ವಿಶ್ವ ಮಧುಮೇಹ ದಿನ – ನವೆಂಬರ್ 14 : ಮಧುಮೇಹ ನಿಯಂತ್ರಿಸುವುದು ಹೇಗೆ?

ವಿಶ್ವ ಮಧುಮೇಹ ದಿನ ಎಂದು ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಎಪ್ಪತ್ತೇಳು (77) ಮಿಲಿಯನ್ ಆಗಿದ್ದು, 2045 ರಲ್ಲಿ ಈ ಸಂಖ್ಯೆ 135 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವ ಮಧುಮೇಹ ದಿನ - ನವೆಂಬರ್ 14 : ಮಧುಮೇಹ ನಿಯಂತ್ರಿಸುವುದು ಹೇಗೆ?

ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗ್ರೀಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ ಎಂಬಾತ ಡಯಬಿಟಿಸ್ ಇನ್‍ಸಿಪಿಡಸ್ (ಅತಿಯಾದ ಮೂತ್ರ) ಮತ್ತು ಡಯಬಿಟಿಸ್ ಮೆಲಿಟಸ್ (ಸಿಹಿಮೂತ್ರ) ಎಂದು ಎರಡು ಪ್ರತ್ಯೇಕ ರೋಗಗಳೆಂದು ಹೇಳಿದನು. ಒಟ್ಟಿನಲ್ಲಿ ಮಧುಮೇಹ, ಸಿಹಿಮೂತ್ರ, ಸಕ್ಕರೆ ಖಾಯಿಲೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಆಧುನಿಕ ಜಗತ್ತಿಗೆ ಈ ಶತಮಾನದ ಕೊಡುಗೆ ಎಂದರೂ ತಪ್ಪಲ್ಲ.

ಭಾರತಕ್ಕೆ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಸಾಧ್ಯತೆ

ಭಾರತ ದೇಶಕ್ಕೂ ಮಧುಮೇಹ ರೋಗಕ್ಕೂ ಬಹಳ ನೆಂಟಸ್ತಿಕೆ ಇದೆ ಅನ್ನುವುದು ಬಹಳ ಕಳವಳಕಾರಿ ಅಂಶ. ಇನ್ನೊಂದೆರಡು ವರ್ಷಗಳಲ್ಲಿ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಭಾರತಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇದೆ. ಸಧ್ಯಕ್ಕೆ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಬಾರತೀಯರ ಪಾಲು ಶೇಕಡಾ 20-25ಕ್ಕೂ ಹೆಚ್ಚು. ಸರಿಸುಮಾರು ನಾಲ್ಕು ಕೋಟಿ ಭಾರತೀಯರು ಮಧುಮೇಹಿಗಳು ಎಂಬುದು ಗಮನಾರ್ಹ ಅಂಶ. ಈ ನಾಲ್ಕು ಕೋಟಿಯಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಕೂಡಾ ಇನ್ನೊಂದು ಕಳವಳಕಾರಿ ಅಂಶ (ಸುಮಾರು 50 ಶೇಕಡಾ ಯುವಜನತೆ ಬಿಸಿರಕ್ತದ ಜೊತೆಗೆ ಸಿಹಿರಕ್ತವನ್ನು ಹೊಂದಿರುವುದು ಬಹಳ ಅವಮಾನಕರವಾದ ಬೆಳವಣಿಗೆ.)

ಮಧುಮೇಹದ ಜೊತೆಗೆ ಹೃದ್ರೋಗ, ಅಧಿಕ ರಕ್ತದೊತ್ತಡ, ಲಕ್ವ, ಅಂಧತ್ವ, ಲೈಂಗಿಕ ಸಾಮಾಥ್ರ್ಯ ಕ್ಷೀಣೀಸುವುದು ಎಲ್ಲಾ ಉಚಿತವಾಗಿಯೇ ಸಿಗುತ್ತದೆ. ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅಣ್ಣ ತಮ್ಮಂದಿರಂತಯೇ!!! ವಯಸ್ಸಾದಂತೆ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ. 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಜಾಸ್ತಿ ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ.

ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇಕಡಾ 75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು. ಈ ಕಾರಣಕ್ಕಾಗಿಯೇ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗಗಳ ಬಗ್ಗೆ ಮತ್ತು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ, ಅದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸದುದ್ದೇಶವನ್ನು ಹೊಂದಿದೆ.

ಮಧುಮೇಹ ಎಂದರೆ ಏನು?

