ಸಕಾಲ ಸಹಭೋಜನ ಆರೋಗ್ಯಕ್ಕೆ ಹಿತಕರ. ಆಹಾರ ಸೇವನೆ ಸಮಯದಲ್ಲಿ ನೀತಿ ನಿಯಮಗಳನ್ನು ಅನುಸರಿಸುವುದು ಕಷ್ಟವಾದರೂ ಅಸಾಧ್ಯವೇನಿಲ್ಲ. ಜನರು ಮನಸ್ಸು ಮಾಡಿದರೆ ಆರೋಗ್ಯಕರ ಭೋಜನ ವಿಧಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯಿಂದ ಬರುವ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು.
ಕಾಲ ಎಂಬುದೇ ಹೀಗೆ, ಯಾವಾಗ ಆರಂಭವಾಯಿತು? ಹೇಗೆ ಅಂತ್ಯವಾಗುತ್ತೆ? ಯಾಗಿರೂ ತಿಳಿಯದು ವರ್ಷ, ಮನ್ವಂತರ, ಯುಗ ಹೀಗೆ ಎಷ್ಟೋ ಕಾಲ ವಿಂಗಡಣೆಯನ್ನು ಪುರಾತನ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ನಮಗೆ ನಮ್ಮ ಜೀವಿತಾವಧಿಯಲ್ಲಿ ನಾವು ಉಪಯೋಗಿಸುವ ಕಾಲಮಾನ ಕ್ಯಾಲೆಂಡರ್ ವರ್ಷ.ಈಗಾಗಲೇ ಕಾಲ ವಿಂಗಡಣೆ ಹೇಳಿರುವಂತೆ ಒಂದು ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಭಾಗಿಸಿದರೆ ಉತ್ತರಾಯಣ ಸುಮಾರು ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮಧ್ಯಭಾಗದಿಂದ ಜುಲೈ ಮಧ್ಯಭಾಗದವರೆಗೆ ಬಂದರೆ, ದಕ್ಷಿಣಾಯಣ ಜುಲೈ ಮಧ್ಯಭಾಗದಿಂದ ಮತ್ತೊಂದು ಜನವರಿ 15ರ ವರೆಗೆ ಬರುತ್ತದೆ.
ಇನ್ನು ಉತ್ತರಾಯಣವನ್ನು ಆದಾನ ಕಾಲ ಎನ್ನುತ್ತಾರೆ. ಕಾರಣ ಸೂರ್ಯ ಕಿರಣಗಳು ಪ್ರಖರವಾಗುತ್ತಾ ಹೋಗುತ್ತದೆ. ಪ್ರಕೃತಿಯಲ್ಲಿ ಉಷ್ಣತೆ ಹೆಚ್ಚಾಗಿ ದೇಹಕ್ಕೆ ಕ್ಷೀಣತ್ವ ಬರುವ ಕಾಲ. ಈ ಆಯನದಲ್ಲಿ ಶಿಶಿರ ಋತು, ವಸಂತ ಋತು, ಗ್ರೀಷ್ಮ ಋತು ಎಂಬ 3 ಋತುಗಳು ಬರುತ್ತವೆ. ಇನ್ನು ದಕ್ಷಿಣಾಯಣದಲ್ಲಿ ಸೂರ್ಯನ ಪ್ರಖರತೆ ಕಡಿಮೆಯಾಗುತ್ತಾ ದೇಹಕ್ಕೆ ಶಕ್ತಿ ಬರುತ್ತದೆ. ಇಲ್ಲಿ ವರ್ಷಋತು, ಶರತ್‌ಋತು, ಹೇಮಂತ ಋತು ಬರುತ್ತದೆ.
