ಪಾರ್ಶ್ವವಾಯು ರೋಗದ (ಸ್ಟ್ರೋಕ್) ಅರಿವು ನಿಮಗಿರಲಿ. ಈ ರೋಗವು ಮಾರಣಾಂತಿಕವಲ್ಲದಿದ್ದರು ರೋಗಿ ನಿಸ್ಸಾಹಾಯಕನಾಗಿ ಜೀವನ ಪರ್ಯಂತ ಬೇರೆಯವರನ್ನು ಅವಲಂಭಿಸಿ ಬದುಕ ಬೇಕಾಗುವದು.
ಪ್ರತಿವರ್ಷವು ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವದು. ಈ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ, ತಿಳುವಳಿಕೆ ಮತ್ತು ಜಾಗೃತರಾಗಿಸುವ ಅವಶ್ಯಕತೆ ಇದೆ. ಇತ್ತೀಚಿನ ದಿನಮಾನಗಳಲ್ಲಿ ಜನರ ಆಹಾರ, ವಿಹಾರ, ಆಚಾರಗಳಲ್ಲಿ ಮತ್ತು ಕೆಲಸದ ಒತ್ತಡದಿಂದಾಗಿ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಇವುಗಳಲ್ಲಿ ಪಾರ್ಶ್ವವಾಯು ರೋಗವು ಒಂದು. ದಿನದಿಂದ ದಿನಕ್ಕೆ ಈ ರೋಗದ ಸಂಖ್ಯೆ ಅಧಿಕವಾಗುತ್ತಿದೆ. ಇದರ ಸರಿಯಾದ ತಿಳುವಳಿಕೆಯಿಂದ ಈ ರೋಗವನ್ನು ನಿಯಂತ್ರಿಸಬಹುದು.
ಮಾನವನ ಶರೀರದಲ್ಲಿ ಮೆದುಳು ಉತ್ತಮಾಂಗವಾಗಿದ್ದು, ಮಿದುಳಿಗೆ ರಕ್ತ ಸಂಚಾರ ಕೊರತೆಯಾದಾಗ ಆಘಾತವಾಗಿ ಪಾರ್ಶ್ವವಾಯು ರೋಗ ಉಂಟಾಗುವದು. ಈ ರೋಗದ ಮೂಲ ಅಧಿಷ್ಠಾನ ಮಸ್ತಿಷ್ಕ ಅಂದರೆ ಮೆದುಳು ಆಗಿರುವದು. ವ್ಯಕ್ತಿ ತಾನು ಸ್ವತಂತ್ರನಾಗಿ ಕೆಲಸ ಮಾಡಬೇಕಾದರೆ ಮೊದಲು ತನ್ನ ಅಂಗಾವಯವಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು. ಪಾರ್ಶ್ವವಾಯು ರೋಗಿಯು ತನ್ನ ಶರೀರದ ಬಲಭಾಗದ ಅಥವಾ ಎಡ ಭಾಗದ ಕೈ ಮತ್ತು ಕಾಲು ಕೆಲಸಮಾಡದೇ ಅಸಹಾಯಕನಾಗಿ ಬೇರೆಯವರ ಮೇಲೆ ಅವಲಂಭಿತವಾಗಿರಬೇಕಾಗುತ್ತದೆ. ಈ ರೋಗವು ಮಾರಣಾಂತಿಕವಲ್ಲದಿದ್ದರು ರೋಗಿ ನಿಸ್ಸಾಹಾಯಕನಾಗಿ ಜೀವನ ಪರ್ಯಂತ ಬೇರೆಯವರನ್ನು ಅವಲಂಭಿಸಿ ಬದುಕ ಬೇಕಾಗುವದು.
