ಬಾಯಾರಿಕೆ ಎಂಬುದು ಅತ್ಯಂತ ಸಹಜ. ನಮ್ಮ ಶರೀರದ ಜೀವಶಾಸ್ತ್ರಕ್ಕೆ ಸರಿಯಾದ ನೀರಿನ ಪ್ರಮಾಣ ದೇಹದಲ್ಲಿರುವುದು ಅಗತ್ಯ. ಬಾಯಾರಿಕೆಯ ಮೇಲೆಯೂ ಲೇಖನವೇ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಓದಿ ನೋಡಿ ಆಗ ತಿಳಿಯುತ್ತದೆ ಇದರ ಮರ್ಮ.
ಬಾಯಾರಿಕೆ ಎಂಬುದು ಅತ್ಯಂತ ಸಹಜ ಹಾಗೂ ಸರ್ವಸಾಧಾರಣವಾಗಿ ಎಲ್ಲ ಜೀವಜಂತುಗಳಲ್ಲಿ ಕಾಣಿಸಿಕೊಳ್ಳುವಂಥದ್ದು. ಅದರಲ್ಲಿಯೂ ಮುಖ್ಯವಾಗಿ ಮಾನವನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೌದು ಸಹಜವಾದ ಈ ಬಾಯಾರಿಕೆ ಒಮ್ಮೆ ಕಡಿಮೆಯಾದರೆ ಅಥವಾ ಹೆಚ್ಚಾದರೆ …………….. (?)
ದಿನನಿತ್ಯಕ್ಕಿಂತಾ ಆಕಸ್ಮಾತ್ ಒಂದು ದಿನ ಜಾಸ್ತಿ ನೀರು ಕುಡಿದರೂ, ಅಯ್ಯೋ ಇವತ್ತು ತುಂಬಾ ಬಾಯಾರಿಕೆಯಾಗುತ್ತಿದೆ. ಯಾಕೋ ಗೊತ್ತಿಲ್ಲ ಎಂದು ಹಲುಬುವವರೆ ಜಾಸ್ತಿ. ಗಂಟಲೊಳಗೆ ನೀರಿಗಾರಿ ಕಾತರಿಸುವ ಸ್ಥಿತಿಯನ್ನೇ ಬಾಯಾರಿಕೆ ಎನ್ನಬಹುದೇನೋ. ನಮ್ಮ ಶರೀರದ ಜೀವಶಾಸ್ತ್ರಕ್ಕೆ ಸರಿಯಾದ ನೀರಿನ ಪ್ರಮಾಣ ದೇಹದಲ್ಲಿರುವುದು ಅಗತ್ಯ.
ಇದು ಎರಡು ವಿಷಯಗಳನ್ನು ಒಳಗೊಂಡಿರುತ್ತದೆ.
• ಶರೀರದ ಎಲ್ಲ ಕೆಲಸ ಕಾರ್ಯಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರಿನಂಶದ ಪೂರೈಕೆಯಾಗುವುದು.
• ಶರೀರದ ಎಲ್ಲ ಜೀವಕೋಶಗಳೊಳಗೆ ಹಾಗೂ ರಕ್ತಕ್ಕೆ ಸರಿಯಾದ ಪ್ರಮಾಣದಲ್ಲಿ ನೀರಿನಂಶ ಹಾಗೂ ದ್ರವ ಪದಾರ್ಥ ಹಂಚಿಕೆಯಾಗುವುದು.
ಹೀಗಾಗದೇ ನೀರಿನಾಂಶದ ಅನುಪಾತದ ಪ್ರಮಾಣದಲ್ಲಿ ವ್ಯತ್ಯಾಸವಾದಲ್ಲಿ ನಮಗೆ ಅತಿಯಾದ ಬಾಯಾರಿಕೆಯು ಕಾಣಿಸಿಕೊಳ್ಳುತ್ತದೆ.
ಬಾಯಾರಿಕೆ ಹೇಗಾಗುತ್ತದೆ?
