ಅತ್ತಿಮರವನ್ನು ಅಲಕ್ಷಿಸಬೇಡಿ

ಅರಣ್ಯ ನಾಶ ಹಾಗೂ ಅನ್ಯ ಕೃಷಿಗಾಗಿ ಸಹಜ ಮರಗಳನ್ನು ಕೊಲ್ಲುವ ಪ್ರವೃತ್ತಿಯಿಂದಾಗಿ ನಾವು ನಿರ್ಮೂಲಗೊಳಿಸುತ್ತಿರುವ ಅಮೂಲ್ಯ ಸಸ್ಯ ಸಂತತಿಯಲ್ಲಿ ಅತ್ತಿಮರವೂ ಒಂದಾಗಿದೆ. ಸಂಸ್ಕøತದಲ್ಲಿ ಔದುಂಬರ ಎಂಬ ಹೆಸರಿರುವ ಅದರ ಕಡ್ಡಿಗಳು ಮತ್ತು ಎಳೆಯ ಕೊಂಬೆಗಳು ಯಾಗ, ಯಜ್ಞಾದಿಗಳಿಗೆ ಬೇಕಾಗುತ್ತವೆ. ಹಾಗೆಯೇ ಅತ್ತಿಮರವಿರುವಲ್ಲಿ ಭಾರೀ ಜಲ ನಿಕ್ಷೇಪವಿರುವುದಾಗಿ ಹಿಂದಿನವರು ಹೇಳುತ್ತಿದ್ದರು. 30 ಮೀಟರ್ ತನಕ ಎತ್ತರವಾಗುವ ಈ ನಿತ್ಯ ಹರಿದ್ವರ್ಣದ ಮರ ನೂರಾರು ವರ್ಷ ಬದುಕುತ್ತದೆ. ಅದರ ಕಾಯಿಗಳು ಔಷಧೋಪಯೋಗಿ ಮಾತ್ರವಲ್ಲ, ತರಕಾರಿಯಂತೆ ಪಲ್ಯ, ಸಾಂಬಾರು ತಯಾರಿಕೆಗೂ ಬಳಸಬಹುದು. ಎಲೆ, ಚಿಗುರು, ಬೇರು, ತೊಗಟೆ, ಹಾಲು, ಹಣ್ಣು ಎಲ್ಲವೂ ಔಷಧವೇ ಆಗಿರುವ ಅತ್ತಿ ನಿಸರ್ಗದ ಒಂದು ಸಂಜೀವಿನಿಯೇ ಹೌದು.
ಸಸ್ಯಶಾಸ್ತ್ರದಲ್ಲಿ ಫಿಕಸ್ ರಿಸೆಮೊಸಾ ಎಂದು ಹೆಸರಿರುವ ಅತ್ತಿ ಭಾರತವಲ್ಲದೆ ಆಸ್ಟ್ರೇಲಿಯಾ, ಮಲೇಷ್ಯ, ಆಗ್ನೇಯ ಏಷ್ಯಾಗಳಲ್ಲಿ ಕಾಣಸಿಗುತ್ತದೆ. ಅದರ ಎಲೆಗಳಲ್ಲಿ ಫ್ಲವೊನೈಡ್‍ಗಳು, ಕ್ಷಾರಾಭಗಳು, ಟ್ಯಾನಿನ್, ಅಸಿಡ್, ರೆಸಿಮೋಸಿಕ್ ಆಮ್ಲಗಳಿವೆ. ಕಾಂಡದ ತೊಗಟೆಯಲ್ಲಿ ಗ್ಲೈಕೊಸೈಡ್, ಸ್ಟೆರೋಲ್‍ಗಳು ಸಾಕಷ್ಟಿವೆ. ಇವು ಹಲವು ಕಾಯಿಲೆಗಳನ್ನು ಗುಣಪಡಿಸಲು ಸಮರ್ಥವಾಗಿವೆ.
