ಮಹಿಳೆಯರೇ ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷಿಸದಿರಿ

ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ.ಮಹಿಳೆಯರಲ್ಲಿ ಮಾಸಿಕ ಋತು ಕೊನೆಗೊಳ್ಳುವ ತನಕ (ಮೆನೊಪಾಸ್) ಅವರಿಗೆ ಸಾಮಾನ್ಯವಾಗಿ ಹೃದಯಾಘಾತದಿಂದ ರಕ್ಷಣೆ ದೊರೆಯುತ್ತದೆ. ಆದರೆ, ಮಹಿಳೆಯರು ದೀರ್ಘಕಾಲ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಮತ್ತು ತಂಬಾಕು ಉಪಯೋಗಿಸಿದರೆ ಈ ರಕ್ಷಣೆ ಕೊನೆಗೊಳ್ಳುತ್ತದೆ. ಪುರುಷರು ತಮ್ಮ ಹೃದಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ ತಕ್ಷಣವೇ ಮನೆಯವರ ಗಮನಕ್ಕೆ ತರುತ್ತಾರೆ, ವೈದ್ಯರ ಬಳಿ ಧಾವಿಸುತ್ತಾರೆ. ಆದರೆ ಮಹಿಳೆ ಮಾತ್ರ ಹಾಗೆ ಮಾಡುವುದಿಲ್ಲ. ಆಕೆ ಹೃದಯದಲ್ಲಿ ಉಂಟಾಗುವ ಸಣ್ಣಪುಟ್ಟ ನೋವುಗಳನ್ನು ಹೇಳಿಕೊಳ್ಳುವುದೇ ಇಲ್ಲ.
ಮನೆಯವರೆಲ್ಲರ ಕಾಳಜಿವಹಿಸುವ ಮಹಿಳೆ ತನ್ನಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ನಿರ್ಲಕ್ಷಿಸಿಬಿಡುತ್ತಾಳೆ. ಹೃದಯ ಕಾಯಿಲೆಗೆ ಸಂಬಂಧಪಟ್ಟ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಒಮ್ಮೆ ಅದರ ಆಘಾತಕ್ಕೆ ಸಿಲುಕಿದರೆ ಮುಂಬರುವ ವರ್ಷಗಳಲ್ಲಿ ಅವಳ ದುಡಿಯುವ ಶಕ್ತಿಸಹ ಕಡಿಮೆಯಾಗಿ ಬಿಡುತ್ತದೆ.ಕೆಲವು ತಿಂಗಳ ಮುಂಚೆಯೇ ಹೃದಯದಲ್ಲಿ ಸಣ್ಣಪುಟ್ಟ ನೋವು ಎನಿಸಬಹುದು. ಭುಜದ ಭಾಗದಲ್ಲಿ ನೋವು ಇರಬಹುದು. ಇವೆಲ್ಲ ಲಕ್ಷಣಗಳು ಕಂಡುಬಂದಾಗ ತಕ್ಷಣವೇ ವೈದ್ಯರಿಂದ ತಪಾಸಣೆ ಗೊಳಗಾಗಬೇಕು. ಬೇಗ ಚಿಕಿತ್ಸೆ ಪಡೆದರೆ ಮುಂಬರುವ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಪುರುಷ ಹಾಗೂ ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಸ್ವಲ್ಪ ಭಿನ್ನರೀತಿಯಲ್ಲಿ ಗೋಚರಿಸುತ್ತವೆ.
ಪುರುಷನಿಗೆ ಹೃದಯದಲ್ಲಿ ಒಮ್ಮೆಲೆ ಹಿಂಡಿದಂತೆ ನೋವು ಉಂಟಾದರೆ, ಮಹಿಳೆಯರಲ್ಲಿ ಚಿಕ್ಕಚಿಕ್ಕ ರಕ್ತನಾಳಗಳಲ್ಲಿ ಅಡೆತಡೆ ಉಂಟಾಗಿ ಹೃದ್ರೋಗಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿಯೇ ಹೃದಯದ ತೊಂದರೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.35ರ ಬಳಿಕ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಾದರೂ ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಮುಟ್ಟು ನಿಂತ ಮಹಿಳೆಯರಲ್ಲಿ ಇದರ ಪ್ರಮಾಣ ಸ್ವಲ್ಪಜಾಸ್ತಿ. ಹಾರ್ಮೋನುಗಳ ರಕ್ಷಣೆ ಇರದೇ ಇರುವುದರಿಂದ ಈ ಸ್ಥಿತಿ ಉಂಟಾಗಬಹುದು
ಹೃದಯಾಘಾತ ಎನ್ನುವುದು ಬಹಳ ಶಕ್ತಿಶಾಲಿಯಾದ ರೋಗ ಮತ್ತು ಇದಕ್ಕೆ ಕೊಲ್ಲುವ ಶಕ್ತಿ ಬಹಳ ಅಧಿಕವಾಗಿರುತ್ತದೆ. ಒಂದು ವೇಳೆ ಬದುಕಿ ಉಳಿದರೂ ಮಾನಸಿಕ ಸಾಮಥ್ರ್ಯವನ್ನು ಕುಗ್ಗಿಸುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿದರೂ, ಮಾನಸಿಕವಾಗಿ ಉಡುಗಿ ಹೋಗಿ ಮೊದಲಿನಂತೆ ಪರಿಣಾಮಕಾರಿಯಾಗಿ ಕೆಲಸಮಾಡಲು ಹೆಚ್ಚು ಸಮಯ ತೆಗೆದು ಕೊಳ್ಳಬಹುದು. ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ.

ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು:

  • ಧೂಮಪಾನಿಗಳು ಧೂಮಪಾನ ಮಾಡುವವರಿಗಿಂತ ಹೃದಯಾಘಾತಕ್ಕೆ ತುತ್ತಾಗುವ ಗಂಡಾಂತರ 3 ರಿಂದ 6 ಪಟ್ಟು ಹೆಚ್ಚಾಗುತ್ತದೆ.
  • ರಕ್ತದಲ್ಲಿ ಕೊಲೆಸ್ಟರಾಲ್ (ಕೊಬ್ಬು) ಪ್ರಮಾಣ ಹೆಚ್ಚಾಗುವುದರಿಂದ ಕರೋನರಿ ಆರ್ಟರಿಗಳು ಗಟ್ಟಿಯಾಗುತ್ತವೆ ಹಾಗೂ ಇದು ಹೃದಯಾಘಾತ ಸಂಭವಿಸುವ ಅವಕಾಶವನ್ನು ಹೆಚ್ಚಿಸುತ್ತದೆ.
  • ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಪ್ರಮಾಣ ಅತಿರೋಸ್‍ಸ್ಕೆಲೋರಿಸಿಸ್ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಇದರೊಂದಿಗೆ ಹತೋಟಿ ಇಲ್ಲದ ಡಯಾಬಿಟಿಸ್ ಅತಿಯಾದ ತೂಕ ಮತ್ತು ಅಧಿಕ ಕೊಲೆಸ್ಟರಾಲ್‍ಗೆ ಎಡೆ ಮಾಡಿಕೊಡುತ್ತದೆ. ಇವೆಲ್ಲವೂ ಹೃದಯಾಘಾತ ಗಂಡಾಂತರವನ್ನು ಇನ್ನಷ್ಟು ಹೆಚ್ಚಿಸುತ್ತವೆ.
  • ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ.ಅಧಿಕ ರಕ್ತದೊತ್ತಡದಿಂದ ಹೃದಯ ದೊಡ್ಡದಾಗಿ ಹಾರ್ಟ್ ಆಟ್ಯಾಕ್‍ಗೆ ಕಾರಣವಾಗುತ್ತದೆ.
  • ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಸಮೃದ್ದ ಆಹಾರಗಳ (ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಪದಾರ್ಥಗಳು) ಸೇವನೆ ಹಾಗೂ ವ್ಯಾಯಾಮದ ಕೊರತೆಯಿಂದ ಸಾಮಾನ್ಯವಾಗಿ ತೂಕ ಅತಿಯಾಗಿ ಹೆಚ್ಚಾಗುತ್ತದೆ. ಇದರಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ಅತಿರೋಸ್‍ಸ್ಕೆಲೋರಿಸಿಸ್ ಗಂಡಾಂತರವನ್ನು ಅಧಿಕಗೊಳಿಸುತ್ತದೆ.
  • ಐಷಾರಾಮಿ ಅಭ್ಯಾಸಗಳು ಮತ್ತು ಸ್ಥೂಲಕಾಯ, ಬೊಜ್ಜು ಕೊಬ್ಬನ್ನು ಕರಗಿಸುವಲ್ಲಿ ಕಡಿಮೆ ಸಾಮಥ್ರ್ಯಕ್ಕೆ ಕಾರಣವಾಗಿ ಅಧಿಕ ಕೊಲೆಸ್ಟರಾಲ್‍ಗೆ ಎಡೆ ಮಾಡಿಕೊಡುತ್ತದೆ.
  • ಯಾವಾಗಲೂ ಉದ್ವೇಗ, ಒತ್ತಡ, ಕೋಪ, ಆವೇಶಕ್ಕೆ ಒಳಗಾಗುವ ವ್ಯಕ್ತಿಗಳು ಹಾಗೂ ಆತುರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ತವಕಿಸುವ ಮಂದಿ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಕುಟುಂಬದ ಯಾರಾದರೂ ಒಬ್ಬರಿಗೆ ಯೌವ್ವನದಲ್ಲಿ ಹೃದಯಾಘಾತವಾಗಿದ್ದರೆ ಆ ಕುಟಂಬದಲ್ಲಿ ಯಾವುದೇ ವ್ಯಕ್ತಿ ಹಾರ್ಟ್ ಆಟ್ಯಾಕ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂಥ ಗಂಡಾಂತರದ ಅಧಿಕ ಸಾಧ್ಯತೆ ಇರುವ ಮಂದಿ ಧೂಮಪಾನ, ಐಷಾರಾಮಿ ಅಭ್ಯಾಸ ಹಾಗೂ ಅಧಿಕ ಪ್ರಮಾಣದ ಕೊಬ್ಬಿನಂಶವಿರುವ ಆಹಾರ ಪದಾರ್ಥಗಳ ಸೇವನೆಯಂಥ ಪರಿವರ್ತಿತ ಗಂಡಾಂತರಕಾರಿ ಅಂಶಗಳನ್ನು ತಪ್ಪಿಸಬೇಕಾಗುತ್ತದೆ.

