ಸಿಫಿಲಿಸ್ – ಅತ್ಯಂತ ಪ್ರಮುಖ ಹಳೆಯ ಲೈಂಗಿಕ ಕಾಯಿಲೆ.

ಸಿಫಿಲಿಸ್ (SYPHILIS) ಕಾಯಿಲೆಯು ಲೈಂಗಿಕ ಕಾಯಿಲೆಗಳಲ್ಲಿ ಪ್ರಮುಖವಾದುದು. ಲೈಂಗಿಕ ಕಾಯಿಲೆಗಳು ಹಲವಾರು. ಇವುಗಳು ಸಾಮಾನ್ಯವಾಗಿ ಸಂಭೋಗ ಅಥವಾ ಬೇರೆ ರೀತಿಯ ಲೈಂಗಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಇವುಗಳನ್ನು ಲೈಂಗಿಕವಾಗಿ ಹರಡುವ ಕಾಯಿಲೆಗಳು (Sexually Transmited Disease STD) ಎಂದು ಕರೆಯುತ್ತಾರೆ.

SYPHILISಸಿಫಿಲಿಸ್ ಅತ್ಯಂತ ಪ್ರಮುಖವಾದದ್ದು ಹಾಗೂ ತುಂಬಾ ಹಳೆಯ ಲೈಂಗಿಕ ಕಾಯಿಲೆ. ವಿಶ್ವದಾದ್ಯಂತ 1.2 ಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳುತ್ತವೆ. ಭಾರತದಲ್ಲಿಯೂ ಸಹ ಲಕ್ಷಾಂತರ ಮಂದಿ ಸಿಫಿಲಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ, ಅನಕ್ಷರತೆ, ಲೈಂಗಿಕ ರೋಗಗಳ ಬಗ್ಗೆ ಅರಿವು ಇಲ್ಲದಿರುವುದು. ಮೂಢನಂಬಿಕೆಗಳು, ಬಡತನ, ಬದಲಾಗುತ್ತಿರುವ ನೈತಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳು, ನಗರೀಕರಣ, ಕೆಲಸಕ್ಕಾಗಿ ವಲಸೆ ಹೋಗುವುದು, ಸ್ವೇಚ್ಛಾಚಾರ ಮತ್ತು ವ್ಯಭಿಚಾರಗಳು ಪ್ರಮುಖ ಕಾರಣಗಳು.

ಈ ಕಾಯಿಲೆಯು ಟ್ರಿಪೋನಿಮಾ ಪಾಲಿಡಮ್  ಎಂಬ ಬ್ಯಾಕ್ಟೀರಿಯಾ ಜೀವಿಯಿಂದ (ಕ್ರಿಮಿಯಿಂದ) ಬರುತ್ತದೆ. ಈ ಜೀವಿಯು ಅಂಕುಡೊಂಕಾದ ಆಕಾರದಲ್ಲಿರುತ್ತದೆ. ಈ ಕ್ರಿಮಿಯು ಬಿರುಕು ಬಿಟ್ಟ (ಶಿಶ್ನ) ಚರ್ಮವನ್ನು ಕೊರೆದು ಇಲ್ಲವೇ ಶಿಶ್ನವಿನ ಲೋಳ್ಪರೆಯ ಮೂಲಕ ಯೋನಿ, ಮೂತ್ರನಾಳ, ಗುದ, ಬಾಯಿ, ಇಲ್ಲವೇ ಗಂಟಲನ್ನು ಪ್ರವೇಶಿಸುತ್ತದೆ. ತಾಯಿಗೆ ಈ ರೋಗವಿದ್ದರೆ ಆಕೆಯ ಗರ್ಭದಲ್ಲಿರುವ ಶಿಶುವಿಗೂ ಜನಿಸುವುದಕ್ಕೆ ಮುಂಚೆಯೇ ಬರುತ್ತದೆ.