ಶಿಶಿರ ಋತು
ಉತ್ತರಾಯಣ ಮೊದಲ ಋತು ಸಾಮಾನ್ಯವಾಗಿ ಜನವರಿ ಮಧ್ಯಭಾಗದಿಂದ ಮಾರ್ಚ್ ಮಧ್ಯಭಾಗದವರೆಗೆ ಭಾರತದಲ್ಲಿ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಚಳಿ ಕಡಿಮೆಯಾಗಿ ನಿಧಾನವಾಗಿ ಸೂರ್ಯನ ಕಿರಣ ಪ್ರಖರತೆಗೆ ಬರುವ ಕಾಲ. ಈ ಕಾಲದಲ್ಲಿ ಕಾಲುಗಳಲ್ಲಿ, ಗಂಟುಗಳಲ್ಲಿ ನೋವು, ಶೀತಭಾದೆ, ವೈರಾಣು ಜ್ವರಗಳು ಹಾಗೂ ಕೆಲವು ನರ ಸಂಬಂಧಿ (Neurological disease) ಕಂಡು ಬರುವುದು ಸಾಮಾನ್ಯ.
ಇಂಥ ಸಮಯದಲ್ಲಿ ತರಕಾರಿ ಸೂಪ್, ಮಾಂಸದ ಸೂಪ್, ಅನ್ನದ ಜೊತೆ ತುಪ್ಪ, ಗೋದಿಯಿಂದ ತಯಾರಿಸಿದ ಖಾದ್ಯ ಇಂಥ ಆಹಾರವನ್ನು ಸೇವಿಸಬಹುದು. ಒಣಗಿದ ತರಕಾರಿ, ಹಸಿಮಾಂಸ, ಮೊಸರು, ಶೀತಲೀಕರಿಸಿದ ಆಹಾರವನ್ನು ತ್ಯಜಿಸಬೇಕು.
ವಸಂತಕಾಲ (ಋತು)
ಇದು ಸಾಮಾನ್ಯವಾಗಿ ಮಾರ್ಚ್ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೆ ಬಂದರೆ ಸಾಕಷ್ಟು ಹಣ್ಣುಗಳು ಸಿಗುವ ಕಾಲ. ಭಾರತದ ಉದ್ದಕ್ಕೂ ಬೇರೆ ಬೇರೆ ರೀತಿಯ ಹಣ್ಣುಗಳು ಸಂಪದ್ಭರಿತವಾಗಿರುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಪ್ರಖರತೆ ಭೂಮಿ ಮೇಲೆ ಜಾಸ್ತಿ ಇದ್ದು ಇಂಥ ಋತುಮಾನಕ್ಕೆ ಸಿಗುವ ಹಣ್ಣುಗಳು ಆಹ್ಲಾದಕರವಾಗಿರುತ್ತದೆ.
ಇದಲ್ಲದೆ ಈ ಕಾಲದಲ್ಲಿ ಆರವತ್ತು ದಿನ ಕೂಡಿಟ್ಟ ಅಕ್ಕಿಯಿಂದ ತಯಾರಿಸಿದ ತಿಂಡಿಗಳು, ಹೆಸರು ಬೇಳೆಯಿಂದ ತಯಾರಿಸಿದ ಖಾದ್ಯ, ಬಾರ್ಲಿ ನೀರು, ಸಣ್ಣ ಮೀನಿನಿಂದ ತಯಾರಿಸಿದ ಸಾರು, ಸಿರಿಧಾನ್ಯಗಳನ್ನು ಉಪಯೋಗಿಸಬಹುದು. ಈ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇರುವುದರಿಂದ ಅತಿಯಾದ ಸಿಹಿ, ಎಣ್ಣೆಯಲ್ಲಿ ಕಾಯಿಸಿದ ತಿಂಡಿಗಳು ಮತ್ತು ಹುಳಿ ವಸ್ತುಗಳನ್ನು ತ್ಯಜಿಸಬಹುದು.
