ರಕ್ತದ ಕ್ಯಾನ್ಸರ್ ಎಂಬ ಕ್ಯಾನ್ಸರ್ ಗಳ ರಾಜ

ರಕ್ತದ ಕ್ಯಾನ್ಸರ್ ಎಂದ ಕೂಡಲೇ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿ ಭಯಾನಕ ಸಂಕಟವನ್ನು ಅನುಭವಿಸುವುದಂತೂ ಸತ್ಯವಾದ ಮಾತು.ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲ್ಮಶ ಮತ್ತು ರಾಸಾಯನಿಕಪೂರಿತವಾಗಿರುವುದರಿಂದ ಅದಷ್ಟು ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ. 

ರಕ್ತದ ಕ್ಯಾನ್ಸರ್ ಎಂಬ ಕ್ಯಾನ್ಸರ್ ಗಳ ರಾಜ

ಕ್ಯಾನ್ಸರ್ ಎಂದಾಗ ಹೌಹಾರದೆ ಇರುವ ಮನುಷ್ಯರೇ ಇಲ್ಲ. ಅದರಲ್ಲೂ ರಕ್ತದ ಕ್ಯಾನ್ಸರ್ ಎಂದರೆ ಹೆಚ್ಚಿನವರು ಹೆಸರು ಕೇಳಿದೊಡನೆಯೇ ಅರ್ಧ ಸತ್ತಂತಾಗುತ್ತಾರೆ. ಕ್ಯಾನ್ಸರ್ನಲ್ಲಿ ನೂರಾರು ವಿಧಗಳಿದ್ದು ಅದು ಚರ್ಮ, ಎಲುಬು, ಮೆದುಳಿನ ಜೀವಕೋಶಗಳು, ರಕ್ತದಕಣಗಳು, ಹೀಗೆ ಎಲ್ಲ ಬಗೆಯ ಜೀವಕೋಶಗಳಿಗೆ ಕ್ಯಾನ್ಸರ್ ಬರುತ್ತದೆ. ಆದರೆ ರಕ್ತದ ಕ್ಯಾನ್ಸರ್ ಎಂದರೆ ಎಲ್ಲ ರೀತಿಯ ಕ್ಯಾನ್ಸರ್ ರೋಗಗಳಿಗೆ ಆಧಿಪತಿ ಅಥವಾ ರಕ್ಕಸ ಕ್ಯಾನ್ಸರ್ ಎಂಬ ಕುಖ್ಯಾತಿಯನ್ನೂ ಪಡೆದಿದೆ. ಹಿಂದಿನ ಹಳೆಯ ಹಿಂದಿ ಸಿನೆಮಾಗಳಲ್ಲಿ ಹೆಚ್ಚಿನ ಹೀರೋಗಳು ರಕ್ತದ ಕ್ಯಾನ್ಸರ್ ಬಂದು ರಕ್ತ ಕಾರುತ್ತಾ ಸಾಯುವ ದೃಶ್ಯದಿಂದಾಗಿಯೂ ಜನರಲ್ಲಿ ರಕ್ತದ ಕ್ಯಾನ್ಸರ್ ಬಗೆ ಒಂದು ರೀತಿಯ ಅವ್ಯಕ್ತ ಭಯ ಮತ್ತು ಅಂಜಿಕೆ ಯಾವತ್ತೂ ಇದೆ. ಹೀಗಾಗಿ ರಕ್ತದ ಕ್ಯಾನ್ಸರ್ ಎಂದ ಕೂಡಲೇ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿ ಭಯಾನಕ ಸಂಕಟವನ್ನು ಅನುಭವಿಸುವುದಂತೂ ಸತ್ಯವಾದ ಮಾತು.

