ಡಾ.ಸುನೀಲ್ ಕುಮಾರ್ ಹೆಬ್ಬಿ – ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಡಾ.ಸುನೀಲ್ ಕುಮಾರ್ ಹೆಬ್ಬಿ ಒಬ್ಬ ಅಪರೂಪದ ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ. ವೃತ್ತಿಯಲ್ಲಿರುವ ಬಹಳ ಜನ, ತಮ್ಮ ವೃತ್ತಿಯನ್ನು ಮಹಾನ್ ಆಗಿ ಮಾಡಲು ಯೋಚಿಸುತ್ತಾರೆ. ಆದರೆ ಸಮಾಜಕ್ಕೆ ಅಮೂಲ್ಯ ಸೇವೆ ಮಾಡುತ್ತಿರುವ ಇವರು ಎಲ್ಲರಿಗಿಂತ ವಿಭಿನ್ನರಾಗಿದ್ದಾರೆ. ವಾಣಿಜ್ಯೀಕರಣವಾಗುತ್ತಿರುವ ವೃತ್ತಿಯಲ್ಲಿ, ಇಂಥವರು, ವೈದ್ಯರಲ್ಲಿಯ ನಂಬಿಕೆಯಲ್ಲಿ ಪುನಃ ಸ್ಥಾಪಿಸಿದ್ದಾರೆ.

dr-sunil-kumar-hebbi ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಪ್ರಿಯ ಓದುಗರೇ, ಒಬ್ಬ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸುವ ಮೊದಲು, ಇದರ ಹಿನೆಲೆಯಲ್ಲಿ ನನ್ನ ಒಂದು ನಾಟಕದ ದೃಶ್ಯ ಹಾಗೂ ನಮ್ಮ ನಗರ ಹಾಗೂ ಗ್ರಾಮಗಳಲ್ಲಿಯ ಆರೋಗ್ಯ ಸ್ಥಿತಿಯ ಬಗ್ಗೆ ಕೆಲವು ಸಾಲುಗಳು. ನನ್ನ ಆಧುನಿಕ ಅಸುರರು ನಾಟಕದ ಆರಂಭದಲ್ಲಿ, ಧನ್ವಂತರಿ ಹಾಗೂ ಅಶ್ವಿನಿ ದೇವತೆಗಳು ಸ್ವರ್ಗದ ಆರೋಗ್ಯದ ಪ್ರತಿನಿಧಿಗಳಾಗಿ ಭೂಲೋಕಕ್ಕೆ ಬಂದು, ಭೂಲೋಕ ವಾಸಿಗಳ ಆರೋಗ್ಯ ಗಮನಿಸುತ್ತಾರೆ. ಇಲ್ಲಿ ಶ್ರೀ ಸಾಮಾನ್ಯರಿಗೆ ಆರೋಗ್ಯದ ಬಗೆಗಿರುವ ನಿಷ್ಕಾಳಜಿ, ತಡೆಯಲಾರದ ಸ್ಥಿತಿಗೆ ಬರುವವರೆಗೆ ತಜ್ಞವೈದ್ಯರ ಬಳಿ ಹೋಗಲಾರದ ಮನೋಸ್ಥಿತಿ, ದೂರದ ಹಳ್ಳಿ ಶಹರಗಳಲ್ಲಿ ಸಂಚಾರ ಸೌಲಭ್ಯಗಳ ಕೊರತೆ, ರಸ್ತೆ ಸಂಪರ್ಕ, ವೈದ್ಯರ ಕೊರತೆ, ವೈದ್ಯರಿಲ್ಲದ ಆಸ್ಪತ್ರೆಗಳು, ಮಕ್ಕಳು ಮಹಿಳೆಯರು ಹಾಗೂ ಹಿರಿಯ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಕೊಡದಿರುವ ಕುಟುಂಬ, ಸಮಾಜ, ಜನ, ತಾವೇ ಮಾಡಿಕೊಳ್ಳುವ ಸ್ವ ವೈದ್ಯ,

ಅವರಿವರು ಹೇಳಿದಂತೆ ಔಷಧಿ ಹಾಗೂ ವೈದ್ಯರನ್ನು ಬದಲಾಯಿಸುವ ಗುಣ, ದುಡ್ಡು ಬಿಸಾಕಿದರೆ ಎಲ್ಲಾ ವಸ್ತು ಹಾಗೂ ಸೇವೆಗಳು ದೊರಕುವಂತೆ ಮಾರುಕಟ್ಟೆಯಲ್ಲಿ ಆರೋಗ್ಯ ಕೊಳ್ಳಬಹುದೆಂಬ ಭ್ರಮೆ, ನಮ್ಮ ಆರೋಗ್ಯ ಎಂದೂ ಕೆಡದು ಎಂಬ ತಪ್ಪು ಗ್ರಹಿಕೆ, ಜನರ ಆರೋಗ್ಯ ಅವರ ಹಕ್ಕು ಹಾಗೂ ಆಡಳಿತ ನಡೆಸುವವರ ಕರ್ತವ್ಯವೆಂಬ ಅನೇಕ ಅಂಶಗಳನ್ನು, ಪತ್ತೆ ಹಚ್ಚುತ್ತಾರೆ. ವೈದ್ಯಕೀಯ ತಪಾಸಣೆಯ ಉಪಕರಣಗಳ ಕೊರತೆ ಹಾಗೂ ಗ್ರಾಮೀಣ ಆರೋಗ್ಯ ಕಾಳಜಿಯಲ್ಲಿ ಅನನುಭವಿ ಹಾಗೂ ನಕಲಿ ವೈದ್ಯರು, ಭೌಗೋಳಿಕ ತಲುಪುವಿಕೆ ಇವೆಲ್ಲಾ ಸಮಸ್ಯೆಗಳಿವೆ ಎಂಬ ಅರಿವಾಯಿತು ಇವರಿಗೆ. ಹೆಚ್ಚು ಹೆಚ್ಚು ಹಣ ಗಳಿಸುವುದು ಒಳ್ಳೆಯದು ಆದರೆ ನಮ್ಮ ಇರುವಿಕೆಯ ಉದ್ದೇಶವನ್ನೇ ಅದು ಮಿತಿಗೊಳಿಸಬಾರದು ಎಂಬ ತತ್ವವನ್ನು, ಈ ನಾಟಕದ ಪ್ರಯೋಗ ಸಾರಿತ್ತು.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ
ಸದ್ಯದ ಆರೋಗ್ಯ ಸ್ಥಿತಿ:

