ಋತುಸ್ರಾವ ತೊಂದರೆಗಳಿಗೆ ಮನೆ ಮದ್ದು

ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ. ಇದಕ್ಕೆ ನಮ್ಮ ಬದಲಾಗುತ್ತಿರುವ ಆಹಾರ ಪದ್ಧತಿ, ಜೀವನಶೈಲಿ ಮತ್ತು ಹವಾಮಾನದಲ್ಲಿನ ಬದಲಾವಣೆ ಕಾರಣವಾಗಿದೆ.
ಋತುಸ್ರಾವದ ಆರಂಭದಿಂದ ಮತ್ತೊಂದು ಋತುಸ್ರಾವದ ಬರುವವರೆಗಿನ ಕಾಲವೇ ಋತುಚಕ್ರ. ಮೂರರಿಂದ ಐದು ದಿನಗಳ ಕಾಲ ರಕ್ತಸ್ರಾವವಿರುತ್ತದೆ. ನಂತರ 10 ರಿಂದ 16 ದಿನಗಳ ಕಾಲ ಗರ್ಭಧಾರಣೆಗೆ ಯೋಗ್ಯವಾದ ಕಾಲ. ಈ ಸಮಯದಲ್ಲಿ ಅಂಡಾಣುವಿನ ಉತ್ಪತ್ತಿ ಮತ್ತು ಗರ್ಭಕೋಶದ ಒಳಪದರಗಳಲ್ಲಿ ರಕ್ತ ಸಂಚಯವಾಗುತ್ತದೆ. ನಂತರದ ದಿನಗಳಲ್ಲಿ ಗರ್ಭಕೋಶದ ಒಳಪದರದ ಬೆಳವಣಿಗೆ ಮುಂದುವರಿದು ಗರ್ಭಪೋಷಣೆಯ ಕಾರ್ಯವನ್ನು ನಿರ್ವಹಿಸುತ್ತದೆ. ಗರ್ಭಧಾರಣೆಯಾಗದಿದ್ದಲ್ಲಿ ಮತ್ತೆ ಮುಂದಿನ ಮಾಸಿಕ ಸ್ರಾವ ಆರಂಭವಾಗುತ್ತದೆ. ಅತಿಯಾದ ರಕ್ತಸ್ರಾವ, ಅತಿಯಾದ ಬಿಳಿಮುಟ್ಟು, ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಮತ್ತು ಅನಿಯಮಿತ ರಕ್ತಸ್ರಾವ ಮುಂತಾದ ತೊಂದರೆಗಳು ಕಂಡುಬರುತ್ತದೆ. ವಯಸ್ಸು ಮತ್ತು ಜೀವನಶೈಲಿಯ ಬದಲಾವಣೆಗನುಗುಣವಾಗಿ ಕಾರಣಗಳು ಬೇರೆ ಬೇರೆಯಾಗಿರುತ್ತವೆ.
ಅತೀ ಚಿಕ್ಕ ವಯಸ್ಸಿನಲ್ಲಿ ಋತುಚಕ್ರ ಆರಂಭವಾಗಿ ಗರ್ಭಕೋಶದ ಬೆಳವಣಿಗೆಯ ಹಂತದಲ್ಲಿರುವಾಗ ಮಾನಸಿಕವಾಗಿ ಭಯ, ದುಃಖ, ಆತಂಕ ಮುಂತಾದವುಗಳಿರುವುದು ಸಾಮಾನ್ಯ. ಶಾರೀರಿಕವಾಗಿ ಅತಿಯಾದ ಶ್ರಮ ಇಲ್ಲವೇ ವ್ಯಾಯಾಮವೇ ಇಲ್ಲದ ಜೀವನಶೈಲಿ, ಲೈಂಗಿಕ ಪ್ರಚೋದನೆ ನೀಡುವಂತಹ ಸಾಹಿತ್ಯ ಓದುವುದು, ಲೈಂಗಿಕ ಸಿನಿಮಾ ನೋಡುವುದು ಮುಂತಾದವುಗಳಿಂದ ಹದಿಹರೆಯದಲ್ಲಿ ತೊಂದರೆಯುಂಟಾಗುತ್ತದೆ ಹಾಗೆಯೇ ಗರ್ಭಕೋಶದ ಬೆಳವಣಿಗೆ ಸರಿಯಾಗಿ ಆಗದಿರುವುದು, ರಕ್ತಹೀನತೆ, ಮಧುಮೇಹ, ರಕ್ತದೊತ್ತಡ, ಹೃದ್ರೋಗ ಮುಂತಾದ ಕಾಯಿಲೆಗಳಿಂದ ಬಳಲುವುದು ಮತ್ತು ಅವುಗಳಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಲ್ಲಿ, ಸಂತಾನ ನಿಯಂತ್ರಣಕ್ಕಾಗಿ ಗರ್ಭಕೋಶದಲ್ಲಿ ಅಳವಡಿಸುವ ವಂಕಿ, ಕಾಪರ್ ಟಿ ಮುಂತಾದ ಸಾಧನಗಳು ಮತ್ತು ಅದಕ್ಕಾಗಿ ವೈದ್ಯರ ಸಲಹೆಯಿಲ್ಲದೇ ದೀರ್ಘಕಾಲ ಔಷಧಿಗಳನ್ನು ಸೇವಿಸುವುದು, ಹಬ್ಬ-ಹರಿದಿನಗಳ ಆಚರಣೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಋತುಚಕ್ರವನ್ನು ಮುಂದೂಡಲು ಇಲ್ಲವೇ ಮುಂಚೆಯೇ ಆಗಬೇಕೆಂದು ಮಾತ್ರೆಗಳ ಸೇವನೆ ಪದೇ ಪದೇ ಮಾಡುವುದು, ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವುದು, ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಗುರಿಯಾಗುವುದು, ಮಾನಸಿಕ ಖಿನ್ನತೆ, ಆತಂಕಗಳಿಂದ ಬಳಲುವುದು, ಗರ್ಭಕೋಶ ಜಾರುವುದು, ಲೈಂಗಿಕ ಕ್ರಿಯೆಯಲ್ಲಿ ಅತಿಯಾಗಿ ತೊಡಗುವುದು, ಅತಿಯಾದ ಖಾರ, ಮಸಾಲೆ ಪದಾರ್ಥಗಳ ಸೇವನೆ ಮತ್ತು ಪುಷ್ಟಿಕರವಲ್ಲದ ಆಹಾರ ಸೇವನೆ ಮುಂತಾದ ಅನೇಕ ಕಾರಣಗಳಿಂದ ಋತುಸ್ರಾವದ ಸಮಸ್ಯೆಗಳು ಆಗಬಹುದು.
ಬಾಲಕಿಯರಲ್ಲಿ ಋತುಮತಿಯಾದ ಆರಂಭದಲ್ಲಿ ಋತುಸ್ರಾವ ಅನಿಯಮಿತವಾಗಿದ್ದರೂ ಆರು ತಿಂಗಳಲ್ಲಿ ನಿಯಮಿತವಾಗುವುದು ಸ್ವಾಭಾವಿಕ, ಆದರೆ ಒಂದು ವರ್ಷ ಕಳೆದ ನಂತರವೂ ಸರಿಯಾಗಿ ಆಗದಿದ್ದಲ್ಲಿ ವೈದ್ಯರ ಸಲಹೆ ಅಗತ್ಯ. ಋತುಸ್ರಾವ ಎರಡು-ಮೂರು ತಿಂಗಳಾದರೂ ಬಾರದಿರುವುದು. ಪ್ರತಿ ಬಾರಿಯೂ ಔಷಧಿ ಸೇವನೆಯಿಂದಲೇ ಆಗುವುವುದು ಮುಂತಾದವುಗಳಿದ್ದಲ್ಲಿ ರಸದೂತಗಳಲ್ಲಿ ಏರುಪೇರು ಇರಬಹುದು.
ಅನಿಯಮಿತ ಋತುಸ್ರಾವಕ್ಕೆ ಚಿಕಿತ್ಸೆ
ಎಳ್ಳು, ಹಿಪ್ಪಲಿ, ಮೆಣಸು, ಶುಂಠೀ, ಭಾರಂಗಿ ಇವುಗಳನ್ನು ಸಮಭಾಗ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು. ಇದನ್ನು ಒಂದು ಚಮಚೆಯಷ್ಟನ್ನು ಬೆಲ್ಲದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ದಿನಗಳ ಕಾಲ ಸೇವಿಸಬೇಕು.
ಎಳ್ಳುಬೆಲ್ಲವನ್ನು ಕುಟ್ಟಿ ಉಂಡೆ ಮಾಡಿಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಉಂಡೆ ತಿಂದು ಹಾಲು ಕುಡಿಯಬೇಕು. ಹೀಗೆ 15 ದಿನಗಳ ಕಾಲ ಸೇವಿಸಬೇಕು.
ಲೋಳೆಸರದ (ಅಲೊವೆರಾ) ಒಳಗಿನ ತಿರುಳನ್ನು ಬೆಲ್ಲದೊಂದಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15 ದಿನಗಳ ಕಾಲ ಸೇವನೆ ಮಾಡಬೇಕು.
