ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!!

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!! .ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಕಾಲ ಘಟ್ಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ.ವೈದ್ಯರ ಮೇಲೆ ದಾಳಿ ನ್ಯಾಯವೇ?

DR B.C.roy‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಷಃ ಎಲ್ಲ ವೈದ್ಯರಿಗೂ ಅನ್ವಯಿಸಲಿಕ್ಕಿಲ್ಲ. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳಿಗೆಗೆ ತಮ್ಮ ಬದುಕನ್ನು ಸಮರ್ಪಿಸಿ ಕೊಂಡಿರುವ ವೈದ್ಯರಿಗೆ ಅಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ.

ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ, ನೆನಪಿಸಿಕೊಳ್ಳುವ ಮತ್ತು ಆದರಿಸುವ ಸ್ಮರಣೀಯವಾದ ದಿನವದು. ಅಂದು ಭಾರತದ ವೈದ್ಯರೆಲ್ಲರೂ ಅಭಿಮಾನ ಪಡುವ ಮಹಾವೈದ್ಯ ಶಿಕ್ಷಣ ತಜ್ಞ, ಸ್ವಾತಂತ್ರ ಹೋರಾಟಗಾರ ಶ್ರೇಷ್ಠ ರಾಜಕೀಯ ಧುರೀಣ, ಅಪ್ರತಿಮ ವ್ಯಕ್ತಿತ್ವದ ಡಾ. ಬಿ.ಸಿ. ರಾಯ್ ಜನ್ಮವೆತ್ತ ದಿನ.1882 ಜುಲೈ 1 ಡಾ. ಬಿ.ಸಿ. ರಾಯ್‌ರವರ ಸವಿ ನೆನಪಿಗಾಗಿ ಈ ದಿನವನ್ನು ವೈದ್ಯರ ದಿನ ಎಂದು ಆಚರಿಸುತ್ತೇವೆ. ಈ ದಿನದಂದು ಭಾರತದ ಎಲ್ಲಾ ವೈದ್ಯ ಭಾಂದವರು ಸಮಾಜದ ಬಡತನ ರೇಖೆಗಿಂತ ಕೆಳಗಿರುವ ಮನು ಕುಲದ ಉದ್ಧಾರಕ್ಕಾಗಿ ಪ್ರತಿಜ್ಞೆ ಮಾಡುತ್ತಾರೆ.

ಬಿಹಾರದ ಪಾಟ್ನಾದಲ್ಲಿ ಜನಿಸಿದ ಬಿ.ಸಿ.ರಾಯ್ ಅವರು ಕಲ್ಕತ್ತದಲ್ಲಿ ಎಂ.ಬಿ.ಬಿ.ಎಸ್. ಶಿಕ್ಷಣ ಮುಗಿಸಿದರು. ಅವರ ಜ್ಞಾನ ಸಂಪತ್ತಿಗೆ, ಅವರ ಅನುಭವಕ್ಕೆ ಯೋಗ್ಯತೆಗೆ ಇಂಗ್ಲೆಂಡ್‍ನ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ತಾಯಿ ನಾಡಿನ ವ್ಯಾಮೋಹ ಅವರನ್ನು ಬಿಡಲಿಲ್ಲ. 1911 ರಲ್ಲಿ ಭಾರತಕ್ಕೆ ಬಂದು ನಮ್ಮ ದೇಶದ ಬಡಜನರ ಉದ್ದಾರಕ್ಕಾಗಿ ಟೊಂಕ ಕಟ್ಟಿ ನಿಂತರು. ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಾಗಿ ಸಾವಿರಾರು ಮಂದಿ ಯುವ ವೈದ್ಯರಿಗೆ ಆದರ್ಶ ಪ್ರಾಯರಾದರು. ಇವತ್ತಿಗೂ ಅವರಿಂದ ಕಲಿತ ನೂರಾರು ವೈದ್ಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಮಿನುಗುತ್ತಿದ್ದಾರೆ. ಅವರು ತಮ್ಮ ಪ್ರತಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು. “Poor are my patients, God pays for them” ಎಂಬ ಉಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿದ ವ್ಯಕ್ತಿ ಬಿ.ಸಿ. ರಾಯ್ ಎಂದರೆ ಅತಿಶಯೋಕ್ತಿಯಲ್ಲ. ತಾವು ನಂಬಿದ ತತ್ವ, ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದರು.