ಬದಲಾಗಿರುವ ಜೀವನ ಶೈಲಿ, ಹಣ ಗಳಿಕೆಯ ಕಡೆ ಗಮನ ಕೇಂದ್ರೀಕರಣ, ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ಸತ್ವಯುತ ಆಹಾರ ತೆಗೆದುಕೊಳ್ಳದ್ದು, ಕಲುಷಿತ ವಾತಾವರಣ, ಗಾಳಿ, ನೀರು ಹಾಗೂ ಶಬ್ದಮಾಲಿನ್ಯ, ಇವುಗಳ ಹಿನ್ನಲೆಯಲ್ಲಿ ಹೆಚ್ಚುತ್ತಿರುವ ರೋಗಗಳು, ಇವರಿಗೆ ಸರಿಯಾದ ಸಮಯಕ್ಕೆ ಸಿಗದ ವೈದ್ಯರು, ರೋಗಿಗಳು ಹಾಗೂ ವೈದ್ಯರ ಮಧ್ಯೆ ಇರುವ ದೂರ, ವೈದ್ಯರು ಹಾಗೂ ತಜ್ಞರ ಪರಿಶೀಲನಾ ಶುಲ್ಕ, ತುಟ್ಟಿ ಔಷಧಿಗಳು, ತಮ್ಮ ಆಸ್ಪತ್ರೆ, ಕ್ಲಿನಿಕ್‌ಗಳಿಗೇ ಸೀಮಿತವಾಗಿರುವ ತಜ್ಞರು ಹೆಚ್ಚುತ್ತಿರುವ ವಾಹನಗಳಿಂದಾಗುವ ರಸ್ತೆ ಅಪಘಾತಗಳು.! ನನ್ನಂತಹ ಎಷ್ಟೋ ಭಾವನಾ ಜೀವಿಗಳ ಉದ್ಘಾರ.! ಓ ದೇವರೇ ಇದಕ್ಕೆಂದು ಪರಿಹಾರ? ಆಗ ಬೆಂಗಳೂರಿನಿಂದ ಒಂದು ಯುವ ಧ್ವನಿಕೇಳಿಸಿತು. ಆಸ್ಪತ್ರೆ ಹಾಗೂ ಕ್ಲಿನಿಕ್ ದೂರವಿದೆಯೆಂಬ ಕಾರಣಕ್ಕೆ, ಯಾವೊಬ್ಬ ವ್ಯಕ್ತಿಯೂ ಸಾಯಬಾರದು. ಅದಕ್ಕೇ ನಾನು ಸಂಚಾರಿ ಆರೋಗ್ಯ ಸಾರಥಿ ಆರಂಭಿಸಿದೆ. ಈ ಧ್ವನಿ 34ರ ಹರೆಯದ ಒಬ್ಬ ವೈದ್ಯರದು. ನಾನು ಸರ್ಜಾಪುರದಲ್ಲಿ ಇತ್ತೀಚೆಗೆ ಭೇಟಿಯಾಗಿ, ಒಂದು ಇಡೀ ದಿನ ಸಂಭಾಷಣೆ ನಡೆಸಿದಾಗ, ತಮ್ಮ ಜೀವನದ ವಿವಿಧ ಮಜಲುಗಳನ್ನು ನಮಗೆ ತೆರೆದಿಟ್ಟ ಈ ವೈದ್ಯರೇ ಡಾ.ಸುನೀಲ್ ಕುಮಾರ್ ಹೆಬ್ಬಿ.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಡಾ. ಸುನೀಲ್ ಕುಮಾರ್ ಹೆಬ್ಬಿ ಬಾಲ್ಯ: 

ವಿಜಯಪುರ ಜಿಲ್ಲೆಯ, ಬಬಲೇಶ್ವರ ತಾಲೂಕಿನ, ಮಮದಾಪುರ ಗ್ರಾಮದ, ಈ ಗ್ರಾಮೀಣ ಹಿನ್ನಲೆಯ ಯುವ ವೈದ್ಯ, ಇಂದು ಬೆಂಗಳೂರಿನಲ್ಲಿ, ಕಡಿಮೆ ವೆಚ್ಚದ ಹಾಗೂ ಉಚಿತ ಆರೋಗ್ಯ ತಪಾಸಣಾ ಸೇವೆ ಹಾಗೂ ಔಷಧ ಹಂಚಿಕೆ ಕಾಯಕ ಕೈಗೊಂಡಿದ್ದಾರೆ. ಇವರು ಈ ದೀಕ್ಷೆ ತೊಡಲು ಅವರ ಬಾಲ್ಯ ಹಾಗೂ ಯೌವ್ವನದ ಅನುಭವಗಳೇ ಪ್ರೇರಕ. 3೦ ವರ್ಷಗಳ ಹಿಂದೆ ಇವರಿದ್ದ ಗ್ರಾಮ, ಅಂದಿನ ವಿಜಾಪುರದಿಂದ 45 ಕಿ.ಮೀ. ದೂರದಲ್ಲಿತ್ತು. ತಾಯಿ ಮಹಾದೇವಿ ಗೃಹಿಣಿ. ತಂದೆ ಸಂಗಪ್ಪ ಹೆಬ್ಬಿ ಕೃಷಿಕರು ಹಾಗೂ ಗ್ರಾಮದಲ್ಲಿ ಔಷಧಿ ಅಂಗಡಿ ಇಟ್ಟುಕೊಂಡಿದ್ದರು. ಆಗ ಇವರ ಅಜ್ಜಿಯ ಅನಾರೋಗ್ಯ ಗಂಭೀರ ಸ್ಥಿತಿ ತಲುಪಿದಾಗ, ಇವರ ಗ್ರಾಮದಿಂದ ವಿಜಾಪುರಕ್ಕೆ ಬಸ್ ಸಂಪರ್ಕ ಇರಲಿಲ್ಲ.