ಕಳೆದ ಹತ್ತು ವರ್ಷಗಳ ಹಿಂದೆ ದಂತಚಿಕಿತ್ಸಾಲಯದಲ್ಲಿ ಎಂದಿನಂತೆ ರೋಗಿಗಳನ್ನು ನೋಡುತ್ತಾ ಇರುವಾಗ, ಸುಮಾರು ಮಧ್ಯ ವಯಸ್ಸಿನ ಕಟ್ಟುಮಸ್ತಾದ ಪೊಗರು ಮೀಸೆಯ ಯುವಕನೋರ್ವ ತೀವ್ರ ಆತಂಕದಿಂದಲೇ ನನ್ನ ಬಳಿ ಬಂದು ನನ್ನ ವಸಡುಗಳಲ್ಲಿ ಬೆಳಗ್ಗೆ ಹಲ್ಲುಜ್ಜುವಾಗ ತುಂಬಾ ರಕ್ತ ಬಂದಿದೆ ಯಾಕೋ ಬಹಳ ಸುಸ್ತು ಬೇರೆ ಉಂಟಾಗುತ್ತದೆ ಎಂದಾಗ ನನ್ನ ಸೂಕ್ತ ಮನಸ್ಸು ಆ ಕ್ಷಣದಲ್ಲಿ ಜಾಗೃತವಾಗಿತ್ತು. ಕಳೆದ 2 ತಿಂಗಳಲ್ಲಿ ಜ್ವರವೇನಾದರೂ ಬಂದಿದೆಯಾ ಎಂದಾಗ ಮೂರು ಬಾರಿ ಜ್ವರ ಬಂದಿದೆ. ಮೂರು ಬಾರಿಯೂ ಆಂಟಿಬಯೋಟಿಕ್ ಸೇವಿಸಿದೆ. ಮತ್ತು ಕಳೆದೊಂದು ತಿಂಗಳಲ್ಲಿ ದೇಹದ ತೂಕ 5kg ಕಡಿಮೆಯಾಗಿದೆ. ಹಸಿವಿಲ್ಲದಿರುವುದು, ನಿರುತ್ಸಾಹ, ನಿರಾಸಕ್ತಿ, ಆಯಾಸ ಇದೆ ಎಂದಾಗ ನನ್ನ ಸಂಶಯ ಜಾಸ್ತಿಯಾಗುತ್ತಲೇ ಹೋಯಿತು. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಿ ರಕ್ತ ಪರೀಕ್ಷೆ ಮಾಡಿಸಲು ಹೇಳಿದೆ. ನೋಡುತ್ತಿಂದತೆಯೇ ಆತನ ಮೈ ಮೇಲೆ ಕಪ್ಪು ಚಿಕ್ಕ ಚಿಕ್ಕ ಮಚ್ಚೆಗಳು ಹುಟ್ಟಲಾರಂಭಿಸಿದವು. ಇದಾಗಿ ಎರಡು ದಿನದಲ್ಲಿಯೇ ಆತ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೂ ಪರಿಣಾಮಕಾರಿಯಾಗದೆ ಇಹಲೋಕ ತ್ಯಜಿಸಿದ್ದ. ಇದು ಅತ್ಯಂತ ತೀವ್ರಕರವಾದ ರಕ್ತದ ಕ್ಯಾನ್ಸರ್ನ ಒಂದು ಸಣ್ಣ ಉದಾಹರಣೆ ಅಷ್ಟೆ.

ಏನಿದು ರಕ್ತದ ಕ್ಯಾನ್ಸರ್?

