ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ –
‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ ಪ್ರಶಸ್ತಿ ಪ್ರದಾನ
ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಉದ್ಘಾಟನೆ
ಬೆಂಗಳೂರು, ಸೆಪ್ಟೆಂಬರ್ 8: ಆರೋಗ್ಯದ ಕುರಿತು ವೈಜ್ಞಾನಿಕ ಅರಿವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಆರೋಗ್ಯ ಮತ್ತು ಸಾಹಿತ್ಯವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ಆಯೋಜಿಸಲಾದ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್, ಮಣಿಪಾಲ್ ಸೆಂಟರ್ ನಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಶುಭಾರಂಭಗೊಂಡವು. ಆರೋಗ್ಯದ ಅರಿವು ವೈದ್ಯರ ಕೊಠಡಿಯಲ್ಲಿ ಮಾತ್ರ ಸೀಮಿತವಾಗದೆ ಪ್ರತಿಯೊಂದು ಮನೆಯನ್ನೂ ತಲುಪಬೇಕು ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮವನ್ನು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ನ ವ್ಯವಸ್ಥಾಪಕರಾದ ಎನ್. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ವೈದ್ಯರು, ಆರೋಗ್ಯ ವೃತ್ತಿಪರರು, ಸಾಹಿತಿಗಳು, ಕವಿಗಳು, ಲೇಖಕರು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರುವ ವೈದ್ಯಲೋಕದ ಪ್ರಯತ್ನವನ್ನು ಶ್ಲಾಘಿಸಿದರು.
ಆರೋಗ್ಯ ಸಾಹಿತ್ಯ ಪರಿಷತ್ಗೆ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಚಾಲನೆ
ತತ್ ಕ್ಷಣ ಆಯುರ್ವೇದ ಹಾಸ್ಪಿಟಲ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆಶಾಕಿರಣ್ ಅವರು ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಳೆದ ಹಲವು ವರ್ಷಗಳಿಂದ ವೈದ್ಯಲೋಕದ ಮುಖ್ಯಸ್ಥ ಶ್ರೀಕೃಷ್ಣ ಮಾಯ್ಲೆಂಗಿ ಅವರು ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಂದ ಮಾಹಿತಿಯನ್ನು ಸಂಗ್ರಹಿಸಿ, ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ತಲುಪಿಸುತ್ತಿ ದ್ದಾರೆ” ಎಂದು ಪ್ರಶಂಸಿಸಿದರು.
“ಆಯುರ್ವೇದ, ಅಲೋಪತಿ, ಹೋಮಿಯೋಪತಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳ ಆರೋಗ್ಯ ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಶ್ಲಾಘನೀಯ” ಎಂದು ಅವರು ಹೇಳಿದರು. “ಹೆಲ್ತ್ವಿಷನ್ ಮತ್ತು ವೈದ್ಯಲೋಕ ಕರ್ನಾಟಕದ ಪ್ರಮುಖ ಆರೋಗ್ಯ ಮಾಸ ಪತ್ರಿಕೆ” ಎಂದು ಅವರು ಅಭಿಪ್ರಾಯಪಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು.

ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಸಾಹಿತಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರು, ವೈದ್ಯಲೋಕ ಸಂಪಾದಕರೂ ಆದ ಡಾ. ವಸುಂಧರಾ ಭೂಪತಿ, ಅವರು ಮಾತನಾಡಿ, “ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದೇ ಸಾಮಾಜಿಕ ಮಾಧ್ಯಮವನ್ನು ಆರೋಗ್ಯ ಜಾಗೃತಿ ಮೂಡಿಸುವ ಸಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.
“ಪ್ರತಿ ತಿಂಗಳು ದಿನಸಿ ಖರೀದಿಗೆ ಬಜೆಟ್ ಇಡುವಂತೆ ಉತ್ತಮ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಕೂಡ ಬಜೆಟ್ ಮೀಸಲಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದರು. “ಪುಸ್ತಕ ಪ್ರಕಟಣೆ ಸುಲಭದ ಕಾರ್ಯವಲ್ಲ; ಉತ್ತಮ ಆರೋಗ್ಯ ಸಾಹಿತ್ಯದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಅವರು ಹೇಳಿದರು.
ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಅಗತ್ಯ
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ವೈದ್ಯ, ಕವಿ ಹಾಗೂ ಸಾಹಿತಿ, ಡಾ. ಸುರೇಶ್ ನೆಗಳಗುಳಿ ಅವರು “ವೈದ್ಯರು ಬರೆದ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ವೈದ್ಯಸಾಹಿತ್ಯದ ಪರಂಪರೆ ಹೊಸದಲ್ಲ; ಆರೋಗ್ಯ ಮತ್ತು ವೈದ್ಯಕೀಯ ಜ್ಞಾನವನ್ನು ಜನರಿಗೆ ತಲುಪಿಸುವ ಅನೇಕ ಕೃತಿಗಳು ಹಿಂದಿನಿಂದಲೂ ಪ್ರಕಟವಾಗಿವೆ” ಎಂದು ಅವರು ತಿಳಿಸಿದರು.
“ಆನ್ಲೈನ್ನಲ್ಲಿ ಆರೋಗ್ಯ ಮಾಹಿತಿಯನ್ನು ಪಡೆಯುವುದು ಸಹಾಯಕವಾದರೂ, ಗೂಗಲ್ನಲ್ಲಿ ಲಕ್ಷಣಗಳನ್ನು ಹುಡುಕಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದು ಸರಿಯಾದ ವಿಧಾನವಲ್ಲ. ಆರೋಗ್ಯ ಸಮಸ್ಯೆಗಳಿಗೆ ಅರ್ಹ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ” ಎಂದು ಅವರು ಹೇಳಿದರು.
‘ಆರೋಗ್ಯ ಸಾಹಿತ್ಯ ರತ್ನ’ ಗೌರವ
ಆರೋಗ್ಯ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಸೇವೆ ಸಲ್ಲಿಸಿದ ಡಾ. ಸುರೇಶ್ ನೆಗಳಗುಳಿ, ಡಾ. ವಸುಂಧರಾ ಭೂಪತಿ ಹಾಗೂ ಎನ್.ವಿ. ರಮೇಶ್ ಅವರನ್ನು ‘ಆರೋಗ್ಯ ಸಾಹಿತ್ಯ ರತ್ನ’ ಪ್ರಶಸ್ತಿ ಗೌರವದೊಂದಿಗೆ ಸನ್ಮಾನಿಸಲಾಯಿತು.

ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಯು. ಪ್ರೇಮಚಂದ್ರ ಅವರು ಮಾತನಾಡಿ, “ವೈದ್ಯರಿಂದ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಜನಸಾಮಾನ್ಯರಿಗೆ ತಲುಪಿಸುವುದು ಸುಲಭದ ಕೆಲಸವಲ್ಲ. ವೈದ್ಯಲೋಕ ಮತ್ತು ಹೆಲ್ತ್ವಿಷನ್ ತಂಡವು ಈ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು “ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡುವುದರ ಜೊತೆಗೆ, ಉತ್ತಮ ಪುಸ್ತಕಗಳು ಮತ್ತು ಆರೋಗ್ಯ ಮಾಹಿತಿಯನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊ ಳ್ಳಿ” ಎಂದು ಸಲಹೆ ನೀಡಿದರು.
ಲೇಖಕ, ನಾಟಕಕಾರ ಮೈಸೂರಿನ ಎನ್.ವಿ. ರಮೇಶ್ ಅವರು ಮಾತನಾಡಿ, “ವೈದ್ಯಲೋಕ ವೈದ್ಯರಿಗೆ ಮಾತ್ರವಲ್ಲದೆ ಆರೋಗ್ಯದ ಕುರಿತು ಜ್ಞಾನ ಮತ್ತು ಅನುಭವ ಹೊಂದಿರುವ ಎಲ್ಲರಿಗೂ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸುತ್ತಿದೆ” ಎಂದು ತಿಳಿಸಿದರು. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ವೈದ್ಯಲೋಕ, ಹೆಲ್ತ್ವಿಷನ್, ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ಗಳೊಂದಿಗೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ವೈದ್ಯಲೋಕ ಮತ್ತು ಹೆಲ್ತ್ವಿಷನ್ ನ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಮಾತನಾಡಿ, “ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ಮಾಧ್ಯಮಗಳನ್ನು ಸೃಜನಾತ್ಮಕವಾಗಿ ಬಳಸಬೇಕು. ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ, ವೈಜ್ಞಾನಿಕ ಅರಿವು ಮತ್ತು ರೋಗನಿರೋಧಕ ಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಅತ್ಯಂತ ಪರಿಣಾಮಕಾರಿ” ಎಂದು ಹೇಳಿದರು.
“ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರು ಆರೋಗ್ಯ ಪ್ರತಿಷ್ಠಾನಗಳ ಮುಖ್ಯ ಉದ್ದೇಶವೇ ಆರೋಗ್ಯಕರ ಸಮಾಜ ನಿರ್ಮಾಣ ” ಎಂದು ಶ್ರೀಕೃಷ್ಣ ಹೇಳಿದರು.
