ವಕ್ರದಂತ ರೋಗಿಗಳಿಗೆ ಶುಕ್ರದೆಸೆ ತಂದ “ದಂತ ಕ್ಲಿಯರ್ ಅಲೈನರ್”

ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ  “ದಂತ ಕ್ಲಿಯರ್ ಅಲೈನರ್” ಶುಕ್ರದೆಸೆ ತಂದಿದೆ. ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಈ “ಕ್ಲಿಯರ್ ಅಲೈನರ್” ಎಂಬ ಸಾಧನ ವಕ್ರದಂತ ರೋಗಿಗಳಿಗೆ ವರದಾನವಾಗಿದೆ ಎಂದರೂ ತಪ್ಪಲ್ಲ.

Dental-alignerನಸುಗುಲಾಬಿ ಬಣ್ಣದ ವಸಡಿನ ಮೇಲೆ ಮುತ್ತು ಪೋಣಿಸಿದಂತೆ ಸಾಲಾಗಿ ಶುಭ್ರ ದಂತ ಪಂಕ್ತಿಗಳು ಪಳಪಳನೆ ಹೊಳೆಯುತ್ತಿದ್ದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಸುಂದರ ದಂತ ಪಂಕ್ತಿಗಳು ಇರಬೇಕೆಂಬ ಮಹದಾಷೆ ಇರುವುದಂತು ಸತ್ಯ. ಹಲ್ಲುಗಳು ಎಲ್ಲೆಂದರಲ್ಲಿ ಮೊಳೆದು, ಎರಾಬಿರ್ರಿಯಾಗಿ ವಸಡಿನಲ್ಲಿ ಬೆಳೆದಲ್ಲಿ ಉಂಟಾಗುವ ವಕ್ರದಂತ ಸಮಸ್ಯೆ ಬರೀ ಮುಖದ ಸೌಂದರ್ಯವನ್ನು ಹಾಳುಗೆಡುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಕೊಡಲಿಯೇಟು ನೀಡಿ ಆತನ ಮಾನಸಿಕ ಬೆಳವಣಿಗೆಗೂ ಮಾರಕವಾಗುವ ಸಾಧ್ಯತೆ ಇರುತ್ತದೆ. ಅತ್ತ ಸರಿಯಾಗಿ ಹಲ್ಲನ್ನು ಶುಚಿಗೊಳಿಸಲಾಗದೆ ಬಾಯಿವಾಸನೆ, ವಸಡಿನಲ್ಲಿ ರಕ್ತ, ಇತ್ತ ಸರಿಯಾಗಿ ನಗಲೂ ಸಾಧ್ಯವಾಗದೆ ವ್ಯಕ್ತಿಯು ಮನದೊಳಗೆ ಮರುಗುತ್ತಾ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ವಕ್ರದಂತ ಸಮಸ್ಯೆ ಬಹುದೊಡ್ಡ ಹಿನ್ನೆಡೆಯಾಗುವುದಂತೂ ಸತ್ಯವಾದ ಮಾತು.

ಇಂತಹ ವಕ್ರದಂತ ಸಮಸ್ಯೆಯನ್ನು ಸಾಮಾನ್ಯವಾಗಿ ವಕ್ರದಂತ ಚಿಕಿತ್ಸೆ (Orthodontic Treatment)  ಯ ಮುಖಾಂತರ ವಕ್ರದಂತ ತಜ್ಞರು ಹಲ್ಲುಗಳಿಗೆ ಲೋಹದ ಅಥವಾ ಸೆರಾಮಿಕ್ ಬ್ರಾಕೆಟ್, ಬ್ಯಾಂಡ್ ಮತ್ತು ರಬ್ಬರ್ ಇಲಾಸ್ಟಿಕ್ ಬಳಸಿ ಸರಿಪಡಿಸುವುದು ಎಲ್ಲರಿಗೂ ತಿಳಿದ ವಿಚಾರವೆ. ಆದರೆ ಈ ರೀತಿಯ ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಹಲವಾರು ನ್ಯೂನತೆಗಳು ಇದ್ದು ಹೆಚ್ಚಿನ ರೋಗಿಗಳಿಗೆ ಇದು ಪಥ್ಯವಾಗುವುದಿಲ್ಲ. ಈ ವಕ್ರದಂತ ಚಿಕಿತ್ಸೆ ಅವರಿಗೆ ಬಹಳ ಯಾತನಾಮಯ ಮತ್ತು ಮಾನಸಿಕವಾಗಿ ಹೆಚ್ಚಿನ ಕಿರಿಕಿರಿ ಉಂಟು ಮಾಡುತ್ತದೆ. ಇಂತಹ ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ ಡೆಂಟರ್ ಕ್ಲಿಯರ್ ಅಲೈನರ್ ಶುಕ್ರದೆಸೆ ತಂದಿದೆ ಎಂದರೂ ತಪ್ಪಗಾಲಿಕ್ಕಿಲ್ಲ.

