ತಂಬಾಕು, ಗುಟ್ಕಾ ಎಂಬ ವಿಷದ ಗುಟುಕು ನಮಗೇಕೆ ಬೇಕು???

ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ ||

cancerdayಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ.ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ.ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ  ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ ನಿಯಮ. ಹಾಗೆ ಜೀವಿಸಲು ನಮ್ಮ ಶರೀರ ಸದಾ ಆರೋಗ್ಯವಾಗಿ ಇರಬೇಕು.ಮನುಷ್ಯ ವಿಚಿತ್ರ ಪ್ರಾಣಿ ಅಲ್ಲವೇ??ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಬೀಡಿ ಸಿಗರೇಟ್ ,ಗುಟ್ಕಾ ಸಹಿತ ಇತರ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಾಗಿಲ್ಲ.ತನ್ನನ್ನು ಕೊಲ್ಲುತ್ತದೆ ಎಂದು ಗೊತ್ತಿದ್ದರೂ ಹೊಗೆಸೊಪ್ಪು ಗುಟಕಾ ಸೇವಿಸುತ್ತಾನೆ.ಹೌದು!ಈ ಸೃಷ್ಟಿಯ ಪ್ರತಿಯೊಂದು ವಸ್ತುವನ್ನೂ  ಉಪಯೋಗಿಸುವ ಹಂಬಲ ನಮಗಿದೆ.ಆದರೆ ಪ್ರತಿಯೊಂದು ವಸ್ತುಗಳನ್ನು ಹಿತ ವಿತವಾಗಿ ಬಳಸಿದರೆ ಮಾತ್ರ ಅದು ದೇಹಕ್ಕೆ ಒಳ್ಳೆಯದು.ಮಿತಿಮೀರಿ ಬಳಸಿದರೆ ಆ ವಸ್ತು ಕೂಡ ವಿಷವಾಗಿ ಪರಿಣಮಿಸುತ್ತದೆ. ಇಂದು ಅಧುನಿಕತೆಯು ಅತ್ಯಂತ  ವೇಗದಲ್ಲಿ ಬೇಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯವೇ.ಆದರೆ ಈ ತೀವ್ರಗತಿಯ  ಅಧುನಿಕತೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ಅಧುನಿಕತೆಯ ಬಿಸಿ ಹೆಚ್ಚು ತಟ್ಟಿ ನಮ್ಮನ್ನು ದುಶ್ಚಟಗಳಿಗೆ ದಾಸರಾಗುವಂತೆ ಮಾಡಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಅಧುನಿಕ ವೈಭವ ಜೀವನ ಶೈಲಿಯಾದ ಸಿಗರೇಟ್, ಗುಟ್ಕಾ,ತಂಬಾಕು.ಮದ್ಯಪಾನ ಸೇವನೆಯ ಚಟಗಳಿಗೆ ಮಾರಿಹೋದ ನಾವು ನಮ್ಮ ಸ್ವಂತಿಕೆ ,ಸಾಮರ್ಥ ಕಳೆದುಕೊಳ್ಳುತ್ತಿದ್ದೇವೆ.

tobaccoಮುಂಜಾನೆ ಎದ್ದು ಹಲ್ಲುಜ್ಜಿ ಸ್ನಾನ ಮಾಡಿ, ಪೂಜೆ ಪುರಸ್ಕಾರಗಳಲ್ಲಿ ತೊಡಗುತ್ತಿದ್ದ ಜನ ಇಂದು ಸ್ನಾನ ಮಾಡುವುದಿರಲಿ ಮುಖ ಕೂಡ ತೊಳಿಯದೆ ಗುಟ್ಕಾ ,ಸಿಗರೇಟ್, ಮದ್ಯಪಾನ ಮುಂತಾದ ದುಶ್ಚಟಗಳಿಂದ ತಮ್ಮ ದಿನನಿತ್ಯದ ಬದುಕನ್ನು ಆರಂಭಿಸುತ್ತಾರೆ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಬೇಕಾದ ಯುವಜನತೆ ಸಿಗರೇಟ್,ಬೀಡಿ,ಗುಟಕಾ,ತಂಬಾಕು ಮುಂತಾದವುಗಳ ದುಶ್ಚಟಗಳಿಂದಾಗಿ  ದೈಹಿಕ, ಮಾನಸಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ.ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜ್ ,ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು  ಮೋಜು ಫ್ಯಾಸನ್ ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ,ಗುಟ್ಕಾ  ತಿನ್ನುವುದು,ಸಿಗರೇಟ್ ಸೇದುವುದು ನಿಜಕ್ಕೂ ಅತ್ಯಂತ ಭಯಾನಕ ಸಂಗತಿ.ಈ ದುಶ್ಚಟಗಳಿಂದಾಗಿ  ಒತ್ತಡ ಖಿನ್ನತೆ,ಚಿಂತೆ ಗೊಂದಲಕ್ಕೆ ಒಳಗಾಗಿ ನೆಮ್ಮದಿ, ಬೌದ್ಧಿಕ ವಿಕಾಸ ,ಸ್ಮರಣಶಕ್ತಿ,ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ.ಗುಟ್ಕಾ,ಧೂಮಪಾನದ ಅಭ್ಯಾಸಗಳು ಯುವಜನತೆಯ ಆರೋಗ್ಯವನ್ನು ಹದಗೆಡಿಸುತ್ತಿದೆ.

