ಕೋವಿಡ್-19 ಹಾಗೂ 19 ಮಿಥ್ಯಗಳು ಕೊರೋನಾ ಜ್ವರದ ಬಗ್ಗೆ ಮತ್ತು ವೈರಾಣುವಿನ ಬಗ್ಗೆ ಕೆಲವೊಂದು ಸತ್ಯ ವಿಚಾರಗಳನ್ನು ಜನರ ಮಾಹಿತಿಗಾಗಿ ನೀಡಲು ಪ್ರಯತ್ನ.ಈ ವೈರಾಣುವಿನ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದಿದ್ದರೂ ಜನರಲ್ಲಿ ಹಲವಾರು ತಪ್ಪುಕಲ್ಪನೆಗಳು, ಮಿಥ್ಯಗಳು ಒಬ್ಬರಿಂದ ಇಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊರೋನಾ ವೈರಾಣು ವಿಶ್ವದೆಲ್ಲೆಡೆ ಪಸರಿಸಿ ತನ್ನ ಆರ್ಭಟವನ್ನು ಎಗ್ಗಿಲ್ಲದೆ ಮುಂದುವರಿಸುತ್ತಲೇ ಇದೆ. ಅಂಟಾರ್ಟಿಕಾ ಖಂಡವೊಂದನ್ನು ಹೊರತಾಗಿ ಸದ್ಯಕ್ಕೆ “ಕೊರೋನಾ ಹರಡದ ಜಾಗವಿಲ್ಲ” ಎಂಬಲ್ಲಿವರೆಗೆ ಈ ವೈರಾಣುವಿನ ರುದ್ರನರ್ತನ ಮುಂದುವರಿದಿದೆ. ಈ ವೈರಾಣುವಿನ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದಿದ್ದರೂ ಜನರಲ್ಲಿ ಹಲವಾರು ತಪ್ಪುಕಲ್ಪನೆಗಳು, ಮಿಥ್ಯಗಳು ಒಬ್ಬರಿಂದ ಇಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋವಿಡ್ -19 ಎಂಬ ವೈರಾಣುವಿನಿಂದ ಹರಡುವ ಈ ಕೊರೋನಾ ಜ್ವರದ ಬಗ್ಗೆ ಮತ್ತು ವೈರಾಣುವಿನ ಬಗ್ಗೆ ಕೆಲವೊಂದು ಸತ್ಯ ವಿಚಾರಗಳನ್ನು ಜನರ ಮಾಹಿತಿಗಾಗಿ ನೀಡಲಾಗಿದೆ.
- ಕ್ಲೋರಿನ್ ಮತ್ತು ಆಲ್ಕೋಹಾಲ್ ದ್ರಾವಣವನ್ನು ಚರ್ಮದ ಮೇಲೆ ಚಿಮುಕಿಸುವುದರಿಂದ ದೇಹದೊಳಗಿನ ವೈರಾಣು ಸಾಯುತ್ತದೆ. ಇದು ತಪ್ಪು ಕಲ್ಪನೆ. ದೇಹದ ಚರ್ಮದ ಮೇಲೆ ಕ್ಲೋರಿನ್ ಮತ್ತು ಆಲ್ಕೋಹಾಲ್ ಚಿಮುಕಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಕಣ್ಣಿಗೆ ಮತ್ತು ಬಾಯಿಗೆ ಈ ದ್ರಾವಣ ಹೋದಲ್ಲಿ ತೊಂದರೆ ಮುಂದಾಗಬಹುದು. ಈ ದ್ರಾವಣಗಳನ್ನು ಬರೀ ಜೀವವಿಲ್ಲದ ವಸ್ತುಗಳ ಮೇಲಿನ ವೈರಾಣುಗಳನ್ನು ನಾಶಪಡಿಸಲು ಮಾತ್ರ ಉಪಯೋಗಿಸಬಹುದಾಗಿದೆ. ದೇಹದೊಳಗೆ ಸೇರಿರುವ ವೈರಾಣುಗಳ ಮೇಲೆ ಈ ದ್ರಾವಣ ಸಿಂಪಡಿಸುವಿಕೆಯಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
- ಸೊಳ್ಳೆಗಳ ಮುಖಾಂತರ ಕೊರೋನಾ ವೈರಸ್ ಹರಡುತ್ತದೆ. ಇದು ತಪ್ಪು ಅಭಿಪ್ರಾಯ. ಡೆಂಗ್ಯೂ ಜ್ವರದಂತೆ, ಕೊರೋನಾ ವೈರಸ್ ಸೊಳ್ಳೆಗಳ ಮುಖಾಂತರ ಹರಡುವುದೇ ಇಲ್ಲ.
