1.ಗ್ಯಾಸ್ ಟ್ರಿಕ್ ಟ್ರಬಲ್
“ಸರ್, ಭಯಂಕರ ಗ್ಯಾಸ್ಟ್ರಿಕ್ ಸಾರ್” ಎಂದು ಎದೆಗೆ ಕೈ ಹಿಡಿದುಕೊಂಡು ಕ್ಲಿನಿಕ್‍ನೊಳಗೆ ಕಾಲಿಟ್ಟವನ ಜೊತೆಗೆ ಒಂದಿಬ್ಬರು ಇದ್ದರು. ತೀವ್ರ ಎದೆನೋವು ಬೆಳಗ್ಗೆ ಹತ್ತು ಗಂಟೆಗೆ ಶರುವಾಗಿದ್ದು ಹನ್ನೊಂದುವರೆಗಂಟೆಗೆ ನನ್ನ ಕ್ಲಿನಿಕ್ ತಲುಪಿದ್ದ. ಪರೀಕ್ಷಿಸಿದಾಗ ರಕ್ತದೊತ್ತಡ ಹೆಚ್ಚಾಗಿತ್ತು .ಮೈಯೆಲ್ಲಾ ಬೆವರುತ್ತಿತ್ತು. ನಾನು -“ಎಲ್ಲವನ್ನೂ ಹಾಗೆ ಗ್ಯಾಸ್ಟ್ರಿಕ್ ಎಂದು ಹೇಳುವುದಕ್ಕಾಗುವುದಿಲ್ಲ. ಇ.ಸಿ.ಜಿ. ಮತ್ತು ರಕ್ತಪರೀಕ್ಷೆಯ ಅಗತ್ಯವಿದೆ. ” ಎಂದಾಗ ಆತನ ಕಡೆಯವರು ತುಳು ಭಾಷೆಯಲ್ಲೇ-“ಆರೆಗ್ ಒಂಚೂರು ಪರ್ಪುನ ಅಭ್ಯಾಸ ಉಂಡು. ಡಾಕ್ಟ್ರೇ, ಅಪಗಪಗ ಇಂಚನೇ ಗ್ಯಾಸ್ಟ್ರಿಕ್ ದ ತೊಂದರೆ ಆವೊಂದು ಇಪ್ಪುಂಡು. ಅಯಿಕ್ಕ್ ಒಂಜಿ ಗ್ಯಾಸ್ಟ್ರಿಕ್‍ದ ಮಾತ್ರೆ ದೆತ್ತೊಂಡ ಸರಿ ಆಪುಂಡು. ” ಎಂದು ಗ್ಯಾಸ್ಟ್ರಿಕ್ ಮಾತ್ರೆ ನೀಡುವುದಕ್ಕೆ ಒತ್ತಾಯಿಸಿದರು.
ಅದಕ್ಕೆ ನಾನೊಪ್ಪದೇ ಹೃದಯಾಘಾತವನ್ನು ಪತ್ತೆ ಹಚ್ಚುವ ಅವಶ್ಯಕತೆಯನ್ನು ಮನಗಂಡು ಅವರನ್ನು ಒಪ್ಪಿಸಿ ತಪಾಸಣೆಗೆ ಸಾಗಹಾಕಿದೆ. ಅವರು ನೇರವಾಗಿ ಹೋದವರೇ ಆ ರಕ್ತಪರೀಕ್ಷೆಗೆ ಎಷ್ಟಾಗುತ್ತದೆ ಎಂದು ಲ್ಯಾಬ್‍ನಲ್ಲಿ ವಿಚಾರಿಸಿದರು. ಅದರ ಬೆಲೆ ಕೇಳಿದವರೇ ಅವರಲ್ಲೊಬ್ಬ ತುಳುವಿನಲ್ಲಿ-“ಬೊಡ್ಚಿ ಮಾರಾಯ .ಇಂದು ವಾ ನಮೂನೆದ ನೆತ್ತೆರ್ ಪರೀಕ್ಷೆ ಮಾರಾಯ.! ಈ ದುಂಬು ಏತೋ ಸರ್ತಿ ನೆತ್ತೆರ್ ಪರೀಕ್ಷೆ ಮನ್ಪಾತೆ.ಇರ್ನೂದು ರೂಪಾಯಿದ ಉಲಾಯಿ ಆತೆ. ಉಂದು ಬೊಡ್ಚಿಯಪ್ಪ.” ಎಂದುಕೊಂಡು, ಅದಕ್ಕೆ ಆ ರೋಗಿಯೂ ತಲೆದೂಗಿ, ಆ ದಿನದ ಮಟ್ಟಿಗೆ ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಂಡು ಮರುದಿನ ಎದೆನೋವು ಇದ್ದರೆ ಮತ್ತೆ ತಪಾಸಣೆಗೆ ಬರುವುದೆಂದೊ ನಿಶ್ಚಯಿಸಿ ಮನೆಗೆ ತೆರಳಿದರು.