ಏನಿದು ದಂತ ಕ್ಲಿಯರ್ ಅಲೈನರ್ ?

ಕ್ಲಿಯರ್ ಅಲೈನರ್ ಎಂಬುದು ಪ್ಲಾಸ್ಟಿಕ್‍ನಿಂದ ಮಾಡಲ್ಪಟ್ಟ ಬಹಳ ತೆಳುವಾದ ಟ್ರಾನ್ಸ್‍ಪರೆಂಟ್ ಅಂದರೆ ಪಾರದರ್ಶಕವಾದ ರೋಗಿಯೇ ತೆಗೆದು ಹಾಕಬಹುದಾದ ಒಂದು ದಂತ ಸಾಧನ ಆಗಿರುತ್ತದೆ. ಇದೊಂದು ಬಹಳ ಶುದ್ಧೀಕರಿಸಿದ ಪ್ಲಾಸ್ಟಿಕ್ ಆಗಿದ್ದು, ಬಾಯಿಯೊಳಗಿನ ಚರ್ಮಕ್ಕಾಗಲಿ ಅಥವಾ ಇನ್ನಾವುದೇ ಅಂಗಾಂಗಳಿಗೆ ಅಲರ್ಜಿ ಉಂಟು ಮಾಡುವುದಿಲ್ಲ. ಮೊದಲು ದಂತ ವಕ್ರತೆ ಇರುವ ರೋಗಿಯ ಹಲ್ಲುಗಳ ಅಚ್ಚನ್ನು ತೆಗೆಯಲಾಗುತ್ತದೆ ಮತ್ತು ಈ ಅಚ್ಚನ್ನು ವಿಶೇಷ ಕಂಪ್ಯೂಟರ್ ತಂತ್ರಜ್ಞಾನವಿರುವ ಗಣಕಯಂತ್ರಕ್ಕೆ (CAD-CAM  ತಂತ್ರಜ್ಞಾನ) ಸೇರಿಸಲಾಗುತ್ತದೆ.

ರೋಗಿಯ ವಯಸ್ಸು, ದಂತ ವಕ್ರತೆ, ಲಭಿಸುವ ಜಾಗವನ್ನು ಕಂಪ್ಯೂಟರ್ ಅಂದಾಜಿಸಿ ಬೇರೆ ಬೇರೆ ಹಂತದ ಚಿಕಿತ್ಸೆಗೆ ಅನುಗುಣವಾಗುವಂತೆ ದಂತ ಸಾಧನ (Dental Splints)ವನ್ನು ತಯಾರಿಸುತ್ತದೆ. ಪಾರದರ್ಶಕ ಎಕ್ರಲಿಕ್ ಎಂಬ ವಸ್ತುವಿನಿಂದ ಈ ಅಲೈನರ್ ತಯಾರು ಮಾಡಲಾಗುತ್ತದೆ. ಚಿಕಿತ್ಸೆಯ ಬೇರೆ ಬೇರೆ ಹಂತದಲ್ಲಿ ಹಲ್ಲುಗಳ ಚಲನೆಗೆ ಪೂರಕವಾಗಿ ಈ ದಂತ ಸಾಧನವನ್ನು ಬದಲಾಯಿಸಲಾಗುತ್ತದೆ. ಬಹಳ ಸುಲಭವಾಗಿ ರೋಗಿಯೇ ಈ ಸಾಧನವನ್ನು ತೆಗೆಯಬಹುದಾಗಿದೆ. ಮೊದಲು ಹಿಂಭಾಗದಲ್ಲಿ ತೆಗೆದು ಬಳಿಕ ಮುಂಭಾಗದಲ್ಲಿ ತೆಗೆಯಲಾಗುತ್ತದೆ. ಊಟದ ಸಮಯದಲ್ಲಿ ಈ ಅಲೈನರ್‍ನ್ನು ತೆಗೆಯಬಹುದು. ಮತ್ತು ಬಹಳ ಸುಲಭವಾಗಿ ಬ್ರಷ್‍ನ ಮುಖಾಂತರ ಶುಚಿಗೊಳಿಸಬಹುದು.