ಗ್ರೀಷ್ಮ ಋತು
ಇದು ಉತ್ತರಾಯಣದ ಕೊನಯ ಋತು. ಮೇ ಮಧ್ಯಭಾಗದಿಂದ ಜುಲೈ ಮಧ್ಯಭಾಗದವರೆಗೆ ಇದ್ದರೆ, ಅಲ್ಲಲ್ಲಿ ಮಳೆ ಕಾಣಿಸಿಕೊಂಡರೂ ಭೂಮಿಯ ತಾಪಮಾನ ಸ್ವಲ್ಪ ಹೆಚ್ಚೇ ಇರುತ್ತದೆ. ಈ ಕಾಲದಲ್ಲಿ ಚರ್ಮ ಕಾಯಿಲೆ, ಮೂಲವ್ಯಾಧಿ, ಆಮ್ಲಪಿತ್ತ, ಕಾಮಾಲೆ ಮುಂತಾದ ಕಾಯಿಲೆಗಳು ಸಾಮಾನ್ಯ. ಹಾಗಾಗಿ ಆಹಾರದಲ್ಲಿ ಸ್ವಲ್ಪ ಸಿಹಿ, ನೀರಿನ ಅಂಶ ಜಾಸ್ತಿ ಇರಬೇಕು. ಸ್ವಲ್ಪ ಮಾಂಸದ ರಸ, ಅನ್ನದ ಪಾಯಸ, ಮೊಸರು, ಬೆಲ್ಲ, ಪಾನಕ, ಹಣ್ಣಿನ ರಸವನ್ನು ಸೇವಿಸಬಹುದು. ಉಪ್ಪು ಮತ್ತು ಹುಳಿ, ಖಾರ ವಸ್ತುಗಳನ್ನು ದೂರವಿಡಬೇಕು.
ವರ್ಷ ಋತು
ಇದು ದಕ್ಷಿಣಾಯಣದ ಮೊದಲ ಋತು ಜುಲೈ ಮಧ್ಯಭಾಗದಿಂದ ಸೆಪ್ಟೆಂಬರ್ ಮಧ್ಯಭಾಗದವರೆಗೆ ಇದ್ದರೆ, ಸಾಮಾನ್ಯವಾಗಿ ಧಾರಾಕಾರ ಮಳೆಯ ಸಮಯ ಇಲ್ಲಿ ಕೃಷಿಕರು ಸದಾ ಚಟುವಟಿಕೆಯಿಂದ ಇರುವ ಸಮಯ.
ಇಲ್ಲಿ ಸ್ವಲ್ಪ ಹುಳಿ, ಉಪ್ಪಿನ ಅಂಶದ ಜೊತೆ ಜೇನು ಉಪಯೋಗಿಸಬಹುದು. ಬಾರ್ಲಿ, ಗೋಧಿ, ಮಾಂಸ ರಸ ಮುಖ್ಯವಾದ ಆಹಾರವಾದರೆ, ಒಣ ದ್ರಾಕ್ಷಿ ವಿಧ ವಿಧವಾದ ತರಕಾರಿ ಸೂಪ್ಗಳನ್ನು ತಯಾರಿಸಿಕೊಳ್ಳಬಹುದು. ಕುಡಿಯಲು ಆದಷ್ಟು ಬಾವಿಯ ನೀರು ಆರೋಗ್ಯಕರವಾಗಿರುತ್ತದೆ.
ಶರತ್ ಋತು
ಸೆಪ್ಟೆಂಬರ್ ಮಧ‍್ಯಭಾಗದಿಂದ ನವೆಂಬರ್ ಮಧ್ಯಭಾಗದಲ್ಲಿ ಬರುವ ಈ ಋತು, ಹಬ್ಬ-ಹರಿದಿನಗಳ ಪರ್ವಕಾಲ. ಮಳೆಗಾಲ ಸಂಪೂರ್ಣವಾಗಿ ನಿಲ್ಲದಿದ್ದರೂ ಆಗಾಗ ಮಳೆ ಭೂಮಿಯನ್ನು ತಂಪುಮಾಡುತ್ತಿರುತ್ತದೆ. ಈ ಸಮಯದಲ್ಲಿ ಹಾಲು, ಕಬ್ಬಿನ ರಸ, ಜೇನು, ಗೋದಿಯ ಖಾದ್ಯ, ಹೆಸರು ಕಾಳಿನ ಪಲ್ಯ, ಪಡುವಲಕಾಯಿಯ ಹುಳಿ, ಸಾರ ಇಂಥ ಆಹಾರಗಳು ಸೂಕ್ತವಾಗಿರುತ್ತದೆ.
