ಲೈಫ್‍ನ ಫಾರ್ಮುಲಾ ಬಗ್ಗೆ ಹೆಚ್ಚಿನವರಿಗೆ ಸ್ಪಷ್ಟತೆಯೇ ಇಲ್ಲ. ಲೈಫ್ ಫಾರ್ಮುಲಾಗಳಲ್ಲಿ ಮೊದಲನೇಯದು ದೊಡ್ಡದೊಂದು ಗುರಿ ಬೇಕು. ಗುರಿ ಇಲ್ಲದೇ ಸಾಧನೆ ಅಸಾಧ್ಯ. ಇದಕ್ಕೆ ನಮ್ಮದೇ ಆದ ಸ್ವಂತಕಲ್ಪನೆ, ಆಲೋಚನೆಯ ಪರಿಕಲ್ಪನೆ ಇರಲೇ ಬೇಕು.
ತತ್ವಜ್ಞಾನಿಗಳು ಗಂಟೆಗಟ್ಟಳೆ ಉಪನ್ಯಾಸ ಕೊಡ್ತಾರೆ. ಬರಹಗಾರರು ಕೊನೇನೇ ಇಲ್ಲದಂಗೆ ಬರಿತಾರೆ. ವಿಜ್ಞಾನಿಗಳು ಪ್ರತಿದಿನವೂ, ಪ್ರತಿಕ್ಷಣವೂ ನಿರಂತರವಾಗಿ ಹೊಸ ಹೊಸತನ್ನ ಕಂಡು ಹಿಡಿತಾನೇ ಇರ್ತಾರೆ. ಇಷ್ಟು ಇದ್ರೂ ಸಹಾ ಈ ನಮ್ಮ ಜೀವನ ಅನ್ನೋ ನಿಗೂಢತೆಯನ್ನ ಕಂಡುಹಿಡಿಯಲು ಮಾತ್ರ ಇಲ್ಲಿಯವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಈ ಮೂರಕ್ಷರದ ಜೀವನ ಎನ್ನುವ ಶಬ್ದದ ಜೊತೆಗೇ ನಾವು ಬದುಕ್ತಾ ಇದ್ರೂ ಹೇಗೆ ಬದುಕಬೇಕು?
ಗುರಿ ಬಗ್ಗೆ ಹೆಚ್ಚಿನವರಿಗೆ ಸ್ಪಷ್ಟತೆಯೇ ಇಲ್ಲ
ಯಾಕೆ ಬದುಕಬೇಕು? ನಮ್ಮಗುರಿ ಏನೂ ಅನ್ನೋದ್ರ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಸ್ಪಷ್ಟತೆಯೇ ಇಲ್ಲ. ಹೇಗೋ ಅಪ್ಪಿತಪ್ಪಿ ಹುಟ್ಟಿದೀವಿ, ಹೇಗೋ ಇದ್ದರಾಯ್ತು. ಆಮೇಲೇ ಹೋದರಾಯ್ತು. ಸತ್ತಮೇಲೆ ಎಲ್ರೂಒಂದೇ! ಮತ್ಯಾಕೆ ಕಷ್ಟ ಪಡಬೇಕು ಅಂತ ಜೀವಿಸ್ತಾ ಇದ್ರೆ ನಮ್ಮಷ್ಟು ನತದೃಷ್ಟರು ಯಾರಿಲ್ಲ! ನೀವು ಹಾಗೆ ಬಾಳಬೇಕು. ಹೀಗೆ ಜೀವಿಸಬೇಕು ಅಂತಾ ಬಿಟ್ಟಿ ಉಪದೇಶ ಕೊಡ್ತಾ ಇದ್ರೆ ಬರೆದಿರೋ ಅಕ್ಷರಗಳೂ ವೇಷ್ಟು. ಓದೋ ನಿಮ್ಮ ಸಮಯವೂ ವ್ಯರ್ಥ. ನಮ್ಮ ಬರಹಗಳು ಕೆಲವರಿಗಾದರೂ ಚಿಂತನೆಗೆ ಹಚ್ಚದಿದ್ದರೆ, ಬದಲಾವಣೆಗೆ ದಾರಿ ತೋರದಿದ್ದರೆ ಅಂತವು ಕೇವಲ ಟೈಮ್‍ಕಿಲ್ಲರ್ ಅನ್ನೋದು ನನ್ನ ಅಭಿಪ್ರಾಯ.
