ಬೇಸಿಗೆಯ ಬೇಗೆ ನೀಗುವ ಬಗೆ.

ಬೇಸಿಗೆಯ ಬೇಗೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಇದು ನಮ್ಮ ಕೈಯಲ್ಲಿ ಇದೆ. ಶರೀರ ನಾವು ಸಾಮಾನ್ಯವಾಗಿ ಎಣಿಸುವುದಕ್ಕಿಂತ ಹೆಚ್ಚು ಪಟ್ಟು ಉಷ್ಣಾಂಶತೆಯನ್ನು ತಡೆಯುವ ತಾಕತ್ತು ಹೊಂದಿದೆ ಎಂಬುದು ಅವರ ಅಧ್ಯಯನಗಳಿಂದ ಸ್ಪಷ್ಟವಾಗಿದೆ.

ಬೇಸಿಗೆಯ ಬೇಗೆ ನೀಗುವ ಬಗೆ.

ರಗ್ಗು ಹೊದ್ದರೂ, ಬೆನ್ನ ಹುರಿಯಲ್ಲಿ ಚಳಿ ಹುಟ್ಟಿಸುವ ಚಳಿಗಾಲದ ನಡುಗು ಕಡಿಮೆಯಾಗುತ್ತಿದ್ದಂತೆ, ಬೇಸಿಗೆ ಸದ್ದಿಲ್ಲದೇ ಹೆಜ್ಜೆ ಹಾಕುವುದು. ಎಳ್ಳಮಾವಾಸ್ಯೆಗೆ ಎಳ್ಳು ಕಾಳಿನಷ್ಟು ಕಾಣುವ ಬಿಸಿಲು ಮೈಗೆ ಹಿತಕರ. ಅವರಾತ್ರಿಗೆ ಅವರೆಕಾಳಿನಷ್ಟು ಬಿಸಿಲು ಹೆಚ್ಚಾದರೂ, ಅದು ಮನಸ್ಸಿಗೆ ಅಹ್ಲಾದ, ಆನಂದವನ್ನು ನೀಡುತ್ತದೆ. ಅತಿಯಾದರೆ ಅಮೃತವೂ ವಿಷವಂತೆ ! ಇದಕ್ಕೆ ಬೇಸಿಗೆಯೂ ಹೊರತಾಗಿಲ್ಲ. ಶಿವರಾತ್ರಿ ಬರುತ್ತಿದ್ದಂತೆ ಬಿಸಿಲಿನ ತಾಪಕ್ಕೆ ಅರಿವಿಲ್ಲದಂತೆ ಶಿವ ಶಿವ ಎಂದು ಶಿವಧ್ಯಾನ ಮಾಡುವರು. ಹೋಳಿಯ ರಂಗಿನಾಟದಿಂದ ಬೇಸಿಗೆಯ ರಂಗುಬರುತ್ತದೆ, ಬಿಸಿಲಿನ ಬಣ್ಣವೇರುತ್ತದೆ, ತಾಪದ ಬಿಸಿ ತಟ್ಟುತ್ತದೆ. ಸೆಕೆ ಸಂಕಟ ಸುರಿಯುತ್ತದೆ ಸಂಯಮ ಸಿಮೋಲ್ಲಂಘನ ಮಾಡುತ್ತವೆ. ಇದು ಪ್ರತಿವರ್ಷವೂ ಬೇಸಿಗೆಯಲ್ಲಿ ಇದ್ದದ್ದೇ.

“ಬ್ಯಾಸಗಿ ದಿವಸಕ ಬೇವಿನ ಮರತಂಪ
ಭೀಮಾರತಿಯಂಬ ಹೊಳಿತಂಪ: ಹಡದವ್ವ
ನೀ ತಂಪ ನನ್ನ ತವರಿಗೇ..”

ಹಾಗೆಂದು ಬೇಸಿಗೆಯನ್ನು ಬೇವಿನ ಮರದ ಬುಡದಲ್ಲಾಗಲೀ, ಭೀಮಾರತಿ ಹೊಳೆಯಲ್ಲಾಗಲೀ ಕಳೆಯಲಾಗುವುದಿಲ್ಲ. ಬೇಸಿಗೆಯಲ್ಲಿ ಬಾನಿನಲ್ಲಿ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾಹ, ಉರಿಯ ವರ್ತುಲದೊಳಗೆ ಬದುಕು ಗಿರಕಿ ಹೊಡೆಯುತ್ತದೆ. ಈ ವರ್ಷ ಬೇಸಿಗೆಯ ಬೇಗೆ ಈಗಾಗಲೇ ಕಲ್ಪನಾತೀತ ಮಟ್ಟಕ್ಕೆ ಮುಟ್ಟಿದೆ. ಮೈಗೆ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಹಾಗೆಂದು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ನಮ್ಮ ಜಾಣತನ ಅಡವಿರುವುದು – ಬ್ಯಾಸಗಿ ಬಿಸಲಾಗ ಬದುಕುವುದ್ಯಾಂಗ ಎಂಬುದನ್ನು ಅರಿಯುವಲ್ಲಿ ಬೇಸಿಗೆ ಬೇಗೆ ನೀಗುವ ಬಗೆ ತಿಳಿಯುವಲ್ಲಿ. ಬೇಸಿಗೆಯ ಬೇಗೆಯಲ್ಲಿ ಬೆಂದು ಬಳಲಿ ಬೆಂಡಾಗಿ ಬಸವಳಿದು ಬಿದ್ದವರ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿ, ವಾರ್ತೆಯಲ್ಲಿ ಕೇಳಿ ಬೆಚ್ಚಿ ಬಿಳುತ್ತೇವೆ. ಅಪರೂಪಕ್ಕೆ ಬಿತ್ತರಗೊಳ್ಳುವ ಸತ್ತವರ ಸುದ್ದಿಗಳು ಬರಸಿಡಿಲಿನಂತೆ ಎರಗುತ್ತವೆ; ವಿಜ್ಞಾನಿಗಳ ಮೆದುಳಿಗೆ ಮೇವನ್ನು ಒದಗಿಸುತ್ತವೆ.