ಸ್ವಾತಂತ್ಯ ಬಳಿಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿ ಏರಿ ತಮ್ಮ ಪದವಿಯ ಗೌರವವನ್ನು ಇಮ್ಮಡಿಗೊಳಿಸಿದರು. ಹಲವಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳಿಗೆ ಬಡ ರೋಗಿಗಳಿಗೆ ಆಶಾಕಿರಣವಾದರು. ಹೀಗೆ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡು, ಗಾಂಧೀಜಿ ಕನಸು ಕಂಡ ರಾಮರಾಜ್ಯದ ಸ್ಥಾಪನೆಗೆ ತಮ್ಮ ಜೀವನವನ್ನು ಮುಡಿಪಾಗಿಸಿದರು. ಸುಮಾರು 80 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ 1962 ಜುಲೈ ಒಂದರಂದು ಕೀರ್ತಿಶೇಷರಾದರು. ಭಾರತ ಸರಕಾರ ರಾಯ್ ಅವರ ಸೇವೆಯನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ 1976ರಿಂದ ಬಿ.ಸಿ.ರಾಯ್ ಪ್ರಶಸ್ತಿ ನೀಡಲು ಆರಂಭಿಸಿತ್ತು. ಇದು ಈ ಮಹಾವ್ಯಕ್ತಿಯ ಮಾನವೀಯ ಸೇವೆಗೆ ನೀಡಿದ ಕಿಂಚಿತ್ ಕಿರು ಕಾಣಿಕೆ ಎಂದರೂ ತಪ್ಪಲ್ಲ.

ವ್ಯಾಪಾರಿ ಮನೋಭಾವನೆ ಬೆಳೆಯುತ್ತಿರುವುದು ವಿಷಾದನೀಯ :

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!!ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತವಾದ ಕ್ರಾಂತಿಗಳು, ಆವಿಷ್ಕಾರಗಳು ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳಾಗಿ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧಗಳು ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾದನೀಯ ವಿಚಾರ. ವೈದ್ಯ ಶಿಕ್ಷಣವಿರಲಿ, ವೈದ್ಯಕೀಯ ವೃತ್ತಿಯಿರಲಿ, ಸಂಶೋಧನೆಗಳೇ ಇರಲಿ ಎಲ್ಲಾ ಕಡೆಯೂ ಧನ ಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸುದೃಷ್ಟ ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕವಾಗಬಹುದು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ, ಸಂಘ-ಸಂಸ್ಥೆಗಳು ಮತ್ತು ಸರಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು.

ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲಿ ತೀವ್ರತರವಾದ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡಜನರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕು.

ರೋಗ ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ:

ಕೊನೆಯದಾಗಿ ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ನಿಮ್ಮ ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ಕೂಡ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆಗಳು, ವೈಯಕ್ತಿಕ ಸಮಸ್ಯೆಗಳು ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ-ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಸ್ಪಷ್ಟ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ನೆನೆಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳಿಲ್ಲದೆ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ.

ರೋಗಿಗಳು ಕೂಡಾ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಾಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆಗಳನ್ನು ಕೇಳಿ ಅಂತರ್ ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ತಪ್ಪಿಸಬೇಡಿ. ಸುಮಾರು ಪ್ರತಿಶತ ಮೂವತ್ತರಷ್ಟು ರೋಗ ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ. ನೆನಪಿರಲಿ, ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು ಆದರೆ ಮನಸ್ಸಿನ ರೋಗವನ್ನು ಗುಣಪಡಿಸಲು ವೈದ್ಯರಿಗೆ ಅಸಾಧ್ಯ ಎನ್ನುವುದನ್ನು ಅರಿತುಕೊಂಡಲ್ಲಿ ಎಲ್ಲ ವೈದ್ಯರ ಕೆಲಸ ಸರಳವಾಗುವುದರಲ್ಲಿ ಎರಡು ಮಾತಿಲ್ಲ. ವೈದ್ಯರೂ ಆತ್ಮ ವಿಮರ್ಶೆ ಮಾಡಿಕೊಂಡು ತಮ್ಮ ವೈದ್ಯಕೀಯ ವೃತ್ತಿಯ ರಾಜ ಧಮ್ವನ್ನು ಪಾಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣವಾಗಬಹುದು. ಅದುವೇ ನಾವು ಬಿ.ಸಿ. ರಾಯ್ ಎಂಬ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಲ್ಲ.

ಏನಿದು ಆರೋಗ್ಯ ?

