ಮಾನವನ ದೇಹವು ನೂರಾರು ವಿಧ ವಿಧವಾದ ಜೀವಕೋಶಗಳಿಂದ ರೂಪುಗೊಂಡಿರುತ್ತದೆ. ಈ ಜೀವಕೋಶಗಳ ಬೆಳವಣಿಗೆಯಲ್ಲಿ ಉತ್ಪಾದನಾ ಶಕ್ತಿ ಸ್ವಲ್ಪ ಏರುಪೇರಾದರೂ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುತ್ತದೆ. ಹೀಗೆ ಜೀವಕೋಶಗಳ ಏರುಪೇರಿನಿಂದ ಉಂಟಾಗುವ ರೋಗಗಳಲ್ಲಿ ಅರ್ಬುದ (ಕ್ಯಾನ್ಸರ್) ರೋಗವು ಒಂದು. ಇದೊಂದು ಸಾವಿನಲ್ಲಿ ಪರ್ಯವಸಾನಗೊಳ್ಳುವ ಭೀಕರ ಮಾರಕ ರೋಗ. ಕ್ಯಾನ್ಸರ್ ರೋಗವು ದೇಹದ ಯಾವುದೇ ಅಂಗಾಂಗಕ್ಕೆ ಬರಬಹುದು. ಅದರಲ್ಲೂ ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಎಲ್ಲಾ ದೇಶದಲ್ಲಿಯೂ ಎಲ್ಲಾ ವರ್ಗದ ಮಹಿಳೆಯರಲ್ಲಿಯೂ ಬರುವಂತಹ ಕೆಟ್ಟ ಪರಿಣಾಮ ಬೀರುವ ಭೀಕರ ಕಾಯಿಲೆಯಾಗಿದೆ.
ಜಗತ್ತಿನಲ್ಲಿ ಪ್ರತಿ ವರ್ಷ 10 ಲಕ್ಷಕ್ಕೂ ಮೀರಿ ಹೆಚ್ಚು ಮಂದಿ ಮಹಿಳೆಯರು ಸ್ತನ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1960ರ ದಶಕದಲ್ಲಿ ಶೇಕಡಾ 5 ರಷ್ಟು ಮಹಿಳೆಯರಲ್ಲಿ ಕಂಡುಬರುತ್ತಿದ್ದ ಸ್ತನ ಕ್ಯಾನ್ಸರ್ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕವಾಗಿ ಕಂಡುಬರುತ್ತಿದ್ದು, ಇಂದು ಇದರ ಪ್ರಮಾಣ ಶೇ.7 ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯಲ್ಲಿ ದೃಢೀಕರಿಸಲಾಗಿದೆ. ಸ್ತನ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿರುವವರಲ್ಲಿ ಭಾರತವೂ ಹಿಂದೆ ಉಳಿದಿಲ್ಲ. ಭಾರತದ ಮಹಾನಗರಗಳಾದ ಬೆಂಗಳೂರು, ಮುಂಬಯಿ, ಕಲ್ಕತ್ತಾ ನಗರಗಳಲ್ಲಿ ಪ್ರತಿ ವರ್ಷ ಶೇ.5 ರಷ್ಟು ಸ್ತ್ರೀಯರು ಸ್ತನ ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಮಾಹಿತಿ ನೀಡುತ್ತದೆ.
ಯಾರಿಗೆ, ಯಾವ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಬರುತ್ತದೆ?
1. ಸ್ತನ ಕ್ಯಾನ್ಸರ್ ಬಹುತೇಕ ಮಹಿಳೆಯರಿಗೆಂದೇ ಮೀಸಲಾಗಿರುವ ಕಾಯಿಲೆಯಾದರೂ ಒಟ್ಟು ಸ್ತನ ಕ್ಯಾನ್ಸರ್ ಉಳ್ಳವರಲ್ಲಿ ಶೇ.1 ರಷ್ಟು ಪುರುಷರೂ ಆಗಿರುತ್ತಾರೆ.
2. ಸಾಮಾನ್ಯವಾಗಿ 40 ವರ್ಷಗಳ ನಂತರ ಕಾಣಿಸಿಕೊಳ್ಳುವ ಈ ರೋಗವು 65 ವರ್ಷ ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
3. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾದವರಲ್ಲಿ ಮತ್ತು ಮಾಸಿಕ ಋತುಚಕ್ರದಲ್ಲಿ ಏರುಪೇರಾಗಿದ್ದು, ಹೆಚ್ಚಿನ ರಕ್ತಸ್ರಾವವಾಗುತ್ತಿರುವವರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
4. ಹೆಚ್ಚು ವಯಸ್ಸಾದ ಮೇಲೆ (30 ರ ನಂತರ) ವಿವಾಹವಾಗಿರುವ ಮಹಿಳೆಯರಲ್ಲಿ ಮತ್ತು ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಇದರ ಪ್ರಮಾಣ ಇತರ ಕಾರಣಗಳಿಗಿಂತ ಎರಡರಷ್ಟಿರುತ್ತದೆ.
5. ಇದು ವಂಶಪಾರಂಪರ್ಯ ದಿಂದಲೂ ಬರಬಹುದು. ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಶೇ.25 ರಷ್ಟು ಹೆಚ್ಚಿರುತ್ತದೆ.