“ ಉಷಾ ಸ್ಯ ಹಿರಸಾನ್ ಭೌಮಾನ್
ತಪ್ಪಾಚ ಜಗದಂ ಶುಭಿಃ
ವರೇತಾಚರಿ ತಾಂ ಭೀಮಾಂ
ರವಿರಾವಿಶತೇದಿಶಮ್ ”
ಎಂದು ವಾಲ್ಮೀಕಿ ಮಹರ್ಷಿಗಳು ಬಣ್ಣಿಸಿದ್ದಾರೆ.

ಮಾನವನು ಉಷ್ಣಾಂಶವನ್ನು ಎಷ್ಟರ ಮಟ್ಟಿಗೆ ಸಹಿಸಬಲ್ಲನು ? ಎನ್ನುವುದರ ಬಗ್ಗೆ ಅನೇಕ ಸಂಶೋಧನೆಗಳು, ಅಧ್ಯಯನಗಳು ಅವ್ಯಾಹತವಾಗಿ ನಡೆದಿವೆ. ಮರುಭೂಮಿಯಲ್ಲಿ ವಾಸಿಸುವ ಜನರನ್ನು ಅಭ್ಯಸಿಸಿ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ, ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ, ಚರ್ಚಿಸಿದ್ದಾರೆ. ಅಮೆರಿಕೆಯ ಡಾ|| ನ್ಯೂಬರ್ಗ್ ಈ ಕ್ಷೇತ್ರದ ಸಂಶೋಧನೆಯಲ್ಲಿ ಅಗ್ರಗಣ್ಯರು. ಶರೀರ ನಾವು ಸಾಮಾನ್ಯವಾಗಿ ಎಣಿಸುವುದಕ್ಕಿಂತ ಹೆಚ್ಚು ಪಟ್ಟು ಉಷ್ಣಾಂಶತೆಯನ್ನು ತಡೆಯುವ ತಾಕತ್ತು ಹೊಂದಿದೆ ಎಂಬುದು ಅವರ ಅಧ್ಯಯನಗಳಿಂದ ಸ್ಪಷ್ಟವಾಗಿದೆ.

ಪ್ರಕೃತಿದತ್ತ ವರ

ತಲೆಯಲ್ಲಿರುವ ಹೈಪೋಥಲಮಸ್‍ದ ಮುಂಭಾಗದಲ್ಲಿರುವ ಕೇಂದ್ರ ಉಷ್ಣಾಂಶ ಹೆಚ್ಚಾದಾಗ ಪ್ರಚೋದನೆಗೊಂಡು, ಉಷ್ಣಾಂಶ ನಿಯಂತ್ರಣಕ್ಕೆ ಅವಶ್ಯವಿರುವ, ಕಾರ್ಯಕಲಾಪಗಳನ್ನು ಚಲಾವಣೆಗೆ ತರುತ್ತದೆ. ಚರ್ಮಕ್ಕೆ ಮೊದಲು ಬಿಸಿ ತಟ್ಟುತ್ತದೆ. ಅದರಲ್ಲಿಯ ಉಷ್ಣ ಗೃಹಿಕೆಗಳು ಚುರುಕಾಗುತ್ತವೆ. ನರಗಳ ಮೂಲಕ ಸಂದೇಶವನ್ನು ಉಷ್ಣಾಂಶ ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತವೆ. ಪ್ರತಿಫಲವಾಗಿ ಅದು ರಕ್ತ ಸಂಚಾರ ಹೆಚ್ಚಿಸಿ, ಶರೀರಾದ್ಯಂತ ಬೆವರು ಗೃಂಥಿಗಳಿಂದ ಜಾಸ್ತಿ ಬೆವರು ಹೊರ ಸೂಸುವಂತೆ ಮಾಡುತ್ತದೆ. ಒಮ್ಮೆ ಶರೀರ ಬೆವರಿದರೆ ಉಷ್ಣಾಂಶ ಕಡಿಮೆಯಾಗುತ್ತದೆ.