ಭಾರತದಲ್ಲಿ ಪಾರ್ಶ್ವವಾಯು ರೋಗದಿಂದ ಸರಾಸರಿ ಒಂದು ಲಕ್ಷ ಜನ ಸಂಖ್ಯೆಗೆ ಸುಮಾರು 262 ಗ್ರಾಮೀಣ ಮತ್ತು 424 ಜನರು ನಗರ ಪ್ರದೇಶಗಳಿಂದ ಈ ರೋಗದಿಂದ ಬಳಲುತ್ತಿದ್ದಾರೆ. ಸ್ತ್ರೀ ಮತ್ತು ಪುರುಷರ ಸರಾಸರಿ 1:7 ಅನುಪಾತದಲ್ಲಿ ಕಂಡುಬರುತ್ತಿದ್ದು ಪಾರ್ಶ್ವವಾಯು ರೋಗಿಗಳಲ್ಲಿ ಪ್ರತಿಶತ 12 ರಷ್ಟು 40 ವರ್ಷದ ಒಳಗಿನವರಲ್ಲಿ ಕಂಡುಬರುವದು. ಪಾರ್ಶ್ವವಾಯು ಅಂದರೆ ಎಕಕಾಲದಲ್ಲಿ ಶರೀರದ ಬಲ ಅಥವಾ ಎಡ ಭಾಗದ ಕೈ ಮತ್ತು ಕಾಲು ಸಂಪೂರ್ಣವಾಗಿ ಸ್ವಾದಿನ ಕಳೆದುಕೊಳ್ಳುವದು ಅಥವಾ ವಿಕೃತಿಯಾಗುವದು,
ಕೆಲಸ, ಕಾರ್ಯ ಮಾಡುವ ಸಾಮರ್ಥ್ಯ ಕ್ಷೀಣವಾಗುವದು ಪಾರ್ಶ್ವವಾಯು. ಇದನ್ನು ಸಾಮಾನ್ಯ ಭಾಷೆಯಲ್ಲಿ “ಪಾರ್ಶಿ”, “ಲಕ್ವ” ಎಂದು ಕರೆಯಲಾಗುವದು. ಇಲ್ಲಿ ರೋಗಿಯು ತನ್ನ ಶರೀರದ ಎಡ ಅಥವಾ ಬಲಭಾಗದ ಕೈ ಮತ್ತು ಕಾಲಿನಲ್ಲಿ ಸ್ವಾಧಿನತೆಯನ್ನು ಕಳೆದುಕೊಳ್ಳುವನು. ಶರೀರದ ಬಲಭಾಗದ ಅಥವಾ ಎಡ ಭಾಗ ಕ್ರಿಯಾ ಹಾನಿಯಾಗುವದನ್ನು ಪಕ್ಷಾಘಾತ ಎಂದು ಕರೆಯಲಾಗುವದು ಇಲ್ಲಿ ಪಕ್ಷ ಅಂದರೆ ಶರೀರದ ಅರ್ಧಭಾಗ ಅಂದರೆ ಬಲ ಅಥವಾ ಎಡ ಭಾಗ, ಆಘಾತ ಅಂದರೆ ಹಾನಿಯಾಗು ಅಥವಾ ನಾಶವಾಗುವದು ಎಂದರ್ಥ.
ಈ ಪಾರ್ಶ್ವವಾಯು ರೋಗಕ್ಕೆ ಕಾರಣಗಳು
ಅತಿ ತಂಪಾದ ಆಹಾರ ಸೇವಿಸುವದರಿಂದ, ಅತಿಯಾಗಿ ಮೊಸರು, ಕಾರದಂತಹ ಪದಾರ್ಥಗಳು ಅಥವಾ ಸರಿಯಾಗಿ ಆಹಾರ ಸೇವಿಸದೇ ಇರುವದರಿಂದ, ಮಲ ಮತ್ತು ಮೂತ್ರವನ್ನು ತಡೆಯುವದರಿಂದ, ಅಧಿಕವಾಗಿ ಮೈಥುನ ಮತ್ತು ವ್ಯಾಯಾಮ ಮಾಡುವದರಿಂದ, ಶಿರಸ್ಸಿಗೆ ಅಥವಾ ತಲೆಗೆ ಎಟು ಅಥವಾ ಅಘಾತವಾಗುವದರಿಂದ, ಮಾನಸಿಕವಾಗಿ ಅತಿಯಾದ ಚಿಂತೆ ಮಾಡುವದರಿಂದ, ದು:ಖ ಪಡುವದರಿಂದ, ಹೆದರುವದರಿಂದ, ಸಿಟ್ಟುಗೊಳ್ಳುವದರಿಂದ ಮತ್ತು ವ್ಯತ್ಯೆಯು ಪಡುವದರಿಂದ, ಅತಿಯಾದ ಚಿಕಿತ್ಸೆಯಿಂದ ಅಥವಾ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗುವದು ಈ ಎಲ್ಲ ಕಾರಣಗಳಿಂದ ಪಾರ್ಶ್ವವಾಯು ರೋಗವು ಬರುವದು.
