ಬಾಯಿ ಆರೋಗ್ಯ ದೇಹದ ಆರೋಗ್ಯದ ದಿಕ್ಸೂಚಿ. ಮಾರ್ಚ್ 20 ರಂದು ವಿಶ್ವ ಬಾಯಿ ಆರೋಗ್ಯ ದಿನ. ಬಾಯಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಮತ್ತು ನಡು ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮರೆಗುಳಿತನ ರೋಗ (ಆಲ್‍ಝೈಮರ್ಸ್ ರೋಗ) ಬರುವ ಸಾಧ್ಯತೆ ದುಪ್ಪಟ್ಟಾಗುತ್ತದೆ ಎಂದೂ ಇತ್ತಿಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.
ವಿಶ್ವದಾದ್ಯಂತ ಮಾರ್ಚ್ 20 ರಂದು ವಿಶ್ವ ಬಾಯಿ ಆರೋಗ್ಯ ದಿನ ಎಂದು ಆಚರಿಸಿ ಬಾಯಿಯ ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿ ಹೇಳಿ, ಬಾಯಿಯ ಆರೋಗ್ಯದ ಕಾಳಜಿ ಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಮನಪರಿವರ್ತನೆ ಮಾಡಿಸುವ ವಿಶೇಷ ದಿನವಾಗಿರುತ್ತದೆ. ಈ ಆಚರಣೆ 2007 ರಲ್ಲಿ ಫೆಡರೇಷನ್ ಡೆಂಟಯರ್ ಇಂಟರ್‍ನ್ಯಾಷನಲ್ (FDI) ಸಂಸ್ಥೆ 2007 ರಲ್ಲಿ ಆರಂಭಿಸಿತು. 2013 ರ ವರೆಗೆ FDI ಇದರ ಜನಕರಾದ ಚಾಲ್ರ್ಸ್ ಗೊಡನ್ ಅವರ ಜನ್ಮ ದಿನವಾದ ಸೆಪ್ಟೆಂಬರ್ 12 ರಂದು ಈ ಆಚರಣೆ ನಡೆಸಲಾಯಿತು. 2013 ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಈ ಆಚರಣೆಯನ್ನು ಮಾರ್ಚ್ 20ಕ್ಕೆ ಬದಲಾಯಿಸಲಾಯಿತು. ಪ್ರತಿ ವರ್ಷ ವಿಶೇಷವಾದ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಈ ಆಚರಣೆ ನಡೆಸುತ್ತಿದ್ದು, 2021 ರಿಂದ 2023 ರ ಆಚರಣೆಯ ಧ್ಯೇಯವಾಕ್ಯ “Be Proud of Your Mouth” ಅಂದರೆ “ನಿಮ್ಮ ಬಾಯಿ ಬಗ್ಗೆ ಹೆಮ್ಮೆ ಇರಲಿ” ಎಂಬುದಾಗಿದೆ. ಬದಲಾದ ಅಥವಾ ಹದಗೆಟ್ಟ ಬಾಯಿಯ ಆರೋಗ್ಯದಿಂದ ದೇಹದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತು ವ್ಯಕ್ತಿತ್ವದ ಮೇಲೆ ಉಂಟಾಗುವ ಋಣಾತ್ಮಕ ಬದಲಾವಣೆಗಳನ್ನು ಜನರಿಗೆ ತಿಳಿಹೇಳಿ ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವೊಲಿಸುವ ವಿಶೇಷ ದಿನವಾಗಿರುತ್ತದೆ. ಜಗತ್ತಿನಾದ್ಯಂತ ಎಲ್ಲಾ ದಂತ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಬಾಯಿ ಆರೋಗ್ಯ ಮೇಲ್ವಿಚಾರಕರು ಈ ಆಚರಣೆಯಲ್ಲಿ ಭಾಗಿಯಾಗಿ, ಜನರಿಗೆ ವಿಶೇಷ ಸಂದೇಶ ರವಾನಿಸುತ್ತಾರೆ.