ಬಿಸಿಲಿನ ತಾಪಕ್ಕೆ ಬೆವರಿನ ತೇವ ಆವಿಯಾಗತೊಡಗಿದಾಗ ತಣ್ಣಗಿನ ಅನುಭವವಾಗುತ್ತದೆ. ಇದಕ್ಕೆ ‘ಕೂಲಿಂಗ್ ಎಫೆಕ್ಟ್’ ಎನ್ನುವರು. ಇದು ಶರೀರಕ್ಕೆ ಬಿಸಿಲಿನ ತಾಪ ತಡೆಯಲು ಪ್ರಕೃತಿದತ್ತ ವರ. ಬೆವರಿನೊಡನೆ ಶರೀರದಲ್ಲಿಯ ನೀರು ಹೊರ ಹೋಗಿ, ಅದರ ಪ್ರಮಾಣ ಕಡಿಮೆಯಾಗುತ್ತದೆ. ಆಗ ಶರೀರ ಬಾಯಾರಿಕೆಯ ಮೂಲಕ ನೀರು ಬೇಕೆಂದು ತಿಳಿಸುತ್ತದೆ. ಅದಕ್ಕೇ ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುವುದು, ನೀರು ಕುಡಿಯುವುದು ಎರಡೂ ಸ್ವಾಭಾವಿಕ. ನೀರು ಕುಡಿಯದಿದ್ದಲ್ಲಿ ನಿರ್ಜಲೀಕರಣ ನರ್ತಿಸುವುದು.

Also Read: ಬಾಯಾರಿಕೆ : ತೊಂದರೆಗಳೇನು?ಪರಿಹಾರೋಪಾಯಗಳೇನು? 

ಬೆವರಿಗೆ ಬೇಡ ಬೇಸರಿಕೆ

ಬೆವರು ಎಂದರೇನು ? ಅದರಲ್ಲಿ ಎನಿರುತ್ತದೆ ? ಅದು ಹೇಗೆ ಉತ್ಪತ್ತಿಯಾಗುತ್ತದೆ ? ಎಂಬುದನ್ನು ತಿಳಿದುಕೊಂಡರೆ ಬೆವರು ಶರೀರಕ್ಕೆ ಎಷ್ಟು ಮುಖ್ಯ, ಅದರ ಪಾತ್ರ ಎನು ಎನ್ನುವುದು ಗೊತ್ತಾಗುತ್ತೆ. ಮಾನವನ ಶರೀರದಾದ್ಯಂತ ಸಹಸ್ರಾರು ಬೆವರು ಗ್ರಂಥಿಗಳಿರುತ್ತವೆ. ಹೆಂಗಸರು ಗಂಡಸರಲ್ಲಿ ಸಮ ಸಂಖ್ಯೆಯಲ್ಲಿ ಇರುತ್ತವೆ. ಆದರೆ ಪ್ರಕೃತಿ ನಿಯಮದಂತೆ ಹೆಂಗಸರ ಗ್ರಂಥಿಗಳು ಗಂಡಸರ ಗ್ರಂಥಿಗಳಿಗಿಂತ ಕಮ್ಮಿ ಬೆವರನ್ನು ಉತ್ಪಾದಿಸುತ್ತವೆ.

ಬೆವರು ಗ್ರಂಥಿಗಳಲ್ಲಿ ಎರಡು ವಿಧ: ಎಕ್ರಿನ್ ಮತ್ತು ಅಪೊಕ್ರಿನ್, ತುಟಿಗಳು, ಗುಪ್ತಾಂಗಗಳು, ಮೂಗಿನ ಸೆಲೆಯ ಒಳಭಾಗ, ಕಿವಿಯ ಒಳಭಾಗಗಳನ್ನು ಬಿಟ್ಟು ದೇಹದ ಮಿಕ್ಕ ಕಡೆಯೆಲ್ಲಾ ಎಕ್ರಿನ್ ಗ್ರಂಥಿಗಳು ಇರುತ್ತವೆ. ನಮಗೆ ಎನಿಸದಿದ್ದರೂ ಇವು ಸಣ್ಣ ಪ್ರಮಾಣದಲ್ಲಿ ಸದಾ ಬೆವರು ಸೂಸುತ್ತಿರುತ್ತವೆ. ಅಪೊಕ್ರಿನ್ ಗ್ರಂಥಿಗಳು ಕಂಕುಳಲ್ಲಿ, ಗುಪ್ತಾಂಗಗಳ ಸುತ್ತ ಇದ್ದು ಅವು ಹೊರ ಸೂಸುವ ಬೆವರು ನಮಗೆ ಗೊತ್ತಾಗುವ ಪ್ರಮಾಣದಲ್ಲಿ ಇರುತ್ತದೆ. ಈ ಅಪೊಕ್ರಿನ್ ಗ್ರಂಥಿಗಳು ಬರೀ ಬಿಸಿಲಿನ ತಾಪಕ್ಕಲ್ಲದೆ, ಮನಸ್ಸು ಉದ್ರೇಕಗೊಂಡಾಗಲೂ ಬೆವರು ಸುರಿಸುತ್ತವೆ.

