ಬದುಕಿದೆಯಾ ಬಡಜೀವವೇ….?

ಬದುಕಿದೆಯಾ ಬಡಜೀವವೇ....?ಬದುಕಿದೆಯಾ ಬಡಜೀವವೇ….? ಆತ ಬಲಶಾಲಿ ಮುದುಕ, ಕಲ್ಲಿನಲ್ಲಿ ಕಡೆದಂತಹ ಕಟ್ಟುಮಸ್ತಾದ ದೇಹ ಸುಮಾರು ಅರವತ್ತು ದಾಟಿರಬಹುದು. ಅತನಿಗೆ ಬುಧ್ದಿ ಬಂದಾಗಿಂದ ಬಹುಶಃ ಯಾವತ್ತು ಕೆಲಸವಿಲ್ಲದೆ ಮನೆಯಲ್ಲಿ ಕೂತಿರಲಿಕ್ಕಿಲ್ಲ. ಹರೆಯದ ಹುಡುಗರನ್ನು ನಾಚಿಸುವಂತಹ ಅಂಗಸೌಷ್ಠವ. ತರಾತುರಿಯಲ್ಲಿ ಬಂದಂತೆ ಕಾಣಿಸಿತು. ಕೇವಲ ಬನಿಯನ್ ಚಡ್ಡಿ ಧರಿಸಿದ್ದ, ಕೈಕಾಲು ಮಣ್ಣು ಮಣ್ಣು ಮುಖವೆಲ್ಲಾ ಧೂಳು ಧೂಳು.ಆತನ ಜೊತೆಯೋಬ್ಬ ಹದಿನೈದು ಹದಿನಾಲ್ಕರ ಹುಡುಗ ಬಹುಶಃ ಆತನ ಮೊಮ್ಮಗನಿರಬಹುದು ಎಂದುಕೊಂಡೆ.

ನನ್ನನ್ನೆ ನೋಡುತ್ತ ತಲೆಯ ಮೇಲೆಯ ಸಿಡಿಲುಬಿದ್ದಂತೆ, ಯಾವುದೋ ಇಷ್ಟವಿಲ್ಲದ ಕೆಲಸಕ್ಕೆ ಬಂದಂತೆ ಹುಡುಗನ ಮುಖದಲ್ಲಿನ ಭಾವಗಳು. ಆಸ್ಪತ್ರೆ ಕ್ಲಿನಿಕ್ಗಳಲ್ಲಿ ಮುದಿ ವಯಸ್ಸಿನವರನ್ನು ಆಸ್ಪತ್ರೆಗೆ ತಂದಾಗ ಹದಿವಯಸ್ಸಿನವರಿಗೆ ಬೇಸರ, ಯಾಕೆಂದರೆ ಮುದುಕರ ಹಿಂದೆ ಆಸ್ಪತ್ರೆ ಸುತ್ತುವುದುಕ್ಕಿಂತ ಗೆಳೆಯರೊಂದಿಗೆ ಕಾಲಹರಣದಂತಹ ಬಹುಮುಖ್ಯ ಕೆಲಸಗಳಿರುತ್ತವಲ್ಲ?

ಆ ರೋಗಿಯ ಸರದಿ ಬಂದಾಗ ವೃದ್ದ ತುಂಬಾ ಆತುರದಿಂದ ನನ್ನ ಮುಂದೆ ಬಂದು ಸುಮ್ಮನೆ ಕುಳಿತರೆ ಹುಡುಗ ಗಲ್ಲು ಶಿಕ್ಷೆಯ ಕೈದಿಯಂತೆ ಒಲ್ಲದ ಮನಸ್ಸಿನಿಂದ ಮೈಮುರಿಯುತ್ತ ನನ್ನ ಮುಂದೆ ನಿಂತು ಮೋಸಳೆಯಂತೆ ಬಾಯಿ ತೆಗದು ಜೋರಾಗಿ ಆಕಳಿಸಿ ಮೈಮುರಿಯುತ್ತ ನಿಂತು ಯೋಚಿಸಲಾರಂಭಿಸಿದ, ವೃದ್ಧ ಆತುರದಿಂದ ನಮ್ಮಿಬ್ಬರನ್ನೂ ದಿಟ್ಟಿಸಿ ನೋಡಲಾರಂಭಿಸಿದ. ಹುಡುಗನ ಜಾಡಿಸಿ ಒದ್ದು ಬಿಡುವಷ್ಟು ಕೋಪ ನನಗೆ ಬಂದರೂ ಸಹಿಸುತ್ತ ಹುಡುಗನುದ್ದೆಶಿಸಿ