ಎತ್ತಿನಗಾಡಿಯಲ್ಲಿ ಅಸಹನೀಯ ಸ್ಥಿತಿಯಲ್ಲಿ ಒದ್ದಾಡಿಕೊಂಡು ಕರೆದೊಯ್ದಾಗ, ಇವರು 4-5 ವರ್ಷದ ಮಗುವಾಗಿ ಇದನ್ನೆಲ್ಲ ಗಮನಿಸಿದ್ದರು. ವೈದ್ಯರೇ ಇಲ್ಲದ ಇವರ ಹಳ್ಳಿಗೆ ನಂತರ ಬಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಸರಕಾರಿ ವೈದ್ಯರಾದ ಡಾ. ಬಿ.ಪಿ.ರಾವ್ ಇವರ ಪಕ್ಕದ ಮನೆಯಲ್ಲೇ ವಾಸವಾಗಿದ್ದರು. ಅವರು ಜನಾನುರಾಗಿಯಾಗಿ ಗ್ರಾಮೀಣ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಯನ್ನು ಮಮತೆಯಿಂದ ಮಾಡಿದಾಗ, ಜನ ಆ ವೈದ್ಯರನ್ನೇ ಹೊಗಳಿ ದೇವರು ಎನ್ನುತ್ತಿದ್ದುದನ್ನು ಬಾಲಕ ಸುನೀಲ್ ಗಮನಿಸಿದ. 5-6 ವರ್ಷದ ಮಗುವಿಗೆ ಡಾಕ್ಟರ್ ಅಂದರೆ ಏನೋ ವಿಶೇಷ ಎಂದು ಅನಿಸಿತ್ತು.

ಇವರ ಕುಟುಂಬದ ಅನೇಕ ತಲೆಮಾರುಗಳಲ್ಲಿ ಹಾಗೂ ಬಂಧುಗಳಲ್ಲಿ ಯಾರೂ ವೈದ್ಯರಿರಲಿಲ್ಲ. ಕುಟುಂಬದಲ್ಲಿ ೫ ಜನ, ಬಂಧುಗಳಲ್ಲಿ 16 ಜನ ಮೆಡಿಕಲ್ ಸ್ಟೋರ‍್ಸ್ ಇಟ್ಟಿದ್ದರು. ಇವರು ವೈದ್ಯರಾಗುತ್ತೇನೆಂದಾಗ, ಎಲ್ಲಾ ಸಂತಸ ಪಟ್ಟರು. ವಿಜಾಪುರದಲ್ಲಿ ಮೆಡಿಕಲ್ ಕಾಲೇಜು ಸೇರಿದರು. ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೂ, ಮಿತ್ರರೊಂದಿಗೆ ವಿವಿಧ ಸಂಸ್ಥೆಗಳಿಗೆ ಹೋಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪಾಠ ಹಾಗೂ ಕಂಪ್ಯೂಟರ್ ಪಾಠ ಮಾಡುತ್ತಿದ್ದರು. 2007ರಲ್ಲಿ ಬಡ ಮಕ್ಕಳಿಗೆ ನಡೆಸುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು, ಈ ಡಾಕ್ಟರ್‌ಗೆ ಪ್ರೇರಣೆ ಕೊಟ್ಟವರು ಸಂಗಮೇಶ ಬಬಲೇಶ್ವರ್. 2007 ರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ವೈದ್ಯರಾದರು. ಸಮಾಜದಲ್ಲಿ ಬದಲಾವಣೆ ತರಲು, ಸಮಾಜಕ್ಕೆ ತಮ್ಮ ಏನಾದರೂ ಕೊಡುಗೆ ಕೊಡಲು, ತುಡಿಯುತ್ತಿತ್ತು ಇವರ ಮನ. ಬಿಜಾಪುರದಲ್ಲಿ 2008ರಲ್ಲಿ ಇಂಟರ್‌ನರ್‌ಶಿಪ್‌ಗಾಗಿ ಬೆಂಗಳೂರಿಗೆ ಬಂದರು. ಒಂದು ನರ್ಸಿಂಗ್ ಹೋಂನಲ್ಲಿ 1 ವರ್ಷ 3 ತಿಂಗಳು ವೈದ್ಯರಾಗಿ ಕೆಲಸ ಆರಂಭಿಸಿದರು.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಪ್ರತಿದಿನ ಬರುತ್ತಿದ್ದ 60-70 ರೋಗಿಗಳು, ಅವರ ಔಷಧೋಪಚಾರಕ್ಕೆ ಕೈಗೆಟುಕದ ದರ. ಆಗ ನಾನೇಕೆ ಕ್ಲಿನಿಕ್ ಆರಂಭಿಸಬಾರದು ಎಂದುಕೊಂಡರು. ಆಗ ಹೆಲ್ಪ್‌ಏಜ್ ಸಂಸ್ಥೆ ಜೊತೆ ವಾರಾಂತ್ಯಗಳಲ್ಲಿ ಬೆಂಗಳೂರಿನಲ್ಲಿ ಬನಶಂಕರಿ, ಆನೆಕಲ್‌ಗಳಲ್ಲಿ ನಡೆದ 6 ಶಿಬಿರಗಳಲ್ಲಿ ಭಾಗವಹಿಸಿ, ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಮೂಲಭೂತ ಆರೋಗ್ಯ ಸೇವೆ, ಅಂದರೆ ಅಧಿಕ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ಉಚಿತ ಔಷಧಿಗಳನ್ನು ಕೊಡುವ ಕಾರ್ಯದಲ್ಲಿ, ಉತ್ಸಾಹದಿಂದ ಪಾಲ್ಗೊಂಡರು. ಎಲ್ಲಾ ಯುವಜನರಂತೆ ಹೆಚ್ಚು ಹೆಚ್ಚು ಹಣ ಸಂಪಾದಿಸುವ, ದೊಡ್ಡ ಸ್ಥಾನ / ವರ್ಗಕ್ಕೆ ಬರುವ ಕನಸು ಕಂಡರು. ಒಂದು ಕಾರ್ಪೋರೇಟ್ ಆಸ್ಪತ್ರೆಗೆ ಸೇರಿ, ಒಂದು ವರ್ಷ ಸೇವೆ ಮಾಡುವುದರೊಳಗೆ, ಅವರ ಆ ಕನಸು ಭಂಗವಾಗಿ, ಹೊಸ ಸಂಕಲ್ಪ ಮೂಡುವ ಒಂದು ಘಟನೆ ನಡೆಯಿತು.

