ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..

ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ.ಪ್ರಾರ್ಥನೆ,ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ.

ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಅರೇಬಿಯಾ ದೇಶದ ಜಾನಪದ ಕಥೆ. ಮರುಭೂಮಿ ಪ್ರದೇಶದಲ್ಲಿ ಒಬ್ಬ ಬುದ್ಧಿವಂತ ವೃದ್ಧ ಮನುಷ್ಯ ಬಾಗ್ದಾದ್ ನಗರದ ಕಡೆಗೆ ಪಯಣಿಸುತ್ತಿದ್ದ. ಅವನಿಗೆ ಮಾರ್ಗಮಧ್ಯದಲ್ಲಿ ಒಬ್ಬ ದೈತ್ಯಗಾತ್ರದ ಯಕ್ಷ ಭೇಟಿಯಾಗುತ್ತಾನೆ. ಆತನು ಕೂಡ ವೇಗವಾಗಿ ಸಾಗುತ್ತಿದ್ದ. ಅವನ ಅವಸರವನ್ನು ಕಂಡು ಈ ವೃದ್ಧ ಯಕ್ಷನನ್ನು ಕೇಳಿಯೇಬಿಟ್ಟ-” ನೀನು ಬಾಗ್ದಾದಿ ನಗರವನ್ನು ತಲುಪಲು ಏಕೆ ಇಷ್ಟೊಂದು ಅವಸರದಲ್ಲಿ ಸಾಗುತ್ತಿರುವೆ? “. ಅದಕ್ಕೆ ಯಕ್ಷ ಉತ್ತರಿಸಿದ-” ಬಾಗ್ದಾದ್ ನಗರದ 5000 ಜನರ ಜೀವವನ್ನು ಒಯ್ಯಲು ಸಾಗುತ್ತಿರುವೆ”. ಉತ್ತರಿಸಿದ ಯಕ್ಷ, ತನ್ನ ಗುರಿಯೆಡೆಗೆ ದಕ್ಷತೆಯಿಂದ ಸಾಗುತ್ತಿದ್ದ.

ಪುನಹ ಮತ್ತೆ ಹಿಂತಿರುಗುವಾಗ, ಜೀವ ಭಕ್ಷಕ ಯಕ್ಷ ಮತ್ತೆ ವೃದ್ಧನಿಗೆ ಭೇಟಿಯಾದ.” ನೀನು ನನ್ನೊಡನೆ ಸುಳ್ಳು ಹೇಳಿದೆ. ನೀನು ನನ್ನೊಡನೆ 5000 ಜನರ ಜೀವ ಒಯ್ಯುವುದಾಗಿ ಹೇಳಿದೆ. ಆದರೆ ಈಗ 10000 ಜನರ ಜೀವವನ್ನು ತೆಗೆದುಕೊಂಡು ಹೋಗುತ್ತಿರುವೆ.” -ವೃದ್ಧ ಕೇಳಿದ. ಅದಕ್ಕೆ ಆ ಯಕ್ಷ-” ನನ್ನನ್ನು ದೂರ ಬೇಡ. ನಾನು ಐದು ಸಾವಿರ ಜನರ ಜೀವವನ್ನು ಮಾತ್ರ ತೆಗೆದುಕೊಂಡೆ. ಉಳಿದವರು ಭಯದಿಂದ ಜೀವ ಕಳೆದುಕೊಂಡರು”!..

ಅನಿಶ್ಚಿತ ಭವಿಷ್ಯದ ಭಯ- ” ಸರ್ವಂ ಭಯಾ ವೃತಮ್ ಜಗತ್”:

ಇದು ಜಾನಪದ ಕಥೆಯಾದರೂ, ಇದರ ಪದಗಳ ಎಡೆಯಲ್ಲಿ ಹಿರಿದಾದ ಒಂದು ಅರ್ಥ, ಸಂದೇಶ ಇದೆ. ಹುದುಗಿಕೊಂಡಿದ್ದ ಭಯವು, ಕಾರಣ ಸಿಕ್ಕಿದಾಗ ನಿರ್ನಾಮ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಗತ್ತನ್ನು ಕಂಗೆಡಿಸುತ್ತಿರುವ ಸಾಂಕ್ರಾಮಿಕ ಕೊರೋನಾ ರೋಗದ ಸಂದರ್ಭದಲ್ಲಿ ಈ ಕಥೆ ಹೆಚ್ಚು ಧ್ವನಿಸುತ್ತದೆ. ದಿನನಿತ್ಯದ ಬದುಕಿನಲ್ಲಿ ನಾನಾತರದ ಭಯಗಳು ಕನಸುಗಳನ್ನು, ಮಾನವ ಮನಸ್ಸುಗಳನ್ನು ಕದಡಿ ಬಿಟ್ಟಿದೆ. ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ. ವೈರಸ್ ನಮ್ಮ ದೇಹದ ಒಳಕ್ಕೆ ಪ್ರವೇಶಿಸುವ ಭಯ, ಕಾಯಿಲೆ ಬೀಳುವ ಭಯ, ಸಂಪರ್ಕಕ್ಕೆ ಬರುವವರು ಕೊರೋನಾ ಪೀಡಿತರಾಗಿದ್ದಾರೆ ಎಂಬ ಸಂಶಯದಿಂದ ಹುಟ್ಟುವ ಬಹುಭಯ, ಕ್ವಾರಂಟೈನ್ ಗೆ ಒಳಗಾಗುವ ಭಯ, ಮನೆಯಲ್ಲೇ ಇದ್ದುಕೊಂಡು ಹೊರಗಾಗುವ ಭಯ, ಉಳಿದವರೊಂದಿಗೆ ವ್ಯವಹರಿಸುವುದಕ್ಕೆ ಅಡ್ಡಬರುವ ಉ-ಭಯ!, ನಿತ್ಯ ಉಪಯೋಗಿಸುವ ಸಾಮಗ್ರಿಗಳ ಅಲಭ್ಯತೆಯಿಂದ ಉಂಟಾಗುವ ಭಯ, ಉದ್ಯೋಗ ಕಳೆದುಕೊಳ್ಳುವ ಭಯ, ಅನಿಶ್ಚಿತ ಭವಿಷ್ಯದ ಭಯ- ” ಸರ್ವಂ ಭಯಾ ವೃತಮ್ ಜಗತ್”….