ಬೆವರಿನಲ್ಲಿ ಶೇಕಡ 99 ಭಾಗ ನೀರು, ಮಿಕ್ಕ ಭಾಗ ಮಾತ್ರ ಸೋಡಿಯಂ ಕ್ಲೊರೈಡ್, ಪೊಟ್ಯಾಸಿಯಂ, ಗ್ಲೂಕೋಸ್ ಮತ್ತು ಇತರ ರಾಸಾಯನಿಕ ವಸ್ತುಗಳಿರುತ್ತವೆ. ಬೆವರು ಉತ್ಪತ್ತಿಯಾದಾಗ ಯಾವ ವಾಸನೆಯೂ ಇರುವುದಿಲ್ಲ. ನಂತರ ಅದು ಚರ್ಮದ ಮೇಲಿರುವ ಬ್ಯಾಕ್ಟೀರಿಯಾ ಜೊತೆ ಸೇರಿ ವಾಸನೆಯುಕ್ತವಾಗುತ್ತದೆ. ಈ ವಾಸನೆಯನ್ನು ನಿವಾರಿಸಲು ಕಾಸ್ಮೆಟಿಕ್ ತಯಾರಿಸುವವರು ಕೆಲವು ಸಾಧನಗಳನ್ನು ತಯಾರಿಸುತ್ತಾರೆ.

ಉದಾ : ಆ್ಯಂಟಿಪರ್‍ಸ್ಪಿರೆಂಟ್, ಡಿಯೋಡರೆಂಟ್ ಇತ್ಯಾದಿ. ಇವುಗಳನ್ನು ಉಪಯೋಗಿಸುವುದರಿಂದ ಅಡ್ಡಿಯೇನಿಲ್ಲ. ಆದರೆ ಇಲ್ಲಿ ಬಹುಮುಖ್ಯವಾಗಿ ಗಮನದಲ್ಲಿಡಬೇಕಾದ ಅಂಶವೇನೆಂದರೆ ಬೆವರಿನ ವಾಸನೆಯನ್ನು ತಡೆಗಟ್ಟುವ ನೆವದಲ್ಲಿ ಬೆವರುವುದನ್ನೇ ತಡೆಗಟ್ಟಬಾರದು. ಬೇಸಿಗೆಯಲ್ಲಿ ಬೆವರುವುದು ಉಸಿರಾಡುವಷ್ಟೇ ಸಹಜ. ಪ್ರಕೃತಿ ನಿಯಮಿತ ರೀತಿಗೆ ಅಡ್ಡಿಯಾದರೆ ಶರೀರಕ್ಕೆ ಹಾನಿ.

ತಪ್ಪು ತಿಳವಳಿಕೆಗಳು

ಬೇಸಿಗೆಯ ಬೇಗೆಯನ್ನು ತಡೆಯುವ ಬಗ್ಗೆ ನಾನಾ ರೀತಿಯ ತಪ್ಪು ತಿಳವಳಿಕೆಗಳು ನಮ್ಮಲ್ಲಿ ಇವೆ. ಅಜ್ಞಾನ, ಅಶಿಕ್ಷತೆಗಳ ಲಾಭಪಡೆದ ಅವು ಸಾಕಷ್ಟು ಶಕ್ತಿಯುತವಾಗಿ ಬೆಳೆದಿವೆ.

1. ಹೊಗೆ ಸೊಪ್ಪು ಅಥವಾ ಬಬಲ್‍ಗಮ್ ಅಗಿಯುತ್ತಿದ್ದರೆ, ಮಾದಕ ದ್ರವ್ಯಗಳನ್ನು ಸೇವಿಸಿದರೆ ಬಾಯಾರಿಕೆ ಆಗುವುದಿಲ್ಲ ಎಂಬುದು. ಇವು ಕೆಲಹೊತ್ತು ನಮ್ಮ ಮನಸ್ಸನ್ನು ಬಾಯಾರಿಕೆಯ ಬಯಕೆಯಿಂದ ದೂರವಾಗಿಸಬಹುದೇ ವಿನಃ ದಾಹವನ್ನು ದಮನಮಾಡುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ನೀರು ಕುಡಿಯುವುದು ಅನಿವಾರ್ಯವಾಗುತ್ತದೆ.

2. ಹಾಗೆಯೇ ಐಸ್-ಕ್ರೀಂ, ತಂಪು ಪಾನೀಯಗಳನ್ನು ಸೇವಿಸಿದಾಗ ತಂಪು ಅನುಭವ ನೀಡಿದರೂ ಅವು ‘ಉಷ್ಣ ಜನಿಕಗಳು’ ಎಂಬುದು ಇನ್ನೊಂದು ತಪ್ಪು ತಿಳವಳಿಕೆ. ವೈಜ್ಞಾನಿಕ ಜ್ಞಾನದ ಅಭಾವದಿಂದ ಇಂಥ ತಪ್ಪು ತಿಳವಳಿಕೆಗಳು ನಮ್ಮ ಜನರಲ್ಲಿ ಇನ್ನೂ ಹಚ್ಚ ಹಸಿರಾಗಿಯೇ ಇವೆ.

jeevamruta

ಬೇಸಿಗೆಯ ಬೇಗೆಯ ಬಗೆಗಳು

ಬಿಸಿಲಿನ ಬೇಗೆ ಯಾರು ತಡೆದುಕೊಳ್ಳಬಲ್ಲರು ?
“ ಅಹೋನಿದಾಘೋತ್ಥ ಭಯಾದಿವೆಶೋ
ಬಿಭರ್ತಿಗಂಗಾಂ ಜಲದೌ ಸ ಶೇತಿ
ರಮಾಪತಿಃ ಪಂಕಜ ವಿಷ್ಟರಶ್ಚ
ಚತುರ್ಮುಖಸ್ತಂ ವಿಷ ಹೇತ ಕೋನ್ಯಃ”

