ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು. ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ. ಮನಷ್ಯನ ದೇಹವು ಪ್ರತಿಶತ 80 ರಷ್ಟು ನೀರಿನಿಂದ ತುಂಬಿರುವುದು. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ, ದಕ್ಷಿಣ ಕರ್ನಾಟಕದಲ್ಲಿ ವರುಣನ ಅರ್ಭಟದಿಂದ ಇಡೀ ಕರ್ನಾಟಕ ಈ ವರ್ಷ ಜಲಪ್ರಳಯದಿಂದ ತತ್ತರಿಸಿದೆ. ಪ್ರವಾಹಕ್ಕೆ ಸಿಲುಕಿ 60 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜಾನುವಾರು ಮೃತಪಟ್ಟಿವೆ. ಮಲೆನಾಡಿನಲ್ಲಿ ಭೂಕುಸಿತ ಉಂಟಾಗಿದೆ.
ನೀರು ಕಲುಷಿತಗೊಳ್ಳಲು ಹಲವಾರು ಕಾರಣಗಳುಂಟು. ಮಳೆ ಬಂದಾಗ ಹರಿದು ಬರುವ ನೀರಿನಲ್ಲಿ ಹೊಲಸು ಪದಾರ್ಥಗಳು ಸೇರಿ ಕಲುಷಿತವಾಗಬಹುದು. ಮಾಯದಂಥ ದಾಖಲೆಯ ಮಳೆ ಮಹಾರಾಷ್ಟ್ರದಲ್ಲಿ ಬಿತ್ತು. ರಸ್ತೆ ಯಾವುದು, ಗಟಾರ ಯಾವುದು ಗೊತ್ತಾಗಲಿಲ್ಲ. ನೆರೆ ಉತ್ತರ ಕರ್ನಾಟಕಕ್ಕೂ ನುಗ್ಗಿತು. ಎಲ್ಲೆಲ್ಲೂ ನೀರು. ಆದರೆ, ಜನರಿಗೆ ಕುಡಿಯಲು ಸಿಗಲಿಲ್ಲ ಒಳ್ಳೆಯ ನೀರು. ವಾರದ ನಂತರ ನೀರು ಇಳಿಯಿತು. ಗಬ್ಬು ವಾಸನೆ ಹೆಚ್ಚಿತು. ಸದ್ದಿಲ್ಲದೆ ಜಲಜನ್ಯ ಜಡ್ಡುಗಳು ದಂಡೆತ್ತಿ ಬಂದವು.ಸಾಂಕ್ರಾಮಿಕಗಳಿಗೆ ಕಹಳೆ ಊದುವವು. “ಮನುಷ್ಯ ಸಾಯುವುದಿಲ್ಲ, ತನ್ನನು ತಾನು ಕೊಂದುಕೊಳ್ಳುಳುತ್ತಾನೆ” ಎಂದು ಹಿರಿಯರು ಹೇಳಿದ ಈ ಮಾತು ಎಷ್ಟೊಂದು ಅರ್ಥಗರ್ಭಿತ!
ಕಲುಷಿತ ನೀರು ಮತ್ತು ಆಹಾರವನ್ನು ರುಚಿಯಲ್ಲಾಗಲಿ, ಬಣ್ಣದಲ್ಲಾಗಲಿ ಗುರುತಿಸಲು ಸಾಧ್ಯವಿಲ್ಲ. ನೀರಿಲ್ಲದೆ ಜೀವವಿಲ್ಲ. ಅಂತೆಯೇ ಸೂಕ್ಷ್ಮಾಣುಜೀವಿಯೂ ಸಹ ನೀರನ್ನೇ ಅವಲಂಬಿಸಿರುವುದು ಸಹಜವಾಗಿದೆ.
