Health Vision

Health Vision

SUBSCRIBE

Magazine

Click Here

ನಾರಾಯಣ ಹೆಲ್ತ್ ಸಿಟಿ : 1000 ಬಿಎಂಟಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಿದ ಕರ್ನಾಟಕದ ಏಕೈಕ ಆಸ್ಪತ್ರೆ

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜೂಂದಾರ್ ಶಾ ಕ್ಯಾನ್ಸರ್ ಆಸ್ಪತ್ರೆಯ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ (ಬಿಎಂಟಿ) ಘಟಕವು 1000 ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಿದ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾಗಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಬಿಎಂಟಿ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಸಂಸ್ಥೆಯದ್ದು. ಅಟೊಲೋಗಸ್ ಮತ್ತು ಅಲೋಜೆನೆಸಿಕ್ ಅಂಗಾಂಶ ಕಸಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ರೋಗಿಗಳಿಗೆ ಈ ಕೇಂದ್ರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೆಫರೆಲ್ ಕೇಂದ್ರವಾಗಿ ಇದು ರೂಪುಗೊಂಡಿದೆ. 1000ನೇ ಬಿಎಂಟಿ ರೋಗಿಯು 10 ವರ್ಷದ ಕೋಲಾರದ ಬಾಲಕನಾಗಿದ್ದು, ಅಪ್ಲೆಸ್ಟಿಕ್ ಅನೀಮಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿರಂತರ ಶೋಧದ ಬಳಿಕ ನಾರಾಯಣ ಹೆಲ್ತ್ ತಂಡ ಸೂಕ್ತ ದಾನಿಯನ್ನು ಜರ್ಮನಿ ರಿಜಿಸ್ಟ್ರಿಯಲ್ಲಿ ಗುರುತಿಸಿಕೊಟ್ಟಿತು. ಈ ಚಿಕಿತ್ಸಾ ವೆಚ್ಚಕ್ಕೆ ಇಎಸ್‍ಐ ಅನುದಾನ ನೀಡಿದ್ದು, ಜತೆಗೆ ಗುಂಪು ಮೂಲದಿಂದಲೂ ಧನ ಸಂಗ್ರಹ ಮಾಡಲಾಗಿತ್ತು.

ಅಸ್ಥಿಮಜ್ಜೆ ದಾನಿ ರಿಜಿಸ್ಟ್ರಿ ಇಂಡಿಯಾ ಪ್ರಕಾರ, ಯಾವುದೇ ಸಮಯದಲ್ಲಿ, ವಿಶ್ವಾದ್ಯಂತ 3000 ರೋಗಿಗಳು ಅಂಗಾಂಶ ದಾನಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಶೇಕಡ 30ಕ್ಕಿಂತಲೂ ಕಡಿಮೆ ಮಂದಿ ಸೂಕ್ತ ದಾನಿಗಳನ್ನು ತಮ್ಮ ಕುಟುಂಬಗಳಲ್ಲಿ ಗುರುತಿಸಲು ಸಾಧ್ಯವಾಗುತ್ತಿದೆ. ಉಳಿದ ಶೇಕಡ 70ರಷ್ಟು ಮಂದಿ ಸಂಬಂಧವೇ ಇಲ್ಲದ ದಾನಿಗಳನ್ನು ಅವಲಂಬಿಸಿದ್ದು, ಸೂಕ್ತ ಸಂಭಾವ್ಯ ಚಿಕಿತ್ಸೆಗೆ ದೊರಕುತ್ತಿರುವವರ ಸಂಖ್ಯೆ ತೀರಾ ಕಡಿಮೆ. ಈ ಕೊರತೆಯನ್ನು ನೀಗಿಸಲು ಕಾರ್ಡ್ ಬ್ಲಡ್ ಬ್ಯಾಂಕಿಂಗ್ ಸೌಲಭ್ಯವನ್ನು ಎರಡು ವರ್ಷ ಹಿಂದೆ ಆರಂಭಿಸಿದೆ. ಇದು ಸರ್ಕಾರಿ ಹಾಗೂ ಖಾಸಗಿ ಕಾರ್ಡ್ ಬ್ಲಡ್ ಸೌಲಭ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಬಯೋಕಾನ್ ಲಿಮಿಟೆಡ್‍ನ ಅಧ್ಯಕ್ಷೆ ಮತ್ತು ಆಡಳಿತ ನಿರ್ದೇಶಕರಾದ ಡಾ.ಕಿರಣ್ ಮಜೂಂದಾರ್ ಶಾ “ಭಾರತವನ್ನು ವಿಶ್ವದ ಅತಿದೊಡ್ಡ ಅಸ್ಥಿಮಜ್ಜೆ ಕಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಕೈಜೋಡಿಸಲು ನನಗೆ ಹೆಮ್ಮೆ ಎನಿಸುತ್ತಿದೆ. ಈ ಕೇಂದ್ರ ಇಂದು ಹಲವು ಮಂದಿಗೆ ಕೇಸ್ ಸ್ಟಡಿ ಕೇಂದ್ರವಾಗಿ ರೂಪುಗೊಂಡಿದ್ದು, ಇದೀಗ ವಿಶ್ವದರ್ಜೆಯ ಚಿಕಿತ್ಸೆಯೊಂದಿಗೆ ರಕ್ತಸಂಬಂಧ ರೋಗಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ” ಎಂದು ಹೇಳಿದರು.