- ಕೊರೋನಾ ಪೀಡಿತರೆಲ್ಲಾ ಸಾಯುತ್ತಾರೆ. ಇದು ಕೂಡಾ ತಪ್ಪು ಕಲ್ಪನೆ, ಶೇಕಡಾ 80 ಮಂದಿ ಕೊರೋನಾ ಪೀಡಿತರು ಗುಣಮುಖರಾಗುತ್ತಾರೆ. ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟವರು, ಮಧುಮೇಹಿಗಳು ಮತ್ತು ವಯಸ್ಕರಲ್ಲಿ ಹೆಚ್ಚು ತೀವ್ರವಾಗಿ ಕಾಡುತ್ತದೆ ಮತ್ತು ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ. ಮರಣದ ಅನುಪಾತ ಕೋರೋನಾ ರೋಗದಲ್ಲಿ 3 ರಿಂದ 5 ಶೇಕಡಾ ಆಗಿರುತ್ತದೆ. ಹೆಚ್ಚಿನವರಲ್ಲಿ ಸಣ್ಣ ಜ್ವರ, ಕೆಮ್ಮು ಗಂಟಲು ಕೆರೆತ, ಮೈಕೈ ನೋವು ಮುಂತಾದ ಲಕ್ಷಣಗಳಿಗೆ ಸೀಮಿತವಾಗುತ್ತದೆ.
- ನಾಯಿ, ಬೆಕ್ಕುಗಳಿಂದಲೂ ಕೊರೋನಾ ಹರಡುತ್ತದೆ. ಇದು ಕೂಡಾ ತಪ್ಪು ಕಲ್ಪನೆ. ಎಲ್ಲೋ ಒಂದು ಎರಡು ಕಡೆ ನಾಯಿಗೆ ಸೋಂಕು ತಗುಲಿದ ಮಾತ್ರಕ್ಕೆ, ಅವುಗಳಿಂದ ಈ ರೋಗ ಹರಡುತ್ತದೆ ಎನ್ನಲಾಗದು. ಈ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಇನ್ನೂ ನಡೆಯಬೇಕಿದೆ.
- ಕೋವಿಡ್ -19 ಸಾಮಾನ್ಯ ಶೀತದಂತಹಾ ರೋಗ ಮತ್ತು ಭಯಪಡಬೇಕಾದ ಅವಶ್ಯಕತೆ ಇಲ್ಲ. ಇದೂ ಕೂಡಾ ತಪ್ಪು ಅಭಿಪ್ರಾಯ. ಕೊರೋನಾ ಜ್ವರ ಮತ್ತು ಪ್ಲೂ ಜ್ವರಗಳಲ್ಲಿ ಲಕ್ಷಣಗಳು ಸಾಮಾನ್ಯವಾಗಿ ಒಂದೇ ಇರುತ್ತದೆ. ಪ್ಲೂ ಜ್ವರ ಸಾಮಾನ್ಯವಾಗಿ ಮಾರಣಾಂತಿಕವಾಗುವುದಿಲ್ಲ. ಹೆಚ್ಚಾಗಿ ಅದು ತುಂಬಾ ತೀವ್ರತರವಾಗಿ ಕಾಡುವುದಿಲ್ಲ. ಆದರೆ ಕೋವಿಡ್-19 ವೈರಾಣು ಸೋಂಕು ಮಾರಣಾಂತಿಕವಾಗುವ ಎಲ್ಲ ಸಾಧ್ಯತೆಗಳು ಇದೆ. ದೇಹದ ರಕ್ಷಣಾ ಪ್ರಕ್ರಿಯೆ ಕುಂದಿದ ವ್ಯಕ್ತಿಗಳಲ್ಲಿ ಕೋವಿಡ್-19 ತುಂಬ ಉಗ್ರವಾಗಿ ಕಾಡಿ, ಜೀವ ಹಾನಿಯಾಗಲು ಕಾರಣವಾಗುತ್ತದೆ.