ನಮ್ಮ ಬಾಯಿ, ಗಂಟಲು, ಕೆಳಗಂಟಲಭಾಗ, ಅನ್ನ ನಾಳ ಇತ್ಯಾದಿ ಎಲ್ಲವೂ ತೆಳುವಾದಂತಹು ಹಾಗೂ ಸೂಕ್ಷ್ಮವಾದ ಲೋಮ ಪೊರೆಯಿಂದ ಆವೃತ್ತವಾಗಿದೆ. ಶರೀರದಲ್ಲಿ ಇರಬೇಕಾದಂತಹ ಪ್ರಮಾಣಕ್ಕಿಂತ ನೀರು ಕಡಿಮೆಯಿದ್ದಲ್ಲಿ ಲಾಲಾರಸದ ಉತ್ಪತ್ತಿಯು ಕಡಿಮೆಯಾಗಿ ಬಾಯಿ, ಗಂಟಲಿನಲ್ಲಿರುವ ಈ ಲೋಮಪೊರೆ ಒಣಗಿ ನಮಗೆ ಬಾಯಾರಿಕೆಯಾಗುತ್ತದೆ. ರಕ್ತದಲ್ಲಿನ ಸಂಗತಿಗಳು ಬದಲಾದಾಗ ಅಥವಾ ವ್ಯತ್ಯಾಸವಾದಗಲೂ ಸಹ ಬಾಯಾರಿಕೆ ಉಂಟಾಗುತ್ತದೆ.
ಬಾಯಾರಿಕೆ ಕಾರಣಗಳೇನು?
- ಸೆಖೆಗಾಲ ಅಥವಾ ಬಿಸಿಯಾದ ವಾತಾವರಣ, ಹೆಚ್ಚು ಬೆವರೊಡೆಯಾವುದು ಇತ್ಯಾದಿ.
- ಹೆಚ್ಚಿನ ಕೆಲಸ ಅಥವಾ ವ್ಯಾಯಾಮ ಮಾಡುವುದು.
- ಉಪ್ಪು ಹೆಚ್ಚಿರುವ ಆಹಾರ ಪದಾರ್ಥ ಉಪಯೋಗಿಸುವುದು.
- ಶರೀರದಿಂದ ನೀರು ಹೆಚ್ಚು ಹೊರ ಹೋಗುವ ಖಾಯಿಲೆಗಳು (ಉದಾ:- ವಾಂತಿ, ಭೇದಿ, ಕಾಲರಾ, ಅತಿಯಾದ ಮೂತ್ರ ವಿಸರ್ಜನೆ, ಅತಿಯಾಗಿ ರಕ್ತ ಒಸರುವುದು, ಶಾಕ್, ಇಡೀ ಶರೀರದಲ್ಲಿ ನೀರು ತುಂಬುಕೊಳ್ಳುವುದು ಇತ್ಯಾದಿ)
- ಲಾಲಾರಸ ಗ್ರಂಥಿಗಳಲ್ಲಿನ ತೊಂದರೆ, ಬಾಯಿಯ ಮೂಲಕ ಉಸಿರಾಟ.
- ಕಡಿಮೆ ಪ್ರಮಾಣದಲ್ಲಿ ನೀರು ಸೇವಿಸುವುದು ಇತ್ಯಾದಿ.
ಇದರಿಂದುಂಟಾಗುವ ತೊಂದರೆಗಳೇನು?
- ಇಡೀ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.
- ಸುಸ್ತು, ತಲೆ ತಿರುಗುವುದು, ಹೊಟ್ಟೆ ಉರಿ, ತಲೆನೋವು ಇತ್ಯಾದಿ ಕಾಣಿಸಿಕೊಳ್ಳಬಹುದು.
- ಚರ್ಮವು ಒಣಗಿ ಬಿರುಕುಬಿಟ್ಟು ಉರಿ ಶುರುವಾಗುತ್ತದೆ, ಕಾಂತಿಹೀನವಾಗುತ್ತದೆ.
