ನಮ್ಮ ಧ್ವನಿಯನ್ನು ನಾವು ಅರಿಯೋಣ

ನಮ್ಮ ಧ್ವನಿಯನ್ನು ನಾವು ಅರಿಯೋಣ. ಮಾನವ ಧ್ವನಿ, ವಿಶಿಷ್ಟವಾದದ್ದು. ಅದು ಬಳಸಿದಷ್ಟೂ ಶಕ್ತಿಶಾಲಿ, ವೈವಿಧ್ಯಮಯ ಹಾಗೂ ಅರ್ಥಪೂರ್ಣ.ಧ್ವನಿಯ ನಿರ್ವಹಣೆ ಹಾಗೂ ಧ್ವನಿ, ಧ್ವನಿ ಪೆಟ್ಟಿಗೆ, ಧ್ವನಿ ತಂತುಗಳು ಇವುಗಳನ್ನು ರಕ್ಷಿಸಬೇಕಾಗಿದೆ. 

ಮಗು ಹುಟ್ಟಿದೊಡನೆ ಅಳುವ ಧ್ವನಿ, ತಾಯಿಗಾಗಿ, ಹಸಿವಿಗಾಗಿ, ನೋವಿಗಾಗಿ, ತರತರಹ ಪರಿವರ್ತನೆಯಾಗುವುದನ್ನು ಗಮನಿಸಿದಾಗ, ಸಂವಹನದ ಮೂಲಮಂತ್ರದ ಸಾಕ್ಷಾತ್ಕಾರದ ಅರಿವಾಗುತ್ತದೆ. ಬೆಳೆದಂತೆ ಮಗು, ಇತರರ ಧ್ವನಿ, ಸುತ್ತಮುತ್ತಲಿನ ಶಬ್ದಗಳನ್ನು ಕೇಳಿಸಿಕೊಂಡು, ಗ್ರಹಿಸಿಕೊಳ್ಳುತ್ತಾ, ಅವರೊಡನೆ ಪ್ರತಿಕ್ರಿಯಿಸುವಾಗ, ಧ್ವನಿಯ ಬಳಕೆ ಮೂಲಕ ಸಂವಹನ ವಿನಿಮಯವಾಗುತ್ತದೆ. ಆದರೆ ಎಷ್ಟು ಜನರಿಗೆ ಅವರ ಧ್ವನಿಯ ಪರಿಚಯವಿರುತ್ತದೆ? ಪ್ರಾಣಿ ಲೋಕದಲ್ಲೂ, ಚಿಕ್ಕ ಪ್ರಾಣಿಗಳಿಂದ ಹಿಡಿದು ದೊಡ್ಡ ಪ್ರಾಣಿಗಳವರೆಗೆ, ವಿವಿಧ ಪಕ್ಷಿಗಳು, ಕೀಟಗಳು, ಎಲ್ಲ ತಮ್ಮ ತಮ್ಮ ಗುಂಪಿನವರೊಂದಿಗೆ, ವಿವಿಧ ರೀತಿಯ ಧ್ವನಿ ಸದ್ದು ಮಾಡಿ, ಸಂಪರ್ಕ ಸಂವಹನ ಮಾಡುತ್ತವೆ. ಆದರೆ ಇವ್ಯಾವುದಕ್ಕೂ, ಮಾತು, ಅರ್ಥಪೂರ್ಣ ಶಬ್ದಗಳು, ಅವುಗಳ ಒಂದು ಕ್ರಮದ ಬಳಕೆ ನಮ್ಮಂತೆ ಇಲ್ಲದಿರುವುದರಿಂದ ಅಥವಾ ನಮಗೆ ಅವು ಅರ್ಥವಾಗದೆಂದುಕೊಂಡರೂ, ಮಾನವ ಧ್ವನಿ, ವಿಶಿಷ್ಟವಾದದ್ದು. ಅದು ಬಳಸಿದಷ್ಟೂ ಶಕ್ತಿಶಾಲಿ, ವೈವಿಧ್ಯಮಯ ಹಾಗೂ ಅರ್ಥಪೂರ್ಣ. ಆದರೆ ನಮ್ಮ ನಮ್ಮ ಧ್ವನಿಯ ಶಕ್ತಿ ಹಾಗೂ ದೌರ್ಬಲ್ಯಗಳನ್ನು ನಾವು ಗಮನಿಸಿ, ಪರೀಕ್ಷಿಸಿ, ವಿಶ್ಲೇಷಿಸಿ, ತಿಳಿದುಕೊಳ್ಳದಿದ್ದರೆ, ಎಲ್ಲರ ಧ್ವನಿಯೂ ಒಂದೇ, ಅದರಲ್ಲೇನು ವ್ಯತ್ಯಾಸ ಅಥವಾ ವಿಶೇಷವಿದೆ ಎಂದೇ ಮೂಗು ಮುರಿಯುತ್ತೇವೆ.