ಯುವಜನತೆ ಗುಟ್ಕಾ,ಬೀಡಿ ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳಿಗೆ ದಾಸರಾಗಿದ್ದು ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ.ತಂಬಾಕಿನಲ್ಲಿ ಹೆಚ್ಚು ಹಾನಿಕಾರಕ ರಾಸಾಯನಿಕಗಳಿದ್ದು ಗುಟಕಾ,ಬೀಡಿ,ಸಿಗರೇಟ್ ಸೇವಿಸುವುದರಿಂದ  ಹತ್ತು ಹಲವಾರು ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ವೈದ್ಯಕೀಯ ಮೂಲಗಳ ಪ್ರಕಾರ  ಶ್ವಾಸಕೋಶ,ಅಡ್ರಿನಲ್ ಗ್ರಂಥಿ,ಹೊಟ್ಟೆ ಮೂಗು,ಮೂತ್ರಚೀಲ,ಮೇದೋಜೀರಕ ಗ್ರಂಥಿ,ಪಿತ್ತಜನಕಾಂಗ,ಮೂತ್ರಜನಕಾಂಗ, ಬಾಯಿ,ಗಂಟಲು,ಅನ್ನನಾಳದ ಕ್ಯಾನ್ಸರ್ ತಂಬಾಕು ವ್ಯಸನಿಗಳಲ್ಲಿ ಕಂಡು ಬರುತ್ತವೆ. ನಮ್ಮ ಸಮಸ್ಸೆಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದೈಹಿಕ, ಮಾನಸೀಕ ದುಷ್ಪರಿಣಾಮಗಳು ಮುಂಚೂಣಿಯಲ್ಲಿದ್ದು ಈ ವಿಷಕಾರಿ  ಮೃತ್ಯು ಚುಂಬನ ನಮ್ಮನ್ನು ಬಲಿಕೊಡುತ್ತಿದೆ.

tobaccoಒಂದು ಕಡೆ ನಗರೀಕರಣದಿಂದ ಪಟ್ಟಣಗಳು ಬೆಳೆಯುತ್ತಿದ್ದಂತೆ ಪಾನ್ ಬೀಡಾ, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳು ದೊಡ್ಡ ಸಮಸ್ಯೆಯನ್ನೆ ಸೃಷ್ಟಿಸಿವೆ.ನಗರದ ಫುಟ್ಪಾತ ಗೋಡೆಗಳ ಮೇಲೆ, ಸರಕಾರಿ ಕಟ್ಟಡ-ಕೊಠಡಿಗಳ ಮೇಲೆ ಕಟ್ಟಡದ ಮಹಡಿಯ ಮೆಟ್ಟಿಲುಗಳ  ಮೂಲೆಗಳಲ್ಲಿ,ವಾಸಿಸುವ  ಬಿಲ್ಡಿಂಗ ಗಳ ಮೆಟ್ಟಿಲುಗಳ ಮೂಲೆಗಳಲ್ಲಿ ,ರಸ್ತೆಯ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಎಲೆ,ಅಡಕಿ ತಂಬಾಕು ಗುಟ್ಕಾ ತಿಂದು ಉಗುಳುವ ಮೂಲಕ ಗೋಡೆಗಳಿಗೆ ಕೆಂಪು ಬಣ್ಣ ಬಳಿದು ಗಲಿಜು ಮಾಡುತ್ತಿದ್ದಾರೆ.ಸಾರ್ವಜನಿಕರು ಕಂಡಕಂಡಲ್ಲಿ ಉಗುಳಿದ್ದು ಸಹಿಸಲಾರದ ಅಸಹ್ಯಕರ ವಾತಾವರಣವನ್ನು ನಿರ್ಮಾಣಮಾಡಿದೆ. ಮುಂಬಯಿಯ  ಅನೇಕ ಸರಕಾರಿ ಕಚೇರಿಯ ಕಟ್ಟಡಗಳಲ್ಲಿ   ರಹವಾಸಿ ಸೊಸೈಟಿಯಲ್ಲಿ ಜನ ಉಗುಳಬಾರದು ಎಂಬ ಕಾರಣದಿಂದ ದೇವರ ಫೋಟೊಗಳನ್ನು ಹೊಂದಿದ ಟೈಲ್ಸ್ ಗಳನ್ನು ಅಂಟಿಸಿದ್ದಾರೆ.ಆದರೂ ಹುಟ್ಟುಗುಣ ಸುಟ್ಟರೂ ಹೋಗದು ಎಂಬಂತೆ ಜನ ಅದಕ್ಕೂ ಹೆದರದೇ ಉಗುಳುವ ಚಾಳಿಯನ್ನು ಬಿಡದೇ ಅಲ್ಲೂ ಉಗುಳುತ್ತಿದ್ದು ಉಗುಳಿದ ಮೇಲೆ ದೇವರೇ ಕ್ಷಮಿಸು ಅಥವಾ ಸಾರಿ  ಅನ್ನುತ್ತಿರುವುದು ಸಾಮಾನ್ಯ.ಹೀಗೆ  ಗುಟ್ಕಾ,ಪಾನ ಬೀಡ ತಿಂದು ಮುಂಬಯಿ  ನಗರದಲ್ಲಿ ಕಂಡ ಕಂಡಲ್ಲಿ ಉಗುಳುವವರಲ್ಲಿ ಯಾವ ರಾಜ್ಯದವರು ಮುಂಚೂಣಿಯಲ್ಲಿದ್ದಾರೆ ಎಂಬ ಬಗ್ಗೆ  ಅಧ್ಯಯನ ಮಾಡಿದಾಗ ಹೆಚ್ಚು ಕಡಿಮೆ ಎಲ್ಲ ರಾಜ್ಯದವರ ಪಾಲಿದೆ ಅನ್ನುವುದಂತೂ ನಿಜ.