ಆರೋಗ್ಯ ಎಂದರೇನು ಎಂಬುದು ಬಹುತೇಕ ಜನರಿಗೆ ಇನ್ನು ತಿಳಿದಿಲ್ಲ. ರೋಗವಿಲ್ಲದಿರುವುದೇ ಆರೋಗ್ಯ (Health is absense of disease) ಎಂಬುದಾಗಿ ಬಹುತೇಕ ಮಂದಿ ತಪ್ಪು ತಿಳುವಳಿಕೆ ಹೊಂದಿದ್ದಾರೆ. ನಮ್ಮ ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ವಾತಾವರಣಗಳಿಂದಾಗಿ ರೋಗವಿಲ್ಲದ ಮನುಷ್ಯನನ್ನು ದುರ್ಬಿನು ಹಾಕಿ ಹುಡುಕಿದರೂ ದೊರಕಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಕೆಟ್ಟ ಜೀವನ ಶೈಲಿಯ ರೋಗಗಳಾದ ಮಧುಮೇಹ, ರಕ್ತದೊತ್ತಡ, ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಜಾಗತಿಕ ಸತ್ಯ. ಭಾರತದ ಮೆಟ್ರೊನಗರಗಳಾದ ಡೆಲ್ಲಿ, ಬೆಂಗಳೂರು, ಕಲ್ಕತ್ತಾ, ಮದ್ರಾಸ್, ಬಾಂಬೆಗಳಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಮಧುಮೇಹ, ಪ್ರತಿ ಏಳರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಮತ್ತು ಪ್ರತಿ ಹತ್ತರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇಂತಹಾ ಪರಿಸ್ಥಿತಿಯಲ್ಲಿ ನಮಗೆ ಪರಿಪೂರ್ಣ ಆರೋಗ್ಯವಂತ ವ್ಯಕ್ತಿ ಸಿಗುವುದು ದುರ್ಲಭವೇ. ಈ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎಂದರೆ ಕೆಲಸ ಮಾಡುವ ಹುರುಪು (Enthusiasm to work) ಎಂಬುದಾಗಿ ಬದಲಿಸಬೇಕು ಎಂದು ಎಲ್ಲೆಡೆ ಕೇಳಿ ಬರುತ್ತಿದೆ.

ಯಾಕೆಂದರೆ ಬೆಳಗೆದ್ದು ದಿನನಿತ್ಯದ ಕೆಲಸ ಮಾಡುವ ಹುರುಪು ಇದ್ದಲ್ಲಿ ಆತ ನಿರೋಗಿ ಎಂದು ತಿಳಿಯಬಹುದು. ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿದ್ದಲ್ಲಿ ಆತ ನಿರೋಗಿ ಎಂದು ತಿಳಿಯಬೇಕು ಎಂಬ ವಾದವನ್ನು ತಳ್ಳಿ ಹಾಕುವಂತಿಲ್ಲ. ಈ ಕಾರಣಕ್ಕಾಗಿಯೇ ದಲೈಲಾಮ ಅವರು ಹೇಳಿದ ಮಾತು Happiness is the highest form of health ಅಂದರೆ ಸಂತಸವೇ ಆರೋಗ್ಯದ ಪರಮಾವಧಿ ಎಂಬ ಮಾತು ನೂರಕ್ಕೆ ನೂರು ಸತ್ಯ. ಈ ನಿಟ್ಟಿನಲ್ಲಿ ದೇಹಕ್ಕೆ ರೋಗವಿದ್ದರೂ ಮನಸ್ಸು ಉಲ್ಲಸಿತವಾಗಿ, ರೋಗಿ ಯಾವತ್ತೂ ಸಂತಸವಾಗಿರುವಂತೆ ಮಾಡುವ ಗುರುತರ ಜವಾಬ್ದಾರಿ ವೈದ್ಯರ ಮೇಲೆ ಇದೆ. ಬರೀ ಔಷಧಿ ನೀಡಿ ದೇಹಕ್ಕೆ ಒಂದು ರೋಗ ಗುಣಪಡಿಸಿದವರು ವೈದ್ಯರಾಗುವುದಿಲ್ಲ. ರೋಗಿಯ ದೈಹಿಕ ಪರಿಸ್ಥಿತಿ, ಮಾನಸಿಕ ಸ್ಥಿತಿಗಳನ್ನು ಅಭ್ಯಸಿಸಿ, ದೇಹಕ್ಕೆ ಬಂದ ರೋಗವನ್ನು ಗುಣಪಡಿಸುವುದರ ಜೊತೆಗೆ ಮಾನಸಿಕವಾಗಿ ರೋಗಿ ಹೆಚ್ಚು ಸದೃಢರಾಗಲು ಬೇಕಾದ ಮನೋಸ್ಥರ್ಯ, ಧೈರ್ಯ ಪ್ರೇರಣೆ ಮತ್ತು ವಿಶ್ವಾಸ ಮೂಡುವಂತಹ ಕಾರ್ಯಗಳನ್ನು ವೈದ್ಯರು ಮಾಡಬೇಕು. ಹಾಗಾದಲ್ಲಿ ಮಾತ್ರ ವೈದ್ಯರು ತಮ್ಮ ವೃತ್ತಿಗೆ ಹೆಚ್ಚು ಸಂಪೂರ್ಣ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರ ದಿನದಂದು ವೈದ್ಯರುಗಳು ತಮ್ಮನ್ನು ಮತ್ತಷ್ಟು ಪರಾಮರ್ಷಿಸಿಕೊಂಡು, ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಷಿಸಿ ಮಗದೊಮ್ಮೆ ತಮ್ಮನ್ನು ಮನುಕುಲದಲ್ಲಿ ಸೇವೆಗೆ ಸಮರ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ವೈದ್ಯರ ಮೇಲೆ ದಾಳಿ ನ್ಯಾಯವೇ?