ಒಟ್ಟಾರೆ ಶರೀರದಲ್ಲಿ ವಾತಾದಿ ದೋಷಗಳು, ರಸರಕ್ತಾದಿ ಧಾತುಗಳು ಮತ್ತು ಮಲಗಳ ಸಂಚಾರದ ಮಾರ್ಗದಲ್ಲಿ ತಡೆ ಉಂಟಾಗುವದರಿಂದ ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತೆಯು ಉಂಟಾದಾಗ, ಮೆದುಳಿನಲ್ಲಿ ರಕ್ತಸ್ರಾವವಾಗುವದರಿಂದ ಮತ್ತು ಬೆರೇ ರೋಗಗಳಿಂದ ಬಳಲುತ್ತಿರುವದರಿಂದ ಮುಖ್ಯವಾಗಿ ಆಧಿಕರಕ್ತದ ಒತ್ತಡ, ಅಧಿಕಕೊಬ್ಬಿನಾಂಶ, ಸಕ್ಕರೆರೋಗ, ಅಧಿಕಬೊಜ್ಜು, ಹೃದಯರೋಗ, ಅಧಿಕ ಮದ್ಯಪಾನ ಮತ್ತು ಧೂಮಪಾನ ಇತ್ಯಾದಿ ಕಾರಣಗಳಿಂದ ರೋಗಕ್ಕೆ ಅಪಾಯಕಾರಿ ಕಾರಣಗಳಾಗುವವು.
ಪಾರ್ಶ್ವವಾಯು ರೋಗದ ಲಕ್ಷಣಗಳು:
1. ಏಕಕಾಲದಲ್ಲಿ ಅಥವಾ ಒಮ್ಮಲೆ ಶರೀರದ ಬಲಭಾಗದ ಅಥವಾ ಎಡ ಭಾಗದ ಕೈ ಮತ್ತು ಕಾಲು ಅಥವಾ ಅರ್ಧಶರೀರ ಸಂಪೂರ್ಣವಾಗಿ ಕ್ರಿಯಾಹೀನ ಅಥವಾ ಕೆಲಸಮಾಡುವ ಶಕ್ತಿ ಕ್ಷೀಣವಾಗುವದು (ನಿತ್ರಾಣ ಮತ್ತು ನಿಶ್ಯಕ್ತಿ).
2. ರೋಗಿಯು ಮೂರ್ಛಿತನಾಗಬಹುದು, ತೊಂದರೆಗೊಳಗಾದ ಕೈ ಮತ್ತು ಕಾಲಿನಲ್ಲಿ ನೋವು, ಬಾವು ಮತ್ತು ತಲೆನೋವು ಕಾಣಿಸಿಕೊಳ್ಳುವದು.
3. ಮಾತನಾಡಲಿಕ್ಕೆ ಬಾರದೆ ಇರುವದು ಅಥವಾ ತೊದಲು ಮಾತನಾಡುವದು, ಶಬ್ದಗಳ ಉಚ್ಚಾರಣೆ ಕಷ್ಟದಾಯಕವಾಗುವದು.
