ಲಿವರ್ ಸಿರೋಸಿಸ್ ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಸನ್ನಿವೇಶ. ತಕ್ಷಣವೇ ವೈದ್ಯರ ಸಲಹೆ ಅವಶ್ಯಕ. ಮಧ್ಯಪಾನ ಸೇವನೆಯನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು.
ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಹೋದಲ್ಲಿ ಈ ಸನ್ನಿವೇಶವನ್ನು ಸಿರೋಸಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಕೃತ್ತಿನಲ್ಲಿ ಹೆಪಾಟೋಸೈಟ್ ಎಂಬ ಜೀವಕೋಶಗಳು ತುಂಬಿರುತ್ತದೆ. ದಿನ ಬೆಳಗಾಗುವುದರಲ್ಲಿ ಈ ಯಕೃತ್ತಿಗೆ ಹಾನಿಯಾಗುವುದಿಲ್ಲ. ಸಾಮಾನ್ಯವಾಗಿ ಅತಿಯಾದ ಮಧ್ಯಪಾನ ಸೇವನೆ, ಹೆಪಟೈಟಿಸ್ ಸಿ ಮತ್ತು ಬಿ ಎಂಬ ಸೋಂಕು ಮತ್ತು ಅತಿಯಾದ ಔಷಧಿಗಳ ಸೇವನೆ ಮುಂತಾದ ಕಾರಣಗಳಿಂದ ಯಕೃತ್ತ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಬಹುದು. ಈ ಹಂತದಲ್ಲಿ ಯಕೃತ್ತಿನ ತುಂಬ ಹೆಪಾಟೋಸೈಟ್ ಜೀವಕೋಶಗಳ ಬದಲಾಗಿ ಫೈಬ್ರಸ್ ಅಂಶಗಳು ತುಂಬಿಕೊಂಡು, ಯಕೃತ್ತಿನ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ.
ಅತಿಯಾದ ದೇಹದ ತೂಕ, ಸ್ಥೂಲಕಾಯ, ಮಧುಮೇಹ, ಅತಿಯಾದ ರಕ್ತದೊತ್ತಡ, ಅತಿಯಾದ ಕೊಬ್ಬಿನ ಶೇಖರಣೆ, ಅತಿಯಾದ ಅನಗತ್ಯ ಔಷಧಿ ಸೇವನೆ, ದೇಹದ ರಕ್ಷಣಾ ವ್ಯವಸ್ಥೆಯ ಮೇಲಿನ ಸ್ವಯಂ ದ್ವೇಷ ಮುಂತಾದ ಕಾರಣಗಳಿಂದಲೂ ಲಿವರ್ ಸಿರೋಸಿಸ್ ಕಾಯಿಲೆ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆಯೂ ಯಕೃತ್ತ್ ನಾರುಗಳಿಂದ ತುಂಬಿಕೊಂಡು ಆಲ್ಕೋಹಾಲ್ ರಹಿತ ಲಿವರ್ ಸಿರೋಸಿಸ್ ಖಾಯಿಲೆಗೆ ತುತ್ತಾಗುತ್ತದೆ. ಆಂಗ್ಲಭಾಷೆಯಲ್ಲಿ ಸಿರೋಸಿಸ್ ಖಾಯಿಲೆಗೆ ಕೊಬ್ಬು ತುಂಬಿದ ಯಕೃತ್ತು ಎಂದು ಕರೆಯುತ್ತಾರೆ.
ಲಿವರ್ ಸಿರೋಸಿಸ್ ಲಕ್ಷಣಗಳು:
ಈ ಕಾಯಿಲೆ ಬಂದಾಗ ವ್ಯಕ್ತಿ ವಿಪರೀತ ಬಳಲಿಕೆ, ಸುಸ್ತು, ಹಸಿವಿಲ್ಲದಿರುವುದು, ತುರಿಕೆ, ಕಾಲುಗಳು ಊದಿಕೊಳ್ಳುವುದು, ಹಳದಿ ಚರ್ಮ, ಹೊಟ್ಟೆಯ ಸುತ್ತ ನೀರು ತುಂಬಿಕೊಳ್ಳುವುದು, ಬೇಗನೆ ಗಾಯವಾಗುವುದು, ರಕ್ತ ಹೆಪ್ಪುಗಟ್ಟದಿರುವುದು, ಜೇಡರ ಬಲೆಯ ರೂಪದ ರಕ್ತನಾಳಗಳು ಹೊಟ್ಟೆಯ ಸುತ್ತು ಕಾಣಿಸಿಕೊಳ್ಳುವುದು, ಯಕೃತ್ತ್ ಊದಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರ ಸಲಹೆ ಅವಶ್ಯಕ. ಮಧ್ಯಪಾನ ಸೇವನೆಯನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು.