ರಕ್ತದಲ್ಲಿ ಬಿಳಿ ರಕ್ತಕಣ, ಕೆಂಪು ರಕ್ತಕಣ, ರಕ್ತತಟ್ಟೆಗಳ ಮತ್ತು ಪ್ಲಾಸ್ಮಾ ಇರುತ್ತದೆ. ರಕ್ತದ ಕ್ಯಾನ್ಸರ್ ಬಂದಾಗ ರಕ್ತದಲ್ಲಿ ಅತೀ ಹೆಚ್ಚು ಅಸಹಜ, ಅಪಕ್ವ ಬಿಳಿ ರಕ್ತಕಣಗಳು ಇರುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಒಂದು ಮೆಕ್ರೊಲೀಟರ್ನಲ್ಲಿ 5000 ರಿಂದ 10,000 ವರೆಗೆ ಬಿಳಿ ರಕ್ತಕಣ ಇರುತ್ತದೆ. ರಕ್ತದ ಕ್ಯಾನ್ಸರ್ ಬಂದಾಗ ಇದರ ಸಂಖ್ಯೆ 50,000 ರಿಂದ 75,000 ವರೆಗೂ ಇರುತ್ತದೆ. ಸಾಮಾನ್ಯವಾಗಿ ಬಿಳಿ ರಕ್ತಕಣಗಳು ಎಲುಬಿನ ಒಳಭಾಗದ ಮೂಳೆಯ ತಿರುಳು (ಅಸ್ಥಿಮಜ್ಜೆ) ನಲ್ಲಿ ಉತ್ಪತ್ತಿಯಾಗುತ್ತದೆ. ಅತಿಯಾದ, ಅಪಕ್ವವಾದ ಬಿಳಿ ರಕ್ತಕಣಗಳು ಉತ್ಪತ್ತಿಯಾದಾಗ, ಅವು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಬಿಳಿ ರಕ್ತಕಣಗಳು ನಮ್ಮ ದೇಹದ ಸೈನಿಕರು ಇದ್ದಂತೆ. ದೇಹಕ್ಕೆ ಸೋಂಕು ತಗುಲದಂತೆ ತಡೆಯುವಲ್ಲಿ ಬಹಳ ಪರಿಣಾಮಕಾರಿ ಪಾತ್ರವಹಿಸುತ್ತದೆ.

ಅಪಕ್ವ ಬಿಳಿರಕ್ತಕಣಗಳಿಂದ ದೇಹಕ್ಕೆ ಯಾವುದೇ ರಕ್ಷಣೆ ಸಿಗದೆ ದೇಹ ಪದೇ ಪದೇ ಸೋಂಕಿಗೆ ತುತ್ತಾಗುತ್ತದೆ. ಅದೇ ರೀತಿ ಮೂಳೆ ತಿರುಳಿನಲ್ಲಿ ಉತ್ಪತ್ತಿಯಾಗಬೇಕಾದ ಕೆಂಪು ರಕ್ತಕಣಗಳು ಮತ್ತು ರಕ್ತತಟ್ಟೆಗಳ ಉತ್ಪತ್ತಿಗೂ ಧಕ್ಕೆ ಉಂಟಾಗಿ ಅವುಗಳ ಸಂಖ್ಯೆಯೂ ಕ್ಷೀಣಿಸುತ್ತದೆ. ಇದೇ ಕಾರಣದಿಂದ ದೇಹದ ಅಂಗಾಂಗಳಿಗೆ ಆಮ್ಲಜನಕ ಸರಬರಾಜು ವ್ಯತ್ಯಯವಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ರಕ್ತಹೀನತೆಯಿಂದಾಗಿ ಉಸಿರಾಟ ಮಾಡಲು ಕಷ್ಟವಾಗುತ್ತದೆ. ರಕ್ತ ತಟ್ಟೆಗಳ ಸಂಖ್ಯೆ ಕ್ಷೀಣಿಸುವುದರಿಂದ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಪೂರಕವಾದ ವಾತಾವರಣ ಇರುವುದಿಲ್ಲ. ಇದೇ ಕಾರಣದಿಂದ ಸಣ್ಣ ಗಾಯವಾದರೂ ದೇಹದಲ್ಲಿ ರಕ್ತ ಒಸರುತ್ತದೆ ಮತ್ತು ರಕ್ತ ಹೆಪ್ಪುಗಟ್ಟದೇ ಇರಬಹುದು. ಬಾಯಿಯಲ್ಲಿ, ವಸಡಿನಲ್ಲಿ ತನ್ನಿಂತಾನೇ ರಕ್ತ ಒಸರುತ್ತದೆ.

ರೋಗದ ಲಕ್ಷಣಗಳು ಏನು?

1) ಪದೇ ಪದೇ ಕಾಡುವ ಜ್ವರ, ಯಾವುದೇ ಕಾರಣವಿಲ್ಲದೆ ವಾರಗಟ್ಟಲೆ ಜ್ವರ ಕಾಡುತ್ತದೆ ಮತ್ತು ಆಂಟಿ ಬಯೋಟಿಕ್ಗಳಿಗೆ ಸರಿಯಾಗಿ ಸ್ಪಂದಿಸದೇ ಇರಬಹುದು.

