ಉತ್ತಮ ಆರೋಗ್ಯದ ಗುಟ್ಟು- ವಾಕಿಂಗ್

 ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ. ಆರೋಗ್ಯವೇ ಇಲ್ಲದ ಮೇಲೆ ಲೌಕಿಕ ಸುಖಗಳು ಸುಖ, ನೆಮ್ಮದಿಯನ್ನು ಕೊಡುವುದಿಲ್ಲ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ ವ್ಯಾಯಾಮ, ಶಾರೀರಿಕ ಚಟುವಟಿಕೆ, ನಿಗದಿತ ಪ್ರಮಾಣದ ಆಹಾರ, ಇವುಗಳ ಕಡೆಗೆ ಬಹುಮುಖ್ಯ ಗಮನವನ್ನು ಕೊಡಬೇಕು.ನಮ್ಮ ಮುಂದೆ ಯಾವುದೇ ಐಶ್ವರ್ಯವನ್ನು ತಂದು ಗುಡ್ಡೆ ಹಾಕಿದರೂ ಆರೋಗ್ಯ ಕೆಟ್ಟು ಹೋಯಿತಂದ್ರೆ ಅದರೆಲ್ಲವೂ ಗೌಣವಾಗಿಬಿಡುತ್ತದೆ.ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಒತ್ತಡದ ಬದುಕು ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಗೆ ಮುನ್ನುಡಿ ಬರೆಯುತ್ತಿವೆ.ಒತ್ತಡದ ಮಧ್ಯೆ ಕೆಲಸ ಮಾಡುವಾಗ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ಆರೋಗ್ಯವೇ ಕಿತ್ತುಕೊಂಡು ಜೀವನಕ್ಕೆ ಜಿಗುಪ್ಸೆ ಎಂಬ ಉಡುಗೊರೆಯನ್ನು ನೀಡಿಬಿಡುತ್ತದೆ.
ಜೀವನಶೈಲಿ ಬದಲಾದಂತೆ ಹ್ಯಾಪಿ ಅಂಡ್ ಹೆಲ್ದೀ ಲೈಫ್ ಅನ್ನೋದು ಪಟ್ಟಣದಿಂದ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ. ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ. ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಇಡೀ ದಿನ ಆಫೀಸಿನಲ್ಲಿ ಕೂತು ಕೂತು ಹೊಟ್ಟೆಯ ಭಾಗ ಉಬ್ಬಿದರೆ, ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸದಿಂದಾಗಿ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನ ಕಡಿಮೆಯಾಗಿ ಬಿಡುತ್ತದೆ. ಇದರಿಂದಾಗಿ ಹೆಚ್ಚಿನವರು ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಸಾಯನಿಕಯುಕ್ತ ಆಹಾರ ಪದಾರ್ಥಗಳು ಮತ್ತು ಆಹಾರ ಸೇವನೆಯಲ್ಲಿನ ಅಶಿಸ್ತು, ದೈಹಿಕ ಶ್ರಮವಿಲ್ಲದ ಕೆಲಸಗಳು, ಮಾನಸಿಕ ಒತ್ತಡ ಹೀಗೆ ಅನೇಕ ಕಾರಣಗಳಿಂದ ಆರೋಗ್ಯವೇ ಸರಿಯಿಲ್ಲದೆ ಪರದಾಡುವ ಸ್ಥಿತಿ ಹೆಚ್ಚಿನವರದ್ದಾಗಿದೆ.