“ ಅಪ್ಪಯ್ಯ ….ಏನಾದ್ರೂ ಹೇಳ್ತಿಯಾ …? ಇಲ್ಲಾ ಬರೀ ಆಕಳಸ್ತಿಯಾ? ಯಾರು ನಿಮ್ ತಾತಾ ನಾ? ಇವರು” ಎಂದೆ ಕೋಪದಿಂದ
ನನ್ನ ಕೊಪಕ್ಕೆ ಕೊಂಚವೂ ವಿಚಲಿತನಾಗದೆ ತನ್ನ ಆಕಳಿಕೆ ಪೂರ್ತಿಗೋಳಿಸಿ ಮೈಮುರಿದು
“ ಸರ್ ಅವ್ರಿಗೆ ಹುಳು ಮಟ್ಟ ್ಯದೆ..” ಎಂದ
“ ಅಂದ್ರೆ ….” ಎಂದೆ
“ ಅಷ್ಟು ಗೊತ್ತಾಗಲ್ವಾ ಸಾರ್? ….ಆತನ್ಕಾ ಹಾವ್‍ಕಚ್ಚೆದೆ” ಎಂದ
ನಾನು ಕುಂತ ಕುರ್ಚಿಯಿಂದ ಎರಡಡಿ ಎಗರಿದ್ದೆ .
ಸಾವರಿಸಿಕೊಳ್ಳುತ್ತ
“ ಹಾವು ಕಚ್ತಾ ಅಣ್ಣಾ ?” ಎಂದೆ ವೃದ್ಧನ ನೋಡುತ್ತ.
ವೃದ್ಧ ಸುಮ್ಮನೆ ಇದ್ದ.
“ ಅವ್ರಿಗೆ ಮಾತು ಬರೋಲ್ಲ ಸಾರ್ .. ಒಂದ್ ಸೆಪ್ಟಿಕ್ ಇಂಜಕ್ಷನ್ ಕೋಡಿ ಸಾರ್ “ ಎಂದ ಹುಡುಗ
ಅಷ್ಟರಲ್ಲಿ ನನ್ನ ಸಹನೆಯ ಕಟ್ಟೆಯೋಡದಿತ್ತು .
“ ಸರಿಯಾಗಿ ಮಾತಾಡತಿಯಾ ಇಲ್ಲ ?” ಎಂದೆ
ನನ್ನ ಕೋಪಕ್ಕೆ ಹುಡುಗ ಹೆದರಿದಂತೆ ಕಂಡ.
“ ಸಾರ್ ಅದು….. ಈಯಪ್ಪ ನಮ್ಮಗದ್ದೆಲಿ ಕೆಲಸಕ್ ಬರ್ತಾನೆ. ಈವತ್ತು ಕಳೆ ಕಿತ್ತಬೇಕಾರೆ ಹಾವು ಕಚ್ಬಿಡ್ತು ,ಅವ್ನು ಮೂಗ ಮಾತಾಡಲ್ಲ “ಎಂದಾಗ ನನ್ನ ಕೋಪ ಇಮ್ಮಡಿಯಾಯಿತು .
“ ಇಷ್ಟ ಮಾತು ಮುಂಚೆನೆ ಹೇಳಕ್ಕಾಗಲ್ಲಾ ನಿನಗೆ ..? ಸೆಗಣಿ ತಿಂತಿಯಾ…..? ಅದೇನು ಇರ್ವೆ ಕಚ್ದಂಗ್ ಮಾತಾಡ್ತಾ ಇದಿಯಲ್ಲಾ…. ನಾಚ್ಕೆ ಆಗಲ್ಲ ನಿನಗೆ.. ನೋಡಿದ್ರೆ ಎಜುಕೆಟೆಡ್ ತರಾ ಕಾಣಸ್ತಿಯಾ…? ಅತನಿಗೆ ವಯಸ್ಸಾಯ್ತು ಅಂತಾ ಉದಾಸೀನಾ ನಾ .?….. ನೀನು ಮುದ್ಕಾ ಆಯ್ತಿಯಾ ನೆನಪಿರಲಿ …ಹಿ ಎಂದು ನಾನು ಕಿರಚಾಡಲಾರಂಭಿಸಿದರೆ ಮೆಡಿಕಲ್ ಮಂಜಾ ಓಡುತ್ತ ಬಂದ ,
“ಸಾರ್ ಈ ಹುಡ್ಗ ಅವರಪ್ಪ ನನಗೋತ್ತು …ಪಕ್ದಳ್ಳಿಲಿ ಜಮಿನ್ದಾರ್ರು “ಎಂದ
“ಅಲ್ಲಾ ಮಂಜು.. ಜಮಿನ್ದಾರ್ ಮಗ ಅಂದ್ರೆ ಬುದ್ದಿ ಇಲ್ವಾ … ಎನ್ ಸೆಗಣಿ ತಿಂತಾನಾ..?.” ಎಂದೆ
“ಎನಾಯ್ತು ಸರಿಯಾಗಿ ಹೇಳೋ ಗೋಬೆ ನನ್ಮಗನೆ” ಎಂದು ಮಂಜು ಗದರಿದಾಗ ಹುಡುಗ ಭೂಮಿಗಿ ಇಳದಿದ್ದ .
“ ಇನ್ನು… ಅವ್ನೆಳೋದು ಏನೂ ಇಲ್ಲ ..” ಎನ್ನುತ್ತ ..ಹುಡುಗನ ನೋಡಿ
“ಏನ್ ನೋಡ್ತಾ ಇದಿಯಾ? ಹೋಗೋ ಅಚೆ” ಎಂದು ಗದರಲು ಹುಡುಗ ಆಚೆ ಹೋದ. ಆತನ ಮುಖ ನೋಡುವುದು ನನಗಿಷ್ಟವಿರಲಿಲ್ಲ. ಹಾವು ಕಚ್ಚಿಸಿಕೊಂಡ ಮೂಕ ವೃದ್ಧನ ನೋಡಲು ಅಣಿಯಾದೆ.