ನಮ್ಮ ನಡುವಿನ ಬಹಳಷ್ಟು ಜನರಿಗೆ ಮುಖ್ಯವಾಗಿ ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಬಗ್ಗೆ, ಅವರ ಗುರಿಗಳ ಬಗ್ಗೆ ಅವರ ಅಭಿಪ್ರಾಯ ಕೇಳಿ ನೋಡಿ. ಹೆಚ್ಚಿನವರಿಗೆ ಆ ಬಗ್ಗೆ ಯೋಚನೆಯೇ ಇಲ್ಲ. ಇನ್ನುಳಿದವರದ್ದು ಕೇವಲ ಹಾರಿಕೆಯ ಉತ್ತರವಷ್ಟೇ ಸಿಗೋದು! ಇದು ಇಂದಿನ ಸಮಸ್ಯೆ ಮಾತ್ರವಲ್ಲ. ನಾನು ಆ ಸ್ಥಾನದಲ್ಲಿದ್ದಾಗಿಂದಲೂ ಇದ್ದದ್ದೆ! ಹಾಗಾದರೆ ಇದಕ್ಕೆಕಾರಣ ಏನು? ಕಾರಣಯಾರು? ಉತ್ತರ ಮತ್ತದೇ ಸಮಾಜ ಹಾಗೂ ಪರಿಸರ.
ಸಮಾಜದಲ್ಲಿ ಬದಲಾವಣೆ – ಲೈಫ್‍ನ ಫಾರ್ಮುಲಾ
ಹಾಗಾದ್ರೆ ಸಮಾಜದಲ್ಲಿ ಬದಲಾವಣೆ ತರೋದು ಹೇಗೆ? ಅಂತಂದ್ರೆ… ‘ಬದಲಾವಣೆ ಯಾಕೆ ಬೇಕು? ಈಗಿದ್ದಂಗೆ ಇರ್ಲಿ ಬಿಡಿ; ಹೆಂಗಿದ್ರೂ ಜೀವನ ನಡಿತದೆ’ ಅನ್ನೋ ಕಡೆ ಮತ್ತೆ ಬಂದು ನಿಲ್ಲತ್ತೆ ಯೋಚನೆಗಳು.! ಅಲ್ಲಿಗೆ ಜೀವನ, ಯೋಚನೆ, ಗೊತ್ತು, ಗುರಿ ಮಣ್ಣು ಮಸಿ ಎಲ್ಲಾ ಮಕಾಡೆ ಮಲಗಿ ಭೂಗತವಾದಂಗಾಯ್ತು! ಜೀವನದಲ್ಲಿ ಎಲ್ಲಾ ಇದ್ದೂ, ಸಾಧಿಸಲು ಅವಕಾಶಗಳೂ ಅಗಾಧವಾಗಿದ್ದು ಏನೂ ಕಿಸಯದೇ ನೀರಸವಾಗಿಯೋ, ಕ್ಷಣಿಕ ಸಂತೋಷದಲ್ಲಿಯೋ ತೃಪ್ತರಾಗಿ ಹೊಗೆ ಹಾಕಿಸ್ಕೊಂಡೋ, ಮಣ್ಣಾಗಿಯೋ ಹೋಗ್ತಾರಲ್ಲಾ ಅವರಿಗೆ ಈ ಲೈಫ್‍ನ ಫಾರ್ಮುಲಾದ ಮಜಾ ಗೊತ್ತಾಗಲ್ಲ. ಈ ಲೈಫ್ ಫಾರ್ಮುಲಾ ಅನ್ನೋದು ನಮ್ಮೊಳಗಿನ ಒಂದು ಶಕ್ತಿ.