ಯಾವುದೇ ಕಾರಣಕ್ಕೂ ಬಿಸಿ ನೀರಿನಲ್ಲಿ ತೊಳೆಯಬಾರದು. ಬಾಯಿಯಿಂದ ಹೊರತೆಗೆದಾಗ ಅದಕ್ಕೆಂದೇ ಕೊಟ್ಟ ಪೆಟ್ಟಿಗೆಯಲ್ಲಿ ಮುಚ್ಚಿ ಇಡತಕ್ಕದ್ದು. ಬಿಸಿ ಆಹಾರ ತಾಗಿಸಲೇ ಬಾರದು. ಬಿಸಿಯಾದ ವಸ್ತು ತಾಗಿದಲ್ಲಿ ಅದು ತನ್ನ ರಚನೆಯನ್ನು ಬದಲಿಸಬಹುದು. ಅತಿಯಾದ ಶಕ್ತಿ ಹಾಕಿ ಉಜ್ಜಿದಲ್ಲಿ ತೆಳುವಾದ ಅಲೈನರ್ ತುಂಡಾಗಬಹುದು. ಯಾವುದೇ ಕಾರಣಕ್ಕೂ ಮೌತ್‍ವಾಷ್‍ಗಳಲ್ಲಿ ಅಥವಾ ಇನ್ನಾವುದೇ ರಾಸಾಯನಿಕಗಳಲ್ಲಿ ಮುಳುಗಿಸಿ ಇಡಬೇಡಿ. ಶುಭ್ರವಾದ ನೀರಿನಿಂದ ತೊಳೆಯತಕ್ಕದ್ದು. ಅತೀ ಅಗತ್ಯವಿದ್ದಾಗ ಮಾತ್ರ ಬಾಯಿಂದ ತೆಗೆಯತಕ್ಕದ್ದು.

ಸಾಂಪ್ರಾದಾಯಿಕ ವಕ್ರದಂತ ಚಿಕಿತ್ಸಯ ತೊಂದರೆಗಳು ಏನು ?