ಅನೇಕ ರಾಜ್ಯ ಸರಕಾರಗಳು ಗುಟ್ಕಾ ಮೇಲೆ ನಿಷೇದ ಹೇರಿರುವುದರಿಂದ ವ್ಯಾಪಾರಿಗಳು  ಗುಟ್ಕಾಗಳನ್ನು ಹೆಚ್ಚಿನ ಲಾಭಗೊಸ್ಕರ ಕದ್ದುಮುಚ್ಚಿ ಹೆಚ್ಚಿನ ಬೆಲೆಗೆ  ಮಾರಾಟಮಾಡುತ್ತಿದ್ದಾರೆ.ಮುಂಬಯಿಯಲ್ಲಿ  ಗುಟ್ಕಾ ನಿಷೇದ ನಂತರವೂ ಚಿಲ್ಲರೆ ಪಾನ್ ಬೀಡಾ ಅಂಗಡಿಗಳಲ್ಲಿ ಇನ್ನೂ ಸಹ ಸಿಗುವ ಗುಟ್ಕಾಗಳನ್ನು ಸಾರ್ವಜನಿಕರು  ಹೆಚ್ಚಿನ ಬೆಲೆ ತೆತ್ತು  ಕೊಂಡುಕೊಂಡು ಜಗಿದು ಉಗುಳಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ.ಇದಲ್ಲದೇ ಗುಟ್ಕಾ ಮೇಲಿನ ನಿಷೇದದಿಂದಾಗಿ ಸಾರ್ವಜನಿಕರು ಚಟ ತೀರಿಸಿಕೊಳ್ಳಲು ಪರ್ಯಾಯವಾಗಿ ತಂಬಾಕು ಪಾನ್ ಗಳ ಮೊರೆ ಹೋಗಿದ್ದು ತಂಬಾಕುಯುಕ್ತ ಪಾನ್ ತಿನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ  360 ಬೀಡಾ ,200 ಬೀಡಾ,ಬಾಬುಲ್ ಬೀಡಾ ಕಶ್ಮೀರಿ ಪಾನ್  ಮುಂತಾದ ವಿಳ್ಯದೆಲೆಗಳ ಪ್ರಕಾರಗಳು ದುಬಾರಿಯಾಗಿ ಬಿಟ್ಟಿವೆ. ಕೆಲವರಂತೂ ನಕಲಿ ಗುಟ್ಕಾ ಮಾರಾಟಮಾಡಿ ಅಧಿಕ ಲಾಭಗಳಿಸುವುದರೊಂದಿಗೆ ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ. ಭಾರತದ ಅನೇಕ ರಾಜ್ಯಗಳಲ್ಲಿ ಗುಟ್ಕಾ ಮತ್ತು ಅದರ ರೂಪಾಂತರ,ಉತ್ಪಾದನೆ, ವಿತರಣೆ ,ಸಂಗ್ರಹಣೆ ಮತ್ತು ಮಾರಾಟ ನಿಷೇದಿಸಿದ್ದರೂ ಸಹ ಗುಟ್ಕಾ ಅಕ್ರಮ ಮಾರಾಟ ಇನ್ನೂ ನಡೆಯುತ್ತಲೇ ಇದೆ.