ಡಾಕ್ಟರೇ ವಿವರಿಸಿದಂತೆ 7 ವರ್ಷಗಳ ಕೆಳಗೆ ೨೦೧೦ರ ಫೆಬ್ರವರಿಯ ಒಂದು ದಿನ. ಹೊಸೂರು ರಸ್ತೆಯಲ್ಲಿ ಒಂದು ಭೀಕರ ಅಪಘಾತವಾಗಿ, ರಕ್ತಸಿಕ್ತ ಸ್ಥಿತಿಯಲ್ಲಿ ತಲೆಯೊಡೆದು, ಕೈಕಾಲು ಮುರಿದು, ಅನಾಥ ಸ್ಥಿತಿಯಲ್ಲಿ ಬಿದ್ದಿದ್ದ ಒಬ್ಬ ವ್ಯಕ್ತಿಯನ್ನು ಕಂಡೆ. ತುಂಬ ಜನ ನೋಡುತ್ತಿದ್ದರೂ, ಕೆಲವು ಜನ ಫೋಟೋ ತೆಗೆಯುತ್ತಿದ್ದರೂ, ಯಾರೂ ಆ ವ್ಯಕ್ತಿಯ ಬಳಿ ಸಹಾಯಕ್ಕೆ ಧಾವಿಸಲಿಲ್ಲ. ಅವರಿಗೆ ಪೊಲೀಸರ ಹೆದರಿಕೆ. ನನ್ನ ಕಾರಿನಲ್ಲಿ ಇದ್ದ ಪ್ರಥಮ ಚಿಕಿತ್ಸೆ ಕಿಟ್‌ನಿಂದ, ಆ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಮಾಡಿ, ನನ್ನ ಕಾರಿನಲ್ಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದೆ. ಮುಂದೆ ಆತನಿಗೆ ತುರ್ತು ಚಿಕಿತ್ಸೆ ಸಿಕ್ಕಿ, ಆತ ಗುಣಮುಖನಾದ ಸಂತಸದ ಸುದ್ದಿ ನನಗೆ ತಿಳಿಯಿತು. ದೂರವಾಣಿಯಲ್ಲಿ, ಆತನ ಪ್ರಾಣ ಉಳಿಸಿದ್ದಕ್ಕೆ ಆತನ ಕುಟುಂಬ ಕೃತಜ್ಞತೆ ಅರ್ಪಿಸಿ, ದುಡ್ಡು ಸಹ ಕೊಡಲು ಬಂದರು. ಫೋನಿನಲ್ಲೇ ಭಾವುಕರಾಗಿ ಅತ್ತರು. ಇದು ವೈದ್ಯನಾಗಿ ನನ್ನ ಮೊದಲ ಆದ್ಯ ಕರ್ತವ್ಯ ಎಂದು ನಾನು ಹೇಳಿದೆ.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಈ ಘಟನೆಯ ನಂತರ ಡಾಕ್ಟರ್ ಮನದಾಳದಲ್ಲಿ ಮೂಡಿದ ಚಿಂತನೆ ನನ್ನ ಮನ ಇದರಿಂದ ಸಂಪೂರ್ಣ ಕದಡಿತು. ಬಡವರು ಹಾಗೂ ತಳವರ್ಗದವರಿಗೆ ಆರೋಗ್ಯ ಕಾಳಜಿ ಎಂಬುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಅನಿಸಿತು. ತಕ್ಷಣ ಕಾರ್ಪೋರೇಟ್ ಆಸ್ಪತ್ರೆಯ ದೊಡ್ಡ ಸಂಬಳದ ಕೆಲಸ ಬಿಟ್ಟರು. ಮೂಲತಃ ವಿಜಾಪುರದಲ್ಲಿ 2007ರಲ್ಲಿ ಆರಂಭವಾಗಿ ಮುಂದುವರೆದು, ಸದ್ಯ ಬೆಂಗಳೂರಿನ ಸರ್ಜಾಪುರದಲ್ಲಿಯೂ ಸೇವೆ ಸಲ್ಲಿಸುತ್ತಿದೆ, ಮಾತೃಸಿರಿ ಗ್ರಾಮೀಣ ಅಭಿವೃದ್ಧಿ ಯುವ ಸಂಸ್ಥೆ. ಇದರ ಮುಖ್ಯಸ್ಥರಾದ ಡಾ.ಸುನಿಲ್ ಹೇಳುತ್ತಾರೆ. ಬಡತನ ರೇಖೆಗಿಂತ ಕೆಳಗಿರುವ ಜನರ ಆರೋಗ್ಯ ರಕ್ಷಿಸಲು, ಸಮಾನ ಮನಸ್ಸಿನ ವಯಸ್ಕರು ಸೇರಿ ಈ ಸಂಸ್ಥೆ ಆರಂಭಿಸಿ, ಪ್ರಾಮಾಣಿಕವಾಗಿ ಸೇವೆ ನಿರ್ವಹಿಸುತ್ತಿದ್ದೇವೆ. ವೈದ್ಯರ ಬಳಿ ರೋಗಿಗಳು ಬರಲು ಇರುವ ಕಷ್ಟ ಅರಿತು, ಆ ರೋಗಿಗಳೇ ಇರುವ ಕಡೆ ಆರೋಗ್ಯ ಸೌಕರ್ಯಗಳನ್ನು ಒಯ್ಯಬೇಕು ಎಂದುಕೊಂಡರು. ಈ ಕಾರಣದಿಂದ, ಬೆಂಗಳೂರಿನ ಅತಿವೇಗವಾಗಿ ಅಭಿವೃದ್ದಿಯಾಗುತ್ತಿರುವ ಭಾಗ, ಸರ್ಜಾಪುರ ಐ.ಟಿ. ಗುಂಪು ಪ್ರದೇಶವಾಗಿದ್ದು, ಅಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಹೆಚ್ಚಿವೆ. ಆದ್ದರಿಂದ ಬೇರೆ ಪ್ರದೇಶಗಳಿಂದ ಇಲ್ಲಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರು, ಸಾವಿರಾರು ಜನ. ಹೀಗಾಗಿ ಈ ವೈದ್ಯರ ಕ್ಲಿನಿಕ್ ಸರ್ಜಾಪುರದಲ್ಲಿದೆ.