ಧ್ವನಿಯ ಪ್ರಪಂಚ:

ಮನೆಯಲ್ಲಿ ನನ್ನ ತಂದೆ ಎನ್.ಎಸ್ ವಾಮನ್ ರೇಡಿಯೋ ಮಾಧ್ಯಮವಾದ ಆಕಾಶವಾಣಿ ಹಾಗೂ ರಂಗಮಾಧ್ಯಮದಲ್ಲಿ ರಂಗಭೂಮಿ ಮೇಲೆ, ಸತತ ನಾಟಕಗಳ ನಿರ್ದೇಶನ, ನಿರ್ಮಾಣ, ಅಭಿನಯ, ನಾಟಕಗಳ ರಚನೆ ಮಾಡಿಸುವುದು, ವೃತ್ತಿ ರಂಗಭೂಮಿಯ ನಾಟಕಗಳನ್ನು ಬಾನುಲಿಗೆ ಅಳವಡಿಸುವ ಕೆಲಸದಲ್ಲಿ ಸತತ ತೊಡಗಿದ್ದರಿಂದ, ನನ್ನ ಮನೆಯಲ್ಲಿ, ಹೊರಗೆ, ಸತತ ನಾಟಕಗಳ ರಿಹರ್ಸಲ್, ರೇಡಿಯೋ ನಾಟಕಗಳ ಆಲಿಸುವಿಕೆ ರಂಗನಾಟಕಗಳ ದರ್ಶನ, ಇವೆಲ್ಲವುಗಳಿಂದ ಈ ಧ್ವನಿಯಲ್ಲೇ ಏನೋ ಗಮ್ಮತ್ತಿದೆ, ಇದನ್ನು ಅರಿಯಬೇಕೆಂಬ ಕುತೂಹಲ ನನ್ನಲ್ಲಿ ಮೂಡಿತ್ತು.

ಬಾಲ್ಯದಿಂದ ನಾನು ಕನ್ನಡಿ ಮುಂದೆ ನಿಂತು, ಭಾಷಣ, ನಾಟಕ ಸಂಭಾಷಣೆಯ ಸಾಲುಗಳನ್ನು ಜೋರಾಗಿ ಹೇಳುತ್ತಿದ್ದಾಗಲೆಲ್ಲ, ನನ್ನ ಧ್ವನಿ, ಪಾತ್ರದ ಮಾತುಗಳ ಏರಿಳಿತಗಳು, ನನ್ನ ಕಿವಿಗೆ ಸ್ವಷ್ಟವಾಗಿ ಮುಟ್ಟುತ್ತಿದ್ದವು. ಆಕಾಶವಾಣಿಗಾಗಿ ಹೊರಾಂಗಣದಲ್ಲಿ ನೂರಾರು ಮಕ್ಕಳ ಕಾರ್ಯಕ್ರಮಗಳನ್ನು ಧ್ವನಿಮುದ್ರಿಸುತ್ತಿದ್ದಾಗ, ಆಗಾಗ ಮಕ್ಕಳ ಕಿವಿಗಳಿಗೆ, ನಮ್ಮ headphone ಹಾಕಿ, ಅವರ ರೆಕಾರ್ಡ್ ಆದ ಧ್ವನಿ ಕೇಳಿಸಿದಾಗ, ಅವರ ಮುಖದ ಮೇಲಿನ ಆಶ್ಚರ್ಯ ಪ್ರತಿಬಾರಿ ನಾನು ಗ್ರಹಿಸಿದ್ದೇನೆ. ನನ್ನ 7ನೇ ವರ್ಷದಿಂದ ಇದುವರೆಗೆ ರೇಡಿಯೋ ಹಾಗೂ ರಂಗಭೂಮಿ ಮೇಲೆ, ಸಾವಿರಾರು ಪಾತ್ರಗಳನ್ನು ಮಾಡಿದಾಗ, ರೇಡಿಯೋ ಕೇಂದ್ರದ ಸ್ಟುಡಿಯೋದಲ್ಲಿ, ನಿಶ್ಯಬ್ದ ಮೌನದ ವಾತಾವರಣದಲ್ಲಿ, ಮೈಕ್ ಮುಂದೆ ಮಾತನಾಡಿದಾಗ, ನಾಟಕವಾಡಿದಾಗ, ಆಗುವ ಅನುಭವವೇ ಬೇರೆ.