ನಾರಾಯಣ ಹೆಲ್ತ್‍ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿದೇರ್ಶಕ ಡಾ.ದೇವಿ ಶೆಟ್ಟಿ “ಇಂದು ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೋಗಿಗಳು ಗಂಭೀರ ರಕ್ತ ಸಂಬಂಧಿ ರೋಗಗಳಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಧೀರ್ಘಾವಧಿ ಚಿಕಿತ್ಸೆಯಾಗಿ ಇವರಿಗೆ ಅಸ್ಥಿಮಜ್ಜೆ ಕಸಿಯೊಂದೇ ಮಾರ್ಗವಾಗಿದೆ. ವಿಶ್ವದರ್ಜೆಯ ಚಿಕಿತ್ಸೆ ನೀಡುವ ಉದ್ದೇಶದಿಂದ ನಾವು 2004ರಲ್ಲಿ ಘಟಕವನ್ನು ಆರಂಭಿಸಿದ್ದು, ಇದೀಗ 1000 ಬಿಎಂಟಿ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ.ಬಿಎಂಟಿ ಚಿಕಿತ್ಸೆಯನ್ನು ಎಲ್ಲ ಫಲಾನುಭವಿಗಳಿಗೆ ನೀಡುವ ನಿಟ್ಟಿನಲ್ಲಿ ನಾವು ಇನ್ನೂ ದೊಡ್ಡ ಹಾದಿಯನ್ನು ಕ್ರಮಿಸಬೇಕಿದೆ” ಎಂದು ವಿವರಿಸಿದ್ದಾರೆ.

ಬಿಎಂಟಿ ಚಿಕಿತ್ಸಾಕ್ರಮವು ಹಲವು ಕ್ಯಾನ್ಸರೇತರ ರೋಗಗಳಾದ ಅಪ್ಲಾಸ್ಟಿಕ್ ಅನೀಮಿಯಾ, ರೋಗ ನಿರೋಧಕ ವ್ಯತ್ಯಯಗಳು, ಕಂಜೆನ್‍ಶನಲ್ ಸ್ಟೋರೇಜ್ ಡಿಸಾರ್ಡರ್, ಕಂಜೆನ್‍ಶನಲ್ ಎರರ್ ಮತ್ತು ಹಿಮೋಗ್ಲೋಬಿನ್ ಸಂಬಂಧಿ ರೋಗಗಳಾದ ಥಲಸೇಮಿಯಾ ಮತ್ತು ಸಿಕಲ್ ಸೆಲ್ ಅನೀಮಿಯಾಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೆಲ ಕ್ಯಾನ್ಸರ್‍ಕಾರಕ ಸ್ಥಿತಿಗಳಾದ ಅಕ್ಯೂಟ್ ಮತ್ತು ಕ್ರೋನಿಕ್ ಮೆಲಾಯ್ಡ್ ಮತ್ತು ಲಿಂಪೋಬ್ಲಾಸ್ಟಿಕ್ ಲ್ಯಕೇಮಿಯಾ, ಹಾಕಿನ್ಸ್ ಅಂಡ್ ನಾನ್ ಹಾಕಿನ್ಸ್ ಲಿಂಫೋಮಾ, ಮೈಲೊಪ್ರೊಪೈಫರೇಟಿವ್ ನಿಯೊಪ್ಲೆಸಮಸ್, ಪ್ರಾಥಮಿಕ ಮೈಲೊಫಿಬ್ರೋಸಿಸ್ ಮತ್ತು ಮಲ್ಟಿಪಲ್ ಮಯಲೊಮಾಗಳಿಗೂ ಬಿಎಂಟಿ ಚಿಕಿತ್ಸೆ ಅನಿವಾರ್ಯವಾಗುತ್ತದೆ.