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!!ಇತ್ತಿಚಿನ ದಿನಗಳಲ್ಲಿ ದೇಶದ ಯಾವುದಾದರೊಂದು ಮೂಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದ ಘಟನೆ ದಿನಕ್ಕೊಂದರಂತೆ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ, ಹೆಲ್ಮೆಟ್ ಇಲ್ಲದೆ, ಮಧ್ಯಪಾನ ಮಾಡಿ, ಮೊಬೈಲ್ ಬಳಸುತ್ತಾ ಗಂಟೆಗೆ 150 ಕಿ.ಮೀ ವೇೀಗದಲ್ಲಿ ದ್ವಿಚಕ್ರ ವಾಹನ ಓಡಿಸಿ ಅಪಘಾತಕ್ಕಿಡಾಗಿ ತೀವ್ರ ಸ್ವರೂಪದಲ್ಲಿ ತಲೆಗೆ ಗಾಯವಾಗಿ ಆಸ್ಪತ್ರೆಗೆ ಬಂದ ಕೂಡಲೇ ವೈದ್ಯರು ಆತ ಎದ್ದು ಕುಳಿತುಕೊಳ್ಳುವಂತೆ ಮಾಡಬೇಕೆಂದು ರೋಗಿಗಳು ಮತ್ತು ಆತನ ಸ್ನೇಹಿತರು ಬಯಸುವುದು ನ್ಯಾಯವೇ? ಹಾಳಾದ ರಸ್ತೆಗಳ ಬಗ್ಗೆ ಯಾವತ್ತೂ ಚಕಾರವಿತ್ತುವುದೇ ಇಲ್ಲ. ರಸ್ತೆ ನಿಯಮಗಳನ್ನು ಪೊಲೀಸರಿಗಾಗಿ ಅನುಸರಿಸುವ ಜನರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಬಳಸಲು ಹಿಂದೆ ಮುಂದೆ ನೋಡುತ್ತಾರೆ. ಮೊಬೈಲ್ ಬಳಕೆ ವಾಹನ ಚಲಾಯಿಸುವಾಗ ನಿಷೇದ ಇದ್ದರೂ ಎಲ್ಲೆಂದರಲ್ಲಿ ಮೊಬೈಲ್ ಬಳಸಿ ಪ್ರಾಣಾಪಾಯಕ್ಕೆ ಮುನ್ನುಡಿ ಬರೆಯುತ್ತಲೇ ಇರುತ್ತಾರೆ. ಆದರೆ ಆಸ್ಪತ್ರೆ ತಲುಪಿದ ಕೂಡಲೆ ಎಲ್ಲವೂ ಕ್ಷಣಾರ್ಧದ್ದಲ್ಲಿ ಸರಿಯಾಗಬೇಕೆಂದು ಬಯಸುವುದು ಯಾವ ಸೀಮೆ ನ್ಯಾಯ?

