ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ.
ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವುದರಿಂದ ದೇಹಕ್ಕೆ ಅತ್ಯಂತ ಉಪಯುಕ್ತವಾಗಿದೆ.ದೇಹವನ್ನು ಶುದ್ಧಿಗೊಳಿಸುವಲ್ಲಿ ಅದರಲ್ಲೂ ಮುಖ್ಯವಾಗಿ ಉಪಯುಕ್ತವಾದ ಪ್ರಯೋಜನವೆಂದರೆ ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ.
- ಈ ಹಣ್ಣುಗಳ ಸೇವನೆ ಅಥವಾ ಹಣ್ಣಿನ ರಸದ ಸೇವನೆಯು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಚರ್ಮಕ್ಕೆ ಮೃದುತ್ವವನ್ನು ತಂದುಕೊಡುತ್ತವೆ.
- ಬರೀ ದೇಹವನ್ನು ಶುದ್ಧಿಗೊಳಿಸುವುದಲ್ಲದೇ, ರೋಗಕಾರಕ ಜೀವಾಣುಗಳನ್ನು ತಡೆಗಟ್ಟಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಯುತಗೊಳಿಸುತ್ತವೆ.
- ಮರಸೇಬುವಿನಲ್ಲಿ ಆಯೋಡಿನ್‍ನ ಅಂಶ ಹೆಚ್ಚಾಗಿರುವುದರಿಂದ ಇದು ನಮ್ಮ ಕುತ್ತಿಗೆಯಲ್ಲಿರುವ ಥೈರಾಯಿಡ್ ಗ್ರಂಥಿಯ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.
- ಸೇಬುಹಣ್ಣು ದೇಹದ ಕೊಬ್ಬಿನಂಶವನ್ನು ಕಡಿಮೆಗೊಳಿಸುತ್ತದೆ ಹಾಗೂ ವಾತ ಮತ್ತು ಶ್ವಾಸಕೋಶದ ತೊಂದರೆಗಳಲ್ಲಿ ಉಪಯುಕ್ತ.
ಜೀರ್ಣಕ್ರಿಯೆಯಲ್ಲಿ ಇವುಗಳ ಪಾತ್ರ:
- ಈ ಎರಡೂ ಹಣ್ಣುಗಳಲ್ಲಿ ಪೆಕ್ಟಿನ್ ಎಂಬ ಕಿಣ್ವವಿದೆ. ಇದು ಜೀರ್ಣವಾಗುವ ನಾರು ಪದಾರ್ಥವಾಗಿದ್ದು, ಸಣ್ಣ ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಗುದದ್ವಾರದ ಮಾಂಸಖಂಡಗಳನ್ನು ಬಿಗಿಗೊಳಿಸಿ ದೊಡ್ಡ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯವಾಗಿವೆ.
- ಸೇಬುಹಣ್ಣುಗಳಲ್ಲಿರುವ ಕೆಲವೊಂದು ಕಿಣ್ವಗಳು, ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಜಠರ ಹಾಗೂ ಸಣ್ಣ ಕರುಳಿನಲ್ಲಾಗುವ ಕೆಲವು ದೋಷಗಳನ್ನು ಪರಿಹರಿಸುತ್ತವೆ. ಕೆಲವು ಪ್ರಕ್ರತಿ ಚಿಕಿತ್ಸಕರು, ಈ ಹಣ್ಣುಗಳು ಇರಿಟೇಬಲ್ ಬೊವೆಲ್ ಸಿಂಡ್ರೋಮ್’ನಿಂದ ನರಳುವ ರೋಗಿಗಳಿಗೆ ಈ ಹಣ್ಣುಗಳು ಅತ್ಯಂತ ಉಪಯುಕ್ತ ಎಂದು ನಂಬಿದ್ದಾರೆ.
- ಈ ಹಣ್ಣುಗಳು ಮೂತ್ರದ ಉತ್ಪತ್ತಿಯಲ್ಲಿ ಸಹಾ ಪಾತ್ರ ವಹಿಸುತ್ತವೆ ಹಾಗೂ ದೇಹವನ್ನು ಕಲ್ಮಶಗಳಿಂದ ದೂರಪಡಿಸುವಲ್ಲಿ ಸಹಾಯಕವಾಗಿವೆ.
- ಸೇಬು ಹಾಗೂ ಮರಸೇಬು ಜಠರ ಹಾಗೂ ಸಣ್ಣಕರುಳಿನ ರೋಗಗಳಿಗೆ ಉಪಯುಕ್ತ. ಈ ಹಣ್ಣುಗಳನ್ನು ದಿನದ ಆಹಾರದ ಒಂದು ಆಂಗವಾಗಿ ಸೇರಿಸಿಕೊಳ್ಳಿ. ಇಡೀ ಹಣ್ಣನ್ನೇ ತಿನ್ನಬಹುದು ಅಥವಾ ಜ್ಯೂಸ್ ಮಾಡಿ ಕೂಡ ಕುಡಿಯಬಹುದು.
