ಮರೆಯಾಗುತ್ತಿರುವ ಮಂಗಬಾವು ರೋಗ

ಮಕ್ಕಳನ್ನು ಕಾಡುವ ಕಾಯಿಲೆ

ಮಂಗಬಾವು ಎನ್ನುವುದು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮನುಷ್ಯರಲ್ಲಿ ಮಾತ್ರ ಕಂಡು ಬರುವ ಈ ರೋಗ ಮಮ್ಸ್ ಎಂಬ ವೈರಾಣುವಿನಿಂದ ಹರಡುತ್ತದೆ. ಮಮ್ಸ್, ಕೆಪ್ಪಟೆರಾಯ, ಗದ್ದಬಾವು, ಗದ್ದಕಟ್ಟು  ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಈ ಮಂಗಬಾವು ರೋಗದ ಲಕ್ಷಣಗಳು ಸಾಮಾನ್ಯವಾಗಿ ವೈರಾಣು ಸೋಂಕು ತಗುಲಿದ 16ರಿಂದ 18 ದಿನಗಳ ಬಳಿಕ ಕಂಡು ಬರುತ್ತದೆ ಮತ್ತು ರೋಗದ ಲಕ್ಷಣಗಳು ಕಾಣಿಸಿಕೊಂಡ 7 ರಿಂದ 10 ದಿನಗಳಲ್ಲಿ ಗುಣಮುಖವಾಗುತ್ತದೆ. ವಯಸ್ಕರಲ್ಲಿ ರೋಗದ ಲಕ್ಷಣಗಳು ತೀವ್ರವಾಗಿರುತ್ತದೆ. ಮಾರನೇ ಒಂದು ಶೇಕಡಾ ಮಕ್ಕಳಲ್ಲಿ ರೋಗ ಲಕ್ಷಣಗಳು ಕಾಣಿಸದೇ ಇರಲೂಬಹುದು. ಸಾಮಾನ್ಯವಾಗಿ ಸಣ್ಣಮಟ್ಟಿನ ಜ್ವರ, ತಲೆನೋವು, ಗಂಟುನೋವು, ವಾಕರಿಕೆ, ಮೈಕೈನೋವು, ನಿರಾಸಕ್ತಿ, ನಿಶ್ಯಕ್ತಿ, ಹಸಿವಿಲ್ಲದಿರುವುದು ಮೊದಲು ಕಾಣಿಸಿಕೊಳ್ಳುತ್ತದೆ. ಬಳಿಕ ಕಿವಿಯ ಮುಂಭಾಗದಲ್ಲಿರುವ ‘ಪೆರೋಟಿಡ್’ ಎಂಬ ಜೊಲ್ಲುರಸ ಗ್ರಂಥಿ ಸ್ರವಿಸುವ ಅಂಗ ಊದಿಕೊಂಡು ಮುಖ ಮಂಗನ ಮುಖದಂತೆ ಕಾಣುತ್ತದೆ. ಈ ಕಾರಣದಿಂದಲೇ ಮಂಗಬಾವು ಎಂದೂ ಕರೆಯುತ್ತಾರೆ.