ಸುಮಾರು ವರ್ಷಗಳ ಹಿಂದಿನ ಘಟನೆಯಿದು ಬೆಂಗಳೂರಿನಿಂದ ಸುಮಾರು ದೂರದ ಹಳ್ಳಿಯೊಂದರಲ್ಲಿ ನಾನಾಗ ಚಿಕ್ಕ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದೆ. ಹಳ್ಳಿಗಾಡುಗಳಲ್ಲಿ ಹಾವು ಕಚ್ಚುವ ಘಟನೆಗಳು ಸಾಮಾನ್ಯವೆ.

ಕೆಲಸದಾಳಿಗೆ ಹಾವು ಕಚ್ಚಿದ್ದರೆ ಜಮೀನ್ದಾರ್ರು ಊರಲ್ಲಿರದ ಕಾರಣ ಅವರ ವಂಶೋದ್ಧಾರಕ ತಮ್ಮ ಹೊಲದ ಕೆಳಸದಾಳಿನ ಚಿಕಿತ್ಸೆಗೆ ನನ್ನ ಕ್ಲಿನಿಕ್‍ಗೆ ಬಂದು ಬೇಕಾಬಿಟ್ಟಿಯಾಗಿ ವರ್ತಿಸಲಾರಂಭಿಸಿದ್ದ. ಹುಡುಗನ ಬೇಜವಾಬ್ದಾರಿ ವರ್ತನೆ ಬಾಯಿ ಮಾತಿಲ್ಲದೆ ಕಿವಿಕೇಳಿಸದ, ಹಾವು ಕಚ್ಚಿಸಿಕೊಂಡ ವೃದ್ಧ ಎಲ್ಲ ವಿಷಯಗಳು ನನಗೆ ಅಗೋಚರ ಅಪಾಯದ ಮುನ್ಸೂಚನೆ ನೀಡಿದ್ದವು. ಜೊತೆ ಬಂದ ಹುಡುಗನ ಅಚೆಹಾಕಿ ವೃದ್ಧನ ದೇಹ ಪರೀಕ್ಷೆಗಿಳಿದೆ.