ಇವುಗಳಲ್ಲಿರುವ ಪ್ರಮುಖ ಅಂಶಗಳು:
ಇವು ಮುಖ್ಯವಾಗಿ ಜೀವಸತ್ವ ಹಾಗೂ ಖನಿಜಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಅವುಗಳೆಂದರೆ,
- ಬೀಟಾ ಕ್ಯಾರೋಟಿನ್
- ಜೀವಸತ್ವ `ಸಿ
- ಪೋಲಿಕ್ ಆಸಿಡ್
- ಕ್ಯಾಲ್ಸಿಯಂ, ಮೆಗ್ನೇಷಿಯಂ, ಐಯೋಡಿನ್, ಫಾಸ್ಪರಸ್, ಪೋಟ್ಯಾಸಿಯಂ.
ನೆನಪಿನಲ್ಲಿಡಬೇಕಾದ ಅಂಶಗಳು:
- ಮಾಗಿದ ಹಣ್ಣುಗಳನ್ನು ಕೊಂಡುತನ್ನಿ. ಯಾಕೆಂದರೆ ಹಣ್ಣಾಗುವುದಕ್ಕಿಂತ ಮುಂಚೆಯೇ ಗಿಡದಿಂದ ತಂದವುಗಳು ಎಲ್ಲಾ ಪೋಷಕಾಂಶಗಳನ್ನು ಹೊಂದಿರುವುದಿಲ್ಲ.
- ಗಟ್ಟಿಯಾದ ಸಿಪ್ಪೆಯುಳ್ಳ ಹಾಗೂ ಹಾಳಾಗದ ಹಣ್ಣುಗಳನ್ನು ಆರಿಸಿ. ಒಣಗಿದಂತಹ, ಹಾಳಾದ, ಅಥವಾ ಸಿಪ್ಪೆಯಲ್ಲಿ ಸೀಳುಗಳಿದ್ದಂತಹ ಹಣ್ಣುಗಳು ದೇಹಕ್ಕೆ ಒಳ್ಳೆಯದಲ್ಲ.
- ಹಣ್ಣುಗಳನ್ನು ತಿನ್ನುವುದಕ್ಕಿಂತ ಮುಂಚೆ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. (ಹಣ್ಣಿಗೆ ಸಿಂಪಡಿಸಿದ ಔಷಧಿಯ ಪ್ರಮಾಣ ಕಡಿಮೆಯಿದ್ದರೂ, ಅದರ ಮೇಲಿರುವ ಧೂಳು ಹಾಗೂ ರೋಗಕಾರಕ ಜೀವಾಣುಗಳನ್ನು ತೊಳೆಯುವುದರ ಮೂಲಕ ಶರೀರಕ್ಕೆ ಸೇರದಂತೆ ನೋಡಿಕೊಳ್ಳಬಹುದು )
- ಹಣ್ಣನ್ನು ಸಿಪ್ಪೆಯ ಸಮೇತ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ.
- ಹಣ್ಣುಗಳನ್ನು ಹೆಚ್ಚು ದಿನಗಳವರೆಗೆ ಶೇಖರಿಸಿಡಬೇಡಿ ತಾಜಾ ಇರುವಾಗಲೇ ತಿನ್ನಿ.
- ಹಣ್ಣುಗಳನ್ನು ಆದಷ್ಟು ತಣ್ಣನೆಯ ಪರಿಸರದಲ್ಲಿರಿಸಿ, ಅದರಿಂದಾಗಿ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ.
- ನೇರವಾಗಿ ಬೀಳುವ ಸೂರ್ಯಕಿರಣಗಳಿಂದ ಹಣ್ಣುಗಳು ಒಣಗದಂತೆ ಸಂರಕ್ಷಿಸಿ ಹಾಗೂ ಶೇಖರಿಸಿಡಿ.
- ಹಣ್ಣುಗಳನ್ನು ಸಣ್ಣಗೆ ಹೆಚ್ಚಬೇಡಿ. ಇದರಿಂದಾಗಿ ಹೆಚ್ಚಿನ ಪೋಷಕಾಂಶಗಳು ನಷ್ಟವಾಗುವ ಸಂಭವಗಳು ಜಾಸ್ತಿ. ಹಾಗೂ ಹೆಚ್ಚು ಹೊತ್ತಿನವರೆಗೆ ಇಟ್ಟು ನಂತರ ಉಪಯೋಗಿಸುವುದರಿಂದಲೂ ಪೋಷಕಾಂಶಗಳು ನಷ್ಟವಾಗುತ್ತದೆ.
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.