ನಮ್ಮ ಪ್ರಪಂಚದಲ್ಲಿ ಸಧ್ಯಕ್ಕೆ ಸರಿ ಸುಮಾರು 7 ಬಿಲಿಯನ್‍ಗೂ ಹೆಚ್ಚು ಜನಸಂಖ್ಯೆ ಇದೆ. ಅಂದ್ರೆ ಏಳರ ಮುಂದೆ ಒಂಭತ್ತು ಸೊನ್ನೆಗಳು. ಅದರಲ್ಲಿ ಯಶಸ್ಸು ಪಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಅಥವಾ ಗುರಿ ಇಟ್ಟುಕೊಂಡು ಅವರವರ ಮನಸ್ಸಿಗೇ ಇಷ್ಟವಾಗುವಂತಹ, ಜೀವನ ಸಾರ್ಥಕವಾಗಿದೆ ಎಂದುಕೊಂಡಂತೆ ಸಾಧನೆಗೈದವರು ಏಳು ಶೇಕಡಾದವರಾದ್ರೆ ಉಳಿದವರೆಲ್ಲಾ ಏಳರ ಮುಂದಿನ ಒಂಭತ್ತು ಶೂನ್ಯಗಳ ತರ ಇರೋದು ವಿಪರ್ಯಾಸ. ಒಬ್ಬೊಬ್ಬರ ಲೈಫ್‍ನಲ್ಲೂ ಈ ಲೈಫ್ ಫಾರ್ಮುಲಾ ಬೇರೆ ಬೇರೆ ಅನ್ಸಿದ್ರೂ ಜನರಲ್ಲಾಗಿ ಅಥವಾ ಹೆಚ್ಚಿನವರಿಗೆ ಅನ್ವಯವಾಗುವ ಲೈಫ್ ಫಾರ್ಮುಲಾಗಳಲ್ಲಿ ಮೊದಲನೇಯದು ದೊಡ್ಡದೊಂದು ಗುರಿ ಬೇಕು.
ಗುರಿ ಇಲ್ಲದೇ ಸಾಧನೆ ಅಸಾಧ್ಯ.
ಗುರಿ ಇಲ್ಲದೇ ಸಾಧನೆ ಅಸಾಧ್ಯ. ಆಗ ಮಾಡುವ ಕೆಲಸಗಳ್ಯಾವುದೂ ಅಸಲಿಗೆ ಅಚೀವ್‍ಮೆಂಟ್ ಅಂತಾ ಅನ್ನಿಸಿಕೊಳ್ಳೋದೇ ಇಲ್ಲ. ಇದಕ್ಕೆ ನಮ್ಮದೇ ಆದ ಸ್ವಂತಕಲ್ಪನೆ, ಆಲೋಚನೆಯ ಪರಿಕಲ್ಪನೆ ಇರಲೇ ಬೇಕು. ಎರಡನೆಯದಾಗಿ ಕಾರ್ಯಗತ ಯೋಜನೆ. ನಾವು ಕಲವಾರು ಬಾರಿ ಯೋಚಿಸಿರ್ತೇವೆ, ಹೀಗೆ ಮಾಡ್ಬೇಕು ಹಾಗೆ ಮಾಡಬೇಕು ಅಂತೆಲ್ಲಾ ಪ್ಲಾನ್‍ಕೂಡಾ ಮಾಡಿರ್ತೇವೆ. ಆದ್ರೆ ಅದನ್ನು ಕಾರ್ಯಗತಗೊಳಿಸಿರೋದ್ರಲ್ಲಿ ಎಡವಿರ್ತೇವೆ. ಇದು ಎಲ್ಲಾರ ಜೀವನದಲ್ಲಿಯೂ ನಡೆದಿರೋದು, ನಡೆಯುತ್ತಿರೋದು ಮತ್ತು ಮುಂದೂ ನಡೆಯೋದು. ಕಾರಣಗಳು ನೆಪಗಳು ಹಲವು ಸಿಗ್ತವೆ. ಆದ್ರೆ ಲೈಫ್ ಫಾರ್ಮುಲಾ ಅಂದ್ರೆ ದೃಢ ನಿಶ್ಚಯದ ಮೂಲಕ ಈ ಯೋಜನೆಗಳ ವಿಳಂಬತೆಯನ್ನು ತಡಿಯೋದು.