1. ಬಹಳ ಸುಲಭವಾಗಿ ಎದ್ದು ಕಾಣುತ್ತವೆ ಮತ್ತು ನೋಡಲು ಚೆನ್ನಾಗಿರುವುದಿಲ್ಲ ಹಲ್ಲಿನ ಬಣ್ಣದ ದಂತ ಬ್ರಾಕೆಟ್ ಇದೆಯಾದರೂ ಹೆಚ್ಚಿನ ದರದಿಂದಾಗಿ ಎಲ್ಲರಿಗೂ ಕೈಗೆಟುಕದು.
2. ಬಾಯಿಯ ತುಂಬಾ ಲೋಹದ ಬ್ರಾಕೆಟ್, ಬ್ಯಾಂಡ್‍ಗಳು, ಎಲೆಸ್ಟಿಕ್‍ಗಳು ಮತ್ತು ತಂತಿಗಳಿಂದಾಗಿ ತಿನ್ನಲು ಕಷ್ಟವಾಗುತ್ತದೆ. ಕೆಲವೊಂದು ಆಹಾಗಳನ್ನು ವಕ್ರದಂತ ಚಿಕಿತ್ಸೆಯ ಸಮಯದಲ್ಲಿ ಬಳಸಲೇಬಾರದು.
3. ರೋಗಿಗೆ ಈ ಸಾಧನಗಳನ್ನು ತೆಗೆಯಲು ಸಾಧ್ಯವಾಗದು.
4. ಬಾಯಿಯ ಸ್ವಚ್ಚತೆಯನ್ನು ಕಾಪಾಡಲು ಬಹಳ ಕಷ್ಟವಾಗಬಹುದು. ಮತ್ತು ಬ್ರಾಕೆಟ್‍ಗಳ ಕೆಳಗೆ ದಂತಕ್ಷಯವಾಗುವ ಸಾಧ್ಯತೆಯೂ ಇದೆ.
5. ಮಾತನಾಡಲು, ಆಹಾರ ಸೇವಿಸಲು, ನಗಲು ಕಷ್ಟವಾಗಬಹುದು.
6. ಆರಂಭಿಕ ಹಂತದಲ್ಲಿ ತುಟಿಗಳ ಮತ್ತು ಗಲ್ಲದ ಒಳಭಾಗದಲ್ಲಿ ಚೂಪಾದ ಬ್ರಾಕೆಟ್‍ಗಳಿಂದ ಮತ್ತು ತಂತಿಗಳಿಂದ ಬಾಯಿ ಹುಣ್ಣು ಉಂಟಾಗುತ್ತದೆ.
7. ಕೆಲವೊಮ್ಮೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ.
8. ಚಿಕಿತ್ಸೆಯ ನಂತರದ ಫಲಿತಾಂಶವನ್ನು ಮೊದಲೇ ಅಂದಾಜಿಸಲು ಮತ್ತು ನೋಡಲು ಸಾಧ್ಯವಾಗದು.

ಕ್ಲಿಯರ್ ಅಲೈನರ್‍ನ ಲಾಭಗಳು

1. ಪಾರದರ್ಶಕವಾಗಿದ್ದು ಮುಖದ ಮತ್ತು ಹಲ್ಲಿನ ಸೌಂದರ್ಯಕ್ಕೆ ಯಾವುದೇ ದಕ್ಕೆ ತರುವುದಿಲ್ಲ.
2. ಊಟ ಮಾಡುವಾಗ ಈ ಸಾಧನವನ್ನು ತೆಗೆಯಬಹುದು ಮತ್ತು ಎಲ್ಲಾ ರೀತಿಯ ಆಹಾರವನ್ನು ಸೇವಿಸಬಹುದು.
3. ಬಾಯಿಯ ಸ್ವಚ್ಚತೆಯನ್ನು ಬಹಳ ಸುಲಭವಾಗಿ ಕಾಪಾಡಿಕೊಳ್ಳಬಹುದು. ಯಾವುದೇ ರೀತಿಯ ದಂತಕ್ಷಯವಾಗುವ ಸಾಧ್ಯತೆ ಇರದು.
4. ಮಾತನಾಡಲು, ನಗಲು, ಆಹಾರ ಸೇವಿಸಲು ಯಾವುದೇ ತೊಂದರೆ ಆಗದು.
5. ಬಾಯಿಯ ಹುಣ್ಣು, ನೋವು ಅಥವಾ ವಾಸನೆ ಮುಂತಾದ ಯಾವುದೇ ತೊಂದರೆ ಇರುವುದಿಲ್ಲ. ವಸಡಿನ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.
6. ತುರ್ತು ಸಂದರ್ಭಗಳಲ್ಲಿ ಈ ಸಾಧನವನ್ನು ತೆಗೆಯಲು ಸಾಧ್ಯವಾಗುತ್ತದೆ ಮತ್ತು ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಯಾವುದೇ ದಕ್ಕೆ ತರುವುದಿಲ್ಲ.
7. ದಂತ ವೈದ್ಯರ ಬಳಿ ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ. ವೈದ್ಯರ ಆದೇಶದಂತೆ ಅಲೈನರನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ ಇದ್ದರೆ ಸಾಕು. ಅತೀ ಅಗತ್ಯವಿದ್ದಲ್ಲಿ ಮಾತ್ರ ದಂತ ವೈದ್ಯರ ಬೇಟಿ ಮಾಡಬೇಕು.
8. ಚಿಕಿತ್ಸೆಯ ನಂತರದ ಫಲಿತಾಂಶವನ್ನು ಚಿಕಿತ್ಸೆಯ ಆರಂಭದಲ್ಲಿಯೇ ಗಣಕಯಂತ್ರದಲ್ಲಿ ನೋಡಬಹುದು. ಮತ್ತು ಸೂಕ್ತ ಬದಲಾವಣೆ ಮಾಡಲು ಸಾಧ್ಯವಿದೆ.

