ಅಕ್ಟೋಬರ್ ತಿಂಗಳ ಆರೋಗ್ಯ ಚಿಂತನೆ !?

 ಬಾನುಲಿ ಹಾಗೂ ರಂಗಭೂಮಿಗಳ ಒಬ್ಬ ನಟ, ನಿರ್ದೇಶಕ, ನಾಟಕಕಾರನಾಗಿ, ಜೀವನ, ಸಾಹಿತ್ಯ ಹಾಗೂ ಕಲೆಗಳಲ್ಲಿ, ನಾನು ನವರಸಗಳನ್ನು ಆರಾಧಿಸುತ್ತೇನೆ. ನನ್ನ ಸತತ ಅನುಭವಗಳು, ಪ್ರಭಾವಗಳು, ಎಲ್ಲೆಡೆ ತೆರೆದುಕೊಂಡಾಗ ಸಿಕ್ಕ ದರ್ಶನದಿಂದ, ಸುಖ, ಸಂತೋಷ ಹಾಗೂ ಶಾಂತಿಗಳ ಅಮೃತ ಸಿಗಬೇಕಾದರೆ, ಮುಖದ ಮೇಲೆ ಮುಗುಳ್ನಗೆ, ಜೀವನದಲ್ಲಿ ಹಾಸ್ಯ ಹಾಗೂ ಆರೋಗ್ಯ ಇರಲೇಬೇಕೆಂಬ ನಿರ್ಧಾರ ತಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ಎಲ್ಲಕ್ಕೂ ಮೂಲವಾದ ಆರೋಗ್ಯವನ್ನು ಹತ್ತನೇ ರಸವನ್ನಾಗಿ ಅಳವಡಿಸಿ, ಆರಾಧಿಸಿ, ಅನುಷ್ಠಾನಗೊಳಿಸಬೇಕು ಎನ್ನುತ್ತೇನೆ. ಈ ಹಿನ್ನೆಲೆಯಲ್ಲಿ ವಿವಿಧ ದಿಕ್ಕುಗಳಲ್ಲಿ ಹುಡುಕಿದಾಗ, ಅಕ್ಟೋಬರ್ ತಿಂಗಳಲ್ಲಿ, ನಮ್ಮ ರಾಜ್ಯ, ದೇಶ ಹಾಗೂ ವಿಶ್ವದಲ್ಲಿ ಆಚರಿಸುವ ವಿವಿಧ ಹಬ್ಬ, ಉತ್ಸವಗಳು, ಆಚರಣೆಗಳಿಗೂ ಆರೋಗ್ಯಕ್ಕೂ ಇರುವ ಹಿನ್ನೆಲೆ ಬಗ್ಗೆ, ನಿಮ್ಮೊಂದಿಗೆ ಈಗ ಆ ವಿಚಾರಗಳನ್ನು ಹಂಚಿಕೊಳ್ಳಬಯಸಿದ್ದೇನೆ.
1963ರಲ್ಲಿ ಹಾರ್ವೆ ಬಾಲ್ ಎಂಬ ಕಲಾವಿದ ಸೃಷ್ಟಿಸಿದ ಮುಗುಳ್ನಗೆಯ ಮುಖದ ಚಿತ್ರ, 1999ರಲ್ಲಿ ಹಾರ್ವೆ ಬಾಲ್ ವಿಶ್ವ ಮುಗುಳ್ನಗೆ ಪ್ರತಿಷ್ಠಾನ ಸ್ಥಾಪನೆಯಾಗಲು, ಒಮ್ಮೆ ಒಂದು ಮುಗುಳ್ನಗೆಯಿಂದ ವಿಶ್ವ ಸುಧಾರಿಬೇಕೆಂಬ ಧ್ಯೇಯಕ್ಕೆ ಮೂಲವಾಯಿತು. ಯಾರು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿರುತ್ತಾರೋ, ಅವರೇ ನಗಬಲ್ಲರು ಎಂದು ನಂಬಿದ್ದೇನೆ. ನಾನು ವಿಶ್ವದಲ್ಲಿ ಕಂಡಿರುವ ಸದಾ ಮುಗುಳ್ನಗುವ ಎರಡು ಮುಖಗಳು, ಗಾಂಧಿ ಹಾಗೂ ಬುದ್ಧ. ಅಕ್ಟೋಬರ್ 2ರಂದು ಗಾಂಧೀಜಿಯ 148ನೇ ಜಯಂತಿ ಹಾಗೂ ಅಂತರ್‍ರಾಷ್ಟ್ರೀಯ ಅಹಿಂಸಾ ದಿನಾಚರಣೆ. ಗಾಂಧಿಯ ಮೂರು ನಾಲ್ಕು ತತ್ವಗಳನ್ನು, ಆರೋಗ್ಯ ರಕ್ಷಣೆ ದೃಷ್ಟಿಯಿಂದ, ಯಾರು ಬೇಕಾದರೂ ಅನುಸರಿಸಬಹುದು. ಅವು – ಸಸ್ಯಾಹಾರಿಯಾಗು; ಪ್ರಕೃತಿ ಚಿಕಿತ್ಸೆ ಅನುಸರಿಸು; ಔಷಧ ಹಾಗೂ ಕುಡಿತದ ದಾಸನಾಗಬೇಡ; ನಾಲಿಗೆ ರುಚಿ ನಿಯಂತ್ರಿಸು; ದೇಹವನ್ನು ರೋಗಗಳಿಂದ ದೂರವಿಡು; ದೇಹದ ಐದು ಪಂಚಭೂತ ಶಕ್ತಿಗಳ ಸಮನ್ವಯತೆ ನಂಬು; ಸ್ವನಿಯಂತ್ರಣ; ಸ್ವಚ್ಛತೆ, ನೈರ್ಮಲ್ಯಗಳನ್ನು ಅನುಸರಿಸು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 1ರಂದು ವಿಶ್ವ ಸಸ್ಯಾಹಾರಿ ದಿನವಿದೆ. 