ನಾನು ಹೇಳಿದ ರಕ್ತಪರೀಕ್ಷೆಯಲ್ಲಿ, ಹೃದಯಾಘಾತವಾದಾಗ ರಕ್ತದಲ್ಲಿ ಹೆಚ್ಚುವ ಕಿಣ್ವದ ಮಟ್ಟವನ್ನು ಅಳೆಯಬೇಕಿತ್ತು. ಅದು ತುಸುವೇ ವೆಚ್ಚ ಹೆಚ್ಚು. ಆದರೆ ಹೃದಯಾಘಾತವನ್ನು ಪತ್ತೆ ಹಚ್ಚುವ ತುರ್ತು ಅಗತ್ಯವಿರುವ ಸಂದರ್ಭದಲ್ಲಿ ಈ ಪರೀಕ್ಷೆ ಮತ್ತು ಇ.ಸಿ.ಜಿ ಪ್ರಾಮುಖ್ಯವಾದದ್ದು. ಆದರೆ ನನ್ನ ಸಲಹೆಯ ಗಂಭೀರತೆಯನ್ನು ಮನಗಾಣದ ಈ ವಿದ್ಯಾವಂತ ರೋಗಿ ಒಂದು ಶಾಲೆಯ ಮಾಜಿ ಮುಖ್ಯೋಪಾಧ್ಯಾಯರು. ರಕ್ತದೊತ್ತಡ ಹಾಗು ಸಕ್ಕರೆ ಕಾಯಿಲೆ ಇದ್ದವರು. ಕ್ಲಿನಿಕ್ ಗೆ ಬಂದಾಗ ತಾವು ತೆಗೆದುಕೊಳ್ಳುವ ಮಾತ್ರೆಗಳ ಕನಿಷ್ಠ ವಿವರಗಳೂ ಅವರಿಗೆ ಗೊತ್ತಿರಲಿಲ್ಲ. ನಾನು ಅವರನ್ನು ನೋಡುತ್ತಿರುವುದು ಪ್ರಥಮ ಬಾರಿ.
ಆದರೆ ಮರುದಿನ ಮತ್ತೆ ಎದೆನೋವು ತೀವ್ರವಾದಾಗ ಆಸ್ಪತ್ರೆಗೆ ಬಂದು ನಾನು ಹೇಳಿದ ತಪಾಸಣೆ ನಡೆಸಿದಾಗ ತೀವ್ರ ಹೃದಯಾಘಾತದ ಲಕ್ಷಣಗಳಿದ್ದವು. ಎದೆನೋವು ಆರಂಭವಾಗಿ ಐದು ಘಂಟೆಗಳ ಒಳಗೆ ರೋಗಿಗೆ ಚಿಕಿತ್ಸೆ ಆರಂಭಿಸುವ ಅಗತ್ಯವಿದೆ. ಹೃದಯದ ರಕ್ತನಾಳದೊಳಗೆ ರಕ್ತಹೆಪ್ಪುಗಟ್ಟಿದ್ದನ್ನು ಕರಗಿಸುವ, ಮತ್ತು ರಕ್ತಹೆಪ್ಪುಗಟ್ಟುವುದನ್ನು ತಡೆಗಟ್ಟುವ ಔಷಧಗಳನ್ನು ತುರ್ತಾಗಿ ನೀಡಲೇಬೇಕು. ಐದುಗಂಟೆ ದಾಟಿದಲ್ಲಿ ಹೃದಯಕ್ಕೆ ದೊಡ್ಡಮಟ್ಟದಲ್ಲಿ ಘಾಸಿ ಉಂಟಾಗಿ ಮುಂದೆ ಉನ್ನತ ಚಿಕಿತ್ಸಾವಿಧಾನಗಳನ್ನು ಅನುಸರಿಸಬೇಕಾಗುವುದು. ಉತ್ತಮ ಕುಟುಂಬವೈದ್ಯನೊಬ್ಬ ಪರೀಕ್ಷಾವಿಧಾನದಿಂದ ಹೃದಯಾಘಾತವನ್ನು ಊಹಿಸಿ ಮುಂದಿನ ದಾರಿಯನ್ನು ಸೂಚಿಸಬಲ್ಲ. ರೋಗಿಯ ಅಥವಾ ಆತನ ಕಡೆಯವರ ಅಸಡ್ಡೆ ಹಾಗೂ ಮೌಢ್ಯಗಳು ಅಪಾಯದಂಚಿಗೆ ಅಥವಾ ರೋಗವನ್ನು ಜಟಿಲವಾದ ಸ್ಥಿತಿಗೆ ಒಯ್ಯಬಹುದು.
