ಸೊಗದೇ ಬೇರು – ಹಲವಾರು ಖಾಯಿಲೆಗಳನ್ನು ಗುಣ ಮಾಡುವುದರ ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನು ಕೂಡಾ ಕೊಡುತ್ತದೆ. ಇದಕ್ಕಿರುವ ಉತ್ಕೃಷ್ಟ ತಂಪುಗುಣದ ಕಾರಣದಿಂದಾಗಿ ಆಯುರ್ವೇದ ವೈದ್ಯರು ಉಷ್ಣದಿಂದಾದ ಹಲವಾರು ರೋಗಗಳಲ್ಲಿ ಇದನ್ನು ನೀಡುತ್ತಾರೆ.
ಬಹುತೇಕ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯವಿರುವ ಒಂದು ವಿಶೇಷ ಗಿಡಮೂಲಿಕೆ ಸಾರಿವಾ ಅಥವಾ ಸೊಗದೇ ಬೇರು. ಸೊಗದೆ ಬೇರು ಆಯುರ್ವೇದ ಔಷಧಿ ದ್ರವ್ಯಗಳಲ್ಲಿ ಅತ್ಯಂತ ವಿಶಿಷ್ಟವಾದದ್ದು ಏಕೆಂದರೆ ಇದು ನಮ್ಮ ದೇಹದ ಹಲವಾರು ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದಲ್ಲದೇ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ.
ಮೂರೂ ದೋಷಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುವ ಕಾರಣ ಇದನ್ನು ಸೇವಿಸಿದಾಗ ಪಿತ್ತ ಕಡಿಮೆಯಾದರೂ ಕಫ ಹೆಚ್ಚಾಯಿತು ಅಥವಾ ಕಫ ಕಡಿಮೆಯಾದರೂ ವಾತ ಹೆಚ್ಚಾಯಿತು ಎಂಬಂತಹ ತೊಂದರೆಗಳು ಉಂಟಾಗುವುದಿಲ್ಲ. ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗುವ ಮೊದಲು ನಮ್ಮ ದೇಹದಲ್ಲಿ ಪಿತ್ತ ದೋಷ ಅತಿಯಾಗಿ ಹೆಚ್ಚುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಈ ಕಾಲದಲ್ಲಿ ಪಿತ್ತವನ್ನು ಶಮನ ಮಾಡುವ ಅಂದರೆ ಉಷ್ಣವನ್ನು ಕಡಿಮೆ ಮಾಡುವ ಆಹಾರ ಅಥವಾ ಔಷಧದ ಅಗತ್ಯತೆ ಹೆಚ್ಚು. ಈ ವಿಷಯದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ನನ್ನಾರಿ ಅಥವಾ ಸೊಗದೆ ಬೇರು.
ಇದರ ತಂಪು ಹಲವಾರು ಖಾಯಿಲೆಗಳನ್ನು ಗುಣ ಮಾಡುವುದರ ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನು ಕೂಡಾ ಕೊಡುತ್ತದೆ. ಯಾವುದೇ ಅಡ್ಡ ಪರಿಣಾಮ ಮಾಡದೇ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಇದಕ್ಕಿರುವ ಉತ್ಕೃಷ್ಟ ತಂಪುಗುಣದ ಕಾರಣದಿಂದಾಗಿ ಆಯುರ್ವೇದ ವೈದ್ಯರು ಉಷ್ಣದಿಂದಾದ ಹಲವಾರು ರೋಗಗಳಲ್ಲಿ ಇದನ್ನು ನೀಡುತ್ತಾರೆ. ಉಷ್ಣ ಪ್ರಕೃತಿಯವರಿಗೆ ಇದರ ನಿಯಮಿತ ಸೇವನೆ ಬಹು ಉಪಕಾರಿ.
ಚರ್ಮರೋಗ, ತುರಿಕೆ, ಜ್ವರ, ಆಸಿಡಿಟಿ, ವೀರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಬಿಳಿಮುಟ್ಟು, ಉರಿಮೂತ್ರ, ಅತಿಯಾದ ಮುಟ್ಟಿನ ರಕ್ತಸ್ರಾವ, ದೇಹದ ಯಾವುದೇ ಭಾಗದಲ್ಲಿ ಆಗುವ ಉರಿ ಹೀಗೆ ಹಲವು ತೊಂದರೆಗಳನ್ನು ಇದು ಗುಣಪಡಿಸಬಲ್ಲುದು. ಇದರ ಇನ್ನೊಂದು ವಿಶೇಷತೆಯೆಂದರೆ ಇದಕ್ಕಿರುವ ವೈರಸ್ ನಿರೋಧಕ ಗುಣ. ಅಷ್ಟೇ ಅಲ್ಲದೇ ರಕ್ತದ ಅಶುದ್ಧಿ, ಕಫ, ಕೆಮ್ಮು, ಅಗ್ನಿಮಾಂದ್ಯ, ಮುಟ್ಟಿನ ಸಮಯದ ಹೊಟ್ಟೆನೋವು ಇತ್ಯಾದಿ ಹಲವು ತೊಂದರೆಗಳಿಗೆ ಇದು ಔಷಧ.