1978ರಿಂದ ಅಂತರ್‍ರಾಷ್ಟ್ರೀಯ ಸಸ್ಯಾಹಾರಿ ಮಂಡಳಿ ಸಸ್ಯಾಹಾರದ ಮಹತ್ವ ಸಾರುತ್ತಿದೆ. ಸಂತಸ -ಆಯುಷ್ಯ ಹೆಚ್ಚಿಸುವ ಸಾಧ್ಯತೆಗಳಿಗಾಗಿ, ಸಸ್ಯಾಹಾರ ಜೀವನಶೈಲಿಯಿಂದ ಸಿಗುವ ನೈತಿಕ, ಪರಿಸರ, ಆರೋಗ್ಯ ಹಾಗೂ ಮಾನವತಾ ಲಾಭಗಳನ್ನು ಸಾರುವ ಉದ್ದೇಶ ಇಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ 16ರಂದು ವಿಶ್ವ ಆಹಾರ ದಿನವಿದೆ. ಹಸಿವು ಹಾಗೂ ಬಡತನ ದೂರಮಾಡಲು, ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ತಾಪಮಾನ, ಇದರ ಅಪಾಯಗಳು, ರೈತರು, ಮೀನುಗಾರರಿಗೆ, ಕುರುಬರಿಗೆ ಆಗುತ್ತಿರುವ ಬವಣೆ ನಿವಾರಿಸಲು, ಆಹಾರ ಸುರಕ್ಷತೆ ಬಗ್ಗೆ ಚಿಂತೆ ಮಾಡಬೇಕಾಗಿದೆ. ಸದ್ಯದ ಹಾಗೂ ಭವಿಸ್ಯದ ಬೇಡಿಕೆಗಳನ್ನು ಪೂರೈಸಲು, ಕೃಷಿ ಹಾಗೂ ಆಹಾರ ವ್ಯವಸ್ಥೆ ಹೆಚ್ಚು ಉತ್ಪಾದಕವಾಗಿ, ಸುಸ್ಥಿರವಾಗಿ, ರೋಗ ಹಾಗೂ ಕೀಟಗಳನ್ನು ಪ್ರತಿರೋಧಿಸುವ ಶಕ್ತಿ ಹೊಂದಬೇಕಾಗಿದೆ. ಇರುವಷ್ಟೇ ಭೂಮಿಯಲ್ಲಿ ಹೆಚ್ಚು ಬೆಳೆಯಲು, ಸ್ವಾಭಾವಿಕ ಸಂಪನ್ಮೂಲಗಳ ಜಾಣ ಬಳಕೆ, ಆಹಾರ ನಷ್ಟ ಕಡಿಮೆ ಮಾಡುವುದು, ಉತ್ತಮ ಸುಗ್ಗಿ, ಸಂಗ್ರಹ, ಪೊಟ್ಟಣ, ಸಂಚಾರ ಮತ್ತು ಮಾರುಕಟ್ಟೆ ವ್ಯವಸ್ಥೆಗಳತ್ತ, ಹೆಚ್ಚು ಗಮನ ಕೊಡಬೇಕಾಗಿದೆ.
1996ರಿಂದ ಆರಂಭವಾಗಿರುವ ವಿಶ್ವ ಮೊಟ್ಟೆ ದಿನಾಚರಣೆ ಅಕ್ಟೋಬರ್ 13ರಂದು. ಸಸಾರಜನಕ, ಜೀವಸತ್ವಗಳು, ಖನಿಜಗಳನ್ನು ಪೂರೈಸುವ ಉತ್ತಮ ಆಹಾರ ಮೊಟ್ಟೆ. ಮಾಡುವ ಇದು ಕೊಲೈನ್ ಮೂಲವಾಗಿದ್ದು, ಮಾನವನ ನೆನಪಿನ ಶಕ್ತಿ ಹಾಗೂ ಮೆದುಳಿನ ಮತ್ತು ಸ್ನಾಯುಗಳ ಅಭಿವೃದ್ಧಿಗೆ ಇದು ಅವಶ್ಯವಾಗಿದೆ. ಕಾಯಿಲೆ ತಡೆಯಲು ಕಣ್ಣಿನ ರಕ್ಷಣೆಗೆ ಇದು ಬೇಕೇ ಬೇಕು. ವಿಶ್ವದ ಹಸಿವಿನ ವಿರುದ್ಧ ಹೋರಾಡಲು, ಮೊಟ್ಟೆ ಉತ್ಪಾದಿಸುವ ಹಕ್ಕಿಗಳನ್ನು ಹೊಂದಿರುವ ರೈತರು ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಪ್ರಯತ್ನಿಸುತ್ತಿದ್ದಾರೆ.
ಆಯುರ್ವೇದದ ರಾಷ್ಟ್ರೀಯ ಸಂಸ್ಥೆ, ಮೊದಲ ರಾಷ್ಟ್ರೀಯ ಆಯುರ್ವೇದ ದಿನವನ್ನು 2016ರ ಅಕ್ಟೋಬರ್ 28ರಂದು ಆಚರಿಸಿ, ಪ್ರತಿವರ್ಷ ಈ ದಿನ ಆಚರಿಸಲು ನಿರ್ಧರಿಸಿದೆ. ಆಯುರ್ವೇದ ಯೋಗ, ಪ್ರಕೃತಿ ವೈದ್ಯ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ, ಇವೆಲ್ಲವುಗಳ ಆಯುಷ್ ಸಚಿವಾಲಯ, ದೇವವೈದ್ಯ ಧನ್ವಂತರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಕಳೆದ ವರ್ಷ ಮಿಷನ್ ಮಧುಮೇಹ ಕಾರ್ಯಕ್ರಮ ಆರಂಭಿಸಿದ್ದು, ಮಧುಮೇಹ ತಡೆಯುವುದು ಹಾಗೂ ನಿಯಂತ್ರಿಸುವುದು ಇದರ ಗುರಿಯಾಗಿದೆ. ಅಥರ್ವ ವೇದದಲ್ಲಿ ಹೇಳಿರುವಂತೆ, ಆಯುರ್ವೇದ, ಸಾಂಪ್ರದಾಯಿಕ ಹಿಂದೂ ವೈದ್ಯಕೀಯ ವ್ಯವಸ್ಥೆಯಾಗಿದ್ದು, ದೇಹದ ವ್ಯವಸ್ಥೆಗಳ ಸಮತೋಲನ, ಪಥ್ಯ, ಗಿಡಮೂಲಿಕೆಗಳ ಉಪಚಾರ, ಯೋಗಿಕ ಉಸಿರಾಟ ಇವುಗಳನ್ನು ಅಧರಿಸಿದೆ.