ರೋಗದ ಲಕ್ಷಣಗಳು ಯಾವುವು? :

ರೋಗದ ಲಕ್ಷಣಗಳನ್ನು ನಾಲ್ಕು ಹಂತಗಳಾಗಿ ವಿಂಗಡಿಸಬಹುದು. ಮೊದಲನೆಯ ಹಂತ, ಎರಡನೆಯ ಹಂತ, ಮೂರನೆಯ ಹಂತ, ನಾಲ್ಕನೆಯ ಹಂತ,

1. ಮೊದಲನೇ ಹಂತ: ರೋಗಾಣು ದೇಹವನ್ನು ಪ್ರವೇಶಿಸಿದ ನಂತರ ಕಾಣುವ ಮೊದಲ ಲಕ್ಷಣವಿದು. ಈ ಲಕ್ಷಣ ರೋಗ ಹರಡುವ 10 ದಿನದೊಳಗೆ ಕಂಡುಬರುತ್ತದೆ. ಕೆಲವು ಸಂದರ್ಭದಲ್ಲಿ 3 ತಿಂಗಳವರೆಗೂ ಲಕ್ಷಣಗಳು ಕಂಡು ಬರದೇ ಹೋಗಬಹುದು. ರೋಗಾಣು ದೇಹ ಪ್ರವೇಶಿಸಿದ ಮೇಲೆ ಜನನೇಂದ್ರಿಯಗಳಲ್ಲಿ ನೋವಿಲ್ಲದ ಗಾಯ (ಹುಣ್ಣು) ಕಂಡು ಬರುತ್ತದೆ. ಇದನ್ನು ಷಾಂಕರ್ ಅಥವಾ ಮೇಹದುಣ್ಣು ಎಂದು ಕರೆಯುತ್ತಾರೆ. ಇದು ಸಂಭೋಗದ ಮೂಲಕ ಹರಡುವುದರಿಂದ ಶಿಶ್ನ ಹಾಗೂ ಯೋನಿ, ಯೋನಿತುಟಿಗಳ ಮೇಲೆ ಗಾಯ ಕಂಡು ಬರುತ್ತದೆ. ಇದು ಚುಂಬನದಿಂದಲೂ, ಸ್ಪರ್ಶದಿಂದಲೂ, ಬಾಯಿ, ತುಟಿಗಳ ಮೇಲೂ, ಇತರ ದೇಹದ ಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಹುಣ್ಣು ಒಂದೇ ಇರುತ್ತದೆ. ಚಿಕಿತ್ಸೆ ಪಡೆಯದಿದ್ದರೂ 2 ರಿಂದ 6 ವಾರಗಳಲ್ಲಿ ತಂತಾನೆ ಮರೆಯಾಗುತ್ತದೆ. ಪುರುಷರಲ್ಲಿ ಗುರುತನ್ನು ಸ್ಪಷ್ಟವಾಗಿ ಕಂಡು ಹಿಡಿಯಬಹುದು. ಆದರೆ ಸ್ತ್ರೀಯಲ್ಲಿ ಕಂಡು ಹಿಡಿಯುವುದು ಕಷ್ಟ.

2. ಎರಡನೆಯ ಹಂತ: ಈ ಹಂತದಲ್ಲಿ ಲಕ್ಷಣಗಳು ರೋಗ ಪ್ರಾರಂಭವಾದ 6 ರಿಂದ 8 ವಾರಗಳ ನಂತರ ಕಂಡುಬರುತ್ತದೆ. ಇದು ಪ್ರಾರಂಭಿಕ ಲಕ್ಷಣದ ಜೊತೆಯಲ್ಲಿಯೇ ಬರಬಹುದು. ಇಲ್ಲವೇ ಬೇರೆ ಕಾಯಿಲೆಗಳನ್ನು ಹೋಲಬಹುದು. ಹಸಿವಾಗದಿರುವುದು, ವಾಂತಿ, ವಾಕರಿಕೆ, ಮಲಬದ್ಧತೆ, ಕೀಲುನೋವು, ಸಂಧಿವಾತ, ಮಾಂಸಖಂಡಗಳಲ್ಲಿ ಅತಿಯಾದ ನೋವು, ಕೆಲವೊಮ್ಮೆ ಜ್ವರವೂ ಕಂಡುಬರುತ್ತದೆ. ಮೈಮೇಲೆ ಗಂಧೆಗಳು ಕಂಡು ಬರುತ್ತವೆ.