ಹೇಮಂತ ಋತು
ನವೆಂಬರ್ ಮಧ್ಯಭಾಗದಿಂದ, ಮುಂದಿನ ಜನವರಿ ಸಂಕ್ರಾತಿಯವರೆಗಿನ ಈ ಕಾಲ ಚಳಿಗಾಲ. ಸಾಮಾನ್ಯವಾಗಿ ಶೀತ, ಜ್ವರ, ಒಣಕೆಮ್ಮು, ಎದೆಯಲ್ಲಿ ಕಫ, ಗಂಟುನೋವು ಮಾಮೂಲು. ದೇಹಕ್ಕೆ ಎಣ್ಣೆಯ ಅಂಶ ಅಥವಾ ಲೇಪನ ಹಿತವಾಗಿರುತ್ತದೆ. ಬೇರೆ ಬೇರೆ ರೀತಿಯ ಘನರೂಪಿ ಮಾಂಸದ ಸೂಪ್ ಸೇವಿಸಬಹುದು. ಸಸ್ಯಹಾರಿಗಳು ಹಸಿತರಕಾರಿ, ಒಣಹಣ್ಣುಗಳು, ಟೊಮೊಟೋ, ಸೌತೆಕಾಯಿಯ ಸೂಪ್ ಮತ್ತು ಖಾದ್ಯಗಳನ್ನು ಸೇವಿಸಬಹುದು.
ಆಹಾರ ಸೇವನೆ – ಶಿಸ್ತನ್ನು ಪಾಲಿಸಿ
ಆಹಾರವನ್ನು ಯಾವಾಗ, ಯಾವ ಋತುವಿನಲ್ಲಿ ತಿನ್ನುವುದರ ಜೊತೆಗೆ ಅದನ್ನು ಸೇವಿಸುವ ಕ್ರಮದಲ್ಲಿ ಶಿಸ್ತನ್ನು ಪಾಲಿಸಿದರೆ ಆಹಾರದ ಗುಣಮಟ್ಟವನ್ನು ಹೆಚ್ಚಿಸಬಹುದು. ಕೇವಲ ಆರೋಗ್ಯವಂತ ವ್ಯಕ್ತಿಗಷ್ಟೇ ಅಲ್ಲ, ರೋಗಿಯೂ ಪಾಲಿಸಿದರೆ ಸೂಕ್ತ. ಹಾಗಾಗಿ ಆಹಾರ ಸೇವನೆ ಸಮಯದಲ್ಲಿ ನೀತಿ ನಿಯಮಗಳನ್ನು ಹೇಳಿದ್ದಾರೆ. ಇಂದಿನ ಕಾಲಕ್ಕೆ ಇದು ಅನುಸರಿಸುವುದು ಕಷ್ಟವಾದರೂ ಅಸಾಧ್ಯವೇನಿಲ್ಲ. ಜನರು ಮನಸ್ಸು ಮಾಡಿದರೆ ಈ ರೀತಿಯ ಭೋಜನ ವಿಧಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯಿಂದ ಬರುವ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು.
ಮೊದಲಿಗೆ ನಾವು ಊಟ ಮಾಡುವಾಗ ಆದಷ್ಟು ಬಿಸಿ ಬಿಸಯಾಗಿ ಸೇವಿಸಬೇಕು. ಆಹಾರದ ಬಿಸಗು್ ಜೀರ್ಣಶಕ್ತಿಯ ಕಿಣ್ವಗಳನ್ನು ಉತ್ತೇಜಿಸಿ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಇದಲ್ಲದೆ ನಾಲಗೆ ಆಹಾರದ ರುಚಿಯನ್ನು ಸರಿಯಾಗಿ ಗ್ರಹಿಸುತ್ತದೆ. ಎರಡನೇ ನಿಯಮ ಆಹಾರದ ಜೊತೆಗೆ ಸ್ವಲ್ಪ ಸ್ನಿಗ್ಧತೆ ಅಂದರೆ ಎಣ್ಣೆಯ ಅಂಶ ಅದು ತುಪ್ಪವಾಗಿರಬಹುರು, ಸ್ವಲ್ಪ ಒಗ್ಗರಣೆಯೂ ಆಗಿರಬಹುದು. ಅದು ಉಳಿದ ಆಹಾರವನ್ನು ನಯವಾಗಿಸಿ ಜಠರದಲ್ಲಿ ಸಾಂದ್ರತೆ ಹೆಚ್ಚಿಸುತ್ತದೆ. ಉತ್ತರ ಭಾರತದಲ್ಲಿ ರೊಟ್ಟಿ, ಚಪಾತಿಗಳಿಗೆ ತುಪ್ಪ, ಎಣ್ಣೆ ಸವರುತ್ತಾರೆ. ಮಕ್ಕಳಿಗೂ ಊಟಕ್ಕೆ ತುಪ್ಪ ಹಾಕುತ್ತಾರೆ. ಆದರೆ ದೊಡ್ಡವರಾದ ಮೇಲೆ ನಾವೆಲ್ಲಾ ಮರೆತೇ ಬಿಡುತ್ತೇವೆ.