ರಂಗಭೂಮಿ ಮೇಲೆ ನೂರಾರು, ಸಾವಿರಾರು ಜನರ ಧ್ವನಿಗಳ ತಾಕಲಾಟದ ಮಧ್ಯೆ, ರಂಗದ ಮೈಕಿನ ಮುಂದೆ ಆಡುವ ನಾಟಕದ ಸಂಭಾಷಣೆಗಳು, ನಮ್ಮ ಹಾಗೂ ಅಲ್ಲಿದ್ದವರ ಕಿವಿಗಳಿಗೆ ಮುಟ್ಟುವ ಮಾರ್ಗದಲ್ಲಿ, ಮೂಲಧ್ವನಿಯೊಂದಿಗೆ ಧ್ವನಿಪೆಟ್ಟಿಗೆಗಳ ಪ್ರತಿಧ್ವನಿಗಳು ಒಗ್ಗೂಡಿದಾಗ, ಪ್ರೇಕ್ಷಕರ ಕಿವಿಗಳಿಗೆ ಕೇಳಿಸುವ ಧ್ವನಿ ಪ್ರಪಂಚ ಬೇರೇನೇ! ಹಾಗಾದರೆ ನಮ್ಮ ಧ್ವನಿ ಹೇಗಿದೆ? ಅದರ ಬಗ್ಗೆ ತಿಳಿದುಕೊಂಡಾಗ, ಅದರ ಸ್ವರೂಪ, ಮಟ್ಟ, ತರಹ, ಬಳಕೆ, ಎಲ್ಲ ಅರಿಯುತ್ತ ಹೋದಾಗ, ದೊಡ್ಡ ಪ್ರಪಂಚದ ಬಾಗಿಲು ತೆರೆಯುತ್ತದೆ. ಸಂವಹನದ ಮೂಲವಾದ ಮಾನವ ಧ್ವನಿ ಅಧ್ಭುತವಾದದ್ದು. ಪುಪ್ಪಸದಿಂದ ಬಂದ ಗಾಳಿ, ಗಂಟಲಿನ ಧ್ವನಿಪೆಟ್ಟಿಗೆಯ ಧ್ವನಿ ತಂತುಗಳ ಮೂಲಕ ಹಾದು ಹೋಗುವಾಗ, ಉಂಟಾದ ಕಂಪನಗಳಿಂದ ನಾಲಿಗೆ ಬಾಯಿಂದ ಹೊರಬರುವ ಶಬ್ದವೇ ಧ್ವನಿ. ಸಾಮಾನ್ಯವಾಗಿ ಬಾಲ್ಯದಲ್ಲಿ ಹುಡುಗ ಹುಡುಗಿಯರಿಬ್ಬರ ಧ್ವನಿಯೂ ಮಧುರವಾಗಿ ಮಂಜುಳವಾಗಿದ್ದರೂ, ಹದಿಹರೆಯದಲ್ಲಿ ಧ್ವನಿ ಒಡೆದು, ತರುಣರ ಧ್ವನಿ ಗಡುಸಾಗಿರುತ್ತದೆ,. ತರುಣಿಯರ ಧ್ವನಿ ಕೀರಲಾಗುತ್ತದೆ. ಸರಿಯಾಗಿ ಕಿವಿ ಕೇಳದಿದ್ದವರಿಗೆ, ಧ್ವನಿಪೆಟ್ಟಿಗೆ ದೋಷವಿದ್ದವರಿಗೆ, ಸ್ವಷ್ಟಮಾತು ಕೇಳದೇ, ಮಾತನಾಡಲಾಗದೇ, ಸಂವಹನದ ಧ್ವನಿ ದೋಷಪೂರಿತವಾಗಿರುತ್ತದೆ. ಇದನ್ನು ಬಿಟ್ಟರೆ ಪ್ರತೀ ಮಾನವನ ಧ್ವನಿ ಮೂಲ ಸ್ವರೂಪವಿದ್ದಂತೆ, ನಾವು ಬಳಸಿದಂತೆ, ರೂಢಿ ಮಾಡಿಕೊಂಡಂತೆ ಬಳಕೆಯಾಗುತ್ತದೆ.ನಮ್ಮ ಧ್ವನಿಯನ್ನು ನಾವು ಅರಿಯೋಣ