cancer WHOಗುಟ್ಕಾ,ಬೀಡಿ,ಜರ್ದಾ, ಸಿಗರೇಟ್ ಪಾನ್ ಸೇರಿದಂತೆ ತಂಬಾಕನ್ನು ಬೇರೆ ಬೇರೆ ತೆರನಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಇಡೀ ಪ್ರಪಂಚದಲ್ಲಿ ನಮ್ಮ ದೇಶ  ಎರಡನೇ ಸ್ಥಾನದಲ್ಲಿದ್ದು ಪ್ರತೀ ವರ್ಷ ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಉತ್ಪನ್ನಗಳ ನೇರ ಸೇವನೆಯಿಂದ ಕ್ಯಾನ್ಸರ್ ಮತ್ತು ಇತರೆ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ವರದಿಯು ನಮ್ಮನ್ನು ಆತಂಕಕ್ಕೆ ಈಡುಮಾಡಿದೆ.ತಂಬಾಕು ಉತ್ಪನ್ನಗಳ ಸೇವನೆಯು ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಮಾರಕ ಪರಿಣಾಮವನ್ನುಂಟುಮಾಡುತ್ತದೆ.ವೈದ್ಯರ ಪ್ರಕಾರ  ಕುಟ್ಕಾ ಮಿಶ್ರಣವು 4000 ರಾಸಾಯನಿಕಗಳ ಸಂಯೋಜನೆಯಾಗಿದ್ದು ಈ ಮಿಶ್ರಣದಲ್ಲಿ  ಕನಿಷ್ಠ 40 ಕ್ಯಾನ್ಸರ್ ಜನಕ ಸಂಯುಕ್ತಗಳಿವೆ. ವಿಪರೀತ ಗುಟ್ಕಾ ಸೇವನೆಯಿಂದ ಅಂತಿಮವಾಗಿ ಹಸಿವನ್ನೇ  ಕಳೆದುಕೊಳ್ಳುವಂತಾಗುತ್ತದೆ ಎಂದು ವ್ಯಸನಿಗಳೇ ಹೇಳುತ್ತಾರೆ.    

ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS ) 2016- 2017 ರ ಎರಡನೇ ಸುತ್ತಿನ ಸಮೀಕ್ಷೆ ವರದಿ ಪ್ರಕಾರ ಮಹಾರಾಷ್ಟ್ರದಲ್ಲಿ 6.0% ರಷ್ಟು ಪುರುಷರು,  1.4% ಮಹಿಳೆಯರು ಮತ್ತು  3.8% ರಷ್ಟು  ಎಲ್ಲಾ ವಯಸ್ಕರು ಪ್ರಸ್ತುತ ಹೊಗೆ ತಂಬಾಕು ಬಳಸುತ್ತಾರೆ.ಹಾಗೂ 31.7%  ರಷ್ಟು  ಪುರುಷರು, 16.6% ಮಹಿಳೆಯರು ಮತ್ತು  24.4% ರಷ್ಟು  ಎಲ್ಲಾ ವಯಸ್ಕರು ಧೂಮಪಾನವಿಲ್ಲದ ಹೊಗೆರಹಿತ ತಂಬಾಕು ಬಳಸುತ್ತಾರೆ. ಗುಟ್ಕಾ ಮತ್ತು ಖೈನಿ ಇವುಗಳು ಸಾಮಾನ್ಯವಾಗಿ ಬಳಸುವ ಎರಡು ತಂಬಾಕು ಉತ್ಪನ್ನಗಳಾಗಿದ್ದು, ಮಹಾರಾಷ್ಟ್ರದಲ್ಲಿ   15.5% ವಯಸ್ಕರು ಖೈನಿ ಮತ್ತು 8.6% ವಯಸ್ಕರು ಗುಟ್ಕಾ ಬಳಸುತ್ತಾರೆ.15-17 ವಯಸ್ಸಿನವರಲ್ಲಿ ತಂಬಾಕು ಬಳಕೆಯು ವ್ಯಾಪಕವಾಗಿ ಹೆಚ್ಚಾಗಿದ್ದು ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS 1 ) ಒಂದನೇ ಸುತ್ತಿನ ಸಮೀಕ್ಷೆಯಲ್ಲಿ  2.9% ಇದ್ದುದು, ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS 2 ) ಯ ಎರಡನೇ ಸುತ್ತಿನ ಸಮೀಕ್ಷೆ ಯಲ್ಲಿ  5.5% ರಷ್ಟು ಹೆಚ್ಚಾಗಿದೆ.

ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡುವುದು, ಬೀಡಿ ಮತ್ತು ಗುಟ್ಕಾ ಸೇವನೆ ಮಾಡುವುದು ಇವು ತಂಬಾಕು  ಸೇವನೆ ಮಾಡುವ ವಿಧಾನಗಳಾಗಿದ್ದು, ಕರ್ನಾಟಕದಲ್ಲಿ ಶೇ.9.4 ರಷ್ಟು ವಯಸ್ಕರು ಎಲೆ ಅಡಿಕೆ ಜತೆಗೆ ತಂಬಾಕು ಸೇವನೆ ಮಾಡಿದರೆ ಶೇ.5.9 ರಷ್ಟು ಜನರು ಬೀಡಿ ಸೇದುವುದು ಹಾಗೂ ಗುಟ್ಕಾ ಸೇವನೆ ಮಾಡುತ್ತಿದ್ದಾರೆ.ಕರ್ನಾಟಕದಲ್ಲಿ ತಂಬಾಕು ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗಿದೆ.ಇ-ಸಿಗರೇಟು ಮತ್ತು ಗುಟ್ಕಾ ನಿಷೇಧಿಸುವುದು ಸೇರಿದಂತೆ ತಂಬಾಕು ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿದೆ.ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ  COTPA-2003(ಕೋಟ್ಪಾ) ಜಾರಿಗೊಳಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯವು ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಬೀಡಿ, ಸಿಗರೇಟು,ಜಗಿಯುವ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿದ  ವ್ಯಕ್ತಿಯು ಕೋಟ್ಪಾ ಕಾಯ್ದೆ 2003 ರ ಕಲಂ (20) ಅಡಿಯಲ್ಲಿ ದಂಡನೆಗೆ ಒಳಗಾಗುತ್ತಾರೆ.
ಎರಡನೇ ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ  2016-17 ಇದರ ಪ್ರಕಾರ ಜಿಎಟಿಎಸ್ ೧  ರ ಪ್ರಕಾರ ಕರ್ನಾಟಕದಲ್ಲಿ 2009-10 ರ ರಾಜ್ಯದಲ್ಲಿ ಶೇ.28.2 ರಷ್ಟಿದ್ದ ತಂಬಾಕು ಬಳಕೆದಾರರ ಪ್ರಮಾಣ ಜಿಎಟಿಎಸ್ 2 ಅವಧಿಯಲ್ಲಿ ಶೇ.22.8 ಕ್ಕೆ ಇಳಿದಿದೆ. ಈ ಅವಧಿಯಲ್ಲಿ ವಯಸ್ಕರ ಧೂಮಪಾನಿಗಳ ಸಂಖ್ಯೆಯು ಶೇ.11.9 ರಿಂದ ಶೇ.8.8 ಕ್ಕೆ ಇಳಿದಿದ್ದರೆ, ಜಗಿಯುವ ತಂಬಾಕು ಸೇವನೆ ಮಾಡುವವರ ಸಂಖ್ಯೆ ಶೇ.19.4 ರಿಂದ ಶೇ.16.3 ಕ್ಕೆ ಇಳಿದಿದೆ.ಗ್ಯಾಟ್ಸ್-2 ಅವಧಿಯಲ್ಲಿ 15-17 ರ ವಯೋಮಾನದ ಯುವಕರಲ್ಲಿ ತಂಬಾಕು ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಜಿಎಟಿಎಸ್1 ರಲ್ಲಿ ಶೇ.6.8 ರಷ್ಟು ತಂಬಾಕು ಸೇವನೆ ಇದ್ದ ಪ್ರಮಾಣ ಜಿಎಟಿಎಸ್2 ಅವಧಿಯಲ್ಲಿ ಶೇ. 3.7 ಕ್ಕೆ ಕುಸಿದಿದೆ.ರಾಜ್ಯದಲ್ಲಿ ನಿರಂತರ ಜಾಗೃತಿ ಫ‌ಲವಾಗಿ  ವಯಸ್ಕರರಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಹದಿಹರೆಯದವರು ತಂಬಾಕು ಬಳಸುತ್ತಾರೆ.ಪ್ರತಿ ಮೂವರು ವಯಸ್ಕರಲ್ಲಿ ಒಬ್ಬರು ಹಾಗೂ ಪ್ರತಿ ಆರು ವಯಸ್ಸಾದ ಮಹಿಳೆಯರಲ್ಲಿ ಒಬ್ಬರು ತಂಬಾಕು ಬಳಸುತ್ತಾರೆ.ಗುಟ್ಕಾ ಸೇವಿಸುವರಲ್ಲಿ  ಮಹಾರಾಷ್ಟ್ರದಲ್ಲಿ 60 ಪ್ರತಿಶತದಷ್ಟು ಜನರು 14-16  ವರ್ಷ ವಯಸ್ಸಿನವರಾಗಿದ್ದಾರೆ.ಮಹಾರಾಷ್ಟ್ರ ಸರ್ಕಾರ 2008 ಮೇ 20  ರಿಂದ   ಖೈನಿ ಮತ್ತು ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಮೇಲೆ ನಿಷೇದ ಜಾರಿಗೊಳಿಸಿದೆ.ರಾಜ್ಯದ FDA( ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಇಲಾಕೆಯು 2012 ರಲ್ಲಿ ಕಟ್ಟುನಿಟ್ಟಾಗಿ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ತಯಾರಿಸುವ ಮತ್ತು ಮಾರಾಟಮಾಡುವದನ್ನು ನಿಷೇದಿಸಿದೆ. ಅದರೂ ಸಹ ಇನ್ನೂ ರಾಜ್ಯದಾದ್ಯಂತ ಖೈನಿ ಮತ್ತು ಗುಟ್ಕಾ  ಮುಂತಾದ ನಿಷೇದಿತ ತಂಬಾಕು ಉತ್ಪನ್ನಗಳು ವ್ಯಾಪಕವಾಗಿ ಬಳಸಲ್ಪಡುತ್ತಿವೆ.ತಂಬಾಕು ಸೇವನೆಯ ಸಮೀಕ್ಷೆಯ ಪ್ರಕಾರ ಪಾನ್ ಮಸಾಲಾವನ್ನು ಸೇವಿಸುವ ವಿಷಯದಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು.  43%  ರಷ್ಟು ಪುರುಷರು ಮತ್ತು 19%  ರಷ್ಟು ವಯಸ್ಕ ಮಹಿಳೆಯರು ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳಿಗೆ ವ್ಯಸನಿಯಾಗಿರುತ್ತಾರೆ.ಭಾರತದಲ್ಲಿ ಪ್ರತೀ ವರ್ಷ 10 ಲಕ್ಷ ಜನರು ತಂಬಾಕು ಬಳಕೆಯಿಂದ ಸಾವನ್ನಪ್ಪುತ್ತಿದ್ದಾರೆ.ತಂಬಾಕು ಸೇವನೆ ಮತ್ತು ಧೂಮಪಾನವು ಹಲವಾರು ನಮೂನೆಯ ಕ್ಯಾನ್ಸರ್ ಗಳಿಗೆ ಎಡೆಮಾಡಿಕೊಡುತ್ತದೆ. ಕ್ಯಾನ್ಸರಗಳಲ್ಲಿ ಸುಮಾರು 40% ರಷ್ಟು ತಂಬಾಕು ಬಳಕೆಗೆ ಸಂಬಂಧಿಸಿವೆ ಎಂದು ವೈದ್ಯರು ಹೇಳುತ್ತಾರೆ.

