ಶಕ್ತಿ ಕಳೆದುಕೊಳ್ಳುತ್ತಿದೆಯೇ ಕೊರೋನಾ!? ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೋವಿಡ್-19 ಸೋಂಕಿಗೊಳಗಾಗುತ್ತಿರುವವರ ಸಂಖ್ಯೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಣ್ಣಿಗೆ ಕಾಣದ ಈ ವೈರಾಣು ತಜ್ಞ ವೈದ್ಯರುಗಳ, ವಿಜ್ಞಾನಿಗಳ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವಂತೆ ಅಚ್ಚರಿಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಯುರೋಪಿನ ಅನೇಕ ದೇಶಗಳಲ್ಲಿ ಮತ್ತೆ ಲಾಕ್ಡೌನ್ ಹೇರುವ ಬಗ್ಗೆ ಕೂಡಾ ಚಿಂತನೆ ನಡೆಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿಗೊಳಗಾಗುತ್ತಿರುವವರ ಸಂಖ್ಯೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಲಕ್ಷದ ಹತ್ತಿರ ಇರುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ 25-30 ಸಾವಿರಕ್ಕೆ ಇಳಿಕೆಯಾಗಿದೆ. ಕೊರೋನಾ ವೈರಾಣು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆಯಾ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.
ಕಣ್ಣಿಗೆ ಕಾಣದ ಈ ವೈರಾಣು ವಿಶ್ವದಾದ್ಯಂತ ನಡೆಸಿದ ದಾಂಧಲೆ ಅಷ್ಟಿಷ್ಟಲ್ಲ. ತಜ್ಞ ವೈದ್ಯರುಗಳ, ವಿಜ್ಞಾನಿಗಳ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವಂತೆ ಅಚ್ಚರಿಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಕೆಲವರಿಗೆ ರೋಗದ ಲಕ್ಷಣಗಳನ್ನು ವಿಪರೀತವಾಗಿ ತೋರಿಸಿ ಸಾವಿನ ಮನೆಗೂ ಕರೆದೊಯ್ದು, ಇನ್ನು ಕೆಲವರಿಗೆ ಲಕ್ಷಣಗಳೇ ಇಲ್ಲದಂತೆ ಗುಣವಾಗಿರುವ ಈ ಕಾಯಿಲೆಯನ್ನು ಪ್ರೆಡಿಕ್ಟ್ ಮಾಡಲೇ ಆಗದಂತೆ ತನ್ನ ವರಸೆಯನ್ನು ತೋರಿಸಿದೆ.
ಇದೀಗ ನಮ್ಮ ದೇಶದಲ್ಲಿ ಕೊರೋನಾ ಅಲೆ ಕಮ್ಮಿಯಾಗುತ್ತಿದ್ದಂತೆ ಯುರೋಪಿನಲ್ಲಿ ಈ ವೈರಾಣಿವಿನ ಎರಡನೇ ಅಲೆ ಎದ್ದು ಬಿಟ್ಟಿದೆ. ಕಳೆದ ಕೆಲ ದಿನಗಳಿಂದ ಜರ್ಮನಿ, ಸ್ವಿಜರ್ಲ್ಯಾಂಡ್, ಫ್ರಾನ್ಸ್, ಪೊಲಾಂಡ್ನಂತಹ ದೇಶಗಳಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿದೆ. ರಷ್ಯಾದ ಸರಕಾರದ ಹೇಳಿಕೆಯಂತೆ ಅಲ್ಲಿಯ 16 ಪ್ರಾಂತ್ಯಗಳಲ್ಲಿ ಕೊರೋನಾ ಕಾರಣದಿಂದ ಪರಿಸ್ಥಿತಿ ಚಿಂತಾಜನಕವಾಗಿದೆಯಂತೆ. ಕಂಟ್ರೋಲ್ ಸ್ಥಿತಿಯಲ್ಲಿದ್ದ ಈ ದೇಶದ ಪರಿಸ್ಥಿತಿ ಇದೀಗ ದಿಢೀರನೆ ಎದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಯುರೋಪಿನ ಅನೇಕ ದೇಶಗಳಲ್ಲಿ ಮತ್ತೆ ಲಾಕ್ಡೌನ್ ಹೇರುವ ಬಗ್ಗೆ ಕೂಡಾ ಚಿಂತನೆ ನಡೆಸಲಾಗುತ್ತಿದೆ.