“ಆರೋಗ್ಯ ಸಾಹಿತ್ಯವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಆರೋಗ್ಯ ಕುರಿತ ವಿವಿಧ ಕಥೆ, ಕವನ ಮತ್ತು ಸೃಜನಾತ್ಮಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು” ಎಂದು ಹೇಳಿದರು.
ಸುಮಾರು 500 ಮಂದಿ ಸ್ಪರ್ಧಿಗಳಿಂದ ಭಾಗವಹಿಸುವಿಕೆ
‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ಕ್ಕೆ ವೈದ್ಯರು, ಆರೋಗ್ಯ ವೃತ್ತಿಪರರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ದೊರೆತಿದ್ದು, ಸುಮಾರು 500 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಆರೋಗ್ಯ ಜಾಗೃತಿ, ಜೀವನಶೈಲಿ, ಆಹಾರ, ಪೌಷ್ಟಿಕತೆ ಹಾಗೂ ಆರೋಗ್ಯಕರ ಬದುಕಿನ ವಿವಿಧ ಆಯಾಮಗಳನ್ನು ಕಥೆ ಮತ್ತು ಕವನಗಳ ಮೂಲಕ ಅಭಿವ್ಯಕ್ತಪಡಿಸಲಾಯಿತು. ಕಥೆ ಮತ್ತು ಕವನ ಸ್ಪರ್ಧೆ – ವೈದ್ಯರು ಹಾಗೂ ಆರೋಗ್ಯ ವೃತ್ತಿಪರರು, ಸಾರ್ವಜನಿಕರು ಮತ್ತು ವೈದ್ಯಕೀಯ ವಿದ್ಯಾರ್ಥಿ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.
ವಿಜೇತರಿಗೆ ಪ್ರಶಸ್ತಿ ಪ್ರದಾನ
ಕಥೆ ವಿಭಾಗದಲ್ಲಿ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ವಿಭಾಗದ ಪ್ರಥಮ ಬಹುಮಾನವನ್ನು ಡಾ. ನವೀನ್ ಎಲ್ಲಂಗಳ, ಸಾರ್ವಜನಿಕ ವಿಭಾಗದಲ್ಲಿ ಎಸ್. ರಘುನಂದನ್, ವೈದ್ಯಕೀಯ ವಿದ್ಯಾರ್ಥಿಗಳ ವಿಭಾಗದಲ್ಲಿ ಡಾ. ಭವ್ಯ ಎಲ್. ಪಡೆದುಕೊಂಡರು.
ಕವನ ವಿಭಾಗದಲ್ಲಿ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ವಿಭಾಗದ ಪ್ರಥಮ ಬಹುಮಾನವನ್ನು ಡಾ. ಸುರೇಶ್ ನೆಗಳಗುಳಿ, ಸಾರ್ವಜನಿಕ ವಿಭಾಗದಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ವಿದ್ಯಾರ್ಥಿಗಳ ವಿಭಾಗದಲ್ಲಿ ರವಿಕುಮಾರ್ ಎ.ಎಸ್. ಪಡೆದುಕೊಂಡರು.
ದ್ವಿತೀಯ ಹಾಗೂ ತೃತೀಯ ಬಹುಮಾನಗಳಲ್ಲಿಯೂ ವಿವಿಧ ವಿಭಾಗಗಳ ಹಲವಾರು ಪ್ರತಿಭಾವಂತರು ಪ್ರಶಸ್ತಿ ಪಡೆದರು. ಇದರೊಂದಿಗೆ ಹಲವಾರು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಮುಳಿಯ ಜ್ಯುವೆಲ್ಸ್ ಅಂಡ್ ಡೈಮಂಡ್ಸ್ ವತಿಯಿಂದ ಲಕ್ಕಿ ಡಿಪ್ ಡ್ರಾ ಆಯೋಜಿಸಲಾಯಿತು. ಆರೋಗ್ಯ ಜಾಗೃತಿಯನ್ನು ಕೇವಲ ವೈದ್ಯಕೀಯ ಮಾಹಿತಿಯ ರೂಪದಲ್ಲಿ ನೀಡದೆ ಕಥೆ, ಕವನ ಮತ್ತು ಸಾಹಿತ್ಯದ ಮೂಲಕ ಜನಮನಕ್ಕೆ ತಲುಪಿಸುವ ಹೊಸ ಪ್ರಯತ್ನಕ್ಕೆ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ ಉತ್ತಮ ವೇದಿಕೆಯಾಯಿತು.