ದೇಹದೊಳಗೆ ಸೇರಿದ ವೈರಾಣು ನೇರವಾಗಿ ರಕ್ತದ ಮುಖಾಂತರ ಪೆರೋಟಿಡ್ ಎಂಬ ಜೊಲ್ಲುರಸ ಗ್ರಂಥಿಯೊಳಗೆ ಸೇರಿಕೊಂಡು ವಂಶಾಭಿವೃದ್ಧಿ ಮಾಡುತ್ತದೆ. ಎರಡೂ ಬದಿಯಲ್ಲಿರುವ ಪೆರೋಟಿಡ್ ಗ್ರಂಥಿ ಊದಿಕೊಳ್ಳುವ ಸಾಧ್ಯತೆಯೂ ಇದೆ. ಇದು ಸಾಮಾನ್ಯವಾಗಿ ಒಂದು ವಾರದ ವರೆಗೆ ಇರುತ್ತದೆ. ಇದರ ಜೊತೆಗೆ ಬಾಯಿ ಒಣಗುವುದು, ಮುಖದಲ್ಲಿ ಊತ, ಕಿವಿಯಲ್ಲಿ ನೋವು, ಮತ್ತು ಉರಿತ ಇರಬಹುದು. ಮಾತನಾಡಲು ಕಷ್ಟವಾಗಬಹುದು. ರೋಗದ ಲಕ್ಷಣಗಳು ಕಾಣಿಸಿಕೊಳ್ಳುದಕ್ಕಿಂತ 7 ದಿನಗಳ ಮೊದಲು ಮತ್ತು ರೋಗದ ಲಕ್ಷಣಗಳು ಕಾಣಿಸಿಕೊಂಡ 7 ದಿನಗಳ ವರೆಗೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಬಹಳ ಸಾಂಕ್ರಾಮಿಕವಾಗಿರುವ ಈ ರೋಗ ದೈಹಿಕ ಸ್ಪರ್ಶದಿಂದ, ಎಂಜಲಿನ ಮುಖಾಂತರ ಮತ್ತು ಉಸಿರಾಟದ ಮುಖಾಂತರವೂ ಹರಡುತ್ತದೆ. ಒಮ್ಮೆ ಈ ಮಂಗಬಾವು ಬಂದ ಬಳಿಕ ಮತ್ತೊಮ್ಮೆ ಜೀವಮಾನದಲ್ಲಿ ಈ ರೋಗ ಬರುವ ಸಾಧ್ಯತೆ ಇಲ್ಲ. IGM ಎಂಬ ಆಂಟಿಬಾಡಿಗಳನ್ನು (ವೈರಾಣುವಿನ ವಿರುದ್ಧದ) ರಕ್ತದಲ್ಲಿ ಪತ್ತೆಹಚ್ಚಿ ರೋಗವನ್ನು ನಿರ್ಧಾರ ಮಾಡುತ್ತಾರೆ. ಮಕ್ಕಳಲ್ಲಿ ಸಾಮಾನ್ಯವಾಗಿ 5 ರಿಂದ 9 ವರ್ಷದೊಳಗಿನವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಲಸಿಕೆ ಹಾಕದ ದೇಶಗಳಲ್ಲಿ 18-20ರ ವಯಸ್ಸಿನಲ್ಲಿಯೂ ಈ ಮಂಗಬಾವು ರೋಗ ಕಾಣಿಸುವ ಸಾಧ್ಯತೆಯೂ ಇದೆ. ಭೌಗೋಳಿಕ ವೃತ್ತದ ಮಧ್ಯಭಾಗದಲ್ಲಿ ವರ್ಷದ ಎಲ್ಲಾ ಋತುಗಳಲ್ಲಿ ಈ ರೋಗ ಕಾಣಿಸಬಹುದು ಆದರೆ ಉತ್ತರ ಮತ್ತು ದಕ್ಷಿಣ ದ್ರುವಗಳಲ್ಲಿ ಚಳಿಕಾಲದಲ್ಲಿ ಈ ರೋಗದ ಆರ್ಭಟ ಜಾಸ್ತಿ ಇರುತ್ತದೆ.

  • ಚಿಕಿತ್ಸೆ ಹೇಗೆ:

ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ನೋವು ಮತ್ತು ಜ್ವರ ಕಡಮೆಯಾಗಲು ‘ಪಾರಾಸಿಟಮೊಲ್’ ಔಷಧಿ ಮತ್ತು ಸಾಕಷ್ಟು ದ್ರವಾಹಾರ ನೀಡಲಾಗುತ್ತದೆ. ವೈರಾಣುವಿನ ವಿರುದ್ಧ ಯಾವುದೇ ಆಂಟಿ ವೈರಲ್ ಔಷಧಿಯ ಅಗತ್ಯವಿರುವುದಿಲ್ಲ, ಸಾಕಷ್ಟು ನಿಶ್ಯಕ್ತಿ ಇದ್ದಲ್ಲಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುತ್ತದೆ. ಹತ್ತು ಸಾವಿರದಲ್ಲಿ ಒಬ್ಬರು ಸಾವನ್ನಪ್ಪುವ ಸಾಧ್ಯತೆಯೂ ಇಲ್ಲದಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ 15 ಶೇಕಡಾ ಮಂದಿಯಲ್ಲಿ ಮೆದುಳಿನ ಉರಿಯೂತ, ಶಾಶ್ವತ ಅಂದತ್ವ (1%) ಮತ್ತು ಮೊದೋಜಿರಕ ಗ್ರಂಥಿüಯ ವೈಪಲ್ಯ (4%) ಉಂಟಾಗಬಹುದು. ಪುರುಷರಲ್ಲಿ ವೃಷಣಗಳ ಉರಿಯೂತದಿಂದ ಸಂತಾನ ಹೀನತೆಯೂ ಉಂಟಾಗಬಹುದು. ಮಹಿಳೆಯರಲ್ಲಿ ಇದರ ಸಾಧ್ಯತೆ ಕಡಮೆ. ಮಕ್ಕಳಲ್ಲಿ  ಯಾವುದೇ ಕಾರಣಕ್ಕೂ ಆಸ್ಪರಿನ್ ಎಂಬ ನೋವು ನಿವಾರಕವನ್ನು ನೀಡಬಾರದು. ಇದು ನೀಡಿದಲ್ಲಿ ‘ರೇ’ ಸಿಂಡ್ರೋಮ್ ಎಂಬ ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆ ಇದೆ. ಮೆತ್ತಗಿನ ಆಹಾರ, ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು, ಸಾಕಷ್ಟು ದ್ರವಾಹಾರ, ಸಂಪೂರ್ಣ ವಿಶ್ರಾಂತಿ ಚಿಕಿತ್ಸೆಯ ಮುಖ್ಯ ಅಂಶಗಳಾಗಿರುತ್ತದೆ. ಹಣ್ಣಿನ ರಸ ಮತ್ತು ಜೂಸ್‍ಗಳನ್ನು ಬಳಸಬಾರದು ಹಾಗೇ ಮಾಡಿದಲ್ಲಿ ಮತ್ತಷ್ಟು ಜೊಲ್ಲು ರಸ ಸ್ರವಿಸುವಂತೆ ಪ್ರಚೋದನೆ ನೀಡಿ ನೋವುಂಟಾಗುವ ಸಾಧ್ಯತೆ ಇದೆ. ಅದೇ ರೀತಿ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಕೂಡ ವರ್ಜಿಸತಕ್ಕದ್ದು. ಜಗಿಯುವ ಪ್ರಕ್ರಿಯೆಗೆ ಪೂರಕವಾಗಿ ಕೆಲಸ ಮಾಡುವ ಸ್ನಾಯುಗಳ ಸುತ್ತ ಊರಿಯೂತ ಇರುವುದರಿಂದ ಜಗಿಯಲು ಕಷ್ಟವಾಗಬಹುದು. ಸಾಕಷ್ಟು ನಿದ್ರೆ, ವಿಶ್ರಾಂತಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಈ ರೋಗದಿಂದ ಶೀಘ್ರ ಗುಣಮುಖರಾಗಲು ಅತೀ ಅಗತ್ಯ. ರೋಗ ಬಂದ ಬಳಿಕ ಮೊದಲ 5 ದಿನಗಳ ಕಾಲ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡತಕ್ಕದ್ದು.

  • ತಡೆಗಟ್ಟುವುದು ಹೇಗೆ :