ಕಲುಷಿತ ನೀರಿನಿಂದ ಬರಬಹುದಾದ ರೋಗಗಳಲ್ಲಿ ಅತಿಸಾರಕ್ಕೆ ಅಗ್ರಸ್ಥಾನ. ಸಾವಿನ ಸರದಾರ ಎಂಬ ಖ್ಯಾತಿ. ಯಾವುದೇ ವ್ಯಕ್ತಿ ಅತಿಸಾರದಿಂದ ಬಳಲುತ್ತಿದ್ದರೆ ಆತನಲ್ಲಿಯ ಸ್ವಚ್ಚತೆಯ ಅಭಾವದಿಂದ ಇತರರು ತಿನ್ನುವ ಆಹಾರ ಪದಾರ್ಥ, ಕುಡಿಯುವ ನೀರು ಕಲುಷಿತಗೊಳ್ಳುವುದು ಸಾಮಾನ್ಯ. ರೋಗ ಪ್ರಸಾರಕ್ಕೆ ಇದೂ ಮೂಲ ಕಾರಣ. ಅತಿಸಾರವನ್ನು ಸಮರ್ಪಕವಾಗಿ ಹತೋಟಿಯಲ್ಲಿ ಇಡಲು ಕ್ರಮಗಳು ಇಲ್ಲದೇನಿಲ್ಲ. ಅತಿ ಸುಲಭ ರೀತಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಕುಡಿಯುವ ನೀರನ್ನು ಕುದಿಸಿ, ಆರಿಸಿ, ಸೋಸಿ ಕುಡಿದರೆ ಸಾಕು. ನೀರನ್ನು ಶುಚಿಗೊಳಿಸುವ ಯಂತ್ರಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟಿವೆ. ನೀರಿನಲ್ಲಿರುವ ಕ್ರಿಮಿಗಳನ್ನು ಕ್ಲೋರಿನ್ ಮಾತ್ರೆಗಳಿಂದ ನಾಶಪಡಿಸಬಹುದು.
ಹಳೆಯ ಹೆಮ್ಮಾರಿಯೆಂದೇ ಪ್ರಸಿದ್ಧವಾಗಿದ್ದ ಕಾಲರಾ ಕಾಯಿಲೆ ಎಲ್ಲೆಂದರಲ್ಲಿ ಒಮ್ಮೆಲೇ ಕಾಣಿಸಿಕೊಂಡು ಊರಿಗೆ ಊರನ್ನೇ ದಂಗು ಬಡಿಸುತ್ತದೆ. ಕಲುಷಿತ ನೀರಿನಿಂದ ಬರುವ ಈ ಕಾಯಿಲೆ, ಮಳೆಗಾಲದ ಆರಂಭದಲ್ಲಿ ಹರಡುವ ಸಾಧ್ಯತೆ ಹೆಚ್ಚು. “ಕಾಲರಾ ಕುಡಿಯುವುದು ಸಾಧ್ಯ, ಸ್ವಾಹ ಸಾಾಧ್ಯ, ಆದರೆ, ಪತ್ತೆ ಹಚ್ಚುವುದು ದುರ್ಲಭ “ಎಂಬ ಹಳೆಯ ಕಾಲದ ಹೇಳಿಕೆ ಇಂದಿಗೂ ಸತ್ಯವಾಗಿಯೇ ಇದೆ. ಕಾಲರಾ ಮಾರಿಯ ನರ್ತನಕ್ಕೆ ಸೂಕ್ತ ವೇದಿಕೆ ನೆರೆ ಊರಲ್ಲಿ ಸಜ್ಜಾಗಿದೆ. ರಕ್ತ ಭೇದಿಯು ಸಿಗೆಲ್ಲಾ ಅಥವಾ ಎಂಟಮಿಬಾ ಹಿಸ್ಟೋಲಿಟಿಕಾ, ಎಂಟಿರೋ ಇನ್ ವೆಜಿವ್ ಇ ಕೊಲೈ ಇತ್ಯಾದಿಗಳಿಂದ ಉಂಟಾಗುತ್ತದೆ.
ಜಾಗತಿಕ ಆರೋಗ್ಯ ಸಂಸ್ಥೆಯ ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ಸರಾಸರಿ 30 ಲಕ್ಷ ಜನರು ಅತಿಸಾರ, ಆಮಶಂಕೆ, ರಕ್ತಭೇದಿಗಳಿಂದ ಅಸುನೀಗಿದರೆ, ಭಾರತದಲ್ಲಿ 10 ಲಕ್ಷ ಜನರು ಈ ಕಾಯಿಲೆಯಿಂದ ಸಾಯುತ್ತಾರೆ. ಈ ವರ್ಷ ನೆರೆ ಹಾವಳಿ ಬೇರೆ. ಇದಕ್ಕೆ ರೆಕ್ಕೆ ಪುಕ್ಕ ಕಟ್ಟಿದಂತಾಗಿದೆ. ಹೀಗಾಗಿ ಅದು ಹೂಂಕರಿಸುತ್ತ ಸಂತ್ರಸ್ತರ ಊರುಗಳಲ್ಲಿ ಸುತ್ತಾಡುತ್ತಲೇ ಇದೆ. ಸಾವಿಗೆ ಸಂಚಗಾರ ನೀಡುತ್ತಲೇ ಇದೆ.
