ಧೂಮಪಾನ ಸಂಗ : ದೈಹಿಕ, ಮಾನಸಿಕ ಆರೋಗ್ಯಕ್ಕೆ ಭಂಗ

ಧೂಮಪಾನಿಗಳಲ್ಲಿ ದುರ್ಬಲ ದೈಹಿಕ ಆರೋಗ್ಯ ಸಮಸ್ಯೆಯಲ್ಲದೇ, ಮಾನಸಿಕ ಸ್ವಾಸ್ಥ್ಯದ ಗಂಭೀರ ತೊಡಕುಗಳೂ ಕಂಡುಬರುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಧೂಮಪಾನ ವ್ಯರ್ಜನ ಸಾಧ್ಯವಾಗದೇ ಇರುವುದು ಭಾರತದ ಬಹುತೇಕ ಧೂಮಪಾನಿಗಳು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಹೇಗಾದರೂ ಮಾಡಿ ಧೂಮಪಾನವನ್ನು ಬಿಡಲೇಬೇಕೆಂದು ಅನೇಕ ಮಂದಿ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಹಠಮಾರಿಯಾದ ಈ ದುಶ್ಚಟದಿಂದ ಹೊರಬರಲು ಅವರಿಗೆ ಸಾಧ್ಯವಾಗದಿರುವುದು ದುರಂತದ ಸಂಗತಿ.
ಈ ದುರಾಭ್ಯಾಸದಿಂದ ತಲೆದೋರುವ ಅಪಾಯಕಾರಿ ದುಷ್ಪರಿಣಾಮಗಳ ಬಗ್ಗೆ ಚೆನ್ನಾಗಿ ಮನದಟ್ಟಾಗಿದ್ದರೂ ಧೂಮಪಾನದಿಂದ ಮುಕ್ತರಾಗಲು ಯತ್ನಿಸುವ ಹತ್ತರಲ್ಲಿ ಒಂಭತ್ತು ಮಂದಿ ವಿಫಲಾಗುತ್ತಾರೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ.74 ಧೂಮಪಾನಿಗಳು ಈ ದುಶ್ಚಟವನ್ನು ತ್ಯಜಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದರೂ ನಾಲ್ವರಲ್ಲಿ ಮೂವರು ಧಂ ಎಳೆಯುತ್ತಾರೆ. ಚೇತರಿಸಿಕೊಂಡ ನಂತರ ಹತ್ತರಲ್ಲಿ ಎಂಟು ಮಂದಿ ಮತ್ತೆ ಹಳೆ ಚಾಳಿಯನ್ನು ಮುಂದುವರಿಸುತ್ತಾರೆ.
ಧೂಮಪಾನಿಗಳು ಅತ್ಯಂತ ಸೂಕ್ಷ್ಮ ನಡವಳಿಕೆಯನ್ನು ತೋರ್ಪಡಿಸುತ್ತಾರೆ, ಈ ವರ್ತನೆಯು ಧೂಮಪಾನಿಗಳಲ್ಲದ ಮಂದಿಗಿಂತ ಅಧಿಕವಾಗಿರುತ್ತದೆ. ಈ ದುಶ್ಚಟಕ್ಕೆ ದಾಸರಾದವರು ಮಾನಸಿಕ ಒತ್ತಡದಿಂದಲೂ ಬಳಲುತ್ತಾರೆ. ಅಲ್ಲದೇ ನಿದ್ರಾಭಂಗ ಮತ್ತು ನಿದ್ರಾಹೀನತೆ ಸಮಸ್ಯೆಗಳಿಂದ ನರಳುತ್ತಾರೆ. ಇಂಥ ಮಂದಿಯಲ್ಲಿ ಏಕಾಗ್ರತೆ, ಸ್ವಯಂ ಪ್ರೇರಣೆ ಕೊರತೆಗಳು ಎದ್ದು ಕಾಣುತ್ತವೆ. ಆಗಾಗ ಹತಾಶೆ-ಕೋಪ ಸ್ಫೋಟಗೊಳ್ಳುವುದರಿಂದ ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿಗಳೊಂದಿಗೆ ಜಗಳವಾಡುತ್ತಾರೆ-ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ.