ಕಿವುಡು ಮೂಗ ವೃಧ್ದನಜೊತೆ ಹಾವ ಭಾವದ ಮೂಕಿ ಭಾಷೆ ಮಾತನಾಡುತ್ತ ಕೇಳಲು. ಅಳುತ್ತ ಬಗ್ಗಿ ಗುದ್ದಲಿಯಿಂದ ನೆಲ ಅಗಿಯುವಂತೆ ನಟಿಸುತ್ತ ಹಿಂದೇ ನೋಡುತ್ತ ಹಸ್ತವನ್ನು ನಾಗರ ಹೆಡಯಂತೆ ಮಾಡಿ ಜೋರುಜೋರಾಗಿ.. ಆ… ಆ. ಹಾ… ಹಾ.. ಹೂ ಹೂ..ಸ್ ಸ್… ಎಂದು ಸದ್ದು ಮಾಡುತ್ತ. ಹಿಂದಿನಿಂದ ಬಂದ ನಾಗರ ಹಾವು ಕಾಲಿಗೆ ಕಚ್ಚಿತು ಎಂದಂತೆ ಕಣ್ಣಿಗೆಕಟ್ಟುವಂತೆ ನಟಿಸಿದ ಮೂಕ ವೃದ್ಧ. ಬಲಗಾಲನ್ನು ಮುಂದೆ ಮಾಡಿದಾಗ ಕಾಲ್ಬೆರಳಿಂದ ಸ್ವಲ್ಪ ಮೇಲೆ ಬಲವಾಗಿ ಚಿವುಟಿದಂತೆ ಚರ್ಮ ನೀಲಿಯಾಗಿ ಸ್ವಲ್ಪವೇ ಊತ ಬಂದಂತಿತ್ತು.ಆದರೆ ಹಾವಿನ ಕೋರೆಹಲ್ಲುಗಳು ಚರ್ಮದಲ್ಲಿ ಇಳಿದ ಕುರುಹೇ ಇರಲಿಲ್ಲ. ಸೂಜಿಯಿಂದ ಚುಚ್ಚಿದಂತೆ ಅಕ್ಕಪಕ್ಕ ಎರಡುಚಿಕ್ಕ ರಂಧ್ರಗಾಳಾದರು ಇರಬೇಕಾಗಿತ್ತು, ಇರಲಿಲ್ಲ. ತುಂಬಾ ಗೋಂದಲಕ್ಕೀಡಾದೆ.

ವೃದ್ಧನಿಗೆ ಕಚ್ಚಿರುವುದು ವಿಷದ ಹಾವಾ?.. ವಿಷವಿಲ್ಲದಾ? ಎಂದು ನಿರ್ಧರಿಸುವುದು ತುಂಬಾ ಕಷ್ಟವಾಗತೂಡಗಿತು. ವಿಷವೇರಿದ ದೈಹಿಕ ಚಿಹ್ನೆಗಳೂ ಕಾಣಬರಲಿಲ್ಲ. ರಕ್ತದ ಒತ್ತಡ, ಹೃದಯದ ಬಡಿತ ಉಸಿರಾಟ ಮಾತುಕಣ್ಣಿನ ಪಾಪೆ ನಡೆದಾಟ, ಎಲ್ಲಿಯೂ ಆಂತರಿಕ ರಕ್ತಸ್ರಾವದ ಕುರುಹು ಕಾಣಲಿಲ್ಲ. ಗಟ್ಟಿ ದೇಹದ ವೃದ್ಧನ ದೇಹದಲ್ಲಿ ನೀಲಿ ಬಣ್ಣ ತಿರುಗಿದ ಕಾಲಿನ ಚರ್ಮ ಬಿಟ್ಟರೆ ಬೇರೆ ಯಾವ ಅವಲಕ್ಷಣಗಳು ಕಂಡುಬರಲಿಲ್ಲ. ಆದರೂ ವಿಷದ ಮೇಲೆ ಭರವಸೆ ಮಾಡಲಾಗದು, ನಿಧಾನವಾಗಿ ಏರಿದರೆ ಹೇಗೆ ಮೂಗನೆಂದು ಉದಾಸೀನ ಮಾಡಲಾಗದು. ಆತನೂ ಮನುಷ್ಯನೆ ತಾರತಮ್ಯ ಮಾಡಿ ವೃತ್ತಿಗೆ ದ್ರೋಹ ಬಗೆಯಾಗಬಾರದೆಂದು. ಜಮಿನ್ದಾರರ ಕುಲ ಪುತ್ರನ ಕರೆದು