ಅತಿಸಾರವಾದಾಗೆಲ್ಲ ಔಷಧಿಯ ಅವಶ್ಯಕತೆ ಇಲ್ಲ. ಅತಿಸಾರ ಅಪ್ಪಿಕೊಂಡಾಗ ನೀರು ಮತ್ತಿತರ ಆಹಾರ ಪದಾರ್ಥಗಳನ್ನು ಕೊಡದೇ ಇರುವ ಪದ್ಧತಿ ನಮ್ಮ ಜನರಲ್ಲಿ ಮನೆಮಾಡಿಕೊಂಡಿದೆ . ಇದನ್ನು ಆರೋಗ್ಯ ಶಿಕ್ಷಣ ನೀಡುವ ಮೂಲಕ ಹೋಗಲಾಡಿಸಬೇಕು. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಜೀವಜಲವನ್ನು ತಯಾರಿಸಬಹುದು. ಒಂದು ಲೀಟರ್ ಕುದಿಸಿ ಆರಿಸಿ ಸೋಸಿದ ನೀರಿಗೆ ಹಿಡಿ ಸಕ್ಕರೆ ಸೇರಿಸಿ, ಒಂದು ಚಿಟಕಿ ಉಪ್ಪು ಬೆರೆಸಿ, ಕರಗಿಸಬೇಕು. ಇದ್ದರೆ ಅರ್ಧ ಲಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ಜೀವಜಲ ಕೊಡುವುದರಿಂದ ಜೀವ ಉಳಿಸಬಹುದಾಗಿದೆ. ಇದನ್ನು ನೀಡದೆ ರೋಗಗಳನ್ನು ನಿಯಂತ್ರಿಸುವ ಔಷಧಿಗಳನ್ನು ನೀಡುವುದು ಅಸರ್ಪಕ ಹಾಗೂ ಅಪಾಯಕಾರಿ.
ನೆರೆಯೊಂದಿಗೆ ಕಲುಷಿತ ನೀರಿನಲ್ಲಿ ಜಂತಿನ ತತ್ತಿಗಳು ಹರಿದು ಬಂದು ಹೊಲದ ಮಣ್ಣಿನಲ್ಲಿ ಬೆರೆಯಬಹುದು. ಬರಿಗಾಲಿನಲ್ಲಿ ಹೊಲದಲ್ಲಿ ಅಡ್ಡಾಡುವ ರೈತಾಪಿ ಜನರ, ಕೂಲಿಗಳ ದೇಹವನ್ನು ಇವು ಸೇರಬಹುದು. ಕಲುಷಿತ ನೀರು ಕುಡಿಯುವುದರಿಂದ ಜಂತಿನ ತತ್ತಿಗಳು ಜನರ ಹೊಟ್ಟೆ ಸೇರಬಹುದು. ಜಂತಿನ ಬಾಧೆ ಅಪ್ಪಿದಾಗ ಹಸಿವು ಇಲ್ಲವಾಗುವುದು. ಜ್ವರ, ಹೊಟ್ಟೆ ಕಡಿತ, ಕೆಮ್ಮು, ಸಿಟ್ಟು, ರಕ್ತ ಹೀನತೆ, ಪಿತ್ತಗಾದರಿ, ಕಸಿವಿಸಿ, ಅಲರ್ಜಿ ತೊಂದರೆಗಳು, ಉಬ್ಬಸ, ಎದೆಉರಿ, ಭೇದಿ, ಎದೆ ಹಾರುವುದು…. ಇತ್ಯಾದಿ ತೊಂದರೆಗಳುಂಟಾಗಬಹುದು.