ಆಧುನಿಕ ಯುಗದಲ್ಲಿ ಸ್ವೇಚ್ಛಾಚಾರಕ್ಕೆ ಒಳಗಾಗಿ, ನವೀನ ಸಂಸ್ಕøತಿಯ ಹೆಸರಿನಲ್ಲಿ ಜೀವನ ಶೈಲಿಯನ್ನು ಬದಲಾಯಿಸಿ ಕೊಂಡಿರುವ ಮಹಿಳೆಯರು ಮದ್ಯಪಾನ, ಧೂಮಪಾನ ಮುಂತಾದ ಚಟಗಳಿಗೆ ಬಲಿಯಾಗಿರುತ್ತಾರೆ. ಇಂತಹವರಲ್ಲಿ ಸ್ತನ ಕ್ಯಾನ್ಸರ್ ಕಂಡುಬರುವ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ತನಗಳಲ್ಲಿ ಯಾವುದೇ ರೀತಿಯ ಗಡ್ಡೆಗಳು ಅಥವಾ ಇತರ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದರೆ ಅದನ್ನು ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ತಜ್ಞ ವೈದ್ಯರಿಗೆ ತೋರಿಸಿ ಯಾವುದೇ ಹಿಂಜರಿಕೆ, ಸಂಕೋಚವಿಲ್ಲದೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಇಡೀ ಜೀವನವನ್ನೇ ನೋವಿನಲ್ಲಿ ಕಳೆಯಬೇಕಾಗುತ್ತದೆ. ಅಲ್ಲದೆ ಜೀವವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಸ್ತನ ಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಮೊದಲ ಹಂತ: ಸ್ತನದಲ್ಲಿ ಗೆಡ್ಡೆ ಕಾಣಿಸಿಕೊಂಡು ಅದು 2 ಸೆಂ.ಮೀ. ಗಿಂತ ಕಡಿಮೆಯಿರುತ್ತದೆ ಮತ್ತು ಬೇರೆ ಕಡೆ ಹರಡಿರುವುದಿಲ್ಲ.
ದ್ವಿತೀಯ ಹಂತ: ಈ ಗೆಡ್ಡೆ ಇನ್ನೂ ಚಿಕ್ಕದಾಗಿರುತ್ತದೆ. ಆದರೆ ಇದು ಸ್ತನದ ಇತರ ಭಾಗಕ್ಕೂ ಅಂದರೆ ಕಂಕುಳಿಗೆ ಹರಡಿರುತ್ತದೆ.
ತೃತೀಯ ಹಂತ: ಈ ಹಂತದಲ್ಲಿ ಗೆಡ್ಡೆಯು ಮುಕ್ಕಾಲು ಪಾಲು ದೊಡ್ಡದಾಗಿದ್ದು, ಸರಿಸುಮಾರು 5 ಸೆಂ.ಮೀ. ನಷ್ಟಾಗಿರುತ್ತದೆ. ಜೊತೆಗೆ ಹೆಚ್ಚಾಗಿ ಹರಡಿರುತ್ತದೆ.
ನಾಲ್ಕನೇ ಹಂತ: ಕ್ಯಾನ್ಸರ್ ರೋಗವು ಇತರ ಅಂಗಾಂಗಗಳಿಗೂ ಹರಡಿರುತ್ತದೆ. ಆದುದರಿಂದ ಪ್ರಾರಂಭಿಕ ಹಂತದಲ್ಲಿಯೇ ತಜ್ಞವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತ.
ಸ್ತನ ಕ್ಯಾನ್ಸರ್ ರೋಗದ ಲಕ್ಷಣಗಳು:
1. ಸ್ತನಗಳಲ್ಲಿ ನೋವು ಅಥವಾ ನೋವಿಲ್ಲದ ಗೆಡ್ಡೆಗಳು ಮೂಡುವುದು.
2. ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ಗೆಡ್ಡೆಯು ಕಾಣಿಸಿಕೊಳ್ಳಬಹುದು.
3. ಸ್ತನದ ಮೂಲರೂಪ ಮತ್ತು ಆಕಾರದಲ್ಲಿ ಬದಲಾವಣೆ ಕಂಡುಬರುತ್ತವೆ.
4. ಸ್ತನದ ವರ್ಣದಲ್ಲಿ ಬದಲಾವಣೆ ಆಗುವುದು.
5. ತೊಟ್ಟಿನಿಂದ ರಕ್ತಸ್ರಾವ ವಾಗುವುದು ಅಥವಾ ಕೀವಿನ ಸ್ರಾವವಾಗುವುದು.
6. ಸ್ತನದ ತೊಟ್ಟಿನಲ್ಲಿ ಮೃದುತ್ವದ ಬದಲಾಗಿ ಒರಟಾಗುವುದು ಮತ್ತು ಗಡುಸಾಗುವುದು.
7. ಸ್ತನದಲ್ಲಿರುವ ತೊಟ್ಟು ಹಿಂದಕ್ಕೆ ಸರಿಯುವುದು ಮತ್ತು ಅಧಿಕವಾದ ನೋವು ಇತ್ಯಾದಿ.