ಬಾನುಲಿ ಕೇಂದ್ರದ ಧ್ವನಿ ಪರೀಕ್ಷೆ

ಸಂವಹನದಲ್ಲಿ ಧ್ವನಿಯ ಉತ್ತಮ ಬಳಕೆಯಾಗುವ, ರೇಡಿಯೋ ಮಾಧ್ಯಮದಲ್ಲಿ, ಸಂಗೀತದ ಧ್ವನಿಪರೀಕ್ಷೆಯಲ್ಲಿ, ಶಾಸ್ತ್ರೀಯ, ಲಘು ಶಾಸ್ತ್ರೀಯ, ಲಘುಸಂಗೀತ, ಭಾವಗೀತೆ ಎಂದು ವಿಂಗಡಣೆಯಿದೆ. ಗಾಯನ ಚೆನ್ನಾಗಿ ಕಲಿತಿದ್ದರೂ, ಸಾಕಷ್ಟು ತರಬೇತಿಯಾಗಿದ್ದರೂ, ಮೈಕ್ ಮುಂದೆ ಹಾಡಿದಾಗ, ರೇಡಿಯೋಗೆ ಅರ್ಹವಾದ ಧ್ವನಿ ಇರದವರನ್ನೂ ಕಂಡಿದ್ದೇನೆ. ರಂಗದ ಮೇಲೆ ಹಾಡುವ ಹಲವಾರು ಜನ, ರೇಡಿಯೋ ಧ್ವನಿಪರೀಕ್ಷೆಯಲ್ಲಿ ನಪಾಸ್ ಆಗುತ್ತಾರೆ. ಉದಾ: ಬಹು ಹಿಂದೆ ಅಮಿತಾಬ್ ಬಚ್ಚನ್, ಜೇಸುದಾಸ್, ರೇಡಿಯೋ ಧ್ವನಿಪರೀಕ್ಷೆಯಲ್ಲಿ ಫೇಲ್ ಆಗಿದ್ದರಂತೆ. ಇದಕ್ಕೆ ವ್ಯತಿರಿಕ್ತವಾಗಿ, ರೇಡಿಯೋದಲ್ಲಿ ಪಾಸಾದ ಸಂಗೀತಗಾರರು, ರಂಗಕಛೇರಿಗಳಲ್ಲಿ ಅಯಶಸ್ವಿಯಾದವರೂ ಇದ್ದಾರೆ. ಇದಕ್ಕೆ ಮೂಲ ಕಾರಣ, ಕಲಾವಿದರ ಧ್ವನಿ, ತಮ್ಮ ಧ್ವನಿ ಬಗ್ಗೆ ಅವರಿಗಿರುವ ಅರಿವು, ಅವರು ಬಳಸುವ ಶೈಲಿ, ಹಾಗೂ ಅವರು ಧ್ವನಿಗೆ ನೀಡುವ ತರಬೇತಿ.