ಇತ್ತಿಚ್ಚಿನ ದಿನಗಳಲ್ಲಿ ಆರೋಗ್ಯಕರ ಜೀವನ ನಮ್ಮದಾಗಬೇಕೆಂಬ ಅರಿವು ಮೂಡಿರುವುದರಿಂದ ವಾಕಿಂಗ್ ಅನ್ನೋದು ಚಿಕ್ಕ ಮಕ್ಕಳಿಂದ ಹಿಡಿದು, ಯುವಕ ಯುವತಿಯರು, ಆಂಟಿ ಅಂಕಲ್, ಅಲ್ಲದೇ ಅಜ್ಜ ಅಜ್ಜಿಯವರೆಗೂ ನಿದ್ರೆಯನ್ನು ಕೆಡಿಸಿದೆ. ಇಂದು ವಾಕಿಂಗ್ನ ಪ್ರಯೋಜನದ ಅರಿವು ಎಲ್ಲೆಡೆ ಮೂಡಿದೆ. ಬೆಳಿಗ್ಗೆದ್ದು ಕಣ್ ಹಾಯ್ಸಿದ್ರೆ ಸಾಕು ರಸ್ತೆಯಲ್ಲಿ ಗಾರ್ಡನ್ ಗಳಲ್ಲಿ ಒಂದಿಷ್ಟು ಜನ ಬ್ರಿಸ್ಕ್ ವಾಕ್ ಮಾಡ್ತಾ ಇದ್ರೆ, ತಾ ಮುಂದೆ ತಾ ಮಂದೆ ಎಂದು ನಡೆದಾಡುವ ಜನರು, ಜಾಗಿಂಗ್ ಮಾಡುವ ನಡು ವಯಸ್ಸಿನವರು, ಡಾಕ್ಟರ್ ಸಲಹೆಯಂತೆ ಇಲ್ಲವೇ ಇರುವಷ್ಟು ದಿನ ಆರೋಗ್ಯದಿಂದ ಬದುಕಬೇಕೆಂದು ಮನಸ್ಥಿತಿ ಹೊತ್ತು ನಿಧಾನವಾಗಿ ಸಾಗುತ್ತಿರುವ ಹಿರಿಯಜೀವಗಳು. ಅಪ್ಪ ಅಮ್ಮ ಬರ್ತಾರೆ ಅಂತ ತಾವೂ ಜೊತೆಗೇ ಬರೋ ಮಕ್ಕಳು.. ಒಟ್ಟಾರೆ ಎಲ್ಲರೂ ಒಂದಲ್ಲ ಒಂದು ಆರೋಗ್ಯದ ದೃಷ್ಟಿಯಿಂದ ಬೆಳಿಗ್ಗೆ ಸಂಜೆ ವಾಕಿಂಗ್, ಜಾಗಿಂಗ್ ಮಾಡುತ್ತಾರೆ. ಇದು ಆರೋಗ್ಯಕ್ಕೂ ಉತ್ತಮವಾಗಿದ್ದು, ದೀರ್ಘಾಯುಷ್ಯದ ಗುಟ್ಟೂ ಆಗಿದೆ.
ನಾವು ಆರೋಗ್ಯದಿಂದಿರಲು ಮತ್ತು ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಮಾಡುವುದಕ್ಕಿಂತಾ ಬೇರೆ ಯಾವ ವ್ಯಾಯಾಮಗಳಿಲ್ಲ. ವಾಕಿಂಗ್ ಮಾಡುವುದು ಸರಳ, ಸುಲಭ ಮತ್ತು ವಿನೋದವೂ ಆಗಿರುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ಯಾವಾಗಲೂ ಕಾರ್ಯನಿರತವಾಗಿರಲು ಮತ್ತು ಸೂಕ್ತವಾದ ಆರೋಗ್ಯದಿಂದರಲು ಬಯಸುವ ಎಲ್ಲಾ ವಯಸ್ಸಿನ ಜನರಿಗೆ ಒಂದು ಅತ್ಯುತ್ತಮ ಮಾರ್ಗ. ಈ ಒಂದು ವ್ಯಾಯಾಮಕ್ಕೆ ನಮಗೆ ಯಾವ ಉಪಕರಣಗಳ ಅಗತ್ಯವೂ ಸಹ ಇರುವುದಿಲ್ಲ ಮತ್ತು ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ.
