ಸೋರೆಕಾಯಿ – ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧ

ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ. ಪಲ್ಯ, ಸಾಂಬಾರು, ಪಾಯಸ, ಕಡುಬು ಹೀಗೆ ಬಹು ಬಗೆಯ ಖಾದ್ಯಗಳನ್ನು ಅದರಿಂದ ತಯಾರಿಸಬಹುದು.

bottle-gourd ಸೋರೆಕಾಯಿ - ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧ

ನಾವು ಬಳಸುವ ತರಕಾರಿಗಳ ಪೈಕಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವುದು ಸಿಹಿ ಸೋರೆಕಾಯಿ. (ಕಹಿ ಸೋರೆ ಬಳಸಬಾರದು) ಪಲ್ಯ, ಸಾಂಬಾರು, ಪಾಯಸ, ಕಡುಬು ಹೀಗೆ ಬಹು ಬಗೆಯ ಖಾದ್ಯಗಳನ್ನು ಅದರಿಂದ ತಯಾರಿಸಬಹುದು. ಪ್ರಮುಖವಾಗಿ ಅದೊಂದು ಔಷಧವೂ ಹೌದು. ಯಾವುದೇ ಕಾಯಿಲೆಯವರಿಗೂ ವಜ್ರ್ಯವಲ್ಲ. ನೂರು ಗ್ರಾಮ್ ಪ್ರಮಾಣದ ಸೋರೆಕಾಯಿಯಿಂದ ದೇಹಕ್ಕೆ ಎಂಟೂವರೆ ಮಿಲಿಗ್ರಾಂ ಸಿ ಜೀವಸತ್ವ ಲಭಿಸುತ್ತದೆ. ಹಾಗೆಯೇ ಕಾರ್ಬೋಹೈಡ್ರೇಟ್ಸ್, ನಾರು, ಕೊಬ್ಬು, ಪ್ರೊಟೀನ್, ಸುಣ್ಣ, ಕಬ್ಬಿಣ, ಮೆಗ್ನೇಷಿಯಂ, ಪೊಟಾಸಿಯಂ, ಮ್ಯಾಂಗನೀಸ್, ಸೋಡಿಯಂ, ರಂಜಕ, ಸತುಗಳು ತುಂಬಿರುವ ಶ್ರೀಮಂತ ಆಹಾರವಿದು. ಬೇಸಗೆಯಲ್ಲಿ ಅದರಿಂದ ತಯಾರಿಸಿದ ಜ್ಯೂಸಿನ ನಿತ್ಯ ಸೇವನೆ ಸೋಡಿಯಂ ನಷ್ಟವನ್ನು ತಡೆಯುತ್ತದೆ. ಆಹಾರದಲ್ಲಿ ಅದು ಸೇರಿದರೆ ಯಕೃತ್ತಿನ ದೋಷಗಳನ್ನು ಗುಣಪಡಿಸುತ್ತದೆ. ಜ್ವರ, ಕೊಲೈಟಿಸ್, ಅಧಿಕ ರಕ್ತದೊತ್ತಡ, ರಕ್ತ ಕಟ್ಟಿಕೊಂಡು ಎದೆನೋವು, ಚರ್ಮದ ಕಾಯಿಲೆ, ಪಿತ್ಥ, ಕೆಮ್ಮು, ಕಿವಿನೋವು, ಉರಿಯೂತ ಹೀಗೆ ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವಾಗುತ್ತದೆ.

1. ಬೆಂಕಿಯಿಂದ ಗುಳ್ಳೆಗಳುಂಟಾದರೆ ಸೋರೆಕಾಯಿಯ ಎಳೆಯ ಬೀಜಗಳನ್ನು ಬೇಯಿಸಿ ನುಣ್ಣಗೆ ಅರೆದು ಪೋಲ್ಟೀಸ್ ಹಾಕುವುದರಿಂದ ಕಲೆಗಳು ಉಳಿಯದೆ, ಕೀವು ಆಗದೆ ಗುಣವಾಗುತ್ತದೆ.