ನಾಟಕದ ಧ್ವನಿಪರೀಕ್ಷೆಯಲ್ಲಿ, base voice (ಗಂಭೀರ ಧ್ವನಿ) ಇದ್ದವರು, ರಾಜ, ದೇವತೆ ಮಹಾತ್ಮರ ಪಾತ್ರಕ್ಕೆ ಲಾಯಕ್ಕು. Harsh voice (ಗಡಸು ಧ್ವನಿ), ರಾಕ್ಷಸ, ರೌದ್ರ, ಪಾತ್ರಗಳಿಗಾದರೆ, soft voice (ಇಂಪಾದ ಮೃದು ಧ್ವನಿ) ಶೃಂಗಾರ ರಸದ ರಾಜ, ಪ್ರೇಮಿ, ದೇವತೆ ಪಾತ್ರಗಳಿಗೆ ಮೀಸಲು. Shrill voice (ಕೀರಲು ಧ್ವನಿ) ಹಾಗೂ ವಿಚಿತ್ರ ಧ್ವನಿಗಳು ಹಾಸ್ಯ ಪಾತ್ರಕ್ಕೆ, ಗುಂಪು ಪಾತ್ರಕ್ಕೆ. ರಂಗದ ಮೇಲೆ ನಟ ನಟಿಯರ ವ್ಯಕ್ತಿತ್ವ, ನಿಲುವು, ಭಾವ, ಭಂಗಿ ಮುಖ್ಯವಾದರೆ, ರೇಡಿಯೋದಲ್ಲಿ ಧ್ವನಿಯೇ ಪ್ರಧಾನ, ಧ್ವನಿಯೊಂದೇ ವಿಧಾನ. ರೇಡಿಯೋ ನಾಟಕದಲ್ಲಿ voice age ಎನ್ನುತ್ತೇವೆ. ಕಾಣದ ವ್ಯಕ್ತಿಯ ಧ್ವನಿ ಕಿವಿ ಮೂಲಕ ಕೇಳಿದಾಗ, ಪಾತ್ರದ ವಯಸ್ಸು, ವರ್ಗ, ಧರ್ಮ, ಪ್ರದೇಶ, ನಮ್ಮ ಕಣ್ಣಮುಂದೆ ಬರುತ್ತವೆ. ಪಾತ್ರಧಾರಿಯ ನೈಜ ವಯಸ್ಸಿಗಿಂತ, ಆತನ ಧ್ವನಿ ಸೃಷ್ಟಿಸುವ ವಯಸ್ಸು, voice age. ನರಪೇತಲ ಭೀಮನಾಗಿ ಗರ್ಜಿಸುವುದು, ಕುರೂಪಿಯ ಸುಂದರ ಧ್ವನಿ ಕೃಷ್ಣನಾಗಿ, ಕುಳ್ಳಿಯ ಕಂಠ ಸೀತೆಯಾಗಿ, 50 ವರ್ಷದವ ಪ್ರೇಮ ನಾಯಕನಾಗಿ, 25 ವರ್ಷದ ಯುವಕ ಮುದುಕನಾಗಿ ಕೇಳಿಸುತ್ತಾರೆ. ಇದು ಇರುವ ಧ್ವನಿ ಹಾಗೂ ಧ್ವನಿಯ ತರಬೇತಿಯಿಂದ ಸಾಧ್ಯ. ಹೀಗಾಗಿ ಧ್ವನಿಯನ್ನು ಗಡಸು/ಕೀರಲು, ಗಂಡು/ಹೆಣ್ಣು, ಮಗು/ಹದಿಹರಿಯದವ/ ವೃದ್ಧ ಎಂದು ಗುರುತಿಸುತ್ತೇವೆ. ಶಾಲೆ ಕಾಲೇಜು ವೇದಿಕೆಗಳಲ್ಲಿ ನೀನು ಆ ಗಾಯಕಿಯಂತೆ ಚಿತ್ರಗೀತೆ ಚೆನ್ನಾಗಿ ಹಾಡ್ತೀಯಾ, ನೀನು ಚಿತ್ರಗೀತೆ ಈ ಗಾಯಕಿಯಂತೆ ಮುಂದುವರೆಸು, ನೀನು ನಾಟಕ/ರೂಪಕ ಚಿನ್ನಾಗಿ ಮಾಡ್ತಿ ಅಲ್ಲೇ ಮುಂದುವರಿ, ನಿನ್ನ ಧ್ವನಿ ಭಾಷಣಕ್ಕೆ ಸರಿ. ನೂರಾರು ಜನರಿಗೆ ಸ್ವಷ್ಟವಾಗಿ ಮುಟ್ಟುತ್ತೆ ನಿನ್ನ ಧ್ವನಿ ಮಟ್ಟಕ್ಕೆ ಮೈಕೇ ಬೇಡ, ಎಂಬ ಗೆಳೆಯರ / ಅನುಭವಿಗಳ ಮಾತು, ಧ್ವನಿಯ ಮಹತ್ವ ಹಾಗೂ ಬಳಕೆಯ ಸಾಧ್ಯತೆ ಬಗ್ಗೆ ತಿಳಿಸುತ್ತೆ.