ಅತಿ ರಕ್ತಸ್ರಾವ
ಮಾಸಿಕ ಸ್ರಾವದ ಸಮಯದಲ್ಲಿ ಐದರಿಂದ ಏಳು ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಸ್ರಾವವಾಗುತ್ತಿದ್ದಲ್ಲಿ ಮತ್ತು ಎರಡು ಋತುಚಕ್ರದ ಮಧ್ಯೆ ಅಂದರೆ ಮುಟ್ಟಾದ 15 ದಿನಗಳಲ್ಲಿಯೇ ಮತ್ತೆ ಸ್ರಾವ ಆರಂಭವಾಗುವುದು ಮುಂತಾದ ತೊಂದರೆಗಳಿದ್ದಲ್ಲಿ ಅಲಕ್ಷ್ಯ ಸಲ್ಲದು.
ಚಿಕಿತ್ಸೆ
ಅಶೋಕ ಚಕ್ಕೆಯನ್ನು ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ, ದಿನಕ್ಕೆರಡು ಬಾರಿ 15-20 ಮಿಲಿಯಷ್ಟು ಸೇವನೆ ಮಾಡಬೇಕು.
20 ಮಿಲಿ ಆಡುಸೋಗೆ ಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆರಡು ಬಾರಿ 15 ದಿನಗಳ ಕಾಲ ಸೇವನೆ ಮಾಡಬೇಕು.
ಬಿಲ್ವಪತ್ರೆ ಕಾಯಿಯ ಒಳಗಿನ ತಿರುಳನ್ನು ಒಣಗಿಸಿ ಪುಡಿ ಮಾಡಿ ಒಂದು ಚಮಚೆಯಷ್ಟನ್ನು ಕಷಾಯ ತಯಾರಿಸಿ ಕಲ್ಲು ಸಕ್ಕರೆಯೊಂದಿಗೆ ದಿನಕ್ಕೆ ಮೂರು ಬಾರಿ ಕುಡಿಯಬೇಕು.
ಉತ್ತರಾಣಿಯ ರಸವನ್ನು ನಾಲ್ಕೈದು ಚಮಚೆಯಷ್ಟನ್ನು ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ 15 ರಿಂದ 21 ದಿನಗಳ ಕಾಲ ಸೇವಿಸಬೇಕು.
ಬಾಳೆಹಣ್ಣು, ನೆಲ್ಲಿಕಾಯಿ ರಸ ಇಲ್ಲವೆ ಪುಡಿ, ಜೇನುತುಪ್ಪ ಮತ್ತು ಕಲ್ಲುಸಕ್ಕರೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಎರಡರಿಂದ ಮೂರು ವಾರ ಸೇವಿಸಬೇಕು.
ಆಹಾರ
ಸಿಹಿ ರುಚಿಯುಳ್ಳ ಜಿಡ್ಡಿನಂಶದಿಂದ ಕೂಡಿದ ಪಾಯಸ, ಗಂಜಿ, ಉಂಡೆಗಳ ಸೇವನೆ ಮಾಡಬೇಕು. ಬೂದುಗುಂಬಳಕಾಯಿಯ ತಿರುಳಿನ ರಸವನ್ನು, ಒಣ ಖರ್ಜೂರದ ಬೀಜ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಹಾಲು, ತುಪ್ಪ ಸೇವಿಸಬೇಕು. ಎಲ್ಲ ಬಗೆಯ ಸೊಪ್ಪು ತರಕಾರಿ, ಮೊಳಕೆ ಕಾಳುಗಳು ಸೇವಿಸುವುದು ಅಗತ್ಯ.
ಅತಿ ಸ್ರಾವದಿಂದ ನಿಶ್ಯಕ್ತಿಯಾಗಿ ರಕ್ತಹೀನತೆ ಉಂಟಾಗುತ್ತದೆ. ಇದನ್ನು ಅಲಕ್ಷಿಸದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಋತುಬಂಧದ ನಂತರ ಅತಿ ರಕ್ತಸ್ರಾವ ಉಂಟಾದಲ್ಲಿ ಗರ್ಭಕೋಶದಲ್ಲಿ ಕ್ಯಾನ್ಸರ್ ಇರುವ ಸಂಭವವೂ ಇರುತ್ತದೆ. ಆದ್ದರಿಂದ ತಪಾಸಣೆ ಅತ್ಯಗತ್ಯ.