ಸೋಲು ಎಂದೂ ಸಾವಲ್ಲ; ಅದೊಂದು ಪಾಠ.
ಕೊನೆಯದಾಗಿ ಹೇಳೊದೇನಂದ್ರೆ ಚಿಕ್ಕಚಿಕ್ಕ ವಿಷಯದಲ್ಲೂ ಖುಷಿಯನ್ನು ನೋಡಿ. ಸಣ್ಣ ಗೆಲುವು ಕೂಡಾ ಸಖತ್ ಖುಷಿಕೊಡ್ತದೆ. ಆ ಖುಷಿಗೆ ದೊಡ್ಡ ಸೋಲನ್ನೂ ಮರೆಸಿ ಗೆಲುವಾಗಿ ಪರಿವರ್ತಿಸುವ ಬೃಹತ್ ಶಕ್ತಿ ಇದೆ. ಯಾರಿಗೆ ಸೋಲನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆಯೋ; ಅವನನ್ನು ತಡೆಯೋಕೆ ಯಾವ ಶಕ್ತಿ ಇಂದಲೂ ಅಸಾಧ್ಯ. ಇದಕ್ಕೆ ಕೋಟಿ ಕೋಟಿ ಉದಾಹರಣೆಗಳು ಸಿಗುತ್ತವೆ. ಈ ರೀತಿಯ ಘಟನೆಗಳು ಹಿಂದೆಯೂ ನಡೆದಿವೆ, ಮುಂದೆಯೂ ನಡೆಯುತ್ತಾ ಇರುತ್ತವೆ. ಪ್ರತೀ ಯಶಸ್ವೀ ವ್ಯಕ್ತಿಯ ಹಿಂದೆ ಸಾಲು ಸಾಲು ಸೋಲುಗಳ ಸರಪಳಿಯೇ ಇದೆ.
ಹಾಗಾಗಿ ಸೋಲು ಎಂದೂ ಸಾವಲ್ಲ; ಅದೊಂದು ಪಾಠ. ಇನ್ನೂ ಕಾಲ ಮಿಂಚಿಲ್ಲ. ಏನಾದ್ರೂ ಒಂದು ಗುರಿ ಹಾಕ್ಕೊಂಡು, ಅದರ ಕಡೆ ಮುನ್ನುಗ್ತಾ ಇರಿ. ಆದ್ರೆ ಗುರಿ ಸ್ವಾರ್ಥದ್ದಾದ್ರೆ ಸಂತೋಷ ಕೆಲವೇ ಕ್ಷಣಗಳು, ನಿಸ್ವಾರ್ಥದ್ದಾದ್ರೆ ಆ ಖುಷಿಗೆ ಅಂತ್ಯವೇ ಇರಲ್ಲ. ನೀವೇ ಯೋಚಿಸಿ ನಾವು ಹುಟ್ಟಿದ್ದು ಕೇವಲ ಸಾಯೋಕೆ ಮಾತ್ರ ಅಲ್ಲ ಅಲ್ವಾ?
ಸಚಿನ್ ಶರ್ಮಾ
ಹವ್ಯಾಸಿ ಬರಹಗಾರ
ಬೆಂಗಳೂರು