ಶಿವ ತನ್ನ ತಲೆಯ ಮೇಲೆ ಗಂಗೆಯನ್ನು ಹೊತ್ತನು, ವಿಷ್ಣು ಕಡಲಲ್ಲಿ ಮನೆ ಮಾಡಿ ಮಲಗಿದ. ಚತುರ್ಮುಖ ಬ್ರಹ್ಮನು ನೀರಿನಲ್ಲಿ ಹುಟ್ಟಿದ ಕಮಲದಲ್ಲಿಯೇ ಕುಳಿತು ಬಿಟ್ಟ. ಅಂದಾಗ ನಮ್ಮಂಥ ನರರ ಪಾಡೇನು? ಬಿಸಿಲಿನ ಬಾಧೆ ಸಹಿಸುವುದೇ ಅಸಾಧ್ಯ ಎನ್ನುವರು ವಾದಿರಾಜರು. ಬೇಸಿಗೆಯಲ್ಲಿ ನಾವು ಬಿಸಿಲಿನ ಬಳಲಿಕೆ ಸೂರ್ಯಘಾತ ( Sun Stroke), ಉಷ್ಣಾಘಾತ (Heat Stroke) ಗಳಿಂದ ರಕ್ಷಿಸಿಕೊಳ್ಳಬೇಕು. ಅಲಕ್ಷ್ಯ ಅನಾಹುತಗಳಿಗೆ ಆಹ್ವಾನ ನೀಡುವುದು, ಸಾವು-ನೋವುಗಳನ್ನು ಸ್ವಾಗತಿಸುವುದು. ಬಿಸಿಲಿನ ಬೇಗೆ ಉಂಟುಮಾಡುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು, ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶಗಳಿಗೆ ವೈದ್ಯರು ಹೋಗಿ ಚಿಕಿತ್ಸೆ ನೀಡುವ ಮೊದಲೇ ಅನಾಹುತಗಳಾಗುವುದನ್ನು ತಪ್ಪಿಸಲು ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಸಾಮೂಹಿಕ ಜನಜಾಗೃತಿ ಮೂಡಿಸುವುದು ಅವಶ್ಯಕ.

ಬೇಸಿಗೆಯಲ್ಲಿ ಜಡ್ಡಿನ ಜಾತ್ರೆ

ಬೇಸಿಗೆಯ ಬೇಗೆ, ಧರೆಯ ಧಗೆ. ಕುಡಿಯುವ ನೀರಿಗೆ ಕೂಗು. ಅಲ್ಲಿ ಇಲ್ಲಿ ಇದ್ದ ಅಲ್ಪ ಸ್ವಲ್ಪ ನೀರು ರೋಗಾಣುಗಳ ಬೀಡು. ಎಲ್ಲೆಲ್ಲೂ ನೋಣಗಳ ದಂಡು. ಹೀಗಾಗಿ ಬೇಸಿಗೆಯಲ್ಲಿ ಜಡ್ಡಿನ ಜಾತ್ರೆ. ಕಲುಷಿತ ನೀರಿನಿಂದ ಬರಬಹುದಾದ ಎಲ್ಲ ಕಾಯಿಲೆಗಳು ಬೇಸಿಗೆಯಲ್ಲಿ ಕೆರಳುತ್ತವೆ. ಗುರುಗುಡುತ್ತವೆ. ಅದರಲ್ಲಿ ಪ್ರಮುಖವಾದವುಗಳೆಂದರೆ –
• ಸಾವಿನ ಸರದಾರ ಖ್ಯಾತಿಯ ಅತಿಸಾರ, ಆಮಶಂಕೆ, ಕಾಲರಾ.
• ಜೀವ ಹಿಂಡುವ ಜಾಂಡಿಸ್.
• ವಿಪತ್ತಿನ ವಿಷಮಜ್ವರ, ಉಪ ವಿಷಮಜ್ವರ.
• ಜಂತಿನ ಹಾವಳಿ.
• ಬೇಸಿಗೆಯಲ್ಲಿ ಕಾಡುವ ಇತರೆ ಸೋಂಕು ರೋಗಗಳೆಂದರೆ- ಗಣಜಲಿ, ಮಂಗನ ಬಾವು, ಟಾನ್ಸಿಲೈಟಿಸ್.
ಇತ್ಯಾದಿಗಳು.
ಇವು ಬಂದ ಮೇಲೆ ಚಿಕಿತ್ಸೆ ಪಡೆಯಲು ಪರದಾಡುವುದಕ್ಕಿಂತ, ಇವು ಬಾರದ ಹಾಗೆ ಮುಂಜಾಗೃತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಸೂಕ್ತ.