ಹಣ್ಣುಗಳು ಕುಷ್ಠರೋಗ, ಬಿಳಿ ಸೆರಗು, ರಕ್ತದ ತೊಂದರೆಗಳು, ನರರೋಗ, ಜಠರದುರಿತ, ಮೂರ್ಛೆರೋಗ, ಗಾಯ, ಮೂಳೆ ಮುರಿತ, ಒಣಕೆಮ್ಮು, ಸುಟ್ಟ ಗಾಯ, ಮೂತ್ರದ ಸೋಂಕು, ಬ್ರಾಂಕೈಟಿಸ್, ಸ್ತ್ರೀಯರ ಅತಿ ಋತುಸ್ರಾವ, ಕರುಳಿನ ಹುಳ ಮುಂತಾದ ವ್ಯಾಧಿಗಳನ್ನು ಗುಣಪಡಿಸುತ್ತದೆ. ಜೀರ್ಣಕಾರಿ. ಪಿತ್ಥ, ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳಿಗೂ ಅದೊಂದು ಔಷಧ. ಬೇರು ಮೂತ್ರವರ್ಧಕ, ತೊಗಟೆ ಸ್ತನ್ಯಕ್ಷೀರ ವರ್ಧಕವಾಗಿವೆ. ಎಲೆಗಳ ಕಷಾಯದಿಂದ ಗಾಯಗಳನ್ನು ತೊಳೆದರೆ ರೋಗಾಣು ನಿರೋಧವಾಗುತ್ತದೆ. ಅತಿಸಾರ, ಅಲ್ಸರ್, ಭೇದಿ, ಮಧುಮೇಹ, ಅಸ್ತಮಾ, ಚರ್ಮದ ಸೋಂಕು, ವಿಸರ್ಪ, ರಕ್ತದೋಷ, ಚರ್ಮದ ಸೋಂಕುಗಳಿಗೆ ಎಲೆಯ ಮೊಗ್ಗುಗಳಿಂದ ಚಿಕಿತ್ಸೆ ಮಾಡುತ್ತಾರೆ.
ಅತ್ತಿಮರದ ಹಸಿ ತೊಗಟೆಯನ್ನು ತುಪ್ಪದಲ್ಲಿ ಅರೆದು ಹಚ್ಚಿದರೆ ಕಿವಿಯ ಹೊರಗಿನ ವ್ರಣಗಳು ಗುಣವಾಗುತ್ತವೆ, ಅನ್ನದೊಂದಿಗೆ ಬೇಯಿಸಿ ಹಸುಗಳಿಗೆ ತಿನ್ನಲು ಕೊಟ್ಟರೆ ಪ್ರಸವ ಕಾಲದ ನಂಜು ಗುಣ ಹೊಂದುತ್ತದೆ. ಅತ್ತಿಬೇರಿನ ಚೂರ್ಣವನ್ನು ಇಂಗಿನೊಂದಿಗೆ ಎಣ್ಣೆಯಲ್ಲಿ ಕಲಸಿ ಲೇಪಿಸಿದರೆ ಗಂಡಮಾಲೆಗೆ ಸಿದ್ಧೌಷಧ. ಅತ್ತಿಯ ಮರದ ಹಾಲಿಗೆ ಸಕ್ಕರೆ ಬೆರೆಸಿ ಸೇವಿಸಿ ಬೇರನ್ನು ತುಪ್ಪದಲ್ಲಿ ತೇದು ಲೇಪಿಸಿದರೆ ಶರ್ಕರಾ ಮೇಹಕ್ಕೆ ಪರಿಹಾರ. ಅತ್ತಿಯ ಚಿಗುರನ್ನು ಎಕ್ಕದ ಹಾಲಿನಲ್ಲಿ ಅರೆದು ಜೇನಿನೊಂದಿಗೆ ಸೇವಿಸಿದರೆ ಉಬ್ಬಸ ಶಮನವಾಗುವುದು. ಅತ್ತಿಯ ಒಣಕಡ್ಡಿಗಳನ್ನು ಉರಿಸಿ ಸೇದಿದರೆ ಉಬ್ಬಸ ರೋಗಿಗಳಿಗೆ ಉಸಿರಾಟ ಸಲೀಸಾಗುತ್ತದೆ.