3. ಮೂರನೆಯ ಹಂತ: ಈ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ರೋಗದ ತೀವ್ರತೆ ಒಳಗೊಳಗೆ ಹೆಚ್ಚಾಗುತ್ತಿರುತ್ತದೆ. ಇಲ್ಲಿ ಪ್ರಯೋಗಾಲಯದ ಪರೀಕ್ಷೆಗಳಿಂದಲೇ ಮಾತ್ರ ತಿಳಿಯಬಹುದು. ಈ ಹಂತದಲ್ಲಿ ಕಾಯಿಲೆ ಸುಲಭವಾಗಿ ಇತರರಿಗೆ ಹರಡುತ್ತದೆ. ತಾಯಿಯಿಂದ ಮಗುವಿಗೂ, ಬೆಳೆಯುತ್ತಿರುವ ಭ್ರೂಣಕ್ಕೂ ಹರಡುವ ಸಾಧ್ಯತೆಯಿರುತ್ತದೆ.

4. ನಾಲ್ಕನೆಯ ಹಂತ: ಈ ಹಂತದಲ್ಲಿ 3 ಪ್ರಮಾಣದಲ್ಲಿ ರೋಗದ ತೀವ್ರತೆ ಕಂಡು ಬರುತ್ತದೆ.
ಅತ್ಯಲ್ಪ ಪ್ರಮಾಣ: ಇದರಲ್ಲಿ ಅಂದರೆ 3 ರಿಂದ 10 ವರ್ಷಗಳ ಅವಧಿಯಲ್ಲಿ ಕಂಡು ಬರುವುದು. ಇದರಲ್ಲಿ ಚರ್ಮ, ಲೋಳ್ಪೊರೆ, ಮೂಳೆಗಳು, ಕೀಲುಗಳು ಹಾಗೂ ಮಾಂಸಖಂಡಗಳು ತೊಂದರೆಗೊಳಗಾಗುತ್ತವೆ.
ಮಧ್ಯಮ ಪ್ರಮಾಣ: ಇದರಲ್ಲಿ 10 ರಿಂದ 40 ವರ್ಷಗಳಿಂದ ಕಾಯಿಲೆ ಇರುವವರಲ್ಲಿ ಕಂಡು ಬರುತ್ತದೆ. ಇದರಲ್ಲಿ ಹೃದಯ ಮತ್ತು ರಕ್ತ ಪರಿಚಲನಾ ಅಂಗ, ಅದರಲ್ಲೂ ಮಹಾಧಮನಿಯ ಗೋಡೆಗಳು ನಿಶ್ಯಕ್ತಿಗೊಂಡು, ಅದು ಒಡೆದು ತೀವ್ರ ರಕ್ತ ಸ್ರಾವದಿಂದ ಸಾವೂ ಕೂಡ ಸಂಭವಿಸಬಹುದು.
ಅತ್ಯಧಿಕ ಪ್ರಮಾಣ: ಇದು 10 ರಿಂದ 20 ವರ್ಷಗಳ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಕಂಡು ಬರುತ್ತದೆ. ಈ ಹಂತದಲ್ಲಿ ಹುಚ್ಚು ಹುಚ್ಚಾಗಿ ವರ್ತಿಸುವುದು, ಪಾಶ್ರ್ವವಾಯು, ಪಿಟ್ಸ್, ಅರಳು ಮರಳು, ಮಾತನಾಡಲು ಬರೆಯಲು ಆಗದಿರುವುದು, ತಪ್ಪು ನಡವಳಿಕೆಗಳು, ಕಣ್ಣು ಕಾಣದಿರುವುದು, ಕಿವುಡುತನ, ಸ್ಪರ್ಶಜ್ಞಾನವಿಲ್ಲದಿರುವುದು ಇತ್ಯಾದಿ ತೊಂದರೆಗಳು ಕಂಡು ಬರುತ್ತವೆ.

ಹುಟ್ಟಿನಿಂದ ಬಂದ ಸಿಫಿಲಿಸ್:

ಹುಟ್ಟಿನಿಂದಲೇ ಸಿಫಿಲಿಸ್ ಕೆಲವರಲ್ಲಿ ಕಂಡು ಬರುತ್ತದೆ. ಹೇಗೆಂದರೆ ತಾಯಿಗೆ ರೋಗ ಹರಡಿದ್ದರೆ, ಮಗುವಿಗೆ ಜನ್ಮತಃ ಬಂದು ಬಿಡುತ್ತದೆ. ಎರಡನೆಯ ಹಂತದ ರೋಗ ಲಕ್ಷಣಗಳು ಮಗುವಿನಲ್ಲಿ ಕಂಡು ಬರುತ್ತದೆ. ದೇಹದ ಮೇಲೆ ಗಂಧೆಗಳು ಕಂಡು ಬರುವುದು ಪ್ರಮುಖ ಲಕ್ಷಣ. ಇದರಿಂದಲೇ ಸೋಂಕು ಅಂಟುವಿಕೆ ತೀವ್ರವಾಗಿರುತ್ತದೆ.

ಚಿಕಿತ್ಸೆ ಮಾಡಿಸದಿದ್ದರೆ ಹಲವು ಅಂಗಾಂಗಗಳಿಗೆ ಹರಡಬಹುದು. ಇದರಿಂದ ಮೂಳೆಗಳ ನ್ಯೂನತೆಗಳು, ಗುಲ್ಮ  ಹಾಗೂ ಪಿತ್ತಜನಕಾಂಗ, ತಲೆ ಹಾಗೂ ಮುಖದ ನ್ಯೂನತೆಗಳು, ಹಲ್ಲು, ಮೂಗು, ಬಾಯಿಯ ಕೆಲವು ನ್ಯೂನತೆಗಳು ಮಕ್ಕಳಲ್ಲಿ ಕಂಡು ಬರುತ್ತವೆ.

ತಪಾಸಣಾ ವಿಧಾನಗಳು ಯಾವುವು?:

ರಕ್ತಪರೀಕ್ಷೆಯಲ್ಲಿ VDRL ಪರೀಕ್ಷೆ, ಚರ್ಮದ ಗಂಧೆಗಳಿಂದ ಜೀವ ಕಣಗಳ ಪರೀಕ್ಷೆ ಹಾಲ್ರಸ ಗ್ರಂಥಿಗಳಿಂದ ಮೆದುಳು ಬಳ್ಳಿಯ ಸುತ್ತ ನೀರಿನ ಪರೀಕ್ಷೆ ಮಾಡಲಾಗುತ್ತದೆ.

ದುಷ್ಪರಿಣಾಮಗಳು ಏನು?:

ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಹೃದಯ ಹಾಗೂ ರಕ್ತಪರಿಚಲನಾ ಅಂಗಗಳಿಗೆ ಘಾಸಿಯಾಗುವುದು. ಅದರಲ್ಲೂ ಮುಖ್ಯವಾಗಿ ಮೆದುಳು ಹಾಗೂ ನರಬಳ್ಳಿಗೆ ತೀವ್ರ ಆಘಾತ ಉಂಟಾಗುತ್ತದೆ. ಮಾನಸಿಕವಾಗಿ ತೊಳಲಾಟದಲ್ಲಿರುವುದು, ಪಾಶ್ರ್ವವಾಯು, ಪಿಟ್ಸ್, ಅರಳು ಮರಳು, ಮಾತನಾಡಲು ಬರೆಯಲು ಆಗದಿರುವುದು ಮತ್ತು ಕಣ್ಣು ಕಾಣದಿರುವುದು, ಕಿವುಡುತನ ಮತ್ತು ಸ್ಪರ್ಶಜ್ಞಾನವಿಲ್ಲವಾಗುವುದು ಮುಂತಾದ ಪರಿಣಾಗಳಾಗುವುವು. ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಬಂಜೆತನ ಕೂಡ ಬರಬಹುದು.

1. ಸಿಫಿಲಿಸ್ ಮತ್ತು ಏಡ್ಸ್: ಸಿಫಿಲಿಸ್ ಮತ್ತು ಇತರೆ ಲೈಂಗಿಕ ಕಾಯಿಲೆಯುಳ್ಳ ವ್ಯಕ್ತಿಗಳಿಗೆ HIV ವೈರಾಣುಗಳು ಸುಲಭವಾಗಿ ಶರೀರವನ್ನು ಪ್ರವೇಶಿಸುತ್ತವೆ. ಆದ್ದರಿಂದ ಲೈಂಗಿಕ ಕಾಯಿಲೆಗಳಿಂದ ಬಳಲುತ್ತಿರುವವರು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯವಶ್ಯಕ.