ನಮ್ಮ ಸುತ್ತಲಿನ ಪರಿಸರ ಸ್ವಚ್ಚತೆಯನ್ನು ನಾವು ಕಾಪಾಡಿಕೊಂಡಲ್ಲಿ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯಬಹುದು. ಆದರೆ ಅದರ ಗೋಜಿಗೆ ಹೋಗುವುದೇ ಇಲ್ಲ. ಎಲ್ಲೆಂದರಲ್ಲಿ ತ್ಯಾಜ ವಿರ್ಸಜಿಸಿ, ಸೊಳ್ಳೆ ಉತ್ಪತಿಯಾಗುವಂತೆ ಮಾಡಿ ಮಾರಣಾಂತಿಕ ರೋಗ ಬರಲು ಪ್ರತ್ಯಕ್ಷ ಮತ್ತು ಪರೋೀಕ್ಷವಾಗಿ ಕಾರಣ ಕರ್ತರಾಗಿ, ರೋಗ ಬಂದರೂ ನಿರ್ಲಕ್ಷ ವಹಿಸಿ ಸ್ವಯಂ ಔಷದಿಗಾರಿಕೆ ಮಾಡಿಕೊಂಡು ಕೊನೆಗೆ ಎಲ್ಲವೂ ಕೈ ಮೀರಿದಾಗ ವೈದ್ಯರ ಬಳಿ ಬಂದು ಎಲ್ಲವನ್ನೂ ಸರಿ ಪಡಿಸಿ, ಎಷ್ಟು ಖರ್ಚಾದರೂ ಜೀವ ಉಳಿಸಿಕೊಡಿ ಎಂದು ಗೋಗರೆಯುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ವೈದ್ಯರಾದರೂ ಏನು ಮಾಡುತ್ತಾರೆ, ಕೊನೆಗೆ ವೈದ್ಯರನ್ನು ಗುರಿಯಾಗಿಸಿ ಹಲ್ಲೆ ಮಾಡಿ ದ್ವೇಷ ಸಾಧಿಸುವುದು ಯಾವ ಪುರುಷಾರ್ಥಕ್ಕೆ ? ಇತ್ತೀಚಿನ ಬಿಹಾರದ ಘಟನೆಯನ್ನೇ ತೆಗೆದುಕೊಳ್ಳಿ. ಕೇವಲ 40 ರೋಗಿಗಳು ಇರಬೇಕಾದ ಜಾಗದಲ್ಲಿ 120 ರೋಗಿಗಳನ್ನು ದನ ಕುರಿಗಳಂತೆ ತುರುಕಿ ಚಿಕಿತ್ಸೆ ನೀಡುವಂತೆ ಮಾಡಿದ್ದು ಯಾರು? ವೈದ್ಯರ ಸಂಖ್ಯೆ ಬಹಳ ಕಡಿಮೆ ಇದ್ದರೂ ವೈದ್ಯರನ್ನೇ ವಿಲನ್ ರೀತಿಯಲ್ಲಿ ಬಿಂಬಿಸುವುದು ಸರಿಯೇ? ಅಗತ್ಯಕಿಂತ ಕಡಿಮೆ ವೈದ್ಯರು, ಲೆಕ್ಕಕ್ಕಿಂತ ದುಪ್ಪಟ್ಟು ರೋಗಿಗಳು, ಮೂಲ ಸೌಕರ್ಯದ ಕೊರತೆ, ದಿನದ 24 ಗಂಟೆಗಳ ಕಾಲ ದುಡಿತ, ಕೆಲಸದ ಒತ್ತಡ ಇವೆಲ್ಲವನ್ನು ಸಂಬಾಳಿಸಿ ತನ್ನ ಇತಿ ಮಿತಿಯಲ್ಲಿಯೇ ಸರಿಯಾದ ಚಿಕಿತ್ಸೆ ನೀಡಿದ ಬಳಿಕವೂ ಒಂದಿಬ್ಬರು ರೋಗಿಗಳು ರೋಗ ಉಲ್ಬಣಗೊಂಡು ಮರಣ ಹೊಂದಿದರೆ ವೈದ್ಯರನ್ನೇ ಹೊಣೆಗಾರರನ್ನಾಗಿ ಯಾಕೆ ಮಾಡಬೇಕು?

ವೈದ್ಯರೇನು ದೇವರಲ್ಲ. ಯಾವ ವೈದ್ಯರೂ ತನ್ನನ್ನು ದೇವರೆಂದು ಪೂಜಿಸಬೇಕೆಂದು ಹಂಬಲಿಸುವುದಿಲ್ಲ. ಆದರೆ ಕೊನೆ ಪಕ್ಷ ತನ್ನನ್ನು ಒಬ್ಬ ಸಾಮಾನ್ಯ ಮನಷ್ಯ ಎಂದಾದರೂ ಗೌರವ ನೀಡಲಿ ಎಂದು ಬಯಸುವುದು ತಪ್ಪೇ? ಆತನಿಗೂ ಒಂದು ಹೃದಯ ಇದೆ. ಆತನಿಗೂ ಉಪ್ಪು ಖಾರ ತಿಂದ ದೇಹವಿದೆ. ಭಾವನೆಗಳಿವೆ. ಆತನಿಗೂ ಕುಟುಂಬ, ಹೆಂಡತಿ, ಮಕ್ಕಳಿದ್ದಾರೆ ಎಂಬ ಕಟು ಸತ್ಯವನ್ನು ಜನರು ಅರಿತು ಗೌರವಿಸಬೇಕು. ಯಾವ ವೈದ್ಯನೂ ತನ್ನ ರೋಗಿ, ರೋಗ ಉಲ್ಬಣಗೊಂಡು ಸಾಯಬೆಕೆಂದು ಬಯಸುವುದಿಲ್ಲ. ತನ್ನ ಶತ್ರುವೇ ರೋಗಿಯಾಗಿ ಬಂದರೂ ವೃತ್ತಿಯ ರಾಜ ಧರ್ಮ ಪಾಲಿಸಬೆಕು ಎಂಬ ಸತ್ಯದ ಅರಿವು ಎಲ್ಲಾ ವೈದ್ಯರಿಗೆ ಇದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರೂ ಸಾಚಾ ಎಂದಲ್ಲ. ನೂರರಲ್ಲಿ ಒಂದಿಬ್ಬರೂ ವೈದ್ಯರು ಜಿಪುಣನಾಗಿರಬಹುದು. ಧನದಾಹಿಯಾಗಿರಬಹುದು. ಅಥವಾ ಸಾಕಷ್ಟು ಕೌಶಲ್ಯ ಅಥವಾ ವೃತ್ತಿ ನೈಪುಣ್ಯತೆ ಹೊಂದಿರದೇ ಇರಬಹುದು. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರನ್ನು ಒಂದೇ ತಕ್ಕಡಿಯಲ್ಲಿ ಅಳೆಯುವುದು ಅಥವಾ ಒಂದೇ ಮಾನದಂಡದಿಂದ ಪೂರ್ವಗ್ರಹ ಪೀಡಿತರಾಗಿ ಕಟುಕ ವೈದ್ಯ ಎಂದು ತೆಗಳುವುದು ಮೂರ್ಖತನದ ಪರಮಾವದಿಯಾದಿತು.

