ಸ್ಟ್ರಾಬೆರಿ ಹಣ್ಣು ವಿದೇಶದ ಕೊಡುಗೆಯಾಗಿದ್ದರೂ ನಮ್ಮ ನೆಲದ ಫಲ ಎಂಬಂತೆ ಕರ್ನಾಟಕದಲ್ಲಿಯೂ ಬೆಳೆಯುತ್ತದೆ. ಮನೆಯಂಗಳದಲ್ಲಿ ಇದರ ಬಳ್ಳಿಯನ್ನು ಬೆಳೆಸಿ ಹಣ್ಣು ಕೊಯ್ಯಬಹುದು. ಕುಂಡಗಳಲ್ಲಿಯೂ ಬೆಳೆಯುತ್ತದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅದರಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಕಬ್ಬಿಣ, ಸುಣ್ಣ, ಪೊಟಾಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್, ಸತು, ನಿಯಾಸಿನ್, ಪ್ಯಾಂಟೋಥೆನಿಕ್ ಅಮ್ಲಗಳಲ್ಲದೆ ಎ, ಬಿ, ಸಿ, ಕೆ ಜೀವಸತ್ವಗಳೂ ಇವೆ. ಮಧ್ಯ ವಯಸ್ಕ ಮಹಿಳೆಯರಿಗೆ ಬರುವ ಹೃದಯಾಘಾತದಲ್ಲಿ ಶೇ. 32ರಷ್ಟು ಸಂದರ್ಭಗಳಲ್ಲಿ ಪೋಷಕಾಂಶಗಳ ಕೊರತೆ ಕಾರಣವಾಗಿರುತ್ತದೆ ಎನ್ನುವ ಆಹಾರ ತಜ್ಞರು ದಿನದಲ್ಲಿ ಮೂರು ಸ್ಟ್ರಾಬೆರಿ ತಿನ್ನುವವರಲ್ಲಿ ಹೃದಯಾಘಾತದ ಸಂಭವ ಕಡಮೆಯಿರುತ್ತದೆ ಎಂದಿದ್ದಾರೆ. ಹದಿ ಹರಯದವರಿಗೆ ಅಗತ್ಯವಾದ ಪ್ರೋಟೀನ್ ವಿಪುಲವಾಗಿ ಸಿಗುವ ಸತ್ವಭರಿತ ಹಣ್ಣಿದು.
ಗರ್ಭಿಣಿಯರು ಸ್ಟ್ರಾಬೆರಿ ತಿಂದರೆ ದೇಹಕ್ಕೆ ಬೇಕಾದ ಬಿ ಜೀವಸತ್ವ 21 ಮಿಲಿಗ್ರಾಮ್ ಪ್ರಮಾಣದಲ್ಲಿ ಸಿಗುವುದು. ಗರ್ಭಸ್ಥ ಶಿಶುವಿನ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಗೆ ಸಹಕರಿಸಿ ಜನನ ಕಾಲದ ದೋಷಗಳನ್ನು ತಡೆಯುತ್ತದೆ. ಇದರಲ್ಲಿ ಅಡಕವಾದ ಸಿರೊಟೋನ್ ಅಂಶ ಅನಿದ್ರೆ ಮತ್ತು ಖಿನ್ನತೆಯನ್ನು ನಿವಾರಿಸಿ ಹಸಿವನ್ನು ಹೆಚ್ಚಿಸುತ್ತದೆ.
ಮಲಬದ್ಧತೆಯಿಂದ ಬಳಲುವವರಿಗೆ ಸ್ಟ್ರಾಬೆರಿಯಲ್ಲಿ ಶೇ. 2ರಷ್ಟಿರುವ ನಾರಿನ ಅಂಶ ವಿರೇಚಕವಾಗಿ ಕೆಲಸ ಮಾಡುತ್ತದೆ. ಅಧಿಕ ರಕ್ತದ ಒತ್ತಡವನ್ನು ತಡೆದು ಪಾಶ್ರ್ವವಾಯುವನ್ನು ದೂರವಿಡಲು ಸಮರ್ಥವಾಗಿದೆ. ನಿತ್ಯ ಸೇವನೆಯಿಂದ ಹೃದಯಕ್ಕೆ ಆಮ್ಲಜನಕವನ್ನು ಹೀರಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ರಕ್ತದಲ್ಲಿ ಗ್ಲೂಕೋಸಿನ ನಿಯಂತ್ರಣ ಮಾಡುತ್ತದೆ. ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ. ರಕ್ತ ಪರಿಚಲನೆಯನ್ನು ಸುಗಮಗೊಳಿಸಿ ಹೃದಯಾಘಾತವನ್ನು ತಡೆಯುತ್ತದೆ.
