ನಮ್ಮ ಸಂಪ್ರದಾಯಗಳಲ್ಲೂ ಇದೆ ಆರೋಗ್ಯದ ಮಹತ್ವ
ಮಗಳ ಮನೆಗೆ ಹೋಗಿ ಬರಬೇಕೆಂದು ಬೆಳಿಗ್ಗೆ ಬೇಗನೆ ಎದ್ದು, ಸ್ನಾನ, ಪೂಜೆ ಎಲ್ಲವನ್ನೂ ಮುಗಿಸಿ ಗಂಡ, ಮಗ, ಸೊಸೆ ಎಲ್ಲರಿಗೂ ಅಡುಗೆ ಮಾಡಿಟ್ಟು ಬೇಗನೆ ಸಿದ್ಧರಾಗಿ ಗಿರಿಜಮ್ಮ ಹೊರ ನಡೆದಾಗ ಗಂಟೆ ಹತ್ತಾಗಿತ್ತು.
ಕಛೇರಿಗೆ ಹೋಗುವ ಹೊತ್ತಾಗಿದ್ದರಿಂದ ಗಿರಿಜಮ್ಮನವರಿಗೆ ಆಟೋ ಸಿಗೋದು ಕಷ್ಟವಾಯಿತು. ಇವರ ಮನೆಯಿಂದ ಬಹಳ ದೂರವಿದ್ದ ಮಗಳ ಮನೆಗೆ ಹೋಗಲು ಆಟೋ ಸಿಗದೆ ಇದ್ದಾಗ, ಗಿರಿಜಮ್ಮ ಸಾರಿಗೆ ಬಸ್‍ನಲ್ಲಿಯೇ ಪ್ರಯಾಣ ಮಾಡಿ ಮಗಳ ಮನೆ ಹತ್ತಿರವೇ ಇದ್ದ ಬಸ್ ನಿಲ್ದಾಣದಲ್ಲಿ ಇಳಿದರು; ಸುಸ್ತಾಗಿ ಏದುಸಿರು ಬಿಡುತ್ತಾ ಬರುತ್ತಿರುವ ತಾಯಿಯನ್ನು ಕಂಡಾಗ ಮಗಳು ಮಂಜುಳ ಹತ್ತಿರ ಹೋಗಿ ಕೈಯಲ್ಲಿದ್ದ ಬ್ಯಾಗನ್ನು ತೆಗೆದುಕೊಂಡು ಇಬ್ಬರೂ ಮಾತನಾಡಿಕೊಂಡು ಮನೆತನಕ ಬಂದರು.
ಹೊರ ಮೈಲಿಗೆ
ಒಳಗೆ ಬಂದ ಗಿರಿಜಮ್ಮ ಕುರ್ಚಿಯ ಮೇಲೆ ಕುಳಿತಾಗ “ನೀರೋ, ಕಾಫಿನೋ ಕುಡಿತೀರಾ ಅಜ್ಜಿ, ತಂದುಕೊಡ್ಲಾ” ಎಂದು ಮೊಮ್ಮಗಳು ಕೇಳಿದಳು. “ನನಗೇನು ಬೇಡ ಪುಟ್ಟಿ. ಈಗ ನಾನೇನು ಕುಡಿಯೊಲ್ಲ, ತಿನ್ನೊಲ್ಲ. ನನಗೆ ಹೊರ ಮೈಲಿಗೆಯಾಗಿದೆ.” ಅಂತ ಗಿರಿಜಮ್ಮ ಹೇಳಿದಾಗ ಮೊಮ್ಮಗಳು ಶುಭಾಗೆ ಆಶ್ಚರ್ಯವಾಯಿತು.
“ಅದೇನಜ್ಜಿ ಹೊರ ಮೈಲಿಗೆ ಅಂದರೆ, ನಮ್ಮಮ್ಮ ಒಂದಿವಸಾನೂ ಅಂದಿಲ್ಲ.”
ಗಿರಿಜಮ್ಮ ಮೊಮ್ಮಗಳ ಕಡೆ ತಿರುಗಿ “ನೋಡು ಪುಟ್ಟಿ ಹೊರಗೆ ಹೋಗುವಾಗ, ಹಾಕಿಕೊಂಡ ನಮ್ಮ ಬಟ್ಟೆಗೆ ನಮ್ಮ ಮೈಮೇಲಿನ ಬೆವರು ಅಂಟಿರುತ್ತದೆ. ಆ ಬೆವರಿನಲ್ಲಿದ್ದ ಕ್ರಿಮಿಕೀಟಗಳು ನಮ್ಮ ಬಟ್ಟೆ ಮೇಲೆ ಬಂದಿರುತ್ತದೆ. ಬಸ್ಸಿನಲ್ಲಿ ಬಂದರಂತೂ ಒಬ್ಬರ ಮೈ ಒಬ್ಬರಿಗೆ ತಾಕಿರುತ್ತದೆ. ಆಗ ಅವರ ಬಟ್ಟೆ ಮೇಲಿನ ಕ್ರಿಮಿಗಳು ನಮ್ಮ ಬಟ್ಟೆ ಮೇಲೆ ಬಂದಿರುತ್ತವೆ.