ಕ್ಲಿಯರ್ ಅಲೈನರ್ ಹೇಗೆ ಕೆಲಸ ಮಾಡುತ್ತದೆ ?

dental-alignerವಕ್ರದಂತ ಸಮಸ್ಯೆ ಇರುವ ರೋಗಿಗಳ ಹಲ್ಲಿನ ಅಳತೆಯನ್ನು ತೆಗೆದು ಹಲ್ಲಿನ ಪಡಿಯಚ್ಚು ತಯಾರಿಸಲಾಗುತ್ತದೆ. ಈ ಪಡಿಯಚ್ಚನ್ನು ವಿಶೇಷವಾದ 3D ಡಿಜಿಟಲ್ ಸ್ಕ್ಯಾನರ್‍ನ ಮುಖಾಂತರ ಗಣಕಯಂತ್ರಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಕಂಪ್ಯೂಟರ್ ತಂತ್ರಜ್ಞಾನದ ಮುಖಾಂತರ ಯಾವ ರೀತಿಯ ಚಿಕಿತ್ಸೆ, ಎಷ್ಟು ವರ್ಷಗಳ ಚಿಕಿತ್ಸೆ ಮತ್ತು ಎಷ್ಟು ಬಗೆಯ ಕ್ಲಿಯರ್ ಅಲೈನರ್ ಬೇಕಾಗುತ್ತದೆ ಎಂಬುದನ್ನು ಕಂಪ್ಯೂಟರ್ ನಿರ್ಧರಿಸುತ್ತದೆ. ಯಾವ ರೀತಿಯ ಫಲಿತಾಂಶ ಬೇಕೆಂಬುದನ್ನು ಮೊದಲೇ ನಿರ್ಧರಿಸಿ ಕಂಪ್ಯೂಟರ್‍ನಲ್ಲಿ ರೋಗಿಗೆ ಮನವರಿಕೆ ಮಾಡಲಾಗುತ್ತದೆ. ಹೀಗೆ ಕಂಪ್ಯೂಟರ್‍ನ ಸಹಾಯದಿಂದ CAD-CAM  ತಂತ್ರಜ್ಞಾನದಿಂದ ತಯಾರಿಸಲಾದ ಕ್ಲಿಯರ್-ಅಲೈನರನ್ನು ರೋಗಿಗೆ ಬಳಸಲು ಸೂಚಿಸಲಾಗುತ್ತದೆ.