ತಮ್ಮ ಆರೋಗ್ಯ ಸಮಸ್ಯೆಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದ ಬಡವರ ವಾಸಿಯಾಗುವ ಕಾಯಿಲೆಗಳೂ ಗಂಭೀರ ಸ್ವರೂಪ ತಾಳುತ್ತವೆ. ಈ ಮನೋಭಾವನೆ ಕಡಿಮೆ ಮಾಡಿ, ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಿಸಬೇಕು ಎಂಬ ಆಶಯ ಈ ತಂಡಕ್ಕೆ. ಬಡವರು ಹಾಗೂ ತಳಮಟ್ಟದಲ್ಲಿರುವವರಿಗೆ ದೇವದೂತನಂತೆ ಕಂಡಿರುವ ಈ ವೈದ್ಯರು ಇದುವರೆಗೆ ಸುಮಾರು 30000 ಜನರಿಗೆ ಆರೋಗ್ಯ ತಪಾಸಣೆ ಹಾಗೂ ಸೇವೆ ನೀಡಿದ್ದಾರೆ. ಸಾಮಾನ್ಯರಿಂದ ಸರ್ಜಾಪುರದ ತಮ್ಮ ಕ್ಲಿನಿಕ್‌ನಲ್ಲಿ, ಕೇವಲ 30ರೂ. ತಪಾಸಣಾ ಶುಲ್ಕ ಪಡೆಯುತ್ತಾರೆ. ತಮ್ಮ ಕ್ಲಿನಿಕ್‌ಗಳಲ್ಲಿ, ಮೂಲಭೂತ ಆರೋಗ್ಯ ಪರೀಕ್ಷೆ ಹಾಗೂ ಔಷಧಗಳಿಗಾಗಿ ಕೊಡಬಹುದಾದವರಿಂದ 100ರೂ. ಸ್ವೀಕರಿಸಿದರೂ, ಪ್ರತಿ ದಿನ 10 ರಿಂದ 15 ಬಡ ರೋಗಿಗಳಿಗೆ ಉಚಿತ ಸೇವೆ ನೀಡುವುದನ್ನು ಮರೆತಿಲ್ಲ. ತಮ್ಮ ಗ್ರಾಮದಲ್ಲಿ ಕೃಷಿಭೂಮಿಯಿದ್ದು, ಅದರಿಂದ ಬರುವ ತಮ್ಮ ಆದಾಯದ ಸ್ವಲ್ಪ ಭಾಗವನ್ನೂ ಈ ಸಮಾಜ ಸೇವೆಗಾಗಿ ಬಳಸುತ್ತಿದ್ದಾರೆ.

Also Read: ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆಗೆ ಕಡಿವಾಣ ಅಗತ್ಯ

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಮೊಬೈಲ್ ಡಾಕ್ಟರ್ ಕ್ಲಿನಿಕ್:

ಒಂದು ಹಳೆಯ ಕಾರನ್ನು ಮಿತ್ರನಿಂದ ಸಾಲವಾಗಿ ಪಡೆದು, ಅದನ್ನು ರಿಪೇರಿ ಮಾಡಿಸಿ, ಅದನ್ನು ಸಂಚಾರಿ ಆರೋಗ್ಯ ರಥವನ್ನಾಗಿ ಪರಿವರ್ತಿಸಿದರು. ಅದರಲ್ಲಿ ಮೂಲಭೂತ ಆರೋಗ್ಯ ತಪಾಸಣೆಗೆ ಬೇಕಾದ ಡಾಕ್ಟರ್‌ರ ಪ್ರವಾಸಿ ಕಿಟ್ ಇತ್ತು. ಅಂದರೆ ಬಿ.ಪಿ ತಪಾಸಣಾ ಯಂತ್ರ, ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸುವ ಗ್ಲೂಕೊಮೀಟರ್, ಜ್ವರ ತಪಾಸಣೆಯ ಥರ್ಮಾಮೀಟರ್, ಇ.ಸಿ.ಜಿ. ಯಂತ್ರ, ಪಲ್ಸ್ ಆಕ್ಸಿಮೀಟರ್, ಮಡಿಚುವ ಪರೀಕ್ಷಾ ಟೇಬಲ್, ಮಡಿಚುವ ಕುರ್ಚಿಗಳು ಎಲ್ಲವುಗಳಿಂದ, ಹೋದಲ್ಲಿ, ನಿಂತಲ್ಲಿ, ನಿಲ್ಲಬಹುದಾದ, ಚಲಿಸುವ ಒಂದು ಸಾಮಾನ್ಯ ಚಿಕಿತ್ಸಾಲಯ, ಸಿದ್ದವಾಯಿತು. ಫೇಸ್‌ಬುಕ್ ಸಾಮಾಜಿಕ ಜಾಲತಾಣದಿಂದ ವಾರಾಂತ್ಯಗಳಲ್ಲಿ ಸಮಾಜ ಸೇವೆಯಲ್ಲಿ ಆಸಕ್ತರಾಗಿರುವ, ವೈದ್ಯೇತರ ಸ್ವಯಂ ಸೇವಕರನ್ನು ಇವರು ಹುಡುಕಿ ಆಯ್ದುಕೊಂಡರು. ಹೀಗೆ ಹಬ್ಬುತ್ತಾ ಹೋದ ಇವರ ಜಾಲದಲ್ಲಿ ಇಂದು 350 ವೈದ್ಯರ ಸ್ವಯಂಸೇವಕರ ತಂಡವಿದೆ.

ಬೆಂಗಳೂರಿನಲ್ಲಿರುವ ಕೊಳಚೆ ಪ್ರದೇಶಗಳು, ಗ್ರಾಮಾಂತರ ಪ್ರದೇಶಗಳಲ್ಲಿ, ಸಂಚರಿಸುತ್ತಿದೆ, ಈ ಸಂಚಾರಿ ಆರೋಗ್ಯ ವಾಹನ. ಇದುವರೆಗೆ 700 ವೈದ್ಯಕೀಯ ಶಿಬಿರಗಳು ನಡೆದಿದ್ದು, ಬೆಂಗಳೂರು ಗ್ರಾಮಾಂತರ ಹಾಗೂ ನಗರದ 30 ಸಾವಿರಕ್ಕಿಂತ ಹೆಚ್ಚು ಜನ ಲಾಭ ಪಡೆದಿದ್ದಾರೆ. ಆದರೆ ಡಾ. ಸುನಿಲ್ ಹೇಳುವಂತೆ. ಈ ಯಾತ್ರೆ ಸುಲಭವಾಗಿಲ್ಲ. ಬಹಳ ಜನಕ್ಕೆ ತಮ್ಮ ಆರೋಗ್ಯ ಸಮಸ್ಯೆ ಏನೆಂದೇ ತಿಳಿದಿಲ್ಲ. ಅವರು ಇದನ್ನು ಅಲಕ್ಷಿಸಿದ್ದಾರೆ ಅಥವಾ ಸ್ವ ವೈದ್ಯರಾಗಿ, ಏನೇನೋ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಅವರ ಅನಾರೋಗ್ಯದಿಂದ ಅವರ ಕೆಲಸ ಹಾಗೂ ಆದಾಯದ ಮೇಲಾಗುವ ಹೊಡೆತದ ಬಗ್ಗೆ, ಮೊದಲು ಅವರು ಅರಿತಿರಲಿಲ್ಲ. ಆದರೆ ನಮ್ಮ ಸತತ ಶಿಬಿರಗಳಿಂದ, ಅವರ ಆರೋಗ್ಯ ಸಮಸ್ಯೆಗಳನ್ನು ಅವರೇ ತಿಳಿದು, ಅತಿ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ, ಅವರು ಸರಿಯಾದ ಔಷದೋಪಚಾರ ಪಡೆದಿದ್ದಾರೆ. ಆರೋಗ್ಯ ಚನ್ನಾಗಿದ್ದಾಗ, ಅವರ ಕೆಲಸ ಚುರುಕಿನಿಂದ ಸಾಗಿ, ಅನಾರೋಗ್ಯದಿಂದ ಕೆಲಸ ತಪ್ಪಿಸಿಕೊಳ್ಳದೇ, ಆದಾಯ ಹೆಚ್ಚುತ್ತಿದೆ.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಆದರೆ ಈ ಶಿಬಿರಗಳ ವ್ಯವಸ್ಥೆಯಲ್ಲಿ ಈ ವೈದ್ಯಮಿತ್ರ ತಂಡ ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ಯೋಚಿಸಿ. ಔಷಧಗಳ ಕೊರತೆ, ಸಾರಿಗೆ ವೆಚ್ಚ ವೈದ್ಯಕೀಯ ಉಪಕರಣಗಳ ಬೇಡಿಕೆ, ಈ ಶಿಬಿರಗಳ ವ್ಯವಸ್ಥೆಯಲ್ಲಿ ಇವರಿಗಿರುವ ಸವಾಲುಗಳು. ಈ ಅಭಿಯಾನದಲ್ಲಿ ಆರಂಭದಿಂದ, ಈ ಡಾಕ್ಟರ್ ಸುನೀಲ್ ಜೊತೆ ಕೈಗೂಡಿಸಿದ್ದವರು, ಕೆಂಗೇರಿಯ ದಂತ ವೈದ್ಯರಾದ ಡಾ. ಪ್ರದೀಪ್ ವಿ. ಹಾಗೂ ಕೇವಲ 6-7 ಸ್ವಯಂಸೇವಕರು. ನಂತರ ಕುಮಾರ್ ಸ್ವಾಮಿ ಲೇಔಟ್‌ನ ನರರೋಗ ತಜ್ಞ, ಡಾ. ಭಾನುಪ್ರಕಾಶ್, ಕೆ.ಎಂ.ದೊಡ್ಡಿಯ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಅಶೋಕ್‌ಕುಮಾರ್ ಹಾಗೂ ಅವೆನ್ಯೂ ರಸ್ತೆಯ ವೈದ್ಯ ಡಾ. ಸತೀಶ್ ಶಿಂದ್ರೆ. ಈ ತಂಡದಲ್ಲಿ ದಂತ ವೈದ್ಯರಾಗಿರುವ ಡಾ. ಪ್ರದೀಪ್ ಹಲ್ಲುಗಳ ಸ್ವಚ್ಚತೆ ಹಾಗೂ ರಕ್ಷಣೆಯ ಬಗ್ಗೆ ಜನರಿಗಿರುವ ದೊಡ್ಡ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಹಿರಿಯರಿಗೆ ಸೇವೆ ನೀಡುವಲ್ಲಿ ನರರೋಗ ತಜ್ಞರಾದ ಡಾ. ಭಾನುಪ್ರಕಾಶ್ ತಮ್ಮ ಅನುಭವ ಧಾರೆಎರೆಯುತ್ತಿದ್ದಾರೆ. ವೈದ್ಯಕೀಯ ಕಂಪನಿ ಪ್ರತಿನಿಧಿ ನಾಗರಾಜನ್ ಅಯ್ಯರ್ ಔಷಧಿಗಳ ಪೂರೈಕೆಯಲ್ಲಿ ನೆರವು ನೀಡುತ್ತಿದ್ದಾರೆ. ಮೊದಲು ವಾತ್ಸಲ್ಯ ದತ್ತಿ ಕ್ಲಿನಿಕ್ ಹೆಸರಿನಲ್ಲಿ ಆರಂಭವಾಗಿ, ಕಡಿಮೆ ವೆಚ್ಚ ಅಥವಾ ಉಚಿತವಾಗಿ ಬೆಂಗಳೂರು ಗ್ರಾಮೀಣ ಪ್ರದೇಶಗಳ ಸುಮಾರು 85,000 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇಂದು ಇವರೊಂದಿಗೆ ಸ್ವಯಂ ಪ್ರೇರಣೆಯ 1200 ವೈದ್ಯೇತರ ಸ್ವಯಂ ಸೇವಕರಿದ್ದಾರೆ. ಮೆಡಿಕಲ್ ಕಂಪನಿಗಳ ಪ್ರತಿನಿಧಿಗಳಿದ್ದಾರೆ.