ತಲೆ, ಕುತ್ತಿಗೆ, ಸೊಂಟ ಹಾಗೂ ಮಂಡಿನೋವುಗಳನ್ನು ಅಥವಾ ಇನ್ನೇನೇ ಇದ್ದರೂ ‘ಗ್ಯಾಸ್ಟ್ರಿಕ್’ ಎಂದು ಹಲುಬುವವರಿದ್ದಾರೆ. ಆ ಶಬ್ದ ಅದರ ಅರ್ಥವ್ಯಾಪ್ತಿ ಮೀರಿ ಬಳಕೆಯಾಗುತ್ತಿದೆ. ಗ್ಯಾಸ್ಟ್ರಿಕ್ ಎಂದರೆ ಜಠರಕ್ಕೆ ಅಥವಾ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಎಂದರ್ಥ. ಹೊಟ್ಟೆಯುರಿ, ಹೊಟ್ಟೆಯುಬ್ಬರ, ಹೊಟ್ಟೆಯಲ್ಲಿ ಸಂಕಟ ಇತ್ಯಾದಿ ಲಕ್ಷಣಗಳಿರಬಹುದು. ಅವು ಹೃದಯಾಘಾತದ ಲಕ್ಷಣಗಳೂ ಆಗಿರಬಹುದು. ಸೂಕ್ತ ಪರೀಕ್ಷೆ ಮಾತ್ರ ಇದನ್ನು ಪತ್ತೆ ಹಚ್ಚಬಹುದು.
ಪ್ರತಿಯೊಬ್ಬ ರೋಗಿಯೂ ವೈದ್ಯರಲ್ಲಿ ಬಂದು -” ನನಗೆ ಗ್ಯಾಸ್ಟ್ರಿಕ್ ಇದೆ” ಎಂದೇ ಆರಂಭಿಸುತ್ತಾನೆ. ನಾನು -“ನಿಮ್ಮ ಗ್ಯಾಸ್ಟ್ರಿಕ್ ನ್ನು ಸ್ವಲ್ಪ ಬಿಡಿಸಿ ಹೇಳಿ ” ಎಂದಾಗ ಅದು ಇನ್ನೇನೋ ಆಗಿರುತ್ತದೆ. ಹೃದಯಾಘಾತವೇ ಆದರೂ ರೋಗಿ ಹೇಳುವುದು ಗ್ಯಾಸ್ಟ್ರಿಕ್ ಎಂದು. ! ಪ್ರತೀಸಲವೂ, ಎಲ್ಲಾ ಎದೆನೋವು, ಹೊಟ್ಟೆನೋವುಗಳು ಗ್ಯಾಸ್ಟ್ರಿಕ್ ಆಗಿರಬೇಕಾಗಿಲ್ಲ. ಹೃದಯಾಘಾತವೇ ಆಗಿರಬಹುದು…? ಎಲ್ಲಾ ಎದೆನೋವುಗಳೂ ಎಲ್ಲಾ ಸಂದರ್ಭಗಳಲ್ಲೂ ಹೃದಯಾಘತವೇ ಆಗಿರಬೇಕಾಗಿಲ್ಲ.
