ಸ್ವಸ್ಥ ಆರೋಗ್ಯಕ್ಕಾಗಿ ವ್ಯವಸ್ಥಿತ ಆಹಾರ ಪದ್ಧತಿ ಬಹಳ ಕಡ್ಡಾಯವಾಗಿದೆ.ಕೋವಿಡ್ ಕಾಯಿಲೆ ನಮಗೆ ಹೆಚ್ಚಿನ ರೋಗನಿರೋಧಕ ಆಹಾರ ಬೇಕು ಎಂದು ಸಾಬೀತುಪಡಿಸಿದೆ. ಪ್ರಕೃತಿದತ್ತ ಅಹಾರವನ್ನು ಸೇವಿಸಬೇಕು. ದೇಹದಲ್ಲಿ ಒಮೆಗಾ-3 ಹಾಗೂ ಒಮೆಗಾ-6 ಅನುಪಾತವನ್ನು ಸಮತೋಲನಗೊಳಿಸುವ ಆಹಾರಪದ್ಧತಿ ಅನುಸರಿಸಬೇಕು.
ನಮ್ಮ ಸುತ್ತಲಿನ ನಿಸರ್ಗವನ್ನೇ ಗಮನಿಸಿದಾಗ, ಅದರ ಬಗೆಗೆ ಚಿಂತನೆಯನ್ನು ಪ್ರಾರಂಭಿಸಿದಾಗ ಹಲವಾರು ಅದ್ಭುತಗಳು ನಮಗೆ ಕಂಡುಬರುತ್ತದೆ. ನಮಗೆ ತಿಳಿಯದೇನೇ ಹಲವಾರು ಸಂಗತಿಗಳು ಜೀವನ ಪದ್ಧತಿಯ ಬಗೆಗೆ ಪಾಠಮಾಡುತ್ತಿರುತ್ತದೆ. ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸುವ ಪ್ರಾಣಿ ಕಾಡುಕೋಣ ಹಾಗೂ ಕಾಡೆಮ್ಮೆ. ಆದರೂ ಸಹ ಅತ್ಯಂತ ಗಟ್ಟಿಮುಟ್ಟಾದ ದೇಹ ಸಂರಚನೆಯನ್ನು, ಬಲಯುತವಾದ ಮಾಂಸಖಂಡಗಳನ್ನು ಹೊಂದಿರುತ್ತದೆ. ಆ ಕಾಡೆಮ್ಮೆಯ ಹಾಲು ಹೆಚ್ಚಿನ ಪ್ರಮಾಣದ ಉತ್ತಮ ಕೊಬ್ಬನ್ನು ಹೊಂದಿರುತ್ತದೆ. ಸುಮಾರು ಸಾವಿರ ಕೆಜಿ ತೂಕದ ತನ್ನ ಭಾರವನ್ನು ಹೊತ್ತು 8-10ಅಡಿ ಜಿಗಿದರೂ ಅದಕ್ಕೆ ಏನೂ ಆಗದು.
ಆದರೆ ನಾವು ಮನುಷ್ಯರು ಸಸ್ಯಾಹಾರ, ಮಾಂಸಾಹಾರ, ಸಂಸ್ಕರಿತ ಆಹಾರ, ಕರಿದ ಆಹಾರ, ಬೇಕರಿ ಆಹಾರ ಹೀಗೆ ಹಲವಾರು ರೀತಿಯ, ಹೆಚ್ಚಿನದಾಗಿ ಎಲ್ಲ ರೀತಿಯ ಆಹಾರವನ್ನೂ ಸೇವಿಸುತ್ತೇವೆ. ಹೆಚ್ಚೆಚ್ಚೂ ಸೇವಿಸುತ್ತೇವೆ. ಆದರೆ ನಮ್ಮ ದೇಹ ಅಷ್ಟು ಗಟ್ಟಿಮುಟ್ಟಾಗಿಲ್ಲ. ನಮ್ಮ ಮಾಂಸಖಂಡಗಳು ಅಷ್ಟು ಬಲಶಾಲಿಯಾಗಿಲ್ಲ. ಆರಿಂಚು ಮೆಟ್ಟಿಲನ್ನು ಇಳಿಯುವಾಗ ಸ್ವಲ್ಪ ಕಾಲು ಜಾರಿದರೂ ಸಹ ನಮ್ಮ ಮೂಳೆ ಮುರಿಯುತ್ತದೆ. ಯಾಕೆ ಹೀಗೆ? ಎಂದು ಒಮ್ಮೆ ಯೋಚಿಸಿದಾಗ ನಮ್ಮ ತಪ್ಪು ಜೀವನಪದ್ಧತಿ ಹಾಗೂ ಆಹಾರ ಪದ್ಧತಿಯ ಅರಿವಾಗುತ್ತದೆ.