- ಮಕ್ಕಳಿಗೆ ಕೋವಿಡ್-19 ಸೋಂಕು ಬರುವುದಿಲ್ಲ. ಇದು ಕೂಡಾ ತಪ್ಪು ಅಭಿಪ್ರಾಯ. ಎಲ್ಲ ವಯಸ್ಸಿನವರು ಈ ರೋಗಕ್ಕೆ ತುತ್ತಾಗಬಹುದು. ಹೆಚ್ಚಾಗಿ ವಯಸ್ಕರಲ್ಲಿ ಕಂಡು ಬರುತ್ತದೆ. ಮಕ್ಕಳಲ್ಲಿಯೂ ಕಂಡು ಬರುವ ಸಾದ್ಯತೆ ಇರುತ್ತದೆ. ಆದರೆ ವಯಸ್ಕರಲ್ಲಿ ಇರುವಷ್ಟು ತೀವ್ರವಾಗಿ ಕಾಡದೇ ಇರಬಹುದು.
- ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಕೋವಿಡ್-19 ವೈರಾಣು ಸಾಯುತ್ತದೆ. ಇದೂ ಕೂಡಾ ತಪ್ಪು ಅಭಿಪ್ರಾಯ. ಬಿಸಿನೀರಿನಿಂದ ಸ್ನಾನ ಮಾಡಿದರೆ ವೈರಸ್ ಸಾಯಬೇಕೆಂದಿಲ್ಲ. ಹಾಗಾಗಿ ಎಚ್ಚರಿಕೆ ಅವಶ್ಯಕ.
- ಮುಖಕವಚ ಧರಿಸುವುದರಿಂದ ಕೋವಿಡ್-19 ಸೋಂಕಿನಿಂದ ಸಂಪೂರ್ಣ ರಕ್ಷಣೆ ಗುತ್ತದೆ. ಮುಖಕವಚದಿಂದ ಪರಿಪೂರ್ಣ ರಕ್ಷಣೆ ಸಿಗುವುದಿಲ್ಲ. ಕೋವಿಡ್-19 ವೈರಾಣು ಸೀನಿದಾಗ ಉಂಟಾಗುವ ಕಿರುಹನಿಗಳ ಮುಖಾಂತರ ಮತ್ತು ಸ್ಪರ್ಶದಿಂದ ಹರಡುತ್ತದೆ, ಈ ಕಿರುಹನಿಗಳು ನಮ್ಮ ದೇಹಕ್ಕೆ, ನಾವು ಉಸಿರಾಡುವಾಗ ಒಳಗೆ ಸೇರದಂತೆ ತಡೆಯಲು ಮುಖಕವಚ ಧರಿಸಬೇಕಾಗುತ್ತದೆ. ಅದೇ ರೀತಿ ಸೋಂಕಿತರು ಮುಖಕವಚ ಧರಿಸಿದಾಗ ಕಿರುಹನಿಗಳು ಹರಡದಂತೆ ತಡೆಯಬಹುದಾಗಿದೆ. ಪರಿಪೂರ್ಣ ರಕ್ಷಣೆ ಪಡೆಯಲು ಓ-95 ರೆಸ್ಪಿರೇಟರ್ ಎಂಬ ಮುಖಕವಚ ಧರಿಸಬೇಕು. ಇದನ್ನು ರಕ್ಷಣಾ ತಂಡದ ವೈದ್ಯರು ಮಾತ್ರ ಬಳಸುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ರೋಗ ಹರಡದಂತೆ ತಡೆಯಲು ಪ್ರತಿಯೊಬ್ಬರೂ ಮುಖಕವಚ ಧರಿಸಬೇಕಾದ ಅನಿವಾರ್ಯತೆ ಇದೆ.