ನಸುಕಿನ ಚುಮುಚುಮು ಚಳಿಯಲ್ಲಿ, ಸೂರ್ಯನ ಎಳೆಬಿಸಿಲಿನಲ್ಲಿ ಒಂದು ಗಂಟೆ ವಾಕಿಂಗ್ ಮಾಡೋದ್ರಿಂದ ಇಡೀ ದಿನವೂ ಚಟುವಟಿಕೆಯಿಂದಲೇ ಕೂಡಿರುತ್ತದೆ.ಕೆಲಸಗಳಲ್ಲಿ ಒಳ್ಳೆಯ ಏಕಾಗ್ರತೆಯಿರುತ್ತದೆ. ಭಾವನೆಗಳ ಏರಿಳಿತಗಳು ಹತೋಟಿಯಲ್ಲಿರುತ್ತವೆ. ಕೆಲಸದಲ್ಲಿನ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನಿಯಮಿತವಾಗಿ ವಾಕಿಂಗ್ ಮಾಡೋದ್ರಿಂದ, ಬೊಜ್ಜು, ಕಾಲುನೋವು, ಸಂಧಿವಾತ, ಬೆನ್ನುಬಾಗುವುದು, ಗ್ಯಾಸ್ಟ್ರಿಕ್ ಮುಂತಾದ ಖಾಯಿಲೆಗಳು ಕಡಿಮೆಯಾಗುತ್ತವೆ. ಅಲ್ಲದೇ ಮಾನಸಿಕತೆಗೆ ಸಂಬಂಧಿಸಿದ ಕೋಪ, ಟೆನ್ಷನ್, ಕಿರಿಕಿರಿ,ಗೊಂದಲಗಳೆಲ್ಲಾ ದೂರವಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ. ಅಷ್ಟೇ ಅಲ್ಲದೇ ವಾಕಿಂಗ್ ನಿಂದಾಗಿ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಮಧ್ಯವಯಸ್ಸು ದಾಟಿದ ಮೇಲೆ ಹೃದಯಾಘಾತದ ಸಂಭವನೀಯತೆ ಹೆಚ್ಚು ಆದ್ದರಿಂದ ಸುಮ್ಮನೇ ವಾಕಿಂಗ್ ಮಾಡುವ ಬದಲು ಬಿರುಸಾಗಿ ವಾಕಿಂಗ್ ಮಾಡೋದು ಎಲ್ಲರಿಗೂ ಉತ್ತಮ ಎನ್ನುವುದು ಸಂಶೋಧಕರ ಅಭಿಪ್ರಾಯ.

ಮುಂಜಾನೆಯ ವಾಕಿಂಗ್ ಆರೋಗ್ಯಕ್ಕೆ ಹಿತಕರ!

ಮುಂಜಾನೆಯ ವಾಕಿಂಗ್ ಮಾಡುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ವಾಕಿಂಗ್, ಜಾಗಿಂಗ್ ಹೃದಯದ ಸ್ನಾಯುಗಳನ್ನು ಬಲಗೊಳಿಸಿ ಅವು ಹೆಚ್ಚು ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಅದು ರಕ್ತದೊತ್ತಡ, ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.ದಿನನಿತ್ಯದ ಜಂಜಾಟಗಳ ನಡುವೆ ನಾವು ವಾಕಿಂಗ್, ಜಾಗಿಂಗ್ ಅನ್ನು ಅಭ್ಯಾಸ ಮಾಡಿಕೊಂಡರೆ ಮನಸ್ಸನ್ನು ಸ್ವಲ್ಪ ಮಟ್ಟಿಗೆ ಉಲ್ಲಾಸದಿಂದ ಇಟ್ಟುಕೊಳ್ಳಬಹುದು. ಇದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.
ನಡಿಗೆಯಿಂದ ಸ್ನಾಯುಗಳ ಶಕ್ತಿ ವೃದ್ಧಿಸುತ್ತದೆ. ದೇಹದ ಎಲ್ಲ ಸ್ನಾಯುಗಳೂ ಚಲನಶೀಲವಾಗುತ್ತವೆ.ಹೃದಯದ ರಕ್ತನಾಳಗಳ ಆರೋಗ್ಯದ ಮಟ್ಟಿಗೆ ನಡಿಗೆಯೇ ಅತ್ಯುತ್ತಮ. ಸಾಮಾನ್ಯ ನಡಿಗೆಗಿಂತ ವೇಗದ ನಡಿಗೆ ಉತ್ತಮ. ‘ವೇಗದ ನಡಿಗೆಯಿಂದ ನಿತಂಬದ ಸ್ನಾಯುಗಳು ಬಲಶಾಲಿಯಾಗುತ್ತವೆ. ನಿಮಗೆ ಸಾಧ್ಯವಾದಷ್ಟು ವೇಗವನ್ನು ಮಾತ್ರ ರೂಢಿಸಿಕೊಳ್ಳಿ. ನಡಿಗೆಯಲ್ಲಿ ಒತ್ತಡದ ಅನುಭವ ಆಗಬಾರದು. ವೇಗ ಕಡಿಮೆಯಾಯಿತು ಅನಿಸಿದಾಗ ಸ್ವಲ್ಪ ವೇಗ ಹೆಚ್ಚಿಸಿಕೊಳ್ಳಿ.ಆದರೆ, ಕೆಲವರಿಗೆ ವೇಗದ ನಡಿಗೆ ಮಾಡಲು ಮಂಡಿಯ ಕೀಲುಗಳು ಸಹಕರಿಸಲಾರವು. ಅದಕ್ಕಾಗಿ ನಿಮಗೆ ಹಿತವೆನಿಸುವಷ್ಟು ವೇಗದ ನಡಿಗೆ ಮಾಡಬಹುದು.