2) ವಿಪರೀತ ಆಯಾಸ, ಸುಸ್ತು, ಉಸಿರಾಟದ ತೊಂದರೆ, ಯಾವುದೇ ಕೆಲಸದಲ್ಲಿ ಉತ್ಸಾಹ ಇಲ್ಲದಿರುವುದು.

3) ದೇಹದ ತೂಕ ಕಾರಣವಿಲ್ಲದೆ ಕಡಿಮೆಯಾಗುವುದು. ಕಾರಣವಿಲ್ಲದೆ ಬೆವರುವುದು, ರಾತ್ರಿ ಹೊತ್ತು ವಿಪರೀತ ಬೆವರುವಿಕೆ.

4) ಊಟ ಸೇರದಿರುವುದು, ಹಸಿವಿಲ್ಲದಿರುವುದು, ಬಾಯಿರುಚಿ ಇಲ್ಲದಿರುವುದು.

5) ಕಾರಣವಿಲ್ಲದೆ ವಸಡಿನಲ್ಲಿ ರಕ್ತ ಒಸರುವುದು, ದೇಹಕ್ಕೆ ಗಾಯವಾದಾಗ ರಕ್ತ ಹೆಪ್ಪುಗಟ್ಟದೇ ಇರುವುದು ಇತ್ಯಾದಿ.

6) ಪದೇ ಪದೇ ದೇಹಕ್ಕೆ ಸೋಂಕು ತಗಲುತ್ತದೆ. ಕೆಮ್ಮು, ಶೀತ, ನೆಗಡಿ, ಜ್ವರ ವಾರಗಟ್ಟಲೆ ಬರುತ್ತದೆ. ಯಾವುದೇ ಔಷದಿಗೂ ಈ ಸೋಂಕು ಸ್ಪಂದಿಸುವುದಿಲ್ಲ.

7) ಗಂಟುನೋವು, ಎಲುಬುಗಳಲ್ಲಿ ನೋವು, ಮೈಯಲ್ಲಿ ತುರಿಕೆ, ಚರ್ಮದಲ್ಲಿ ಕಪ್ಪು ಕಪ್ಪು ಚುಕ್ಕೆಗಳು ಕಾರಣವಿಲ್ಲದೆ ಕಾಣಿಸಿಕೊಳ್ಳುತ್ತದೆ.

ಕಾರಣಗಳು ಏನು?