- ಹಾಂಡ್ ಡ್ರೈಯರ್ಸ್‍ಗಳಿಂದ ಕೋವಿಡ್-19 ಸಾಯುತ್ತದೆ. ಹಾಂಡ್ ಡ್ರೆಯರ್ಸ್‍ಗಳಿಂದ ಕೋವಿಡ್-19 ವೈರಾಣು ಸಾಯುವುದಿಲ್ಲ. ಅತೀ ಸುಲಭ ಉಪಾಯ ಎಂದರೆ ಸೋಪ್ ದ್ರಾವಣದಿಂದ ಕೈಯನ್ನು ಶುಭ್ರವಾಗಿ ತೊಳೆಯುವುದು. ಇದರಿಂದ ವೈರಸ್ ಸಾಯುತ್ತದೆ. ಇನ್ನು ಆಲ್ಕೋಹಾಲ್ ಇರುವ ದ್ರಾವಣದಿಂದಲೂ ಕೈಯನ್ನು ಶುಚಿಗೊಳಿಸುವುದರಿಂದ ವೈರಾಣು ಸಾಯುತ್ತದೆ.
- ವಾತಾವರಣದ ಉಷ್ಣತೆ ಹೆಚ್ಚಿದಂತೆ ವೈರಾಣು ಸಾಯುತ್ತದೆ. ಬೇಸಗೆಯ ಕಾವಿಗೆ ವೈರಾಣು ಬದುಕುವುದಿಲ್ಲ. ಈ ವಿಚಾರದ ಬಗ್ಗೆಯೂ ಸರಿಯಾದ ಸ್ಪಷ್ಟನೆ ಇನ್ನೂ ದೊರೆತಿಲ್ಲ. ಒಮ್ಮೆ ವೈರಾಣು ಮನುಷ್ಯನ ದೇಹದ ಒಳಗೆ ಸೇರಿದ ಬಳಿಕ ಹೊರಗಿನ ಉಷ್ಣತೆ ಗಣನೆಗೆ ಬರುವುದಿಲ್ಲ. ಈ ಕಾರಣದಿಂದ ವೈರಾಣು ನಮ್ಮ ದೇಹದೊಳಗೆ ಸೇರದಂತೆ ಜಾಗರೂಕರಾಗಿರಬೇಕು.
- ರೋಗಾಣು ಹೊಂದಿರುವ ವ್ಯಕ್ತಿಯ ಜೊತೆ ಕನಿಷ್ಟ 10 ನಿಮಿಷ ಇದ್ದಲ್ಲಿ ಮಾತ್ರ ನಿಮಗೆ ಸೋಂಕು ತಗಲುತ್ತದೆ. ಇದು ಕೂಡಾ ತಪ್ಪು ಕಲ್ಪನೆ ರೋಗಾಣು ಇರುವ ವ್ಯಕ್ತಿ ಸೀನಿದಾಗ ನೀವು ಅಲ್ಲಿ ಇದ್ದಲ್ಲಿ ನೇರವಾಗಿ ಕಿರುಹನಿಗಳ ಮುಖಾಂತರ ವೈರಾಣು ನಿಮ್ಮ ದೇಹಕ್ಕೆ ತಲುಪಬಹುದು. ನೀವು ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ನಿಮಗೆ ರೋಗಾಣು ಹರಡದೇ ಇರಲೂ ಬಹುದು. ನೀವು ಎಷ್ಟು ಹೊತ್ತು ಅವರ ಜೊತೆ ಇದ್ದೀರಿ ಎನ್ನುವುದಕ್ಕಿಂತ ಎಷ್ಟು ಮುಂಜಾಗರೂಕತೆ ವಹಿಸಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಶಂಕಿತ ರೋಗಿ ಮುಟ್ಟಿದ ಯಾವುದೇ ವಸ್ತುವನ್ನು ಮುಟ್ಟಿದರೂ ನಿಮಗೆ ಅವರ ಮುಖಾಂತರ ವೈರಾಣು ನಿಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ಶಂಕಿತ ಮತ್ತು ಸೋಂಕಿತರನ್ನು ಬೇರೆಯಾಗಿಸಿ ಚಿಕಿತ್ಸೆ ನೀಡಲಾಗುತ್ತದೆ.