ಬಿಳಿಮುಟ್ಟು
ಸ್ತ್ರೀಯರಲ್ಲಿ ಸಹಜವಾಗಿ ಆಗುವ ಋತುಸ್ರಾವವಲ್ಲದೇ ಬೇರೆ ಬಗೆಯ ಸ್ರಾವವೂ ಆಗುತ್ತಿರುತ್ತದೆ. ರಕ್ತವನ್ನು ಹೊರತುಪಡಿಸಿ ಉಂಟಾಗುವ ಸ್ರಾವಕ್ಕೆ ಬಿಳಿ ಸೆರಗು (ಬಿಳಿಮುಟ್ಟು) ಎಂದು ಕರೆಯುತ್ತೇವೆ. ಮಾಸಿಕ ಸ್ರಾವದ ಒಂದೆರಡು ದಿನಗಳ ಮೊದಲು ಅಥವಾ ನಂತರ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಬಣ್ಣದ ವಾಸನೆಯಿರದ ಸ್ರಾವ ಸ್ವಾಭಾವಿಕವಾಗಿರುತ್ತದೆ. ಇದು ಸಹಜ ಸ್ರಾವವಾಗಿದ್ದು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಯೋನಿ ಭಾಗವನ್ನು ಒದ್ದೆಯಾಗಿಡಲು ಸಹಕಾರಿ. ಸಂಭೋಗ ಸಮಯದಲ್ಲಿ ಬಳಿ ಸ್ರಾವವು ಶಿಶ್ನದ ಯೋನಿ ಪ್ರವೇಶಕ್ಕೆ ನೆರವಾಗುತ್ತದೆ.
ಆದರೆ ಇದೇ ಬಿಳಿಸ್ರಾವ ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತಿದ್ದಲ್ಲಿ ಮೊಸರಿನಂತೆ ಗಟ್ಟಿಯಾಗಿ, ಹಳದಿ ಬಣ್ಣದಿಂದ ಕೂಡಿದ್ದರೆ, ಕೆಂಪು ಮಿಶ್ರವಾಗಿದ್ದರೆ ಚಿಕಿತ್ಸೆ ಅವಶ್ಯ. ಈ ಬಿಳಿ ಸ್ರಾವದೊಂದಿಗೆ ನವೆ, ಉರಿ, ಸೊಂಟ ನೋವು, ನಿಶ್ಯಕ್ತಿ, ಕೆಳಹೊಟ್ಟೆ ನೋವು ಮುಂತಾದ ಲಕ್ಷಣಗಳೂ ಕಂಡುಬರುತ್ತವೆ.
ಈ ಬಿಳಿಮುಟ್ಟು ಅನೇಕ ಕಾಯಿಲೆಗಳಲ್ಲಿ ರೋಗ ಚಿಹ್ನೆಯಾಗಿಯೂ ಇರಬಹುದು. ರಕ್ತಹೀನತೆ, ಸಕ್ಕರೆ ಕಾಯಿಲೆ, ಮಲಬದ್ಧತೆ ಮುಂತಾದವುಗಳಿದ್ದಲ್ಲಿ ಬಿಳಿಮುಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಅಸಹಜ ಬಿಳಿಮುಟ್ಟಿಗೆ ಸಾಮಾನ್ಯವಾದ ಕಾರಣವೆಂದರೆ ಜನನಾಂಗವನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳದಿರುವುದು. ಅತೀ ಕ್ಷಾರವುಳ್ಳ ಸಾಬೂನಿನ ಬಳಕೆ, ಒಳ ಉಡುಪುಗಳನ್ನು ಪ್ರತಿದಿನ ಸ್ವಚ್ಚವಾಗಿ ಒಗೆಯದಿರುವುದು, ನ್ಯಾಪ್‍ಕಿನ್‍ಗಳನ್ನು ಆಗಿಂದಾಗ್ಗೆ ಬದಲಾಯಿಸದಿರುವುದು, ಸಂತಾನ ನಿಯಂತ್ರಣಕ್ಕಾಗಿ ಉಪಯೋಗಿಸುವ ವೆಂಕಿ, ಕಾಪರ್ ಟಿ ಮುಂತಾದವುಗಳನ್ನು ಸಮರ್ಪಕ ರೀತಿಯಲ್ಲಿ ಅಳವಡಿಸದಿರುವುದು, ಕೆಳಜಾರಿದ ಗರ್ಭಕೋಶವನ್ನು ಜಾರದಂತೆ ಉಪಯೋಗಿಸುವ ಉಪಕರಣ (ಪೇಸರಿ)ದ ಅಳವಡಿಕೆ ಮುಂತಾದವು.
