ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ

ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ.ಕೊರೋನಾ ವೈರಾಣು ಜ್ವರಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯಬಹುದು.ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದಾದ್ದರಿಂದ ಬಾರದಂತೆ ನೋಡಿಕೊಳ್ಳುವುದೇ ಬಹುಮುಖ್ಯ.

coronaಆಯುರ್ವೇದದಲ್ಲಿ ಜ್ವರದ ಅನೇಕ ವಿಧಗಳನ್ನು ಹೇಳಿದ್ದಾರೆ. ವಾತ, ಪಿತ್ತ, ಕಫ, ದೋಷಾನುಸಾರ ವಾತಪಿತ್ತ, ಪಿತ್ತಕಫ, ವಾತಕಫ, ಸನ್ನಿಪಾತಜ (ತ್ರಿದೋಷಜ) ಮತ್ತು ಆಗಂತುಜ್ವರ ಎಂದು ಎಂಟು ವಿಧಗಳನ್ನು ವಿವರಿಸಲಾಗಿದೆ. ಆಗಂತು ಜ್ವರ ಅಂದರೆ ಹೊರಗಿನ ಕಾರಣಗಳಿಂದ ಬರುವಂತಹುದು. ಇದನ್ನು ನಾವು ವೈರಸ್‍ನಿಂದ ಉಂಟಾಗುವ ಜ್ವರಕ್ಕೆ ಹೋಲಿಸಬಹುದಾಗಿದೆ.
ಆಗಂತು ಜ್ವರದಲ್ಲಿ ಅಂದರೆ ಯಾವುದೇ ವೈರಾಣುವಿನಿಂದ ಉಂಟಾಗುವ ಜ್ವರದಲ್ಲಿ ನೆಗಡಿ, ತಲೆನೋವು, ಕೆಮ್ಮು, ಮೈಕೈನೋವು, ಜ್ವರ ಲಕ್ಷಣಗಳು ಕಂಡುಬರುತ್ತದೆ. ವೈರಾಣು ದೇಹದಲ್ಲಿ ಸುಮಾರು 7 ರಿಂದ 14 ದಿನಗಳಲ್ಲಿ ಹರಡುತ್ತದೆ. ಕೆಲವರಲ್ಲಿ 24 ಗಂಟೆಗಳಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಕೊರೋನಾ ವೈರಾಣು ಜ್ವರಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯಬಹುದು. ಚೈನಾದಲ್ಲಿ ಆರಂಭವಾಗಿ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ನಿದ್ದೆಗೆಡಿಸಿದೆ.

ತಡೆಗಟ್ಟುವ ಕ್ರಮಗಳು:

ಆಹಾರಕ್ರಮ :

1.ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಅನ್ನ, ಗಂಜಿ, ಇಡ್ಲಿ, ಯಾವುದಾದರೂ ಬಿಸಿಯಾದುದನ್ನೇ ಸೇವಿಸಬೇಕು.

2.ತಂಗಳ ಆಹಾರ, ಫ್ರಿಜ್‍ನಲ್ಲಿಟ್ಟ ಆಹಾರ, ತಂಪುಪಾನೀಯಗಳ ಸೇವನೆ ಬೇಡವೇ ಬೇಡ.

3.ಸೇಬು, ಸಪೋಟ ಮುಂತಾದ ಹಣ್ಣಿನರಸಗಳ ಸೇವನೆ, ಎಳನೀರು ಕುಡಿಯಬೇಕು.

4.ಕುಡಿಯುವ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು. ನೀರನ್ನು ಹತ್ತು ನಿಮಿಷ ಕುದಿಸಬೇಕು.

5.ಜೇನುತುಪ್ಪ ಬೆರೆಸಿದ ನೀರು ಕುಡಿಯವುದು ಒಳ್ಳೆಯದು.

6.ಸುಲಭವಾಗಿ ಜೀರ್ಣವಾಗುವ ತರಕಾರಿ, ಸೊಪ್ಪು, ಹೆಸರುಬೇಳೆಯಿಂದ ತಯಾರಿಸಿದ ಆಹಾರ ಪದಾರ್ಥ ಸೇವನೆ ಉತ್ತಮ.

7.ಟೀ ತಯಾರಿಸುವಾಗ ಶುಂಠಿ, ನಿಂಬೆಹಣ್ಣಿನರಸ ಮತ್ತು ತುಳಸಿ ಬೀಜ ತಯಾರಿಸಿ ಕುಡಿಯಬೇಕು.