2. ಸೋರೆಕಾಯಿಯ ತಿರುಳನ್ನು ಬೇಯಿಸಿ ರಸ ಹಿಂಡಿ ಅದಕ್ಕೆ ಕೊಂಚ ಸಕ್ಕರೆ ಮತ್ತು ಉಪ್ಪು ಬೆರೆಸಿ ಕುಡಿದರೆ ಅತಿಸಾರ ಶಮನವಾಗುವುದು. ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣಗಳಿದ್ದರೆ ರಸದೊಂದಿಗೆ ಸಕ್ಕರೆಯ ಬದಲು ಕೊಂಚ ಇಂಗು ಬೆರೆಸಿಕೊಳ್ಳಬೇಕು.

3. ಮಲಬದ್ಧತೆಯಾಗಿದ್ದರೆ ಸೋರೆಕಾಯಿಯ ಹೋಳುಗಳನ್ನು ಸಿಪ್ಪೆಸಹಿತ ಬೇಯಿಸಿ ತೆಂಗಿನಕಾಯಿ ಹಾಲು ಸೇರಿಸಿ ಒಂದು ಕಪ್ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ ವಿರೇಚಕವಾಗುತ್ತದೆ.

4. ಮೂತ್ರ ಉರಿಗೆ ಹಸಿ ತಿರುಳನ್ನು ಮಿಕ್ಸಿಯಲ್ಲಿ ಅರೆದು ಹುರಿದ ಜೀರಿಗೆ ಸೇರಿಸಿ ಕುಡಿದರೆ ಶಮನವಾಗುವುದಲ್ಲದೆ ಮೂತ್ರಬಂಧವೂ ಪರಿಹಾರವಾಗುತ್ತದೆ. ತಿರುಳಿನ ಹೊರತು ಹೊರಗಿನ ಸಿಪ್ಪೆಯನ್ನಷ್ಟೇ ಬೇಯಿಸಿ ರಸ ಮಾಡಿ ಕುಡಿಯುವುದು ಮೂತ್ರವರ್ಧನೆಗೆ ಸಹಕಾರಿ.

5. ಸೋರೆಯ ತಿರುಳನ್ನು ಅರೆದು ಜೀರಿಗೆಯೊಂದಿಗೆ ಎಳ್ಳೆಣ್ಣೆಯಲ್ಲಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ನಿದ್ರಾಹೀನತೆ ತೊಲಗುತ್ತದೆ. ತಲೆಗೂದಲು ಉದುರುವ ಸಮಸ್ಯೆ ನಿಲ್ಲುತ್ತದೆ.

Also Read: ಕೂದಲು ಉದುರುವುದು – ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆ ಕಡಿಮೆ ಮಾಡಿ 

6. ಈ ತೈಲದ ಮಸಾಜ್ ಖಿನ್ನತೆ ಹಾಗೂ ಸಂಧಿವಾತಕ್ಕೆ ಮದ್ದಾಗುತ್ತದೆ.

7. ಸೋರೆಯ ಬೀಜದಲ್ಲಿ ತಾಮ್ರ, ಗಂಧಕ, ಕಬ್ಬಿಣ, ಪೊಟಾಷಿಯಂ ಹೇರಳವಾಗಿದೆ. ಬೇಯಿಸಿದ ಎಳೆಯ ಬೀಜಗಳನ್ನು ಮಜ್ಜಿಗೆ ಮತ್ತು ಇಂಗಿನೊಂದಿಗೆ ಸೇವಿಸಿದರೆ ಹೊಟ್ಟೆಯ ಜಂತುಹುಳಗಳು ನಾಶವಾಗುತ್ತವೆ. ಒಣ ಬೀಜಗಳನ್ನು ಸುಟ್ಟು ಕರಕನ್ನು ರಕ್ತಸ್ರಾವ ನಿರೋಧಕವಾಗಿ ಗಾಯಗಳಿಗೆ ಹಚ್ಚಿದರೆ ಶೀಘ್ರ ಗುಣವಾಗುತ್ತದೆ.

8. ಪಿತ್ಥಬಾಧೆ ತೀವ್ರವಿದ್ದವರು ಬೇಯಿಸಿದ ಸೋರೆ ತಿರುಳಿನ ರಸಕ್ಕೆ ಲಿಂಬೆರಸ ಮತ್ತು ಜೇನುತುಪ್ಪಬೆರೆಸಿ ಕುಡಿಯುವುದು ಗುಣಕಾರಿಯಾಗಿದೆ.

