ಬಂದಿದೆ ಪರೀಕ್ಷಾ ಸಮಯ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಸುಲಭ ಉಪಾಯಗಳು. ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ. ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ. ಓದಿದ್ದೆಲ್ಲ ನೆನಪಿದ್ದರೆ ಸಾಕು ಎಂಬ ಭಾವನೆ ಎಲ್ಲರಿಗೂ ಇರುತ್ತದೆ. ಹಾಗಾಗಿ ನಾವು ನೆನಪಿನ ಶಕ್ತಿಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಈ ಕ್ರಮಗಳಿಂದ ಕೇವಲ ನೆನಪಿನ ಶಕ್ತಿ ಹೆಚ್ಚುವುದಷ್ಟೇ ಅಲ್ಲ ಮೆದುಳಿನ ಆರೋಗ್ಯದ ವೃದ್ಧಿಯೂ ಕೂಡ ಆಗುತ್ತದೆ. ಮನಸ್ಸು ಧನಾತ್ಮಕ ರೀತಿಯಲ್ಲಿ ಬದಲಾಗಲು ಸಹಾಯವಾಗುತ್ತದೆ. ಈ ವಿಷಯದಲ್ಲಿ ಆಹಾರ, ಕೆಲವು ದಿನಚರಿಯ ಕ್ರಿಯೆಗಳು, ಜೀವನ ಶೈಲಿ ಮತ್ತು ಕೆಲವು ಔಷಧಗಳು ಕೂಡ ತುಂಬಾ ಸಹಕಾರಿಯಾಗುತ್ತವೆ.
1. ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವಾಗ ಮೊದಲನೆಯ ಸ್ಥಾನವನ್ನು ಪಡೆದುಕೊಳ್ಳುವುದು “ತುಪ್ಪ”. ಶುದ್ಧ ದೇಸಿ ಹಸುವಿನ ಹಾಲಿನ ತುಪ್ಪವಾದರಂತೂ ಅಮೃತ ಸಮಾನವೇ ಸರಿ. ಹಾಗಾಗಿ ಮಕ್ಕಳಿಗೆ ನಿತ್ಯವೂ ಒಂದೆರಡು ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು.
2. ವಾಲ್ನಟ್, ಬಾದಾಮಿ, ಗೋಡಂಬಿಯಂತಹ ನಟ್ ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.
3. ಬೂದುಗುಂಬಳಕಾಯಿ ಅತ್ಯಂತ ಮೇಧ್ಯವೆಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಬೂದುಗುಂಬಳಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೂ ಮಕ್ಕಳಿಗೆ ರುಚಿಯಾದ ಒಂದು ಖಾದ್ಯದ ರೀತಿಯಲ್ಲಿ ಕೊಡಬಹುದು.
4. ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಕೊಡಬಹುದು. ಆದರೆ ನಿಮ್ಮ ವೈದ್ಯರ ಸಲಹೆ ಇಲ್ಲದೇ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ.
5. ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಆಸನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವಂತೆ ಮಕ್ಕಳಿಗೆ ಹೇಳಬೇಕು. ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ಚಿನ್ಮುದ್ರೆಯನ್ನು ದಿನದಲ್ಲಿ ಹತ್ತೇ ನಿಮಿಷ ಹಾಕಿ ಕುಳಿತುಕೊಂಡರೂ ಮಾನಸಿಕ ಒತ್ತಡ ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.
6. ನಾವು ಮೆದುಳನ್ನು ಎಷ್ಟು ಹೆಚ್ಚು ಬಳಸುತ್ತೇವೋ ಅಷ್ಟು ಶಕ್ತಿಯುತವಾಗುತ್ತಾ ಹೋಗುತ್ತದೆ. ಹಾಗಾಗಿ ನೆನಪಿನ ಶಕ್ತಿಯನ್ನು ಬಳಸಿ ಆಡುವ ಆಟಗಳು ಅಥವಾ ವಿವಿಧ ರೀತಿಯ ಮನೋರಂಜನೆಗಳಿಗಾಗಿ ದಿನದಲ್ಲಿ ಕೆಲಸಮಯವನ್ನಾದರೂ ಮೀಸಲಿಡಬೇಕು. ಆದರೆ ಯಾವುದೇ ಕಾರಣಕ್ಕೂ ನೆನಪಿನ ಶಕ್ತಿ ಎಷ್ಟಿದೆ ಎಂದು ಅಳೆಯುವುದಾಗಲೀ, ಪರೀಕ್ಷೆ ಮಾಡುವುದಾಗಲೀ ಮಾಡಬಾರದು.