ದೇಹದ ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು ಗ್ಲೂಕೋಸ್‍ನಿಂದ ದೊರಕುತ್ತದೆ. ನಾವು ಸೇವಿಸಿದ ಆಹಾರ ಜೀರ್ಣವಾದ ಬಳಿಕ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಕರುಳು ಗ್ಲೂಕೋಸ್‍ನ್ನು ಹೀರಿಕೊಂಡು ರಕ್ತಕ್ಕೆ ಬೆರೆಸುತ್ತದೆ. ರಕ್ತಕ್ಕೆ ಸೇರಿದ ಗ್ಲೂಕೋಸ್ ನಿರಂತರವಾಗಿ ದೇಹದ ಎಲ್ಲಾ ಜೀವಕೋಶಗಳಿಗೆ ವಿತರಣೆಯಾಗುತ್ತದೆ. ಈ ಪ್ರಕ್ರಿಯೆ ದೇಹದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಾಗಿ ರಕ್ತದಲ್ಲಿ ಸದಾಕಾಲ ನಿರ್ದಿಷ್ಟ ಪ್ರಮಾಣದ ಗ್ಲೂಕೋಸ್ ಇರುತ್ತದೆ. ಸಾಮಾನ್ಯವಾಗಿ 120ಮಿ.ಗ್ರಾಂ. ಇರುತ್ತದೆ.

insulin-and-diabetes

ನಮ್ಮ ಹೊಟ್ಟೆಯ ಹೊಕ್ಕಳಿನ ಹಿಂಭಾಗದಲ್ಲಿ ಮೆದೋಜಿರಕ ಗ್ರಂಥಿ ಇರುತ್ತದೆ. ಈ ಗ್ರಂಥಿಯ ತಿರುಳುಗಳಲ್ಲಿ ಲ್ಯಾಂಗರ್ ಹ್ಯಾನ್ಸ್ ದ್ವೀಪಗಳು ಎಂಬ ಪುಟ್ಟ ನಿರ್ನಾಳ ಗ್ರಂಥಿಗಳು ಹುದುಗಿಕೊಂಡಿರುತ್ತದೆ. ಇದು ಸಾವಿರಾರು ಜೀವಕೋಶಗಳ ಒಂದು ಗುಚ್ಚವಾಗಿರುತ್ತದೆ. ಈ ಜೀವಕೋಶಗಳಲ್ಲಿ ಆಲ್ಫಾ, ಬೀಟಾ ಮತ್ತು ಡೆಲ್ಟಾ ಎಂದು ಮೂರು ಬಗೆಯ ಜೀವಕೋಶಗಳು ಇದ್ದು, ಇವುಗಳಲ್ಲಿ ಬೀಟಾ ಜೀವಕೋಶಗಳಿಂದ ಇನ್ಸುಲಿನ್ ಎಂಬ ರಸದೂತ ಉತ್ಪತ್ತಿಯಾಗುತ್ತದೆ. ಈ ಇನ್ಸುಲಿನ್ ರಸದೂತ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾದಾಗ ನಮಗೆ ಹಸಿವಾಗುತ್ತದೆ, ಬಳಲಿಕೆಯಾಗುತ್ತದೆ, ತಲೆ ಸುತ್ತುತ್ತದೆ ಮತ್ತು ಇದನ್ನು  ಹೈಪೊಗ್ಲಿಸಿಮಿಯಾ ಎನ್ನುತ್ತಾರೆ. ಆ ಕ್ಷಣದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿ ರಕ್ತದಲ್ಲಿ ಹೆಚ್ಚಿನ ಸಕ್ಕರೆ (ಗ್ಲೂಕೋಸ್) ಪ್ರಮಾಣ ಇರುವಂತೆ ದೇಹವು ವ್ಯವಸ್ಥೆ ಮಾಡಿಕೊಳ್ಳುತ್ತದೆ.

