ಆರೋಗ್ಯಕರ ಆಹಾರ ಹೊಸ ಯುಗದ ಔಷಧಿ. ಇಂದಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರೋಗ್ಯಕರವಾಗಿರಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಖಡ್ಡಾಯವಾಗಿದೆ.
ಆರೋಗ್ಯ ಕ್ಷೇತ್ರದ ಬಹುತೇಕ ಪ್ರತಿನಿಧಿಗಳು ಯಾವ ರೋಗಗಳಿಗೆ ಯಾವ ಔಷಧಿ ಪರಿಣಾಮಕಾರಿ ಎಂದು ತಿಳಿಸುತ್ತಾರೆ. ಅಲ್ಲದೇ ನಿಮ್ಮ ಆನಾರೋಗ್ಯಕ್ಕೆ ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಹೊಚ್ಚ ಹೊಸ ಔಷಧಿಗಳ ಬಗ್ಗೆಯೂ ಸಹಾ ಮಾಹಿತಿಯನ್ನು ನೀಡುತ್ತಾರೆ. ಆದರೆ ಬಹುತೇಕರು ಯಾವ ಕಾಯಿಲೆಗೆ ಯಾವ ಆಹಾರವನ್ನು ಯಾವ ರೀತಿಯಲ್ಲಿ ಸೇವಿಸಬೇಕೆಂದು ತಿಳಿಸುವುದಿಲ್ಲ. ಯಾವುದೇ ಔಷಧ ತಯಾರಿಕಾ ಕಂಪನಿಗಳೂ ಸಹಾ ಎಷ್ಟೇ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರೂ ಎಂಥದ್ದೇ ರೋಗಕ್ಕೆ ಔಷಧಿ ಕಂಡುಹಿಡಿದಿದ್ದರೂ ಸಹಾ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗದಂತೆ ತಡೆಯಲು ಅಸಮರ್ಥರು. ಹಾಗಾಗಿ ಈ ಕಾಲದಲ್ಲಿ ಆಹಾರವೇ ಔಷಧಿ ಎಂಬ ಅಂಶವನ್ನು ತಿಳಿದುಕೊಳ್ಳಲು ಇದು ಸುಸಮಯ.
ತಿನ್ನುವ ಆಹಾರ ಆರೋಗ್ಯದ ಮೇಲೆ ಪರಿಣಾಮ:
ಹೆಚ್ಚಿನ ರೋಗಗಳು ನಮ್ಮ ಜೀವನಶೈಲಿಯ ಆಯ್ಕೆಗಳಿಂದಲೇ ಆಗುತ್ತಿವೆ. ಏಕೆಂದರೆ ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಸಮತೋಲಿತ ಆಹಾರ ಸೇವನೆಯು ನಮ್ಮ ದೇಹವು ರೋಗಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. ಮನೆಯಲ್ಲಿಯೇ ಮಾಡಿಕೊಳ್ಳುವ ಆಹಾರವು ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದು ಆರೋಗ್ಯಕ್ಕೆ ಹಿತರಕರವಾಗಿದ್ದರೂ, ಈಗಿನ ತೀವ್ರತರವಾದ ಕೆಲಸದ ಒತ್ತಡದಿಂದ ಮನೆಯಲ್ಲಿ ಆಹಾರ ತಯಾರಿಸಿಕೊಳ್ಳುವುದೇ ಹೆಚ್ಚಿನವರಿಗೆ ದುಸ್ತರವಾಗುತ್ತಿದೆ. ಇಂದಿನ ಕಾಲದಲ್ಲಿ ವೃದ್ದಾಪ್ಯದಿಂದ ಸಾಯುವವರಿಗಿಂತಲೂ ಹೆಚ್ಚಾಗಿ ಇತರ ರೋಗ ಅಥವಾ ಕಾಯಿಲೆಗಳಿಗೆ ತುತ್ತಾಗಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಹಿಂದಿನ ಕಾಲದಿಂದಲೂ ಎಲ್ಲರೂ ವೈದ್ಯರು ಹೇಳುವ ಪದ್ಧತಿಯನ್ನೇ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಅವರ ಮೇಲೆ ಅಷ್ಟೊಂದು ವಿಶ್ವಾಸ. ಆದರೆ ಅವರಲ್ಲಿ ಹೆಚ್ಚಿನªರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಆಹಾರಕ್ರಮಗಳ ಬಗ್ಗೆ ಸಲಹೆ ನೀಡಲು ಇನ್ನೂ ಸರಿಯಾಗಿ ತರಬೇತಿ ಪಡೆದಂತಿಲ್ಲ. ಆನಾರೋಗ್ಯವಿದ್ದಾಗ ಏನಾದರೂ ತಿನ್ನಬೇಕು ಹಾಗೂ ವೈದ್ಯರು ಕೊಟ್ಟ ಔಷಧಿಯನ್ನು ತೆಗೆದುಕೊಳ್ಳಬೇಕು; ಆಗ ಮಾತ್ರ ಸರಿಯಾಗುತ್ತದೆ ಎನ್ನುವ ವಿಶ್ವಾಸದಲ್ಲಿಯೇ ಇದ್ದಾರೆ ಬಹಳಷ್ಟು ಜನರು. ಇದರ ಪರಿಣಾಮ ಜಗತ್ತಿನಲ್ಲಿ ಒಂದು ಟ್ರಿಲಿಯನ್ ಡಾಲರ್ ಹಣವು ಕೇವಲ ಗುಳಿಗೆ, ಮಾತ್ರೆಗಳಂತವುಗಳಿಗೇ ಖರ್ಚಾಗುತ್ತಿದೆ. ಇದು ಡಿಸ್ಕ್ರಿಪ್ಶನ್ಗಳ ವ್ಯಾಪಕ ಬಳಕೆಯನ್ನು ಸೂಚಿಸುತ್ತದೆ.
ಒಂದು ಸಂಶೋಧನೆಯ ಪ್ರಕಾರ ನಮ್ಮ ರೋಗಗಳಲ್ಲಿ ಶೇಕಡಾ 80ರಷ್ಟು ಕೇವಲ ದೋಷಯುಕ್ತ ಆಹಾರ ಪದ್ದತಿಯ ಪರಿಣಾಮದಿಂದಲೇ ಉಂಟಾಗುತ್ತಿವೆಯಂತೆ! ಇತ್ತೀಚಿನ ದಶಕಗಳಲ್ಲಿ ನಮ್ಮ ಜೀವಿತಾವಧಿಯೇನೋ ಹೆಚ್ಚಾಗಿದೆ; ಆದರೆ ಆರೋಗ್ಯಕರ ಅವಧಿ ಮಾತ್ರ ಹೆಚ್ಚಾಗಿಲ್ಲ. ಕಳೆದ 3-4 ದಶಕಗಳ ಹಿಂದೆ ಇದ್ದ ಭಯಾನಕ ಕಾಯಿಲೆಗಳು ಇಂದು ಸಾಮಾನ್ಯ ಕಾಯಿಲೆಯಾಗಿವೆ. ಆದರೆ ನಮ್ಮ ಜೀವನಶೈಲಿಯಿಂದಾಗಿ ಗಂಭೀರ ಕಾಯಿಲೆಯೇ ಅಲ್ಲವಾಗಿದ್ದ ಹೃದಯಾಘಾತ, ಕ್ಯಾನ್ಸರ್ ಹಾಗೂ ಶ್ವಾಸಕೋಶದ ಕಾಯಿಲೆಗಳಲ್ಲಿ ಗಮನಾರ್ಹ ಏರಿಕೆಯಾಗಿವೆ. ಆ ಕಾಲದಲ್ಲಿ ಜನರಿಗೆ ಸರಿಯಾದ ಪೌಷ್ಟಿಕಾಂಶಗಳ ಕೊರತೆಯಿಂದ ಕಾಯಿಲೆ ಬಾಧಿಸುತ್ತಿದ್ದರೆ ಇಂದು ಹೆಚ್ಚಿ ಪೌಷ್ಟಿಕಾಂಶ ಸೇವನೆಯಿಂದಲೇ ಕಾಯಿಲೆ ಬೀಳುತ್ತಿದ್ದಾರೆ.