ನಾರಾಯಣ ಹೆಲ್ತ್ ಸಿಟಿ ಅಸ್ಥಿಮಜ್ಜೆ ಕಸಿ ಘಟಕದ ಮುಖ್ಯಸ್ಥ, ಮಂಜೂಂದರ್ ಶಾ ವೈದ್ಯಕೀಯ ಕೇಂದ್ರದ ಕ್ಲಿನಿಕಲ್ ನಿರ್ದೇಶಕ ಡಾ.ಶರತ್ ದಾಮೊದರ್ ಮಾತನಾಡಿ, ದೇಶದಲ್ಲಿ ಅಸ್ಥಿಮಜ್ಜೆ ಬೇಡಿಕೆ ಮತ್ತು ಕಸಿ ನಡುವೆ ದೊಡ್ಡ ಅಂತರವಿದೆ. ಪ್ರಸ್ತುತ ಸುಮಾರು 2 ಲಕ್ಷ ಮಂದಿ ನೋಂದಾಯಿತ ದಾನಿಗಳಿದ್ದಾರೆ. ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ ಕನಿಷ್ಠ 10 ಲಕ್ಷ ದಾನಿಗಳು ನೋಂದಾಯಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಸಾಮಥ್ರ್ಯದಲ್ಲಿ 150 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸಾಮಥ್ರ್ಯವನ್ನು ಮುಂದಿನ ಎರಡು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿಸುವಗುರಿ ಹೊಂದಿದ್ದು, ಇದರಿಂದ ವರ್ಷಕ್ಕೆ 300 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ನಾವು ಸೆಲ್ಯುಲರ್ ಇಮ್ಯುನೊಥೆರಪಿ ಎಂಬ ದೇಹದ ತಮ್ಮದೇ ರೊಗನಿರೋಧಕ ಶಕ್ತಿಯನ್ನು ಕ್ಯಾನರ್ಸ್ ವಿರುದ್ಧ ಹೋರಾಡುವಂತೆ ಅಭಿವೃದ್ಧಿಪಡಿಸುವ ವಿನೂತನ ವಿಧಾನವನ್ನು 2020ರೊಳಗೆ ಆರಂಭಿಸಲಿದ್ದು, ಇದು ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ. 2004ರಲ್ಲಿ ನಾಲ್ಕು ವರ್ಷದ ಪುಟ್ಟ ಮಗುವನ್ನು ಥಲಸೀಮಿಯಾ ರೋಗಕ್ಕಾಗಿ ಚಿಕಿತ್ಸೆ ನೀಡಲು ಆರಂಭಿಸದಲ್ಲಿಂದ ಹಿಡಿದು, ಇದೀಗ 1000ನೇ ಚಿಕಿತ್ಸೆಯನ್ನು ಅಪ್ಲಾಸ್ಟಿಕ್ ಅನೀಮಿಯಾಪೀಡಿತ 10 ವರ್ಷದ ಕೋಲಾರ ಮೂಲದ ಬಾಲಕನಿಗೆ ನೀಡಲಾಗಿದೆ.

ಮಜೂಂದರ್ ಶಾ ಕ್ಯಾನ್ಸರ್ ಕೇಂದ್ರವು ಇಂದು ದೇಶದಲ್ಲಿ ಬಿಎಂಟಿ ಚಿಕಿತ್ಸೆಯಲ್ಲಿ ಶ್ರೇಷ್ಠತಾ ಕೇಂದ್ರವಾಗಿ ರೂಪುಗೊಂಡಿದೆ