ಒಟ್ಟಿನಲ್ಲಿ ರಕ್ತದಲ್ಲಿನ ಸಕ್ಕರೆಯು ಸಂಪೂರ್ಣ ನಿಯಂತ್ರಣ ‘ಇನ್ಸುಲಿನ್’ ರಸದೂತಕ್ಕೆ ಇರುತ್ತದೆ. ಕೆಲವೊಮ್ಮೆ ಜೀವಕೋಶಗಳಿಗೆ ಸಾಗಿಸಿದ ಬಳಿಕವೂ ಉಳಿದ ಗ್ಲೂಕೋಸ್ ಯಕೃತ್ತಿನಲ್ಲಿ ಶೇಕರಣೆಯಾಗುತ್ತದೆ. ನಾವು ಉಪವಾಸದಿಂದಿರುವಾಗ ಅಗತ್ಯಕ್ಕನುಗುಣವಾಗಿ ಯಕೃತ್ ಉಗ್ರಾಣದಿಂದ ಗ್ಲೂಕೋಸ್ ಹೊರಹೊಮ್ಮತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಆಹಾರ ಸೇವಿಸದಿದ್ದರೂ ಜೀವಕೋಶಗಳ ಕಾರ್ಯನಿರ್ವಹಣೆಗೆ ಕುಂದಾಗುವುದಿಲ್ಲ. ಒಟ್ಟಿನಲ್ಲಿ ಇನ್ಸುಲಿನ್ ಉತ್ಪಾದನೆ ಕೊರತೆ ಅಥವಾ ನ್ಯೂನತೆ ಇಲ್ಲವೇ, ಪ್ರಭಾವ ಹೀನತೆಯಿಂದ ಹಾಗೂ ನಮ್ಮ ಜೀವಕೋಶಗಳಲ್ಲಿನ ಇನ್ಸುಲಿನ್ ಸಂವೇದನ ಶಕ್ತಿಯ ಕೊರತೆಯಿಂದ ಮಧುಮೇಹ ರೋಗ ಬರುತ್ತದೆ.

ಯಾರಿಗೆ ಮಧುಮೇಹ ಬರಬಹುದು ?

ಹೆಚ್ಚಾಗಿ ಅನುವಂಶೀಯವಾಗಿ ಬರುವ ಮಧುಮೇಹ ಸಾಮಾನ್ಯವಾಗಿ 40 ವರ್ಷ ದಾಟಿದ ಮೇಲೆ ಬರುತ್ತಿತ್ತು. ಆದರೆ ಈಗೀಗ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಣ್ಣ ಮಕ್ಕಳು ಮತ್ತು ಯುವಜನತೆಯು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ನಾಗರೀಕತೆಯ ನೆಪದಲ್ಲಿ ಮತ್ತು ಸಂಸ್ಕøತಿಯ ಸೋಗಿನಲ್ಲಿ ನಾವೆಲ್ಲಾ ನೈಸರ್ಗಿಕ ಆಹಾರದಿಂದ ಕೃತಕ ಸಂಸ್ಕರಿತ ಆಹಾರಕ್ಕೆ ಮಾರು ಹೋಗಿದ್ದೇವೆ. ಚಟುವಟಿಕೆಯ ಜೀವನದಿಂದ ಆಲಸ್ಯದ ಬದುಕಿಗೆ ಹೊಂದಿಹೋಗಿದ್ದೇವೆ. ಈ ವ್ಯತಿರಿಕ್ತ ಬದಲಾವಣೆಗಳ ಬಲುವಳಿಯಾಗಿ ನಮಗೆ ದೊರಕಿರುವ ಆನೇಕ ಕಾಯಿಲೆಗಳಲ್ಲಿ ಅಗ್ರಸ್ಥಾನ ಮಧುಮೇಹರೋಗಕ್ಕೆ ಸಲ್ಲುತ್ತದೆ.

ಅನುವಂಶೀಯ ಕಾರಣಗಳು, ವಿಪರೀತ ಬೊಜ್ಜು, ಆಲಸ್ಯ ಮತ್ತು ಸೋಮಾರಿ ಜೀವನ, ಅತಿಯಾಗಿ ಸಂಸ್ಕರಿತ ಕೃತಕ ಆಹಾರ ಸೇವನೆ, ಮಧ್ಯಪಾನ, ಮಾನಸಿಕ ಒತ್ತಡ, ವೇದನೆ, ಮೇಧೂಜಿರಕ ಗ್ರಂಥಿಯ ಸೋಂಕು ಮುಂತಾದವುಗಳಿಂದ ಮಧುಮೇಹ ಬರುವ ಸಾಧ್ಯತೆ ಇದೆ. ನಗರೀಕರಣ, ಕೈಗಾರೀಕರಣ, ಪರಿಸರ ಮಾಲಿನ್ಯ, ಬದಲಾದ ಜೀವನ ಶೈಲಿ, ಆಹಾರ ಶೈಲಿ ಮತ್ತು ಪದ್ಧತಿ, ಒತ್ತಡದ ಬದುಕು ಇವೆಲ್ಲವೂ ಮೆಳೈಸಿ ನಮ್ಮ ಸುಸಂಸ್ಕøತ ಸಮಾಜ ಆಧುನಿಕತೆಯ ನೆಪದಲ್ಲಿ ರತ್ನಕಂಬಳಿ ಹಾಸಿ ಮಧು ಮೇಹ ರೋಗವನ್ನು ಅಹ್ವಾನಿಸುತ್ತದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ರೋಗ ಈಗೀಗ ಹಳ್ಳಿಗಳಿಗೂ ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತದೆ. ಸಿರಿವಂತರ ಕಾಯಿಲೆ (ಕೂತುಣ್ಣುವವರ ಕಾಯಿಲೆ) ಎಂಬ ಹೆಗ್ಗಳಿಕೆ ಹೊಂದಿದ ಮಧುಮೇಹ, ಈಗೀಗ ಬಡವರಲ್ಲೂ ಕಾಣಿಸಿಕೊಂಡು ತಮ್ಮ ಶ್ರೀಮಂತಿಕೆ ಮತ್ತು ಪ್ರತಿಷ್ಠೆಯನ್ನು ಕಳಕೊಂಡು ಬಿಟ್ಟಿದೆ.

ತಂದೆತಾಯಂದಿರಿಗೆ ಮಧುಮೇಹವಿದ್ದಲ್ಲಿ ಶೇಕಡಾ 90ರಷ್ಟು ಮಕ್ಕಳಿಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ಪೋಷಕ ಮಧುಮೇಹಿ ಮತ್ತೊಬ್ಬ ಪೋಷಕ ಮಧುಮೇಹಿ ಕುಟುಂಬದಿಂದ ಬಂದಿದ್ದಲ್ಲಿ ಮಕ್ಕಳಿಗೆ ಮಧು ಮೇಹ ಬರುವ ಸಾಧ್ಯತೆ ಶೇಕಡಾ 60ರಿಂದ 70. ಯಾರಾದರೊಬ್ಬರು ಪೋಷಕರು ಮಧುಮೇಹಿಗಳಾಗಿದ್ದಲ್ಲಿ ಜನಿಸುವ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ ಶೇಕಡಾ 50%. ತಂದೆ ತಾಯಂದಿರಿಗೆ ಮಧುಮೇಹವಿಲ್ಲದಿದ್ದರೂ ರಕ್ತ ಸಂಬಂಧಿಗಳಿಗೆ ಮಧುಮೇಹದ್ದಲ್ಲಿ, ಮಧುಮೇಹ ರಹಿತ ದಂಪತಿಗಳಿಗೆ ಜನಿಸುವ ಮಕ್ಕಳಿಗೆ ಮಧುಮೇಹ ಉಂಟಾಗುವ ಸಾಧ್ಯತೆ ಶೇಕಡಾ 25%. ಈ ಕಾರಣಗಳಿಂದ ಮಧು ಮೇಹ ಪರೀಕ್ಷೆ ಮಾಡುವಾಗ ತಂದೆ ತಾಯಂದಿರ ಜೊತೆಗೆ ರಕ್ತ ಸಂಬಂಧಿಗಳನ್ನೂ ಪರಿಗಣಿಸಬೇಕಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಮಧುಮೇಹ ರೋಗ ಕಾಡಬಹುದು.

ಸಾಮಾನ್ಯವಾಗಿ 2 ರೀತಿಯ ಮಧುಮೇಹ ರೋಗವಿದ್ದು ಒಂದನೇ ವಿಧದ ಮಧುಮೇಹ ಇನ್ಸುಲಿನ್ ರಸದೂತದ ವ್ಯತ್ಯಾಸದ ಕಾರಣದಿಂದಾಗಿ ಸಣ್ಣ ಪ್ರಾಯದಲ್ಲಿಯೇ ಬರಬಹುದು. ಇದಕ್ಕೆ ಜೀವಮಾನ ಪರ್ಯಂತ ಇನ್ಸುಲಿನ್ ರಸದೂತದ ಅವಶ್ಯಕತೆ ಇದೆ. ಇನ್ನೊಂದು ಪಂಗಡದವರಿಗೆ ಕೇವಲ ನಿಯಮಿತ ಆಹಾರ, ದೈನಂದಿನ ವ್ಯಾಯಾಮ ಚಟುವಟಿಕೆ ಮತ್ತು ಮಾತ್ರೆಗಳ ಮುಖಾಂತರ ದೇಹದ ಸಕ್ಕರೆಯನ್ನು ಹತೋಟಿಯಲ್ಲಿಡಬಹುದು. ಇದು ಸಾಮಾನ್ಯವಾಗಿ 40 ವಯಸ್ಸು ದಾಟಿದ ಬಳಿಕ ಬರಬಹುದು.