ಸೂರ್ಯಾಘಾತ ಮತ್ತು ಉಷ್ಣಾಘಾತ

ಸೂರ್ಯನ ಪ್ರಖರ ಕಿರಣಗಳಿಗೆ ದೀರ್ಘಕಾಲದವರೆಗೆ ಮೈಯೊಡ್ಡುವುದರಿಂದ ಸೂರ್ಯಾಘಾತ ಸಂಭವಿಸುವುದು. ಸುತ್ತುವರಿದ ಅತ್ಯಂತ ಉಷ್ಣ ವಾತಾವರಣದ ಕೋಣೆಗಳಲ್ಲಿ ಕೆಲಸ ಮಾಡುವವರಿಗೆ ಉಷ್ಣಾಘಾತ ಹೆಡಮುರಿಗೆ ಹಾಕುವುದು. ಉರಿ ಬಿಸಿಲಿನಲ್ಲಿ ಬಕ್ಕ ತಲೆಯಲ್ಲಿ ಸುತ್ತುವ, ಗಾಡಿಯಿಂದ ದುಡಿದು ಹೊಟ್ಟೆ ತುಂಬಿಕೊಳ್ಳುವ ಕೂಲಿ ಸೂರ್ಯಾಘಾತಕ್ಕೆ ತುತ್ತಾಗಬಹುದು. ದೇಶ ಸೇವೆ ಮಾಡುವ ಬಿಸಿ ರಕ್ತದ ತರುಣ ಉಷ್ಣದಿಂದ ರಕ್ಷಿಸಿಕೊಳ್ಳಲು ಅಲಕ್ಷ್ಯ ತೋರಿದಲ್ಲಿ ಉಷ್ಣಾಘಾತದ ಪರಿಣಾಮಗಳನ್ನು ಅನಿವಾರ್ಯವಾಗಿ ಅನುಭವಿಸಬಹುದು.

ಲಕ್ಷಣಗಳು

ಸಿಡಿಯುವಂತಹ ತಲೆನೋವಿನೊಂದಿಗೆ ವಿಪರೀತ ಜ್ಞರ ಸೂರ್ಯಾಘಾತದ ಮುಖ್ಯ ಲಕ್ಷಣ. ತಲೆ ಸುತ್ತಬಹುದು, ವಾಂತಿ ಆಗಬಹುದು, ಚರ್ಮವು ಬಿಸಿಯಾಗಿದ್ದು, ಒಣಗುವುದು, ಮುಖ ಅಂಜುರಿಯ ಹಾಗೆ ಕೆಂಪಗಾಗಬಹುದು, ಇಷ್ಟಾದರೂ ಮೈ ಬೆವರುವುದಿಲ್ಲ, ಹೊಟ್ಟೆಯಲ್ಲಿ ಕಿಚ್ಚು ತುಂಬಿದಷ್ಟು ಸಂಕಟ ಸುರಿಯುವುದು. ಚಡಪಡಿಸಿ ಒಮ್ಮಿಂದೊಮ್ಮೆಲೆ ಪ್ರಜ್ಞಾಹೀನರಾಗಬಹುದು. ನಾಡಿ ಬಡಿತ ತ್ವರಿತಗೊಳ್ಳುವುದು, ಜ್ವರ 108 ಡಿಗ್ರಿ ಫೇರನ್ ಹೀಟ ಅಥವಾ ಅದಕ್ಕಿಂತ ಅಧಿಕವಾಗಬಹುದು. ಜ್ವರದ ಹೆಚ್ಚಳದಿಂದ ತುಂಬಲಾರದ ಹಾನಿಯಾಗಬಹುದು. ಚಿಕಿತ್ಸೆಯಿಂದ ವಂಚಿತರಾದಲ್ಲಿ ಮೃತ್ಯುವಿನ ಬಾಹುಬಂಧನದಲ್ಲಿ ತತ್ತರಿಸಿ, ಕೆಲನಿಮಿಷಗಳಲ್ಲಿ ಅಸುನೀಗಬಹುದು. ಅಕಸ್ಮಾತ್ ಬದುಕಿ ಉಳಿದರೂ, ಮತ್ತೊಮ್ಮೆ ಸೂರ್ಯಾಘಾತ ಅಪ್ಪಿದಾಗ ಅಸು ನೀಗುವುದು ತಪ್ಪಿದ್ದಲ್ಲ.

ಪ್ರಥಮೋಪಚಾರ

ಜ್ವರ ಒಂದೇ ಸವನೆ ಹೆಚ್ಚಾಗುವಾಗ ವೈದ್ಯರನ್ನು ಕರೆ ತರಲು ಆತುರ ಪಡದೆ ಪ್ರಥಮೋಪಚಾರ ನೀಡುವುದು ಅತ್ಯಂತ ಪ್ರಮುಖವಾದದ್ದು. ರೋಗಿಯನ್ನು ಮಲಗಿಸಿ ಹಣೆಯ ಮೇಲೆ ತಣ್ಣೀರ ಪಟ್ಟಿಹಾಕಬೇಕು. ಮೈಯನ್ನು ಒದ್ದೆ ಅರಿವೆಯಿಂದ ಒರೆಸಬೇಕು, ಒದ್ದೆ ಬಟ್ಟೆಗಳನ್ನು ತೊಡಿಸಬೇಕು. ಬರ್ಫದ ತುಂಡುಗಳನ್ನು ಬಟ್ಟೆಗಳಲ್ಲಿ ಸುತ್ತಿ ತಲೆ, ಕುತ್ತಿಗೆ ಮತ್ತು ಶರೀರದ ಸುತ್ತ ಇಡಬೇಕು. ರೋಗಿಯ ಸುತ್ತ ಮುತ್ತ ಜನರು ಮುತ್ತುವುದನ್ನು ತಪ್ಪಿಸಿ, ಸಾಕಷ್ಟು ಗಾಳಿ ಆಡುವಂತೆ ಮಾಡಬೇಕು. ಫ್ಯಾನು (ಇದ್ದರೆ) ಹಾಕಬೇಕು. ರೋಗಿಯ ಕೈಕಾಲುಗಳನ್ನು ಉಜ್ಜಿ, ರಕ್ತ ಸಂಚಾರವಾಗುವಂತೆ ಮಾಡಬೇಕು. ರೋಗಿಯು ಪ್ರಜ್ಞಾವಂತನಾದ ಮೇಲೆ ತಂಪಾದ ಪಾನೀಯವನ್ನು ಕುಡಿಸಬೇಕು.