ಸಾಮಾನ್ಯವಾಗಿ 55 ರ ವಯಸ್ಸಿನ ನಂತರ ರಕ್ತದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಆದರೆ 15 ವರ್ಷದ ಒಳಗಿನ ಮಕ್ಕಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ರಕ್ತದ ಕ್ಯಾನ್ಸರ್ಗಳಲ್ಲಿ ನಾಲ್ಕು ವಿವಿಧ ಬಗೆಗಳಿದ್ದು ಒಂದು ತೀವ್ರತರವಾದ ಬಗೆಯಾಗಿದ್ದು ಉಳಿದ ಮೂರು ಅಷ್ಟೇನು ತೀವ್ರತರವಾಗಿರದು. ತೀವ್ರಕರವಾದ ರಕ್ತದ ಕ್ಯಾನ್ಸರ್ ಅತೀ ಬೇಗನೆ ಕೆರಳುತ್ತದೆ ಮತ್ತು ಮಾರಣಾಂತಿಕವಾಗಿ ಕಾಡುತ್ತದೆ. ಬಾಕಿ ಉಳಿದ ಮೂರು ಬಗೆಯ ರಕ್ತದ ಕ್ಯಾನ್ಸರ್ ನಿಧಾನವಾಗಿ ಕಾಡುತ್ತದೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತದೆ. ಈ ರಕ್ತದ ಕ್ಯಾನ್ಸರ್ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ದೇಹದಲ್ಲಿನ ಜೀವಕೋಶಗಳು ವಿಭಜನೆಯಾದಾಗ ವರ್ಣತಂತುವಿನ (ಜೀನ್) ಒಳಗಿನ ಡಿ.ಎನ್.ಎ (DNA) ನಲ್ಲಿ ಆಗಿಂದಾಗೆ ಆಗುವ ಏರುಪೇರು ಅಥವಾ ಅನೀರೀಕ್ಷಿತ ತಪ್ಪುಗಳಿಂದಾಗಿ ಶೇಕಡಾ 50 ಮಂದಿಯಲ್ಲಿ ರಕ್ತದ ಕ್ಯಾನ್ಸರ್ ಬರುತ್ತದೆ ಎಂದು ತಿಳಿದು ಬಂದಿದೆ. ಈ ರೀತಿ ಆಓಂ ಗೆ ತೊಂದರೆ ಆದಾಗ ಜೀವಕೋಶಗಳು ಎರಾಬಿರ್ರಿಯಾಗಿ ಸಿಡಿದು ನಿಂತು, ಅಪಕ್ಷ ಮತ್ತು ಅಸಹಜವಾದ ಬಿಳಿರಕ್ತಕಣಗಳು ಉತ್ಪಾದನೆಯಾಗಿ ಎಲುಬಿನ ಒಳಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಸಹಜ ಮತ್ತು ಪಕ್ವವಾದ ಬಿಳಿ ರಕ್ತಕಣಗಳ ಸಂಖ್ಯೆ ಕ್ಷೀಣಿಸುತ್ತದೆ. ಕೆಂಪು ರಕ್ತಕಣಗಳು ಮತ್ತು ರಕ್ತತಟ್ಟೆಗಳ ಸಂಖ್ಯೆಯೂ ಕಡಿಮೆಯಾಗಿ ರೋಗವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಅಪಕ್ವ ಬಿಳಿ ರಕ್ತಕಣಗಳ ಸೂಕ್ತ ಸಮಯಕ್ಕೆ ಸಾಯುವುದಿಲ್ಲ ಮತ್ತು ಅವುಗಳ ಸಂಖ್ಯೆ ಅನಿಯಂತ್ರಿತವಾಗಿ ಬೆಳೆಯುತ್ತಲೇ ಹೋಗಿ ಹಲವಾರು ಅನಾಹುತಗಳಿಗೆ ನಾಂದಿಹಾಡುತ್ತದೆ.

ಯಾಕಾಗಿ ವರ್ಣತಂತುಗಳಲ್ಲಿ ವ್ಯತ್ಯಾಸ ಬರುತ್ತದೆ?

1) ವಿಕಿರಣ ಸೂಸುವಿಕೆಯಿಂದ :- ವಾತಾವರಣ ಅಥವಾ ವೃತ್ತಿ ಸಂಬಂಧ ಕಾರಣಗಳಿಂದ ಅತಿಯಾದ ವಿಕಿರಣ ಜೀವಕೋಶಗಳಿಗೆ ಹಾನಿಮಾಡಿ DNA ಯಲ್ಲಿ ನ್ಯೂನತೆ ಉಂಟುಮಾಡುತ್ತದೆ.

2) ವೈರಾಣು ಸೋಂಕು :- HTLV -1 ಮತ್ತು HIV ವೈರಾಣು ಜೀವಕೋಶಗಳ DNA ಮೇಲೆ ನ್ಯೂನತೆ ಬರುವಂತೆ ಮಾಡುತ್ತದೆ.

3) ಬೆನ್ಜೀನ್ ಮತ್ತು ಪೆಟ್ರೋಲಿಯಂ ಕೆಮಿಕಲ್ (ರಾಸಾಯನಿಕ) ಕೂಡಾ ಜೀವಕೋಶಗಳಿಗೆ ಹಾನಿಮಾಡುತ್ತದೆ.

4) ಅತಿಯಾದ ಧೂಮಪಾನ, ಹೇರ್ ಡೈ, ಮೊದಲು ಚಿಕಿತ್ಸೆಗಾಗಿ ನೀಡಿದ ಕೀಮೋಥೆರಪಿ ಮುಂತಾದವುಗಳಿಂದಲೂ ಜೀವಕೋಶಗಳಲ್ಲಿನ DNA ಮೇಲೆ ದುಷ್ಪರಿಣಾಮ ಉಂಟುಮಾಡಬಹುದು.

5) ವಂಶಪಾರಂಪರಿಕವಾಗಿ, ಅನುವಂಶಿಕವಾಗಿಯೂ ವರ್ಣತಂತುಗಳಲ್ಲಿ ಹರಡುವ ಸಾಧ್ಯತೆಯೂ ಇದೆ.