4. ಸ್ನಾಯುಗಳು ಮತ್ತು ಮಾಂಸಪೇಶಿಗಳು ಕ್ಷೀಣಿಸುವದು, ಸ್ನಾಯುಗಳ ಪೇಶಿಗಳ ಸಂಕೋಚಣ ಮತ್ತು ಪ್ರಸರಣ ಕ್ರಿಯೆಗಳಲ್ಲಿ ವ್ಯತ್ಯೆಯಾಗುವದು.
5. ಕೆಲವೂಮ್ಮೆ ಶರೀರದಲ್ಲಿ ಉರಿ ಉಂಟಾಗುವದು, ಸ್ಪರ್ಶಜ್ಞಾನ ಗೊತ್ತಾಗದಿರುವದು, ತೊಂದರೆಯಾದ ಭಾಗ ಭಾರವೆನಿಸುವದು ಮತ್ತು ರೋಗಿಗೆ ನಡೆಯಲಿಕ್ಕೆ ಆಗದಿರುವದು ಅಥವಾ ಕಷ್ಟದಿಂದ ನಡೆಯುವದು.
ಸಿ.ಟಿ ಬ್ರೇನ್, ಎಮ್.ಆರ್.ಅಯ್, ಸಿ.ಎಸ್.ಎಫ್, ಸೇರೆಬ್ರಲ್ ಎನ್ಜಿಯೊಗ್ರಾಫಿ, ಕೋಲೆಷ್ಟ್ರಾಲ್ ಪಾರ್ಶ್ವವಾಯು ರೋಗಕ್ಕೆ ಅವಶ್ಯವಾದ ಪ್ರಯೋಗಶಾಲಾ ಪರೀಕ್ಷೆಗಳಿಂದ ರೋಗದ ಸರಿಯಾದ ಕಾರಣ ಮತ್ತು ನಿರ್ಧಾರ ಮಾಡಲಾಗುವದು ಮತ್ತು ಅದು ಚಿಕಿತ್ಸೆಗೆ ಅನಕೂಲವಾಗುವದು.
ಚಿಕಿತ್ಸೆ:
ರೋಗಕ್ಕೆ ಕಾರಣವಾದ ಅಂಶಗಳನ್ನು ತಡೆಯುವದು ಮತ್ತು ಅದಕ್ಕೆ ಪೂರಕವಾದ ರೋಗಗಳನ್ನು ಚಿಕಿತ್ಸಿಸುವದು. ಪ್ರಥಮವಾಗಿ ಯಾವ ಕಾರಣಗಳಿಂದ ರೋಗ ಬಂದಿರುವದು ಅದನ್ನು ತಡೆಯವದು. ಶರೀರದಲ್ಲಿ ವಿಷಕ್ಕೆ ಸಮಾನವಾದಂತಹ ಅಂಶವನ್ನು ಮೊದಲು ಆಮಪಾಚನ ಔಷಧಿಗಳಾದ ತ್ರಿಕಟುಚೂರ್ಣ, ಪಂಚಕೋಲ ಚೂರ್ಣ, ರಾಸ್ನದಿಚೂರ್ಣ ಇವುಗಳಲ್ಲಿ ರೋಗಿಗೆ ಸೂಕ್ತವಾದದನ್ನು ಕೊಟ್ಟು ಪ್ರಥಮವಾಗಿ ಚಿಕಿತ್ಸಿಸಬೇಕು ನಂತರ ಅವಶ್ಯವಿರುವ ಮುಂದಿನ ಚಿಕಿತ್ಸೆ ಮಾಡಬೇಕು.
ಪಂಚಕರ್ಮ ಚಿಕಿತ್ಸೆಗಳು:
ಬಾಹ್ಯಸ್ನೇಹ: ಅಭ್ಯಂಗ, ತಲೆ ಅಥವಾ ಶಿರಸ್ಸಿನ ಮೇಲೆ ಮಾಡಲ್ಪಡುವ ಚಿಕಿತ್ಸಾ ಕ್ರಮಗಳಾದ ಶಿರೋ ಅಭ್ಯಂಗ, ಶಿರೋಪಿಚು ಮತ್ತು ಶಿರೋಧಾರ (ತಿಲತೈಲ, ಬಲಾತೈಲ, ನಾರಾಯಣತೈಲ, ಮಾಷತೈಲ, ಮಹಾಮಾಷತೈಲ, ಧನ್ವಂತರತೈಲ, ಸಹಚರತೈಲ, ಬ್ರಾಹ್ಮೀತೈಲ, ವಿಷಗರ್ಭತೈಲ ಇತ್ಯಾದಿ).