ಸಂತ್ರಸ್ತರ ಊರಲ್ಲಿ ‘ಟೈಫಾಯ್ಡ್ ‘ ಜ್ವರದ ಹಾವಳಿ ಹೆಚ್ಚಾಗಬಹುದು. ಜ್ವರ ಮತ್ತು ಚಳಿಯಿಂದ, ಮೈ ಕೈ ನೋವು, ತಲೆನೋವು, ಕೆಮ್ಮು, ನಾಡಿ ಬಡಿತ ಉಷ್ಮತೆಗೆ ಅನುಗುಣವಾಗಿ ಹೆಚ್ಚಾಗದೇ ಕಡಿಮೆಯಾಗುವುದು ಈ ರೋಗದ ವಿಶೇಷ. ಕಳೆದ ವರ್ಷ 18,000 ಜನರು ನಮ್ಮ ದೇಶದಲ್ಲಿ ಟೈಫಾಯ್ಡ್ ರೋಗದಿಂದಲೇ ಮರಣ ಹೊಂದಿದ್ದಾರೆ. ಈ ವರ್ಷ ಇದರ ಉಪಟಳದಿಂದ ಸಾವು ನೋವು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೆ ಪೂರ್ವ ಸಿದ್ಧತೆ ಈಗಲೇ ಮಾಡಿಕೊಳ್ಳುವುದೊಳಿತು.
ಮಾನವ ಕುಲಕ್ಕೆ ಮೂರು ವಿಧವಾದ ಶತ್ರುಗಳಿವೆ, ಯುದ್ಧ, ಬರಗಾಲ ಮತ್ತು ಜ್ವರ. ಈ ಮೂವರಲ್ಲಿ ಜ್ವರವೇ ಅತ್ಯಂತ ಪ್ರಬಲವಾದುದು ಮತ್ತು ಭಯಾನಕವಾದುದು ಎಂದು ಈ ಶತಮಾನದ ಪ್ರತಿಭಾನ್ವಿತ ವೈದ್ಯಕೀಯ ತಜ್ಞರಾಗಿದ್ದ ಸರ್ ವಿಲಿಯಂ ಆಸ್ಲರ್ ವಿಷಮಜ್ವರದಿಂದ ಆಗಬಹುದಾದ ಅನಾಹುತಗಳನ್ನು ವಿವರಿಸುತ್ತ ಹೇಳಿದ್ದಾರೆ. ಜ್ವರ ತನ್ನ ಪರಾಕಾಷ್ಠೆಯನ್ನು ತಲುಪಿದಾಗ ರೋಗಿಯ ಮಾನಸಿಕ ಸ್ಥಿತಿಯಲ್ಲಿ ಮಂಪರು ಕವಿದು ಎಚ್ಚರವಿಲ್ಲದೇ ಬಡಬಡಿಸುವುದರಿಂದ ‘ಸನ್ನಿಪಾತ ಜ್ವರ ‘ ಎಂದೂ ಈ ರೋಗ ಕರೆಯಲ್ಪಡುವುದು. ಮಂಪರು ಕವಿದ ಸ್ಥತಿಯ ಕಾರಣದಿಂದಲೇ ಈ ರೋಗವನ್ನು ಇಂಗ್ಲೀಷಿನಲ್ಲಿ ಟೈಫಾಯ್ಡ್ ( Typhoid ) ಎಂದು ಕರೆಯುವರು.
ಸುರಕ್ಷಿತ ನೀರು ಸಿಗದ ಸಂತ್ರಸ್ತರ ಊರಲ್ಲಿ ಕಾಮಾಲೆಗೆ ಸಾಂಕ್ರಾಮಿಕದ ಸಂಭ್ರಮ. ಈ ರೋಗ ಇರುವಿಕೆಯ ಕುರುಹುಗಳನ್ನು ತೋರಿಸದಷ್ಟು ಸೌಮ್ಯ ಸೋಂಕಿನಿಂದ ಹಿಡಿದು ಜೀವಕ್ಕೆ ಅಪಾಯ ಒಡ್ಡುವಷ್ಟು ಉಗ್ರವಾಗಿರುವ ಸೋಂಕಿನ ಮಧ್ಯ ರೋಗಿಗಳು ಜೀಕಾ ಹೊಡೆಯುತ್ತಿರುತ್ತಾರೆ. ಕಾಮಾಲೆ ಕಾಣುವುದಕ್ಕಿಂತ ಮೊದಲು ಮೈ ಕೈ ನೋವು, ನಶಿ ನಶಿ ಜ್ವರ, ಹೊಟ್ಟೆ ಹಸಿವಾಗದಿರುವಿಕೆ, ವಾಕರಿಕೆ, ವಾಂತಿ ಮುಂತಾದ ತೊಂದರೆಗಳು ತೋರುವವು. ನಂತರ ಕಣ್ಣು, ಬಾಯಿಯ ಲೋಳ್ಪರೆ ಹಳದಿ ಬಣ್ಣಕ್ಕೆ ತಿರುಗುವವು. ಚರ್ಮವು ಹಳದಿ ಆಗುವುದು.