ಪ್ರತಿ ಎರಡು ವಾರಕ್ಕೊಮ್ಮೆ ಈ ಅಲೈನರ್ ಸಾಧನವನ್ನು ಬದಲಾಯಿಸಲಾಗುತ್ತದೆ. ಹಲ್ಲಿನ ಚಲನೆಗೆ ಅನುಗುಣವಾಗಿ ಆರಂಭದಲ್ಲಿ ಬಿಗಿಯಾಗಿದ್ದ ಅಲೈನರ್ ನಂತರ ಸಡಿಲವಾಗುತ್ತದೆ. ಅಲೈನರ್ ಸಡಿಲವಾಗಿದೆಯೆಂದು ನಂತರದ ಹಂತದ ಅಲೈನರ್ ಬಳಸುವಂತಿಲ್ಲ. ಕನಿಷ್ಠ ಎರಡು ವಾರಗಳ ಕಾಲ ದಿನಕ್ಕೆ ಕಡಿಮೆ ಎಂದರೆ 20 ಗಂಟೆಗಳ ಕಾಲ ಬಳಸತಕ್ಕದ್ದು. ಹೀಗೆ ಮಾಡಿದಾಗ ಮೊದಲೇ ನಿರ್ಧರಿಸಿದ ಜಾಗಕ್ಕೆ ಹಲ್ಲಿನ ಚಲನೆ ಆಗುತ್ತದೆ. ಒಬ್ಬರಿಗೆ ಬಳಸಿದ ಅಲೈನರ್ ಇನ್ನೊಬ್ಬರಿಗೆ ಬಳಸುವಂತಿಲ್ಲ. ಹೀಗೆ 2 ವಾರಕ್ಕೊಮ್ಮೆ ಅಥವಾ 3 ವಾರಕ್ಕೊಮ್ಮೆ ಅಲೈನರ್‍ಗಳನ್ನು ಬದಲಾಯಿಸಿ ಮೊದಲೇ ನಿರ್ಧರಿಸಿದ ಜಾಗಕ್ಕೆ ಹಲ್ಲು ಚಲಿಸುವಂತೆ ಮಾಡಿ ವಕ್ರದಂತ ಹಲ್ಲುಗಳನ್ನು ಮರು ಜೋಡಣೆ ಮಾಡಿ ಸುಂದರವಾದ ದಂತ ಪಂಕ್ತಿ ಉಂಟಾಗುವಂತೆ ಮಾಡಲಾಗುತ್ತದೆ.

ಚಿಕಿತ್ಸೆಯ ಅವಧಿ ಮತ್ತು ಎಷ್ಟು ಬಗೆಯ ಹಾಗೂ ಸಂಖ್ಯೆಯ ಅಲೈನರ್ ಬಳಸಬೇಕು ಎಂಬುದನ್ನು ವಕ್ರದಂತ ತೊಂದರೆಯ ಸಂಕೀರ್ಣತೆಯ ಮೇಲೆ ಅವಲಂಭಿಸಿದೆ. ಜಾಸ್ತಿ ವಕ್ರವಾಗಿರುವ ಸಮಸ್ಯೆಗಳಿಗೆ ದೀರ್ಘ ಸಮಯ ಮತ್ತು ಹೆಚ್ಚಿನ ಸಂಖ್ಯೆಯ ಅಲೈನರ್‍ಗಳ ಅವಶ್ಯಕತೆ ಇರುತ್ತದೆ. ಜಾಸ್ತಿ ಸಂಕೀರ್ಣವಲ್ಲದ ಕಡಿಮೆ ದಂತ ವಕ್ರತೆಯ ತೊಂದರೆಗಳನ್ನು ಅಲ್ಪಕಾಲದಲ್ಲಿ ಕಡಿಮೆ ಸಂಖ್ಯೆಯ ಅಲೈನರ್‍ಗಳನ್ನು ಬಳಸಿ ಸರಿಪಡಿಸಲಾಗುತ್ತದೆ. ಚಿಕಿತ್ಸಾ ವೆಚ್ಚವೂ ಅಲೈನರ್‍ಗಳ ಸಂಖ್ಯೆಯ ಮೇಲೆ ನಿರ್ಧರಿಸಲಾಗಿದೆ. ಈ ಚಿಕಿತ್ಸೆಯ ವೆಚ್ಚ ಸುಮಾರು 50,000ದಿಂದ ಹಿಡಿದು 1.5 ಲಕ್ಷದವರೆಗೆ ಉಂಟಾಗುವ ಸಾಧ್ಯತೆ ಇದೆ.