ಡಾ.ಸುನೀಲ್ ಕುಮಾರ್ ಹೆಬ್ಬಿ - ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ

ಇವರಲ್ಲಿ ಅನೇಕರು ತಮ್ಮ ಧನಸಹಾಯ ಹಾಗೂ ಉಚಿತ ಔಷಧಿಗಳ ಪೂರೈಕೆ ಮಾಡುತ್ತಿದ್ದಾರೆ. ವಾರಾಂತ್ಯದ ಸ್ವಯಂ ಸೇವಕರ ಪಟ್ಟಿಯಲ್ಲಿ, ದುಡಿಯುವ ಮಹಿಳೆಯರಾದ, ಶ್ವೇತಾ, ಶೈಲಜಾ ಅಕ್ಕಿ, ಗೃಹಿಣಿ ಅನಾಮಿಕಾ ಕುಮಾರಿ ಅವರ ಹೆಸರುಗಳು ಸೇರಿವೆ. ಈ ಮೊಬೈಲ್ ಡಾಕ್ಟರ್ ಕ್ಲಿನಿಕ್ ಆರಂಭಿಸಿದ ಉದ್ದೇಶವೇ, ಬಡತನದಿಂದ ಹಾಗೂ ವೈದ್ಯಕೀಯ ಉಪಚಾರ ಲಭ್ಯತೆಯಿಲ್ಲದೇ, ಯಾರೂ ಸಾಯಬಾರದೆಂದು. ಹೀಗೆ ಬೆಂಗಳೂರಿನಲ್ಲಿ 50-60 ಕಿ.ಮೀ. ಸುತ್ತಳತೆಯಲ್ಲಿ, ಸ್ವಯಂ ಸೇವಕರು ಸರ್ವೇ ಮಾಡಿ, ಈ ಸೇವೆ ಅಗತ್ಯವಾಗಿರುವ ಬಡರೋಗಿಗಳನ್ನು ಕಂಡುಹಿಡಿಯುತ್ತಾರೆ. ಹೀಗೆ ಆವಶ್ಯಕತೆ ಆಧರಿಸಿ, ಈ ಸಂಚಾರಿ ಆರೋಗ್ಯ ಸಾರಥಿ ಸತತ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಿಂದ ಏನೆಲ್ಲ ಪಡೆದಿರುವ ನಾನು, ಸಮಾಜಕ್ಕೆ ಹಿಂದಿರುಗಿಸುವ ಅವಕಾಶ ಈಗ ಒದಗಿದೆ. ಸಾರ್ವಜನಿಕರು ಹಾಗೂ ಸ್ವಯಂ ಸೇವಕರಿಂದ ಪ್ರೋತ್ಸಾಹ ಪಡೆದಿರುವ ನಾನು, ಇನ್ನೂ ಹೆಚ್ಚಿನ ಬೆಂಬಲ ನಿರೀಕ್ಷಿಸುತ್ತಿದ್ದೇನೆ ಎನ್ನುತ್ತಾರೆ ಈ ಡಾಕ್ಟರ್.