ಕೊರೋನಾ ದೃಷ್ಟಿಯನ್ನೂ ಕಳೆಯಬಲ್ಲದು..!
ಕೊರೋನಾ ವೈರಾಣುವಿನ ಮೇಲೆ ನಿರಂತರವಾಗಿ ಅಧ್ಯಯನಗಳು ನಡೆಯುತ್ತಲೇ ಇವೆ. ಪ್ರತಿದಿನವೂ ಹೊಸ ಹೊಸ ಮಾಹಿತಿಗಳು ಬರುತ್ತಲೇ ಇವೆ. ಕೊರೋನಾ ವೈರಾಣು ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ, ಮಾಂಸಖಂಡದ ನೋವು ಮಾತ್ರವಲ್ಲದೆ, ಮಕ್ಕಳಿಗೆ ಬಂದರೆ ಅವರ ಮೆದುಳಿಗೂ ಕೂಡಾ ಹಾನಿ ಉಂಟು ಮಾಡುತ್ತದೆಯಂತೆ! ಇಷ್ಟಕ್ಕೆ ಸುಮ್ಮನಾಗದೆ ದೃಷ್ಟಿ ದೋಷಕ್ಕೂ ಕಾರಣವಾಗಲಿದೆ ಎನ್ನುವ ಪ್ರಕರಣ ವರದಿಯಾಗಿದೆ. ನರಗಳ ಸುತ್ತ ‘ಮೈಲಿನ್’ ಅನ್ನುವ ರಕ್ಷಣಾ ಪದರವಿರುತ್ತದೆ. ಆ ಪದರವೇ ಮೆದುಳಿನಿಂದ ಬರುವ ಸಂದೇಶಗಳನ್ನು ದೇಹದ ಇತರ ಭಾಗಗಳಿಗೆ ಸರಾಗವಾಗಿ ಹಾಗೂ ತ್ವರಿತವಾಗಿ ರವಾನಿಸಲು ಸಹಾಯ ಮಾಡುತ್ತದೆ. ಇದೀಗ ಮಕ್ಕಳ ‘ಮೈಲಿನ್’ ಪದರಕ್ಕೇ ಕೊರೋನಾ ಹಾನಿ ಮಾಡುವುದರಿಂದ ದೃಷ್ಟಿ ದೋಷಕ್ಕೆ ಕಾರಣವಾಗಿದೆ. ಇಂತಹ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಅಕ್ಯೂಟ್ ಡೆಮಿಲಿನಾಟಿಂಗ್ ಸಿಂಡ್ರೋಮ್ ಎಂದು ಕರೆಯುತ್ತಾರೆ.
ಮೃತ ವ್ಯಕ್ತಿಯಲ್ಲೂ ಬದುಕಿರುತ್ತೆ ಕೊರೋನಾ..!