ಈ ರೋಗವು ಜನ, ಜಾತಿ, ಜನಾಂಗ, ಪ್ರಾಂತಗಳ ಗಡಿಗಳನ್ನು ಮೀರಿ ಪ್ರಪಂಚದಾದ್ಯಂತ ತನ್ನ ಹಾವಳಿಯನ್ನು ಮೆರೆದಿದೆ. ಜಗತ್ತಿನ ತುಂಬೆಲ್ಲಾ ವರ್ಷದುದ್ದಕ್ಕೂ ಆಗೊಮ್ಮೆ ಈಗೊಮ್ಮೆ ಹಣಕಿ ಹಾಕುವ ಈ ರೋಗ ಸಣ್ಣ ಅಥವಾ ದೊಡ್ಡ ಸಾಂಕ್ರಾಮಿಕ ಸ್ವರೂಪಗಳ ದರ್ಶನವನ್ನು ಆಗಾಗ ಮಾಡಲು ಮರೆಯುವುದಿಲ್ಲ. ಈಗ ನೆರೆ ಹಾವಳಿ, ಇದರ ವಿರಾಟರೂಪ ದರ್ಶನಕ್ಕೆಸೂಕ್ತ ಭೂಮಿಕೆಯನ್ನು ಒದಗಿಸಿದೆ.
ಈ ರೋಗದ ಉಪಶಮನಕ್ಕೆ ಹೇಳಿಕೊಳ್ಳುವಂತಹ ಯಾವುದೇ ಮದ್ದು ಇನ್ನೂ ದೊರೆತಿಲ್ಲ. ಕಾರಣ ಈ ರೋಗದ ತೊಂದರೆಗೆ ತಕ್ಕ ಚಿಕಿತ್ಸೆ ಉಪಚಾರವೇ ಆಗಿದೆ. ಸೇವಿಸುವ ಆಹಾರ ಪದಾರ್ಥಗಳು ಪಚನಕ್ಕೆ ಹಗುರವಾಗಿರಬೇಕು. ಆದ್ದರಿಂದ ರೋಗಿಗಳು ಹೆಚ್ಚಾಗಿ ಬೆಲ್ಲ, ಸಕ್ಕರೆ ,ಕಬ್ಬಿನ ಹಾಲು, ಪಾನಕ ಮುಂತಾದವುಗಳನ್ನು ಸೇವಿಸಬೇಕು. ‘ಸಿ‘ಜೀವಸತ್ವವನ್ನು ಹೇರಳವಾಗಿ ತೆಗೆದುಕೊಳ್ಳಬೇಕು.ಕಾಮಾಲೆಗೆ ಕಡಿವಾಣ ಹಾಕಲು ಅತೀ ಮುಖ್ಯವಾದ ಸಂಗತಿಯೆಂದರೆ, ಜನರಿಗೆ ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವುದು. ಕುದಿಸಿ, ಆರಿಸಿ, ಸೋಸಿದ ನೀರನ್ನು ಕುಡಿಯುವಂತೆ ಜನರಲ್ಲಿ ಜಾಗೃತಿ ಉಂಟುಮಾಡುವುದು.