ಕೆಲವು ಲೈಂಗಿಕ ರೋಗಗಳಲ್ಲಿ ಅತಿ ಬಿಳಿಮುಟ್ಟು ಒಂದು ಲಕ್ಷಣವಾಗಿ ಕಂಡುಬರುತ್ತದೆ. ಇಂತಹ ಸಮಯದಲ್ಲಿ ಪತಿ, ಪತ್ನಿ ಇಬ್ಬರಿಗೂ ಚಿಕಿತ್ಸೆ ಅವಶ್ಯಕ.
ಚಿಕಿತ್ಸೆ
ಬಿಳಿಮುಟ್ಟಿಗೆ ಬಾಹ್ಯ ಚಿಕಿತ್ಸೆ ಮತ್ತು ಔಷಧಿ ಚಿಕಿತ್ಸೆಯು ಅಗತ್ಯ.
ಬಾಹ್ಯ ಚಿಕಿತ್ಸೆ : ಜಾಲಿಗಿಡದ ಚಕ್ಕೆ ಇಲ್ಲವೇ ತ್ರಿಫಲಾ ಪುಡಿ ಇಲ್ಲವೇ ಬೇವಿನ ಚಕ್ಕೆಯ ಕಷಾಯ ತಯಾರಿಸಿಕೊಂಡು ಬಿಸಿಯಾಗಿರುವಾಗಲೇ ಈ ಕಷಾಯದಿಂದ ಜನನೇಂದ್ರಿಯವನ್ನು ಸ್ವಚ್ಚಗೊಳಿಸಬೇಕು. ಇದನ್ನು ದಿನಕ್ಕೆರಡು ಬಾರಿ ಮಾಡಬೇಕು.
ಬೇಗನೇ ಉತ್ತಮ ಫಲಿತಾಂಶ ಬೇಕೆನ್ನುವವರು ಈ ಔಷಧಿಯ ಗಿಡಮೂಲಿಕೆ ಕಷಾಯವನ್ನು ಒಂದು ದೊಡ್ಡ ಬೇಸಿನ್ ಇಲ್ಲವೇ ಟಚ್‍ನಲ್ಲಿ ಹಾಕಿ ಜನನೇಂದ್ರಿಯ ಭಾಗಕ್ಕೆ ಕಷಾಯದ ಸಂಪರ್ಕ ಬರುವಂತೆ 15 ರಿಂದ 20 ನಿಮಿಷ ಕುಳಿತುಕೊಳ್ಳಬೇಕು. ಇದನ್ನು ಸಿಟ್ಜ್ ಬಾತ್ ಎನ್ನುವರು. ಇದರಿಂದ ಸ್ಥಾನಿಕ ತೊಂದರೆಗಳಿದ್ದಲ್ಲಿ ನಿವಾರಣೆಯಾಗುತ್ತದೆ.
ಔಷಧಿ ಚಿಕಿತ್ಸೆ
ಒಂದು ಚಮಚೆ ನೆಲ್ಲಿಕಾಯಿ ಪುಡಿ ತೆಗೆದುಕೊಂಡು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಉದಿನ ಹಿಟ್ಟು, ಅತಿಮಧುರ, ಅಶ್ವಗಂಧ ಇವುಗಳನ್ನೆಲ್ಲ ಸಮಭಾಗ ನುಣ್ಣಗೆ ಪುಡಿ ಮಾಡಿಟ್ಟುಕೊಂಡು ಒಂದು ಚಮಚೆಯಷ್ಟನ್ನು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ 12 ರಿಂದ 15 ದಿನ ಸೇವನೆ ಮಾಡಬೇಕು.
10 ಗ್ರಾಂ ಅಮೃತಬಳ್ಳಿಯನ್ನು ಕುಟ್ಟಿ ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಯಿಟ್ಟು ಬೆಳಿಗ್ಗೆ ಚೆನ್ನಾಗಿ ಹಿಸುಕಿ, ಶೋಧಿಸಿ ಕುಡಿಯಬೇಕು. ಇದನ್ನು 15 ದಿನಗಳ ಕಾಲ ಸೇವಿಸಬೇಕು.
ಬೂದುಗುಂಳಕಾಯಿ ತಿರುಳಿನ ರಸಕ್ಕೆ ಕಲ್ಲುಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಬಾಳೆಹಣ್ಣಿನ ರಸಕ್ಕೆ ಅರು ಗ್ರಾಂ ದಾಲ್ಚಿನ್ನಿ, ಐದು ಗ್ರಾಂ ಲೋಧ್ರ ಚಕ್ಕೆ, ಮೂರು ಗ್ರಾಂ ಏಲಕ್ಕೆ, ಚಿಕ್ಕತುಂಡು ಶುಂಠಿ ಇವೆಲ್ಲವನ್ನೂ ಕುಟ್ಟಿ ಪುಡಿ ಮಾಡಿ ಬೆರೆಸಬೇಕು. ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸೇವಿಸಬೇಕು.
ಮುಟ್ಟಿನ ಸಮಯದ ಹೊಟ್ಟೆ ನೋವು
ಋತುಸ್ರಾವದ ಸಮಯದಲ್ಲಿ ಮುಟ್ಟಿನ ಹೊಟ್ಟೆನೋವನ್ನು ಅನುಭವಿಸದಿರುವ ಮಹಿಳೆಯರೇ ಅಪರೂಪ. ಎಲ್ಲರಲ್ಲೂ ಸ್ವಾಭಾವಿಕವಾಗಿ ಋತುಸ್ರಾವದ ಸಮಯದಲ್ಲಿ ಸ್ವಲ್ಪಮಟ್ಟಿನ ಹೊಟ್ಟೆನೋವು ಕಾಣಿಸಿಕೊಳ್ಳುತ್ತವೆ. ಕೆಳಹೊಟ್ಟೆ ನೋವು, ಸೊಂಟ ನೋವು, ಕಾಲುಗಳಲ್ಲಿ ಸೆಳೆತ ಮುಂತಾದವು ಕಾಣಿಸಿಕೊಳ್ಳುತ್ತದೆ. ಋತುಸ್ರಾವ ಪ್ರಾರಂಭವಾದ ನಂತರ ತಂತಾನೇ ಕಡಿಮೆಯಾಗುತ್ತದೆ. ಇನ್ನು ಕೆಲವರಲ್ಲಿ ಋತುಸ್ರಾವದ ಪ್ರಾರಂಭದ ದಿನ ಮಾತ್ರ ನೋವಿನ ತೀವ್ರತೆಯಿದ್ದು ನಂತರ ಕಡಿಮೆಯಾಗುತ್ತದೆ. ಕೆಲವೊಮ್ಮೆ ಹೊಟ್ಟೆ ನೋವಿನೊಂದಿಗೆ ತಲೆಸುತ್ತು, ವಾಂತಿ, ಭೇದಿ, ಮಲಬದ್ಧತೆ, ಎದೆ ಬಿಗಿತದಂತಹ ಸಮಸ್ಯೆಗಳು ಕಂಡುಬರಬಹುದು. ಕೆಲವು ಸ್ತ್ರೀಯರಲ್ಲಿ ಋತುಮತಿಗಾದಾಗಿನಿಂದ ಇರುವ ಹೊಟ್ಟೆನೋವು ಮದುವೆ ನಂತರ ಇಲ್ಲವೇ ಮಗುವಾದ ನಂತರ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇನ್ನೂ ಕೆಲವರಲ್ಲಿ ಮುಂಚೆ ಇರದಿದ್ದ ಹೊಟ್ಟೆನೋವು ಸಂತಾನ ಹರಣ ಶಸ್ತ್ರಚಿಕಿತ್ಸೆಯ ನಂತರ, ಕಾಪರ್ ಟಿ ಧಾರಣೆ ನಂತರ ಕಾಣಿಸಿಕೊಳ್ಳಬಹುದು.
ಇಂದಿನ ಆಧುನಿಕ ಜೀವನದಲ್ಲಿ ವ್ಯಾಯಾಮದ ಅಭಾವದಿಂದಾಗಿಯೂ ಈ ಹೊಟ್ಟೆನೋವು ಕಂಡುಬರುತ್ತದೆ. ಕೆಲವರಲ್ಲಿ ಮಾನಸಿಕ ಖಿನ್ನತೆ, ಆತಂಕಗಳಂತಹ ಸಮಸ್ಯೆಗಳಿದ್ದಲ್ಲಿಯೂ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆಯ ತೊಂದರೆಯಿದ್ದಲ್ಲಿ ಅದರಿಂದಲೂ ಮುಟ್ಟಿನ ಹೊಟ್ಟೆನೋವು ಕಂಡುಬರಬಹುದು. ಗರ್ಭಕೋಶದಲ್ಲಿ ಸೋಂಕು ಉಂಟಾದಾಗ, ಗರ್ಭಕೋಶ ಹಿಂದಕ್ಕೆ ಬಾಗಿದ್ದಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ
ಮುಟ್ಟಿನ ಸಮಯದಲ್ಲಿ ಮೂರು ದಿನ ಕಡಲೆಕಾಳಿನಷ್ಟು ಗಾತ್ರದ ಹಿಂಗನ್ನು ತುಪ್ಪದಲ್ಲಿ ಹುರಿದು ಬಿಸಿ ನೀರಿನಲ್ಲಿ ದಿನಕ್ಕೆ ಎರಡು ಇಲ್ಲವೆ ಮೂರು ಬಾರಿ ಸೇವಿಸಬೇಕು.