2. ಸಿಫಿಲಿಸ್ ಮತ್ತು ಗರ್ಭಿಣಿ ಸ್ತ್ರೀ: ಗರ್ಭವತಿಯಾದ ಮಹಿಳೆಗೆ ಸಿಫಿಲಿಸ್ ಸೋಂಕು ತಗುಲಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಸಿಫಿಲಿಸ್ ರೋಗಾಣು ಭ್ರೂಣಕ್ಕೂ ಮತ್ತು ಮಗುವಿಗೂ ಹಬ್ಬಬಹುದು. ಇದರಿಂದ ಮಗುವಿಗೆ ಹುಟ್ಟುವ ಮೊದಲೇ ಈ ಕಾಯಿಲೆ ತಟ್ಟಬಹುದು.

ಚಿಕಿತ್ಸೆಗಳು:

ಸಿಫಿಲಿಸ್ ಸುಲಭವಾಗಿ ಗುಣವಾಗುವ ಖಾಯಿಲೆಯಾದರೂ, ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಮಾಡದಿದ್ದರೆ ದೇಹದ ಮೇಲಾಗುವ ಪರಿಣಾಮಗಳನ್ನು ಪೂರ್ಣಪ್ರಮಾಣದಲ್ಲಿ ಗುಣ ಮಾಡುವುದು ಕಷ್ಟ. ಇದಕ್ಕೆ ಅಧಿಕ ಪ್ರಮಾಣದ ಪೆನಿಸಿಲಿನ್ ಔಷಧಿಯು ಪರಿಣಾಮಕಾರಿ. ಕೆಲವರಿಗೆ ಪೆನಿಸಿಲಿನ್ ಔಷಧಿಯು ಅಲರ್ಜಿಯಾಗಬಹುದು. ಅಂತಹ ಸಂದರ್ಭದಲ್ಲಿ ಸೆಫ್ರಿಯಾಕ್ಷೋನ್ , ರೊಸಿಫಿನ್, ಆ್ಯಜಿತ್ರೋಮೈಸಿನ್ , ಜಿತ್ರೋಮ್ಯಾಕ್ಸ್ , ಕ್ರಿಸ್ಟಾಪೆನ್ , ಡಾಕ್ಸಿಸಿಲೈನ್ , ವೈಬ್ರಮೈಸಿನ್ ಔಷಧಿಯನ್ನು ಉಪಯೋಗಿಸಬಹುದು. ರೋಗ ವಾಸಿಯಾಗಿದೆಯೇ ಎಂಬುದನ್ನು ರಕ್ತಪರೀಕ್ಷೆ ಮಾಡಿಸಿಕೊಳ್ಳುವುದರ ಮೂಲಕ ಖಚಿತಪಡಿಸಿಕೊಳ್ಳಬಹುದು.

ಚಿಕಿತ್ಸೆಯ ನಂತರ ತಪಾಸಣೆ:

ಚಿಕಿತ್ಸೆ ಪಡೆದ ನಂತರ ರೋಗವು ಸಂಪೂರ್ಣವಾಗಿ ಗುಣವಾಗಿದೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕು. ಏಕೆಂದರೆ ಕೆಲವೊಂದು ರಕ್ತದ ಪರೀಕ್ಷೆಗಳು  ಕಾಯಿಲೆ ವಾಸಿಯಾದ ಮೇಲೂ ಪಾಸಿಟಿವ್ ಬರುವ ಸಾಧ್ಯತೆಯುಂಟು. ಅದಕ್ಕಾಗಿ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯ ಸಂಗಾತಿಗಳಿಗೂ ತಪಾಸಣೆ ಮಾಡುವುದು ಅತಿ ಅವಶ್ಯಕ. ಚಿಕಿತ್ಸೆ ಪೂರ್ಣವಾಗುವವರೆಗೆ ವ್ಯಕ್ತಿ ಯಾವುದೇ ಲೈಂಗಿಕ ಕ್ರಿಯೆಯಿಂದಲೂ ದೂರವಿರುವುದು ಅವಶ್ಯಕ.