halasina-paka-spardhe

ಬಿಸಿಲಿನ ಬಳಲಿಕೆ

ಬಿಸಿ ಮತ್ತು ಆದ್ರ್ರತೆಯು ವಾತಾವರಣದಲ್ಲಿ ದೀರ್ಘಕಾಲಿಕವಾಗಿ ಇದ್ದರೆ ಬಿಸಿಲಿನ ಬಳಲಿಕೆಯ ಬಾಹುಬಂಧನದಲ್ಲಿ ಬಂಧಿತರಾಗಬಹುದು. ಇಲ್ಲಿ ರೋಗಿ ಸ್ಥಿತಿ ಪ್ರಜ್ಞನಾಗಿರುತ್ತಾನೆ. ಕೈಕಾಲುಗಳು ಅಶಕ್ತತೆಯ ಅಪ್ಪುಗೆಯಲ್ಲಿ ಜೋಲಿ ಹೊಡೆಯಬಹುದು. ಮುಖ ಬಿಳಿಚಿಕೊಳ್ಳುವುದು, ಸುರಿಯುವ ಬೆವರಿನಿಂದ ಚರ್ಮವು ತಂಪಾಗಿದ್ದು, ಜಿಡ್ಡುಗಟ್ಟಿರುವುದು, ಶರೀರದ ಉಷ್ಣತೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿರುವುದು. ತಲೆ ಸುತ್ತುವಿಕೆಯಿಂದ ತ್ವರಿತವಾಗಿ ಗುಣಮುಖರಾಗಬಹುದು. ಉಸಿರುಗಟ್ಟಿದ ವಾತಾವರಣದ ಬಿಸಿಕೋಣೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಇದಕ್ಕೆ ತುತ್ತಾಗುವ ನಿರ್ಭಾಗ್ಯರು.

ಮುಂಜಾಗ್ರತಾ ಕ್ರಮಗಳು

“ ಪ್ರಕ್ಷಾಲನಾತ್ ಹಿ ಪಂಕಸ್ಯ ದೂರಾದ ಸ್ಪರ್ಶನಂವರ” ರೋಗ ಬರದ ಹಾಗೆ ನೋಡಿ ಕೊಳ್ಳುವುದರಲ್ಲಿಯೇ ಜಾಣತನವಿರುವುದು. ಆದ್ದರಿಂದ ಬೇಸಿಗೆಯ ಬಿಸಿಲಿನಲ್ಲಿ ಅನಾವಶ್ಯಕ ಅಡ್ಡಾಡದಿರುವುದು ಕ್ಷೇಮಕರ. ತಲೆಗೆ ಟೋಪಿ ಇಲ್ಲವೆ ಹ್ಯಾಟನ್ನು ಹಾಕಿ ಬಿಸಿಲಿನ ರಕ್ಷಣೆ ಪಡೆಯಬೇಕು. ಛತ್ರಿಯನ್ನು ಬಳಸಬಹುದು. ಇಂಥ ರಕ್ಷಣಾ ಸಾಧನಗಳನ್ನು ಬಳಸದೇ ಬಿಸಿಲಲ್ಲಿ ತಿರುಗಾಡುವುದೆಂದರೆ ಬಿಸಿಲಿನಿಂದಾಗುವ ದುಷ್ಪರಿಣಾಮಗಳನ್ನು ಆದರದಿಂದ ಸ್ವಾಗತಿಸಿದಂತೆ. ಮರಳುಗಾಡಿನಲ್ಲಿಯ ಜನ ಅಡಿಯಿಂದ ಮುಡಿವರೆಗೆ ಬಟ್ಟೆ ಏಕೆ ಧರಿಸುತ್ತಾರೆಂದುಕೊಂಡಿದ್ದೀರಿ?

1. ಸೂರ್ಯನ ತೀಕ್ಷ್ಣ ಕಿರಣಗಳಿಗೆ ಸತತವಾಗಿ ಗುರಿಯಾದರೆ ಚರ್ಮದ ನೈಜ ಸೌಂದರ್ಯವೂ ಕುಂದುತ್ತದೆ. ಕೆಲವೊಮ್ಮೆ ಸುಟ್ಟಂತಾಗುತ್ತದೆ. ಅದಕ್ಕೆ ಬಿಸಿಲಿಗೆ ನೇರವಾಗಿ ಮೈ ಒಡ್ಡುವುದು ಒಳ್ಳೆಯದಲ್ಲ.

