಂದ ತತ್‍ಕ್ಷಣ ನಿತ್ರಾಣರಾಗಿ ಬಿಡುತ್ತಾರೆ.

ಡಾ. ಶಾಂತಗಿರಿ ಮಲ್ಲಪ್ಪ

 

 

 

 

 

 

 

ಡಾ. ಶಾಂತಗಿರಿ ಮಲ್ಲಪ್ಪ
ಶಾಂತಗಿರಿ ಹೆಲ್ತ್  ಸೆಂಟರ್,
ಬಾಣಸವಾಡಿ, ಬೆಂಗಳೂರು.
ಮೊ: 9449662344

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!