ಮುಂಜಾಗ್ರತಾ ಕ್ರಮಗಳು ಯಾವುವು? :

ಸುರಕ್ಷಿತ ಲೈಂಗಿಕ ಕ್ರಿಯೆ, ಅನೈತಿಕ ಸಂಬಂಧದಿಂದ ದೂರವಿರುವುದು, ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು, ನಿರಂತರ ವ್ಯಾಯಾಮ, ಯೋಗಾಸನಗಳಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.

ಸಿಫಿಲಿಸ್ ರೋಗದ ಬಗ್ಗೆ ಇರುವ ಮಿಥ್ಯೆಗಳು ಏನು?:

ಸಿಫಿಲಿಸ್ ಬಗ್ಗೆ ಜನರಲ್ಲಿ ಹಲವಾರು ಹುಸಿ ನಂಬಿಕೆಗಳು ಬೇರು ಬಿಟ್ಟಿವೆ. ಅವುಗಳೆಂದರೆ,
1. ಹಸ್ತಮೈಥುನದಿಂದ ಈ ರೋಗ ಬರುತ್ತದೆ.

2. ಬಡವರಲ್ಲಿ ಹಾಗೂ ಅನಕ್ಷರಸ್ಥರಲ್ಲಿ ಮಾತ್ರ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

3. ತರುಣಿಯರೊಡನೆ ಲೈಂಗಿಕ ಸಂಬಂಧದಿಂದ ಈ ಸಮಸ್ಯೆ ಉಂಟಾಗುತ್ತದೆ.

4. ಈ ಸಮಸ್ಯೆಗೆ ಒಂದು ಸಾರಿ ಚಿಕಿತ್ಸೆ ಪಡೆದುಕೊಂಡ ನಂತರ ಮತ್ತೆ ಬರುವುದಿಲ್ಲ.

5. ವೈದ್ಯರ ಸಹಾಯವಿಲ್ಲದೆ ಸ್ವಂತ ಅನುಭವದಿಂದ ತಾವೇ ಚಿಕಿತ್ಸೆ ಮಾಡಿಕೊಳ್ಳಬಹುದು.

6. ಯೋನಿಯನ್ನು ಹಾಗೂ ಶಿಶ್ನವನ್ನು ಸೋಪು ಮತ್ತು ಬಿಸಿ ನೀರಿನಿಂದ ತೊಳೆದುಕೊಂಡರೆ ಈ ರೋಗ ಬರುವುದಿಲ್ಲ.

ಹೀಗೆ ಹಲವಾರು ಮಿಥ್ಯೆಗಳು ಜನರಲ್ಲಿರುವುದು ಕಂಡು ಬರುತ್ತದೆ. ಆದರೆ ಇವುಗಳು ಯಾವುವೂ ಸತ್ಯವಲ್ಲ. ರೋಗ ಪೂರ್ಣವಾಗಿ ವಾಸಿಯಾಗುವವರೆಗೂ ವೈದ್ಯರ ಸಲಹೆಯಂತೆ ಪೂರ್ಣಾವಧಿ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ. ರೋಗಕ್ಕೆ ತುತ್ತಾಗಿ ಅನೇಕ ಮಾನಸಿಕ ಹಾಗೂ ಸಾಮಾಜಿಕ ತೊಂದರೆಗಳಿಗೆ ಕಾರಣವಾಗಿ ಖಿನ್ನತೆ, ತಪ್ಪಿತಸ್ಥ ಭಾವನೆಗಳಿಗೆ ಗುರಿಯಾಗುವುದಕ್ಕಿಂತ ಸರಿಯಾದ ಲೈಂಗಿಕ ಶಿಕ್ಷಣ, ಆದರ್ಶ ಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷಿತ ಲೈಂಗಿಕ ಕ್ರಿಯೆಯೊಡನೆ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು. ಹಾಗೆಯೇ ಈಗಾಗಲೇ ರೋಗಕ್ಕೆ ತುತ್ತಾಗಿದ್ದರೆ, ಪ್ರಾರಂಭದಲ್ಲಿಯೇ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು.

ಡಾ. ಸಿ.ಶರತ್ ಕುಮಾರ್
ಖ್ಯಾತ ಗರ್ಭಧಾರಣಾ ತಜ್ಞವೈದ್ಯರು ಮತ್ತು ನಿರ್ದೇಶಕರು,
ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ
ಮೈಸೂರು-570 001 ದೂ. : 0821-2444441, 4255019

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!