ಕಾಯಿಲೆ ಪ್ರಾಣಿಜನ್ಯ ಹಾಗೂ ಸಂಸ್ಕರಿಸಿದ ಆಹಾರಗಳಿಂದಲೇ ಹೆಚ್ಚುತ್ತಿದೆ:
ದೀರ್ಘಕಾಲದ ಕಾಯಿಲೆಗಳ ಸಾಂಕ್ರಾಮಿಕವು ಹೆಚ್ಚಾಗಿ ಪ್ರಾಣಿಜನ್ಯ ಹಾಗೂ ಸಂಸ್ಕರಿಸಿದ ಆಹಾರಗಳಿಂದಲೇ ಹೆಚ್ಚುತ್ತಿದೆ. ಅಂದರೆ ಅತಿಹೆಚ್ಚು ಮಾಂಸ ಸೇವನೆ, ಸಕ್ಕರೆ, ಎಣ್ಣೆ, ಸೋಡಾ ಇತ್ಯಾದಿ. ಹಾಗೆಯೇ ಪ್ಯಾಕೇಟ್ ಮಾಡಿರುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು, ಬೀಜಗಳಿಂದ ಸಂಸ್ಕರಿಸಿದ ಕಾರ್ಬೋಹೈಡ್ರೈಟುಗಳು, ಪ್ಯಾಕೇಜ್ ಮಾಡಿದ ತಿಂಡಿಗಳು ಮತ್ತು ತ್ವರಿತ ಆಹಾರಗಳಿಗಾಗಿ ಮಾಡಿರುವ ಬದಲಾವಣೆಗಳು ಅನಾರೋಗ್ಯಕರ ಜೀವನಕ್ಕೆ ದೊಡ್ಡ ಕಾರಣವಾಗಿದೆ. ಈ ಜೀವನಶೈಲಿಯಿಂದ ಬರುವ ರೋಗಗಳಿಗೇ ತಯಾರಿಸಲಾಗಿರುವ ಮಾತ್ರೆಗಳು, ಔಷಧಿಗಳು ನಿರ್ದಿಷ್ಟ ಕಾರ್ಯಗಳನ್ನು ಮಾತ್ರವೇ ಮಾಡುತ್ತವೆ. ಹೆಚ್ಚು ಕಮ್ಮಿಯಾದರೆ ಇದರಿಂದ ಅಪಾಯಕಾರಿ ಅಡ್ಡಪರಿಣಾಮ ಸಾಧ್ಯತೆಯೂ ಇರುತ್ತದೆ.
ಕೆಲವು ವೈದ್ಯರು ಕಾಯಿಲೆಯ ಮೂಲಕಾರಣವನ್ನು ನಿವಾರಿಸದೇ ಕೇವಲ ನಿರ್ದಿಷ್ಟ ರೋಗದ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆಯನ್ನು ನೀಡುತ್ತಾರೆ. ಮತ್ತೊಂದೆಡೆ ಆರೋಗ್ಯಕರ ಆಹಾರವು ದೇಹದ ಎಲ್ಲಾ ಅಂಗ ವ್ಯವಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ದೀರ್ಘಕಾಲದ ಕಾಯಿಲೆಗಳನ್ನು ಉತ್ತಮವಾಗಿ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಂಪೂರ್ಣ ಆಹಾರ ಅದರಲ್ಲಿಯೂ ಸಸ್ಯಜನ್ಯವಾದ ಆಹಾರಗಳು ಅತ್ಯುತ್ತಮ. ಅದಾಗ್ಯೂ ಬಹುತೇಕ ಜನರು ಉತ್ತಮ ಪೌಷ್ಟಿಕಾಂಶದ ಸಂಪೂರ್ಣ ಆಹಾರ ಸೇವನೆಯನ್ನು ನಿರ್ಲಕ್ಷಿಸುತ್ತಾರೆ ಹಾಗೂ ಸಕ್ರೀಯ ಜೀವನದ ಮೂಲಕ ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವ ಬದಲು ತಾತ್ಕಾಲಿಕವಾದ ತ್ವರಿತ ಶಮನ ಔಷಧವನ್ನೇ ಅವಲಂಭಿಸುತ್ತಾರೆ.
ಇಂದಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರೋಗ್ಯಕರವಾಗಿರಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಖಡ್ಡಾಯವಾಗಿದೆ. ಜೀವನ ಶೈಲಿಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು ನಿಮ್ಮ ಆಹಾರ ಪದ್ದತಿಗಳಲ್ಲಿ ಸೇರಿಸಿಕೊಳ್ಳಲೇಬೇಕಾದ 9 ಅತಿಮುಖ್ಯ ಆಹಾರ ಪದಾರ್ಥಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
1. ಈರುಳ್ಳಿ: ಈರುಳ್ಳಿಯಲ್ಲಿರುವ ಸಲ್ಫರ್ ಎನ್ನುವ ಸಂಯುಕ್ತಗಳು ಶೀತ ಹಾಗೂ ಜ್ವರ ಸಂಬಂಧಿತ ನೋವು, ಉರಿಯೂತಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಈರುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ಹೃದಯ ಕಾಯಿಲೆಯ ಅಪಾಯವನ್ನೂ ತಪ್ಪಿಸುತ್ತದೆ. ಈರುಳ್ಳಿಯು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಇದರ ಸೇವನೆ ಮಧುಮೇಹ ಹೊಂದಿರುವವರಿಗೆ ಮಹತ್ವದ್ದಾಗಿದೆ. ಕರುಳಿನ ಆರೋಗ್ಯಕ್ಕೂ ಅಗತ್ಯವಾಗಿರುವ ಈರುಳ್ಳಿಯಲ್ಲಿ ದೇಹವನ್ನು ಸುಸ್ಥಿತಿಯಲ್ಲಿಡುವ ನಾರಿನ ಅಂಶವೂ ಹೇರಳವಾಗಿವೆ.
2. ಅರಿಶಿನ: ಅರಿಶಿನವು ಉರಿ ಊತವನ್ನು ಕಡಿಮೆ ಮಾಡಬಲ್ಲ ಶಕ್ತಿಶಾಲಿ ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುತ್ತದೆ. ಹೃದ್ರೋಗಗಳ ಅಪಾಯವನ್ನೂ ಮತ್ತಷ್ಟು ಕಡಿಮೆ ಮಾಡುವುದರಲ್ಲಿ ಅರಿಶಿನದ ಪಾತ್ರವೂ ಇದೆ. ಕರ್ಕ್ಯುಮಿನ್ ಅನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಸಸ್ಯವೆಂದು ಅಧ್ಯಯನ ಮಾಡಲಾಗಿದೆ. ಇದು ಕ್ಯಾನ್ಸರ್ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ಅಂಶ ಕಂಡುಬಂದಿದೆ.
3. ಅಲೋವೇರಾ: ಅಲೋವೆರಾ ಅಥವಾ ಲೋಳೆಸರವನ್ನು ಶತಶತಮಾನಗಳಿಂದಲೂ ಔಷಧೀಯ ಸಸ್ಯವೆಂದೇ ಬೆಳೆಸಿಕೊಂಡು ಬರಲಾಗಿದೆ. ಇದರಲ್ಲಿ ಪಾಲಿಫಿನಾಲ್ಸ್ ಎಂದು ಕರೆಯಲ್ಪಡುವ ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ ಇದರಲ್ಲಿದೆ. ಉರಿಯೂತ, ಸಂಧಿವಾತದ ನೋವು, ಹುಣ್ಣುಗಳನ್ನು ಹಾಗೂ ವಿವಿಧ ರೀತಿಯ ಜೀರ್ಣಕಾರಿ ಗುಣಪಡಿಸಲು ಅಲೋವೇರ ಬಹಳ ಉಪಯುಕ್ತ. ಇದು ಹೃದಯಾಘಾತ ಹಾಗೂ ಪಾಶ್ರ್ವವಾಯುಗಳನ್ನು ಕಡಿಮೆ ಮಾಡುತ್ತದೆ ಹಾಗೂ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
4. ಪಾಲಕ್ ಸೊಪ್ಪು: ಇದು ಪೋಷಕಾಂಶಗಳ ಕಣಜ. ಇದರಲ್ಲಿ ಕಬ್ಬಿಣ, ಕ್ಯಾಲ್ಶಿಯಂ ಹಾಗೂ ಮೆಗ್ನೀಷಿಯಂ ಹೇರಳವಾಗಿವೆ. ಪಾಲಕ್ದಲ್ಲಿ ಅಲ್ಫಾ-ಲಿಪೋಯಿಕ್ ಎನ್ನುವ ಆಮ್ಲವಿದ್ದು ಇದು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ನಿರ್ವಹಣೆಗೆ ಉತ್ತಮ ಆಹಾರ. ಪಾಲಕ್ ಬೀಟಾ ಮತ್ತು ಕ್ಯಾರೋಟಿನ್ ಮೂಲವಾಗಿರುವುದರಿಂದ ಅಸ್ತಮಾ ರೋಗಿಗಳಿಗೆ ಚಿಕಿತ್ಸೆಯಲ್ಲಿ ಬಹಳ ಉಪಯುಕ್ತವಾಗಿವೆ. ನಾರು ಮತ್ತು ನೀರಿನಾಂಶ ಹೆಚ್ಚಾಗಿರುವುದರಿಂದ ಜೀರ್ಣಾಂಗವ್ಯೂಹದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಉತ್ತಮವಾಗಿದೆ ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ.