ಆಡುಸೋಗೆ ಸೊಪ್ಪಿನ ರಸದಲ್ಲಿ ಹಿಂಗು ಮತ್ತು ಜೇನುತುಪ್ಪ ಬೆರೆಸಿ, ಬೆಳಿಗ್ಗೆ ಹಾಗೂ ಸಂಜೆ ಋತುಸ್ರಾವದ ಸಮಯದಲ್ಲಿ ಮೂರು ದಿನ ಸೇವಿಸಬೇಕು.
ಅಮೃತಬಳ್ಳಿ, ನೆಲಗುಳ್ಳ, ಶುಂಠಿ ಇವುಗಳನ್ನು ಸಮಭಾಗ ತೆಗೆದುಕೊಂಡು ಕುಟ್ಟಿ ಪುಡಿ ಕಷಾಯ ತಯಾರಿಸಿ ಬೆಳಿಗ್ಗೆ ಹಾಗೂ ಸಂಜೆ ಋತುಸ್ರಾವದ ಸಮಯದಲ್ಲಿ ಮೂರು ದಿನಗಳವರೆಗೆ ಕುಡಿಯಬೇಕು.
ಒಂದು ಚಮಚೆ ತುಂಬೆ ಮತ್ತು ನಿಂಬೆ ರಸಕ್ಕೆ ಚಿಟಿಕೆ ಉಪ್ಪು ಬೆರೆಸಿ, ತಕ್ಷಣವೇ ಕುಡಿಯಬೇಕು. ಇದನ್ನು ಋತುಸ್ರಾವದ ಸಮಯದಲ್ಲಿ ಮೂರು ದಿನ ದಿನಕ್ಕೆರಡು ಬಾರಿ ಕುಡಿಯಬೇಕು.
ಮಾಸಿಕ ಸ್ರಾವ ಆರಂಭವಾಗುವ ಏಳು ದಿನಗಳ ಮುಂಚಿನಿಂದಲೇ ಶುಂಠಿ, ಮೆಣಸು, ಹಿಪ್ಪಲಿ (ತ್ರಿಕಟು) ಸಮಭಾಗ ಪುಡಿ ಮಾಡಿಟ್ಟುಕೊಂಡು ದಿನಕ್ಕೆರಡು ಬಾರಿಯಂತೆ ಒಂದು ಚಮಚೆಯಷ್ಟು ತುಪ್ಪದಲ್ಲಿ ಬೆರೆಸಿ ಸೇವಿಸಿ, ಬಿಸಿ ನೀರು ಕುಡಿಯಬೇಕು.
ಋತುಬಂಧ
ಋತುಮತಿಯಾಗುವ ಕಾಲದಲ್ಲಿನ ಬದಲಾವಣೆಗಳಂತೆ ಋತುಬಂಧದ (ಮುಟ್ಟು ನಿಲ್ಲುವ ಸಮಯ) ಕಾಲವೂ ಸ್ತ್ರೀಯರಲ್ಲಿ ಸೂಕ್ಷ್ಮ ಪರ್ವಕಾಲ ಮತ್ತು ಅತ್ಯಂತ ಸಹಜವಾದದ್ದು. ಆದರೆ ಅನೇಕರು ಋತುಬಂಧದ ಬಗ್ಗೆ ತಪ್ಪು ಕಲ್ಪನೆಗಳನ್ನಿಟ್ಟುಕೊಂಡು ಸಹಜವಾಗಿ ಅದನ್ನು ಸ್ವೀಕರಿಸಲು ಸಾಧ್ಯವಾಗದೇ ಕೊರಗುತ್ತಾರೆ. ಋತುಬಂಧದ ವಯಸ್ಸು ಹತ್ತಿರವಾಗುತ್ತಿರುವಾಗಲೇ ಅದರ ಬಗ್ಗೆ ಕಾಳಜಿ ವಹಿಸಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಋತುಬಂಧದ ಸಮಯದಲ್ಲಿ ಅನಿಯಮಿತ ರಕ್ತಸ್ರಾವ, ಅತಿಯಾಗಿ ಸ್ರಾವವಾಗುವುದು, ಅಲ್ಪವಾಗಿ ಸ್ರಾವವಾಗುವುದು ಸಾಮಾನ್ಯ ಸಂಗತಿ. ಅಲ್ಲದೇ ದೇಹದ ತೂಕ ಹೆಚ್ಚಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಮೈ ಬಿಸಿಯಾಗುವುದು ಇಲ್ಲವೇ ಚಳಿಯಾಗುವುದು ಸಾಮಾನ್ಯ ಸಂಗತಿ. ಹೃದಯದ ಬಡಿತ ಹೆಚ್ಚುತ್ತದೆ. ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ತನಗಳಲ್ಲಿ ನೋವು, ಬಿಗಿತ ಕಂಡುಬರುತ್ತದೆ. ಅಜೀರ್ಣ ಇಲ್ಲವೇ ಜೀರ್ಣಶಕ್ತಿ ಕುಂದುವುದು, ಅತಿಯಾದ ಆತಂಕ, ಗಾಬರಿ ಉಂಟಾಗುವುದು, ವಿನಾಕಾರಣ ಚಿಂತೆ ಮಾಡುವುದು, ಶೀಘ್ರ ಕೋಪವುಂಟಾಗುವುದು ಹೆಚ್ಚುತ್ತದೆ.