ಮನೆಮದ್ದು:

1.ಧನಿಯಾ, ಜೀರಿಗೆ, ಜೇಷ್ಠಮಧು, ಹಿಪ್ಪಲಿಗಳನ್ನು ಪುಡಿ ಮಾಡಿಟ್ಟುಕೊಂಡು ಕಷಾಯ ತಯಾರಿಸಿ ಕುಡಿಯಬೇಕು.

2.ಹಿಪ್ಪಲಿ ಮತ್ತು ಶುಂಠಿಯನ್ನು ಸಮಪ್ರಮಾಣ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ನಾಲ್ಕು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು.

3.ಅಮೃತಬಳ್ಳಿ, ಶುಂಠಿ, ನೆಲಗುಳ್ಳ ಸಮಪ್ರಮಾಣ ಕುಟ್ಟಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಒಂದು ವಾರ ಸೇವಿಸಬೇಕು.

4.100 ಗ್ರಾಂ ಲಕ್ಕಿಸೊಪ್ಪು, 10 ಗ್ರಾಂ ಕಾಳುಮೆಣಸು, 10 ಗ್ರಾಂ ಬೆಲ್ಲ ಇವುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ 1/4 ಲೀಟರ್‍ಗೆ ಇರಿಸಬೇಕು. ಕಷಾಯವನ್ನು ಶೋಧಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.

5.ಒಂದು ಲೋಟ ಬಿಸಿನೀರಿಗೆ ಅರ್ಧ ಚಮಚೆ ಅರಶಿನ, ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಗೆ ಕುಡಿಯಬೇಕು.

6.ಒಂದು ಹಿಡಿ ಅಮೃತಬಳ್ಳಿಯನ್ನು ಜಜ್ಜಿ ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟಕ್ಕಿಳಿಸಿ ಕಷಾಯ ತಯಾರಿಸಿ, ಶೋಧಿಸಿ ದಿನಕ್ಕೆ 3.-4 ಬಾರಿ ಕುಡಿಯಬೇಕು.

7.ಒಂದು ಹಿಡಿ ತುಳಸಿಯನ್ನು ತೊಳೆದು ಸ್ವಚ್ಛಗೊಳಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧಲೋಟ ಆಗುವವರೆಗೆ ಸಣ್ಣಗಿನ ಉರಿಯಲ್ಲಿ ಕುದಿಸಿ ಬೆಲ್ಲ ಹಾಕಿ ನಾಲ್ಕು ಚಮಚೆಯನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು.

ಮುಂಜಾಗ್ರತಾ ಕ್ರಮಗಳು:

ಕೊರೋನಾ ಸೋಂಕಿಗೆ ಸದ್ಯ ಪರಿಣಾಮಕಾರಿ ಔಷಧವಿಲ್ಲ. ಲಸಿಕೆಯೂ ಇಲ್ಲ. ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದಾದ್ದರಿಂದ ಬಾರದಂತೆ ನೋಡಿಕೊಳ್ಳುವುದೇ ಬಹುಮುಖ್ಯ.
1.`ಮೂಗು ಮತ್ತು ಬಾಯಿ ಮುಚ್ಚುವಂತೆ ಮುಖಗವಸು (ಮಾಸ್ಕ್) ಧರಿಸಬೇಕು. ಮಾಸ್ಕನ್ನು ದಿನಕ್ಕೊಮ್ಮೆ ಬದಲಾಯಿಸಬೇಕು. ಒಮ್ಮೆ ಧರಿಸಿದ ಮಾಸ್ಕ್‍ನ್ನು ಒಂದು ದಿನಕ್ಕಿಂತ ಹೆಚ್ಚು ಬಳಸಬಾರದು. ಆದರೆ ಕೇವಲ ಮಾಸ್ಕ್ ಧರಿಸುವುದರಿಂದ ವೈರಾಣು ಹರಡುವಿಕೆಯನ್ನು ತಡೆಯಲಾಗದು.

2.ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳತ್ತಿರಬೇಕು.

3.ಪ್ರತಿದಿನ ಬಳಸುವ ಊಟದ ತಟ್ಟೆ, ಲೋಟ, ಇತ್ಯಾದಿ ವಸ್ತುಗಳನ್ನು ಬಿಸಿನೀರಿನಲ್ಲಿ ತೊಳೆಯುವುದು ಸೂಕ್ತ.

4.ಮಕ್ಕಳನ್ನು, ವೃದ್ಧರನ್ನು ರೋಗಿಗಳಿಂದ ದೂರವಿರಿಸವುದು ಕ್ಷೇಮ.

5.ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರಿಗೆ ಬೇಗನೆ ಹರಡುವುದರಿಂದ ಅವರ ಸುರಕ್ಷತೆ ಬಹಳ ಮುಖ್ಯ.