ಅಭ್ಯಂತರಸ್ನೇಹ: ಔಷಧಿಗಳಿಂದ ಸಿದ್ದ ತುಪ್ಪವನ್ನು ಕ್ರಮವಾಗಿ ಕುಡಿಸುವದು (ಬೃಹತ್ ಚಾಗಲಾದ್ಯಘೃತ, ನಕುಲಾದ್ಯಘೃತ)
ಸ್ವೇದ ಚಿಕಿತ್ಸೆ: ಸಾಲ್ವಣಸ್ವೇದ, ನಾಡೀಸ್ವೇದ, ಉಪನಾಹಸ್ವೇದ, ಪರಿಷೇಕಸ್ವೇದ, ಷಷ್ಠಿಕಶಾಲಿ ಪಿಂಡಸ್ವೇದ, ಮಾಂಸಸ್ವೇದ, ಮಾಷಪಿಂಡಸ್ವೇದ ಇತ್ಯಾದಿ.
ನಸ್ಯ ಚಿಕಿತ್ಸೆ: ಮೂಗಿನ ಮುಖಾಂತರ ಔಷಧಿ ಸಿದ್ದ ತುಪ್ಪವನ್ನು ಅಥವಾ ತೈಲವನ್ನು ಹಾಕುವದು (ಅಣುತೈಲ, ಷಡ್ಡ್ಬಿಂದುತೈಲ ಬಲಾತೈಲ, ಮಾಷತೈಲ, ಮಹಾಮಾಷತೈಲ, ಕ್ಷೀರಬಲಾತೈಲ ಆವರ್ತಿತ ಇತ್ಯಾದಿ).
ಭೇಧಿಮಾಡಿಸುವದು (ವಿರೇಚನ ಚಿಕಿತ್ಸೆ): ಮೃದುವಾಗಿ ಶರೀರದ ಶಕ್ತಿಗಣುಗುಣವಾಗಿ ಭೇಧಿಮಾಡಿಸುವದು
ಗುದದ ಮುಖಾಂತರ ಔಷಧ ಪ್ರಯೋಗ (ಬಸ್ತಿ ಚಿಕಿತ್ಸೆ): ಔಷಧಿ ಸಿದ್ದ ತುಪ್ಪವನ್ನು, ಕಷಾಯ, ತೈಲವನ್ನು ಸೂಕ್ತವಾದದನ್ನು ಗುದದ ಮುಖಾಂತರ ಔಷಧ ಪ್ರಯೋಗಿಸುವದು. (ಮಾಷತೈಲ, ಮಹಾಮಾಷತೈಲ, ಬಲಾತೈಲ, ಸಹಚರಾದಿತೈಲ, ಏರಂಡಮೂಲ ನಿರೂಹ, ದಶಮೂಲ ನಿರೂಹ, ಮಾಷಬಲಾದಿ ಇತ್ಯಾದಿ).
ಔಷಧಿಗಳ ಪ್ರಯೋಗ:
ಕ್ವಾಥಗಳು: ಮಂಜಿಷ್ಟಾದಿ ಕ್ವಾಥ, ಮಹಾರಾಸ್ನಾದಿ ಕ್ವಾಥ, ರಾಸ್ನಾಸಪ್ತಕಕ್ವಾಥ ಮತ್ತು ಬಲಾರಿಷ್ಟ.
ಚೂರ್ಣಗಳು: ಶುಂಠಿಚೂರ್ಣ, ರಾಸ್ನಾದಿಚೂರ್ಣ, ದಶಮೂಲಚೂರ್ಣ ಮತ್ತು ವಚಾದಿಚೂರ್ಣ.