ಮತ್ತೊಂದು ಅಧ್ಯಯನದ ಪ್ರಕಾರ ಮನುಷ್ಯನ ಮೃತದೇಹದಲ್ಲಿ ಕೊರೋನಾ ವೈರಾಣು ಸುಮಾರು 18 ಗಂಟೆಗಳ ಬಳಿಕವೂ ಸಕ್ರೀಯವಾಗಿರುತ್ತವೆ ಎನ್ನುತ್ತಿದೆ ಹೊಸ ಸಂಶೋಧನೆ. ಮೃತ ವ್ಯಕ್ತಿಯ ಬಾಯಿ, ಗಂಟಲು ಹಾಗೂ ಮೂಗಿನಲ್ಲಿ ಕೊರೋನಾ ವೈರಾಣು ಜೀವಂತವಾಗಿರುತ್ತದೆ ಎನ್ನುವುದು ಬಹಳ ಆತಂಕಕಾರಿ ವಿಷಯವಾಗಿದೆ. ಮೃತ ಪರೀಕ್ಷೆ ನಡುಸುವಾಗ ತಿಳಿದುಬಂದ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಸಾಮಾನ್ಯವಾಗಿ 600-700 ಗ್ರಾಂ ತೂಕವಿರುವ ವಯಸ್ಕ ಮನುಷ್ಯನ ಶ್ವಾಸಕೋಶದ ತೂಕ ಕೊರೋನಾ ಸಾವಿನ ತರುವಾಯ 2180 ಗ್ರಾಂ. ಗೆ ಹೆಚ್ಚಳಗೊಂಡಿತ್ತು. ಅಲ್ಲದೆ ಶ್ವಾಸಕೋಶದ ರಕ್ತ ಹೆಪ್ಪುಗಟ್ಟಿತ್ತು ಮತ್ತು ಗಾಳಿಯ ಚೀಲ ಛಿದ್ರಗೊಂಡಿತ್ತು. ಕೊರೋನಾ ವೈರಾಣು ಶ್ವಾಸಕೋಶಕ್ಕೆ ಈ ಪರಿಯ ಹಾನಿಯನ್ನು ಉಂಟು ಮಾಡುತ್ತದೆ ಎಂಬ ವಿಷಯ ಇದೀಗ ವೈದ್ಯಕೀಯ ವಲಯದಲ್ಲಿ ತಲ್ಲಣವನ್ನು ಉಂಟುಮಾಡಿದೆ.
ಕೊರೋನಾ ವಿಷಯದಲ್ಲಿ ಖಂಡಿತಾ ನಿರ್ಲಕ್ಷ ಸಲ್ಲದು
ಇಲ್ಲಿಯವರೆಗೆ ಕೊರೋನಾ ಸೋಂಕಿತರಿಗೆ ಕೊಡಲಾಗುತ್ತಿದ್ದ ವೆಂಟಿಕೇಶನ್ ಮತ್ತು ಆಮ್ಲಜನಕದ ಆಧಾರ ಮಾತ್ರವೇ ಸಾಲುವುದಿಲ್ಲ, ರಕ್ತ ಹೆಪ್ಪುಗಟ್ಟಿರುವುದನ್ನು ಕರಗಿಸಲು ಥ್ರಂಬೋಟಿಕ್ ಚಿಕಿತ್ಸೆ ಸಹಾ ನೀಡಬೇಕು ಹಾಗೂ ಗಾಳಿಯ ಚೀಲಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಸಹಾ ತೆಗೆಯಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೊರೋನಾ ಸೋಂಕಿತರು ಮೃತಪಟ್ಟ ಬಳಿಕ ಮೃತದೇಹವನ್ನು ಮಣ್ಣು ಮಾಡದೇ ಸುಡಬೇಕು. ಮಣ್ಣು ಮಾಡುವುದರಿಂದ ಕೊರೋನಾ ವೈರಾಣು ನೀರು ಅಥವಾ ಗಾಳಿಯ ಮೂಲಕ ಮತ್ತೆ ಹರಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿವೆ. ಭಾರತದಲ್ಲಿನ ಸಧ್ಯದ ಸ್ಥಿತಿ ನೋಡಿದರೆ ಇಲ್ಲಿಯೂ ಕೊರೋನಾದ ಒಂದನೇ ಅಲೆ ಇಳಿಕೆಯಾಗುತ್ತಿದ್ದು, ಮತ್ತೆ ಎರಡನೇ ಅಲೆ ದಾಳಿ ಮಾಡುತ್ತಾ? ಗೊತ್ತಿಲ್ಲ. ಹಾಗಾಗಿ ಕೊರೋನಾ ವಿಷಯದಲ್ಲಿ ಖಂಡಿತಾ ನಿರ್ಲಕ್ಷ ಸಲ್ಲದು. ಸರಕಾರ ವಿಧಿಸಿರುವ ನಿಯಮಗಳನ್ನು ಗಾಳಿಗೆ ತೂರುವುದು ನಿಜಕ್ಕೂ ದುಬಾರಿಯಾಗಬಹುದು.