ಕೊರೊನ ಪುರಾಣ

ಕೊರೊನ ಪುರಾಣ

ಕೊರೊನ ಕೊರೊನ
ಏನೆಂದು ಕರೆ‌ಯಲಿ ನಾ ನಿನ್ನ
ಮನುಕುಲಕೆ ವಕ್ಕರಿಸಿರುವ ಮಹಾಮಾರಿಯೇ
ಮನುಕುಲಕ್ಕೇ ಪಾಠ ಕಲಿಸ ಬಂದ ಮಹಾಗುರುವೇ

ಕಣ್ಣಿಗೆ ಕಾಣದ ವೈರಾಣುವಾದರೂ ನೀ
ಕಣ್ಷುಮುಚ್ಚಿ ಬಿಡುವುದರೊಳಗೇ
ಮಾನವನ ಹೆಗಲೇರುವೆ
ಕೆಮ್ಮು ನೆಗಡಿ ಜ್ವರ ತಂದಿಡುವೆ
ಸದ್ದಿಲ್ಲದೇ ಶ್ವಾಸಕೋಶಕ್ಕಿಳಿದು
ಉಸಿರಾಟವನ್ನೇ ಹದಗೆಡಿಸುವೆ
ಸೋತು ಬಗ್ಗಿದವರ ಉಸಿರನ್ನೇ ಕೊಂಡೊಯ್ಯುವೆ
ಎದ್ದು ಗುದ್ದಿದವರ ಬಿಟ್ಟೋಡುವೆ

ಬಡವನೋ ಬಲ್ಲಿದನೋ ಚಿಕ್ಕವರೋ ದೊಡ್ಡವರೋ
ಗಂಡೋ ಹೆಣ್ಣೋ ಜಾತಿಮತ ಯಾವುದಾದರೇನು
ಎಲ್ಲರೂ ಒಂದೇ ನನ್ನ ಮುಂದೆ ಎನ್ನುತ್ತಿರುವೆ
ಆದರೂ ಶ್ರೀಮಂತರನ್ನೇ ಹೆಚ್ಚು ಕಾಡುತ್ತಿರುವೆ
ಮಿತಿಮೀರಿದ ಅವಾಂತರ ಮಾಡುತ್ತಾ
ಇಡೀ ಜಗತ್ತನ್ನೇ ದಿಗ್ಬಂಧನದಲ್ಲಿಟ್ಟಿರುವೆ

ನಿನ್ನ ಈ ಅತಿ ಹಾವಳಿಯ ನಡುವೆಯೂ
ಜನರಿಗೆ ಪಾಠ ಕಲಿಸುತ್ತಿರುವ ಮಹಾಗುರುವಾಗಿರುವೆ

ನಾನುನಾನೆನ್ನುತ್ತಾ ಮೂರನೇ ಮಹಾಯುದ್ದಕ್ಕೆ
ಸಜ್ಹಾಗುತ್ತಿದ್ದ ದೊಡ್ಡಣ್ಣರ ಅಹಂಕಾರ ಅಡಗಿಸಿರುವೆ
ಬದುಕಿದ್ದರೆ ಬೇಡಿತಿಂದೇವೆನ್ನುವ ಸತ್ಯದರ್ಶನ ಮಾಡಿಸಿರುವೆ
ಆತ್ಮರಕ್ಷಣೆಗಾಗಿ‌ ಯುದ್ದವ ಮರೆತು ನಿನ್ನೊಡನೇ
ಸಮರ ಸಾರುವಂತೆ ಮಾಡಿರುವೆ
ಅದಕ್ಕಾದರೂ ನಿನಗೊಂದು ಸಲಾಂ ಎನ್ನುವೆ

ಜನರಿಗೆ ಶುಚಿತ್ವದ ಪಾಠದ ಜೊತೆಜೊತೆಯಲ್ಲೇ
ಸಂಯಮ ಶಿಸ್ತನ್ನೂ‌ ಬೋಧಿಸುತ್ತಿರುವೆ
ವೈದ್ಯನಾರಾಯಣೋ ಹರಿಃ ಮಂತ್ರವ
ಅಕ್ಷರಷಃ ನಿಜವಾಗಿಸುತ್ತಿರುವೆ
ಮಾನವೀಯ ಮುಖಗಳ ಅನಾವರಣಗೊಳಿಸುತ್ತಿರುವೆ
ಅಮಾನವೀಯರಿಗೆ‌ ತಕ್ಕ ಶಾಸ್ತಿ ಮಾಡುತಿರುವೆ
ಗೋಮುಖ ವ್ಯಾಘ್ರರ‌ ಮುಖವಾಡ ಕಳಚುತ್ತಾ
ವಿಕೃತರ ವಿಕೃತಿಗಳ ಬಗ್ಗೆ ಎಚ್ಚರಿಕೆಯ
ಸಂದೇಶವನ್ನೂ ಸಾರುತ್ತಿರುವೆ

ಮನೆಯನ್ನೇ ಮರೆತುಹೋದವರನ್ನು
ಮರಳಿ ಮನೆಗೆ ಕರೆತಂದಿರುವೆ
ಎಲ್ಲರನ್ನೂ ನಳಮಹಾರಾಜರನ್ನಾಗಿಸುತ್ತಾ
ಮನೆಮನೆಯಲ್ಲೂ ನಳಪಾಕಶಾಲೆ ತೆರೆದಿರುವೆ
ಅಮ್ಮನ ಕೈರುಚಿ ಸವಿಯುವ ಭಾಗ್ಯವ ಕರುಣಿಸಿರುವೆ
ಪಾಕ ಪ್ರವೀಣರ ಪಾಕಾಲಯಕ್ಕೂ ಬಲಿಕೊಟ್ಟಿರುವೆ
ಸರ್ವರಿಗೂ ಸಹಭೋಜನದ ಸುಖ ತೋರಿಸುತ್ತಿರುವೆ
ಸಹ ಜೀವನದ ಮಜ ನೀಡುತ್ತಿರುವೆ

ಮಾಧ್ಯಮಗಳಲ್ಲಿ ಇನ್ನಿಲ್ಲದಂತೆ ವಿಜೃಂಭಿಸುತ್ತಿರುವೆ
ಸಾಮಾಜಿಕ ಜಾಲತಾಣಗಳಲ್ಲೂ ರಾರಾಜಿಸುತ್ತಿರುವೆ
ಜಗತ್ತಿನೆಲ್ಲಡೆ ಅಟ್ಟಹಾಸಗೈಯುತ್ತಾ ಸರ್ವಾಂತರ್ಯಾಮಿಯಾಗಿರುವೆ
ಆದರೆ ಸರ್ವಶಕ್ತನ ಮುಂದೆ ನಿನ್ನ ಆಟ
ಕೆಲವೇ ದಿನ ಎನ್ನುವ ಸತ್ಯವ ನೀ ಮರೆತಿರುವೆ
ಇಡೀ ಮನುಕುಲದ ಒಗ್ಗಟ್ಟಿನ ಹೋರಾಟಕ್ಕೆ
ನೀ ಮಣಿದು ಸಧ್ಯದಲ್ಲೇ ತಲೆಬಾಗೇಬಾಗುವೆ
ನಿನ್ನ ಪೂರ್ವಜರಂತೆಯೇ ನೀನೂ ಕೂಡಾ
ಹೇಳ ಹೆಸರಿಲ್ಲದಂತೆ ನಾಶವಾಗುವೆ

ಶಕುಂತಲಾ ಅಮರನಾಥ್
ಹವ್ಯಾಸಿ ಬರಹಗಾರ್ತಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!