ಇನ್ನು ಸರಿಯಾದ ಪ್ರಮಾಣದಲ್ಲಿ ಊಟ ಮಾಡಬೇಕು. ಇದನ್ನು ಈಗಾಗಲೇ ನಾವು ವಿಚಾರ ಮಾಡಿದ್ದೇವೆ. ಇದರಿಂದ ಜೀವಕಣಗಳು ಉತ್ತೇಜನಗೊಳ್ಳುತ್ತವೆ. ಊಟ ಮಾಡುವ ಸಂದರ್ಭದಲ್ಲಿ ನಮಗೆ ಇಷ್ಟವಾದ ಜಾಗದಲ್ಲಿ, ಸುಖಾಸನವಾಗಿ, ಊಟಕ್ಕೆ ಬೇಕಾಗುವ ಸಲಕರಣೆಯನ್ನು ಒಮ್ಮೆಲೆ ತಂದಿಟ್ಟುಕೊಂಡು ಪದೇ ಪದೇ ಆ ಕಡೆ ಹೋಗುವುದು, ಎದ್ದು ತಿರುಗುವುದನ್ನು ಬಿಡಬೇಕು.
ಇನ್ನು ಊಟದ ಸಂದರ್ಭದಲ್ಲಿ ಅತೀ ವೇಗವಾಗಿ, ಅತೀ ನಿಧಾನವಾಗಿ ಊಟ ಮಾಡುವುದನ್ನು ತ್ಯಜಿಸಬೇಕು. ಪ್ರತಿ ತುತ್ತನ್ನು ರುಚಿಯಿಂದಲೇ ಆಸ್ವಾದಿಸಬೇಕು. ಇನ್ನು ಕೆಲವರಿಗೆ ಊಟ ಮಾಡುವಾಗ ಮಾತನಾಡುವುದು, ಹರಟೆಹೊಡೆಯುವುದು, ನಗುವುದು, ಹಾಸ್ಯ ಮಾಡುವುದು ಮಾಮೂಲಾಗಿದೆ. ಇದನ್ನು ಬಿಟ್ಟು ಮನಃಪೂರ್ವಕವಾಗಿ ಆಹಾರ ರುಚಿ ಸ್ವಾದಿಸಬೇಕು. ಇದರಿಂದ ಆಹಾರ ಸತ್ವ ಶುದ್ಧ ಸತ್ವವಾಗುತ್ತದೆ. ಎಲ್ಲಾ ಇಂದ್ರೀಯಗಳೂ ಸಂತುಷ್ಟಿಗೊಳ್ಳುತ್ತದೆ.
ಇವೆಲ್ಲಾ ಪ್ರಾಯೋಗಿಕವಾಗಿ ಸ್ವಲ್ಪ ಕಷ್ಟವಾದರೂ ೨ ವರ್ಷ ನಾವು ಋತುವಿಗೆ ತಕ್ಕಂತೆ ಆಹಾರ ಮತ್ತು ಆಹಾರ ಸೇವನಾ ಕ್ರಮವನ್ನು ಅನುಸರಿಸಿದರೆ ನಮ್ಮ ಜೀವನದ ಗುಣಮಟ್ಟದಲ್ಲಿ ಬದಲಾವಣೆಯನ್ನು ಕಾಣಬಹುದು.