5. ಬ್ರೊಕೋಲಿ: ಇದರಲ್ಲಿ ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಮಿನರಲ್ಗಳು ಸಮೃದ್ಧವಾಗಿವೆ. ಬ್ರೊಕೋಲಿಯಲ್ಲಿರುವ ಸಲ್ಫಾರಾಫೆನ್ ಪರಿಣಾಮದಿಂದ ಟೈಪ್ 1 ಡಯಾಬಿಟೀಸ್ ಹಾಗೂ ಸಂಧಿವಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ ಬ್ರೊಕೋಲಿ. ಕ್ಯಾಲ್ಶಿಯಂ ಹಾಗೂ ಕೊಲೊಜನ್ ಸಕ್ರೀಯವಾಗಿ ಇರುವುದರಿಂದ ಮೂಳೆಗಳ ಆರೋಗ್ಯಕ್ಕೂ ಸಹಕಾರಿ. ವಿಟಮಿನ್ ಕೆ ಹೆಚ್ಚಾಗಿ ಇರುವುದರಿಂದ ಆಸ್ಟಿಯೋ ಪೊರೊಸಿಸ್ ಚಿಕಿತ್ಸೆಗೆ ಸಹಾಯಕವಾಗಿದೆ.
6. ತೊಗರಿಬೇಳೆ: ಇದು ಪ್ರೋಟಿನ್, ಫೈಬರ್, ಪೊಟ್ಯಾಸಿಯಮ್ ಮತ್ತು ಫೋಲಿಕ್ ಆಮ್ಲದ ಸಮೃದ್ಧ ಮೂಲವಾಗಿದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ರಕ್ತದೊತ್ತಡ ಇರುವ ರೋಗಿಗಳಿಗೆ ಉತ್ತಮ ಆಹಾರವಾಗಿದ್ದು, ಇದರಲ್ಲಿರುವ ಪೊಟ್ಯಾಸಿಯಮ್, ಮೆಗ್ನಿಶಿಯಮ್ ಹಾಗೂ ಕ್ಯಾಲ್ಶಿಯಂ ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶದಿಂದ ಜೀರ್ಣಾಂಗವ್ಯೂಹ ಹಾಗೂ ಕರುಳಿನ ಚಲನೆಯಲ್ಲಿ ಬಹಳ ಸಹಾಯಕವಾಗಿದೆ.