ವೈದ್ಯರು ಜವಾಬ್ದಾರಿ ಏನು ?

ಯಾವುದೇ ಒಂದು ವೃತ್ತಿಗೆ ವೃತ್ತಿ ಧರ್ಮ ಅಥವಾ ವೃತ್ತಿಯ ಸಾಮಾಜಿಕ ಹೊಣೆಗಾರಿಕೆ ಎಂಬುದಿರುತ್ತದೆ. ಪ್ರತಿ ವೃತ್ತಿಯ ಅತ್ಯಂತ ಗುರುತರವಾದ ಜವಾಬ್ದಾರಿಯನ್ನು ರಾಜಧರ್ಮ ಎನ್ನುತ್ತಾರೆ. ಹಾಗಾದರೆ ವೈದ್ಯ ವೃತ್ತಿಯ ರಾಜಧರ್ಮ ಯಾವುದು ಎಂಬುದರ ಕುತೂಹಲ ಎಲ್ಲರಿಗೂ ಇರುತ್ತದೆ. ಒಬ್ಬ ವೈದ್ಯ ರೋಗಿಗಳನ್ನು ಚಿಕಿತ್ಸೆ ಮಾಡುವುದನ್ನು ರಾಜಧರ್ಮ ಎನ್ನಲಾಗದು. ಅದು ಅವರ ಪ್ರಾಥಮಿಕವಾದ ಜವಾಬ್ದಾರಿ. ಒಬ್ಬ ವ್ಯಕ್ತಿ ವೈದ್ಯನಾದ ಮೇಲೆ ಆತ ರೋಗಿಗೆ ಚಿಕಿತ್ಸೆ ನೀಡಲೇಬೇಕು. ಹೇಗೆ ಒಬ್ಬ ಪೊಲೀಸ್ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಸಮಾಜವನ್ನು ಕೊಲೆ, ಸುಲಿಗೆ, ಕಳ್ಳತನ, ಆತ್ಯಚಾರ ಮುಕ್ತವಾಗಿಸಿ ರಾಮರಾಜ್ಯವಾಗುವಂತೆ ಮಾಡುತ್ತಾನೆಯೋ ಹಾಗೆಯೇ ವೈದ್ಯರೂ ಕೂಡಾ ಸಮಾಜದಲ್ಲಿ ರೋಗಿಗಳ ಸಂಖ್ಯೆ ಇಲ್ಲದಂತೆ ಮಾಡುವುದೇ ವೈದ್ಯ ವೃತ್ತಿಯ ರಾಜಧರ್ಮ ಎನ್ನಬಹುದು. ರೋಗದ ಚಿಕಿತ್ಸೆ ಮಾಡಿ ರೋಗಿಗಳ ಸಂಖ್ಯೆ ಇಳಿ ಮುಖ ಮಾಡುವುದು ದೊಡ್ಡ ವಿಚಾರವೇನಲ್ಲ ವೈದ್ಯರಾದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕು. ಆದರೆ ರೋಗ ಬರದಂತೆ ರೋಗವನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ವೈದ್ಯರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಆರೋಗ್ಯ ಪ್ರಜ್ಞೆ ಬರುವಂತೆ ಮಾಡುವುದೇ ವೈದ್ಯರ ರಾಜಧರ್ಮವಾಗಬೇಕು.