ಭಾರತ ಇಂದು ವಾರ್ಷಿಕ ಸುಮಾರು 1500 ಬಿಎಂಟಿ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇತರ ದೇಶಗಳಾದ ಚೀನಾ, ಜಪಾನ್, ಕೊರಿಯಾಗೆ ಹೋಲಿಸಿದರೆ ಇದು ಕಡಿಮೆ. ಈ ದೇಶಗಳಲ್ಲಿ ಸುಮಾರು 8000 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಾರಾಯಣ ಹೆಲ್ತ್ ಸಿಟಿ ಮಜೂಂದರ್ ಶಾ ಕ್ಯಾನ್ಸರ್ ಕೇಂದ್ರದ ಮಕ್ಕಳ ಕ್ಯಾನ್ಸರ್, ಹೆಮೆಟಾಲಜಿ ಮತ್ತು ಅಸ್ಥಿಮಜ್ಜೆ ಕಸಿ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಸುನೀಲ್ ಭಟ್ ಮಾತನಾಡಿ, “ಭಾರತದಲ್ಲಿ ಹೆಮೆಟಾಲಾಜಿಕಲ್ ವ್ಯತ್ಯಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 80 ಸಾವಿರದಿಂದ ಒಂದು ಲಕ್ಷ ಮಕ್ಕಳು ಗಂಭೀರ ಪ್ರಮಾಣದ ಜನ್ಮಜಾತ ರಕ್ತಸಂಬಂಧಿ ರೋಗಗಳೊಂದಿಗೆ ಹುಟ್ಟುತ್ತಿದ್ದಾರೆ. ಬಿಎಂಟಿ ಚಿಕಿತ್ಸೆ ನಿರ್ವಹಿಸಿದ 1000 ಪ್ರಕರಣಗಳಲ್ಲಿ ಶೇಕಡ 60ರಷ್ಟು ಪ್ರಕರಣಗಳು ಮಕ್ಕಳ ರೋಗಗಳಾಗಿದ್ದು, ಕೆಲ ವಾರಗಳ ಶಿಶುಗಳೂ ಸೇರಿವೆ. ಇದು ದೇಶದಲ್ಲಿ ಮಕ್ಕಳ ಅಸ್ಥಿಮಜ್ಜೆ ಕಸಿಯ ಸೂಚಕವಾಗಿದೆ. ಈ ಸೂಚಕಗಳು ಕ್ಯಾನ್ಸರ್‍ಕಾರಕ ಲ್ಯುಕೇಮಿಯಾದಿಂದ ಹಿಡಿದು, ಕ್ಯಾನ್ಸರ್‍ಕಾರಕ ವಂಶವಾಹಿ ಕಾರಣಗಳಾದ ಪ್ರತಿರೋಧ ಶಕ್ತಿ ಕೊರತೆ ಮತ್ತು ಥಲಸೇಮಿಯಾವನ್ನೂ ಒಳಗೊಂಡಿದೆ.

ಅಂತೆಯೇ ಬಿಎಂಟಿ ಚಿಕಿತ್ಸೆಯಿಂದ ಗುಣಪಡಿಸಲಾಗುವ ಸಂಭಾವ್ಯ ಪ್ರಕರಣಗಳು ಕೂಡಾ ಹೆಚ್ಚುತ್ತಿವೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಸಂಬಂಧಪಡದ ದಾನಿಗಳ ಮತ್ತು ಅರ್ಧದಷ್ಟು ಹೊಂದಾಣಿಕೆಯಾಗುವ ದಾನಿಗಳನ್ನು ಪೂರ್ಣ ಹೊಂದಾಣಿಕೆಯಾಗದ ಕುಟುಂಬಗಳ ರೋಗಿಗಳಿಗೆ ನಿರ್ವಹಿಸುತ್ತಿರುವುದು. ಅರ್ಧ ಹೊಂದಾಣಿಕೆಯಾಗುವ ಕಸಿಗಳನ್ನು ನಿರ್ವಹಿಸುವಲ್ಲಿ ನಮ್ಮ ಸಂಸ್ಥೆ ದೊಡ್ಡ ಅನುಭವವನ್ನು ಹೊಂದಿದ್ದು, ಟಿಸಿಆರ್ ಆಲ್ಫಾ / ಬೆಟಾ ಡಿಪ್ಲೇಶನ್‍ನಂಥ ಚಿಕಿತ್ಸಾ ಸೌಲಭ್ಯಗಳಿಂದಾಗಿ ಅದ್ಭುತ ಫಲಿತಾಂಶ ಸಾಧ್ಯವಾಗುತ್ತಿದೆ ಎಂದು ಸುನಿಲ್ ಭಟ್ ಹೇಳಿದರು.

ಪ್ರಸ್ತುತ ಬಿಎಂಟಿಯನ್ನು ಸರ್ಕಾರಿ ಆರೋಗ್ಯ ಯೋಜನೆಗಳಾದ ವಾಜಪೇಯಿ ಆರೋಗ್ಯ ಮತ್ತು ಆಯುಷ್ಮಾನ್ ಭಾರತದಂಥ ಯೋಜನೆಗಳಲ್ಲಿ ಸೇರಿಸಿಲ್ಲ. ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಸ್ವಲ್ಪ ನೆರವು ಮಾತ್ರ ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿ ಚಿಕಿತ್ಸೆಯನ್ನು ರಾಷ್ಟ್ರೀಯ ಆರೋಗ್ಯ ಯೋಜನೆಗಳಲ್ಲಿ ಸೇರಿಸುವಂತೆ ಒತ್ತಾಯಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಾರಾಯಣ ಹೆಲ್ತ್ ಮುಂದಾಗಿದೆ. ಇದು ಬಿಎಂಟಿ ಚಿಕಿತ್ಸೆ ಪಡೆಯುವ ದೊಡ್ಡ ಪ್ರಮಾಣದ ಫಲಾನುಭವಿಗಳಿಗೆ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ನೆರವಾಗಲಿದೆ.

Back To Top