ವಟಿಗಳು: ವಿಷತಿಂದು ಕವಟಿ.
ರಸಯೋಗಗಳು: ಏಕಾಂಗ ವೀರರಸ, ಬೃಹತ್ ವಾತಚಿಂತಾಮಣಿ, ರಸರಾಜರಸ, ವಾತಗಜಾಂಕುಂಶರಸ, ವಾತವಿದ್ವಂಸರಸ.
ಫಿಜಿಯೊಥೇರಪಿ ಚಿಕಿತ್ಸಾ: ಇಲ್ಲಿ ಕೈ, ಬಾಹು, ಕಾಲು, ಮಾಂಸ ಪೇಶಿಗಳಿಗೆ ಶಕ್ತಿ/ಬಲಕೊಡುವಂತಹ ರೋಗಗಳಿನುಸಾರ ಸೂಕ್ತ ವಿವಿಧ ವ್ಯಾಯಾಮಗಳ ಚಿಕಿತ್ಸೆ ಮಾಡಲಾಗುವದು.
ಪಾರ್ಶ್ವವಾಯು ರೋಗಿಯು ಯಾವ ಆಹಾರವಿಹಾರವನ್ನು ಪಾಲಿಸಬೇಕು:
ತೇಗೆದುಕೊಳ್ಳಬೇಕು/ ಪಾಲಿಸಬೇಕು: ಸುಲಭವಾಗಿ ಜೀರ್ಣಿಸುವ ಪೂಷಕಾಂಶಗಳಿರುವ ಮತ್ತು ಶರೀರಕ್ಕೆ ಶಕ್ತಿ ಒದಗಿಸುವಂತಹ ಸರ್ವರಸಯುಕ್ತ ಆಹಾರವನ್ನು ಸೇವಿಸಬೇಕು.
ಹಣ್ಣುಗಳು: ದಾಳಿಂಬೆಹಣ್ಣು, ಒಣದ್ರಾಕ್ಷೀ ತರಕಾರಿಗಳು: ಪಡವಲಕಾಯಿ, ಬೆಳ್ಳುಲ್ಲಿ ಮತ್ತು ಶುಂಠಿ
ಧಾನ್ಯಗಳು: ಜೋಳ, ರಾಗಿ ಇತರೆ: ಬಿಸಿನೀರು, ಹಾಲು, ಜೇನುತುಪ್ಪ ಮತ್ತು ಗೋಮೂತ್ರ
ತೇಗೆದುಕೊಳ್ಳಬಾರದು/ ಪಾಲಿಸಬಾರದು: ಕಷ್ಟದಿಂದ ಪಚನವಾಗುವಂತಹ ಒಂದೇ ರಸವಿರುವಂತ ಶರೀರಕ್ಕೆ ತೊಂದರೆಯನ್ನುಂಟು ಮಾಡುವ ಆಹಾರವನ್ನು ಸೇವಿಸಬಾರದು. ಅಧಿಕವಾದ ವ್ಯಾಯಾಮ, ಮೈಥುನ, ಅತಿ ನಡೆದಾಡುವದು, ಮಲ, ಮೂತ್ರ ತಡೆಯುವದು, ಅತಿಯಾಗಿ ಚಿಂತಿಸುವದು, ಹಗಲು ನಿದ್ರೆ ಮತ್ತು ರಾತ್ರಿಜಾಗರಣೆ ಮಾಡಬಾರದು.
ಹಣ್ಣುಗಳು: ಜಂಬು ನೇರಳೆ, ಧಾನ್ಯಗಳು: ಕಡಲೆ, ವಠಾಣಿ, ಹೆಸರು, ಯವಧಾನ್ಯ, ಅಡಿಕೆ, ಬೆಲ್ಲ ಇತರೆ: ತಣ್ಣನೆನೀರು, ತಂಪುಪಾನೀಯ ಮತ್ತು ತಂಪುಹವೆ.