ಭಯವನ್ನು ನಮ್ಮ ಮನಸ್ಸಿನಿಂದ ಹೊರಗಟ್ಟುವುದು ಅಗತ್ಯ:

templeಇವೆಲ್ಲಾ ಭಯ ಗಳ ಮಧ್ಯೆ, ಅವುಗಳಿಂದ ಕೊಂಚ ಹೊರಬಂದು, ಯಶಸ್ಸಿನ ಕ್ಷಣಗಳನ್ನು ಹಾರೈಸುವುದು ಈ ಕ್ಷಣದ ಅಗತ್ಯ. ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳನ್ನು ಗುರುತಿಸಿ, ಅವುಗಳ ಕುರಿತಾದ ಭಯವನ್ನು ನಮ್ಮ ಮನಸ್ಸಿನಿಂದ ಹೊರಗಟ್ಟುವುದು ಅಗತ್ಯ. ನಮ್ಮ ಪರಿಧಿಯ ಒಳಗೆ ಬರುವ ಭಯದ ಪ್ರಭಾವಗಳನ್ನು ಗುರುತಿಸಿ, ಆದ್ಯತೆಯ ಅನುಸಾರ, ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದರಿಂದ ಭಯವು ವಾಸ್ತವದ ಬದುಕನ್ನು, ಅದರ ಸೌಂದರ್ಯವನ್ನು ಕಸಿದು ಕೊಳ್ಳುವುದರಿಂದ ನಾವು ಪಾರಾಗಬಹುದು. ಪತ್ರಿಕೆಗಳಲ್ಲಿ ಇಂತಹ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರ ಕುರಿತಾಗಿ ಓದಿದ್ದೇವೆ.

ಇವೆಲ್ಲವನ್ನು ಮೀರಿ, ಮನಸ್ಸನ್ನು ಎತ್ತರಿಸಿ, ಜಗತ್ತನ್ನು ನೋಡಿಕೊಳ್ಳುವ ಸರ್ವಶಕ್ತ, ಸರ್ವಜ್ಞ, ಸರ್ವಾಂತರ್ಯಾಮಿಯಾದ ನಿಯಾಮಕ ಶಕ್ತಿಯೊಂದಿದೆ ಎಂಬ ಧೈರ್ಯ ತಳೆಯುವುದು, ಇಂತಹ ಭಯಗಳಿಂದ ಹೊರಬರುವುದಕ್ಕೆ ಇರುವ, ಜ್ಞಾನಿಗಳು ತೋರಿಸಿದ ಅತ್ಯುತ್ತಮ ರಹದಾರಿ,. ಇದು ” ಹರ” ದಾರಿ…. ಹರದಾರಿ ದೂರ ಎಂದು ತೋರಿದರೂ , ಅಂಗೈಯಲ್ಲಿನ ನೆಲ್ಲಿಕಾಯಿಯಷ್ಟು ಸಮೀಪವಾದದ್ದು ಮತ್ತು ಆಪ್ತವಾದದ್ದು. ಅದು ಎಲ್ಲಾ ಧರ್ಮಗಳ ಸಾರಸರ್ವಸ್ವ. ಧರ್ಮ ಎಂದರೆ ಅದೇ …ದಾರಿ… ಅದರ ಬಳಿಗೆ ಸಾರಿ… ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ.

ನನ್ನನ್ನು ಅನೇಕ ಸಂಕಷ್ಟಗಳಿಂದ ಪಾರು ಮಾಡಿರುವುದು ಪ್ರಾರ್ಥನೆ. ಪ್ರಾರ್ಥನೆ ಇಲ್ಲದೆ ಇದ್ದರೆ ನಾನು ಹುಚ್ಚನಾಗುತ್ತಿದ್ದೆ “- ಎಂದು ಗಾಂಧೀಜಿ ಹೇಳಿದ್ದನ್ನು ಕೊಂಚ ಸ್ಮರಿಸ ಬಾರದೇಕೆ?

ಡಾ.  ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್ ಪುರುಷರಕಟ್ಟೆ ಪುತ್ತೂರು. ಅಸಿಸ್ಟೆಂಟ್ ಪ್ರೊಫೆಸರ್, ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.

 ಡಾ.  ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು ಹಾಗೂ ಚಿಂತಕರು, ಪ್ರಸಾದ್  ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್, ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ. ದ.ಕ.,
ಮೊಬೈಲ್:9740545979
rpbangaradka@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!