ತಂಬಾಕು ಮತ್ತು ನಿಕೋಟಿನ್ ಒಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲಾಗಳು ಕರುಳು, ಶ್ವಾಸಕೋಶ,ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಗೆ ಕಾರಣವಾಗಿದ್ದು ರಾಜ್ಯ ಸರ್ಕಾರ ಗುಟ್ಕಾ  ನಿಷೇದಿಸಿದರೂ  ಮಾರುಕಟ್ಟೆಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾಗಳು ಲಭ್ಯವಿರುವುದರಿಂದ ಗುಟ್ಕಾ ಮಾರಾಟಗಾರರಿಗೆ ಕಾನೂನಿನ  ಬಿಸಿ  ಹಾಗೂ ಗುಟ್ಕಾ ಪ್ರೀಯರಿಗೆ ನಿಷೇದದ ಅನುಭವ ಇನ್ನೂ ಆಗಿಲ್ಲ ಅನಿಸುತ್ತಿದೆ.ತಂಬಾಕು ಗುಟ್ಕಾ ಸೇವನೆ ಅಪಾಯಕಾರಿ ವಿಷದ ಗುಟುಕು  ಎಂಬುದನ್ನೂ ಅರಿತರೂ ಸಹ ಜನರು ಮೃತ್ಯುವನ್ನು ಅಪ್ಪಿಕೊಳ್ಳುತ್ತಲೇ ಇದ್ದಾರೆ.ತಂಬಾಕು ಗುಟ್ಕಾ ಸೇವನೆಯಿಂದ ದೊರೆಯುವ ಅತ್ಯಲ್ಪ ಆನಂದ ಭಾವ ಕ್ಕಾಗಿ ಜೀವನನ್ನೇ ಬಲಿಕೊಡುತ್ತಿದ್ದಾರೆ.