ಬಾಯಿಯಲ್ಲಿ ಪ್ರಕಟಗೊಳ್ಳುವ ರೋಗಗಳು:
ಹಲವಾರು ರೋಗಗಳ ಇರುವಿಕೆಯನ್ನು ವೈದ್ಯರು ಬಾಯಿಯಲ್ಲಿಯೇ ಪತ್ತೆ ಹಚ್ಚುತ್ತಾರೆ. ಈ ಕಾರಣದಿಂದಲೇ ಬಾಯಿಯನ್ನು ವೈದ್ಯರ ಮುಖಗನ್ನಡಿ ಎಂದೂ ಸಂಬೋಧಿಸಲಾಗುತ್ತದೆ. ಪ್ರತಿ ಬಾರಿಯೂ ನೀವು ವೈದ್ಯರ ಬಳಿ ಹೋದಾಗ, ನಿಮ್ಮ ಬಳಿ ವೈದ್ಯರು ಬಾಯಿ ತೆರೆಸಿ, ನಾಲಗೆಯ ಕೆಳ ಭಾಗ ಮತ್ತು ಬಾಯಿಯ ಪರಿಸ್ಥಿತಿಯ ಅವಲೋಕನ ಮಾಡುತ್ತಾರೆ. ಆರಂಭಿಕ ಹಂತದಲ್ಲಿ ಎಲ್ಲಾ ರೋಗಗಳು ಕಾಣಿಸದೇ ಇದ್ದರೂ, ಮುಂದುವರಿದ ಹಂತದಲ್ಲಿ ಹತ್ತು ಹಲವು ರೋಗಗಳು ಬಾಯಿಯಲ್ಲಿ ಪ್ರಕಟಗೊಳ್ಳುತ್ತದೆ. ಬಾಯಿ ಎನ್ನುವುದು ಬ್ಯಾಕ್ಟೀರಿಯಗಳ ಗುಂಡಿಯಾಗಿದ್ದು, ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟಾಗ ಬಾಯಿಯಲ್ಲಿ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳಬಹುದು. ಹೇಗೆ ತುಂಟ ಮುದ್ದುಕೃಷ್ಣ ಮಣ್ಣು ತಿಂದು ಸಿಕ್ಕಿಬಿದ್ದಾಗ, ತಾಯಿ ಯಶೋಧೆ ಆತನ ಬಾಯಿ ತೆರೆಸಿದಾಗ ಬ್ರಹ್ಮಾಂಡವನ್ನು ಕಂಡಳೋ, ಹಾಗೆಯೇ, ನಾವು ವೈದ್ಯರು ನಮ್ಮ ರೋಗಿಗಳ ಬಾಯಿ ತೆರೆಸಿದಾಗ ರೋಗಗಳ ಭಂಡಾರವನ್ನು ಕಾಣುತ್ತೇವೆ. ಇದು ಅತೀ ಸಾಮಾನ್ಯ ರಕ್ತ ಹೀನತೆ ಇರಬಹುದು , ವಿಟಮಿನ್ ಸಿ ಕೊರತೆ ಇರಬಹುದು ಅಥವಾ ಅತೀ ವಿರಳ ರಕ್ತದ ಕ್ಯಾನ್ಸರ್ ಇರಲೂಬಹುದು.
1. ರಕ್ತಹೀನತೆ ಇದ್ದಲ್ಲಿ ಬಾಯಿಯ ಒಳಪದರ ಬಿಳಚಿಕೊಂಡು, ಬಾಯಿ ಬೋಳಾಗುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತದೆ. ವಿಟಮಿನ್ B12 ಕೊತೆ ಇದ್ದಲ್ಲಿ ನಾಲಗೆ ಬೋಳಾಗಿರುತ್ತದೆ. ವಿಟಮಿನ್ B6 ಕೊರತೆ ಇದ್ದಲ್ಲಿ ನಾಲಗೆ ಊದಿಕೊಂಡು, ಕೆಂಪಗಾಗಿ ನಾಲಗೆ ಉರಿಯೂತ ಇರುತ್ತದೆ.
2. ಡೆಂಗ್ಯೂ ಜ್ವರ, ಚಿಕುನ್‍ಗುನ್ಯ ಜ್ವರ ಇದ್ದಲ್ಲಿ ಪ್ಲೇಟ್‍ಲೇಟ್ ಸಂಖ್ಯೆ ಕ್ಷೀಣಿಸಿ ವಸಡಿನಲ್ಲಿ ರಕ್ತ ಒಸರುತ್ತದೆ.
3. ಮಧುಮೇಹ ರೋಗಿಗಳಲ್ಲಿ ಹಲ್ಲಿನ ವಸಡಿನಲ್ಲಿ ಕೀವು ತುಂಬಿಕೊಂಡು, ಹಲ್ಲು ಅಲುಗಾಡುತ್ತದೆ ಮತ್ತು ವಿಪರೀತ ಬಾಯಿ ವಾಸನೆ ಇರುತ್ತದೆ.
4. ಧೂಮಪಾನಿಗಳಲ್ಲಿ ಬಾಯಿಯಲ್ಲಿ ಹುಣ್ಣು, ಬಾಯಿ ಒಣಗುವುದು, ಬಾಯಿ ಉರಿಯುವುದು, ಬಿಳಿ ಮತ್ತು ಕೆಂಪು ಕಲೆಗಳು ಕಂಡುಬರುತ್ತದೆ.
