ಕುಟುಂಬ ಆರೋಗ್ಯಕರ ಬದುಕಿನ ತಳಹದಿ

ಕುಟುಂಬ ಆರೋಗ್ಯಕರ ಬದುಕಿನ ತಳಹದಿ. ಆರೋಗ್ಯ ಪೂರಕ ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅತ್ಯಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೆ, ಉತ್ತಮ ಸಂಬಂಧ ಇದ್ದರೆ ಬದುಕು ನಿರಾಳವಾಗುತ್ತದೆ.
ಕುಟುಂಬ ಆರೋಗ್ಯಕರ ಬದುಕಿನ ತಳಹದಿ
ಬಹುತೇಕ ಮಂದಿ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕೊರಗುತ್ತಿರುತ್ತಾರೆ. `ತಾವು ಕುಟುಂಬದ ಕಡೆ ಗಮನ ನೀಡಲಿಲ್ಲ. ನೀಡಿದ್ದರೆ ಕೊರಗುಗಳನ್ನು ತಪ್ಪಿಸಿಕೊಳ್ಳಬಹುದಿತ್ತು’ ಎಂದು ಮರುಗುತ್ತಾರೆ. ಆದರೆ ಕಳೆದುಹೋದ ಸಂಗತಿ ಬಗ್ಗೆ ಚಿಂತಿಸಿ ಫಲವಾದರೂ ಏನು?. ಆಯಾ ಕಾಲಘಟ್ಟದಲ್ಲಿ ಮಹತ್ವವಿರುವ ಎಲ್ಲ ಸಂಗತಿಗಳ ಬಗ್ಗೆಯೂ ಗಮನಹರಿಸುವುದು ಅಗತ್ಯ. ಈ ರೀತಿ ಮಾಡಿಲ್ಲವೆಂದಾಗ ತುಂಬ ಬಿಕ್ಕಟ್ಟಿನ ಸನ್ನಿವೇಶಗಳೂ ನಿರ್ಮಾಣವಾಗುತ್ತವೆ. ಮನೆ-ಮನಗಳು ಒಡೆದುಹೋಗಿರುತ್ತವೆ. ಬದುಕು ಏಕಾಂಗಿಯಾಗಿರುತ್ತದೆ. ಇದಕ್ಕೆಲ್ಲ ಆಸ್ಪದ ನೀಡದೆ ನಿಭಾಯಿಸುವುದು ಒಂದು ಕಲೆ.
ನಿರಾಳವಾಗುವ ಸ್ಥಳವೆಂದರೆ ಅದು ನಿಮ್ಮ ಮನೆ. ಮನೆ ಎನ್ನುವುದು ಮೈ-ಮನಸು ನಿರಾಳವಾಗುವುದಕ್ಕೆ ಇರುವ ಸ್ಥಳ. ಪತಿ/ಪತ್ನಿಯೊಂದಿಗೆ ತುಂಬು ಸೌಹಾರ್ದತೆ-ಪ್ರೀತಿ-ಪ್ರೇಮ, ತಂದೆ-ತಾಯಿ ಜೊತೆಯಲ್ಲಿ ಗೌರವ, ಸಹೋದರ-ಸಹೋದರಿಯರೊಟ್ಟಿಗೆ ವಾತ್ಸಲ್ಯ, ಮಕ್ಕಳೊಂದಿಗೆ ಮಮತೆ ಇವೆಲ್ಲವೂ ಇದ್ದರೆ ಅದೊಂದು ಕುಟುಂಬ ಮತ್ತು ಮನೆ ಎನಿಸಿಕೊಳ್ಳುತ್ತದೆ. ನೆನಪಿಡಿ. ಇದ್ಯಾವುದಕ್ಕೂ ನೀವು ಹಣ ಖರ್ಚು ಮಾಡಬೇಕಿಲ್ಲ. ಒತ್ತಡ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಈ ರೀತಿ ಮಾಡಿದಾಗ ಮನೆಯ ವಾತಾವರಣದ ಸ್ಪಂದನೆ ಬೇರೆಯದೇ ರೀತಿ ಇರುತ್ತದೆ. ನಿಮ್ಮ ಮೈ-ಮನಸ್ಸು ತಂತಾನೆ ನಿರಾಳವಾಗುತ್ತದೆ.