ನಮ್ಮ ದೇಶದಲ್ಲಿ 6 ದಶಲಕ್ಷ ಮಕ್ಕಳು ಭೀಕರ ಅಪೌಷ್ಠಿಕತೆಯಿಂದ ನರಳುತ್ತಿದ್ದು, 5 ವರ್ಷವಾಗುವ ಮೊದಲೇ, ಆರೋಗ್ಯವಂತ ಮಕ್ಕಳಿಗಿಂತ ಸಾಯುವ ಸಾಧ್ಯತೆಯ ಅಪಾಯ 9 ಪಟ್ಟು ಇದೆ. ಮಕ್ಕಳ ಬಗ್ಗೆ ಯೋಚಿಸಿದಾಗ, ನ್ಯೂಮೋನಿಯಾ 5 ವರ್ಷದ ಒಳಗಿನ ಸುಮಾರು 1.8 ದಶಲಕ್ಷ ಮಕ್ಕಳನ್ನು, ಪ್ರತೀವರ್ಷ ಬಲಿ ತೆಗೆದುಕೊಳ್ಳುತ್ತಿದೆ. ಅತಿ ಭೇದಿ ಹಾಗೂ ನ್ಯೂಮೋನಿಯಾಗಳಿಗೆ ಒಟ್ಟಾಗಿ ಪ್ರತೀವರ್ಷ 3.5 ದಶಲಕ್ಷ ಮಕ್ಕಳು ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಸೋಪಿನಿಂದ ಕೈ ತೊಳೆಯುವುದರಿಂದ ಶೇಕಡಾ 30ರಷ್ಟು ಅತಿಭೇಧಿ ಹಾಗೂ ಶೇಕಡಾ 21ರಷ್ಟು ಉಸಿರಾಟದ ಸೋಂಕುಗಳನ್ನು ಕಡಿಮೆ ಮಾಡಬಹುದು. ಹೀಗಾಗಿ 16ನೇ ತಾರೀಖಿನ ವಿಶ್ವ ಕೈ ತೊಳೆಯುವ ದಿನಾಚರಣೆ ಮುಖ್ಯವಾಗುತ್ತದೆ. ಆಹಾರ ಸೇವಿಸುವ ಮೊದಲು, ಹಾಗೂ ಶೌಚದ ನಂತರ, ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಂಡರೆ, ಯಾವುದೇ ಲಸಿಕೆಗಿಂತ ಹೆಚ್ಚು ಪ್ರಾಣಗಳು ಉಳಿಯುತ್ತವೆ.
ಮಕ್ಕಳ ಬಗ್ಗೆ ಗಮನಿಸಿದಾಗ ನಮ್ಮ ದೇಶದಲ್ಲಿ ಪುರುಷ ಪ್ರಧಾನ ಹಾಗೂ ಗಂಡು ಮಗುವಿನ ಪ್ರಾಶಸ್ತ್ಯ ಲಿಂಗ ಅಸಮಾನತೆ ಕಂಡು ಬರುತ್ತದೆ. ಅಕ್ಟೋಬರ್ 11ರಂದು ವಿಶ್ವ ಹೆಣ್ಣು ಮಗು ದಿನಾಚರಣೆ. ಲಿಂಗಸಮಾನತೆಯಲ್ಲಿ ಶಿಕ್ಷಣದ ಹಕ್ಕು, ಶಿಕ್ಷಣದ ಸಾಮೀಪ್ಯ, ಪೌಷ್ಠಿಕತೆ, ಕಾನೂನು ಹಕ್ಕುಗಳು, ವೈದ್ಯಕೀಯ ಕಾಳಜಿ, ಅಸಮಾನತೆ, ಮಹಿಳೆಯ ವಿರುದ್ಧ ಹಿಂಸೆ, ಬಾಲ್ಯವಿವಾಹ ಈ ಎಲ್ಲ ಕ್ಷೇತ್ರಗಳ ಬಗ್ಗೆ ಯೋಚಿಸಬೇಕಾಗಿದೆ. 11-2-2012ರ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ನಡಾವಳಿಯಂತೆ, ಬಾಲಕಿಯ ಸಬಲೀಕರಣ ಹಾಗೂ ಆಕೆಯಲ್ಲಿ ಬೆಂಬಲ ತೊಡಗಿಸುವಿಕೆ ಆವಶ್ಯಕ. ಆರ್ಥಿಕ ಬೆಳವಣಿಗೆ, ಬಡತನ ನಿರ್ಮೂಲನೆ, ಹಾಗೂ ಕುಟುಂಬ ಹಾಗೂ ಸಮಾಜಗಳಿಗೆ ಸಂಬಂಧಿಸಿದ ಅರ್ಥಪೂರ್ಣ ನಿರ್ಧಾರಗಳಲ್ಲಿ, ಆಕೆಯ ಭಾಗವಹಿಸುವಿಕೆ ಅತಿ ಮುಖ್ಯವಾದುದು.
24ರಂದು ವಿಶ್ವ ಪೋಲಿಯೋ ದಿನಾಚರಣೆ. ಎಲ್ಲ ಮಕ್ಕಳೂ ನಗುನಗುತ್ತಾ ಓಡಿ, ಅಡಗಿ ಜೂಟಾಟ ಆಡುವಾಗ ಒಂದು ಮಗು ನಡೆಯಲಾಗದೇ ಒಂದೆಡೆ ಕುಳಿತಿತ್ತು. ಅದರ ಕಣ್ಣಲ್ಲಿ ನೀರು. ಅದು ಹುಟ್ಟಿದಾಗಿನಿಂದ ಅದರ ಕಾಲುಗಳಲ್ಲಿ ಶಕ್ತಿ ಇರದೇ ಬಾಗಿದ್ದವು. ಅದಕ್ಕೆ ಪೋಲಿಯೋ ಆಗಿತ್ತು. ನಿಮಗೆ ತಿಳಿದಿರುವಂತೆ ಪ್ರಪಂಚದಿಂದ ಪೋಲಿಯೋ ಓಡಿಸಲು ಪಲ್ಸ್ ಪೋಲಿಯೋದ 2 ಹನಿಗಳನ್ನು ಮಕ್ಕಳಿಗೆ ಹಾಕುವ ಕಾರ್ಯಕ್ರಮವನ್ನು, ವಿಶ್ವದ ಬಹಳಷ್ಟು ಸರಕಾರಗಳು ಹಾಗೂ ರೋಟರಿ ಇಂಟರ್ ನ್ಯಾಶನಲ್ ಹಮ್ಮಿಕೊಂಡಿವೆ. ನನ್ನ 36 ವರ್ಷದ ಆಕಾಶವಾಣಿ ಸೇವೆಯ ಅವಧಿಯಲ್ಲಿ, ಈ ಆಂದೋಳನದಲ್ಲಿ ರೇಡಿಯೋ ಮೂಲಕ ವೈದ್ಯರ ಸಂದರ್ಶನಗಳು, ರೂಪಕಗಳು, ಉಪನ್ಯಾಸ, ಬಾನುಲಿಯ ಹೊರಗೆ, ಸಾಮೂಹಿಕÀ ಪಾದಯಾತ್ರೆ, ವಸ್ತುಪ್ರದರ್ಶನ, ರಸ್ತೆ ಶೋಗಳು, ಶಾಲಾ ಭೇಟಿ, ಪೋಲಿಯೋ ಹನಿಗಳನ್ನು ಹಾಕುವ ಬೂತ್‍ಗಳು, ಹಾಕಿದವರು, ಹಾಕಿಸಿದ ತಾಯಂದಿರ ಭೇಟಿ ಹಾಗೂ ಸಂದರ್ಶನ, ಯೂನಿಸೆಫ್ ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆಯಿಂದ, ಒಮ್ಮೆ ನಾನೂ ಈ ಆಂದೋಳನದಲ್ಲಿ ಸತತ ಭಾಗವಹಿಸುತ್ತಿದ್ದೆ, ಎಂಬ ಅಭಿಮಾನ ನನಗೆ.