6.ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆ ಸೀನುವುದು, ಕೆಮ್ಮುವುದು ಮತ್ತು ಉಗಿಯುವುದನ್ನು ಮಾಡಬಾರದು.

7.ದೈಹಿಕವಾಗಿ ಚಟುವಟಿಕೆಯಿಂದ ಇರುವುದು. ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ.

8.ಸೋಂಕಿತ ವ್ಯಕ್ತಿಗಳು ಬಳಸುವ ಕಂಪ್ಯೂಟರ್, ಲ್ಯಾಪ್‍ಟಾಪ್, ಪೆನ್, ವಾಚ್, ಮೊಬೈಲ್‍ಗಳಲ್ಲಿಯೂ ವೈರಾಣುಗಳು ಇರುವ ಸಾಧ್ಯತೆ ಹೆಚ್ಚು.

9.ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಪಕ್ಕದಲ್ಲಿದ್ದ ಇತರರಿಗೆ ಬಹುಬೇಗ ಹರಡುತ್ತದೆ. ಆದ್ದರಿಂದ ವ್ಯಕ್ತಿ ಕೆಮ್ಮುತ್ತಿದ್ದಲ್ಲಿ, ಸೀನುತ್ತಿದ್ದಲ್ಲಿ ಅವರಿಂದ ದೂರವಿರುವುದು ಒಳಿತು.

10.ಜಾತ್ರೆ, ಸಿನಿಮಾ ಥಿಯೇಟರ್, ನಾಟಕ, ರಂಗಮಂದಿರ, ಬಸ್‍ಸ್ಡ್ಯಾಂಡ್, ರೈಲು ನಿಲ್ದಾಣ ಹೆಚ್ಚು ಜನ ಸೇರುವ ಸ್ಥಳಗಳಿಗೆ ಹೋಗುವುದು ಬೇಡ.

11.ಹಸ್ತಲಾಘವ, ಪರಸ್ಪರ ತಬ್ಬಿಕೊಳ್ಳುವುದು ಬೇಡ.

12.ಆಕಸ್ಮಾತ್ತಾಗಿ ಬೇರೆ ವಸ್ತುಗಳನ್ನು ಮುಟ್ಟಿದ ಸಂದರ್ಭದಲ್ಲಿ ತಕ್ಷಣ ನಿಮ್ಮ ಮುಖ, ಕಣ್ಣು, ಕೆನ್ನೆ ಮುಟ್ಟಿಕೊಳ್ಳಬಾರದು.

13.ಯಾವುದೇ ವಸ್ತುಗಳ ಮೇಲೆ ವೈರಸ್ ಕೇವಲ 48 ಗಂಟೆ ಮಾತ್ರ ಬದುಕಿರಬಲ್ಲದು. ಆದ್ದರಿಂದ ಆಗಾಗ ಕೈಗಳನ್ನು ಮೊಳಕೈವರೆಗೆ ಸೋಪಿನಿಂದ ತೊಳೆದು ಸ್ವಚ್ಛಗೊಳಿಸಿವುದರಿಂದ ಹರಡುವಿಕೆಯನ್ನು ತಡೆಗಟ್ಟಬಹುದು.

14.ಕೆಮ್ಮು, ಶೀತ, ಜ್ವರ, ಸುಸ್ತು, ಕಣ್ಣುರಿ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ.

ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದಲ್ಲಿ ಕೊರೋನಾ ಬಾರದಂತೆ ತಡೆಯಬಹುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪ ರಸದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ದಿನಚರ್ಯೆ, ಋತುಚರ್ಯೆ ಅಂದರೆ ಪ್ರತಿದಿನ ನಾವು ತೆಗೆದುಕೊಳ್ಳುವ ಆಹಾರ, ಜೀವಶೈಲಿ, ಮತ್ತು ಆಯಾ ಋತುಮಾನಕ್ಕೆ ಅನುಗುಣವಾಗಿ ಸೇವಿಸಬೇಕಾದ ಆಹಾರ, ಧರಿಸಬೇಕಾದ ಉಡುಪು, ಕುಡಿಯುವ ನೀರು, ವ್ಯಾಯಾಮ ಎಲ್ಲವುಗಳನ್ನು ಸರಿಯಾಗಿ ಪಾಲಿಸಿದಲ್ಲಿ ಕೊರೋನಾ ಮಾತ್ರವಲ್ಲ ಯಾವುದೇ ವೈರಾಣುವಿನ ಸೋಂಕು ತಗುಲದಂತೆ ನೋಡಿಕೊಳ್ಳಬಹುದು.

ಡಾ.ವಸುಂಧರಾ ಭೂಪತಿ ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750
E-mail : bhupathivasundhara@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!