9. ವಿಷ ಸೇವಿಸಿದವರಿಗೆ ವಾಂತಿ ಮಾಡಿಸಲು ಸೋರೆ ಬಳ್ಳಿಯ ಎಲೆಗಳ ರಸ ಹಿಂಡಿ ಕುಡಿಸುತ್ತಾರೆ.

10. ಎಲೆಗಳು ಮತ್ತು ಬೆಳ್ಳುಳ್ಳಿಯಿಂದ ತಯಾರಿಸಿದ ಕಷಾಯ ಸೇವನೆ ವಾಯುವಿನಿಂದ ಉಂಟಾದ ಎದೆನೋವು ನಿವಾರಿಸುತ್ತದೆ. ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಚರ್ಮದ ಕೆರಳಿಕೆ, ಗಂಟು, ಗುಳ್ಳೆಗಳಿಗೆ ಲೇಪಿಸುವುದು ಗುಣಕಾರಿ.

11. ಮಧುಮೇಹವುಳ್ಳವರಿಗೆ ದಿನವೂ ಮೂರು ಗ್ರಾಮ್ ಪ್ರಮಾಣದ ಸೋರೆಕಾಯಿಯ ಸೇವನೆ ಇನ್ಸುಲಿನ್ ಉತ್ಪನ್ನಕ್ಕೆ ಸಹಾಯಕವೆಂದು ಚೀನಾದ ಶೋಧನೆಗಳು ಹೇಳಿವೆ.

Also Watch: ಮಧುಮೇಹ ಮತ್ತು ಹೃದ್ರೋಗ – ಡಾ. ಮಹಾಂತೇಶ್ ಚರಂತಿಮಠ್

12. ದೇಹದ ತೂಕ ಇಳಿಸಿಕೊಳ್ಳಬೇಕಿದ್ದರೆ ಸೋರೆಕಾಯಿಯ ನಿತ್ಯ ಬಳಕೆ ಉತ್ತಮ. ಕೊಲೆಸ್ಟ್ರಾಲ್ ತಗ್ಗಿಸಲು ಅದು ಸಮರ್ಥವಾಗಿದೆ.

13. ಒಣಗಿದ ಬೀಜಗಳನ್ನು ಹುಡಿ ಮಾಡಿ ತಯಾರಿಸುವ ತೈಲದ ಬಳಕೆ ಮೈಗ್ರೇನ್ ನಿವಾರಿಸುತ್ತದೆ.

14. ಮೂಲವ್ಯಾಧಿ ಮತ್ತು ಮುಟ್ಟಿನ ಸಂದರ್ಭದ ಅತಿ ರಕ್ತಸ್ರಾವ ತಡೆಯಲು ಸೋರೆಕಾಯಿಯ ಹೋಳುಗಳನ್ನು ಬೇಯಿಸಿ ತಣ್ಣಗಾದ ಬಳಿಕ ತುಪ್ಪ ಮತ್ತು ಜೇನು ಬೆರೆಸಿ ತಿನ್ನುವುದು ಸಹಕಾರಿ.

15. ಬಳ್ಳಿಯಿಂದ ಬೇರ್ಪಡಿಸಿ ಎರಡು ವಾರ ಕಳೆದಿರುವ ಸೋರೆಕಾಯಿಯಲ್ಲಿ ನೀರಿನಂಶ ಕಡಮೆಯಿರುವುದರಿಂದ ಮದ್ದಿನ ದೃಷ್ಟಿಯಿಂದ ಬಳಕೆ ಯೋಗ್ಯವಲ್ಲ. ಬಳಸುವ ಮುನ್ನ ಕಹಿ ಜಾತಿಯ ಸೋರೆಯ ಬಗೆಗೆ ಪರೀಕ್ಷಿಸಿಕೊಳ್ಳಬೇಕು. ಕಹಿ ಸೋರೆ ಅಪಾಯಕಾರಿ.

ಪ.ರಾಮಕೃಷ್ಣ ಶಾಸ್ತ್ರಿ
Mob: 94833 52306

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!