ಸಾಕಷ್ಟು ಮಂದಿ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸಿಡುಕು ಮೋರೆ ಅಥವಾ ಗಂಟು ಮೋರೆ ಹಾಕಿಕೊಂಡಿರುತ್ತಾರೆ. ಸಾಮಾನ್ಯವಾಗಿ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಸರಕಾರಿ ಕಛೇರಿಗಳಲ್ಲಿ ಕೆಲಸ ಮಾಡುವವರಲ್ಲಿ ಇಂಥ ಪ್ರವೃತ್ತಿ ಹೆಚ್ಚು. ಆದರೆ ಇಂಥ ವರ್ತನೆ ನಿಮ್ಮ ಬಗ್ಗೆ ಬೇರೊಂದು ಭಾವನೆ ಮೂಡಿಸುತ್ತಿರುತ್ತದೆ ! ಇದೇ ಪ್ರವೃತ್ತಿಯನ್ನು ನೀವು ಮನೆಯಲ್ಲಿಯೂ ಮುಂದುವರಿಸಿದರೆ ನೀವೇ ನಿಮ್ಮ ಕೈಯಾರ ಕೌಟುಂಬಿಕ ವಾತಾವರಣದಲ್ಲಿ ಅನಾರೋಗ್ಯ ಮೂಡಿಸುತ್ತಿದ್ದೀರಿ ಎಂದೇ ಅರ್ಥ. ಈ ರೀತಿ ಇದ್ದರೆ ಮೊದಲನೆಯದಾಗಿ ನಿಮ್ಮ ಬಗ್ಗೆ ನಿಮ್ಮ ಪುಟ್ಟ ಮಕ್ಕಳಿಗೆ ಸದಾಭಿಪ್ರಾಯ ಮೂಡುವುದಿಲ್ಲ. ಪ್ರೀತಿ-ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾನಸಿಕ ಕಂದರ ಬೆಳೆಯುತ್ತಲೇ ಸಾಗುತ್ತದೆ. ನೀವು ಮಕ್ಕಳಿಗೆ ಒಳ್ಳೆಯ ಊಟ-ವಸತಿ-ಬಟ್ಟೆ-ಶಿಕ್ಷಣ ಎಲ್ಲವನ್ನೂ ನೀಡಬಹುದು. ಆದರೆ ಇಂಥ ಧೋರಣೆಯಿಂದ ಪ್ರೀತಿ-ಮಮತೆ ನೀಡಲು ಸಾಧ್ಯವಿಲ್ಲ.
ಕೆಲವರು ಕಛೇರಿಯ-ವ್ಯವಹಾರದ ಸ್ಥಳದ ಕಹಿ ಅನುಭವ-ಒತ್ತಡವನ್ನೆಲ್ಲ ತಂದು ಮನೆಯಲ್ಲಿ ಹಾಕುತ್ತಿರುತ್ತಾರೆ. ಹೆಂಡತಿ-ಮಕ್ಕಳೊಂದಿಗೆ ಸಿಡುಕುವುದು, ಚೀರಾಡುವುದು-ಥಳಿಸುವುದು ಇತ್ಯಾದಿ ಮಾಡುತ್ತಲೇ ಇರುತ್ತಾರೆ. ಆದರೆ ಇದೆಲ್ಲವನ್ನು ಹೆಂಡತಿ-ಮಕ್ಕಳು ಸಹಿಸಿಕೊಂಡಿದ್ದಾರೆ ಎಂದರೆ ಅದು ನಿಮ್ಮ ಮೇಲಿನ ಪ್ರೀತಿಯಿಂದಲ್ಲ. ಬದುಕಿನ ಅನಿವಾರ್ಯತೆಯಿಂದಷ್ಟೆ. ಮಕ್ಕಳು ಬೆಳೆದಂತೆಲ್ಲ ನಿಮ್ಮ ವರ್ತನೆಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಆಗ ಅವರ ಅಂಜಿಕೆ ಅಸಹ್ಯ ಭಾವಕ್ಕೆ ತಿರುಗುತ್ತದೆ. ಹೆಂಡತಿಗಂತೂ ಎಂದೋ ಅಸಹ್ಯ ಭಾವನೆ ಬಂದಾಗಿರುತ್ತದೆ. ವಯಸ್ಕರಾಗುತ್ತಿದಂತೆ ಮಕ್ಕಳು ನಿಮ್ಮಿಂದ ದೂರ ಹಾರಿ ಹೋಗುತ್ತಾರೆ. ಬಾಲ್ಯದಿಂದಲೇ ಇಂಥ ಕಾಲ ಯಾವಾಗ ಬರುವುದೋ ಎಂದು ಚಡಪಡಿಸುತ್ತಲೇ ಇರುತ್ತಾರೆ. ಆದ್ದರಿಂದ ನೆನಪಿಡಿ. ಮನೆಯೆನ್ನವುದು ನಿಮ್ಮ ಸಿಟ್ಟು-ಒತ್ತಡಗಳನ್ನು
ತಂದು ಸುರಿಯುವ ಕಸದ ತೊಟ್ಟಿಯಲ್ಲ !