7. ಕಮಲದ ದಿಂಡು: ಬಹಳಷ್ಟು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕಮಲದ ದಿಂಡು ಒಂದು ರಾಮಬಾಣ. ಯುಗಯುಗಗಳಿಂದಲೂ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಇದನ್ನು ಮೂತ್ರವರ್ಧಕವಾಗಿ, ಶಿಲೀಂದ್ರ ನಾಶಕವಾಗಿ, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಸ್ಟಿರಾಯ್ಡ್, ಆ್ಯಂಟಿ ಕ್ಯಾನ್ಸರ್, ಬೊಜ್ಜು ನಿವಾರಣೆ ಹೀಗೆ ವಿವಿಧ ರೋಗಗಳಿಗೆ ಬಳಸುತ್ತಾರೆ. ಕಮಲದ ದಿಂಡು ಮೆದುಳಿನ ಬೆಳವಣಿಗೆ ಹಾಗೂ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
8. ಟೊಮೆಟೊ: ವಿಟಮಿನ್ ಸಿ ಹಾಗೂ ಆ್ಯಂಟಿ ಒಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ ಟೊಮೆಟೋ ಕ್ಯಾನ್ಸರ್, ಮಧುಮೇಹ ಹಾಗೂ ಹೃದ್ರೋಗವನ್ನು ತಪ್ಪಿಸಲು ಅತ್ಯುತ್ತಮವಾಗಿದೆ. ಟೊಮೆಟೋದಲ್ಲಿರುವ ಬೀಟಾ ಕ್ಯಾರೋಟಿನ್ ಹಾಗೂ ಲೈಕೋಪೀನ್ ಅಂಶವು ಪ್ರಾಸ್ಟೆಟ್ ಹಾಗೂ ಕ್ಯಾನ್ಸರ್ ಅನ್ನು ತಡೆಯುತ್ತದೆ. ಪೊಟ್ಯಾಸಿಯಂ ಹಾಗೂ ಕೊಲಿನ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ರಕ್ತದಲ್ಲಿರುವ ಸಕ್ಕರೆ, ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಪರಿಶೀಲಿಸುತ್ತದೆ. ಕಡಿಮೆ ಶಕ್ತಿಯನ್ನು ಹಾಗೂ ಬೊಜ್ಜನ್ನು ಹೊಂದಿರುವವರಿಗೆ ಟೊಮೆಟೋ ಅತ್ಯಂತ ಪೌಷ್ಟಿಕ ಆಹಾರ.
9. ಬೆಳ್ಳುಳ್ಳಿ: ಬೆಳ್ಳುಳ್ಳಿಯು ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು ಹೃದಯ ರಕ್ಷಣೆ ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಫೈಟೊಕೆಮಿಕಲ್ ಎನ್ನುವ ಅಂಶ ಸಮೃದ್ಧವಾಗಿದೆ ಇದು ಕ್ಯಾನ್ಸರ್ ಹೋರಾಟದ ಗುಣಲಕ್ಷಣಗಳೊಂದಿಗೆ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಪ್ರಗತಿಗೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ಆಕ್ಸಿಡೇಟಿವ್ ಹಾನಿಯ ವಿರುದ್ಧ ದೇಹದ ರಕ್ಷಣಾತ್ಮಕ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರುವುದರಿಂದ ಆಲ್ಜೈಮರ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯಂತಹ ಮಿದುಳಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇವಿಷ್ಟು ನಿಮ್ಮ ಆರೋಗ್ಯ ರಕ್ಷಣೆಗಾಗಿ ಕೆಲವು ಪ್ರಮುಖ ಮಾಹಿತಿಗಳು. ಪಾಶ್ಚಿಮಾತ್ಯ ಔಷಧಿಗಳ ಪಿತಾಮಹ ಎನಿಸಿಕೊಂಡಿರುವ ಗ್ರೀಕ್ ವೈದ್ಯ ಹಿಪೋಕ್ರೆಟಿಸ್ ಹೇಳ್ತಾನೆ “ಆಹಾರವೇ ನಿಮ್ಮ ಔಷಧಿಯಾಗಿರಲಿ, ಇಲ್ಲದಿದ್ದರೆ ಔಷಧೀಯೆ ನಿಮ್ಮ ಆಹಾರವಾದೀತು”. ಹಾಗಾಗಿ ಈ ನಿಟ್ಟಿನಲ್ಲಿ ಯೋಚಿಸಿರಿ ಮತ್ತು ಉತ್ತಮವಾದ ಆಹಾರವನ್ನೇ ಸೇವಿಸಿರಿ.
Also Read: ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ – ಇದು ನಮಗೆ ಏಕೆ ಮುಖ್ಯ?
ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್ಕುಮಾರ್ ರೋಡ್, ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com