ನೆರೆ ಹಾವಳಿಯ ಊರುಗಳು ಒಂದು ದೃಷ್ಟಿಯಲ್ಲಿ ಅವು ಊರುಗಳಲ್ಲ. ತಿಪ್ಪೆಗುಂಡಿಗಳು. ಅಲ್ಲಿ ಸೊಳ್ಳೆಗಳು ಹೇರಳವಾಗಿ ಸಂತಾನಾಭಿವೃದ್ದಿ ಮಾಡಿಕೊಂಡಿವೆ. ಪಕ್ಕ ಬಿಚ್ಚಿ ಸೊಯ್ ಸೊಯ್ ಸದ್ದು ಮಾಡುತ್ತ ದಂಡೆತ್ತಿ ಬರುವ ಸೊಳ್ಳೆಗಳು ಸಂತ್ರಸ್ತರ ನಿದ್ದೆಗೆಡಿಸಿ, ಕಚ್ಚಿ ರಕ್ತ ಹೀರಿ ಜೊಲ್ಲಿನ ಮುಖಾಂತರ ಮಲೇರಿಯಾ ಪರೋಪಜೀವಿಗಳ ಉಡುಗೊರೆ ನೀಡುತ್ತವೆ. ಹೀಗಾಗಿ ರಗ್ಗುಗಳನ್ನು ಹೊತ್ತು ಗಡ ಗಡ ನಡುಗುತ್ತ, ಕಟ ಕಟ ಹಲ್ಲು ಕಡಿಯುತ್ತ, ಕೆಂಡದಂತಹ ಜ್ವರ, ತಲೆ ಸಿಡಿಯುವಂತಹ ತಲೆನೋವು, ಮೈ ಕೈ ನೋವು,ಸುಸ್ತುಗಳೊಂದಿಗೆ ಆಸ್ಪತ್ರೆಯ ಮೆಟ್ಟಲು ಹತ್ತುವ ಮಕ್ಕಳು, ಮುದುಕರು, ಯುವಕ ಯುವತಿಯರ ಸಂಖ್ಯೆ ಈಗ ಹೆಚ್ಚುತ್ತಿದೆ. ಇವರಿಗೆ ತಿನ್ನಲು ಆಗುವುದಿಲ್ಲ. ಬಾಯಿ ಇಸಾ ಬೇವಿನಕಾಯಿ ಆಗಿರುತ್ತದೆ. ವಾಕರಿಕೆ, ವಾಂತಿ, ನಂತರ ಸಂಕಟ ಸುರಿಯುತ್ತದೆ. ತಪ ತಪ ಬೆವರು ಬಸಿಯುತ್ತದೆ. ಆರಾಮಾದ ಅನುಭವ ನೀಡುತ್ತದೆ. ಮತ್ತೆ ಸ್ವಲ್ಪ ಹೊತ್ತಿನ ನಂತರ ಇದು ಆದಿಯಿಂದ ಅಂತ್ಯದವರೆಗೆ ಮರುಕಳಿಸುತ್ತದೆ. ಈ ರೋಗವೇ ಮಲೇರಿಯಾ.
ಸಂತ್ರಸ್ತರ ನೆತ್ತರ ಹೀರಿ ಸಂತೃಪ್ತಿಗೊಂಡ ಸೊಳ್ಳೆಗಳು ಮಲೇರಿಯಾ ಹರಡಲು ಸಜ್ಜಾಗಿವೆ.ಈಗ ಒಂದೊಂದು ಮಲೇರಿಯಾ ಮುಚ್ಚಿ ಮುಸುಕಿದೆ. ಮನೆಯಲ್ಲಿ ಎಲ್ಲರೂ ಹಾಸಿಗೆ ಹಿಡಿದಿದ್ದಾರೆ. ಒಲೆ ಹಚ್ಚಿ ಅಡುಗೆ ಮಾಡುವುದನ್ನು ಬಿಡಿ, ಹಟ್ಟಿಯಲ್ಲಿಯ ದನಕರುಗಳಿಗೆ ಮೇವು ಮಿಡಚಿ ಹಾಕುವವರಿಲ್ಲ. ನೀರು ಕುಡಿಸುವವರೂ ದಿಕ್ಕಿಲ್ಲ. ಸೊಳ್ಳೆಗಳು ಕೇವಲ ಮಲೇರಿಯಾ ಹರಡುವಲ್ಲಿ ನಿರತವಾದ್ದರೆ ‘ಒಳ್ಳೆಯದಿತ್ತು’. ಸೊಳ್ಳೆಗಳ ಇತರ ಪ್ರಭೇದಗಳು ಡೆಂಗ್ಯೂ ಜ್ವರ, ದೆಂಗ್ಯೂ ರಕ್ತ ಸ್ರಾವದ ಜ್ವರ, ಹೆಡಮುರಿಗೆ ಹಾಕುವ ಹಳದಿ ಜ್ವರ, ಚಿಕೂನಗುನ್ಯಾ, ಮೆದುಳು ಜ್ವರ ಹರಡಲು ಹಾತೊರೆಯುತ್ತಿವೆ. ಸುದೈವದ ಸಂಗತಿಯೆಂದರೆ ಹುಟ್ಟಿದ ಸೊಳ್ಳೆಗಳಲ್ಲಿ ಶೇ.10 ಕ್ಕೆ ಮಾತ್ರ ಮಾನವನ ಮುಖ ನೋಡುವ ಅವಕಾಶ ಸಿಕ್ಕರೆ, ಅವುಗಳ ಪೈಕಿ ಒಂದಕ್ಕೆ ಮಾತ್ರ ಮಾನವನ ರಕ್ತ ಹೀರುವ ಸೌಭಾಗ್ಯ ಸಿಗುತ್ತದೆ!