7. ನಿಮ್ಮ ಮಕ್ಕಳ ಎದುರಿಗೆ ನಿನಗೆ ನೆನಪಿನ ಶಕ್ತಿ ಕಡಿಮೆ ಎಂದು ಅಥವಾ ಯಾರದಾದರೂ ಜೊತೆ ಮಾತನಾಡುವಾಗ ನನ್ನ ಮಗ ಅಥವಾ ಮಗಳಿಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಯಾವುದೇ ಕಾರಣಕ್ಕೂ ಹೇಳಬೇಡಿ. ಇದರಿಂದ ಆತ್ಮವಿಶ್ವಾಸ ಹೊರಟುಹೋಗಿ ನಿಮ್ಮ ಮಗು ಎಲ್ಲದರಲ್ಲೂ ಸೋಲುವಂತಾಗುತ್ತದೆ.
8. ಮಕ್ಕಳಿಗೆ ಒಳ್ಳೆಯ ಪ್ರಮಾಣದಲ್ಲಿ ಸುಖಕರವಾದ ನಿದ್ದೆ ಆಗುವಂತೆ ನೋಡಿಕೊಳ್ಳಬೇಕು. ಕನಿಷ್ಠ ಏಳು ತಾಸು ನಿದ್ದೆ ಮಾಡಲೇಬೇಕು. ನೆನಪಿನ ಶಕ್ತಿ ಅಥವಾ ಏಕಾಗ್ರತೆಯನ್ನು ಹಾಳು ಮಾಡುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ಗಮನಭಂಗ (distraction). ಅಂದರೆ ಹೋಂವರ್ಕ್ ಅಥವಾ ಅಭ್ಯಾಸ ಮಾಡುವಾಗ ಗಮನ ಒಂದು ಕ್ಷಣವೂ ಬೇರೆ ಕಡೆ ಹೋಗದೇ ಇರುವಂತೆ ಟಿವಿ ಅಥವಾ ಮೊಬೈಲುಗಳ ಬಳಕೆ ಮಾಡುವುದು ಒಳ್ಳೆಯದು. ಹಾಗಾಗಿ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದೇ ಇದ್ದರೂ ಇಷ್ಟು ಸಮಯ ಎಂದು ನಿರ್ಧಾರ ಮಾಡಿ ದಿನಕ್ಕೊಮ್ಮೆ ಆ ಸಮಯದಲ್ಲಿ ಮಾತ್ರ ಕೊಡಿ. ಅಧ್ಯಯನದ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ಇರಬಾರದು.
9. ಎಷ್ಟೋ ರೀತಿಯ ಔಷಧಗಳು ಅಥವಾ ಆಹಾರೌಷಧಗಳು ನೆನಪಿನ ಶಕ್ತಿ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತವೆ. ಉದಾಹರಣೆಗೆ ನಾವು ನಿಸರ್ಗ ಮನೆಯಲ್ಲಿ ಕೊಡುವ ಹೊಂದಿರುವ “ಸ್ಮಾರ್ಟ್ 3” ಎಂಬ ಮಾತ್ರೆಯನ್ನು ದಿನಕ್ಕೆರಡು ಬಾರಿಯಂತೆ ಮೂರು ತಿಂಗಳುಗಳ ಕಾಲ ಸೇವಿಸಿದರೆ ಮಕ್ಕಳ ಮೆದುಳಿನ ಶಕ್ತಿ ಹೆಚ್ಚಲು ಮತ್ತು ನೆನಪಿನ ಶಕ್ತಿ ಹೆಚ್ಚಾಗಲು ತುಂಬಾ ಅನುಕೂಲವಾಗುತ್ತದೆ.
10. ಬೆಳಿಗ್ಗೆ ಬ್ರಾಹ್ಮಿ ಮೂರ್ತಿದಲ್ಲಿ ಎದ್ದು ಅಧ್ಯಯನ ಮಾಡಿದರೆ ಒಳ್ಳೆಯದು. ಇದು ಅಧ್ಯಯನಕ್ಕೆ ತುಂಬಾ ಒಳ್ಳೆಯ ಕಾಲ ಮತ್ತು ಆಗ ಎದ್ದು ಅಧ್ಯಯನ ಮಾಡಿದ್ದು ಚೆನ್ನಾಗಿ ನೆನಪಿನಲ್ಲಿ ಇರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.
“ಪರೀಕ್ಷಾ ಪೇ ಚರ್ಚಾ“ ದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಪ್ರಮುಖ ಅಂಶಗಳು
• ನಕಾರಾತ್ಮಕವಾಗಿ ಹೋಲಿಸಬೇಡಿ: ಪೋಷಕರು, ಶಿಕ್ಷಕರು ಅಥವಾ ಸಂಬಂಧಿಕರಿಂದ ನಕಾರಾತ್ಮಕ ಹೋಲಿಕೆಗಳು ವಿದ್ಯಾರ್ಥಿಯ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಹೋಲಿಕೆ ಮಾಡಿ ಖಿನ್ನತೆಗೆ ಒಳಪಡಿಸುವ ಬದಲು ಸಕಾರಾತ್ಮಕ ಮತ್ತು ಹೃತ್ಪೂರ್ವಕ ಸಂಭಾಷಣೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿ.