ಬನ್ನೇರುಘಟ್ಟದಲ್ಲಿರುವ ಆರ್.ವಿ.ಎಂ. ಫೌಂಡೇಶನ್ ಆಸ್ಪತ್ರೆಯಿಂದ ಪ್ರೇರಿತರಾಗಿರುವ ಸುನಿಲ್, ಇಂತಹ ದತ್ತಿ ಆಸ್ಪತ್ರೆಯನ್ನು, ಬೆಂಗಳೂರಿನಲ್ಲಿ ಹಾಗೂ ವಿಜಯಪುರದಲ್ಲಿ ಸ್ಥಾಪಿಸಬಯಸಿದ್ದಾರೆ. ಪ್ರೇಮಾ ಫೌಂಡೇಶನ್ ಎಂಬ ಎನ್.ಜಿ.ಓ. ನಡೆಸುವ ಸತೀಶ್, ಸುನಿಲ್‌ರಿಗೆ ನಾಲ್ಕು ವರ್ಷಗಳಿಂದ ಬೆಂಬಲಿಸಿದ್ದಾರೆ. ಅವರ ಮಾತುಗಳಲ್ಲಿ ಕೆಳ ಆರ್ಥಿಕ ಹಿನ್ನಲೆಯಿಂದ ಬಂದಿರುವದರಿಂದ, ಅವಶ್ಯಕತೆಯಿರುವವರಿಗೆ ಮೂಲ ಆರೋಗ್ಯ ಕಾಳಜಿ ಹಾಗೂ ಶಿಕ್ಷಣ ಎಷ್ಟು ಮಹತ್ವದ್ದು ಎಂದು ನಾನು ಬಲ್ಲೆ. ಹೀಗಾಗಿ ಇವರ 350 ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೇನೆ. ಉದ್ದಿಮೆದಾರ ಅನಿಲ್‌ಶೆಟ್ಟಿ ಹೊಗಳಿರುವಂತೆ, ಇವರ ವೃತ್ತಿಯಲ್ಲಿರುವ ಬಹಳ ಜನ, ತಮ್ಮ ವೃತ್ತಿಯನ್ನು ಮಹಾನ್ ಆಗಿ ಮಾಡಲು ಯೋಚಿಸುತ್ತಾರೆ. ಆದರೆ ಸಮಾಜಕ್ಕೆ ಅಮೂಲ್ಯ ಸೇವೆ ಮಾಡುತ್ತಿರುವ ಇವರು ಎಲ್ಲರಿಗಿಂತ ವಿಭಿನ್ನರಾಗಿದ್ದಾರೆ. ವಾಣಿಜ್ಯೀಕರಣವಾಗುತ್ತಿರುವ ವೃತ್ತಿಯಲ್ಲಿ, ಇಂಥವರು, ವೈದ್ಯರಲ್ಲಿಯ ನಂಬಿಕೆಯಲ್ಲಿ ಪುನಃ ಸ್ಥಾಪಿಸಿದ್ದಾರೆ.

dr sunil kumar Hebbi

ಸ್ಮರಣೀಯ ಘಟನೆ:

300 ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದ ದೊಡ್ಡ ಅಪಾರ್ಟ್‌ಮೆಂಟ್ ಸಂಕೀರ್ಣ ಕಟ್ಟಡದ ಕೆಲಸದಲ್ಲಿ ತೊಡಗಿದ್ದ ೩೦೦ ಕಾರ್ಮಿಕರಿಗೆ ಚರ್ಮದ ಮೇಲೆ ಕೆಂಪು ಗುಳ್ಳೆಗಳು ಬಂದವು. ಈ ಅಲರ್ಜಿ ಹರಡಿದ್ದು, ಅಲ್ಲಿಯೇ ಇದ್ದ ಕೀಟಗಳು. ಟಿಟ್ಯಾನೆಸ್ ಚುಚ್ಚುಮದ್ದು ಕೊಟ್ಟು, ಅನೇಕ ಭೇಟಿಗಳ ಮೂಲಕ ಇವರಿಗೆ ಚಿಕಿತ್ಸೆ ನೀಡಿದ್ದು, ಹೃದಯ ಮುಟ್ಟುವ ವಿಷಯವಾಗಿದೆ ಎಂದು ಸ್ಮರಿಸಿಕೊಂಡರು ಡಾ. ಸುನಿಲ್. ಡಾ.ಸುನಿಲ್‌ಕುಮಾರ್ ಹೆಬ್ಬಿ ಅವರ ಸಂದರ್ಶನದಲ್ಲಿ ಅವರು ಒತ್ತಿ ಹೇಳಿದ ಅಂಶಗಳು ಹೀಗಿವೆ. ಆರೋಗ್ಯ ಕಾಳಜಿ ಮೂಲಭೂತ ಹಕ್ಕೇ ಹೊರತು ಸೌಲಭ್ಯವಲ್ಲ. ಆದರೆ ನಮ್ಮ ದೇಶದಲ್ಲಿ ಇದರ ಕೊರತೆ ಇದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ನೆರವು ದೊರಕಬೇಕು. ಈ ಹಿನ್ನಲೆಯಲ್ಲಿ ಬೆಂಗಳೂರು ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿರುವ ವೃದ್ಧಾಶ್ರಮಗಳು, ಕೊಳಚೆ ಪ್ರದೇಶಗಳು, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಪ್ರತಿ ವಾರ ನಾವು ಶಿಬಿರಗಳನ್ನು ನಡೆಸಿ ಸ್ಥಳೀಯ ಸಮುದಾಯಕ್ಕೆ ನೆರವು ಒದಗಿಸುತ್ತಿದ್ದೇವೆ. ಪ್ರಿಯ ಓದುಗರೇ ಈಗ ಹೇಳಿ. ಈ ವೈದ್ಯರು ಅಪರೂಪದ ವೈದ್ಯರಲ್ಲವೇ!?.

N-V-Ramesh Mysuru

ಎನ್.ವಿ. ರಮೇಶ್
ಮೊ.: 9845565238

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!