ಇದರ ಪಾನಕ ಮಾಡಿಕೊಂಡು ನಿತ್ಯವೂ ಸೇವಿಸಬಹುದು. ಒಂದು ಲೋಟ ನೀರಿಗೆ ಕಾಲು ಚಮಚ ಸೊಗದೇ ಬೇರಿನ ಪುಡಿ, ಚಿಟಿಕೆಯಷ್ಟು ಏಲಕ್ಕಿ, ರುಚಿಗೆ ತಕ್ಕಷ್ಟು ಜೋನಿಬೆಲ್ಲ ಹಾಕಿದರೆ ಪಾನಕ ತಯಾರಾಗುತ್ತದೆ. ನಿಜವಾದ ಅರ್ಥದಲ್ಲಿ ದೇಹವನ್ನು ತಂಪುಗೊಳಿಸಿ ಶಕ್ತಿಯನ್ನೂ ನೀಡುತ್ತದೆ.
ಇದರ ಬೇರನ್ನು ತಂದು ಹಾಲಿನಲ್ಲಿ (ಅಥವಾ ನೀರಿನಲ್ಲಿ) ತೇಯ್ದು ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚದಷ್ಟು ಸೇವಿಸಿದರೆ ಉಳಿದೆಲ್ಲಾ ಉಪಯೋಗಗಳ ಜೊತೆಗೆ ಚರ್ಮದ ಕಾಂತಿ ಹೆಚ್ಚಲೂ ಸಹಾಯವಾಗುತ್ತದೆ. ಹಲವಾರು ಮನೆಗಳಲ್ಲಿ ನಿತ್ಯವೂ ಕೊತ್ತಂಬರಿ, ಜೀರಿಗೆ, ಶುಂಠಿ, ಚಕ್ಕೆ ಮುಂತಾದವುಗಳ ಕಷಾಯ ಕುಡಿಯುವ ಪದ್ಧತಿಯಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಒಟ್ಟಾರೆ ಆರೊಗ್ಯ ವೃದ್ಧಿಯ ದೃಷ್ಟಿಯಿಂದ ಈ ಪದ್ಧತಿ ತುಂಬಾ ಒಳ್ಳೆಯದು.
ಜ್ವರ ಬಂದಾಗ ಜ್ವರದ ಕಾರಣದಿಂದ ಅಥವಾ ಮಾತ್ರೆಗಳನ್ನು ಸೇವಿಸಿದ ಕಾರಣದಿಂದ ದೇಹ ಉಷ್ಣವಾಗಿ ಹಲವು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಜ್ವರವನ್ನು ನಿವಾರಿಸುವ ಔಷಧವಾಗಿಯೂ, ಜೊತೆಗೆ ಉಷ್ಣತೆಯನ್ನು ಶೀಘ್ರವಾಗಿ ಕಡಿಮೆ ಮಾಡುವ ಟಾನಿಕ್ ಆಗಿಯೂ ಸೊಗದೇ ಬೇರು ಕೆಲಸ ಮಾಡುತ್ತದೆ. ಉದ್ವೇಗ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಪಿತ್ತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತಲೆಯಲ್ಲಿ ಉರಿ ಅಥವಾ ಬಿಸಿ ಅನುಭವವಾಗುವುದು, ಹೊಟ್ಟೆ ಉರಿ, ಹಸ್ತ – ಪಾದಗಳ ಉರಿಯಾಗುವುದು ಸಾಮಾನ್ಯ. ಅಂಥವರು ಇದರ ಬಳಕೆಯನ್ನು ನಿತ್ಯವೂ ಮಾಡಬೇಕು.
ಇದು ಸೌಂದರ್ಯ ವರ್ಧಕವೂ ಆದ್ದರಿಂದ ಇದರ ಪುಡಿಯನ್ನು ಹಾಲಿನ ಜೊತೆ ಸೇರಿಸಿ ಪೇಸ್ಟ್ ಮಾಡಿಕೊಂಡು ಫೇಸ್ ಪ್ಯಾಕ್ ಮಾಡಿಕೊಂಡರೆ ಉತ್ತಮ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ಕಪ್ಪು ಕಲೆಗಳು ಮತ್ತು ಒಣ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.