Also Read: Liver cirrhosis treatment in Ayurveda
ಹೊಟ್ಟೆಯ ಸ್ಕ್ಯಾನ್ ಮತ್ತು ಕೂಲಂಕುಷವಾದ ದೇಹದ ಪರೀಕ್ಷೆ, ರಕ್ತ ಪರೀಕ್ಷೆ, ಲಿವರ್ ಕಾರ್ಯಕ್ಷಮತೆಯ ಪರೀಕ್ಷೆ, ಮತ್ತು ಯಕೃತ್ತ್ತಿನ ಬಯಾಪ್ಸಿ ಅಥವಾ ಸಣ್ಣ ತುಂಡನ್ನು ಕತ್ತರಿಸಿ ತೆಗೆದು ಸೂಕ್ತ ದರ್ಶಕ ಅಡಿಯಲ್ಲಿ ಅಧ್ಯಯನ ಮಾಡಿದಾಗ ಸಿರೋಸಿಸ್ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಅತಿಯಾದ ಔಷಧಿ ಸೇವನೆ, ಅನಗತ್ಯವಾಗಿ ನೋವು ನಿವಾರಕಗಳ ಸೇವನೆಯಿಂದಲೂ ಯಕೃತ್ತಿಗೆ ಹಾನಿಯಾಗಿ, ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು, ವ್ಯಕ್ತಿಯ ಜೀರ್ಣ ಕ್ರಿಯೆ, ರಕ್ಷಣಾ ಕ್ರಿಯೆ ಮತ್ತು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಹೊಡೆತ ಬಿದ್ದು, ಮಾರಣಾಂತಿಕ ರೋಗವಾಗಿ ಪರಿಣಮಿಸುವ ಸಾಧ್ಯತೆಗಳೂ ಇದೆ.
ತಡೆಗಟ್ಟುವುದು ಹೇಗೆ?
1. ಮಧ್ಯಪಾನ ಮತ್ತು ಧೂಮಪಾನ ವರ್ಜಿಸಲೇಬೇಕು. ದಿನಕ್ಕೆ ಮೂರಕ್ಕಿಂತ ಜಾಸ್ತಿ ಪೆಗ್ ಹಾಕುವವರಿಗೆ ಲಿವರ್ ಸಿರ್ನೋಸಿಸ್ ಕಟ್ಟಿಟ್ಟ ಬುತ್ತಿ.
2. ಅನಗತ್ಯವಾಗಿ ಔಷಧಿ ಸೇವಿಸಬಾರದು. ನೋವು ನಿವಾರಕ ಔಷಧಿಯನ್ನು ಚಾಕಲೇಟ್ ರೀತಿಯಲ್ಲಿ ತಿನ್ನುವ ಖಯಾಲಿಗೆ ತಿಲಾಂಜಲಿ ಇಡಬೇಕು. ಅತೀ ಅಗತ್ಯವಿದ್ದಲ್ಲಿ ಮಾತ್ರ ಔಷಧಿಯನ್ನು ಸೇವಿಸತಕ್ಕದ್ದು.
3. ಹೆಪಟೈಟಿಸ್ B ಮತ್ತು C. ರೋಗವನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟತಕ್ಕದ್ದು. ಹೆಪಟೈಟಿಸ್ ವೈರಾಣು ಸೋಂಕು ಸಿರ್ಹೋಸಿಸ್‍ಗೆ ಕಾರಣವಾಗುತ್ತದೆ.
4. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗವನ್ನು ಯಾವತ್ತೂ ಹತೋಟಿಯಲ್ಲಿಡಬೇಕು. ಜೀವನಶೈಲಿ ಮಾರ್ಪಾಡು, ಆಹಾರ ಪದ್ಧತಿಯಲ್ಲಿನ ಸೂಕ್ತ ಮಾರ್ಪಾಡು ಮಾಡಿ, ಔಷಧಿಯ ನೆರವಿಲ್ಲದೆ ರೋಗ ನಿಯಂತ್ರಣದಲ್ಲಿಡಬೇಕು.
5. ದೇಹದಲ್ಲಿ ಅತೀ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ದೇಹದ ತೂಕದ ಮೇಲೆ ಸೂಕ್ತ ನಿಗಾ ಇಡಬೇಕು. ನಿಯಮಿತವಾದ ದೈಹಿಕ ವ್ಯಾಯಾಮ, ಬಿರುಸು ನಡಿಗೆ, ಈಜುವುದು ಮುಂತಾದ ಹವ್ಯಾಸಗಳು ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆ.
6. ಜಂಕ್ ಪುಡ್, ಅತಿಯಾದ ಕೆಫೇನ್‍ಯುಕ್ತ ಪಾನೀಯ ಮತ್ತು ರಾಸಾಯನಿಕಯುಕ್ತ ಪೇಯಗಳನ್ನು ವರ್ಜಿಸಬೇಕು. ಸಿದ್ಧ ಆಹಾರ ವರ್ಜಿಸಿ, ನೈಸರ್ಗಿಕ ಆಹಾರ ಸೇವಿಸತಕ್ಕದ್ದು. ಇಂಗಾಲಯುಕ್ತ ಪೇಯಗಳನ್ನು ವಿಸರ್ಜಿಸಿ, ಸ್ವಾಭಾವಿಕವಾದ ರಾಸಾಯನಿಕರಹಿತ ನೈಸರ್ಗಿಕ ಪೇಯವನ್ನು ಸೇವಿಸುವುದು ಉತ್ತಮ.
Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ.
ಡಾ ಮುರಲೀ ಮೋಹನ್ ಚೂಂತಾರು
drmuraleechoontharu@gmail.com
ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ
ಮೊ : 98451 35787