ಬಾಯಿ ಕ್ಯಾನ್ಸರ್ ನಿಂದ ಬದುಕುಳಿದಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ ಅವರು ಇತ್ತಿಚ್ಚೆಗೆ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತನಾಡುತ್ತ  40 ವರ್ಷಗಳ ಹಿಂದೆ ಹೊಗೆಸೊಪ್ಪು ಮತ್ತು ಸುಪಾರಿಯ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯಾರಾದರೂ ನನಗೆ ಮುನ್ನೆಚ್ಚರಿಕೆ ನೀಡಿದ್ದಲ್ಲಿ  ಚೆನ್ನಾಗಿತ್ತು, ತಂಬಾಕು ಬಳಕೆಯಿಂದ  ಬಾಯಿಯನ್ನು ಭಾದಿಸಿದ ಕ್ಯಾನ್ಸರ್ ತನಗೆ ತೀವ್ರವಾದ ತೊಂದರೆ ನೀಡಿದೆ,ಇದರಿಂದ ಪಾರಾಗಲು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಯಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಲ್ಲು ಕಿತ್ತಿರುವುದರಿಂದಾಗಿ ಬಾಯಿಯನ್ನು ದೊಡ್ಡದಾಗಿ ತೆಗೆಯಲು ಆಹಾರವನ್ನು ನುಂಗಲು ಮಾತನಾಡಲು ಅಗುತ್ತಿಲ್ಲ ಎಂದು ಕ್ಯಾನ್ಸರ್ ನಿಂದ ಹೊರಬಂದು ಬದುಕುಳಿದ ಕಹಿ ಅನುಭವವನ್ನು  ಹಂಚಿಕೊಂಡರು.ಹೊಗೆಸೊಪ್ಪು ಮತ್ತು ಸುಪಾರಿಯ  ಬಳಕೆಯಿಂದಾಗಿ ಈ ಕಾಯಿಲೆಗೆ ಈಗಲೂ  ಲಕ್ಷಾಂತರ ಭಾರತೀಯರು ಬಲಿಯಾಗುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತೇನೆ ಎಂದ ಅವರು 2022 ರೊಳಗೆ ಬಾಯಿಯ ಕ್ಯಾನ್ಸರ್ ನಿರ್ಮೂಲನೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿರುವ  ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಮಿಶನ್ ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಮಾನವ ಜೀವನ ದೇವರು ಕರುಣಿಸಿದ ಅಮೂಲ್ಯ ಕೊಡುಗೆಯಾಗಿದ್ದು ಹುಟ್ಟು ಸಾವುಗಳ ನಡುವೆ ಇರುವ ಜೀವನದಲ್ಲಿ  ಜೀವಿಸುವುದು ಮುಖ್ಯವಲ್ಲ ನಾವು ಯಾವರೀತಿ ಜೀವಿಸುತ್ತೇವೆ ಅನ್ನುವುದೇ ಮುಖ್ಯ.ಅನಾದಿಕಾಲದಿಂದಲೂ ರೋಗಗಳು ಮನುಷ್ಯರನ್ನು ಕಾಡುತ್ತಲೇ ಇವೆ.ತಂಬಾಕು ಸೇವನೆಯಿಂದ ಜನರು ಅನೇಕ ಗಂಭೀರವಾದ ರೋಗಗಳಿಗೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ  ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಆನಂದಭಾವವನ್ನು ಮೂಡಿಸುವ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು  ದೇಹ ಸೇರುವಾಗ ವಿಷವಾಗಿ ಸೇರುತ್ತದೆ.ಪ್ರತೀ ಆರು ಸೆಕೆಂಡ್ ಗೆ ಒಬ್ಬರಂತೆ ತಂಬಾಕು ಉತ್ಪನ್ನ ಸೇವಿಸುವುದರಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಕಿಅಂಶ ವಿಪರೀತ ಆತಂಕ ಮೂಡಿಸಿದೆ.ಭಾರತದಲ್ಲಿ ಪ್ರತಿ ವರ್ಷ,  932600 ಕ್ಕೂ ಹೆಚ್ಚು ಜನರು ತಂಬಾಕಿನಿಂದ ಉಂಟಾಗುವ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.ದೇಶದಲ್ಲಿ ಇಂದಿಗೂ , 625000 ಕ್ಕೂ ಹೆಚ್ಚು ಮಕ್ಕಳು (10-14 ವರ್ಷಗಳು) ಮತ್ತು 89486000 ವಯಸ್ಕರು (15+ ವರ್ಷ ವಯಸ್ಸಿನವರು) ಪ್ರತಿದಿನ ತಂಬಾಕು ಸೇವನೆಯನ್ನು ಮುಂದುವರಿಸಿದ್ದಾರೆ. ಇದು ಗಂಭೀರ ಸಾರ್ವಜನಿಕ ಆರೋಗ್ಯ ಬೆದರಿಕೆಯ ಸಂಕೇತವಾಗಿದೆ ಎಂದು ಜಾಗತಿಕ ಅಧ್ಯಯನವೊಂದು ಹೇಳಿದೆ.
ಗುಟ್ಕಾ ತಂಬಾಕು ಸೇವಿಸುವುದರಿಂದ ಸಾವು ಖಚಿತ ವಾಗಿರುವುದರಿಂದ ಈ ಹವ್ಯಾಸ ಬಿಡಲೇಬೇಕು.ಹೌದು.ಸಾವು ಎಲ್ಲರಿಗೂ ಬರುತ್ತದೆ.ಆದರೆ ಗುಟ್ಕಾ ತಂಬಾಕು ಬರೀ ಸಾವನ್ನು ತರದೇ ತುಂಬಾ ಕಷ್ಟಕರವಾದ ನೋವಿನ ನರಕವನ್ನು ಸೃಷ್ಟಿಮಾಡುತ್ತದೆ.ಈ ನೋವನ್ನು ಸಹಿಸಲಾರದೇ ರೋಗಿ ಸಾವು ಬೇಗ ಬರಲಿ ಎಂದು ಬಯಸುತ್ತ  ನೋವಿನಿಂದ ನರಳಿ ನರಳಿ ಸಾವನ್ನಪ್ಪುತ್ತಿದ್ದಾನೆ.ಹೀಗೆ ಹಂತಹಂತವಾಗಿ ಸಾವಿನೆಡೆಗೆ ಒಯ್ಯುವ , ನರಳಿಸಿ ನರಳಿಸಿ ಸಾಯಿಸುವ ಗುಟ್ಕಾ ತಂಬಾಕು ಸಹವಾಸ ನಮಗೇಕೆ ಬೇಕು???