ಈ ಸಂದರ್ಭದಲ್ಲಿ ತೈತ್ತೀರೀಯೋಪನಿಷತ್ ಇದರ ಬ್ರಹ್ಮಾನಂದ ವಲ್ಲೀಯ ಮೊದಲ ಅನುವಾದದಲ್ಲಿ ಅನ್ನಾಹಾರದ ಬಗ್ಗೆ ಉಲ್ಲೇಖವಿದೆ. ಇದು ಸದಾಕಾಲ ಸೂಕ್ತವಾಗಿರುತ್ತದೆ. ಅದೇನೆಂದರೆ ʻʻಯಾವ ಯಾವ ಪ್ರಾಣಿಗಳು ಭೂಮಿಯನ್ನು ಆಶ್ರಯಿಸಿರುವುದೋ ಅವೆಲ್ಲವೂ ಅನ್ನದಿಂದಲೇ ಹುಟ್ಟುತ್ತದೆ. ಹಾಗೆಯೇ ಅನ್ನದಿಂದಲೇ ಜೀವಿಸುತ್ತದೆ ಮತ್ತು ಕೊನೆಯಲ್ಲಿ ಇದನ್ನೇ ಪ್ರವೇಶಿಸುತ್ತದೆ.ʼʼ ಅನ್ನವೇ ಪ್ರಾಣಿಗಳಲ್ಲಿ ಜ್ಯೇಷ್ಠ. ಅನ್ನವನ್ನು ಸರ್ವಔಷಧವೆಂದು ಹೇಳಲ್ಪಟ್ಟಿದೆ. ಯಾರು ಅನ್ನವನ್ನು ಬ್ರಹ್ಮವೆಂದು ಉಪಾಸಿಸುತ್ತಾರೋ ಅವರು ಅನ್ನ ಎಲ್ಲವನ್ನೂ ಹೊಂದುತ್ತಾರೆ.
ಅನ್ನದಿಂದ ಪ್ರಾಣಿಗಳು ಹುಟ್ಟುತ್ತದೆ. ಹುಟ್ಟಿದವು ಅನ್ನದಿಂದ ವರ್ಧಿಸುತ್ತದೆ. ತಿನ್ನಲ್ಪಡುತ್ತದೆ ಮತ್ತು ಪ್ರಾಣಿಗಳು ತಿನ್ನುತ್ತದೆ. ಆದುದರಿಂದ ಅದು ಅನ್ನವೆಂದು ಕರೆಯಲ್ಪಟ್ಟಿದೆ.
ಅಂತಹ ಈ ಅನ್ನರಸಮಯವಾದ ಆತ್ಮನಿಗಿಂತ ಬೇರೆಯವನೂ ಒಳಗಿರುವವನ್ನೂ ಪ್ರಾಣಮಯನೂ, ಆದ ಆತ್ಮನಿರುವನು. ಹೀಗೆ ಅನ್ನಮಯಕೋಶದಿಂದ ಆನಂದಮಯ ಕೋಶದವರೆಗೆ ಆಧ್ಯಾತ್ಮಕವಾಗಿ ಆತ್ಮನು ಎಷ್ಟು ಪ್ರಸ್ತುತವೋ ಹಾಗೆ ಭೌತಿಕವಾಗಿ ಅನ್ನವೇ ಶ್ರೇಷ್ಟ ಎನ್ನುವುದೇ ಭಾವಾರ್ಥ.
ಈ ಎಲ್ಲಾ ಕೋಶಗಳು ಸ್ವತಂತ್ರವಾಗಿ ಪುರುಪಾಕಾರ ಹೊಂದಿಲ್ಲ. ಮೂಸೆಯಲ್ಲಿ ಕರಗಿದ ಲೋಹವನ್ನು ಸುರಿದರೆ ಅದು ಪ್ರತಿಮಾಕಾರವನ್ನು ಹೊಂದುವಂತೆ ಪ್ರಾಣಮಯನು ಅನ್ನಮಯನನ್ನು ಅನುಸರಿಸಿ ಆಕಾರವನ್ನು ಹೊಂದಿರುತ್ತಾನೆ.
ಕೊನೆದಾಗಿ
ಅನ್ನಂ ಬ್ರಹ್ಮೇತಿ ವ್ಯಜನಾತ್….!
ಅನ್ನವೇ ಪರಬ್ರಹ್ಮ, ಯಾವತ್ತೂ ಅನ್ನವನ್ನು ನಿರ್ಲಕ್ಷಿಸಬಾರದು ಎಂಬುದೇ ಭಾವಾರ್ಥ,
ಡಾ. ಧನಂಜಯ ಹೆಚ್. ಭಟ್
ಹಳೆಯಂಗಡಿ, ಮಂಗಳೂರು
ಮೊ.: 95383 71318