ಋತುಬಂಧ ಮುಪ್ಪಿನ ಸಂಕೇತ, ಗಂಡನಿಗೆ, ಮಕ್ಕಳಿಗೆ ತಾನು ಬೇಡವಾಗುತ್ತೇನೋ ಎನ್ನುವ ಆತಂಕದಿಂದ ಖಿನ್ನತೆ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗಗಳೂ ಇದ್ದಲ್ಲಿ ಈ ಸಮಯದಲ್ಲಿ ಅವೆಲ್ಲವೂ ಅಧಿಕಗೊಂಡಂತೆ ಅನಿಸಬಹುದು. ಋತುಬಂಧದ ಸಮಯವನ್ನು ಸಹನೀಯವೆನ್ನಿಸಿ ತೊಂದರೆಗಳನ್ನು ಧೈರ್ಯವಾಗಿ ಎದುರಿಸಲು ಕೆಲವು ಮನೆ ಮದ್ದಿನ ಚಿಕಿತ್ಸೆ ಉತ್ತಮ ಪರಿಣಾಮ ಬೀರುವಲ್ಲಿ ಸಹಾಯ ಮಾಡುತ್ತದೆ.
ಚಿಕಿತ್ಸೆ
ಅಶ್ವಗಂಧವನ್ನು ಕುಟ್ಟಿ ಪುಡಿ ಮಾಡಿ ಒಂದು ಚಮಚೆಯಷ್ಟನ್ನು ಹಾಲಿನೊಂದಿಗೆ ಬೆಳಿಗ್ಗೆ ಹಾಗೂ ಸಂಜೆ ಮೂರು ತಿಂಗಳ ಕಾಲ ಕುಡಿಯಬೇಕು.
ನೆಲ್ಲಿಕಾಯಿ ರಸ ಇಲ್ಲವೇ ಪುಡಿಯನ್ನು ಒಂದು ಚಮಚೆ ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಊಟಕ್ಕೆ ಮುಂಚೆ ಸೇವಿಸಬೇಕು. ಇದನ್ನು ಮೂರರಿಂದ ಆರು ತಿಂಗಳು ಸೇವಿಸಬೇಕು.
ಬ್ರಾಹ್ಮಿ ಎಲೆಗಳನ್ನು ಜಜ್ಜಿ ರಸ ತೆಗೆದು ಇಲ್ಲವೇ ಒಣಗಿಸಿ ಪುಡಿ ಮಾಡಿ ಒಂದು ಚಮಚೆಯಷ್ಟನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡುವುದರಿಂದ ನಿದ್ರಾಹೀನತೆ, ಆತಂಕಗಳೂ ನಿವಾರಣೆಯಾಗುತ್ತದೆ. ಅಲ್ಲದೇ ಇದು ಸ್ಮರಣ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಒಂದು ಲೋಟ ನೀರಿಗೆ ಒಂದು ಚಮಚೆ ಶತಾವರಿ (ಹಲವು ಮಕ್ಕಳ ತಾಯಿಬೇರು) ಪುಡಿ ಹಾಕಿ ಕುದಿಸಬೇಕು. ಕುದಿದು ಅರ್ಧವಾದಾಗ ಇಳಿಸಿ ಅದಕ್ಕೆ ಹಾಲು ಸಕ್ಕರೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಡಿಯಬೇಕು. ಇದು ದೇಹಕ್ಕೆ ಪುಷ್ಟಿಕರವಾಗಿರುವುದಲ್ಲದೆ ಮನಸ್ಸಿಗೂ ಸಮಾಧಾನ ನೀಡುತ್ತದೆ.

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!