ಮಧುಮೇಹ ರೋಗದ ಚಿಹ್ನೆಗಳು

ಮಧುಮೇಹ ರೋಗದ ಚಿಹ್ನೆಗಳು ವಯಸ್ಸು ಮತ್ತು ಯಾವ ರೀತಿಯ ಮಧುಮೇಹ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಮಧುಮೇಹ ರೋಗದ ಚಿಹ್ನೆಗಳು ಭಿನ್ನವಾಗಿರಲೂಬಹುದು. ವಯಸ್ಕರಲ್ಲಿ ಸಾಮಾನ್ಯವಾಗಿ ಅತಿಯಾದ ಮೂತ್ರ ವಿಸರ್ಜನೆ , ಅತಿ ದಾಹ, ಅತಿ ಬಳಲಿಕೆ ಅತಿಯಾದ ಹಸಿವು ಹೆಚ್ಚಾಗಿ ಕಾಣಸಿಗುತ್ತದೆ. ಇದರ ಜೊತೆಗೆ ಅತಿಯಾದ ಬಳಲಿಕೆ ಆಲಸ್ಯ, ಮೈ ಕೈ ನೋವು, ಅಂಗೈ ಮತ್ತು ಅಂಗಾಲುಗಳು ಉರಿಯುವುದು, ಗುಣವಾಗದ ಗಾಯಗಳು, ದೃಷ್ಟಿಮಾಂದ್ಯತೆ, ಯೋನಿಯ ಸೋಂಕು, ಲೈಗಿಂಕ ನಿರಾಸಕ್ತಿ ಇತ್ಯಾದಿ ಕಾಣಬಹುದು. ಮಕ್ಕಳಲ್ಲಿ ಉದರ ನೋವು, ವಾಂತಿ, ಅಶಕ್ತಿ, ಬಳಲಿಕೆ, ಪದೇ ಪದೇ ಮತಿ ತಪ್ಪುವುದು ಮೊಟ್ಟ ಮೊದಲ ರೋಗದ ಚಿಹ್ನೆಗಳಾಗಿರಬಹುದು.

ಅನೇಕ ಮಧುಮೇಹಿಗಳಲ್ಲಿ ಏನೂ ತೊಂದರೆ ಇಲ್ಲದೇ, ಆಕಸ್ಮಿಕ ಮೂತ್ರ ಪರೀಕ್ಷೆಯಿಂದ ಪತ್ತೆಯಾಗಬಹುದು. ಗುಣವಾಗದ ಗಾಯದ ಹುಣ್ಣು, ಬಾಯಿಯ ವಾಸನೆ ಅಥವಾ ಇನ್ನಾವುದೇ ಕಾರಣದಿಂದ ರಕ್ತ ಪರೀಕ್ಷೆ ಮಾಡಿದಾಗ ಮಧುಮೇಹ ರೋಗ ಗೋಚರವಾಗ ಬಹುದು. ಒಟ್ಟಿನಲ್ಲಿ ನಿಮ್ಮ ದೇಹದ ತೂಕ ಜಾಸ್ತಿಯಾದಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ಹೆತ್ತವರು ಮಧುಮೇಹಿಗಳಾಗಿದ್ದಲ್ಲಿ, ನಿಮ್ಮ ಜೀವನ ಶೈಲಿ ಮುತ್ತು ಆಹಾರ ಪದ್ಧತಿ ಅಸಮರ್ಪಕವಾಗಿದ್ದಲ್ಲಿ, ನಿಮಗೆ ಮಧುಮೇಹ ಬರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಶಿಸ್ತುಬದ್ಧ ಜೀವನ, ದೈಹಿಕ ವ್ಯಾಯಾಮ, ಕ್ರಮಬದ್ಧ ಆಹಾರ, ಒತ್ತಡವಿಲ್ಲದ ಬದುಕು ಮುಂತಾದವುಗಳನ್ನು ರೂಢಿಸಿಕೊಂಡಲ್ಲಿ ಮಧುಮೇಹ ಬಂದರೂ ಎಲ್ಲರಂತೆ ನೀವು ಕೂಡಾ ಸುಖ ಮತ್ತು ನೆಮ್ಮದಿಯ ಜೀವನ ನಡೆಸಬಹುದು.