doctors-day-july-1ಜೀವನ ಶೈಲಿಯ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಖಿನ್ನತೆ ಮುಂತಾದವುಗಳ ಬಂದ ಬಳಿಕ ಚಿಕಿತ್ಸೆ ಅನಿವಾರ್ಯ. ಆದರೆ ಅಂತಹಾ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರೋಗ ಬರುವ ಸೂಚನೆಗಳನ್ನು ಮೊದಲೇ ಅರಿತುಕೊಂಡು ಜನರನ್ನು ಎಚ್ಚರಿಸಿ, ರೋಗ ಬರದಂತೆ ಮಾಡುವ ಗುರುತರ ಸಾಮಾಜಿಕ ಹೊಣೆಗಾರಿಕೆ ವೈದ್ಯರ ಮೇಲಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಾ ವೈದ್ಯರ ಜೊತೆ ಕೈಜೋಡಿಸಬೇಕು. ಕೇವಲ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸಿ, ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ಉಚಿತ ಜೆನೆರಿಕ್ ಔಷಧಿ ನೀಡುವುದರಿಂದ ಸಮಾಜದ ಮತ್ತು ಜನರ ಆರೋಗ್ಯ ವೃದ್ಧಿಸುವುದಿಲ್ಲ. ಮೂಲಭೂತ ಸೌಕರ್ಯಗಳಾದ ಶುದ್ಧಗಾಳಿ, ಶುದ್ಧ ನೀರು, ಬೆಳಕು ಸಿಗುವಂತಹಾ ವ್ಯವಸ್ಥೆ ಸರಕಾರ ಮಾಡಬೇಕು. ಪರಿಸರ ಮಾಲಿನ್ಯ, ವಾತಾವರಣ ಕಲುಷಿತವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಹೊಣೆಗಾರಿಕೆ ಜನರಿಗೆ ಮತ್ತು ಸರಕಾರಕ್ಕೂ ಇದೆ ಎಂಬುದನ್ನು ಜನರು ಅರಿತುಕೊಳ್ಳಲೇಬೇಕು.

ಸರಕಾರ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗುವುದಿಲ್ಲ. ಅವರು ಖಡ್ಡಾಯವಾಗಿ ಹೋಗಬೇಕು ಎನ್ನುವುದು ಬಹಳ ಹಾಸ್ಯಾಸ್ಪದ ವಿಚಾರ. ಎಷ್ಟೋ ಜನ ನಿರುದ್ಯೋಗಿ ವೈದ್ಯರು ಈಗಲೂ ಸಮಾಜದಲ್ಲಿ ಇದ್ದಾರೆ. ಸರಕಾರ ಮನಸ್ಸು ಮಾಡಿದರೆ ಒಂದು ದಿನದಲ್ಲಿ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಬಹುದು. ಬರೀ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತದೆಯೇ ಹೊರತು ವೈದ್ಯರ ನಿರಸಕ್ತಿ ಅಲ್ಲ ಎಂಬುದನ್ನು ಜನರು ಗಮನಿಸಬೇಕು. ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಖಾಸಗಿ ವೈದ್ಯರೂ ಇದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದರ ಜೊತೆಗೆ ವೈದ್ಯರ ಗ್ರಾಮೀಣ ಪ್ರದೇಶಗಳಿಗೆ ಹೋಗುವಂತಹಾ ಪೂರಕವಾದ ವ್ಯವಸ್ಥೆಗಳನ್ನು ಸರಕಾರ ಮಾಡಲೇ ಬೇಕು. ಒಬ್ಬ ಉನ್ನತ ಶಿಕ್ಷಣ ಕಲಿತ ಹೆರಿಗೆ ತಜ್ಞನನ್ನು ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಬರೀ ಔಷಧಿ ನೀಡಲು ನೇಮಿಸುವುದು ಮೂರ್ಖತನದ ಪರಮಾವಧಿ. ಅವರವರ ಯೋಗ್ಯತೆಗೆ ತಕ್ಕಂತೆ ಮೂಲಭೂತ ಸೌಕರ್ಯ ನೀಡಿ ನೇಮಕ ಮಾಡಿದಲ್ಲಿ ಮಾತ್ರ ವೃತ್ತಿಗೆ ನ್ಯಾಯ ಸಂದಾಯವಾಗಬಹುದು.