ನಮ್ಮ ದೇಹದಲ್ಲಿ ಒಮೆಗಾ-6 ಪೋಷಕಾಂಶ ಹೆಚ್ಚಾಗುತ್ತಿದೆ:
ಕಾರಣ ನಾವು ಹೆಚ್ಚು ಕ್ಯಾಲೋರಿಯುಕ್ತ, ಕಡಿಮೆ ಪೋಷಕಾಂಶಯುಕ್ತ ಆಹಾರ ಸೇವಿಸುತ್ತೇವೆ. ನಾವು ಹೆಚ್ಚೆಚ್ಚು ಸೇವಿಸುತ್ತಿರುವ ಭತ್ತ, ಗೋಧಿ, ಜೋಳ ಮುಂತಾದ ಕಾರ್ಬೋಹೈಡ್ರೇಟ್ಗಳು ಪ್ರತಿಶತ 70-80ರಷ್ಟು ಸಕ್ಕರೆಯನ್ನು ಹೊಂದಿರುತ್ತದೆ, ಕೇವಲ 20 ಪ್ರತಿಶತ ಪೋಷಕಾಂಶ ಹೊಂದಿರುತ್ತದೆ. ಆದರೆ ಶುದ್ಧ ಹಸಿರು ಸೊಪ್ಪುಗಳು ಕೇವಲ 10 ಪ್ರತಿಶತ ಸಕ್ಕರೆಯನ್ನು ಹೊಂದಿರುತ್ತದೆ, 90 ಪ್ರತಿಶತ ಪೋಷಕಾಂಶಗಳನ್ನು,ನೀರನ್ನು ಹೊಂದಿರುತ್ತದೆ. ಕಾಡಿನ ಪ್ರಾಣಿಗಳು ಸೇವಿಸುವ ಪ್ರಕೃತಿದತ್ತ ಹಸಿರು ಪದಾರ್ಥಗಳು ಒಮೆಗಾ-3 ಹಾಗೂ ಒಮೆಗಾ-6 ಮೇದಾಮ್ಲವನ್ನು 1:1 ಅನುಪಾತದಲ್ಲಿ ಹೊಂದಿದ್ದು, ಅದು ದೇಹದಲ್ಲಿ ಸಮತೋಲನ ಕಾಪಾಡಲು, ಆರೋಗ್ಯಯುತವಾಗಿರಲು ಕಾರಣವಾಗುತ್ತದೆ.
ಆದರೆ ನಮ್ಮ ಇಂದಿನ ಆಧುನಿಕ ಶೈಲಿಯ ಆಹಾರ ಪದ್ಧತಿಯ ಪರಿಣಾಮದಿಂದಾಗಿ ನಮ್ಮ ದೇಹದಲ್ಲಿ ಒಮೆಗಾ-6 ಪೋಷಕಾಂಶ ಹೆಚ್ಚಾಗುತ್ತಿದೆ. ಒಮೆಗಾ-3 ಪೋಷಕಾಂಶ ಕಡಿಮೆಯಾಗುತ್ತಿದೆ. ಈ ಅಸಮತೋಲನದ ಪ್ರಭಾವದಿಂದ ನಮ್ಮ ಸ್ವಸ್ಥತೆ ನಮ್ಮಿಂದ ದೂರವಾಗುತ್ತಿದೆ. ಹಾಗಾಗಿ ಪರಿಪೂರ್ಣ ಆರೋಗ್ಯವನ್ನು ನೀಡುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ದೇಹದಲ್ಲಿ ಕೆಟ್ಟ ಕೊಬ್ಬನ್ನು ತಯಾರು ಮಾಡುವಂತಹ ಆಹಾರದ ಬದಲಾಗಿ ಸ್ವಸ್ಥ ಆರೋಗ್ಯಕ್ಕೆ ಕಾರಣವಾಗುವ ಹಸಿರು ಸೊಪ್ಪುಗಳು, ಹಸಿತರಕಾರಿಗಳು, ಹಣ್ಣುಗಳು, ನಟ್ಸ್ಗಳು ಇಂತಹ ಪ್ರಕೃತಿದತ್ತ ಅಹಾರವನ್ನು ಸೇವಿಸಬೇಕು. ದೇಹದಲ್ಲಿ ಒಮೆಗಾ-3 ಹಾಗೂ ಒಮೆಗಾ-6 ಅನುಪಾತವನ್ನು ಸಮತೋಲನಗೊಳಿಸುವ ಆಹಾರಪದ್ಧತಿ ಅನುಸರಿಸಬೇಕು.
ಮೊದಲೆಲ್ಲ ಹಸಿರು ಹುಲ್ಲನ್ನು ಮೇಯ್ದ ಹಸುವಿನಿಂದ ದೊರಕುವ ಹಾಲು ಹಾಗೂ ಈ ಹಾಲಿನ ಉತ್ಪನ್ನಗಳು ಒಮೆಗಾ-3 ಮೇದಾಮ್ಲವನ್ನು ಹೊಂದಿರುತ್ತಿತ್ತು. ಆದರೆ ಇಂದು ಹಸುವಿನ ಆಹಾರ ಅಕ್ಕಿಯ ತವುಡು, ಗೋಧಿಯ ತವುಡು ಉಪಯೋಗಿಸಿ ಮಾಡಿದ ಫೀಡ್ಗಳು ಕಾರ್ಬೊಹೈಡ್ರೇಟ್ಗಳ ಉತ್ಪನ್ನಗಳು. ಹಾಗಾಗಿ ನಮಗೆ ಹಸಿರು ಹುಲ್ಲಿನಿಂದ ದೊರೆಯುವ ಈ ಅತ್ಯಾವಶ್ಯಕ ಕೊಬ್ಬು ಕಡಿಮೆಯಾಗುತ್ತಿದೆ. ಕಾರ್ಬೊಹೈಡ್ರೇಟ್ಗಳಿಂದ ದೊರೆಯುವ ಒಮೆಗಾ-6 ಹೆಚ್ಚಾಗಿ ದೇಹದಲ್ಲಿ ಇವುಗಳಲ್ಲಿನ ಅನುಪಾತವು ಅಸಮತೋಲನವಾಗಿದೆ. ಆದ್ದರಿಂದ ಇವೆಲ್ಲವುಗಳ ಮೇಲೆ ಗಮನ ಹರಿಸಿ ಸ್ವಸ್ಥ ಆರೋಗ್ಯಕ್ಕಾಗಿ ವ್ಯವಸ್ಥಿತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳೋಣ.

Email: drvhegde@yahoo.com; nisargamane6@gmail.com