- ಬಾಯಾರಿಕೆ ಅತಿ ಹೆಚ್ಚಾದಾಗ ಯಾವ ಯಾವುದೋ ನೀರನ್ನು ಸೇವಿಸಿ ರೋಗರುಜಿನೆಗಳು ಬರಬಹುದು.
ಇದಕ್ಕೆ ಪರಿಹಾರೋಪಾಯಗಳೇನು?
ಬಾಯಾರಿಕೆಯೂ ಕೆಲವೊಮ್ಮೆ ತೊಂದರೆಯಾಗುತ್ತದೆ. ಇದು ತೊಂದರೆ ಎನ್ನುವುದಕ್ಕಿಂತಲೂ ನಿಸರ್ಗ ನಿರ್ಮಿತವಾದ ಒಂದು ಬೇಡಿಕೆ ಶರೀರದಿಂದ. ಈ ಬೇಡಿಕೆಯನ್ನು ಅಲ್ಲಗಳೆಯದೇ ಪೂರೈಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
- ಹೆಚ್ಚು ನೀರನ್ನು ಕುಡಿಯಿರಿ.
- ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಉದಾ:- ಹಣ್ಣಿನ ರಸ, ಎಳನೀರು, ಮಜ್ಜಿಗೆ, ಲಿಂಬು ಶರಬತ್, ತರಕಾರಿ ರಸಗಳು ಇತ್ಯಾದಿ.
- ಆಹಾರದಲ್ಲಿ ಉಪ್ಪನ್ನು ಕಡಿಮೆ ಸೇವಿಸಿ. ಮೇಲುಉಪ್ಪನ್ನು ಉಪಯೋಗಿಸಲೇ ಬೇಡಿ.
- ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಗೊಳಿಸಿ. ಸಾಧ್ಯವಿಲ್ಲದಿದ್ದರೆ ಬಿಸಿನಲ್ಲಿ ಓಡಾಡುವಾಗೆಲ್ಲಾ ಛತ್ರಿಯ ಬಳಕೆಯನ್ನು ರೂಢಿಸಿಕೊಳ್ಳಿ.
- ವಾಂತಿ, ಬೇಧಿ ಇತ್ಯಾದಿಗಳಾದ ರೋಗಗಳನ್ನು ಆದಷ್ಟು ಬೇಗನೇ ಉಪಶಮನವನ್ನು ಮಾಡಿಕೊಳ್ಳಿ ಹಾಗೂ ನೀರು ಸೇವಿಸುವುದನ್ನು ಖಂಡಿತಾ ನಿಲ್ಲಿಸಬೇಡಿ.
- ಅತಿಯಾದ ರಕ್ತಸ್ರಾವವಾಗುವ ಸಂದರ್ಭವಿದ್ದಲ್ಲಿ ಅದನ್ನ ತಡೆಗಟ್ಟಲು ಆಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ. ನಿಮ್ಮ ಕೈಲಾಗದಿದ್ದಲ್ಲಿ ನೆರೆಹೊರೆಯವರಿಂದ ಅಥವಾ ವೈದ್ಯರಿಂದ ಸಹಾಯವನ್ನು ಪಡೆದುಕೊಳ್ಳಿ.
- ಬಾಯಿಯಿಂದ ಉಸಿರಾಟ ಮಾಡದೇ ಮೂಗಿನಿಂದಲೇ ಮಾಡುವುದು.
- ಹೆಚ್ಚಿನ ಕೆಲಸ ವ್ಯಾಯಾಮ ಮಾಡುವಾಗ ಒಂದು ಗಂಟೆಗೊಮ್ಮೆಯಾದರೂ ಶರೀರಕ್ಕೆ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳುವುದು.
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.
ದೂ: 94487 29434/97314 60353
Email: drvhegde@yahoo.com; nisargamane6@gmail.com
http://nisargamane.com