- ಆಂಟಿಬಯೋಟಿಕ್ ಬಳಕೆಯಿಂದ ವೈರಾಣುವನ್ನು ಸಾಯಿಸಬಹುದು. ಇದು ಕೂಡಾ ತಪ್ಪು ಅಭಿಪ್ರಾಯವಾಗಿದೆ. ಆಂಟಿಬಯೋಟಿಕ್ ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು. ವೈರಾಣುಗಳನ್ನು ಸಾಯಿಸಲು ಆಂಟಿ ವೈರಲ್ ಔಷಧಿ ಬಳಸಬೆಕು. ಕೋವಿಡ್-19 ವೈರಾಣು ವನ್ನು ಕೊಲ್ಲುವ ಆಂಟಿವೈರಲ್ ಔಷಧಿ ಇನ್ನೂ ದೊರೆತಿಲ್ಲ. ಆದರೆ ವೈರಾಣು ಸೋಂಕಿತರಲ್ಲಿ ಬ್ಯಾಕ್ಟೀರಿಯಾ ಸೋಂಕು ತಡೆಯಲು ಆಂಟಿಬಯೋಟಿಕ್ ಬಳಸುತ್ತಾರೆ. ಕೋವಿಡ್-19 ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯೂಮೋನಿಯಾ ಆಗದಂತೆ ತಡೆಯಲು ಆಂಟಿಬಯೋಟಿಕ್ ಬಳಸುತ್ತಾರೆ.
- ಬ್ಲೀಚಿಂಗ್ ದ್ರಾವಣ ಬಳಸಿ ವೈರಾಣುಗಳನ್ನು ಕೊಲ್ಲಬಹುದು. ಬ್ಲೀಚಿಂಗ್ ದ್ರಾವಣ ಬಳಸಿ ಬಾಯಿ ಮುಕ್ಕಳಿಸಿದಲ್ಲಿ ಬಾಯಿಯೊಳಗಿನ ಚರ್ಮ ಸುಟ್ಟು ಹೋಗುತ್ತದೆ. ವೈರಾಣುವಿನ ಜೊತೆ ನಮ್ಮ ದೇಹದ ಜೀವಕೋಶಗಳಿಗೂ ವಿಪರೀತ ಹಾನಿಯಾಗುತ್ತದೆ. ಈ ಕಾರಣದಿಂದ ಬ್ಲೀಚಿಂಗ್ ದ್ರಾವಣ ಬಳಸಲೇ ಬಾರದು.
- ಥರ್ಮಲ್ ಸ್ಕ್ಯಾನರ್ ಗಳಿಂದ ಕೊರೋನಾ ಪತ್ತೆ ಹಚ್ಚಲಾಗುತ್ತದೆ. ಇದೂ ಕೂಡ ತಪ್ಪು ಅಭಿಪ್ರಾಯ. ಥರ್ಮಲ್ ಸ್ಕ್ಯಾನರ್‍ಗಳನ್ನು ಜ್ವರವನ್ನು ಪತ್ತೆ ಹಚ್ಚಲಾಗುತ್ತದೆ. ಜ್ವರ ಹತ್ತು ಹಲವು ಕಾರಣಗಳಿಂದ ಬರಲು ಸಾಧ್ಯವಿದೆ. ಕೋವಿಡ್-19 ವೈರಾಣು ಪತ್ತೆ ಹಚ್ಚಲು ಬೇರೆಯೇ ಕಿಟ್ ಲಭ್ಯವಿದೆ. ಜ್ವರವಿದ್ದಲ್ಲಿ ಅಂತಹಾ ವ್ಯಕ್ತಿಗಳನ್ನು ಪ್ರತ್ಯೇಕಿಸಿ, ವಿಶೇಷ ನಿಗಾ ವಹಿಸಲಾಗುತ್ತದೆ, ಯಾಕೆಂದರೆ ಕೋವಿಡ್-19 ಸೋಂಕಿತರಿಗೆ ಜ್ವರ ಬರುವ ಎಲ್ಲಾ ಸಾಧ್ಯತೆಗಳೂ ಇದೆ.