ಒಂದು ಬಟ್ಟಲು ಸ್ಟ್ರಾಬೆರಿ ನಿತ್ಯ ಆಹಾರದಲ್ಲಿ ಸೇರಿದರೆ ಅಗತ್ಯವಿರುವ ಸಿ ಜೀವಸತ್ವದ ಅರ್ಧದಷ್ಟು (51. 5 ಮಿ. ಗ್ರಾಮ್) ಸಿಗುತ್ತದೆ. ಚರ್ಮಕ್ಕೆ ಬಿಸಿಲಿನಿಂದ ಆಗುವ ಹಾನಿ ಮತ್ತು ಸುಕ್ಕು ನಿವಾರಣೆಯಾಗಿ ಸ್ಥಿತಿ ಸ್ಥಾಪಕ ಗುಣ ವರ್ಧಿಸುತ್ತದೆ. ಮಸುಕು ದೃಷ್ಟಿ, ಅಕಾಲಿಕ ಅಂಧತ್ವಗಳನ್ನು ನಿವಾರಿಸಿ ದೃಷ್ಟಿಯನ್ನು ಶುದ್ಧಗೊಳಿಸುತ್ತದೆ. ಸೂರ್ಯನ ಯುವಿ ಕಿರಣಗಳಿಂದ ಕಣ್ಣಿನ ರೆಟಿನಾ ಮತ್ತು ಕಾರ್ನಿಯಾಗಳಿಗೆ ಆಗುವ ಹಾನಿಯನ್ನು ದೂರವಿಡುತ್ತದೆ. ಶೇ.65 ಮಹಿಳೆಯರಲ್ಲಿ ಕಂಡುಬರುವ ಜೀವಸತ್ವ ಮತ್ತು ಪ್ರೊಟೀನಿನ ಕೊರತೆಯನ್ನು ಇದು ನೀಗಬಲ್ಲುದು.
ರೊಸೇಸಿ ಕುಲಕ್ಕೆ ಸೇರಿದ, ವೈಜ್ಞಾನಿಕವಾಗಿ ಫ್ರಗೇರಿಯಾ ಎಕ್ಸ್ ಅನನಾಸಾ ಎಂದು ಹೆಸರಿರುವ ಶಂಕುವಿನಾಕೃತಿಯ ಸ್ಟ್ರಾಬೆರಿ ಹಣ್ಣಿನಲ್ಲಿ ಪ್ರತಿ 100 ಗ್ರಾಮ್‍ನಲ್ಲಿ 32 ಕೆಲೊರಿಗಳಿವೆ. ಇದನ್ನು ಹಾಗೆಯೇ ತಿನ್ನಬಹುದು. ಸಿಹಿ ಭಕ್ಷ್ಯಗಳು ಅಥವಾ ಮೊಸರಿನೊಂದಿಗೆ ಸೇರಿಸಿಕೊಂಡರೆ ಪೋಷಕಾಂಶಗಳ ಪ್ರಮಾಣ ಹೆಚ್ಚುತ್ತದೆ. ಐಸ್‍ಕ್ರೀಮ್, ಸಲಾಡ್, ಮಿಲ್ಕ್‍ಷೇಕ್, ಜ್ಯೂಸ್ ತಯಾರಿಸಲು ಯೋಗ್ಯವಾಗಿದೆ. ಊಟ ಮತ್ತು ಉಪಾಹಾರದ ಜೊತೆಗೆ ಹಸಿಯಾಗಿ ತಿಂದರೂ ಅನುಕೂಲ ಹೆಚ್ಚು.