ಯಾವುದೋ ಒಂದು ಸಂದರ್ಭದಲ್ಲಿ ಅದು ಇನ್ನೇನೋ ಆಗಿರಬಹುದು. ನಿರ್ಧರಿಸುವವನು ನುರಿತ ವೈದ್ಯ. ಹೊಟ್ಟೆನೋವು, ಸೊಂಟನೋವುಗಳು ಮೂತ್ರಪಿಂಡದ ಕಲ್ಲಿನ ಲಕ್ಷಣಗಳಾಗಿರಬಹುದು.ರೋಗಿಯೊಬ್ಬರು ಆರು ತಿಂಗಳಿನಿಂದ ಆಗಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಔಷಧ ಸೇವಿಸಿದಾಗ ನೋವು ಮಾಯ! ಅವರು ಬಂದು ನನ್ನಲ್ಲಿ ಹೇಳಿದ್ದೂ “ನನಗೆ ಗ್ಯಾಸ್ಟ್ರಿಕ್ ಇದೆ “ಎಂದು!!!? ಅವರ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿಸಿದಾಗ ಅದು ದೀರ್ಘಕಾಲೀನ ಅಪೆಂಡಿಸೈಟಿಸ್ ಎಂಬ ವರದಿ ಸಿಕ್ಕಿತು. ಅವರು ಸ್ಕ್ಯಾನಿಂಗ್‍ಗೆ ಒಪ್ಪಿದ್ದು ಯಾವಾಗ ಗೊತ್ತೇ? ..ವಾಂತಿ, ಹೊಟ್ಟೆನೋವುಗಳು ಔಷಧಗಳಿಂದ ನಿಯಂತ್ರಣಕ್ಕೆ ಬಾರದೇ ಇದ್ದಾಗ !! ಆಭರಣ ಖರೀದಿಸುವಾಗ, ತಾಯಿತ ಕಟ್ಟಿಸುವಾಗ, ಮಂತ್ರವಾದಿಗಳಲ್ಲಿಗೆ ಹೋಗುವಾಗ ಬಾರದ ಖರ್ಚಿನ ಕುರಿತಾದ ಜಾಗೃತಿ ಚಿಕಿತ್ಸೆ ಹಾಗೂ ತಪಾಸಣೆಯ ಸಂದರ್ಭದಲ್ಲಿ ಅಡ್ಡಬರುವುದೇ ಭಾರತದಲ್ಲಿ ಒಂದು ವಿಸ್ಮಯ !!
ಆದುದರಿಂದ ನಾನು ನನ್ನ ರೋಗಿಗಳಿಗೆ ಸ್ಪಷ್ಟವಾಗಿ ಮತ್ತು ಜೋರಾಗಿ ಹೇಳುತ್ತೇನೆ-“ನನ್ನಲ್ಲಿ ನಿಮ್ಮ ಕಾಯಿಲೆಯ ಕತೆ ಹೇಳುವಾಗ ಗ್ಯಾಸ್ಟ್ರಿಕ್ ಎಂಬ ಶಬ್ದ ಬಳಸಬೇಡಿ.ಅದನ್ನು ಕೇಳಿ ಕಿವಿ ಚಿಟ್ಟು ಹಿಡಿದಿದೆ ಮಾರಾಯರೇ! “. ಆದದ್ದಕ್ಕೆಲ್ಲ ಗ್ಯಾಸ್ಟ್ರಿಕ್ ಎನ್ನುವುದೂ ಒಂದು ಕಾಯಿಲೆಯೇ! ಆದರೆ ಅದು “ಗ್ಯಾಸ್ಟ್ರಿಕ್ ಎನ್ನುವ” ಕಾಯಿಲೆ.! ಸ್ನೇಹಿತರೇ, ಇಂತಹ ಮೌಢ್ಯವನ್ನು ಸರಿಪಡಿಸುವುದೂ ನಮ್ಮ ಸ್ವಚ್ಚತಾ ಆಂದೋಲನದ ಒಂದು ಭಾಗವಾಗಿರಲಿ.