15ರಂದು ವಿಶ್ವ ಗ್ರಾಮೀಣ ಮಹಿಳಾ ದಿನವಿದೆ. ತಮ್ಮ ಜೀವನಕ್ಕಾಗಿ ಸ್ವಾಭಾವಿಕ ಸಂಪನ್ಮೂಲಗಳು ಹಾಗೂ ದೃಷ್ಟಿಯ ಮೇಲೆ ಅವಲಂಬಿಸಿದ್ದಾರೆ, ಗ್ರಾಮೀಣ ಮಹಿಳೆಯರ ಬಹುಭಾಗ. ವಿಶ್ವ ಜನಸಂಖ್ಯೆಯ ಕಾಲು ಭಾಗ ಇವರೇ ಇದ್ದಾರೆ. ಅಭಿವೃದ್ಧಿಪರ ದೇಶಗಳಲ್ಲಿ ಶೇಕಡಾ 43ರಷ್ಟು ಗ್ರಾಮೀಣ ಮಹಿಳೆಯರು ಕೃಷಿ ಕಾರ್ಮಿಕರಾಗಿ, ಸಿಗುವ ಆಹಾರದ ಉತ್ಪಾದನೆ, ಸಂಸ್ಕರಣೆಗಳ ಜವಾಬ್ದಾರಿ ಹೊತ್ತಿದ್ದಾರೆ. ಆಹಾರ ಸುರಕ್ಷತೆಯ ಪ್ರಾಥಮಿಕ ಜವಾಬ್ದಾರಿ ಇವರದೇ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 76ರಷ್ಟು ಕಡುಬಡವರು ವಾಸಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ, ಕೃಷಿ ಸಂಪನ್ಮೂಲಗಳ ಉತ್ಪಾದನೆಗೆ ಇವರನ್ನು ಸರಿಯಾಗಿ ತೊಡಗಿಸಿದರೆ, 2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಎಂಬ ಧ್ಯೇಯದ ಯಶಸ್ವಿನೊಂದಿಗೆ ವಿಶ್ವದ ಹಸಿವು ಹಾಗೂ ಬಡತನಗಳನ್ನು ನೀಗಿಸಬಹುದು.
ಒಂದೆಡೆ ಪುಟ್ಟ ಮಕ್ಕಳು -ಇನ್ನೊಂದೆಡೆ ವೃದ್ಧರು. 1ರಂದು ಅಂತರ್ ರಾಷ್ಟ್ರೀಯ ಹಿರಿಯರ ದಿನಾಚರಣೆಯ ಗುರಿ, ವೃದ್ಧರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು. ತಾವೂ ಮುಂದೆ ವೃದ್ಧರಾಗುತ್ತೇವೆ ಎಂಬುದನ್ನೇ ಮರೆತ ಯುವಜನರಲ್ಲಿ, ವೃದ್ಧಾಪ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ವೃದ್ಧರ ಆರೋಗ್ಯ, ಭಾವನೆಗಳು ಹಾಗೂ ಸುರಕ್ಷತೆಯತ್ತ ಕಿರಿಯರು ಗಮನಿಸಬೇಕು. ಇವರ ಬಗ್ಗೆ ಯೋಚಿಸಿ ಕುಟುಂಬ, ಸಮಾಜ ಹಾಗೂ ದೇಶಕ್ಕೆ ಇವರ ಕೊಡುಗೆ ಬಗ್ಗೆ ಕೃತಜ್ಞತೆ ಹೇಳೋಣವೇ!
ಇದೇ ರೀತಿ ಶಿಕ್ಷಕರನ್ನೂ ಸ್ಮರಿಸಬೇಕು. ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನ. ಶೈಕ್ಷಣಿಕ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಒಟ್ಟೂ ಆರೋಗ್ಯ ರಕ್ಷಣೆಯಲ್ಲಿ ಬಹುಭಾಗ ಕೊಡುಗೆ ನೀಡುವ ಶಿಕ್ಷಕರ ಬಗ್ಗೆ ಜಾಗೃತಿ, ಅರ್ಥ ಮಾಡಿಕೊಳ್ಳುವಿಕೆಯಿಂದ, ಅವರಿಗೆ ಮೆಚ್ಚುಗೆ ಹಾಗೂ ಕೃತಜ್ಞತೆ ಹೇಳಲೇಬೇಕು. ಚಟುವಟಿಕೆಯ ಜೀವನ, ಜ್ಞಾನ ಸಂಚಯ ಇವುಗಳಿಗೆ ಉತ್ತಮ ದೃಷ್ಟಿ ಅತ್ಯಾವಶ್ಯಕ. ಕಣ್ಣು ಮಂಜಾಗಿದ್ದರೆ, ಕಣ್ಣು ಸರಿಯಾಗಿ ಕೆಲಸ ಮಾಡದಿದ್ದರೆ, ಕಣ್ಣಿನ ದೋಷ ಅಥವಾ ಸಮಸ್ಯೆ ಇದ್ದರೆ, ವ್ಯಕ್ತಿ ಹಾಗೂ ಕುಟುಂಬ ಎರಡೂ ತೊಂದರೆ ಅನುಭವಿಸುತ್ತವೆ. 13ನೇ ತಾರೀಖು ವಿಶ್ವ ದೃಷ್ಟಿದಿನ ಆಚರಿಸುತ್ತಾರೆ. ಕಣ್ಣಿನ ಕಾಳಜಿ, ಅಂಧತ್ವ, ಹಾಗೂ ದೃಷ್ಟಿ ದೋಷಗಳ ಬಗ್ಗೆ ವಿಶ್ವದ ಗಮನ ಸೆಳೆಯುವುದೇ ಈ ದಿನಾಚರಣೆ ಉದ್ದೇಶ.