ತಪಾಸಣಾ ವಿಧಾನಗಳು – ಸ್ತನಗಳ ಸ್ವಯಂ ಪರೀಕ್ಷೆ ವಿಧಾನ:
ತಪಾಸಣಾ ವಿಧಾನಗಳಲ್ಲಿ ಮೊದಲಿಗೆ ಪ್ರತಿಯೊಬ್ಬ ಸ್ತ್ರೀಯು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಈ ಪರೀಕ್ಷೆಯಲ್ಲೇನಾದರೂ ಗೆಡ್ಡೆಗಳು ಅಥವಾ ಇತರೆ ಯಾವುದೇ ಬದಲಾವಣೆಗಳು ಕಂಡು ಬಂದರೆ ತಜ್ಞವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಮೆಮೊಗ್ರಾಮ್, ಎಂ.ಆರ್.ಐ ಸ್ಕ್ಯಾನಿಂಗ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಡಕ್ಟಲ್ ಲ್ಯಾವೆಜ್, ಆಪ್ಟಿಕಲ್ ಟೋಮೋಗ್ರಫಿ ಮತ್ತು ಪಿ.ಈ.ಟಿ. ಸ್ಕ್ಯಾನ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಬಯಾಪ್ಸಿ ಪರೀಕ್ಷೆಯನ್ನು ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಇದೆಯೇ? ಇಲ್ಲವೇ ಎಂಬುದನ್ನು ಖಚಿತವಾಗಿ ತಿಳಿಯಬಹುದು.
ಪ್ರತಿಯೊಬ್ಬ ಸ್ತ್ರೀಯು ಮೊದಲಿಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ. ಸ್ತನಗಳ ಪರೀಕ್ಷೆಯನ್ನು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಮಾಡಿಕೊಳ್ಳುವುದು ಒಳ್ಳೆಯದು. ಕನ್ನಡಿಯೆದುರು ನಿಂತು ಎರಡೂ ಸ್ತನಗಳಲ್ಲಿನ ಆಕಾರ, ಗಾತ್ರ ಮತ್ತು ದೃಢತೆಯಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂಬುದನ್ನು ಗಮನಿಸಬೇಕು. ಸ್ತನಗಳಲ್ಲಿ ಗೆಡ್ಡೆ, ದುರ್ಮಾಂಸ, ಚರ್ಮದ ಬಣ್ಣದಲ್ಲಿ ಬದಲಾವಣೆ, ತುರಿಕೆ, ಕುಳಿ ಅಥವಾ ಏನಾದರೂ ಬಿದ್ದಿದೆಯೇ, ಮೊಲೆತೊಟ್ಟೆನಾದರೂ ಒಳ ಸರಿದಿದೆಯೇ ಎಂಬುದನ್ನು ನೋಡಿಕೊಳ್ಳಬೇಕು., ಸ್ತನದಲ್ಲಿ ಏನಾದರೂ ಗಾಯಗಳಾಗಿ ಕೀವು ಅಥವಾ ಇತರ ಯಾವುದೇ ರೀತಿಯ ದ್ರವದ ಸ್ರವಿಕೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು, ಹಾಗೆಯೇ ಮೊಲೆತೊಟ್ಟಿನಿಂದ ಹಾಲು ಅಥವಾ ಇನ್ನಾವುದೇ ದ್ರವ ಬರುತ್ತಿದೆಯೇ ಎಂಬುದರ ಬಗ್ಗೆ ಎಚ್ಚರ ವಹಿಸಬೇಕು. ಹಾಗೆ ಕೈಗಳನ್ನು ಮೇಲೆತ್ತಿ ಮತ್ತು ನಿತಂಬದ ಮೇಲೆ ಕೈ ಇಟ್ಟು ಉಂಟಾಗುವ ವ್ಯತ್ಯಾಸಗಳನ್ನು ಗಮನಿಸಬೇಕು. ಆಮೇಲೆ ಕೈಯಿಂದ ಸ್ತನಗಳನ್ನು ಮುಟ್ಟಿ ಗಟ್ಟಿಯಿದೆಯೇ? ಒತ್ತಿದಾಗ ಸ್ತನದ ಒಳಗೆ ಏನಾದರೂ ಗಂಟುಗಳು ಇದೆಯೇ? ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಹೀಗೆ ಪರೀಕ್ಷಿಸುವಾಗ ಏನಾದರೂ ವ್ಯತ್ಯಾಸ ಕಂಡುಬಂದರೆ ತಜ್ಞ ವೈದ್ಯರನ್ನು ಕಾಣುವುದು ಅವಶ್ಯಕ.
ಸ್ತನ ಕ್ಯಾನ್ಸರ್‍ನಿಂದ ಆಗುವ ದುಷ್ಪರಿಣಾಮಗಳು:
ಸ್ತನ ಕ್ಯಾನ್ಸರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸ್ತ್ರೀಯ ಆಕರ್ಷಕ ಅಂಗವೆನಿಸಿರುವ, ಕರುಳ ಕುಡಿಗೆ ಅಮೃತ ಉಣಿಸುವ ಸ್ತನಗಳೇ ಇಲ್ಲವಾಗಬಹುದು. ಇದರ ಜೊತೆಗೆ ದೇಹದ ಇತರ ಅಂಗಾಂಗಗಳಿಗೂ ಕ್ಯಾನ್ಸರ್ ಹರಡುತ್ತದೆ. ಇದರಿಂದ ಜೀವನದ ಸಂತೋಷಮಯ ಕ್ಷಣಗಳನ್ನು ಕೊನೆಯ ದಿನಗಳವರೆಗೂ ನೋವಿನಲ್ಲಿ ಕಳೆಯುವ ಪರಿಸ್ಥಿತಿ ಉಂಟಾಗುತ್ತದೆ.