* * * * * *
2. ಹೀಗೂ ಉಂಟೇ
ರಕ್ತದೊತ್ತಡಕ್ಕೆ ಅಥವಾ ಸಕ್ಕರೆಕಾಯಿಲೆಗೆ ವ್ಯೆದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುತ್ತಾ ಇದ್ದ ಮಾತ್ರೆಗಳನ್ನ ಹಠಾತ್ತಾಗಿ ತಮ್ಮ ಸ್ವೇಚ್ಚೆಯಿಂದ ನಿಲ್ಲಿಸಿ ಬಿಡುವುದು ಬಹಳಷ್ಟು ರೋಗಿಗಳಲ್ಲಿ ಕಂಡು ಬರುವ ಸರ್ವೇಸಾಮಾನ್ಯ ಸಂಗತಿ. “ಡಾಕ್ಟರ್ ಚೆಕ್ ಮಾಡಿ ಬಿ.ಪಿ ಸರಿ ಉಂಟು ಅಂತ ಹೇಳಿದ್ರು. ಸಕ್ಕರೆ ನಾರ್ಮಲ್ ಉಂಟಂತೆ ಅದಕ್ಕೆ ಮಾತ್ರೆಗಳನ್ನು ನಿಲ್ಲಿಸಿದೆ” ಎಂದು ಬಹಳಷ್ಟು ರೋಗಿಗಳ ಹೇಳಿಕೆ. ಆದರೆ ಮರಳಿ “ಡಾಕ್ಟರ್ ಮಾತ್ರೆಗಳನ್ನು ನಿಲ್ಲಿಸುವುದಕ್ಕೆ ಹೇಳಿದರೇ ಎಂದು ಪ್ರಶ್ನಿಸಿದರೆ “ಇಲ್ಲ” ಎಂದುತ್ತರಿಸುತ್ತಾರೆ. ಏಕೆ ಹೀಗೆ?
ಔಷಧಗಳಿಂದ ಬಿ.ಪಿ ಹಾಗೂ ಶುಗರ್‍ನ್ನ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದೇ ಹೊರತು ಮಾತ್ರೆಗಳನ್ನು ನಿಲ್ಲಿಸುವ ಮಟ್ಟಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ ಎಂಬ ವೈಜ್ಞಾನಿಕವಾದ ನಿಷ್ಟುರ ಸತ್ಯದ ಅರಿವಿಲ್ಲದಿರುವ ಕಾರಣದಿಂದಲೇ ರೋಗಿಗಳು “ನಾರ್ಮಲ್” ರಿಪೋರ್ಟ್ ನೋಡಿದ ತಕ್ಷಣ ಮಾತ್ರೆಗಳನ್ನು ನಿಲ್ಲಿಸುವುದಕ್ಕೋ ಅಥವಾ ಮಾತ್ರೆಗಳ ಡೋಸೇಜನಲ್ಲಿ ತಮ್ಮಷ್ಟಕ್ಕೇ ಬದಲಾವಣೆ ಮಾಡಿಕೊಳ್ಳುತ್ತಿರುತ್ತಾರೆ. ಕೆಲವರು ರಕ್ತದೊತ್ತಡ ರೋಗಿಗಳಿಗೆ ಅವರ ಸ್ನೇಹಿತರು ಎಂದೆನಿಸಿಕೊಂಡವರು ದಿನಬಿಟ್ಟು ದಿನ ಬಿ.ಪಿ ಮಾತ್ರೆಗಳನ್ನು ತೆಗೆದುಕೊಳ್ಳಬಹುದೆಂಬ ಪುಕ್ಕಟೆ ಸಲಹೆ ನೀಡಿದ್ದನ್ನು ನೋಡಿದ್ದೇನೆ.