ಶಾರೀರಿಕ ಆರೋಗ್ಯ ಕೆಟ್ಟಾಗ, ಆಸ್ಪತ್ರೆಗಳಿಗೆ ಹೋದಾಗ, ರಕ್ತ ಬೇಕು ಎಂಬ ಬೇಡಿಕೆ ಗಮನಿಸುತ್ತೇವೆ. ಇದುವರೆಗೆ ಮಾನವ ರಕ್ತಕ್ಕೆ ಪರ್ಯಾಯವಿಲ್ಲ. ಇದನ್ನು ಕೃತಕವಾಗಿ ಉತ್ಪಾದಿಸಲು ಇನ್ನೂ ಸಾಧ್ಯವಾಗಿಲ್ಲ. ಈಗಿನ ಕಾನೂನು ನಿಯಮಗಳಂತೆ, ರಕ್ತ ಮಾರುವಂತಿಲ್ಲ. ಒಳ್ಳೆಯ ಶುದ್ಧ ರಕ್ತ, ಸ್ವಯಂಪ್ರೇರಿತ ರಕ್ತದಾನದಿಂದ ಮಾತ್ರ ಲಭ್ಯ. 1ನೇ ತಾರೀಖು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ. ಗಂಭೀರ ಕಾಯಿಲೆ, ಶಸ್ತ್ರಚಿಕಿತ್ಸೆ, ಗಾಯ, ಹಿಂಸೆಯ ಪರಿಣಾಮ, ಶಿಶು ಜನನಕ್ಕೆ ಸಂಬಂಧಿಸಿದ ಸಮಸ್ಯೆಗಳು, ರಸ್ತೆ ಅಪಘಾತಗಳು, ಇಲ್ಲೆಲ್ಲಾ ತಕ್ಷಣ ಜೀವ ಉಳಿಸಲು ಮಾನವ ರಕ್ತ ಬೇಕು. ರಕ್ತದಾನದ ಬಗ್ಗೆ ಅನೇಕ ಜನರಲ್ಲಿ ಇರಬಹುದಾದ ಅಜ್ಞಾನ, ಹೆದರಿಕೆ, ತಪ್ಪುಕಲ್ಪನೆಗಳನ್ನು, ಹೊಡೆದೋಡಿಸಬೇಕಾಗಿದೆ. ವಿದ್ಯಾರ್ಥಿಗಳು ಯುವಜನರನ್ನು ರಕ್ತದಾನ ಮಾಡಲು ಪ್ರೇರೇಪಿಸಬೇಕಾಗಿದೆ. ರಕ್ತ ವರ್ಗಾವಣೆ ಮೂಲಕ, ಆಧುನಿಕ ಪರೀಕ್ಷಾ ತಂತ್ರಜ್ಞಾನಗಳಿಂದ ಹೆಚ್ಚು ಕಾಳಜಿ, ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಗಾಬರಿಗೊಳಿಸುವ ಕಾಯಿಲೆಗಳಾದ ಏಡ್ಸ್, ಸಿಫಲೀಸ್, ಹೆಪಿಟೈಟಿಸ್-ಎ, ಹೆಪಿಟೈಟಿಸ್-ಬಿ, ಹೆಪಿಟೈಟಿಸ್-ಸಿ, ಚಳಿಜ್ವರ, ಇವುಗಳನ್ನು ಈ ಮಾರ್ಗದಲ್ಲಿ ತಡೆಯಲಾಗುತ್ತಿದೆ. ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ. ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸಬೇಕಾಗಿದೆ. ಜನರಲ್ಲಿ ಇನ್ನೂ ದೆವ್ವ, ಮಾಟ, ಅರಿಯದ ವಿಚಾರಗಳ ಬಗ್ಗೆ ಗಾಬರಿಯಿದೆ. ಅವರಿವರು ಹೇಳಿದ ಅವೈಜ್ಞಾನಿಕ ಮಾತುಗಳಿಂದ, ಬಾಣಂತಿಗೆ ದೆವ್ವ ಹಿಡಿದಿದೆ, ಗರ್ಭಿಣಿಗೆ ದೃಷ್ಟಿ ತಗುಲಿದೆ, ಎಂದು ಮಾನಸಿಕವಾಗಿ ಹೆದರುವ ವ್ಯಕ್ತಿಗಳು, ಕುಟುಂಬ, ಸಾವಿರಾರು. ದೇಹದಂತೆ ಮನಸ್ಸಿಗೂ ಆಯಾಸ, ನಿತ್ರಾಣ, ಕಾಯಿಲೆ ಬರುತ್ತವೆ. ಆಗ ಮಾನಸಿಕ ಕ್ಷೋಭೆಗೊಳಗಾದ ವ್ಯಕ್ತಿಯನ್ನು, ಮಾನಸಿಕ ಚಿಕಿತ್ಸೆಗೆ ಕರೆದೊಯ್ಯಬೇಕು. ಮಾನಸಿಕ ರೋಗಿ ಮಾನಸಿಕ ವೈದ್ಯರ ಬಳಿ ಹೋದರೆ, ಅವರನ್ನು ತಕ್ಷಣ ಹುಚ್ಚರು ಎಂದು ನಿರ್ಧರಿಸಬಾರದು. ಅತ್ಯಂತ ಬಿಝಿಯಾಗಿರುವ ದೇಹ ಹಾಗೂ ಮನಸ್ಸುಗಳಿಗೆ ವಿರಾಮ, ವಿಶ್ರಾಂತಿ ಅತ್ಯಾವಶ್ಯಕ. ಹಣಗಳಿಸುವ, ಹೊಟ್ಟೆ ತುಂಬುವ, ವಿಶ್ರಾಂತಿಗೆ ನಿದ್ರಿಸುವ ಮಾರ್ಗದಲ್ಲಿ, ವಿಶ್ರಾಂತಿ, ನವಯೌವ್ವನ ಪಡೆಯುವ ಪ್ರಯತ್ನ, ಮನರಂಜನೆ, ಒಳ್ಳೆಯ ರೀತಿ ಸಮಯ ಕಳೆಯುವುದು, ರಜಾದಿನದ ವಿರಾಮ ಹಾಗೂ ಆಗಾಗ ಒತ್ತಡದ ಕೆಲಸದಿಂದ ಸ್ವಲ್ಪ ಬಿಡುವು, ಇವೆಲ್ಲ ಅತ್ಯಾವಶ್ಯಕ.