ಆದ್ದರಿಂದ ಹೊರಗೆ ಹೋಗುವಾಗ ಹಾಕಿಕೊಂಡ ಬಟ್ಟೆಯನ್ನು ಮನೆಗೆ ಬಂದು ಬಿಚ್ಚಿಟ್ಟು ಕೈಕಾಲು ಮುಖ ತೊಳೆದುಕೊಂಡು ಮನೆಯಲ್ಲಿರುವ ಶುದ್ಧವಾದ ಬಟ್ಟೆಯನ್ನು ಹಾಕಿಕೊಂಡು ತಿಂದು ಕುಡಿದು ಮಾಡಬೇಕು. ಹೊರಗೆ ಹಾಕಿಕೊಂಡು ಹೋದ ಬಟ್ಟೆಯನ್ನು ಮೈಮೇಲೆ ಇಟ್ಟುಕೊಂಡು ಮನೆಯಲ್ಲಿ ಏನನ್ನೂ ತಿನ್ನಬಾರದು. ಇದನ್ನೇ ಹೊರ ಮೈಲಿಗೆ ಎನ್ನುತ್ತಾರೆ.
ಸ್ನಾನ ಶುದ್ಧಿ
ಮೊಮ್ಮಗಳಿಗೆ ಇದೆಲ್ಲವನ್ನೂ ತಿಳಿಸಿ, ಗಿರಿಜಮ್ಮ ಬಚ್ಚಲು ಮನೆಗೆ ಹೋಗಿ ಕೈ, ಕಾಲು ತೊಳೆದು, ಹೊರಮೈಲಿಗೆಯಾದ ಸೀರೆಯನ್ನು ಬಿಚ್ಚಿ, ಮಗಳು ಕೊಟ್ಟ ಶುದ್ಧವಾದ ಸೀರೆಯನ್ನು ಉಟ್ಟುಕೊಂಡು, ನೀರು ಕುಡಿದು ಕಾಫಿ-ತಿಂಡಿಯನ್ನು ತೆಗೆದುಕೊಂಡರು. ತಾಯಿ ತಿಂಡಿ ತಿಂದು ಕಾಫಿ ಕುಡಿದು ಮುಗಿಸಿದ ಮೇಲೆ ಮಗಳು ಮಂಜುಳ ತಾಯಿಯ ಕಡೆ ತಿರುಗಿ “ಅಮ್ಮ ಸಾವಿನ ಸುದ್ದಿ ಕೇಳಿದ ತಕ್ಷಣ ಸ್ನಾನ ಶುದ್ಧಿ ಅಂತಾರಲ್ಲ, ಅದೇನಮ್ಮ? ಅಲ್ಲಿಗೆ ಹೋಗಿ ಹೆಣ ನೋಡಿಕೊಂಡು ಬಂದಾಗ ಮೈಲಿಗೆ ತಾನೆ, ಬರಿ ಸುದ್ದಿ ಕೇಳಿದಕ್ಕೆ ಸ್ನಾನ ಏಕೆ ಮಾಡಬೇಕು”?
“ನೋಡಮ್ಮ ಮಂಜು, ನಮಗೆ ಅಂತಹ ಸುದ್ದಿಯನ್ನು ತಿಳಿಸುವವರು ಆಪ್ತರಿಷ್ಟರು, ಸ್ನೇಹಿತರು ಹಾಗೂ ಬಳಗದವರು. ಅವರಲ್ಲಿ ಯಾರಾದರೂ ಒಬ್ಬರು ಕಾಲವಾದ ಸುದ್ದಿ ನಮಗೆ ತಿಳಿದಾಗ ನಮಗಾಗುವ ದುಃಖದಿಂದ ತಲೆ ಭಾರವಾಗಿ ಮಾನಸಿಕ ಅಸ್ತವ್ಯಸ್ತವಾಗುತ್ತದೆ; ತಲೆಭಾರ ಕಡಿಮೆಯಾಗಿ ಮನಸ್ಸು ಹಗುರವಾಗಿ, ಮಾನಸಿಕವಾಗಿ ಶುದ್ಧಿಯಾಗಬೇಕಾದರೆ ತಲೆಯ ಮೇಲೆ ಸ್ನಾನ ಮಾಡಬೇಕು. ಅದು ತಣ್ಣೀರಿನಿಂದ ಮಾಡಿದರೆ ಇನ್ನೂ ಆರೋಗ್ಯಕರ.
ತಣ್ಣೀರು ತಲೆ ಮೇಲೆ ಬಿದ್ದಾಗ ಮನಸ್ಸು ಹಗುರವಾಗುತ್ತದೆ. ಮಾನಸಿಕವಾಗಿ ಏನೂ ಇಲ್ಲದೆ, ಮಾನವರು ಆರೋಗ್ಯವಾಗಿದ್ದರೆ, ಯಾವ ರೀತಿ ಬೇಕಾದರೂ ಜೀವನ ನಡೆಸಬಹುದು” ಎಂದು ತಾಯಿ ಹೇಳಿದಾಗ ಮಗಳು ಮಂಜುಳ ಸಂತಸಪಟ್ಟು “ನಿನ್ನಿಂದ ಎಷ್ಟೋ ವಿಷಯ ತಿಳಿಯಿತಮ್ಮ” ಎಂದಳು.
ಅಷ್ಟರಲ್ಲಿ ಮಧ್ಯಾಹ್ನ ಒಂದು ಗಂಟೆ. ತಾಯಿಯನ್ನು “ಊಟಕ್ಕೇಳಮ್ಮ” ಎಂದು ಕರೆದು ತಾನು ಮಗಳು ತಾಯಿ ಮೂರು ಜನ ಕುಳಿತು ಊಟ ಮಾಡಿದರು.
-ಪಿ. ನಾಗರಾಜ (ರಾಧಾತನಯ), ಬೆಂಗಳೂರು
ಮೊ.: 9035711669