ಮಧುಮೇಹ ರೋಗದಿಂದಾಗಬಹುದಾದ ತೊಂದರೆಗಳು

ಇತರ ಸಾಮಾನ್ಯ ಮಂದಿಗೆ ಹೋಲಿಸಿದಲ್ಲಿ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆಗಳು ಈ ರೀತಿ ಇದೆ.
1. ಕುರುಡುತನ ಅಥವಾ ಅಂಧತ್ವ ಕಾಣಿಸಿಕೊಳ್ಳುವ ಅಪಾಯ 25ರಷ್ಟು ಜಾಸ್ತಿ.
2. ಹೃದಯಾಘಾತದ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚು.
3. ಲಕ್ವ (ಪಕ್ಷಪಾತ) ಹೊಡೆಯುವ ಸಾಧ್ಯತೆ ಸುಮಾರು ಎರಡು ಪಟ್ಟು ಜಾಸ್ತಿ.
4. ಮೂತ್ರಪಿಂಡಗಳ ವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಸುಮಾರು 15 ಪಟ್ಟು ಜಾಸ್ತಿ.
5. ಗ್ಯಾಂಗ್ರಿನ್‍ನಿಂದಾಗಿ (ಕಾಲು, ಕೈ ಬೆರಳುಗಳು ಮತ್ತು ಕಾಲ್ಬೆರಳು ಕೊಳೆಯುವಿಕೆ) ಅಂಗಚ್ಚೇದವಾಗುವ ಅಪಾಯ 30ರಿಂದ 35 ಪಟ್ಟು ಜಾಸ್ತಿ.
ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲ ಹೀಗೆ ಎಲ್ಲವನ್ನು ಆಪೋಶನ ತೆಗೆದುಕೊಂಡು, ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ‘ಮಧುಮೇಹ’ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ.

diabetes-and-eye-problems

ಚಿಕಿತ್ಸೆ ಹೇಗೆ?

ಮಧುಮೇಹ ರೋಗದ ಚಿಕಿತ್ಸೆಯ ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡಿ. ನೀವು ಯಾವತ್ತೂ ನಿಮ್ಮ ಇಚ್ಛೆಯಂತೆ ಅಥವಾ ಅನುಕೂಲಕ್ಕೆ ತಕ್ಕಂತೆ ಔಷಧಿಗಳನ್ನು ಸೇವಿಸಬಾರದು. ಸ್ವಯಂ ಮದ್ದುಗಾರಿಕೆ ಮತ್ತು ನಿಮ್ಮಿಷ್ಟದಂತೆ ಔಷಧಿಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಯಾವತ್ತೂ ಅಪಾಯಕಾರಿ. ಪದೇ ಪದೇ ವೈದ್ಯರನ್ನು ಬದಲಿಸಬೇಡಿ. ನಿಮ್ಮ ಕೆಲಸ ಏನಿದ್ದರೂ ದೇಹದ ತೂಕವನ್ನು ನಿಯಂತ್ರಿಸುವುದು, ಸರಿಯಾದ ಸಮತೋಲಿತ ವೈದ್ಯರು ತಿಳಿಸಿದ ಆಹಾರವನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಮತ್ತು ನಿರಂತರ, ನಿಯಮಿತ ದೈಹಿಕ ವ್ಯಾಯಾಮ ಮಾಡಿಕೊಂಡು ದೇಹದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸೀಮಿತವಾಗಿರಬೇಕು. ವೈದ್ಯರ ಸಲಹೆ ಇಲ್ಲದೆ ನಿಮ್ಮ ಮಧುಮೇಹ ರೋಗದ ಮಾತ್ರೆಯ ಪ್ರಮಾಣ ಮತ್ತು ಇನ್ಸುಲಿನ್ ರಸದೂತದ ಪ್ರಮಾಣವನ್ನು ಬದಲಾಯಿಸಬಾರದು. ಚಿಕಿತ್ಸೆಯ ಹೊಣೆಗಾರಿಕೆಯನ್ನು ನಿಮ್ಮ ವೈದ್ಯರಿಗೆ ಬಿಟ್ಟುಕೊಟ್ಟಲ್ಲಿ, ಹೆಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು. ಅದರಲ್ಲಿಯೇ ನಿಮ್ಮ ಹಿತ ಮತ್ತು ಆರೋಗ್ಯದ ಗುಟ್ಟು ಅಡಗಿದೆ.

ಮಧುಮೇಹ ನಿಯಂತ್ರಿಸುವುದು ಹೇಗೆ?

1. ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತದೆ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯು ರಕ್ತದಲ್ಲಿರುವ ಗ್ಲೂಕೋಸ್‍ನಿಂದ ಸ್ನಾಯುಗಳಿಗೆ ಸರಬರಾಜು ಆಗುತ್ತದೆ. ವ್ಯಾಯಾಮದಿಂದ ಜೀವಕೋಶಗಳು ಚಯಾಪಚಯ ಕ್ರಿಯೆಗಳು ವೇಗವಾಗುತ್ತದೆ. ಹಾಗಾದಾಗ ಹೆಚ್ಚಿನ ಕ್ಯಾಲರಿ (ಶಕ್ತಿ)ಯ ಅವಶ್ಯಕತೆ ಉಂಟಾಗಿ, ಗ್ಲೂಕೋಸ್‍ನಿಂದ ಶಕ್ತಿ ದೊರಕಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.

2. ನೀವು ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲಿನ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‍ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ಕೇವಲ ಶರ್ಕರ ಪಿಷ್ಟಗಳು ಹೆಚ್ಚಾಗಿರುವ ಆಹಾರ ಒಳ್ಳೆಯದಲ್ಲ. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನೀವು ಸೇವಿಸುವ ಆಹಾರ ನಿಮ್ಮ ದೇಹದ ಗಾತ್ರ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿರಲಿ. ಆಹಾರ ಬರೀ ರುಚಿಗಾಗಿ ಇರದೆ, ದೇಹದ ಆರೋಗ್ಯಕ್ಕೆ ಪೂರಕವಾಗಿರಲಿ ನಾರುಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.

3. ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾಗಬಹುದು. ಬಿಡುವಿಲ್ಲದ ಒತ್ತಡದ ದೈಹಿಕ ವ್ಯಾಯಾಮವಿಲ್ಲದ ಜೀವನ ಶೈಲಿಯು ‘ಮಧುಮೇಹ’ ರೋಗಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹಕ್ಕೆ ಮತ್ತು ಮನಸ್ಸಿಗೂ ಹಿತವಾದ ಸಂಗೀತ ಆಲಿಸುವುದು, ಯೋಗ, ಧ್ಯಾನ, ಪ್ರಾಣಯಾಮ ಇತ್ಯಾದಿಗಳಿಂದ ಮಾನಸಿಕ ಉದ್ವೇಗ, ತುಮುಲತೆಯನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿ, ಶಾಂತಿ ದೊರೆತಲ್ಲಿ ಮಧುಮೇಹ ಮಾತ್ರವಲ್ಲ ಇನ್ನೂ ಹತ್ತು ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು.

4. ತಜ್ಞ ವೈದ್ಯರ ಸಲಹೆಯಂತೆ ಚಾಚುತಪ್ಪದೆ ಔಷಧಿಯನ್ನು ಸೇವಿಸಬೇಕು. ಔಷಧಿಗಳ ಪ್ರಮಾಣ ಮತ್ತು ಹೊತ್ತುಗಾರಿಕೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಚಿಕಿತ್ಸೆಯ ಉದ್ದೇಶ ರೋಗವನ್ನು ಗುಣಪಡಿಸುವುದು ಆಗಿರದೆ, ರೋಗವನ್ನು ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿದಲ್ಲಿ ಬರಬಹುದಾದ ಎಲ್ಲಾ ಅಡ್ಡ ಪರಿಣಾಮಗಳನ್ನು ಮತ್ತು ಅಪಾಯವನ್ನು ತಡೆಗಟ್ಟಬಹುದು.