ಈ ರೀತಿ ಹಠಾತ್ತಾಗಿ ಔಷಧ ಸೇವನೆ ನಿಲ್ಲಿಸಿದಾಗ ಯಾವುದೋ ಒಂದು ದುರ್ದಿನದ ವಿಷಘಳಿಗೆಯಲ್ಲಿ ರಕ್ತದೊತ್ತಡ ನಿಯಂತ್ರಣಗೊಳ್ಳದೇ ಇದ್ದುದರಿಂದ ಮೆದುಳಿನ ರಕ್ತನಾಳ ಒಡೆದು ರಕ್ತದ ಸೋರುವಿಕೆ ಉಂಟಾಗಿ ಪಕ್ಷಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಂತರಿಕ ರಕ್ತಸ್ರಾವ ತೀವ್ರವಾಗಿದ್ದಲ್ಲಿ ಪ್ರಜ್ಞಾಹೀನಸ್ಥಿತಿಯಲ್ಲಿ ಕೆಲವು ದಿನ ಇದ್ದು ನಂತರ ಇಹಲೋಕ ತ್ಯಜಿಸುತ್ತಾರೆ ಅಥವಾ ಅತಿರಕ್ತದೊತ್ತಡದ ಪರಿಣಾಮಗಳಾದ ಹೃದಯದ ಗಾತ್ರ ಹಿರಿದಾಗಿ ಉಸಿರಾಟಕ್ಕೆ ಕಷ್ಟವಾಗುವುದು, ಮೂತ್ರಪಿಂಡದ ವೈಫಲ್ಯ ಮುಂತಾದ ತೊಂದರೆಗಳಿಂದ ಬಳಲುತ್ತಾರೆ.
ಸಕ್ಕರೆಕಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದೇ ಇರುವುದರಿಂದ ಹೃದಯದ ವೈಫಲ್ಯ, ಮೂತ್ರಪಿಂಡದ ವೈಫಲ್ಯ, ನರಗಳ ಶಕ್ತಿಹೀನತೆ, ಸುಲಭವಾಗಿ ಸೋಂಕಿಗೆ ಒಳಗಾಗುವುದು ಮುಂತಾದ ಅಪಾಯಕಾರಿ ಸ್ಥಿತಿಗಳಿಗೆ ತಮ್ಮನ್ನು ತಾವೇ ಒಡ್ಡಿಕೊಳ್ಳುತ್ತಾರೆ. ಚಿಕಿತ್ಸೆಯನ್ನು ನಿಲ್ಲಿಸಿದಾಗ ತಕ್ಷಣಕ್ಕೆ ಏನೂ ತೊಂದರೆ ಆಗದಿರುವ ರೋಗಿಗಳು ಚಿಕಿತ್ಸೆ ನಿಲ್ಲಿಸಿದ್ದಕ್ಕೆ ತಮ್ಮೊಳಗೆ ತಾವೇ ಹೆಮ್ಮೆಪಟ್ಟು, ವೈದ್ಯರನ್ನು ಸೋಲಿಸಿದೆವೆಂಬ ಒಣಹೆಮ್ಮೆಗೆ ಒಳಗಾಗುತ್ತಾರೆ. ಆದರೆ ಅದರ ಧೀರ್ಘಕಾಲೀನ ಅಪಾಯಗಳ ಬಗ್ಗೆ ಅಜ್ಞಾನಿಗಳಾಗಿ ಉಳಿಯುತ್ತಾರೆ.
ಇತ್ತೀಚೆಗೆ ರಕ್ತದೊತ್ತಡ ರೋಗಿಯೊಬ್ಬನಿಗೆ ಪರೀಕ್ಷಿಸಿದಾಗ ಇದ್ದ ರಕ್ತದೊತ್ತಡ 180/110. ತಲೆಸುತ್ತುವಿಕೆ, ತಲೆನೋವು, ನಿದ್ರಾಹೀನತೆಗಳಿಂದ ಬಳಲುತ್ತಿದ್ದ ಆತನಿಗೆ ರಕ್ತದೊತ್ತಡ ಮಾತ್ರೆ ಸೇವಿಸಲು ಸೂಚಿಸಿದ್ದಕ್ಕೆ ಆ ಮಹಾನುಭಾವನ ಉತ್ತರವೇನು ಗೊತ್ತೇ? “ನನ್ನ ಮಗಳು ಟೀಚರ್ ಅವಳು ಹೇಳಿದ್ಲು -ಬಿ.ಪಿ ಮಾತ್ರೆ ಶುರುಮಾಡಿದರೆ ಖಾಯಂ ಆಗಿ ತೆಗೆದುಕೊಳ್ಳಬೇಕಂತೆ. ಹಾಗಾಗಿ ನನಗೆ ಬಿ.ಪಿ ಮಾತ್ರೆ ಒಂದು ಬಗೆ ಬೇಡ” ಎಂದ.