ಒತ್ತಡ, ಉದ್ವೇಗ, ಆತಂಕ, ಮನಸ್ಸಿನ ಅಶಾಂತಿಗಳಿಗೆ, ಹಿಂದಿನಿಂದ ಹೇಳಲಾಗಿರುವ ಸಂಗೀತ ಚಿಕಿತ್ಸೆ ಪರಿಣಾಮಕಾರಿ. ಹಿತವಾದ ಮೆಲುಧನಿಯ ಸಂಗೀತ ನಮ್ಮ ಜಾಗೃತ, ಸ್ವಪ್ನ , ಸುಶೂಪ್ತಿ ಸ್ಥಿತಿಗಳಲ್ಲೂ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಪ್ರತೀ ವರ್ಷ ಅಕ್ಟೋಬರ್ 1ರಂದು ವಿಶ್ವ ಸಂಗೀತ ದಿನ. 13ರಂದೇ, ದುರಂತಗಳನ್ನು ಕಡಿಮೆ ಮಾಡುವ ಅಂತರ್‍ರಾಷ್ತ್ರೀಯ ದಿನವಿದ್ದು, 1989ರಿಂದ ಈ ಆಚರಣೆ ಆರಂಭವಾಗಿದೆ. ಸ್ವಾಭಾವಿಕ ದುರಂತಗಳು:- ಭೂಮಿಯ ಒಳಗಿನ ಶಕ್ತಿ ಹೊರಬಂದಾಗ ಆಗುವ ಭೂಕಂಪ, ಜ್ವಾಲಾಮುಖಿಗಳು, ಸೂರ್ಯ ಇಂಧನದಿಂದ ಹೊರಸೂಸುವ ಹೊರಗಿನ ಶಕ್ತಿಯಿಂದ ಉಂಟಾಗುವ ಹವಾಮಾನ ಬದಲಾವಣೆ, ಚಂಡಮಾರುತ, ಸುಂಟರಗಾಳಿ, ಪ್ರವಾಹ, ಕಾಡ್ಗಿಚ್ಚು, ಗುರುತ್ವಾಕರ್ಷಣ ಶಕ್ತಿಯಿಂದ ಸೆಳೆಯಲ್ಪಡುವ ಭೂಮಿ ಹಾಗೂ ಹಿಮ, ಕ್ಷುದ್ರ ಗ್ರಹಗಳು, ಧೂಮಕೇತುಗಳ ಪ್ರಭಾವ, ಇವೆಲ್ಲವುಗಳ ಹಿನ್ನೆಲೆಯಲ್ಲಿ ಜೀವರಕ್ಷಣೆ ಆರೋಗ್ಯ ರಕ್ಷಣೆಯನ್ನು ನಾವು ಗಮನಿಸಬೇಕಾಗಿದೆ. ಪ್ರಪಂಚದಲ್ಲಿಯ ಜನ ಹಾಗೂ ಸಮುದಾಯಗಳು, ದುರಂತಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡಬೇಕೆಂಬ ಅರಿವು ಮೂಡಿಸುವ, ಎಲ್ಲ ರೀತಿ ಮರಣ ದರ ಇಳಿಸುವ ಉದ್ದೇಶ ಇಲ್ಲಿದೆ. ವಿಶ್ವದಲ್ಲಿ ದುರಂತದಲ್ಲಿ ಮಡಿಯುವ ಮಹಿಳೆಯರು ಮಕ್ಕಳ ಸಂಖ್ಯೆ ಪುರುಷರಿಗಿಂತ 14 ಪಟ್ಟು ಹೆÀಚ್ಚಿದೆ. ಇದರಲ್ಲಿ ತಾಯಿಯಾಗುವವರ ಮರಣದ ಪ್ರಮಾಣ ಶೇಕಡಾ 60, ಹಾಗೂ 5 ವರ್ಷದ ಒಳಗಿನ ಮಕ್ಕಳ ಮರಣದ ಪ್ರಮಾಣ ಶೇಕಡ 53ರಷ್ಟಿದ್ದು, ಸಂಘರ್ಷ ಹಾಗೂ ದುರಂತಗಳಲ್ಲಿ ಇವು ಉಂಟಾಗುತ್ತವೆ. ವಿಕಲಚೇತನರು, ವೃದ್ಧರು ಹಾಗೂ ಸ್ಥಳೀಯರು ಇಂಥ ಸಂದರ್ಭಗಳಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ.
1986ರಿಂದ ಅಕ್ಟೋಬರ್ 5ರಂದು ಆಚರಿಲಾಗುವ, ವಿಶ್ವ ಆವಾಸಸ್ಥಾನ ದಿನದ ಉದ್ದೇಶ. ನಮ್ಮ ಪಟ್ಟಣ, ನಗರಗಳ ಸ್ಥಿತಿ ಗಮನಿಸಿ, ಪ್ರತಿ ಒಬ್ಬ ಮಾನವನಿಗೂ ಸಿಗಬೇಕಾದ ಮೂಲಭೂತ ವಸತಿ ಹಕ್ಕಿನ ಬಗ್ಗೆ ಗಮನಿಸುವುದೇ ಆಗಿದೆ. ಸುರಕ್ಷಿತ – ಸ್ವಚ್ಛ ವಾಸಸ್ಥಾನವಿದ್ದರೆ ಮಾತ್ರ ಆರೋಗ್ಯ ರಕ್ಷಣೆ ಸಾಧ್ಯ ಅಲ್ಲವೇ!
ಅಕ್ಟೋಬರ್ 20ರಂದು ವಿಶ್ವ ಅಸ್ಥಿರಂದ್ರತೆ ದಿನ:- ಅಸ್ಥಿರಂದ್ರತೆ ಹಾಗೂ ಸಂಬಂಧಿಸಿದ ಮೂಳೆ ಕಾಯಿಲೆಗಳ ಪತ್ತೆಹಚ್ಚುವಿಕೆ, ಚಿಕಿತ್ಸೆ ಹಾಗೂ ತಡೆಯುವಿಕೆ ಬಗ್ಗೆ, ಅರಿವು ನೀಡುವ ಉದ್ದೇಶ ಈ ದಿನದ್ದು. ಹೆಚ್ಚು ಜನರಿಗೆ ಇದರ ಬಗ್ಗೆ ತಿಳಿವಿಲ್ಲ ಆದ್ದರಿಂದ ಇದು ಪತ್ತೆಯಾಗಿಲ್ಲ. ಈ ವರ್ಷದ ಧ್ಯೇಯವಾಕ್ಯ ನಿಮ್ಮ ಮೂಳೆಗಳನ್ನು ಪ್ರೀತಿಸಿರಿ ನಿಮ್ಮ ಭವಿಷ್ಯ ರಕ್ಷಿಸಿರಿ. ಹಿರಿಯರ ಆಕಸ್ಮಿಕ ಮರಣಕ್ಕೆ ಹಾಗೂ ಅಂಗವಿಲತೆಗೆ ಮುಖ್ಯ ಕಾರಣ, ಮೂಳೆ ಮುರಿತ. ಈ ಹಿನ್ನೆಲೆಯಲ್ಲಿ ಅಪಾಯದಿಂದ ತಪ್ಪಿಸಿಕೊಂಡು, ಸದಾ ಎಚ್ಚರಿಕೆ ವಹಿಸುವುದು ಮುಖ್ಯ. ಮೂಳೆ ಆರೋಗ್ಯಕ್ಕೆ ಕ್ಯಾಲ್ಸಿಯಂ ಇರುವ ಪೌಷ್ಠಿಕ ಆಹಾರ ಹಾಗೂ ವ್ಯಾಯಾಮ ಅವಶ್ಯ. 21ರಂದು ವಿಶ್ವ ಅಯೋಡಿನ್ ಕೊರತೆ ಅವ್ಯವಸ್ಥೆ ತಡೆಯುವ ದಿನಾಚರಣೆ:- ಪ್ರಪಂಚದ 1/3ರಷ್ಟು ಜನಸಂಖ್ಯೆ ಅಯೋಡಿನ್ ಕೊರತೆಯ ಅಪಾಯದಲ್ಲಿದೆ. ಮನುಷ್ಯನ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅಯೋಡಿನ್ ಬೇಕೇ ಬೇಕು. ಅಯೋಡಿನ್ ಕೊರತೆಯಿಂದ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದು, ಮಾನಸಿಕ ಕಾಯಿಲೆ, ಮಂದಬುದ್ಧಿ, ಮಕ್ಕಳಲ್ಲಿ ಗುರುತಿಸುವಿಕೆ ಅಭಿವೃದ್ಧಿ ಹಾಳಾಗುವಿಕೆ ಹಾಗೂ ಮೆದುಳು ಹಾಳಾಗುವಿಕೆ ಎಲ್ಲ ಆಗುತ್ತವೆ. ನರ ಹಾಗೂ ಮಾಂಸಖಂಡಗಳ ಅವ್ಯವಸ್ಥೆ, ಕುಂಠಿತವಾದ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ, ದೃಷ್ಟಿ ವಾಕ್ ಹಾಗೂ ಶ್ರವಣ ಶಕ್ತಿಗಳಲ್ಲಿ ತೊಂದರೆ ಗರ್ಭಿಣಿಯರಿಗೆ ಸತ್ತು ಹುಟ್ಟುವ ಮಗು ಹಾಗೂ ಗರ್ಭಪಾತ, ಮಾತು ಬರದಿರುವುದು, ಕುಳ್ಳಾಗಿರುವುದು ಇವೆಲ್ಲ ಉಂಟಾಗುತ್ತವೆ.