ಚಿಕಿತ್ಸೆಗಳು:
ಸ್ತನಗಳ ಕ್ಯಾನ್ಸರ್‍ನ ಚಿಕಿತ್ಸೆಯು ಕ್ಯಾನ್ಸರ್ ರೋಗವು ಯಾವ ಹಂತದಲ್ಲಿದೆ ಎಂಬುದನ್ನು ಅವಲಂಬಿಸಿರುತ್ತದೆ. ಮೊದಲ ಮತ್ತು ಎರಡನೇ ಹಂತದ ಕ್ಯಾನ್ಸರ್ ರೋಗಿಯನ್ನು ಸುಲಭವಾಗಿ ಗುಣಪಡಿಸಬಹುದು. ಮೂರು ಮತ್ತು ನಾಲ್ಕನೇ ಹಂತದ ಕ್ಯಾನ್ಸರ್ ಪೀಡಿತ ರೋಗಿಗೆ ಹೆಚ್ಚಿನ ಹಾಗೂ ಮುಂದುವರೆದ ಚಿಕಿತ್ಸೆಯ ಅಗತ್ಯವಿರುತ್ತದೆ.
ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖವಾಗಿ 5 ರೀತಿಯ ಚಿಕಿತ್ಸಾ ವಿಧಾನಗಳಿವೆ.
1. ರಾಸಾಯನಿಕ ಚಿಕಿತ್ಸೆ (Chemotherapy)
2. ವಿಕಿರಣ ಚಿಕಿತ್ಸೆ (Radio Therapy)
3. ಶಸ್ತ್ರಕ್ರಿಯೆ (Surgery)
4. ಚೋದನಿಕೆಗಳ ಚಿಕಿತ್ಸೆ (Hormonal Therapy)
5. ಜೀವಕಣಗಳ ಚಿಕಿತ್ಸೆ (Biologic Therapy)
1. ರಾಸಾಯನಿಕ ಚಿಕಿತ್ಸೆ (Chemotherapy)
ಶಸ್ತ್ರಕ್ರಿಯೆಯಿಂದ ಕ್ಯಾನ್ಸರ್ ಗಡ್ಡೆಯನ್ನು ಮತ್ತು ಸುತ್ತಮುತ್ತಲು ಹರಡಿರುವ (ಸೋಂಕು ತಗುಲಿರುವ ಅಂಗಾಂಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ) ಅಂಗಾಂಗಗಳನ್ನು ಮಾತ್ರ ತೆಗೆಯಲಾಗುತ್ತದೆ. ಆದರೆ ಕ್ಯಾನ್ಸರ್ ಕಣಗಳು ಆ ಸ್ಥಳದಲ್ಲಲ್ಲದೇ ದೇಹದ ಇತರೆ ದೂರದ ಭಾಗಗಳಿಗೂ ಹರಡಿರುವ ಸಂಭವವಿರುತ್ತದೆ. ಆದ್ದರಿಂದ “ರಾಸಾಯನಿಕ ಚಿಕಿತ್ಸೆ”ಯು ಪೂರ್ಣ ದೇಹವನ್ನು ರಕ್ಷಿಸುತ್ತದೆ.
ಪ್ರಾಥಮಿಕ ಹಂತದ ಕ್ಯಾನ್ಸರ್ ರೋಗವನ್ನು ‘ರಾಸಾಯನಿಕ ಚಿಕಿತ್ಸೆ’ಯಿಂದಲೇ ಗುಣಪಡಿಸಬಹುದು. ಈ ಔಷಧಿಗಳನ್ನು 3 ರಿಂದ 6 ತಿಂಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಡೊಕ್ಸೊರುಬಿಸಿನ್ (Doxorubicin) ಸೈಕ್ಲೋಫಾಸ್‍ಮೈಡ್ (Cycolphosphamide) ಮೆಥೋಟ್ರಿಕ್ಸೆಟ್ (Methotrexate) ಮತ್ತು ಪ್ಲೊರೋಯುರಾಸಿಲ್ (Flurouracil) ಈ ಮುಂತಾದ ರಾಸಾಯನಿಕ ವಸ್ತುಗಳನ್ನು ರಾಸಾಯನಿಕ ರೋಗ ಚಿಕಿತ್ಸೆಯಲ್ಲಿ ನೀಡುವ ಪ್ರÀಮುಖ ಔಷಧಿಗಳಾಗಿವೆ. ಕೆಲವು ಬಾರಿ ಕ್ಯಾನ್ಸರ್ ನಿರೋಧಕ ಔಷಧಿಗಳನ್ನು ಶಸ್ತ್ರಚಿಕಿತ್ಸೆಗಿಂತ ಮುಂಚೆಯೂ ಕೊಡಬೇಕಾಗಬಹುದು.
2. ವಿಕಿರಣ ಚಿಕಿತ್ಸೆ :
ವಿಕಿರಣ ಚಿಕಿತ್ಸೆಯಲ್ಲಿ ಕ್ಷ-ಕಿರಣ , ಕೊಬಾಲ್ಟ-60 ಕಿರಣ ಚಿಕಿತ್ಸೆ, ರೇಡಿಯಂ ಸೂಜಿಗಳು ಮತ್ತು ಲೀನಿಯರ್ ಆಕ್ಸಿಲರೇಟರ್ ಮುಂತಾದ ಚಿಕಿತ್ಸಾ ಕ್ರಮಗಳಿವೆ. ಸಾಮಾನ್ಯವಾಗಿ ವಿಕಿರಣ ಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆಯ ನಂತರ ಕೊಡಲಾಗುತ್ತದೆ. ಇದರಲ್ಲಿ ಅತ್ಯಂತ ಶಕ್ತಿಯುತವಾದ ವಿಕಿರಣಗಳನ್ನು ದೇಹದೊಳಕ್ಕೆ ಹಾಯಿಸುವುದರ ಮೂಲಕ ಕ್ಯಾನ್ಸರ್ ಗೆಡ್ಡೆ ಮತ್ತು ಕಣಗಳನ್ನು ನಾಶಮಾಡಲಾಗುತ್ತದೆ ಇದನ್ನು ವಾರದಲ್ಲಿ 5 ದಿವಸದಂತೆ ಸುಮಾರು 6 ವಾರಗಳು ಪೂರ್ಣವಾಗಿ ತೆಗೆದುಕೊಳ್ಳಬೇಕು (ಯಾವುದೇ ಕಾರಣಕ್ಕೂ ಚಿಕಿತ್ಸೆಯನ್ನು ಮಧ್ಯದಲ್ಲಿಯೇ ನಿಲ್ಲಿಸಬಾರದು).