ನಿಮಗೆ ಉಸಿರಾಟದ ತೊಂದರೆಯಿದ್ದರೆ ಅಥವಾ ಉಸಿರುಗಟ್ಟಿದಂತಹ ಅನುಭವವಾಗುತ್ತಿದ್ದರೆ ನಡಿಗೆ ಉತ್ತಮ ಪರಿಹಾರ. ತಾಜಾ ಗಾಳಿಯಲ್ಲಿ ನೀವು ವಾಕಿಂಗ್ ಮಾಡಿದಾಗ ನಿಮ್ಮ ಶ್ವಾಸಕೋಶಗಳು ಸುಗಮವಾಗಿ ಕೆಲಸ ಮಾಡುತ್ತವೆ. ತೂಕ ಇಳಿಸಿಕೊಳ್ಳಲು ಪವರ್ ವಾಕಿಂಗ್ ಮಾಡಿ. ಇದು ವೇಗದ ನಡಿಗೆಯಾಗಿದ್ದು, ಓಟ ಅಥವಾ ಜಾಗಿಂಗ್ ವೇಳೆ ಕರಗುವಷ್ಟೇ ಕ್ಯಾಲೊರಿ ಪವರ್ ವಾಕಿಂಗ್ನಲ್ಲೂ ಕರಗುತ್ತದೆ. ಇದಕ್ಕೆ ನೀವು ಮಧ್ಯಮ ಅಥವಾ ತೀವ್ರ ವೇಗದ ನಡಿಗೆ ಮಾಡಬೇಕಾಗುತ್ತದೆ.

ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳು:
  • ನಿಯಮಿತವಾಗಿ ವಾಕಿಂಗ್ ಮಾಡುವವರಿಗೆ ಹೃದಯಕ್ಕೆ ತಗಲುವ ರೋಗದ ಬೆಳವಣಿಗೆಯನ್ನು ತಗ್ಗುವ ಹಾಗೆ ಮಾಡುತ್ತದೆ. ಅದಲ್ಲದೆ ನಿಯಮಿತ ವಾಕಿಂಗ್ ಮಾಡಿದಾಗ ಹೃದಯಾಘಾತ ಮತ್ತು ಬೈಪಾಸ್ ಚಿಕಿತ್ಸೆಯಾಗಿರುವವರು ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಮತ್ತೊಂದು ಹೃದಯಾಘಾತವಾಗುವ ಪರಿಸ್ಥಿತಿಯನ್ನು ಕಡಿಮೆಮಾಡುತ್ತದೆ
  • ನಮ್ಮ ರಕ್ತ ಚಲನೆಯನ್ನು ವೃದ್ಧಿಸಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
  • ಉತ್ತಮ ಮನಸ್ಥಿತಿ, ಉತ್ತಮ ಅರೋಗ್ಯದಿಂದರಲು ನಿಯಮಿತ ವಾಕಿಂಗ್ ಮಾಡುವುದು ಅತ್ಯಂತ ಸರಳವಾದ ಮಾರ್ಗ.
  • ವಾಕಿಂಗ್ ಶಾರೀರಿಕ ಚಟುವಟಿಕೆಯಂತೆ ರೋಗಿಗಳಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಹಾಗೂ ರಕ್ತದೊತ್ತಡವು ಸುಧಾರಿಸುತ್ತದೆ.
  • ವಾಕಿಂಗ್ ಮಾಡುವುದರಿಂದ ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಮೂಳೆಯ ಕ್ಷೀಣಿಸುವುದನ್ನು ನಿಧಾನಮಾಡುತ್ತದೆ.
  • ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ವಾಕಿಂಗ್ ಮಾಡುವುದರಿಂದ ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ.
  • ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಖಿನ್ನತೆಯಿಂದ ಕೊರಗುವುದನ್ನು ತಡೆಗಟ್ಟುತ್ತದೆ ಮನಸ್ಥಿತಿಯು ವೃದ್ಧಿಸುತ್ತದೆ ಮತ್ತು ಖಿನ್ನತೆಯನ್ನು ತಡೆಯಲು ಸಹಾಯಮಾಡುತ್ತದೆ.
  • ವಾಕಿಂಗ್ ಮಾಡುವುದರಿಂದ ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಲು ಸಹಾಯವಾಗುತ್ತದೆ.
  • ವಾಕಿಂಗ್ ಮಾಡುವುದು ಮನಸ್ಸು ಮತ್ತು ಶರೀರಕ್ಕೆ ಒಳ್ಳೆಯ ಬಲವರ್ಧಕ ಸಾಧನವಾಗಿದ್ದು ಪುನರ್ಯೌವನಗೊಳಿಸಲು ಸಹಾಯಮಾಡುತ್ತದೆ ಮತ್ತು ಮನಸ್ಥಿತಿಯನ್ನು ಚುರುಕುಗೊಳಿಸಿ ಉತ್ಸಾಹವನ್ನು ತುಂಬುತ್ತದೆ.
  • ನಿಯಮಿತವಾದ ವಾಕಿಂಗ್ ನಿಮ್ಮ ಆಯಸ್ಸನ್ನು ಹೆಚ್ಚಿಸಲು ನೆರವಾಗುತ್ತದೆ.
  • ನಿಯಮಿತವಾಗಿ ವಾಕಿಂಗ್‍ನಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಲು ಸಹಾಯವಾಗುತ್ತದೆ.
ನಡಿಗೆಯನ್ನು ಮೀರಿದ ವ್ಯಾಯಾಮ ಮತ್ತೊಂದಿಲ್ಲ:
  • ಎಲ್ಲ ವಯಸ್ಸಿನಲ್ಲಿಯೂ ವಾಕಿಂಗ್ ಅತ್ಯುತ್ತಮ ವ್ಯಾಯಾಮವಾಗಿರುತ್ತದೆ. ಆರಾಮದಾಯಕ, ಸಡಿಲ ಉಡುಪು ಧರಿಸಿ, ಕ್ಯಾನ್ವಾಸ್ ಶೂ ಧರಿಸಿ. ಬೆಳಗಿನ ವಾಕಿಂಗ್ ಪ್ರಾರಂಭಿಸಿ.ಮೊದಲ ಐದು ನಿಮಿಷ ನಿಧಾನವಾಗಿ ಹೆಜ್ಜೆ ಹಾಕಿ, ನಂತರ ವೇಗ ಹೆಚ್ಚಿಸಿ. ಉಸಿರಾಟ ಸಮನಾಗಿ ಇರಲಿ. ಆಯಾಸ ಎನಿಸಿದರೆ ಸ್ವಲ್ಪ ಕುಳಿತುಕೊಳ್ಳಿ. ವಾಕಿಂಗ್ ಮಾಡುವಾಗ ಬಾಯಿಯಿಂದ ಉಸಿರಾಡಬೇಡಿ. ನೀರು ಕುಡಿಯಬೇಕೆನಿಸಿದರೆ ತಕ್ಷಣ ನೀರು ಕುಡಿಯದೇ ಸ್ವಲ್ಪ ವಿಶ್ರಾಂತಿ ಪಡೆದು ನಂತರ ಒಂದೊಂದೇ ಗುಟುಕು ನೀರು ಕುಡಿಯಿರಿ.