ಮುಂಜಾಗ್ರತೆಯ ಕ್ರಮಗಳು:
• ಶರೀರಕ್ಕೆ ಸೂಕ್ತವಾದ ಸಮಯಕ್ಕೆ ಅನುಗುಣವಾಗಿ ಹಿತವಾದ ಮಿತ ಪ್ರಮಾಣದಲ್ಲಿ ಅಹಾರ ಸೇವನೆ, ಪೂರ್ವದಲ್ಲಿ ಸೇವಿಸಿದ ಆಹಾರ ಸರಿಯಾಗಿ ಪಚನವಾದನಂತರ ಆಹಾರ ಸೇವಿಸಬೇಕು.
• ಅಧಿಕವಾದ ಬೇಕರಿ ಪದಾರ್ಥ, ಪಾಸ್ಟ್ಪುಡ್, ಮಾಂಸಾಹಾರ, ಮಧ್ಯಪಾನ, ಧೂಮ್ರಪಾನ, ತಂಪುಪಾನೀಯಗಳು ಇತ್ಯಾದಿಗಳು ಶರೀರಕ್ಕೆ ಹಾನಿಕಾರಕಗಳು ಇವುಗಳನ್ನು ತ್ಯೆಜಿಸಬೇಕು.
• ವಯಸ್ಸಿಗನುಗುಣವಾಗಿ ಆಧಿಕರಕ್ತದ ಒತ್ತಡ, ಅಧಿಕಕೊಬ್ಬಿನಾಂಶ, ಸಕ್ಕರೆರೋಗ, ಅಧಿಕಬೊಜ್ಜು, ಹೃದಯರೋಗ (ಇವು ಪಾರ್ಶ್ವವಾಯುರೋಗಕ್ಕೆ ಅಪಾಯಾಕಾರಿ ಕಾರಣಗಳಾಗುವವು) ಸಂಬಂಧಿ ಖಾಯಿಲೆಗಳನ್ನು ಸೂಕ್ತ ವೈದ್ಯರಿಂದ ಪರೀಕ್ಷಿಸಿಕೊಂಡು ಈ ರೋಗದಿಂದ ಬಳಲುತ್ತಿರುವವರು ಸರಿಯಾದ ಔಷಧ ಉಪಚಾರ ಪಡೆಯಬೇಕು ವೈದ್ಯರು ಹೇಳಿದಂತ ಔಷಧಗಳನ್ನು ಸರಿಯಾಗಿ ಸಮಯಾನುಸಾರ ತೆಗದುಕೊಳ್ಳಬೇಕು ಯಾವುದೇ ಕಾರಣಕ್ಕೂ ಔಷಧಗಳನ್ನು ಸ್ವಯಂ ನಿಲ್ಲಿಸಬಾರದು.
• ಎಲ್ಲ ಚಿಕಿತ್ಸೆಗಳು ಎಲ್ಲರಿಗೂ ಸರಿ ಹೊಂದುವದಿಲ್ಲಾ, ರೋಗಿಯ ವಯಸ್ಸು, ಶಕ್ತಿಗೆ ಅನುಗುಣವಾಗಿ ಬೇರೆ ಬೇರೆ ಚಿಕಿತ್ಸೆ ಮಾಡಲಾಗುವದು.
• ಪ್ರತಿದಿನ ಸೂಕ್ತ ವ್ಯಾಯಮ, ಯೋಗ, ಪ್ರಾಣಾಯಾಮ, ಧ್ಯಾನ ಮಾಡುವದು ಮತ್ತು ಪೋಷಕಾಂಶಯುಕ್ತ ಆಹಾರ ಸೇವನೆ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವದು.
• ಸ್ವಯಂ ಚಿಕಿತ್ಸೆ ಹಾನಿಕಾರಕ ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಅತಿ ಅವಶ್ಯಕ.
ಡಾ: ಸ0ತೋಷ ನೀಲಪ್ಪ. ಬೆಳವಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ
ಡಿ.ಜಿ.ಎ0.ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗದಗ.
Email: ayursnb@yahoo.co.in, Phone – 98869 16367