- ಚೀನಾದಿಂದ ಬಂದ ಪಾರ್ಸೆಲ್‍ಗಳಲ್ಲಿ ವೈರಾಣು ಹರಡುವ ಸಾಧ್ಯತೆ ಇರುತ್ತದೆ. ಇದಕ್ಕೂ ಕೂಡಾ ಯಾವುದೇ ಪುರಾವೆ ಇರುವುದಿಲ್ಲ. ಚೀನಾದಿಂದ ಭಾರತ ದೇಶಕ್ಕೆ ಪಾರ್ಸೆಲ್ ಬರಲು ಹಲವು ದಿನಗಳು ತಗಲುತ್ತದೆ. ಅಷ್ಟು ದಿನಗಳ ಕಾಲ ವೈರಾಣು ಜೀವವಿಲ್ಲದ ವಸ್ತುಗಳ ಮೇಲೆ ಬದುಕಲು ಸಾಧ್ಯವಿರುವುದಿಲ್ಲ. ಬಾಹ್ಯ ಉಷ್ಣತೆಯಿಂದಲೂ ವೈರಾಣು ಸಾಯುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಪಾರ್ಸೆಲ್‍ಗಳ ಮುಖಾಂತರ ರೋಗ ಹರಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.
- ಮನೆಮದ್ದಿನಿಂದ ಕೋವಿಡ್-19 ವೈರಾಣುವನ್ನು ಸಾಯಿಸಬಹುದು. ಇದೂ ಕೂಡಾ ತಪ್ಪು ಅಭಿಪ್ರಾಯ. ಯಾವುದೇ ರೀತಿಯ ಮನೆಮದ್ದು, ಹಳ್ಳಿ ಮದ್ದಿನಿಂದ ರೋಗಾಣುವನ್ನು ಸಾಯಿಸಲು ಸಾದ್ಯವಿಲ್ಲ. ಆದರೆ ದೇಹದ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಗೊಳಿಸುವ ಪ್ರಯತ್ನ ನಾವು ಮಾಡಬಹುದು. ವಿಟಮಿನ್ ಸಿ ಇರುವ ಹಣ್ಣುಗಳು, ಹಸಿ ತರಕಾರಿಗಳು ಹಣ್ಣುಗಳು ಇತ್ಯಾದಿ ಬಳಸಿ ದೇಹದ ರೋಗ ನಿರೋಧಕತೆಯನ್ನು ವೃದ್ಧಿಸಬಹುದಾಗಿದೆ. ಬೆಳ್ಳುಳ್ಳಿ ತಿನ್ನುವುದರಿಂದ ಕೊರೋನಾ ವೈರಾಣು ಸಾಯುತ್ತದೆ. ಇದಕ್ಕೆ ಪೂರಕವಾದ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಬೆಳ್ಳುಳ್ಳಿ ಅಡ್ಡಿಪಡಿಸುತ್ತದೆ. ವೈರಾಣುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ದೇಶದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ ಎಂದು ತಿಳಿದುಬಂದಿದೆ. ರೋಗ ಗೆಲ್ಲಲು ಅತೀ ಸುಲಭ ಮತ್ತು ಉತ್ತಮ ಉಪಾಯ ಎಂದರೆ ಗಂಟೆಗೊಮ್ಮೆ ಚೆನ್ನಾಗಿ ಕೈ ತೊಳೆಯುವುದು ಮತ್ತು ಶಂಕಿತ ರೋಗಿಗಳ ಸಂಪರ್ಕಕ್ಕೆ ಬಾರದೇ ಇರುವುದು. ಮನೆಯೊಳಗೆ ಇದ್ದು, ರೋಗ ಬರದಂತೆ ತಡೆಯುವುದು ಅತೀ ಸುಲಭ ಮತ್ತು ಉತ್ತಮ ಮಾರ್ಗವಾಗಿದೆ.
- ಚೈನೀಸ್ ಆಹಾರ ತಿನ್ನುವುದರಿಂದ ಕೋವಿಡ್-19 ಸೋಂಕು ತಗಲುತ್ತದೆ. ಇದೂ ಕೂಡಾ ತಪ್ಪು ಕಲ್ಪನೆ. ಚೈನೀಸ್ ಆಹಾರಕ್ಕೂ ಕೋವಿಡ್-19 ವೈರಾಣುವಿಗೂ ಏನೂ ಸಂಬಂಧವಿಲ್ಲ. ಆದರೆ ಚೈನಾದಲ್ಲಿ ಹಕ್ಕಿ, ಬಾವಲಿ, ಚಿಪ್ಪುಹಂದಿ, ಜಿರಲೆ, ಕಪ್ಪೆ ತಿಂದು ಈ ರೋಗ ಪ್ರಾಣಿಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಇನ್ನೂ ಸಂಶೋಧನೆಗಳು ನಡೆದು ಸತ್ಯ ಹೊರಬೀಳಬೇಕಾಗಿದೆ. ಚೀನಾದ ಲ್ಯಾಬ್‍ನಲ್ಲಿ ಈ ವೈರಾಣುವನ್ನು ಸೃಷ್ಟಿಸಲಾಗಿದೆ. ಇದೂ ಕೂಡಾ ಸತ್ಯಕ್ಕೆ ದೂರವಾದ ಮಾತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾವುದೇ ಪುರಾವೆ ಇನ್ನೂ ದೊರಕಿಲ್ಲ. ಆದರೆ ವಿಜ್ಞಾನಿಗಳು ಇದು ವೈರಾಣುಗಳು ಬದಲಾದ ಬಾಹ್ಯ ಸನ್ನಿವೇಶಕ್ಕೆ ಅನುಗುಣವಾಗಿ ತಾವೇ ಮಾಡಿಕೊಂಡ ಬದಲಾವಣೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳು ಈ ವೈರಾಣು ಪ್ಯಾಂಗೊಲಿನ್ (ಚಿಪ್ಪು ಹಂದಿ) ಮತ್ತು ಬಾವಲಿಗಳಿಂದ ಮನುಷ್ಯರಿಗೆ ಬಂದಿರಬಹುದು ಎಂದು ಅಂದಾಜಿಸಿದ್ದಾರೆ. ಚೀನಾದಲ್ಲಿ ಬಾವಲಿ ಸೂಪ್‍ನಿಂದ ಈ ರೋಗ ಹರಡಿದೆ. ಇದರ ಬಗ್ಗೆ WHO ಮಾಹಿತಿ ಪಡೆಯುತ್ತಿದ್ದಾರೆ. ಯಾವುದೇ ಸರಿಯಾದ ಪುರಾವೆ ಇನ್ನೂ ದೊರೆಕಿಲ್ಲ. ಒಟ್ಟಿನಲ್ಲಿ ಪ್ರಾಣಿಗಳನ್ನು ಮನುಷ್ಯರಿಗೆ ಈ ವೈರಾಣು ಬಂದಿರಬಹುದು ಎಂದು ಅಂದಾಜಿಸಲಾಗಿದೆ.