ಅತ್ತಿಮರದ ಬೇರನ್ನು ಮಣ್ಣಿನಿಂದ ಬಿಡಿಸಿ ಶುಚಿಯಾಗಿ ತೊಳೆದು ತುದಿ ಕತ್ತರಿಸಿ ಒಂದು ಮಣ್ಣಿನ ಮಡಕೆಯಲ್ಲಿರಿಸಿ ವಸ್ತ್ರದಿಂದ ಮುಚ್ಚಬೇಕು. ಮಡಕೆಯಲ್ಲಿ ಸಂಗ್ರಹವಾಗುವ ಅದರ ಪರಿಶುದ್ಧವಾದ ತಿಳಿನೀರಿಗೆ ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಉರಿಮೂತ್ರವಲ್ಲದೆ ಮೂತ್ರ ಸಂಬಂಧೀ ರೋಗಗಳು ಗುಣವಾಗುವವು. ಬೇಸಗೆಯಲ್ಲಿ ಇದು ರುಚಿಕರವಾದ ಪಾನೀಯವೂ ಹೌದು. ತೊಗಟೆಯನ್ನು ಪೇಸ್ಟ್‍ನಂತೆ ಅರೆದು ಬಿಸಿ ಮಾಡಿ ಮೈಗೆ ಲೇಪಿಸಿಕೊಂಡರೆ ಸೊಳ್ಳೆಯಂತಹ ಕೀಟಗಳು ಕಡಿಯುವುದಿಲ್ಲ. ಎಲೆಗಳನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಮಲಬದ್ಧತೆ ಪರಿಹಾರವಾಗುವುದು. ಎಳೆಯ ಮಕ್ಕಳಿಗೆ ಹಸಿ ತೊಗಟೆಯನ್ನು ಸ್ತನ್ಯಕ್ಷೀರದಲ್ಲಿ ಅರೆದು ಕುಡಿಸಬಹುದು. ಎಳೆಯ ಎಲೆಗಳನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಸೋಸಿ, ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಆಮ್ಲಪಿತ್ಥಕ್ಕೆ ರಾಮಬಾಣ. ಚಿಗುರನ್ನು ಮೊಸರಿನಲ್ಲಿ ಅರೆದು ಸೇವಿಸಿ, ತೊಗಟೆಯನ್ನು ತುಪ್ಪದಲ್ಲಿ ಅರೆದು ಹಚ್ಚುವ ಮೂಲಕ ಕಾಲಿನ ಆಣಿಗಳು ಸೇರಿದಂತೆ ಅಸಾಧ್ಯ ವ್ರಣಗಳನ್ನು ಗುಣಪಡಿಸಬಹುದು.
ಅತ್ತಿ ಎಲೆಗಳಿಂದ ಬರುವ ಹಾಲು ಉರಿಯೂತ, ನೋವು, ಬಾವು, ಪುರುಷರ ಲೈಂಗಿಕ ದೌರ್ಬಲ್ಯ, ಮಕ್ಕಳ ಅತಿಸಾರ, ಭೇದಿಗಳ ಚಿಕಿತ್ಸೆಗೆ ಬಳಕೆಯಾಗುತ್ತದೆ. ಬೇರಿನಿಂದ ಎದೆಯ ತೊಂದರೆಗಳು, ಉರಿಯೂತದಿಂದ ಗ್ರಂಥಿಗಳ ಹಿಗ್ಗುವಿಕೆ, ಮೂತ್ರದ ಸಕ್ಕರೆ ಅಂಶವನ್ನು ಕಡಮೆ ಮಾಡಲು ಉಪಯೋಗವಾಗುವುದು. ಕಡೀರಬೇರು ಮತ್ತು ಅತ್ತಿಯ ತೊಗಟೆಯ ಕಷಾಯ ಸೇವನೆ ರಕ್ತಪಿತ್ಥ ಗುಣಪಡಿಸುತ್ತದೆ. ನೇರಳೆ, ಗೋಳಿ ಮತ್ತು ಅತ್ತಿಮರಗಳ ಹಸಿ ತೊಗಟೆಯನ್ನು ನೊರೆಹಾಲಿನಲ್ಲಿ ಅರೆದು ಸೇವಿಸಿದರೆ ರಕ್ತಮೂತ್ರ ಮತ್ತಿತರ ಮೂತ್ರದ ತೊಂದರೆಗಳು ಶಮನವಾಗುತ್ತವೆ.

ಪ.ರಾಮಕೃಷ್ಣ ಶಾಸ್ತ್ರಿ
9483352306

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!