“ನೋಡಪ್ಪಾ ಹಾವು ಕಚ್ಚಿರೋದ್ನಾ ಯಾರೂ ನೋಡ್ಲಿಲ್ಲ, ಆದರೆ ಪೆಷೆಂಟ್ ಹೇಳೋದ್ನಾ ನೋಡಿದ್ದರೆ ಹಾವು ಕಚ್ಚಿದೆ ಅನ್ಸುತ್ತೆ. ಅದು ನಾಗರ ಹಾವು. ಹಿ ಎನ್ನುವಷ್ಟರಲ್ಲಿ
“ಸಾರ್ ನಾಗರ ಹಾವೇ ಅಂತ ಎಂಗೆಳ್ತಿರಾ? “ ಎಂದ ಹುಡುಗ
“ಆತ್ನೆ ಕೈ ಮಾಡಿ ತೋರ್ಸುದ್ನಲ್ಲಪ್ಪಾ. ನಾಗರ ಹಾವಿನ ಹೆಡೆತರಾ..” ಎಂದು ನಾನು ಹಸ್ತದಿಂದ ಹೆಡೆಮಾಡಿ ತೋರಿಸಿದೆ .
“ಹೋ ಈ ಮೂಗ ಹೇಳ್ದಾ… ನೀವ್ ಕೇಳಬುಟ್ರೀ ವಿ ಎಂದು ಗೋಣಗಾಡಲಾರಾಂಭಿಸಿದ. ನನ್ನ ಕೋಪ ನೆತ್ತಿಗೇರಲು ಹಾಗೂ ಹೀಗೂ ಸಹಿಸಿಕೊಂಡು .
“ನೋಡ ಪುಟ್ಟಾ ತಿರಗಾ ಮುರಗಾ ಅದೆತರಾ ಮಾತಾಡುದ್ರೆ ನಾನೇನು ಮಾಡಕ್ಕಾಗಲ್ಲ… ಇರಲಿ…… ಹಣ ಜಮೀನು ಸಂಪಾದ್ನೆ ಮಾಡಬಹುದು ಆದ್ರ ಒಳ್ಳೆ ಬುದ್ಧಿ… ಜನಗೋಳ್ ಜೊತೆ ಮಾತಾಡೋದು ಅಸ್ಟ ಸಲೀಸಾಗಿ ಸಿಗಲ್ಲ ನೋಡು. ಕೋಣನ ಮುಂದೆ ಬಾರ್ಸತಾ ನಿಂತ್ಕೋಳೋಕ್ಕೆ ಆಗಲ್ಲ. ನನಗಂತು ವಿಷದ ಹಾವೆ ಕಚ್ಚಿದೆ ಅನ್ಸುತ್ತೆ.. ಡೌಟೆ ಇಲ್ಲ ಯಾವ ಟೈಮಲ್ಲಾದ್ರೂ ಪೇಷಂಟ್ ಸೀರಿಯಸ್ ಆಗಬಹುದು, ಐಸಿಯು ಬೇಕಾಗ್ಬಹುದು ಈಗ ನಾಲಕ್ಕ ಗಂಟೆ. ಲೆಟರ ಬರ್ಕೊಡ್ತಿನಿ ಮೆಡಿಕಲ್ ಕಾಲೆಜಲ್ಲಿ ಅಡ್ಮಿಟ್ ಮಾಡಿ, ಅಕಸ್ಮಾತ್ ಏನಾದ್ರೂ ಹೆಚ್ಚು ಕಮ್ಮಿ ಆದ್ರ ಕಷ್ಟಾ. ಹಿ ಎಂದು ರೆಫರಲ್ ಲೆಟರ್ ಬರೆಯಲಾರಂಭಿಸಿದೆ.
“ಅಲ್ಲಾ ಸಾರ್ ಏನೂ ಅಗಿಲ್ಲಾ ಅಂದ್ರೆ ಸುಮ್ನೆ ಅಡಮಿಟ್ ಮಾಡ್ದಂಗಲ್ವಾ…? ಸುಮ್ಮನೆ ಮೆಡಿಕಲ್ ಕಾಲೇಜಿಗೆ ಹೋಗಬೇಕು… ಇಲ್ಲಿಂದ ಮೂವತ್ತು ಕಿಲೋಮೀಟರ್ ದೂರ…. ಅಪ್ಪಾ ಬೇರೆ ಊರಲಿಲ್ಲ, ಒಂದ ಇಂಜಕ್ಷನ್ ಕೊಡಿ ಅಪ್ಪಾ ಬಂದ್ ಮೇಲೆ ನೋಡೋಣ” ಎಂದ
ನಾನು ಕೋಣನ ಮುಂದೆ ಕಿನ್ನರಿಬಾರಿಸುವುದು ಲೇಸಲ್ಲವೆಂದು ಕೋಪ ಬಿಟ್ಟು .
“ಅದು ಹಾವು ಕಚ್ಚಿರೋದು…. ಇಲಿ ಅಲ್ಲ. ವಿಷ ನಿಮ್ತಂದೆ ಬರೋ ವರ್ಗೂ ಕಾಯಲ್ಲ. ಚೀಟಿ ತಗೋ ಸೀದಾ ಮೆಡಿಕಲ್ ಕಾಲೇಜಗೆ ಹೋಗು. ಇನ್ನು ಸುಮಾರು ಎರಡ್ಮೂರು ಬಸ್ಸು ಇವೆ ವಿ ಎಂದು ಚೀಟಿ ಕೊಡಲು ಒಲ್ಲದ ಮನಸ್ಸಿನಿಂದ ಮುಳ್ಳು ಹಿಡಿದಂತೆ ಚೀಟಿ ಜೇಬಿನಲ್ಲಿಳಿಸಿ ವೃದ್ಧನನ್ನು ದುರುಗುಟ್ಟಿ ನೋಡುತ್ತ
“ ಆಯ್ತು ಸಾರ್ ಮನೆಗೆ ಹೋಗಿ ಜೊತೆಗೆ ಇವರ ಮನೆಯವ್ರನಾ ಕಕೋರ್ಂಡ್ ಮೇಡಿಕಲ್ ಕಾಲೇಜಿಗೆ ಹೋಗ್ತಿನಿ ವಿ ಎಂದು ಹೋಗಿಬಿಟ್ಟ. ನನಗೆ ಸಮಾಧಾನವಾಯಿತು.