ಮೂರು ರೀತಿಯ ವಿಕಿರಣ ಚಿಕಿತ್ಸೆಗಳಿವೆ
ದೇಹದ ಹೊರಗಿನಿಂದ ಕಿರಣಗಳನ್ನು ಹಾಯಿಸುವುದು: ಈ ವಿಕಿರಣ ಚಿಕಿತ್ಸೆಯಲ್ಲಿ ದೇಹದ ಹೊರಗಿನಿಂದ ಸ್ತನಗಳ ಮೇಲೆ ನೇರವಾಗಿ ವಿಕಿರಣಗಳನ್ನು ಹಾಯಿಸಲಾಗುತ್ತದೆ. ಈ ಚಿಕಿತ್ಸೆ ನೀಡಿದ ನಂತರ ಕೆಲವರಿಗೆ ಸ್ವಲ್ಪ ಸುಸ್ತಾಗುವ ಸಾಧ್ಯತೆಯಿರುತ್ತದೆ.
ದೇಹದ ಒಳಗಡೆ ವಿಕಿರಣ ಶೀಲ ಪದಾರ್ಥಗಳನ್ನು ಅಳವಡಿಸುವುದು: ಈ ಹಂತದ ಚಿಕಿತ್ಸೆಯಲ್ಲಿ ದೇಹದ ಒಳಗಡೆ ವಿಕಿರಣಶೀಲ ಪದಾರ್ಥಗಳನ್ನು ಅಳವಡಿಸಲಾಗುತ್ತದೆ. ಇರಿಡಿಯಂ – 192 ಈ ವಸ್ತುವನ್ನು ಕ್ಯಾನ್ಸರ್ ಇರುವ ಜೀವಕೋಶದ ಹತ್ತಿರ ಇರಿಸಲಾಗುತ್ತದೆ. ಇದು ಕ್ಯಾನ್ಸರ್ ಗೆಡ್ಡೆ ಮತ್ತು ಕ್ಯಾನ್ಸರ್ ಹರಡಿರುವ ಇತರ ಅಂಗಾಂಗವನ್ನು ಸುಟ್ಟುಹಾಕುತ್ತದೆ. ಈ ಚಿಕಿತ್ಸೆಯನ್ನು ಹತ್ತು ನಿಮಿಷದವರೆಗೆ ನೀಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ನೋವು, ಸುಸ್ತು ಆಗುವುದಿಲ್ಲ.
ಶಸ್ತ್ರಕ್ರಿಯೆಯ ಜೊತೆಗೆ ವಿಕಿರಣಗಳನ್ನು ಹಾಯಿಸುವುದು: ಶಸ್ತ್ರಕ್ರಿಯೆಯ ಜೊತೆಯಲ್ಲಿಯೇ ನೇರವಾಗಿ ವಿಕಿರಣಗಳನ್ನು ಹಾಯಿಸಲಾಗುತ್ತದೆ. ವಿಕಿರಣ ಚಿಕಿತ್ಸೆಯನ್ನು ತಗೆದುಕೊಳ್ಳುವುದರಿಂದ ಶಸ್ತ್ರಕ್ರಿಯೆಯ ನಂತರವೂ ಉಳಿದಿರುವ ಕ್ಯಾನ್ಸರ್ ಕಣಗಳನ್ನು ಸುಟ್ಟು ಹಾಕಬಹುದು. ಇದರಿಂದ ರೋಗಿಯು ಸಂಪೂರ್ಣವಾಗಿ ಗುಣಹೊಂದುವ ಸಾಧ್ಯತೆಯಿದೆ.
3. ಶಸ್ತ್ರಕ್ರಿಯೆ: ಶಸ್ತ್ರಚಿಕಿತ್ಸೆಯ ಮುಖಾಂತರ ಸ್ತನದಲ್ಲಿ ಉಂಟಾಗಿರುವ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯುವುದಕ್ಕಿಂತ ಮುಂಚೆ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದನ್ನು ಕರಾರುವಾಕ್ಕಾಗಿ ನಿರ್ಧರಿಸಬೇಕು. ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಂ. ಪ್ರಾಥಮಿಕ ಹಂತ: “ಗಂಟು ತೆಗೆಯುವಿಕೆ” ಶಸ್ತ್ರಕ್ರಿಯೆಯ ಮೂಲಕ ಸ್ತನದಲ್ಲಿ ಮೂಡಿರುವ ಗಂಟನ್ನು (ಗೆಡ್ಡೆಯನ್ನು) ತೆಗೆಯಲಾಗುತ್ತದೆ. ಈ ಚಿಕಿತ್ಸೆಯಿಂದ ಸ್ತನದ ಮೂಲ ರೂಪಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ.