ವಾರದಲ್ಲಿ ಹದಿನಾರಕ್ಕಿಂತ ಹೆಚ್ಚು ಸ್ಟ್ರಾಬೆರಿ ತಿನ್ನುವ ಮಹಿಳೆಯರ ದೇಹದಲ್ಲಿ ಪ್ರೋಟೀನ್ ಶೇ. 14ರಷ್ಟು ಗಮನಾರ್ಹ ಏರಿಕೆಯಾಗುವುದು ಕಂಡುಬಂದಿದೆ.
ಈ ಹಣ್ಣಿನಲ್ಲಿರುವ ಎಲ್ಲಾಜಿಕ್ ಆಮ್ಲ ಕರುಳು, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ತಡೆಯುತ್ತದೆಂದು ದೃಢಪಟ್ಟಿದೆ. ಶೈತ್ಯೀಕರಿಸಿದ ಹಣ್ಣಿಗೆ ಈ ಸಾಮಥ್ರ್ಯ ಹೆಚ್ಚಿದೆ.
ಬಿ ಜೀವಸತ್ವದ ಸಂಕೀರ್ಣ ಅಂಶಗಳಿರುವ ಸ್ಟ್ರಾಬೆರಿ ಕೆಂಪು ರಕ್ತಕಣಗಳನ್ನು ವರ್ಧಿಸುತ್ತದೆ. ರಕ್ತದಲ್ಲಿ ಅಮೈನೋ ಆಮ್ಲವನ್ನು ಮಿತಗೊಳಿಸಿ ಅಧಿಕ ಅಪಧಮನಿಗಳ ಒಳಪದರದ ಹಾನಿಯನ್ನು ನಿವಾರಿಸುತ್ತದೆ. ಮೂಳೆ ಮತ್ತು ಹಲ್ಲುಗಳ ಸವೆತವನ್ನು ತಡೆಯುವ ಫ್ಲೋರೈಡ್ ಇದರಲ್ಲಿದೆ. ವಾರದಲ್ಲಿ ಎರಡು ಸಲ ನಿಯಮಿತವಾಗಿ ಇದನ್ನು ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ. ಪಾರ್ಕಿನ್‍ಸನ್ ರೋಗ ದೂರವುಳಿಯುತ್ತದೆ.
ದಿನಕ್ಕೆ 37 ಸ್ಟ್ರಾಬೆರಿ ತಿಂದ ಮಧುಮೇಹ ರೋಗಿಗಳ ದೇಹದಲ್ಲಿ ಕಾಯಿಲೆಯ ಪ್ರಮಾಣ ಗಣನೀಯವಾಗಿ ತಗ್ಗಿರುವುದು ಕಂಡುಬಂದಿದೆ. ಇದರಲ್ಲಿರುವ ನೀರಿನ ಅಂಶ ಮೂತ್ರಪಿಂಡದ ಹಲವು ಸಮಸ್ಯೆಗಳು ಮತ್ತು ನರರೋಗವನ್ನು ತಡೆಯುತ್ತದೆಂದು ವ್ಯಕ್ತವಾಗಿದೆ. ಅದು ಕೊಡುವ ನೈಸರ್ಗಿಕ ಸಕ್ಕರೆ ದೇಹಕ್ಕೆ ಸಹಕಾರಿಯಾಗಿದೆ. ಶೇ. 32ರಷ್ಟು ಕೆಲೊರಿಗಳಿದ್ದರೂ ದೇಹದ ತೂಕವನ್ನು ಗಮನಾರ್ಹವಾಗಿ ತಗ್ಗಿಸಲು ಶಕ್ತವಾಗಿದೆ. ಸ್ಟ್ರಾಬೆರಿ ಬಳ್ಳಿಯ ಎಲೆಗಳನ್ನು ಕುದಿಸಿ ಆರೋಗ್ಯಕರವಾದ ಚಹಾ ಮತ್ತು ಕಚ್ಚಾ ಎಲೆಗಳಿಂದ ಸಲಾಡ್ ತಯಾರಿಸಬಹುದು.