ಯಾರಲ್ಲಿ ಹೃದಯರೋಗದ ಅಪಾಯ ?

  • ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುವ ಮಧುಮೇಹ, ಅತಿರಕ್ತದೊತ್ತಡ ಮುಂಬರುವ ವರ್ಷಗಳಲ್ಲಿ ಹೃದಯ ರೋಗಕ್ಕೆ ಕಾರಣವಾಗಬಹುದು.
  • ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆಗಳು ಇದ್ದರೆ ಅದು ವಂಶಪಾರಂಪರ್ಯವಾಗಿ ಬರಬಹುದು.
  • ಧೂಮಪಾನದ ಪ್ರಮಾಣ ಮಹಿಳೆಯರಲ್ಲಿ ಕಡಿಮೆ. ಆದರೆ ಗ್ರಾಮೀಣಭಾಗದಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿಗೆ ಇದೆ. ಅದೇ ರೀತಿ ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದಲೂ ಹೃದ್ರೋಗದ ಅಪಾಯ ಹೆಚ್ಚುತ್ತದೆ.
  • ಆಹಾರದಲ್ಲಿ ಮಸಾಲೆಗಳ ಪ್ರಮಾಣ ಹೆಚ್ಚಿಗೆ ಇರುವುದು, ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದು. ಆಹಾರವನ್ನು ಮತ್ತೆಮತ್ತೆ ಬಿಸಿಮಾಡಿ ಸೇವಿಸುವುದು ಕೂಡ ಹೃದಯದ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
  • ಅತಿಯಾದ ದುಃಖ ಕೂಡ ಹೃದಯದ ಕಾರ್ಯ ಸಾಮರ್ಥ್ಯ ಕುಸಿಯಲು ಕಾರಣವಾಗುತ್ತದೆ.
  • ಅತಿಯಾದ ರಕ್ತಹೀನತೆ, ಹಾರ್ಮೋನುಗಳ ಏರುಪೇರು, ಥೈರಾಯ್ಡ್ ಗ್ರಂಥಿಗಳ ಸಮಸ್ಯೆಗಳು ಕೂಡ ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು.