2. ಪಾಶ್ಚಿಮಾತ್ಯ ದೇಶದಲ್ಲಿ ಬಿಸಿಲಿನ ಅಭಾವ ತೀವ್ರವಾಗಿದ್ದು, “ಡಿ” ಜೀವಸತ್ವದ ಕೊರತೆಯನ್ನು ನಿವಾರಿಸಲು ಸಿಗುವ ಸ್ವಲ್ಪ ಬಿಸಿಲಿನ ಜಾಸ್ತಿ ಅಭಾವ ಪಡೆಯಲು ಅವರು ’ಸೂರ್ಯಸ್ನಾನ’ದ ಮೊರೆ ಹೋಗುತ್ತಾರೆ. ನಮಗೆ ಅವರ ಅನುಕರಣೆ ಅನಾವಶ್ಯಕ.

Also Read: ವಿಟಮಿನ್-ಡಿ : ದೇಹದ ರಕ್ಷಣಾ ವ್ಯವಸ್ಥೆಗೆ ಶಕ್ತಿ 

3. ಬಿಸಿಲಿನಲ್ಲಿ ಎಂದೂ ದಣಿವಾಗುವಂತಹ ವ್ಯಾಯಾಮ ಮಾಡಬಾರದು.

4. ಯಥೇಚ್ಚ ಭೋಜನ, ಮದ್ಯಪಾನ ಮಾಡುವುದು ಒಳ್ಳೆಯದಲ್ಲ.

5. ಜನ ನಿಬಿಡ ಪ್ರದೇಶದಲ್ಲಿ ಉಸಿರು ಕಟ್ಟಿಸುವ ಬಿಸಿ ಹವೆಯ ಕೋಣೆಯಲ್ಲಿ ವಾಸಿಸಬಾರದು, ವಾಹನಗಳು ಉಗುಳುವ ಹೊಗೆಯ ಪ್ರದೇಶದಲ್ಲಿಯೂ ಸಹ ಇರಬಾರದು.

6. ಬೇಸಿಗೆಯ ಬಿಸಿಲಲ್ಲಿ ಮನೆ ಬಿಟ್ಟು ಹೊರಗೆ ಹೋಗುವ ಪೂರ್ವದಲ್ಲಿ ಮತ್ತು ಹೋಗಬೇಕಾದ ಸ್ಥಳಕ್ಕೆ ಹೋಗಿ ಮುಟ್ಟಿದ ನಂತರ ಸಾಕಷ್ಟು ನೀರು ಕುಡಿಯಬೇಕು. ತಂಪಾದ ಪಾನೀಯ ಇನ್ನು ಪ್ರಯೋಜನಕಾರಿ.

7. ಬೇಸಿಗೆಯ ಬಿಸಿಲಿನ ತಾಪದ ತೋಳ ತೆಕ್ಕೆಯಲ್ಲಿ ವಯೋವೃದ್ಧರು ಮುದ್ದು ಮಕ್ಕಳು ಮತ್ತು ಹೃದ್ರೋಗಿಗಳು ತಲ್ಲಣಗೊಳ್ಳುವುದು ಸರ್ವೇಸಾಮಾನ್ಯ. ಅವರಿಗೆ ವಿಶೇಷ ಕಾಳಜಿ ಅಗತ್ಯ.

8. ಬೇಸಿಗೆಯ ಕಾಲದಲ್ಲಿ ಹತ್ತಿ ಬಟ್ಟೆಗಳಲ್ಲಿನ ಚಿಕ್ಕ ಚಿಕ್ಕ ರಂದ್ರಗಳು ಗಾಳಿಯ ಚಲನೆಗೆ ಸಹಾಯಕ. ಪಾಲಿಸ್ಟರ್ ಬಟ್ಟೆಗಳು ರಂದ್ರ ರಹಿತವಾಗಿರುವುದರಿಂದ ಗಾಳಿ ಸಂಚಾರವಿಲ್ಲದೆ, ಮೈಗೆ ಅಂಟಿಕೊಂಡಂತಾಗಿ ಸೆಕೆ ಹೆಚ್ಚಾಗಿ ಹಿಂಸೆಯಾಗುತ್ತದೆ.

ಕೊನೆಗೊಂದು ಮಾತು. ಸೂರ್ಯನ ಸುತ್ತ ಭೂಮಿ ಸುತ್ತುತ್ತಿರುವವರೆಗೆ ಬೇಸಿಗೆ ಬರುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಇದು ನಮ್ಮ ಕೈಯಲ್ಲಿ ಇದೆ.

dr Karaveeraprabhu-Kyalakonda.

ಡಾ|| ಕರವೀರಪ್ರಭು ಕ್ಯಾಲಕೊಂಡ.
ಕ್ಯಾಲಕೊಂಡ ಆಸ್ಪತ್ರೆ
ಕಾಲೇಜ ರಸ್ತೆ ಬದಾಮಿ-587201
ಜಿಲ್ಲಾ:ಬಾಗಲಕೋಟ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!