diabetes-day

ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ

ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನವೆಂಬರ್ 14 ರಂದು ಇನ್‍ಸುಲಿನ್ ಕಂಡು ಹಿಡಿದ ಶ್ರೀ ಸರ್ ಪ್ರೆಡ್ರಿಕ್ ಬಂಟಿಂಗ್ ಇವರು ಹುಟ್ಟಿದ ದಿನವಾಗಿದೆ. 2006 ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಗಿತ್ತು. 2020 ನವೆಂಬರ್ 14 ರ ಈ ಆಚರಣೆಯ ಧ್ಯೇಯವಾಕ್ಯ ‘ಶುಶ್ರೂಷಕಿಯರು ಮತ್ತು ಮಧುಮೇಹ’ ಎಂಬುದಾಗಿದೆ. ಮಧುಮೇಹ ರೋಗದಿಂದ ಬಳಲುತ್ತಿರುವವರ ಆರೋಗ್ಯಪಾಲನೆಯಲ್ಲಿ ಶುಶ್ರೂಶಕಿಯರು ಬಹು ಮುಖ್ಯ ಭೂಮಿಕೆ ವಹಿಸುತ್ತಿದ್ದು, ಇದರ ಬಗ್ಗೆ ಜನರಲ್ಲಿ ಅತೀ ಹೆಚ್ಚು ತಿಳುವಳಿಕೆ ಮೂಡಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಇದೇ ರೀತಿ ನಮ್ಮ ಭಾರತ ದೇಶದಲ್ಲಿ ನವೆಂಬರ್ ತಿಂಗಳನ್ನು ಮಧುಮೇಹ ತಿಳುವಳಿಕಾ ತಿಂಗಳು ಎಂದೂ ಆಚರಿಸಲಾಗುತ್ತಿದೆ. ಚೀನ ದೇಶವೊಂದರಲ್ಲಿಯೇ ಅತೀ ಹೆಚ್ಚು 116 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ.

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಎಪ್ಪತ್ತೇಳು (77) ಮಿಲಿಯನ್ ಆಗಿದ್ದು, 2045 ರಲ್ಲಿ ಈ ಸಂಖ್ಯೆ 135 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿ 2020 ಹೊತ್ತಿಗೆ ಸುಮಾರು 460 ಮಿಲಿಯನ್ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಸಾವಿಗೆ ಕಾರಣವಾಗುವ ರೋಗಿಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಅಲಂಕರಿಸಿದೆ. ಇದರಲ್ಲಿ ಟೈಪ್ –2 ಡಯಾಬಿಟಿಸ್ 90 ರಿಂದ 95 ಶೇಕಡಾ ಜನರಲ್ಲಿ ಕಂಡು ಬಂದಿದೆ. 5 ರಿಂದ 10 ಶೇಕಡಾ ಮಂದಿಯಲ್ಲಿ ಟೈಪ್-1 ಡಯಾಬಿಟಿಸ್ ಕಂಡು ಬರುತ್ತದೆ. ಐರ್ಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳು ಕನಿಷ್ಟ 5 ಶೇಕಡಾಕ್ಕಿಂತಲೂ ಕಡಿಮೆ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಟೈಪ್-4 ಡಯಾಬಿಟಿಸ್ ಅನ್ನು ಹೆಸರಿಸಿದ್ದು, ಇಳಿ ವಯಸ್ಸಿನ ನೀಳಕಾಯದ ವಯಸ್ಕರಲ್ಲಿ, ಇನ್‍ಸುಲಿನ್ ಪ್ರತಿರೋಧ ಬಳಸಿಕೊಂಡ ಜನರಲ್ಲಿ ಈ ರೀತಿ ಮಧುಮೇಹ ಬರುತ್ತದೆ ಎಂದು ತಿಳಿದುಬಂದಿದೆ.

ಕೊನೆಮಾತು

ಮಧುಮೇಹ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ ಮುಂದೆ ಬಂದೊದಗುವ ಮರಣಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ರೋಗವನ್ನು ಹತೋಟಿಯಲ್ಲಿಡುವ ಮತ್ತು ರೋಗದಿಂದಾಗುವ ಅಪಾಯಗಳನ್ನು ನಿಭಾಯಿಸುವುದಕ್ಕೆ ಹೆಚ್ಚಿನ ಆದ್ಯತೆ ಅತೀ ಅವಶ್ಯಕ. ರೋಗಗಳ ರಾಜ್ಯದಲ್ಲಿ ಅನಭಿಷಿಕ್ತ ದೊರೆಯಾಗಿ ರಾರಾಜಿಸುತ್ತಿರುವ ಮಧುಮೇಹವನ್ನು ನಿರ್ಲಕ್ಷಿಸದೇ, ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮಾತ್ರ ಈ ರೋಗದ ಅಟ್ಟಹಾಸಕ್ಕೆ ಲಗಾಮು ಹಾಕಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಹುಟ್ಟುತ್ತಲೇ ಮಧುಮೇಹಿಗಳಾಗಿರಬಹುದು ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ರೋಗ ಮನುಕುಲದ ಬಹುದೊಡ್ಡ ವೈರಿಯಾಗುವುದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ.

Dr.-Murali-Mohana-Chuntaru.

ಡಾ|| ಮುರಲೀ ಮೋಹನ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323
ದೂ: 04998-273 544, 235 111  ಮೊ: 98451 35787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!