ದ್ವಿತೀಯ ಹಂತ: ಕ್ಯಾನ್ಸರ್ ಕಾಯಿಲೆಗೆ ಭಾಗಶಃ (ಅರೆ) ಸ್ತನ ತೆಗೆಯುವಿಕೆ ಶಸ್ತ್ರಕ್ರಿಯೆಯನ್ನು ಮಾಡಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಸ್ತನದಲ್ಲಿ ಮೂಡಿರುವ ಕ್ಯಾನ್ಸರ್ ಗೆಡ್ಡೆಯನ್ನು ಮತ್ತು ಅದರ ಸುತ್ತಲೂ ಇರುವ ಪೂರ್ಣಪ್ರಮಾಣದ ಜೀವಕೋಶಗಳನ್ನು ತೆಗೆಯಲಾಗುತ್ತದೆ.
ಅ. ತೃತೀಯ ಹಂತ: “ಪೂರ್ಣ ಸ್ತನ ತೆಗೆಯುವಿಕೆ” ಶಸ್ತ್ರಕ್ರಿಯೆಯನ್ನು ಮಾಡಲಾಗುತ್ತದೆ. ಈ ಶಸ್ತ್ರಕ್ರಿಯೆಯಲ್ಲಿ ರೋಗಪೀಡಿತವಾದ ಸಂಪೂರ್ಣ ಸ್ತನವನ್ನೇ ತೆಗೆಯಲಾಗುತ್ತದೆ.
ಆ. ನಾಲ್ಕನೇ ಹಂತ: ಕ್ಯಾನ್ಸರ್ ರೋಗವು ಅಂತಿಮ ಹಂತದಲ್ಲಿದ್ದರೆ “ವಿಸ್ತ್ರರಿಸಿದ ಸ್ತನ ತೆಗೆಯುವಿಕೆ ಶಸ್ತ್ರಕ್ರಿಯೆಯನ್ನು ಮಾಡಲಾಗುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ ರೋಗವು ಸ್ತನಗಳಿಗಲ್ಲದೇ ಸುತ್ತಮುತ್ತಲಿನ ಅಂಗಾಂಗಗಳಿಗೆ ಸಹ ಹರಡಿ ರುತ್ತದೆ. ಆದ್ದರಿಂದ ಸ್ತನಗಳ ಜೊತೆಗೆ ಕಂಕುಳಿನ ಭಾಗ ಮತ್ತು ಹಾಲ್ರಸ ಕಣಗಂಟುಗಳನ್ನು ತೆಗೆಯಬೇಕಾಗುತ್ತದೆ.
ಆದ್ದರಿಂದ ಕ್ಯಾನ್ಸರ್ ರೋಗವು ಪ್ರಾರಂಭಿಕ ಹಂತದಲ್ಲಿ ಇರುವಾಗಲೇ ತಕ್ಷಣವೇ ತಜ್ಞವೈದ್ಯರನ್ನು ಕಂಡು ಪರೀಕ್ಷಿಸಿಕೊಂಡು
4. ಚೋದನಿಕೆಗಳ (ಹಾರ್ಮೋನ್) ಚಿಕಿತ್ಸೆ: ಕೆಲವರಲ್ಲಿ ಪ್ರಮುಖವಾಗಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನ್ ಗ್ರಾಹಿಯ ಅಂಶ ಕ್ಯಾನ್ಸರ್ ಗೆಡ್ಡೆಗಳಲ್ಲಿ ಹೆಚ್ಚಿರುತ್ತದೆ. ಇದರಿಂದ ಕ್ಯಾನ್ಸರ್ ರೋಗವು ತೀವ್ರಗತಿಯಲ್ಲಿ ಬೆಳವಣಿಗೆಯಾಗುತ್ತದೆ. ಇಂತವರಿಗೆ ಟಾಮೋಕ್ಸಿಫೆನ್ ಎಂಬ ಹಾರ್ಮೋನನ್ನು ಕುಂಠಿತಮಾಡುವ ಔಷಧಿಯನ್ನು ನೀಡಲಾಗುತ್ತದೆ. ಇದನ್ನು ಸುಮರು 5 ವರ್ಷ ನಿರಂತರವಾಗಿ ತೆಗೆದುಕೊಳ್ಳಬೇಕು.
ಕೆಲವರಿಗೆ ಈ ಔಷಧಿ ಸೇವನೆಯಿಂದ ಅಡ್ಡ ಪರಿಣಾಮಗಳು ಆಗಬಹುದು. ದೇಹತೂಕ ಹೆಚ್ಚಾಗಬಹುದು. ಹೃದಯಸಂಬಂಧಿ ಖಾಯಿಲೆ ಬರಬಹುದು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯೋನಿಸ್ರಾವ ಮುಂತಾದ ತೊಂದರೆಗಳಾಗಬಹುದು.