ಸೊಳ್ಳೆಗಳಿಂದ ಹರಡುವ ಈ ರೋಗಗಳಿಂದ ರಕ್ಷಣೆ ಪಡೆಯಲು, ಸೊಳ್ಳೆಗಳನ್ನು ಬಗ್ಗು ಬಡಿಯಲು ಸೂಕ್ತ ಶಕ್ತಿಯುತ ಕ್ರಿಮಿನಾಶಕ ಸಿಂಪಡಿಸಬೇಕು. ವಾಸಿಸುವ ಪ್ರದೇಶದ ಸುತ್ತ ಮುತ್ತ ನೀರು ನೆಲೆಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಇತರೆ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.ನೆರೆಯೊಂದಿಗೆ ವಿನೆರೆ ಷಜಂತುಗಳು ಹರಿದು ಬಂದಿವೆ. ಈಗಾಗಲೇ ಅಲ್ಲಲ್ಲಿ ಹಾವು ಕಚ್ಚಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕತ್ತಲಾದರೆ ಹೊರಗೆ ಬರಲು ಹೆದರುತ್ತಿದ್ದಾರೆ.
ನೆರೆ ಹಾವಳಿಯ ನೆನಪುಗಳು ಇನ್ನೂ ಜನಮಾನಸದಿಂದ ಮಾಸಿಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನೆರೆ ಹಾವಳಿಯಿಂದ ಜಲಮಾಲಿನ್ಯ ಹೆಚ್ಚಿದೆ. ದಕ್ಷಿಣ ಕರ್ನಾಟಕದಲ್ಲಿ ವರುಣನ ಅರ್ಭಟಕ್ಕೆ ಜನ ತತ್ತರಿಸಿದೆ. ಅಲ್ಲಲ್ಲಿ ಮಡುಗಟ್ಟಿ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನಾಭಿವೃದ್ದಿ ಸಾಕಷ್ಟಾಗಿದೆ. ಜನ ವಾಸಿಸಲು ಅಯೋಗ್ಯವಾದ ಸ್ಥಳಗಳಲ್ಲಿ ಅನಿವಾರ್ಯವಾಗಿ ವಾಸಿಸುತ್ತಿದ್ದಾರೆ. ಮಾನಸಿಕ ಆಘಾತದಿಂದ ಸಂತ್ರಸ್ತರು ಸುಸ್ತಾಗಿದ್ದಾರೆ. ಕುಡಿಯಲು ಸುರಕ್ಷಿತ ನೀರು ಸಿಗುತ್ತಿಲ್ಲ. ಆದರೂ ಉತ್ಸವ, ಉರುಸು, ಜಾತ್ರೆಗಳು ಕಡಿಮೆಯಾಗಿಲ್ಲ.
ಪ್ರತಿಬಂಧಕೋಪಾಯಗಳು:
- ಸಂತ್ರಸ್ತರಿಗೆ ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವುದು.
- ಕುದಿಸಿ, ಆರಿಸಿ, ಸೋಸಿದ ಸ್ವಚ್ಛ ನೀರನ್ನು ಕುಡಿಯುವಂತೆ ಜನರಲ್ಲಿ ಜಾಗೃತಿ ಉಂಟುಮಾಡುವುದು.
- ಬಿಸಿ ಬಿಸಿ ಆಹಾರ ಸೇವಿಸಲು ತಿಳಿಸುವುದು.
- ರಸ್ತೆ ಬದಿಯ ತಿನಿಸುಗಳನ್ನು ತಿನ್ನಬಾರದು.
- ಕೊಳೆತ ಹಣ್ಣು ಹಂಪಲು ಸೇವಿಸಬಾರದು.
- ಭೇದಿ ಮಾಡಿದ ನಂತರ ಚೆನ್ನಾಗಿ ಕೈ ಕಾಲುಗಳನ್ನು ಸಾಬೂನಿಂದ ತೊಳೆದುಕೊಳ್ಳಬೇಕು. ಕೈಯಲ್ಲಿಯ ಉಗುರುಗಳನ್ನು ಉದ್ದ ಬೆಳೆಸುವುದರಿಂದ ಉಗುರಿನ ಸಂದುಗಳಲ್ಲಿ ಹೊಲಸು ಸಂಗ್ರಹವಾಗಿ ರೋಗಕ್ಕೆ ಕಾರಣವಾಗಬಹುದು.