- ಶಂಕಿತ ರೋಗಿಯ ಮಲಮೂತ್ರಗಳಿಂದ ಕೋವಿಡ್-19 ರೋಗ ಹರಡುತ್ತದೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕೋವಿಡ್-19 ವೈರಾಣು ಹೊಟ್ಟೆಗೆ ಸೇರಿದಾಗ ಅಲ್ಲಿನ ‘ಅಸಿಡಿಕ್’ ಅಥವಾ ಆಮ್ಲೀಯ ವಾತಾವರಣದಲ್ಲಿ ಬದುಕುಳಿಯುವುದು ಕಷ್ಟ ಸಾಧ್ಯ. ಈ ಕಾರಣದಿಂದ ಮಲದಲ್ಲಿ ಈ ವೈರಾಣು ಇರುವ ಸಾಧ್ಯತೆ ತುಂಬಾ ವಿರಳ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
- ಆಲ್ಕೋಹಾಲ್ ಕುಡಿಯುವುದರಿಂದ ಕೋವಿಡ್-19 ಸೋಂಕು ತಗಲುವುದಿಲ್ಲ. ಇದೂ ಕೂಡಾ ತಪ್ಪು ಕಲ್ಪನೆ. ಆಲ್ಕೋಹಾಲ್ ಬಳಸಿ, ದೇಹದ ಮೇಲ್ಭಾಗದ ಚರ್ಮದಲ್ಲಿನ ವೈರಾಣು ಸಾಯಿಸಬಹುದಾಗಿದೆ. ಇದೇ ಪ್ರಶ್ನೆಯನ್ನು ಇಟ್ಟುಕೊಂಡು ಹೆಚ್ಚಿನವರು ಆಲ್ಕೋಹಾಲ್ ಸೇವನೆಯಿಂದ ದೇಹದೊಳಗಿನ ವೈರಾಣುವನ್ನು ಕೊಲ್ಲಬಹುದು ಎನ್ನುವುದು ಮೂರ್ಖತನದ ಪರಮಾವಧಿ. ನಾವು ಸೇವಿಸುವ ಆಲ್ಕೋಹಾಲ್‍ನಲ್ಲಿ 40 ರಿಂದ 50 ಶೇಕಡಾ ಮಾತ್ರ ಆಲ್ಕೋಹಾಲ್ ಪ್ರಮಾಣ ಇರುತ್ತದೆ. ಆದರೆ ನಾವು ಸೋಂಕು ತಗಲದಂತೆ ವೈರಾಣು ನಿರ್ಮೂಲನೆಗೊಳಿಸುವ ಹಾಂಡ್ ಸ್ಯಾನಿಟೈಸರ್ ನಲ್ಲಿ 70 ರಿಂದ 75 ಶೇಕಡಾ ಆಲ್ಕೋಹಾಲ್ ಇರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಹಾಳಾಗುತ್ತದೆ. ಯಕೃತ್ ಕೂಡಾ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅಂತಹಾ ವ್ಯಕ್ತಿಗಳಿಗೆ ವೈರಾಣು ಮತ್ತು ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆ ಇತರರಿಗಿಂತ ಎರಡು ಪಟ್ಟು ಜಾಸ್ತಿ ಇರುತ್ತದೆ ಎಂದೂ ತಿಳಿದು ಬಂದಿದೆ.
ಕೊನೆಮಾತು:
ಕೋವಿಡ್-19 ಅತ್ಯಂತ ಅಪಾಯಕಾರಿ ವೈರಾಣು. ಇದೂ ಕೂಡಾ ತಪ್ಪು ಕಲ್ಪನೆ. ಎಬೋಲಾ ವೈರಾಣು ಬಹಳ ಅಪಾಯಕಾರಿ ವೈರಾಣು. ಅದರ ಸಾವಿನ ಅನುಪಾತ 45ರಿಂದ 50 ಶೇಕಡಾ ಮತ್ತು SARS ಸೋಂಕಿತರಲ್ಲಿ ಸಾವಿನ ಅನುಪಾತ 10 ರಿಂದ 15 ಶೇಕಡಾ ಆಗಿರುತ್ತದೆ. MERS ಸೋಂಕಿತರಲ್ಲಿ ಸಾವಿನ ಅನುಪಾತ 35 ರಿಂದ 40 ಶೇಕಡಾ ಇರುತ್ತದೆ. ಕೋವಿಡ್-19 ಸೋಂಕಿತರಲ್ಲಿ ಸಾವಿನ ಅನುಪಾತ 3 ರಿಂದ 5 ಶೇಕಡಾ ಮಾತ್ರ ಇರುತ್ತದೆ. ಕೊರೋನಾ ಜ್ವರ ಕೋವಿಡ್ 19 ಎಂಬ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗಕ್ಕೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ, ಲಸಿಕೆ ಇಲ್ಲದ ಕಾರಣದಿಂದ ರೋಗ ಬರದಂತೆ ನಾವೆಲ್ಲ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ನಮ್ಮೆಲ್ಲರ ಜಾಣತನ ಅಡಗಿದೆ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com