ಜಾಗತಿಕ ತಂಬಾಕು ಅಟ್ಲಾಸ್ ನ (Global Tobacco Atlas)ಇತ್ತೀಚಿನ ವರದಿಯ ಪ್ರಕಾರ ತಂಬಾಕು ಸೇವನೆಯಿಂದ ಭಾರತದಲ್ಲಿ 17,000  ಕ್ಕಿಂತ ಹೆಚ್ಚಿನ ಜನರು ಪ್ರತಿ ವಾರ  ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದಿಗ್ಬ್ರಮೆ ಹುಟ್ಟಿಸದೇ ಇರದು.ಭಾರತದಲ್ಲಿ  10 ರಿಂದ  14 ವರ್ಷ ವಯಸ್ಸಿನ ಸುಮಾರು 625,000 ಮಕ್ಕಳು ಧೂಮಪಾನ ವ್ಯಸನಿಗಳಾಗಿದ್ದಾರೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿ (ACS) ಮತ್ತು ಯುಎಸ್ ಮೂಲದ ವೈಟಲ್ ಸ್ಟ್ರಾಟಜೀಸ್ ತಯಾರಿಸಿದ ತಂಬಾಕು ಅಟ್ಲಾಸ್ ಪ್ರಕಾರ ಭಾರತದಲ್ಲಿ  15 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ 103 ಮಿಲಿಯನ್ ವಯಸ್ಕರು ದಿನನಿತ್ಯವೂ ಧೂಮಪಾನ ಮಾಡುತ್ತಿದ್ದಾರೆ.ಭಾರತದಲ್ಲಿ ಧೂಮಪಾನದ ವೆಚ್ಚ 1,818,691 ಮಿಲಿಯನ್ ಆಗಿದೆ . 429,500  ಹುಡುಗರು ಮತ್ತು  195,500  ಹುಡುಗಿಯರು  ತಂಬಾಕು ಬಳಸುತ್ತಿದ್ದಾರೆ ಎಂಬುದು ನಿಜಕ್ಕೂ ಅಘಾತಕಾರಿ ವರದಿ.ಪುರುಷರು  ಮಹಿಳೆಯರಿಗಿಂತ ಹೆಚ್ಚು  ಕ್ರಮವಾಗಿ  90 ಮಿಲಿಯನ್ ಮತ್ತು 13 ಮಿಲಿಯನ್ ಸಂಖ್ಯೆಯಲ್ಲಿ  ದಿನನಿತ್ಯ ಧೂಮಪಾನ ಮಾಡುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿ ಅಂಶ ಬೆಳಕಿಗೆ ಬಂದಿದೆ.ಧೂಮಪಾನಕ್ಕೆ ದಾಸರಾಗಿರುವವರು ಈ ದುಷ್ಚಟವನ್ನು ಹೀಗೇ ಮುಂದುವರಿಸಿದರೆ ಸಾಯುವವರ ಸಂಖ್ಯೆ ಮುಂದಿನ ನಾಲ್ಕು ದಶಕಗಳಲ್ಲಿ ಶರವೇಗದಲ್ಲಿ ಹೆಚ್ಚುತ್ತದೆ.

ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ, ವಿಪರೀತ ಒತ್ತಡದ ಪೈಪೋಟಿಯ ಅನಿಯಂತ್ರಿತ ಯಾಂತ್ರಿಕ ಜೀವನದಿಂದಾಗಿ ಗುಟ್ಕಾ ತಂಬಾಕು ಮುಂತಾದ ದುಶ್ಚಟಗಳಿಗೆ ಯುವಜನತೆ ತುತ್ತಾಗುತ್ತಿದ್ದು ತಂಬಾಕು ಉತ್ಪನ್ನಗಳ ದುರ್ಬಳಕೆಯು ಮನುಕುಲದ ಮೇಲೆ ಮರಣ ಮೃದಂಗ ಬಾರಿಸುತ್ತಿದೆ .ಕಾರಣ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕನೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.ಗುಟ್ಕಾ ತಂಬಾಕು  ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಘೋರ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಿ ಈ ದುಶ್ಚಟವನ್ನು ಬುಡ ಸಮೇತ ಕಿತ್ತೆಸೆಯಬೇಕು.ತಂಬಾಕು ಉತ್ಪನ್ನಗಳ ಬಳಗೆ ಮತ್ತು ಮಾರಾಟಗಳ ಬಗ್ಗೆ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಸಬೇಕು.  ಈ ದೆಶೆಯಲ್ಲಿ  ವೈದ್ಯರು , ಸ್ವಯಂ ಸೇವಾ ಸಂಸ್ಥೆಗಳು ,ಸಂಘ ಸಂಸ್ಥೆಗಳೂ ತಮ್ಮ ಹೊಣೆಗಾರಿಕೆ ಅರಿತು ಸರಕಾರದ ಜೊತೆ ಕೈಜೋಡಿಸಿದಲ್ಲಿ ಆರೋಗ್ಯಪೂರ್ಣ ಸಮಾಜ ಖಂಡಿತ ನಿರ್ಮಾಣವಾಗಲು ಸಾಧ್ಯ.

Prakash tadadikar

Prakash Tadadikar
KMTC (INDIA) PVT. LTD. , ‘ANCHORAGE’ Ship Agents Premises,
1st Floor, Unit no. 112, Plot no.02, Sector 11,  Dronagiri Node ,  JNPT  Township , URAN
Navi Mumbai 400707, MAHARASTRA STATE
M- 9821713603

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!