ಇತ್ತೀಚಿನ ದಿನಗಳಲ್ಲಿ ವಿನೂತನ ರೀತಿಯ ಹಾರ್ಮೋನ್ ಚಿಕಿತ್ಸೆ ಔಷಧಿಯೂ ಬಂದಿದೆ. ಮುಖ್ಯವಾಗಿ ಅರೋಮೆಟೆಸ್ ಇನ್‍ಹಿಬಿಟರ್ಸ್ ಇದು ದೇಹದಲ್ಲಿರುವ ಈಸ್ಟ್ರೋಜೆನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
5. ಜೀವವಿಜ್ಞಾನ ಚಿಕಿತ್ಸೆ : ದೇಹದಿಂದಲೇ ತೆಗೆದುಕೊಂಡ ರೋಗನಿರೋಧಕ ಅಂಶದಿಂದಲೇ ಅಥವಾ ಪ್ರಯೋಗಾಲಯಗಳಿಂದ ತೆಗೆದುಕೊಂಡ ರೋಗನಿರೋಧಕ ಅಂಶದಿಂದ ಮಾಡುವ ಚಿಕಿತ್ಸಾ ವಿಧಾನವಾಗಿದೆ. ಈ ರೋಗ ನಿರೋಧಕ ಅಂಶವು ಕ್ಯಾನ್ಸರ್ ಕಣಗಳೊಂದಿಗೆ ಹೋರಾಡುತ್ತದೆ ಮತ್ತು ವಿಕಿರಣ ಚಿಕಿತ್ಸೆ ಅಥವಾ ಇನ್ನಿತರ ಯಾವುದೇ ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಈ ಚಿಕಿತ್ಸೆಯು ನಿಯಂತ್ರಿಸುತ್ತದೆ ಮತ್ತು ನಿವಾರಿಸುತ್ತದೆ. ಇದಕ್ಕೆ ಇಂಟರ್‍ಫೆರಾನ್ ಇಂಟರ್ ಲ್ಯೂಕಿನ್, ಹೆರ್‍ಸೆಪ್ಟಿನ್ ಮುಂತಾದ ಜೀವಕಣ ಔಷಧಿಗಳಿಂದ ಕ್ಯಾನ್ಸರ್ ರೋಗವನ್ನು ನಿವಾರಿಸಬಹುದು.
ಚಿಕಿತ್ಸೆಯ ನಂತರದ ಎಚ್ಚರಿಕೆ ಕ್ರಮ
ಚಿಕಿತ್ಸೆ ತೆಗೆದುಕೊಂಡ ಯಾವುದೇ ಮಹಿಳೆ ಯಾವ ತಜ್ಞರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳೋ ಅವರಲ್ಲಿಯೇ ನಿಗದಿತ ಅವಧಿಯಲ್ಲಿ ರೋಗ ನಿವಾರಣೆಯಾಗಿರುವುದನ್ನು ಪರೀಕ್ಷೆ ಮಾಡಿಸಿಕೊಂಡು ಖಚಿತಪಡಿಸಿಕೊಳ್ಳುವುದು ಅಗತ್ಯ.
ಮುಂಜಾಗ್ರತಾ ಕ್ರಮಗಳು
ಪ್ರತಿನಿತ್ಯ ಸ್ನಾನ ಮಾಡುವಾಗ ಸ್ತನಗಳನ್ನು ಮೃದುವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ನಂತರ ಸ್ತನಗಳಿಗೆ ಮತ್ತು ಕಂಕುಳುಗಳಿಗೆ ಮಾಯಿಶ್ಚರೈಜರನ್ನು ಹಚ್ಚಿಕೊಳ್ಳಬೇಕು. ಬೇಸಿಗೆಯ ಕಾಲದಲ್ಲಿ ಟಾಲ್ಕಂ ಪೌಡರನ್ನು ಹಾಕಿಕೊಳ್ಳಬೇಕು.
ಯಾವಾಗಲೂ ಸರಿಯಾದ ಅಳತೆಯ ಮತ್ತು ಮೃದುವಾದ ಹತ್ತಿಯಿಂದ ಮಾಡಿದಂತಹ ಒಳ ಉಡುಪನ್ನು (ಬ್ರಾ) ಧರಿಸುವುದು ಉತ್ತಮ. ಬಹಳ ಬಿಗಿಯಾದ ಅಥವಾ ಸಡಿಲವಾದ ಒಳ ಉಡುಪುಗಳನ್ನು ಧರಿಸುವುದು ಯೋಗ್ಯವಲ್ಲ. ಅತಿ ಬಿಗಿಯಾದ ಒಳ ಉಡುಪನ್ನು ಧರಿಸುವುದರಿಂದ ಸ್ತನಗಳಿಗೆ ಉಸಿರು ಕಟ್ಟಿ ಕಲೆಗಳಾಗುತ್ತವೆ ಮತ್ತು ಚರ್ಮದ ತುರಿಕೆಯಾಗಬಹುದು.
ರಾತ್ರಿಯ ವೇಳೆ ಒಳ ಉಡುಪನ್ನು ಧರಿಸದೇ ಇರುವುದು ಒಳ್ಳೆಯದು. ಇದರಿಂದ ಸರಾಗವಾಗಿ ಉಸಿರಾಡಲು ಅನುಕೂಲವಾಗುತ್ತದೆ. ಮಲಗುವಾಗ ಬೆನ್ನಿನ ಮೇಲೆ ಅಥವಾ ಪಕ್ಕಕ್ಕೆ ಮಲಗುವುದು ಉತ್ತಮ. ಸ್ತನಗಳ ಮೇಲೆ ಒತ್ತಡ ಬೀಳುವಂತೆ (ಬೋರಲಾಗಿ) ಮಲಗಬಾರದು. ಇದರಿಂದ ಸ್ತನಗಳ ಮೂಲ ಆಕಾರ ಕೆಡಬಹುದು.