  • ನಡೆಯುವಾಗ ಶರೀರದ ಭಂಗಿ ಚೆನ್ನಾಗಿರಬೇಕು. ನೆಟ್ಟಗೆ ನಡೆಯಬೇಕು. ಬೆನ್ನನ್ನು ಬಾಗಿಸಿ ನಡೆಯಬಾರದು. ನಡೆಯುವ ಭಂಗಿ ಸರಿಯಿಲ್ಲದೆ ಬೆನ್ನು ನೋವು ಅಥವಾ ಕಾಲು ನೋವು ಆರಂಭವಾಗಬಹುದು. ನಡೆಯುವ ಆ ಪ್ರಕ್ರಿಯೆಯಲ್ಲಿ ಕಾಲಿನ ಹಿಮ್ಮಡಿ, ಹೆಬ್ಬೆರಳು ಎಲ್ಲವೂ ಸರಿಯಾಗಿ ಕೆಲಸ ಮಾಡಬೇಕು. ಕಾಲನ್ನು ಚಪ್ಪಟೆಯಾಗಿಸಿ ಎಳೆಯುತ್ತ ನಡೆಯಬಾರದು. ಎದೆಯನ್ನು ಅಗಲಿ ನಡೆದರೆ ಶ್ವಾಸಕೋಶದ ಕ್ರಿಯೆ ಚೆನ್ನಾಗಿ ನಡೆಯುತ್ತದೆ.ಶರೀರದ ಭಾರವನ್ನು ಬೆರಳುಗಳಿಂದ ತಾಕಿಸಿ, ಅನಂತರ ಪಾದಗಳಿಗೆ ವರ್ಗಾಯಿಸಬೇಕು.
  • ತಜ್ಞರು ಹೇಳುವ ಪ್ರಕಾರ, ನಿತ್ಯದ ನಡಿಗೆಯಲ್ಲಿಯೂ ಈ ಕೆಲವು ತಪ್ಪುಗಳಿಂದಾಗಿ ನಿಮ್ಮ ನಡಿಗೆಯಿಂದ ಆಗುವ ಪ್ರಯೋಜನ ಕಡಿಮೆ:
  • ಕಾಲಿನ ಮಾಂಸಖಂಡಗಳನ್ನು ಬಿಗಿ ಹಿಡಿದು ನಡೆಯಬಾರದು.
  • ಮೊಣಕಾಲನ್ನು ಪ್ರೀಯಾಗಿ ಆಡಿಸಬೇಕು.
  • ಕೈಗಳನ್ನು ತೂಗಾಡಿಸುತ್ತ ನಡೆಯಬೇಕು.ಈ ರೀತಿಯ ನಡಿಗೆ ಆರಾಮದಾಯಕ ಮತ್ತು ಸಮರ್ಪಕ. ಸುಮ್ಮನೇ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯಬೇಡಿ.
  • ಭುಜಗಳು ಫ್ರೀಯಾಗಿ ಆಡಬೇಕು.ಕೈಗಳ ಬೆರಳನ್ನು ಸ್ವಲ್ಪಮಟ್ಟಿಗೆ ಮಾತ್ರ ಮಡಚಿರಬೇಕು
  • ಪಾದಗಳಿಗೆ ಸರಿ ಹೊಂದುವ ಶೂಗಳನ್ನು ಧರಿಸಿ ವಾಕಿಂಗ್ ಮಾಡಬೇಕು.
  • ರನ್ನಿಂಗ್ ಅಥವಾ ವಾಕಿಂಗ್ ಹೋಗುವ ಮೊದಲು ಹೆಚ್ಚಾಗಿ ಏನು ತಿನ್ನಬೇಡಿ. ಹೆಚ್ಚಾಗಿ ತಿಂದರೆ ಓಡುವ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ.
  • ರನ್ನಿಂಗ್ ಮತ್ತು ವಾಕಿಂಗ್ ಅಥವಾ ವ್ಯಾಯಾಮ ಮಾಡುವಾಗ ನಿಮ್ಮ ದಿನನಿತ್ಯದ ಕರ್ಮಗಳನ್ನು ಮುಗಿಸಿಕೊಂಡು ಹೋಗುವುದು ಉತ್ತಮ.

ಪ್ರಕಾಶ್ ತದಡಿಕರ್
ಕೆಎಂಟಿಸಿ (ಇಂಡಿಯ) ಪ್ರೈ.ಲಿ., `ಆಂಕರೇಜ್’ ಶಿಪ್ ಏಜೆಂಟ್ಸ್ ಆವರಣ,
1ನೇ ಮಹಡಿ, ಯೂನಿಟ್ ನಂ. 112, ಪ್ಲಾಟ್ ನಂ. 02, ಸೆಕ್ಟರ್ 11, ದ್ರೋಣಗಿರಿ ನೋಡ್,
ಜೆಎನ್‍ಪಿಟಿ ಟೌನ್‍ಶಿಪ್, ಯುಆರ್‍ಎಎನ್
ನವಿ ಮುಂಬೈ 400707, ಮಹಾರಾಷ್ಟ್ರ, ಮೊ.: 9821713603

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!