- ತಿನ್ನುವ ಆಹಾರ ಪದಾರ್ಥಗಳನ್ನು ನೊಣಗಳಿಂದ ರಕ್ಷಿಸಬೇಕು. ನೊಣಗಳು ಕುಳಿತ ಆಹಾರವನ್ನು ತಿನ್ನಬಾರದು. ಸಿಕ್ಕ ಸಿಕ್ಕಲ್ಲಿ ಮಲ ಮೂತ್ರ ಮಾಡಬಾರದು.
- ಆರು ತಿಂಗಳಿಗೊಮ್ಮೆ ಜಂತಿನ ಔಷಧಿ ತಗೆದುಕೊಳ್ಳಬೇಕು.
- ಮಕ್ಕಳಿಗೆ ಕಾಲಕ್ಕೆ ಸರಿಯಾಗಿ ಪೋಲಿಯೋ ಲಸಿಕೆ ಹಾಕಿಸಬೇಕು.
- ಜನರಿಗೆ ವೈಯಕ್ತಿಕ ಸ್ವಚ್ಛತೆಗಾಗಿ ಆರೋಗ್ಯ ಶಿಕ್ಷಣ ನೀಡುವುದು. ಲಭ್ಯವಿರುವಎಲ್ಲ ಸಮಾಹ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಉಂಟುಮಾಡುವುದು.
ಸಂತ್ರಸ್ತರ ಸೆಡ್‌ಗಳಲ್ಲಿ ಸೊಳ್ಳೆಗಳ ಝೇಂಕಾರ, ನಿಂತ ನೀರಲ್ಲಿ ರೋಗಾಣುಗಳ ಹುಂಕಾರ. ಅಜ್ಞಾನ, ಅಂಧಕ್ಕಾರ, ಮೂಢನಂಬಿಕೆಗಳ ಮಡುವಿನಲ್ಲಿ ಜನ, ಸಾಂಕ್ರಾಮಿಕ ರೋಗಗಳು ಸ್ಪೋಟಗೊಳ್ಳಲು, ಜಲಜನ್ಯ ಜಡ್ಡು ಗಳು ದಂಡೆತ್ತಿ ಬರಲು ಸೂಕ್ತ ಭೂಮಿಕೆ ಸಜ್ಜಾಗಿದೆ. ನೆರೆ ನುಗ್ಗಿದಂತೆ ಜಡ್ಡುಗಳು ಹರಿದು ಬಂದಲ್ಲಿ ಅಚ್ಚರಿ ಪಡಬೇಕಾಗಿಲ್ಲ! ನೆರೆಯ ಪ್ರದೇಶ ಸ್ಮಶಾನವಾಗುವ ಮೊದಲು ‘ರಾಷ್ಟ್ರೀಯ ವಿಪ್ಪತ್ತು ‘ಘೋಷಣೆಯಾಗಬೇಕು.ಸರಕಾರಿ ಯಂತ್ರ ಸಕಲ ಸಿದ್ಧತೆ ಮಾಡಿಕೊಳ್ಳಬೇಕು!! “ಯುದ್ಧ ಕಾಲೇ ಶಸ್ತ್ರಾಭ್ಯಾಸ “ಧೋರಣೆ ಕೈ ಬಿಡಬೇಕು. ಇಲ್ಲವಾದಲ್ಲಿ ನೆರೆಗೆ ನುಗ್ಗಾದ ಜನ, ಸದ್ದಿಲ್ಲದೆ ಸತ್ತು ಹೋದಾರು!!!
ಡಿ.ವಿ.ಜಿ.ಯವರ ಮಾತುಗಳು ಬಹಳ ಅರ್ಥಪೂರ್ಣವಾಗಿದೆ. ಅವುಗಳನ್ನು ಇಲ್ಲಿ ಉದಾಹರಿಸುವುದು ಸೂಕ್ತ ಮತ್ತು ಸಮಯೋಚಿತ——-
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ?
ಪ್ರಕೃತಿಯೆಂದವನೆನ್ನುವುದವಳಿರದೊಡಿರದು
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ
ವಿಕೃತಿಗೆಡೆಯಾಗದಿರೊ ಮಂಕುತಿಮ್ಮ.