ನಾನು ಮರುದಿನ ಕ್ಲಿನಿಕ್ ರಜಾ ಹಾಕಿ ಎಲ್ಲೋ ಹೋಗಿದ್ದೆ. ಸಂಜೆ ಮರಳಿದ ಮೇಲೆ ಗೊತ್ತಾಯಿತು. ಕ್ಲಿನಿಕ್ ಮುಂದೆ ಜನ ಸೇರಿ ಗಲಾಟೆ ಮಾಡಲು ಬಂದಿದ್ದರಂತೆ. ಹುಡುಗ ವೃದ್ಧನನ್ನು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಒಯ್ಯದೆ

‘`ಚೆನ್ನಗಿದ್ದಾನೆ. ವಿಷದ ಹಾವಲ್ಲ ಎಂದು ಡಾಕ್ಟರ್ ಹೇಳಿದ್ರು ಎಂದು ವೃದ್ದನ ಮಡದಿಗೆ ಹೇಳಿ. ವೃದ್ದನಿಗೆ ಲಂಚದ ರೂಪದಲ್ಲಿ ಒಂದ ಬಾಟಲ್ ಸಾರಾಯಿ ಕೊಡಿಸಿದನಂತೆ. ಕುಡಿದು ಮಲಗಿದ ಮುದುಕ ಚಿರ ನಿದ್ರೆಗೆ ಹೋಗಿದ್ದ. ಬೆಳಿಗ್ಗೆ ವೃದ್ಧ ಏಳಲಿಲ್ಲ ಆತನನ್ನು ಎತ್ತಲಾಯಿತು. ಆತನ ಸಾವಿನ ಕಾರಣ ನನ್ನ ತಲೆಗೆ ಕಟ್ಟಲಾಯಿತು. ಊರ ಜನರೆಲ್ಲಾ ಆವತ್ತೇ ಪಂಚಾಯತಿ ಸೇರಿ ಜಮೀನ್ದಾರರೂ ವೈದ್ಯರೂ (ನಾನು) ಮೃತ ವೃದ್ಧನ ಕುಟುಂಬಕ್ಕೆ ತಲಾ ಐವತ್ತು ಸಾವಿರ ಪರಿಹಾರ ಕೊಡಬೇಕೆಂದು ಠರಾವು ಮಂಡಿಸಲಾಗಿ ಕುಪಿತ ಜಮೀನ್ದಾರರು ತಮ್ಮ ಬುಧ್ದಿವಂತ ಕುಲಪುತ್ರನ ಹಾಗೂ ಊರ ಕೆಲ ನಾಗರಿಕರ ಜೊತೆ ನನ್ನ ಕ್ಲಿನಿಕ್ಗೆ ದಂಡೆತ್ತಿ ಬಂದಿದ್ದರಂತೆ.