ವಿಶ್ವ ಅಲರ್ಜಿ ಸಪ್ತಾಹ 15ರಂದು. ಈ ಕಾಯಿಲೆ ಬಗ್ಗೆ ಹಾಗೂ ಸಂಬಂಧಿಸಿದ ದುರವಸ್ಥೆ ಬಗ್ಗೆ ಅರಿವು ಮೂಡಿಸುವುದೇ ವಿಶ್ವ ಸಂಸ್ಥೆಯ ಗುರಿ. ಈ ಭೂಮಿಯ ಮೇಲೆ ಪ್ರತಿವ್ಯಕ್ತಿಯ ದೇಹ, ಯಾವುದಾದರೂ ವಸ್ತುವಿಗೆ ಒಗ್ಗದಿರಬಹುದು. ಇಲ್ಲಿ ಸ್ವ ಚಿಕಿತ್ಸೆ ಮಾಡಿ ಒದ್ದಾಡುವವರೂ ಇದ್ದಾರೆ. ಅಲರ್ಜಿ ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಬಹು ಬೇಗ ಪ್ರತಿಕ್ರಿಯಿಸುವ ಅವ್ಯವಸ್ಥೆ. ಒಗ್ಗದಿರುವಿಕೆ / ಮೈನೂರತೆಯಿಂದ ಈ ಸಮಸ್ಯೆ ಬರುತ್ತದೆ. ವಾತಾವರಣದಲ್ಲಿಯ ತೊಂದರೆ ಕೊಡದ ವಸ್ತುಗಳಿಗೂ, ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಪ್ರತಿಕ್ರಿಯಿಸಿದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಅಸ್ಥಮಾದಂತಹ ಸಂದರ್ಭಗಳಲ್ಲಿ ಅಲರ್ಜಿ ಮಹತ್ವದ ಪಾತ್ರ ವಹಿಸುತ್ತದೆ. ಮೊಟ್ಟೆ, ಸ್ವಚ್ಛವಿರದ ಸ್ಥಳಗಳು, ಹಾಲು, ಚಳಿ, ಮಳೆ, ಧೂಳು ಈ ಸ್ಥಿತಿ ತರುತ್ತವೆ.ಆರಂಭದ ಸ್ಥಿತಿಯಲ್ಲಿ ಇದನ್ನು ವಾಸಿ ಮಾಡಬಹುದು. ನೂರಾರು ರೀತಿ ಅಲರ್ಜಿಗಳಿದ್ದು ಪ್ರತಿಯೊಂದನ್ನೂ ಬೇರೆ ಬೇರೆ ಔಷಧಿಗಳಿಂದ ಗುಣಪಡಿಸಬಹುದು.
12ರಂದು ವಿಶ್ವ ಸಂಧಿವಾತ ದಿನ. ತಡಮಾಡಬೇಡಿ ಇಂದೇ ಸಂಪರ್ಕಿಸಿ, ಬೇಗ ಪತ್ತೆಹಚ್ಚುವುದರ ಮಹತ್ವದ ಅರಿವು ಮೂಡಿಸಲು ನಮಗೆ ಸಹಾಯ ಮಾಡಿ ಎಂಬುದೇ ಈ ದಿನಾಚರಣೆಯ ಗುರಿ. ಸಾಮಾನ್ಯವಾಗಿ ಸಂಧಿವಾತ ಕಾಯಿಲೆಗಳಿರುವ ಆರ್.ಎಮ್.ಡಿ. ಜನರ ನೋವು ತಡವಾಗಿ ಪತ್ತೆಯಾಗುತ್ತದೆ. 4 ರಲ್ಲಿ 3 ಜನರ ಪತ್ತೆಯಾಗದೇ ಸರಾಸರಿ 5 ವರ್ಷ ಹಾಗೇ ಉಳಿಯುತ್ತದೆ. ಈ ರೋಗಿಗಳ ಸ್ನಾಯುಗಳು ಹಾಗೂ ಎಲುಬುಗಳ ಆಕುಂಚನದಿಂದ, ಅಸ್ಥಿ ರಜ್ಜುಗಳಲ್ಲಿ ಹಾಗೂ ಸ್ನಾಯುರಜ್ಜುಗಳಲ್ಲಿ ಸ್ವಲ್ಪ ಚಲನೆಯೂ ಅಪಾರ ನೋವು ತರುತ್ತದೆ. ನಿತ್ಯ ಜೀವನದ ಮೇಲೆ ಆರ್.ಎಮ್ ಡಿ. ಮಹತ್ವದ ಪರಿಣಾಮ ಬೀರುತ್ತದೆ. ಮುಂದಿನ ನಾಶ ತಡೆಯಲು ಬೇಗ ಪತ್ತೆ ಹಚ್ಚುವುದೇ ಪರಿಹಾರ. ಚಲನೆ ಅಥವಾ ಒತ್ತಡಕ್ಕೆ ಕೇಂದ್ರ ಭಾಗದ ಸ್ನಾಯುಗಳು ಈ ರೋಗದಲ್ಲಿ ಅತಿ ಸೂಕ್ಷ್ಮವಾಗಿ ಸ್ವಂದಿಸುತ್ತವೆ. ಇದರಿಂದ ನಡೆಯಲು ಪಾದಗಳು ಹಾಗೂ ಹಿಮ್ಮಡಿ ಕಷ್ಟ ಕೊಡುತ್ತವೆ. ಇದು ಜೀವನದ ಗುಣಮಟ್ಟ ಕಡಿಮೆ ಮಾಡಿ, ಶಾರೀರಿಕÀ ಸಾಮಥ್ರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 17ರಂದು ವಿಶ್ವಬಡತನ ನಿರ್ಮೂಲನಾ ದಿನಾಚರಣೆ. ಬಡತನಕ್ಕೂ ಶಿಕ್ಷಣ ಹಾಗೂ ಆರೋಗ್ಯಕ್ಕೂ ಅತ್ಯಂತ ಹತ್ತಿರದ ನಂಟು. ಆರೋಗ್ಯಕ್ಕೆ – ಸಂಪರ್ಕದ ಮಿತಿ, ಶಿಕ್ಷಣ ಹಾಗು ಇತರ ಅವಶ್ಯಕ ಸೇವೆಗಳು, ಆಗಾಗ ಮಾನವನ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಥವಾ ನಿರಾಕರಣೆ, ಇವೆಲ್ಲ ಸೇರಿವೆ. ಬಡತನದಲ್ಲಿರುವವರ ಧ್ವನಿಗಳನ್ನು ಕೇಳೋಣ. ಇವರ ಹಕ್ಕುಗಳನ್ನೂ ಗೌರವಿಸಿ ರಕ್ಷಿಸೋಣ ಶೋಷಣೆ ಹಾಗೂ ಸಾಮಾಜಿಕ ಬಹಿಷ್ಕಾರ ತೊಲಗಿಸೋಣ. ಎಲ್ಲೆಡೆ ಇರುವ ಬಡತನವನ್ನು, ಎಲ್ಲ ರೂಪಗಳಲ್ಲೂ ಅಂತ್ಯಗೊಳಿಸಲು ವಿಶ್ವಸಂಸ್ಥೆ ಪ್ರಯತ್ನಿಸುತ್ತಿದೆ. ಮಹಿಳೆಯರ ಸಬಲೀಕರಣ, ಯುವಜನರನ್ನು ಒಳ್ಳೆಯ ಕೆಲಸದಲ್ಲಿ ತೊಡಗಿಸುವುದು ಹಾಗೂ ಎಲ್ಲರಿಗಾಗಿ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ಎಲ್ಲ ಒಟ್ಟಾಗಿ ಪ್ರಯತ್ನಿಸಬೇಕಾಗಿದೆ.
24ರಂದು ವಿಶ್ವಸಂಸ್ಥೆಯ ದಿನಾಚರಣೆ ಹಾಗೂ ಅಕ್ಟೋಬರ್ 20ರಿಂದ 26ರವರೆಗೆ ವಿಶ್ವಸಂಸ್ಥೆಯ ಸಪ್ರಾಹ ನಡೆಯಲಿದೆ. ಸಮೃದ್ಧಿಯ ಪಥದಲ್ಲಿ, ಪಳೆಯುಳಿಕೆ ಇಂಧನಗಳನ್ನು ಸುಡುವುದು, ತಾಪಮಾನ ಕಡಿಮೆ ಮಾಡಲು ಹವಾಮಾನ ಬದಲಾವಣೆ ಬಗ್ಗೆ ಪ್ಯಾರಿಸ್ ಒಪ್ಪಂದ, ಇವುಗಳ ಹಿನ್ನೆಲೆಯಲ್ಲಿ ಹೆಚ್ಚು ಹಸಿ, ಸ್ವಚ್ಛ ವಾತಾವರಣ ರಕ್ಷಣೆ, ಇಂಗಾಲದ ಬಳಕೆ ಕಡಿಮೆ ಮಾಡುವುದು ಇವುಗಳಿಂದ ಐತಿಹಾಸಿಕ ಹೊಸ್ತಿಲು ಹತ್ತಿರವಾಗುತ್ತಿದೆ. ಇನ್ನೊಂದು ತುದಿಯಿಂದ ನೋಡಿದಾಗ ಈ ಪ್ರಪಂಚದಲ್ಲಿ ಮಾನವರೊಂದಿಗೆ ಪ್ರಾಣಿಗಳು, ಪಕ್ಷಿಗಳು, ಮರಗಳೂ ಬಾಳುತ್ತಿವೆ. ಮಾನವ ತಾನೇ ಪರಮ ಎಂದುಕೊಂಡು, ಸತತವಾಗಿ ಮರಗಳನ್ನು ಕತ್ತರಿಸಿ, ಅರಣ್ಯನಾಶ ಮಾಡಿ, ವನ್ಯ ಜೀವಿಗಳ ಬೇಟೆಯಾಡಿ, ಸಾಕುಪ್ರಾಣಿಗಳ ಶೋಷಣೆ ಮಾಡಿದ. ನೀರು ಉಚಿತ ಹಾಗೂ ಶಾಶ್ವತವಾಗಿ ಲಭ್ಯ ಎಂದು ನಂಬಿ, ನೀರನ್ನು ಮೂರ್ಖನಾಗಿ ದುಂದು ಖರ್ಚು ಮಾಡಿದ. ಇತ್ತೀಚೆಗೆ ಪರಿಸರ ಸಮತೋಲನ ಹಾಗೂ ವಾತಾವರಣ ರಕ್ಷಣೆಗಳು ಮಹತ್ವ ಪಡೆದಿವೆ. ಈ ಹಿನ್ನೆಲೆಯಲ್ಲಿ ಎರಡು ದಿನಾಚರಣೆಗಳಿವೆ. ಪ್ರಾಣಿಗಳ ಹಕ್ಕು ಹಾಗೂ ಕಲ್ಯಾಣ ಗಮನಿಸಲು ವಿಶ್ವ ಪ್ರಾಣಿ ದಿನ 4 ರಂದು. ಅಸಿಸಿಯ ಫ್ರಾನ್ಸಿಸ್ ಎಂಬ ಸಂತ, ಪುಟ್ಟ ಹುಳವನ್ನೂ ದೇವರ ಸೃಷ್ಟಿ ಎಂದು ಗೌರವಿಸಿ ರಕ್ಷಿಸಬೇಕೆಂದು ಹೇಳಿದ್ದಾನೆ. ಅಕ್ಟೋಬರ್ 1 ರಿಂದ ವನ್ಯಜೀವಿ ಸಪ್ತಾಹ. ವನ್ಯಜೀವಿಯ ಸಂರಕ್ಷಣೆ ಹಾಗೂ ಉಳಿವು ಇವುಗಳ ಬಗ್ಗೆ ಜಾಗೃತರಾಗಬೇಕಾಗಿದೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!