ಇಂತಹ ಅಜ್ಞಾನಗಳು ಕೇವಲ ಬಿ.ಪಿ ಕಾಯಿಲೆಗೆ ಅಥವಾ ಸಕ್ಕರೆಕಾಯಿಲೆಗೆ ಇರುವ ಮಾತ್ರೆಗಳ ಕುರಿತಾಗಿ ಮಾತ್ರ ಎಂದೂ ಯಾರೂ ಭಾವಿಸಬೇಡಿ. ಟಿ.ಟಿ ಇಂಜೆಕ್ಷನ್ ಕುರಿತಾಗಿಯು ಇದೇ ರೀತಿಯ ಅಜ್ಞಾನ ಕೆಲವು ಜನರಲ್ಲಿ ಇದೆ. ಗಾಯವಾದಾಗ ಧನುರ್ವಾತ ಬಾರದಂತೆ ಧನುರ್ವಾತದ ನಿರೋಧಕ ಲಸಿಕೆಯ ಚುಚ್ಚುಮದ್ದು ಕೊಡುವುದು ವೈದ್ಯಕೀಯದಲ್ಲಿ ಯುಕ್ತವಾದ ಒಂದು ಕ್ರಮ. ಬಹುಶ: ಈ ಲಸಿಕೆ ಧನುರ್ವಾತದಿಂದ ಉಂಟಾಗುತ್ತಿದ್ದ ಮರಣದ ಪ್ರಮಾಣಗಳನ್ನು ಗಣನೀಯ ರೀತಿಯಲ್ಲಿ ತಗ್ಗಿಸಿ ವೈದ್ಯಕೀಯ ಜಗತ್ತಿನಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ. ಧನುರ್ವಾತ ಬಂದ ನಂತರ ಮರಣದ ಸಾಧ್ಯತೆ ಹೆಚ್ಚು ಹಾಗೂ ಚಿಕಿತ್ಯೆಯು ತುಂಬಾ ಕಷ್ಟಕರ.
ಆದರೆ ಇಂತಹ ಒಂದು ಟಿ.ಟಿ ಲಸಿಕೆಯ ಚುಚ್ಚುಮದ್ದನ್ನು ಗಾಯವಾಗಿ ಬಂದ ರೋಗಿಗೆ ತೆಗೆದುಕೊಳ್ಳುವುದಕ್ಕೆ ಸೂಚಿಸಿದಾಗ ಆ ರೋಗಿಯ ಕಡೆಯ ವ್ಯಕ್ತಿ ನನ್ನೊಂದಿಗೆ ವಾಗ್ವಾದಕ್ಕಿಳಿದ – ಡಾಕ್ಟ್ರೇ, ಅವನಿಗೆ ಕಬ್ಬಿಣ ತಾಗಿದ್ದಲ್ಲ, ಟಿ.ಟಿ ಕೊಡುವುದು ಕಬ್ಬಿಣ ತಾಗಿದ್ದಕ್ಕೆ ಅಲ್ವಾ ಡಾಕ್ಟ್ರೇ? ಟಿ.ಟಿ ಇಂಜೆಕ್ಷನ್ ಬೇಡವೇ ಬೇಡ ಎಂದು ಹಠಮಾಡಿದ . ಅವನಿಗೆ ವಿಷಯ ವಿವರಿಸಿ ಅದರ ಅಗತ್ಯವನ್ನು ಮನಗಾಣಿಸುವಷ್ಟರಲ್ಲಿ ಹತ್ತು ನಿಮಿಷ ಕಳೆದೇ ಹೋಯಿತು. ಕಬ್ಬಿಣ ತಾಗಿದರೆ ಮಾತ್ರ ಟಿ.ಟಿ ಚುಚ್ಚುಮದ್ದು ತೆಗೆದುಕೊಳ್ಳಬೇಕು ಎಂಬ ತಪ್ಪುಕಲ್ಪನೆ ಈಗಲೂ ಜನರಲ್ಲಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು, ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ಪುತ್ತೂರು.
ಮೊಬೈಲ್:9740545979