1967ರಲ್ಲಿ ಅಮೇರಿಕಾದ ಅಣುಜೀವಿ ಶಾಸ್ತ್ರಜ್ಞ ಮಾರಿಸ್ ಹಿಲೇಮ್ಯಾನ್ ಎಂಬಾತ ಈ ರೋಗಕ್ಕೆ ಲಸಿಕೆ ಕಂಡು ಹಿಡಿದನು. ಮೀಸಿಯಲ್ಸ್, ರುಬೆಲ್ಲಾ, ಮಮ್ಸ್ ಎಂಬ ಮೂರು ರೋಗಕ್ಕೆ ಒಟ್ಟಾಗಿ MMR ಲಸಿಕೆಯನ್ನು 9 ರಿಂದ 12 ತಿಂಗಳ ಸಮಯದಲ್ಲಿ ಮತ್ತು 4 ರಿಂದ 6 ವರ್ಷದ ಸಮಯದಲ್ಲಿ ನೀಡತಕ್ಕದ್ದು. ಈಗ MMRV ಎಂಬ ಹೊಸ ಲಸಿಕೆ ಬಂದಿದ್ದು ಚಿಕನ್‍ಪಾಕ್ಸ್ (ಸಿತಾಳ ಸಿಡುಬು) ಎಂಬ ರೋಗಕ್ಕೂ ಲಸಿಕೆಯನ್ನು MMR ಜೊತೆಗೆ ಸೇರಿಸಲಾಗಿದೆ. ಇದನ್ನು 12 ರಿಂದ 15 ತಿಂಗಳು ಮತ್ತು 3 ರಿಂದ 5 ವರ್ಷದ ಅವಧಿಯಲ್ಲಿ 2 ಬಾರಿ ಕೊಡುತ್ತಾರೆ ಮತ್ತು ಜೀವನ ಪರ್ಯಂತ ನಾಲ್ಕು ರೋಗಗಳಿಂದ ಶಾಶ್ವತವಾಗಿ ಮುಕ್ತಿ ದೊರಕುತ್ತದೆ. 1967ರಲ್ಲಿ 1,50,000 ಮಂದಿ ಮಮ್ಸ್‍ನಿಂದ ವಿಶ್ವದಾದ್ಯಂತ ಸಾವನ್ನಪ್ಪಿದ್ದರು. 2001 ರಿಂದ 2008ರ ವರೆಗೆ ಕೇವಲ 250 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ಲಸಿಕೆ ಹಾಕಿ ರೋಗವನ್ನು ಬರದಂತೆ ತಡೆಯುವುದರಲ್ಲಿಯೇ ಜಾಣತನ ಅಡಗಿದೆ.

  • ಕೊನೆ ಮಾತು :-

ಮಮ್ಸ್ ಎಂಬ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿರುವ, ಲಸಿಕೆಯಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾದ ರೋಗವಾಗಿರುವ ಮಮ್ಸ್ ರೋಗವನ್ನು ಗದ್ದಕಟ್ಟು, ಗದ್ದಬಾವು, ಮಂಗಬಾವು, ಕೆಪ್ಪಟೆ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ನೆಗಡಿ, ಎಂಜಲು, ಉಸಿರು ಮತ್ತು ದೈಹಿಕ ಸಂಪರ್ಕದಿಂದ ಸುಲಭವಾಗಿ ಹರಡುವ ಈ ರೋಗ ಲಸಿಕೆಯ ಪ್ರಭಾವದಿಂದಾಗಿ ಗಣನೀಯ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಸಂತಸದ ವಿಚಾರ. ವರ್ಷವೊಂದರಲ್ಲಿ ಭಾರತ ದೇಶದಲ್ಲಿ 100ಕ್ಕಿಂತಲೂ ಕಡಮೆ ಸಂಖ್ಯೆಯಲ್ಲಿ ಕಾಡುವ ಈ ರೋಗ ಮಾರಣಾಂತಿಕವಲ್ಲದಿದ್ದರೂ ಲಸಿಕೆ ಹಾಕಿಸಿಕೊಳ್ಳುವುದು ಅತೀ ಅಗತ್ಯ. ರೋಗ ಬಂದಾಗ ಸಾಕಷ್ಟು ಮುಂಜಾಗರೂಕತೆ ವಹಿಸಿ ಮನೆಯೊಳಗೆ ಉಳಿದು, ಉಳಿದವರಿಗೆ ರೋಗ ಹರಡದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ. ಪರಿಣಾಮಕಾರಿ ಲಸಿಕೆಯಿಂದಾಗಿ ನಶಿಸಿ ಹೋದ ಪೋಲಿಯೋ, ಸಣ್ಣಸಿಡುಬು ರೋಗದ ಹಾಗೇ ಮುಂದೊಂದು ದಿನ ಈ ಮಮ್ಸ್ ರೋಗ ಕೂಡಾ ಭೂಮಂಡದಿಂದಲೇ ನಶಿಸಿ ಹೋಗುವ ದಿನಗಳು ದೂರವಿಲ್ಲ.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323     ದೂ.: 04998-273544, 235111     ಮೊ.: 9845135787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!