5. ಏಡ್ಸ್ ರೋಗಿಗಳಲ್ಲಿ ನಾಲಗೆ ಮೇಲ್ಪದರದಲ್ಲಿ ಬಿಳಿ ಪದರ ಇರಬಹುದು ಮತ್ತು ಪದೇ ಪದೇ ಬಾಯಿಯಲ್ಲಿ ಹುಣ್ಣು ಆಗುವ ಸಾಧ್ಯತೆ ಇರುತ್ತದೆ. ವಸಡಿನಲ್ಲಿ ರಕ್ತ ಒಸರುತ್ತದೆ.
6. ಬಾಯಿಯ ಕ್ಯಾನ್ಸರ್ ಇದ್ದಲ್ಲಿ, ಬಾಯಿಯೊಳಗೆ ಹಲವು ವಾರಗಳಿಂದ ಗುಣವಾಗದೆ ರಕ್ತ ವಸರುತ್ತಿರುವ ಯಾತನಾಮಯ ಹುಣ್ಣು ಅಥವಾ ಗಡ್ಡೆ ಕಂಡುಬರುತ್ತದೆ.
7. ಕವಾಸಾಕಿ ಜ್ವರ, ಸ್ಕಾರ್ಲೆಟ್ ಜ್ವರ ಮತ್ತು ಟಾಕ್ಸಿಕ್ ಶಾಕ್ ಸಿಂಡ್ರೋಮ್ ಎಂಬ ಖಾಯಿಲೆಗಳಲ್ಲಿ ನಾಲಗೆ ಉರಿಯೂತದಿಂದ ಕೂಡಿದ್ದು, ಕೆಂಪಗಾಗಿ ಊದಿಕೊಂಡು, ಬಹಳ ನೋವಿನಿಂದ ಕೂಡಿರುತ್ತದೆ. ಈ ಸ್ಥಿತಿಯನ್ನು ಸ್ಟ್ರಾಬೆರಿ ನಾಲಗೆ ಎಂದೂ ಕರೆಯುತ್ತಾರೆ
8. ಅಪಸ್ಮಾರ ರೋಗಿಗಳಲ್ಲಿ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಔಷಧಿಯ ಅಡ್ಡ ಪರಿಣಾಮದಿಂದಾಗಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆದು, ಹಲ್ಲುಗಳು ಕಾಣದೇ ಇರಲೂ ಬಹುದು.
ಒಟ್ಟಿನಲ್ಲಿ ಅತಿ ಸರಳ, ಸಾಮಾನ್ಯ ರಕ್ತಹೀನತೆಯಿಂದ ಅತೀ ವಿರಳ, ಬೀಕರ ಏಡ್ಸ್ ರೋಗವನ್ನು ಬಾಯಿಯ ಪರೀಕ್ಷೆಯಿಂದ ಪತ್ತೆ ಹಚ್ಚಲು ಸಾಧ್ಯವಿದೆ ಎಂಬುದಂತೂ ನಂಬಲೇ ಬೇಕಾದ ಸತ್ಯ ಆಗಿರುತ್ತದೆ.
ಕೊನೆ ಮಾತು:
ಮುಖ ಮನಸ್ಸಿನ ಕನ್ನಡಿ ಹಾಗೂ ಬಾಯಿ ದೇಹದ ಆರೋಗ್ಯದ ದಿಕ್ಸೂಚಿ ಎಂಬುದು ವೈದ್ಯರ ಬಲವಾದ ನಂಬಿಕೆ. ಆರೋಗ್ಯವಂತ ಸುದೃಢವಾದ ಹಲ್ಲು ಇದ್ದಲ್ಲಿ, ಪಚನಕ್ರಿಯೆ ಮತ್ತು ಜೀರ್ಣಕ್ರಿಯೆ ಪರಿಪೂರ್ಣವಾಗಿ ದೇಹದ ಆರೋಗ್ಯ ಸಮತೋಲನದಲ್ಲಿರುತ್ತದೆ. ಅದೇ ರೀತಿ ಸುಂದರವಾದ ಹಲ್ಲುಗಳು, ಮಾತುಗಳ ಸ್ಪಷ್ಟ ಉಚ್ಛಾರಕ್ಕೆ ಹಾಗೂ ಪಚನ ಕ್ರಿಯೆಗೆ ಅತೀ ಅಗತ್ಯ. ಆರೋಗ್ಯ ಪೂರ್ಣ ಹಲ್ಲು ಮತ್ತು ಬಾಯಿಯಿಂದ ವ್ಯಕ್ತಿಯ ಆತ್ಮ ವಿಶ್ವಾಸ ವೃದ್ಧಿಸಿ, ಮನೋಬಲ ಹೆಚ್ಚಿ, ಆತ ಹೆಚ್ಚು ಸಮಾಜಮುಖಿಯಾಗಿ ಧನಾತ್ಮಕ ಚಿಂತನೆಗಳಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸುಂದರವಾದ ದಂತ ಪಂಕ್ತಿಗಳಿಂದ ಕೂಡಿದ ನಗು ಮುಖಕ್ಕೆ ಮೌಲ್ಯ ಮತ್ತು ಮೆರುಗನ್ನು ನೀಡುತ್ತದೆ. ಅದೇ ರೀತಿ ನಮ್ಮ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಹಿತಮಿತವಾಗಿ ತಿಂದಲ್ಲಿ ನಮ್ಮ ದೇಹದ ಆರೋಗ್ಯ ಕೂಡಾ ವೃದ್ಧಿಸುತ್ತದೆ. ಈ ಕಾರಣದಿಂದ ಹಿರಿಯರು “ನಾಲಗೆ ದಾಸನಾದರೆ ರೋಗ ರುಜಿನಗಳಿಗೆ ರಹದಾರಿ ನೀಡಿದಂತೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇತ್ತಿಚಿನ ಸಂಶೋಧನೆಗಳಿಂದ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಮತ್ತು ನಡು ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮರೆಗುಳಿತನ ರೋಗ (ಆಲ್‍ಝೈಮರ್ಸ್ ರೋಗ) ಬರುವ ಸಾಧ್ಯತೆ ದುಪ್ಪಟ್ಟಾಗುತ್ತದೆ ಎಂದೂ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಬಾಯಿಯ ಸ್ವಚ್ಛತೆ ಕಾಪಾಡಿಕೊಂಡು, ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ನೂರು ಕಾಲ ಸುಖವಾಗಿ ಬದುಕಬಹುದು. ಹಲ್ಲಿನ ಆರೋಗ್ಯ ಚೆನ್ನಾಗಿರದಿದ್ದರೆ, ಪಚನಕ್ರಿಯೆ ಸರಿಯಾಗಿ ಆಗದೆ ರಕ್ತಹೀನತೆ ಬರಬಹುದು. ರಕ್ತ ಹೀನತೆಯಿಂದ ಇನ್ನಾವುದೋ ರೋಗಕ್ಕೆ ಮೂಲವಾಗಬಹುದು. ಬಾಯಿಯಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಗಳು ಮನೆ ಮಾಡಿಕೊಂಡಿದ್ದು, ಕಾರಣಾಂತರದಿಂದ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟಾಗ, ಈ ಬ್ಯಾಕ್ಟೀರಿಯಾಗಳು ತಮ್ಮ ನೈಜ ರೂಪವನ್ನು ತೋರಿಸಿ, ಹತ್ತು ಹಲವು ಕಾಯಿಲೆಗಳಿಗೆ ಕಾರಣವಾಗಲೂಬಹುದು.
ಈ ಕಾರಣದಿಂದಲೇ ರೋಗಗ್ರಸ್ಥ ಬಾಯಿಯನ್ನು ರೋಗಿ ತೆರದೂಡನೆಯೇ, ದಂತ ವೈದ್ಯರು ರೋಗಿಯ ಬಾಯಿಯೊಳಗೆ ಬ್ರಹ್ಮಾಂಡವನ್ನೇ ಕಾಣುತ್ತಾರೆ. ಬ್ಯಾಕ್ಟೀರಿಯ ಇಲ್ಲದ, ರೋಗವಿಲ್ಲದ ಬಾಯಿ ಕಾಣಿ ಸಿಗಲಿಕ್ಕೆ ಇಲ್ಲ. ನಿರುಪದ್ರವಿ ಬ್ಯಾಕ್ಟೀರಿಯಗಳು ನಮ್ಮ ಬಾಯಿಯಲ್ಲಿ ಮನೆ ಮಾಡಿಕೊಂಡು ಸಹ ಬಾಳ್ವೆ ನಡೆಸುತ್ತಿರುತ್ತದೆ. ನಮ್ಮ ಬಾಯಿಯ ಆರೋಗ್ಯ ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಂಡಲ್ಲಿ ಈ ಬ್ಯಾಕ್ಟೀರಿಯಗಳು ತಮ್ಮ ಪಾಡಿಗೆ ತಾವಿದ್ದು ಏನೂ ತೊಂದರೆ ಮಾಡದೇ ಇರಬಹುದು ಈ ಕಾರಣದಿಂದಲೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ನಮ್ಮ ದೇಹದ ಆರೋಗ್ಯ ವೃದ್ಧಿಸಿ, ಸುಂದರ ಸುದೃಢ ಆಯೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ.
Also Read: ಹಲ್ಲಿನ ರಕ್ಷಣೆ- ಹತ್ತು ಹಲವು ಮಾರ್ಗಗಳು ಮತ್ತು ಸೂತ್ರಗಳು
ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾದಂತ ಚಿಕಿತ್ಸಾಲಯ
ಮೊ : 984513 5787
Email: drmuraleechoontharu@gmail.com