ಆತಂಕಕಾರಿ ಸಂಗತಿ ಎಂದರೆ, ಸಿಗರೇಟ್ ಸೇದುವ ಶೇ.65ಕ್ಕೂ ಹೆಚ್ಚು ಮಂದಿ ಅಧಿಕ ರಕ್ತದೊತ್ತಡದಿಂದ ನರಳುತ್ತಾರೆ. ಅಲ್ಲದೇ ಐವರು ಧೂಮಪಾನಿಗಳ ಪೈಕಿ ನಾಲ್ವರಲ್ಲಿ ಅಪಾಯಕಾರಿ ಕಾರ್ಬನ್ ಮೊನೊಕ್ಸೈಡ್ ಮಟ್ಟವು ಅಧಿಕವಾಗಿರುತ್ತದೆ. ರಕ್ತದ ಏರೋತ್ತಡ ಮತ್ತು ಇಂಗಾಲ ಮಟ್ಟದ ಏರಿಕೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತದೆ.
ಅಧ್ಯಯನದಿಂದ ಕಂಡಬಂದ ಮತ್ತೊಂದು ಸಂಗತಿ ಎಂದರೆ, ಧೂಮಪಾನದ ಸಂಗ ತೊರೆಯುವಂತೆ ಶೇ.91 ಮಂದಿ ವೈದ್ಯರಿಂದ ಕಟ್ಟುನಿಟ್ಟಿನ ಸಲಹೆ ಪಡೆಯುತ್ತಾರೆ. ದುಶ್ಚಟವನ್ನು ತ್ಯಜಿಸಲು ಶೇ.75ರಷ್ಟು ಮಂದಿ ಪ್ರಾಮಾಣಿಕ ಪ್ರಯತ್ನ ಮಾಡುವವರಲ್ಲಿ ಕೆಲವರು ಸಫಲರಾದರೂ ಅದರ ಫಲಿತಾಂಶ ತಾತ್ಕಾಲಿಕವಾಗಿತ್ತದೆ. ಮೂರು ತಿಂಗಳ ಒಳಗೆ ಇವರು ಮತ್ತೆ ಚಟದ ಸೆಳೆತಕ್ಕೆ ಒಳಗಾಗಿ ಧಂ ಎಳೆಯುವುದನ್ನು ಮುಂದುವರಿಸುತ್ತಾರೆ.
ಧೂಮಪಾನ ಚಟದಿಂದ ದೂರಾಗುವುದು ಒಂದು ದೊಡ್ಡ ಸವಾಲಿನ ಕೆಲಸ. ಈ ಯತ್ನದಲ್ಲಿ ಸಫಲರಾಗಲು ಬಹುತೇಕ ಮಂದಿ ಪರದಾಡುತ್ತಾರೆ; ಹೋರಾಡುತ್ತಾರೆ. ಧೂಮಪಾನಿಗಳ ಅಭ್ಯಾಸದ ನಮೂನೆಗಳು ದೇಶದ ಎಲ್ಲ ನಗರಗಳಲ್ಲೂ ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಧೂಮಪಾನವನ್ನು ಶತಾಯಗತಾಯ ತ್ಯಜಿಸಬೇಕೆಂಬ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ದುರದೃಷ್ಟದ ಸಂಗತಿ.
ಭಾರತವೊಂದರಲ್ಲಿ ತಂಬಾಕು ಪ್ರತಿ ವರ್ಷ 9,00,000ಕ್ಕಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ತಂಬಾಕಿಗೆ ಸಂಬಂಧಪಟ್ಟ ರೋಗಗಳಿಂದ ದೇಶಕ್ಕೆ ವಾರ್ಷಿಕವಾಗಿ 16 ಶತಕೋಟಿ ಡಾಲರ್ ವೆಚ್ಚವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ.
ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಧೂಮಪಾನಿಗಳಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಈ ದುರಾಭ್ಯಾಸದಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ. ಸಮರ್ಪಕ ಆಪ್ತ ಸಮಾಲೋಚನೆಯೊಂದಿಗೆ ವೈಜ್ಞಾನಿಕ ಮಾರ್ಗಗಳ ಮೂಲಕ ಈ ಚಟದಿಂದ ಮುಕ್ತರಾಗಲು ಇಂಥ ಮಂದಿಗೆ ನೆರವು ನೀಡುವುದು ಅಗತ್ಯವಾಗಿದೆ.
ಧೂಮಪಾನ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಕೆಲಸಕ್ಕೆ ಉತ್ತೇಜನ ನೀಡುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಈ ದುಶ್ಚಟವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಕಂಟಕವಾಗುತ್ತದೆ.
ಆರಂಭದಲ್ಲಿ ವಿನೋದ, ಫ್ಯಾಷನ್ ಅಥವಾ ಗ್ಲಾಮರ್‍ಗಾಗಿ ಆರಂಭವಾಗುವ ಸಿಗರೇಟ್ ಅಭ್ಯಾಸವು ಕಾಲಕ್ರಮೇಣ ಒತ್ತಾಯಪೂರ್ವಕವಾಗುತ್ತದೆ ಹಾಗೂ ಬಿಡಿಸಲಾಗದ ಚಟವಾಗಿ ಪರಿವರ್ತನೆಯಾಗುತ್ತದೆ. ಧೂಮಪಾನ ಚಟ ಮುಂದುವರಿದಂತೆ ಅದು ಸಮಯ ವ್ಯರ್ಥದ ದುರಾಭ್ಯಾಸವಾಗಿ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ. ಇದು ವೈಯಕ್ತಿಕ ಸಮಸ್ಯೆಗೆ ಕಾರಣವಾಗುವುದಲ್ಲದೆ, ಕೆಲಸ ಮಾಡುವ ಸ್ಥಳದಲ್ಲೂ ಸಾಂಸ್ಥಿಕ ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ಮಾನವ ಸಂಪನ್ಮೂಲ ವಿಭಾಗವು ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳುವುದರಿಂದ ಉದ್ಯೋಗಿಗಳಲ್ಲಿನ ಈ ಚಟವನ್ನು ಹತೋಟಿಗೆ ತರಬಹುದು. ಇದರಿಂದ ಕೆಲಸದ ಉತ್ಪಾದಕತೆಯೂ ವೃದ್ಧಿಯಾಗುತ್ತದೆ.
ಸಿಗರೇಟ್ ಸೇವನೆಯ ಆರಂಭದಲ್ಲಿ ಇದು ತಾತ್ಕಾಲಿಕವಾಗಿ ಮನಸ್ಸಿಗೆ ಮುದ ನೀಡುತ್ತದೆಯಾದರೂ ಚಟ ಮುಂದುವರಿದಂತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಟ್ಟು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬ ಧೂಮಪಾನಿಯು ಸಿಗರೇಟ್ ಸೇದುವುದಕ್ಕೆ ಮುನ್ನ ಈ ಹಾನಿಕರ ಪರಿಣಾಮಗಳನ್ನು ಮನವರಿಕೆ ಮಾಡಿಕೊಂಡು ಚಟ ಬಿಡಲು ಮುಂದಾದರೆ ಇದರಿಂದ ಮುಕ್ತರಾಗಬಹುದು.
ಧೂಮಪಾನ ಸಂಗ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಭಂಗ ಎಂಬುದನ್ನು ಎಲ್ಲ ಧೂಮಪಾನಿಗಳು ಗಂಭೀರವಾಗಿ ಪರಿಗಣಿಸಿದರೆ ಈ ಪಿಡುಗಿನಿಂದ ದೂರವಾಗಿ ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ರಕ್ಷಣೆ ಸಾಧ್ಯ.

-ಡಾ. ಶ್ರೀಕೃಷ್ಣ ಮಾಯ್ಲೆಂಗಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!