ಸ್ತನಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದರೆ ನಿರ್ಲಕ್ಷಿಸದೇ ತಕ್ಷಣವೇ ಸೂಕ್ತ ತಜ್ಞವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಂಡು ವ್ಯತ್ಯಾಸಕ್ಕೆ ಕಾರಣ ತಿಳಿದುಕೊಂಡು ಸೂಕ್ತ ಸಲಹೆ ಸೂಚನೆಗಳೊಂದಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಸಂಕೋಚ ಬಿಡಿ
ನಮ್ಮ ದೇಶದಲ್ಲಿ ಸಂಕೋಚ ಸ್ವಭಾವವುಳ್ಳ ಸ್ತ್ರೀಯರು ಹೆಚ್ಚಿನವರಾಗಿರುವುದರಿಂದ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಸ್ತನಗಳಲ್ಲಿ ಉಂಟಾಗುವ ಏರುಪೇರಿನ ಲಕ್ಷಣಗಳನ್ನು ನಾಚಿಕೆ ಮತ್ತು ಸಂಕೋಚದ ಸ್ವಭಾವದಿಂದ ತನ್ನ ತಾಯಿ ಮತ್ತು ಸಹೋದರಿಯ ಬಳಿಯೂ ಹೇಳಿಕೊಳ್ಳಲು ಹಿಂಜರಿಯುತ್ತಾರೆ.
ವಿವಾಹವಾದ ಮಹಿಳೆಯ ಸ್ತನಗಳಲ್ಲಿ ಉಂಟಾಗುವ ಬದಲಾವಣೆಯನ್ನು ನೈಸರ್ಗಿಕವೆಂದು ಭಾವಿಸುತ್ತಾಳೆ. ವೈದ್ಯರ ಬಳಿ ಕಾರಣ ಹೇಳಿ ತನ್ನ ಸ್ತನವನ್ನು ಅವರಿಗೆ ತೋರಿಸುವ ಪ್ರಸಂಗ ಬರಬಹುದು ಎಂಬ ಹಿಂಜರಿಕೆ ಭಾವನೆಯಿಂದ ಕಾಲ ತಳ್ಳುವುದರಿಂದ ಈ ವ್ಯಾಧಿ ಉಲ್ಬಣವಾಗುವ ಹಂತವನ್ನು ಮುಟ್ಟುವ ಸಾಧ್ಯತೆ ಹೆಚ್ಚಾಗಿವೆ.
ಒಟ್ಟಿನಲ್ಲಿ ಸಂಕೋಚ ಮತ್ತು ಒಂದು ವಿಧವಾದ ನಿರ್ಲಕ್ಷ್ಯದ ಮನೋಭಾವನೆಯಿಂದ ಉಂಟಾಗುವ ಬದಲಾವಣೆಗಳನ್ನು ಪ್ರಸ್ತಾಪಿಸದೇ ಇರುವುದೇ ಈ ರೋಗದ ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ. ಮೊದಲನೇ ಮತ್ತು ಎರಡನೇ ಹಂತದ ಕ್ಯಾನ್ಸರ್‍ಗಳನ್ನು ಸುಲಭವಾಗಿ ಗುಣಪಡಿಸಬಹುದು. ಮೂರು ಮತ್ತು ನಾಲ್ಕನೇ ಹಂತದಲ್ಲಿನ ಕ್ಯಾನ್ಸರ್ ಗುಣಪಡಿಸುವುದು ಬಹಳ ಕಷ್ಟ. ಆದುದುರಿಂದ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ತಮ್ಮ ಆರೋಗ್ಯದ ದೃಷ್ಟಿಯಿಂದಲೂ ಹಾಗೂ ತಮ್ಮ ಕುಟುಂಬ ವರ್ಗದವರ ಹಿತಚಿಂತನೆಯಿಂದಲೂ ಪ್ರತಿಯೊಬ್ಬ ಮಹಿಳೆ ಅಥವಾ ತರುಣಿ ವಿವಾಹವಾಗಿರಲಿ, ಆಗದೇ ಇರಲಿ, ಮಕ್ಕಳಾಗಿರಲಿ ಆಗದೇ ಇರಲಿ ವರ್ಗಭೇದವಿಲ್ಲದೆ ತನ್ನ ಸ್ತನದಲ್ಲಿ ಉಂಟಾಗುವ ಅಸಹಜ ಬೆಳವಣಿಗೆಯನ್ನು ವೈದ್ಯರ ಬಳಿ ಪ್ರಸ್ತಾಪಿಸುವುದು ಸಮಂಜಸ ಹಾಗೂ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ.
ಏಡಿ ಹಿಡಿತ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಅನಿರೀಕ್ಷಿತವಾಗಿ ಏಡಿ ಒಮ್ಮೆ ಹಿಡಿದರೆ ಎಷ್ಟೇ ಪ್ರಯತ್ನಪಟ್ಟರೂ ಬಿಡಿಸಿಕೊಳ್ಳಲಾಗುವುದಿಲ್ಲ. ಒಂದು ವೇಳೆ ಬಿಡಿಸಿಕೊಂಡರೂ ಅದು ಹಿಡಿದಿರುವಷ್ಟು ಮಾಂಸ ಕಿತ್ತು ಬರುತ್ತದೆ. ಹೀಗೆ ಏಡಿಹುಣ್ಣು ಬಂದರೆ ಅಥವಾ ಕಾಣಿಸಿಕೊಂಡರೆ ರೋಗದಿಂದ ಮುಕ್ತವಾಗುವುದು ಬಹಳ ಕಠಿಣ. ಆದುದುರಿಂದ ಸ್ತನ ಕ್ಯಾನ್ಸರನ್ನು ‘ಏಡಿಹುಣ್ಣು’ ಎಂದು ಕರೆಯುತ್ತಾರೆ. ಆದಷ್ಟು ಎಚ್ಚರಿಕೆಯಿಂದ ಇರುವುದು ಅವಶ್ಯಕ.
ಸ್ತನದ ಸೌಂದರ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ, ಅವುಗಳ ರಕ್ಷಣೆಯ ಕಡೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.
ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net