ಚಿಕಿತ್ಸೆಯ ಅವಧಿ, ಅಲೈನರ್‍ಗಳ ಸಂಖ್ಯೆ ಮತ್ತು ಚಿಕಿತ್ಸಾ ವೆಚ್ಚವನ್ನು ದಂತ ವೈದ್ಯರು ಗಣಕಯಂತ್ರದ ಸಹಾಯದಿಂದ ನಿರ್ಧರಿಸುತ್ತಾರೆ. ಪ್ರತಿ “ಕ್ಷಿಯರ್ ಅಲೈನರ್” ಜೊತೆಗೆ ಹೇಗೆ ಧರಿಸಬೇಕು ಎಂಬ ಸೂಚನಾ ಪಟ್ಟಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಈ ಸೂಚನೆಯನ್ನು ಮೀರಬಾರದು. ವೈದ್ಯರು ಮತ್ತು ರೋಗಿಯ ನಡುವೆ ನಿರಂತರವಾದ ಸಂಪರ್ಕ ಮತ್ತು ನಂಬಿಕೆ ಇದ್ದಲ್ಲಿ ಉತ್ತಮ ಫಲಿತಾಂಶ ದೊರಕುವುದರಲ್ಲಿ ಸಂಶಯವೇ ಇಲ್ಲ.

ಕೊನೆ ಮಾತು :

ದಿನಗಳೆದಂತೆಲ್ಲಾ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಅವಿಷ್ಕಾರಗಳು ಮತ್ತು ತಂತ್ರಜ್ಞಾನದಲ್ಲಿ ತೀವ್ರತರವಾದ ಪ್ರಗತಿ ಆಗಿದೆ. ಈ ಅವಿಷ್ಕಾರ ತಂತ್ರಜ್ಞಾನದ ಪ್ರಗತಿ ಮತ್ತು ದಂತವೈದ್ಯರ ನೈಪುಣ್ಯತೆಯ ಫಲಿತಾಂಶವಾಗಿ ದಂತ ಚಿಕಿತ್ಸೆಯಲ್ಲಿ ಬಹಳಷ್ಟು ಹೊಸತನ ಕಂಡು ಬಂದಿದೆ. ಇದರ ಫಲವಾಗಿಯೇ ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಈ “ಕ್ಲಿಯರ್ ಅಲೈನರ್” ಎಂಬ ಸಾಧನ ವಕ್ರದಂತ ರೋಗಿಗಳಿಗೆ ವರದಾನವಾಗಿದೆ ಎಂದರೂ ತಪ್ಪಲ್ಲ. ಕಂಪ್ಯೂಟರ್ ಸಹಾಯದಿಂದ 3D ಡಿಜಿಟಲ್ ಸ್ಕ್ಯಾನರ್ ಬಳಸಿ ಅಂಆ-ಅಂಒ ತಂತ್ರಜ್ಞಾನದ ಸಹಾಯದಿಂದ ದಂತ್ರ ವಕ್ರತೆಗೆ ಚಿಕಿತ್ಸೆ ನೀಡುವ ಈ “ದಂತ ಕ್ಲಿಯರ್ ಅಲೈನರ್” ಎಂಬ ಸಾಧನದಿಂದಾಗಿ ವಕ್ರದಂತ ರೋಗಿಗಳಿಗೆ ಶುಕ್ರದೆಸೆ ಬಂದಿದೆ ಎಂದರೂ ಅತಿಶಯೋಕ್ತಿಯಲ್ಲ. ಅದೇನೇ ಇರಲಿ ಮುಂದುವರಿದ ತಂತ್ರಜ್ಞಾನದಿಂದ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ದೊರೆತು ಆರೋಗ್ಯವಂತ ಸಮಾಜ ನಿರ್ಮಾಣವಾದಲ್ಲಿ ಅದಕ್ಕಿಂತ ಹೆಚ್ಚಿನ ಸಂತಸ ಪಡುವ ವಿಚಾರ ಇನ್ನೊಂದಿಲ್ಲ .

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!