• ಆಳವಾದ ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ: ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಶೈಕ್ಷಣಿಕ ಬಾಂಧವ್ಯವನ್ನು ಮೀರಿದ ಆಳವಾದ ಮತ್ತು ಅರ್ಥಪೂರ್ಣ ಸಂಬಂಧದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ತಮ್ಮ ಉದ್ವಿಗ್ನತೆಗಳು, ಸಮಸ್ಯೆಗಳು ಮತ್ತು ಅಭದ್ರತೆಗಳನ್ನು ತಮ್ಮ ಶಿಕ್ಷಕರೊಂದಿಗೆ ಚರ್ಚಿಸಲು ಆರಾಮದಾಯಕವಾದ ವಾತಾವರಣವನ್ನು ರಚಿಸಿ.
• ಸ್ವ-ಆರೈಕೆಯ ಪ್ರಾಮುಖ್ಯತೆ: ದೇಹ, ಮನಸ್ಸು ಆರೋಗ್ಯಕರ ವಾಗಿರಲು ಮೊಬೈಲ್ ಫೋನ್ ನಂತೆ “ರೀಚಾರ್ಜ್” ಮಾಡುವುದು ಅಗತ್ಯ. ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸರಿಯಾದ ನಿದ್ರೆಯ ಅಗತ್ಯವಿದೆ.
• ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ನಿರಂತರ ಅಭ್ಯಾಸವು ಆತ್ಮವಿಶ್ವಾಸವನ್ನು ನಿರ್ಮಿಸುತ್ತದೆ ಮತ್ತು ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ. ವಿದ್ಯಾರ್ಥಿಗಳನ್ನು ಇತರರೊಂದಿಗೆ ಹೋಲಿಸುವ ಬದಲು ತಮ್ಮ ಸ್ವಂತ ಪ್ರಯತ್ನಗಳು, ಅಭ್ಯಾಸ ಮತ್ತು ಸುಧಾರಣೆಯ ಮೇಲೆ ಕೇಂದ್ರೀಕರಿಸಲು ಪ್ರೋತ್ಸಾಹಿಸಿದರು.
• ಸಣ್ಣ ಗುರಿಗಳನ್ನು ಹೊಂದಿಸಿ: ತಯಾರಿಕೆಯ ಸಮಯದಲ್ಲಿ ಸಣ್ಣ ಗುರಿಗಳನ್ನು ಹೊಂದಿಸಲು ಮತ್ತು ಕ್ರಮೇಣ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು, ಸ್ವಯಂ ಹೇರಿದ ಒತ್ತಡವನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
• ಗೊಂದಲ ಮತ್ತು ಅನಿರ್ದಿಷ್ಟತೆಯನ್ನು ತಪ್ಪಿಸಿ: ಗೊಂದಲ ಮತ್ತು ಅನಿರ್ದಿಷ್ಟತೆಯ ಋಣಾತ್ಮಕ ಪ್ರಭಾವದ ವಿರುದ್ಧ ಎಚ್ಚರಿಕೆ ನೀಡಲಾಯಿತು. ವಿವರಗಳನ್ನು ವಿಶ್ಲೇಷಿಸುವಲ್ಲಿ ಒಳನೋಟವುಳ್ಳವರಾಗಿರಲು ಮತ್ತು ಗೊಂದಲವನ್ನು ನಿವಾರಿಸುವಲ್ಲಿ ನಿರ್ಣಾಯಕರಾಗಿರಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
• ಮಿತವಾದ ತಂತ್ರಜ್ಞಾನದ ಬಳಕೆ: ತಂತ್ರಜ್ಞಾನದ ಬಳಕೆ ಯಾವುದೇ ಅಂಶದಲ್ಲಿ ಮಿತಿಮೀರುವುದು ಒಲೆಯದಲ್ಲ. ತಂತ್ರಜ್ಞಾನದ ವಿವೇಚನೆ ಮತ್ತು ಸರಿಯಾದ ಬಳಕೆಯ ಅಗತ್ಯ.
• ಪಾಲಕರು ಸ್ಪರ್ಧಿಗಳಲ್ಲ, ಪ್ರೇರಕರಾಗಿ: ಪೋಷಕರು ತಮ್ಮ ಮಕ್ಕಳಲ್ಲಿ ಸ್ಪರ್ಧೆಯನ್ನು ಬೆಳೆಸದೆ ಪರಸ್ಪರ ಸ್ಫೂರ್ತಿಯಾಗಿ ಸೇವೆ ಸಲ್ಲಿಸಬೇಕು.
ಈ ಪ್ರಮುಖ ಅಂಶಗಳು ಮಾನಸಿಕ ಯೋಗಕ್ಷೇಮ, ಸಕಾರಾತ್ಮಕ ಸಂಬಂಧಗಳು, ಸ್ವಯಂ-ಆರೈಕೆ ಮತ್ತು ಶಿಕ್ಷಣದ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಮತೋಲಿತ ವಿಧಾನವನ್ನು ಪ್ರತಿಬಿಂಬಿಸುತ್ತವೆ.