ಕಂಡುಹಿಡಿಯುವುದು ಹೇಗೆ?

1) ರಕ್ತದ ಪರೀಕ್ಷೆ ಮುಖಾಂತರ :- ಬಿಳಿ ರಕ್ತಕಣಗಳ ಸಂಖ್ಯೆ ಕೆಂಪು ರಕ್ತಕಣಗಳ ಸಂಖ್ಯೆ ಮತ್ತು ರಕ್ತ ತಟ್ಟೆಗಳ ಸಂಖ್ಯೆ ಕಂಡುಹಿಡಿಯುವುದು. ಅಪಕ್ವವಾದ ಮತ್ತು ಅತಿಯಾದ ಬಿಳಿ ರಕ್ತಕಣಗಳ ಸಂಖ್ಯೆ ಇದ್ದಲ್ಲಿ ಹೆಚ್ಚಿನ ಪರೀಕ್ಷೆ ಮಾಡಲಾಗುತ್ತದೆ.

2) ಪೆರಿಫೇರಲ್ ಸ್ಮಿಯರ್ ಎಂಬ ರಕ್ತದ ಪರೀಕ್ಷೆ ಮುಖಾಂತರ ರಕ್ತದಲ್ಲಿ ಬಿಳಿ ರಕ್ತಕಣಗಳ ಆಕೃತಿ, ಬಣ್ಣ, ರಚನೆ ಮತ್ತ ಗಾತ್ರವನ್ನು ಪತ್ತೆ ಹಚ್ಚಿ ರೋಗವನ್ನು ಕಂಡುಹಿಡಿಯುತ್ತಾರೆ.

3) ಎಲುಬಿನ ಒಳಗಿನ ಮೂಳೆ ತಿರುಳು ಅಥವಾ ಅಸ್ಥಿಮಜ್ಜೆಯನ್ನು ಪರೀಕ್ಷೆ ಮಾಡಿ ರಕ್ತದ ಕ್ಯಾನ್ಸರ್ನ್ನು ದೃಡೀಕರಣ ಮಾಡಲಾಗುತ್ತದೆ.

ಚಿಕಿತ್ಸೆ ಹೇಗೆ?

ರಕ್ತದ ಕ್ಯಾನ್ಸರ್ ರೋಗಿಗಳನ್ನು ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಯಾವುದೇ ಕ್ಷಣದಲ್ಲಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಸಹಜ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾದ ಕಾರಣದಿಂದಾಗಿ ದೇಹದ ರೋಗ ನಿರೋಧಕ ಶಕ್ತಿ, ನಂಜು ಎದುರಿಸುವ ಶಕ್ತಿ ಹಾಳಾಗುತ್ತದೆ. ಮುಖ ಕವಚ ದರಿಸಿ ಓಡಾಡಬೇಕಾಗುತ್ತದೆ. ದೇಹದಲ್ಲಿನ ಬಿಳಿ ಸಹಜ ರಕ್ತಕಣಗಳ ಸಂಖ್ಯೆ ಸರಿ ಆಗುವವರೆಗೆ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಸರ್ಜರಿ ಮುಖಾಂತರ ರೋಗಗ್ರಸ್ತ ಅಸ್ಥಿಮಜ್ಜೆಯನ್ನು ಎಲುಬಿನಿಂದ ತೆಗೆದುಹಾಕಲಾಗುತ್ತದೆ.