ಭಗವದ್ಗೀತೆಯಲ್ಲಿ ಒಂದು ಮಾತು ಇದೆ. ನಮ್ಮ ದಿನ ನಿತ್ಯದ ಕೆಲಸಗಳಲ್ಲಿ ಎರಡು ವಿಧಗಳಿದೆ. ಒಂದು ಕ್ರಿಯೆ. ಇನ್ನೊಂದು ಕರ್ಮ. ನಾವು ನಮ್ಮ ಜೀವನೋಪಾಯಕ್ಕಾಗಿ ಮಾಡುವುದನ್ನು ಕ್ರಿಯೆ ಎನ್ನುತ್ತೇವೆ. ನಮ್ಮ ಆಹಾರಕ್ಕೆ, ನಮ್ಮ ಬದುಕಿನ ಭದ್ರತೆಗೆ, ಮಕ್ಕಳ ಭವಿಷ್ಯಕ್ಕಾಗಿ ನಾವು ಮಾಡುವುದು ನಮ್ಮ ಕ್ರಿಯೆಗಳು. ಇದನ್ನು ಪ್ರತಿಯೊಂದು ಪ್ರಾಣಿಗಳೂ ಮಾಡುತ್ತದೆ. ನಮ್ಮ ಅಸ್ಥಿತ್ವಕ್ಕೆ ಜೀವನೋಪಾಯಕ್ಕೆ ಮಾಡುವಂತಹಾ ಎಲ್ಲ ಕೆಲಸಗಳಿಗೂ ಕ್ರಿಯೆ ಎನ್ನುತ್ತಾರೆ. ಆದರೆ ಕರ್ಮ ಎನ್ನುವುದು ಇದಕ್ಕಿಂತ ಭಿನ್ನವಾದುದು. ಕರ್ಮ ಎನ್ನುವುದು ನಾವು ಇನ್ನೊಬ್ಬರ ಜೀವನದಲ್ಲಿ ಬದಲಾವಣಿ ತರಲು ಮಾಡುವ ಕೆಲಸ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಕ್ರಿಯೆ ಮತ್ತು ಕರ್ಮವನ್ನು ಸಮಾನವಾಗಿ ಮಾಡಲೇಬೇಕು ಹಾಗಿದ್ದಲ್ಲಿ ಮಾತ್ರ ನಾವು ಮನುಷ್ಯರಾಗುತ್ತೇವೆ. ನಾವು ವೈದ್ಯರಾದ ಮೇಲೆ ರೋಗಿಗಳನ್ನು ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆಯೇ ಹೊರತು ಅದು ನಮ್ಮ ಕರ್ಮವಾಗುವುದಿಲ್ಲ.

ನಾವು ವೈದ್ಯರಾಗಿ ವೈದ್ಯವೃತ್ತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ರೋಗಿಗಳ ಚಿಕಿತ್ಸೆ ಮಾಡುವುದು ನಮ್ಮ ಕ್ರಿಯೆಯಾಗುತ್ತದೆ ಮತ್ತು ಅದು ನಮ್ಮ ಪ್ರಾಥಮಿಕ ಕರ್ತವ್ಯವೂ ಹೌದು. ರೋಗಿಗಳ ಚಿಕಿತ್ಸೆ ಮಾಡಿ ನಾವು ಏನನ್ನೊ ಸಾಧಿಸಿದ್ದೇನೆ ಎಂದು ತಿಳಿದಿದ್ದರೆ ಅದು ತಪ್ಪಾದೀತು. ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರ ಸೇವೆ ಮಾಡುವುದೇ ನಿಜವಾದ ಕರ್ಮ. ಆದರೆ ಹೆಚ್ಚಿನ ವೈದ್ಯರು ನಾವು ಮಾಡುವ ಕ್ರಿಯೆಯನ್ನು ಕರ್ಮ ಎಂದು ಭಾವಿಸಿ ತಮ್ಮನ್ನು ತಾವು ದೇವರು ಎಂದು ಹೋಲಿಸಿಕೊಳ್ಳುವುದು ಮೂರ್ಖತನದ ಪರಮಾವಧಿ. ಈ ನಿಟ್ಟಿನಲ್ಲಿ ಎಲ್ಲ ವೈದ್ಯರುಗಳು ತಮ್ಮನ್ನು ಮಗದೊಮ್ಮೆ ವಿಮರ್ಷೆಗೆ ಒಡ್ಡಿಕೊಂಡು ತಾವು ಮಾಡುವ ಕ್ರಿಯೆಗಳ ಜೊತೆಗೆ ಮತ್ತಷ್ಟು ಫಲಾಪೇಕ್ಷೆ ಇಲ್ಲದ ನಿಸ್ವಾಸದ ಸೇವೆಗೆ ಹೆಚ್ಚು ಒತ್ತು ಕೊಟ್ಟು ವೈದ್ಯವೃತ್ತಿಯ ರಾಜಧರ್ಮವನ್ನು ಪಾಲಿಸಿದಲ್ಲಿ ಒಂದು ಸುಂದರ ಸದೃಢ ರಾಮರಾಜ್ಯದ ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಾಗಬಹುದು.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!