ವೃದ್ಧನ ಸಾವಿಗೆ ಕಾರಣನಾದ ನನ್ನನ್ನು ಬೈದು ಬಹಶಃ ನಾಲ್ಕು ತದಕಿ ಕಾಸು ಕಿತ್ಕೊಳ್ಳಲು ಬಂದಾಗ ಕ್ಲಿನಿಕ್ನಲ್ಲಿ ನಾನಿರದಿದ್ದುದು ಜಮೀನ್ದಾರರಿಗೆ ಇನ್ನೂ ಕೋಪ ತರಿಸಲು. ಪಕ್ಕದಲ್ಲಿಯೇ ಇದ್ದ ನನ್ನ ಕ್ಲಿನಿಕ್‍ನ ಕಂಪೌಂಡರ್, ಮ್ಯಾನೆಜರ್, ಸ್ವೀಪರ್. ಅಂದರೆ ಕ್ಲಿನಿಕ್ನ ಆಯಾ ಶಿವಮ್ಮಳನ್ನು ಕರೆಯಿಸಲಾಯಿತಂತೆ.
ಶಿವಮ್ಮ ಬಂದವಳೆ ಜಮೀನ್ದಾರರ ಮಗನ ನೋಡಿ

“ಅಪ್ಪಯ್ಯ… ತಾತನು ಚೆನ್ನಾಗಿ ಅವ್ನಾ?….. ಮೇಡಿಕಲ್ ಕಾಲೆಜಿಗೆ ಯಾವಾಗ ಹೋದೆ? ಡಾಕ್ಟರ್ ಚೀಟಿ ತೋರ್ಸದಾ?” ಎಂದಾಗ ಹುಡುಗ ತಡವರಿಸಲಾರಂಭಿಸಿದರೆ ಎಲ್ಲವನ್ನೂ ಅರ್ಥೈಸಿಕೊಂಡ ಜಮೀನ್ದಾರರು ಶಿವಮ್ಮನ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿ. ವೃದ್ದನ ಸಾವಿಗೆ ವೈದ್ಯರೇ ಕಾರಣ ಎಂದು ಜೊತೆ ಬಂದ ಊರ ಜನರೊಂದಿಗೆ ವಾದ ಮಂಡಿಸಲು, ಶಿವಮ್ಮನಿಗೆ ಕೋಪ ಬಂದು ಒಂದೆ ಉಸಿರನಲ್ಲಿ ಹಿಂದಿನ ದಿನದ ವೃತ್ತಾಂತವನ್ನು ಜೊತೆ ಬಂದವರ ಮುಂದೆ ಹೇಳಿದಳಂತೆ. ಜಮಿನ್ದಾರರ ಮಗನನ್ನು ಊರಜನ ಗದರಿ ಕೇಳಲು ಆತ ಬಾಯಿ ಬಿಟ್ಟನಂತೆ. ರಫರಲ್ ಲೆಟರ್ ಹರಿದು ಹಾಕಿ ಮನೆಯಲ್ಲಿ ಸುಳ್ಳು ಹೇಳಿ ಮೂಕ ವೃದ್ಧನಿಗೆ ಸಾರಾಯಿ ಕುಡಿಯಲು ಕಾಸು ಕೊಟ್ಟಿದ್ದು ಒಪ್ಪಿಕೊಂಡನಂತೆ. ಊರಜನ ಶಿವಮ್ಮನ ಹತ್ತಿರ ಕ್ಷಮೆ ಕೇಳಿ. ಇನ್ನೊಂದು ಪಂಚಾಯ್ತಿ ಸೇರಿಸಬೇಕೆಂದು ಮಾತನಾಡುತ್ತ ಹೊರಟು ಹೋದರಂತೆ.

ಇದೆಲ್ಲ ಶಿವಮ್ಮ ಹೇಳಿದಾಗ ನಾನು ಮೂಕನಾಗಿದ್ದೆ.

ಡಾ. ಸಲೀಮ್ ನದಾಫ್‌
ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!