ಕಿಮೋಥೆರಪಿ ಚಿಕಿತ್ಸೆಯಿಂದ ಅಪಕ್ವ ಬಿಳಿ ರಕ್ತಕಣಗಳನ್ನು ಸಾಯಿಸಲಾಗುತ್ತದೆ. ರಕ್ತ ಪೂರಣ, ರಕ್ತತಟ್ಟೆಗಳ ಪೂರಣ ಮಾಡಿ ರಕ್ತದಲ್ಲಿ ರಕ್ತಕಣಗಳ ಸಂಖ್ಯೆಯನ್ನು ಹತೋಟಿಗೆ ತರಲಾಗುತ್ತದೆ. ಆಂಟಿ ಬಯೋಟಿಕ್ ಔಷಧಿ ನೀಡಿ ಸೋಂಕು ಬರದಂತೆ ಎಚ್ಚರವಹಿಸಲಾಗುತ್ತದೆ. ಅಸ್ಥಿಮಜ್ಜೆ ಕಸಿ ಮಾಡುವುದರ ಮೂಲಕ ಅಪಕ್ವ ಅಸ್ಥಿಮಜ್ಜೆಯನ್ನು ತೆಗೆದು ಆರೋಗ್ಯವಂತ ಅಸ್ಥಿಮಜ್ಜೆಯನ್ನು ಎಲುಬುನೊಳಗೆ ಕಸಿಮಾಡಿ ಆರೋಗ್ಯವಂತ ಬಿಳಿರಕ್ತಕಣ ಉತ್ಪತ್ತಿಯಾಗುವಂತೆ ಪ್ರಚೋದಿಸಲಾಗುತ್ತದೆ.

ಕೊನೆಮಾತು:

ಗ್ರೀಕ್ ಭಾಷೆಯಲ್ಲಿ ಲ್ಯೂಕೋಸ್ ಎಂದರೆ ಬಿಳಿ ಮತ್ತು ಹೈಮಾ ಎಂದರೆ ರಕ್ತ ಎಂಬರ್ಥವಿದೆ. ಇವೆರಡನ್ನು ಸೇರಿಸಿ ಲ್ಯೂಕೇಮಿಯಾ ಎಂದು ಆಂಗ್ಲಭಾಷೆಯಲ್ಲಿ ಕರೆಯಲಾಗುತ್ತದೆ. ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಜಾಸ್ತಿಯಿರುವರಿಂದ, ಕೆಂಪು ರಕ್ತಕಣಗಳ ಸಂಖ್ಯೆ ಕ್ಷೀಣಿಸುವುದರಿಂದ ಬಿಳಿರಕ್ತ ಖಾಯಿಲೆ ಎಂದೂ ರಕ್ತದ ಕ್ಯಾನ್ಸರ್ಗೆ ಅನ್ವರ್ಥ ನಾಮ ಬಂದಿದೆ. ರಕ್ತದ ಕ್ಯಾನ್ಸರ್ ಯಾರಿಗೂ ಬರಬಹುದು. ಯಾವ ವಯಸ್ಸಿನಲ್ಲಿಯೂ ಕಾಡಬಹುದು. ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ರಕ್ತದ ಪರೀಕ್ಷೆ ಮಾಡಿಸಿಕೊಳ್ಳಿ.

ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲ್ಮಶ ಮತ್ತು ರಾಸಾಯನಿಕಪೂರಿತವಾಗಿರುವುದರಿಂದ ಅದಷ್ಟು ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ. ಇದೆಲ್ಲಾ ಮಾಡಿದ ಬಳಿಕವೂ ಕ್ಯಾನ್ಸರ್ ಬಂದಲ್ಲಿ ಎದೆಗುಂದಬೇಡಿ. ಆತ್ಮವಿಶ್ವಾಸ, ಮನೋಶಕ್ತಿಯಿಂದ ಯಾವುದೇ ರೋಗವನ್ನೂ ಜಯಿಸಬಹುದು ಎಂಬ ಮಾತನ್ನು ಮರೆಯಬೇಡಿ. ಆಧುನಿಕ ಕಿಮೋಥೆರಪಿ, ಅಸ್ಥಿಮಜ್ಜೆಯ ಕಸಿಯ ಮುಖಾಂತರ ರಕ್ತದ ಕ್ಯಾನ್ಸರ್ನ್ನು ಕೂಡಾ ಜಯಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಬದುಕಿದ್ದೂ ಸಾಯಬೇಡಿ ಸತ್ತ ಮೇಲೆಯೂ ಬದುಕುವ ರೀತಿಯಲ್ಲಿ ಜೀವನ ನಡೆಸಿ. ಅದರಲ್ಲಿಯೂ ಮನುಕುಲದ ಒಳಿತು ಅಡಗಿದೆ.

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323   

 ಮೊ.: 98451 35787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!