ಕುಟುಂಬ ಆರೋಗ್ಯಕರ ಬದುಕಿನ ತಳಹದಿ
ಕುಟುಂಬದಲ್ಲಿ ಸಮಸ್ಯೆಗಳೇ ಬರುವುದಿಲ್ಲವೆ? ಸಮಸ್ಯೆಗಳು ಬರುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ನೀವು ಶಾಂತ ಸ್ವಭಾವದವರೇ ಆಗಿರಬಹುದು. ನಿಮ್ಮ ಪತ್ನಿ/ಪತಿ ಅಥವಾ ಮಕ್ಕಳು ಇದಕ್ಕೆ ತದ್ವಿರುದ್ಧವಾದ ಸ್ವಭಾವ ರೂಢಿಸಿಕೊಂಡಿರಬಹುದು. ಇವರ ಸ್ವಭಾವಕ್ಕೆ ನೀವು ಅದೇ ರೀತಿ ಸ್ಪಂದಿಸುವುದು ವಾತಾವರಣವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದ್ದರಿಂದ ಪತಿ/ಪತ್ನಿಯನ್ನು ಕೂರಿಸಿಕೊಂಡು ತಿಳಿ ಹೇಳಿ. ಅವರ ಸ್ವಭಾವವನ್ನು ತಿದ್ದಿಕೊಳ್ಳಲು ತಿಳಿಸಿ. ಇಂಥ ನಡವಳಿಕೆ ನನಗೆ ಆಗಿ ಬರುವುದಿಲ್ಲ ಎನ್ನುವುದನ್ನು ಹೇಳಿ. ಇದರಿಂದ ಪರಿಸ್ಥಿತಿ ಬದಲಾಗುತ್ತದೆ. ಈ ಹಂತದಲ್ಲಿಯೂ ಆಗದಿದ್ದರೆ ಆಪ್ತರಾದ ಹಿರಿಯರ ಸಲಹೆ ತೆಗೆದುಕೊಳ್ಳಿ. ಆಗಲೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗದಿದ್ದರೆ ಆಪ್ತ ಸಮಾಲೋಚಕರಿದ್ದಾರೆ. ಅವರ ಸಲಹೆ ಪಡೆದುಕೊಳ್ಳಿ. ಇದರಿಂದ ವಾತಾವರಣ ಸರಿಯಾಗುತ್ತದೆ. ಇದನ್ನು ಮಾಡದೇ ನೀವು ತಾಳ್ಮೆಗೆಟ್ಟರೆ ಕುಟುಂಬ ಕಮರಿ ಹೋಗುತ್ತದೆ.
ಆರೋಗ್ಯಕರವಾದ ಹವ್ಯಾಸಗಳು ಇದ್ದರೆ ಬದುಕು ಚೆಂದ. ಅದಕ್ಕೆ ಹೆಚ್ಚಿನ ಅರ್ಥವೂ ಇರುತ್ತದೆ. ಹವ್ಯಾಸಗಳಿದ್ದ ಕೂಡಲೇ ಅವು ದುಬಾರಿಯದೇ ಆಗಬೇಕಿಲ್ಲ. ಪುಸ್ತಕ ಓದುವುದು, ಸಂಗೀತ ಕೇಳುವುದು, ಆಗಾಗ ಕುಟುಂಬದವರೊಂದಿಗೆ ಪಿಕ್ನಿಕ್ ಅಥವಾ ಪ್ರವಾಸ ಹೋಗಿರಬರುವುದು ಮಾಡಬಹುದು. ಬಿಡುವಿನ ವೇಳೆಯಲ್ಲಿ ಇಂಥ ಹವ್ಯಾಸಗಳೊಂದಿಗೆ ಕಳೆಯುವುದಿದೆಯಲ್ಲ ಅದೊಂದು ಅದ್ಭುತ ಅನುಭವ. ಇಷ್ಟೆಲ್ಲ ಸಕಾರಾತ್ಮಕ ಬೆಳವಣಿಗೆ ಘಟಿಸುವುದು ಆ ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿಯಿಂದ ಎನ್ನುವ ಸಂಗತಿ ಕಡೆಗಣಿಸಬೇಡಿ. ಕುಟುಂಬವನ್ನು ಸಲಹುವಾತ ಅಥವಾ ಸಲಹುವಾಕೆ ವಿರುದ್ಧ ಆರಂಭದಲ್ಲಿ ಯಾರೂ ಅವರ ವರ್ತನೆಗಳಿಗೆ ಆಕ್ಷೇಪ ತೋರದಿದ್ದರೂ ಕಾಲ ಕಳೆದಂತೆ ಸಹಿಸುತ್ತಲೇ ಹೋಗುವುದಿಲ್ಲ ಎನ್ನುವುದನ್ನು ನೆನಪಿಡಿ. ಈ ಎಲ್ಲ ಹಿನ್ನೆಲೆಯಲ್ಲಿ ಕೌಟುಂಬಿಕ ಜೀವನ ಕಮರುವುದಕ್ಕೆ ಅವಕಾಶ ಮಾಡಿಕೊಡಬೇಡಿ.
ಡಿ.ಎ. ಕಲ್ಪಜ
ಪ್ರಧಾನ ಸಂಪಾದಕರು
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366
http://www.vims.ac.in/
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!