ಮುನ್ನೆಚ್ಚರಿಕೆ ವಹಿಸುವುದು ಹೇಗೆ?

  • ಎದೆ ನೋವು, ಭುಜದ ನೋವು, ಸುಸ್ತು, ಉಸಿರಾಟ ತೊಂದರೆಗಳು ಕಾಣಿಸಿಕೊಂಡಾಗ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
  • ಎಷ್ಟೇ ಕೆಲಸ ಮಾಡಿ, ಆದರೆ ದಿನಕ್ಕೆ 15 – 20 ನಿಮಿಷ ಹೊರಗಡೆ ಪ್ರಶಾಂತ ವಾತಾವರಣದಲ್ಲಿ ನಡೆದಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
  • ದೇಹತೂಕ ಅತಿಯಾಗದಂತೆ ನೋಡಿಕೊಳ್ಳಿ.
  • ಧೂಮಪಾನ, ತಂಬಾಕು ಸೇವನೆ ನಿಲ್ಲಿಸಿಬಿಡಿ. ಅಪರೋಕ್ಷ ಧೂಮಪಾನದಿಂದ ದೂರ ಇರಿ. ಅಂದರೆ ಮನೆಯಲ್ಲಿ ಯಾರಾದರೂ ಧೂಮಪಾನಿಗಳು ಇದ್ದರೆ ಅವರು ಬಿಡವ ಹೊಗೆ ಸೇವನೆ ಮಾಡಬೇಡಿ.
  • ಕೆಲವರಲ್ಲಿ ಹುಟ್ಟಿನಿಂದಲೇ ಹೃದ್ರೋಗದ ಲಕ್ಷಣಗಳು ಇರುತ್ತವೆ. ಆದರೆ ಅವು ಗುಪ್ತಗಾಮಿನಿಯಂತೆ ಇರುತ್ತವೆ. ಹಾಗಾಗಿ ವರ್ಷಕ್ಕೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳಬೇಕು.
  • ಆಹಾರದಲ್ಲಿ ಕಟ್ಟುನಿಟ್ಟು ಅಗತ್ಯ. ಹೆಚ್ಚು ಮಸಾಲೆಯುಕ್ತ ಪದಾರ್ಥಗಳಿಂದ ದೂರ ಇರಿ. ಹುರಿದ ಕರಿದ ಪದಾರ್ಥಗಳನ್ನು ಮಿತಪ್ರಮಾಣದಲ್ಲಿ ಸೇವಿಸಿ.

ಜನರು ಹೆಚ್ಚು ಆಲಸಿಗಳಾಗಿ ದೈಹಿಕ ಕಸರತ್ತನ್ನು ಕಡಿಮೆಯಾಗಿ, ಮಾನಸಿಕ ಒತ್ತಡ ಜಾಸ್ತಿಯಾಗಿ ಹೊಸಹೊಸ ರೋಗಗಳು ಹುಟ್ಟ ತೊಡಗಿದೆ ಮತ್ತು ಹೃದಯ ಸಂಬಂಧಿರೋಗÀಗಳು ಬಹುಮುಖ್ಯ ರೋಗವಾಗಿ ಹೊರಹೊಮ್ಮಿದೆ. ಅಂಕಿ ಅಂಶಗಳ ಪ್ರಕಾರ ವಿಶ್ವದ ಹೃದಯರೋಗಿಗಳ ಸಂಖ್ಯೆಯ ಮೂರನೇ ಒಂದಂಶದಷ್ಟು ಭಾರತವೊಂದರಿಂದಲೇ ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಮೊದಲೇ ಬಡತನ, ಅನಕ್ಷರತೆ ಮೂಡನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಅಶ್ಚರ್ಯವೇನಿಲ್ಲ.

 

 

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!