ಧ್ವನಿಯೇ ಇಲ್ಲದಿದ್ದಾಗ

ನಿಮ್ಮ ಧ್ವನಿಯನ್ನು ಯಾವಾಗಲಾದರೂ ಕಳೆದುಕೊಂಡಿದ್ದಿರಾ? ನಮ್ಮ ಧ್ವನಿಯನ್ನು ಹೆಚ್ಚಾಗಿ ಬಳಸಿದಾಗ, ಜೋರಾದ ಧ್ವನಿಯಲ್ಲಿ, ಜನರ ಗದ್ದಲದ ಮಧ್ಯೆ ಸತತ ಕೂಗಿದಾಗ ನಾಟಕಗಳಲ್ಲಿ ವೀರ-ರೌದ್ರ ರಸದ ಪಾತ್ರಗಳಲ್ಲಿ ಅರಚಿದಾಗ, ಕರುಣಾ ರಸ ಪಾತ್ರಗಳಲ್ಲಿ ಬಹಳ ಕಾಲ ಅತ್ತಾಗ, ಧ್ವನಿ ಕೂತು, ಮಾತನಾಡಲಾಗದ ಸ್ಥಿತಿ ನಾನೇ ಹಲವಾರು ಬಾರಿ, ಅನುಭವಿಸಿದ್ದೇನೆ. ಮಾತಾಡಲು ಆಗದೇ ಆಗದು ಎಂಬಷ್ಟು ಧ್ವನಿ ಸ್ತಭ್ದವಾದಾಗ, ನಾನು ಮಾತನಾಡಲಾಗೋದಿಲ್ಲ. voice rest ನೀವು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಬರೆದು ತೋರಿಸುತ್ತೇನೆ ಎಂದು, ನನ್ನ ಕಛೇರಿ ಟೇಬಲ್ ಬಳಿ ಬೋರ್ಡ್ ಹಾಕಿದ್ದೂ ನನಗೆ ನೆನಪಿದೆ. ಪ್ರತಿದಿನದ ನಮ್ಮ ಜೀವನದಲ್ಲಿ ಶಬ್ದ ಮಾಡಲಾಗದ ಸ್ಥಿತಿ, ಎಂಥಾ ಕರುಣಾಜನಕ! ಯೋಚಿಸಿ! ನನ್ನ ಸೋದರತ್ತೆ ಗಂಡ ಒಬ್ಬರು, ಮೇಸ್ಟ್ರು ಆಗಿ, ಲಾರಿ ಸೇವೆ, ಫ್ಯಾಕ್ಟರಿ ಹಾಗೂ ಸರಕಾರಿ ಟೆಂಡರ್ ಅಂತ ಮಾತುಗಾರರಾಗಿದ್ದವರು, ಜೀವನದ ಕೊನೆ ಹಂತದಲ್ಲಿ, ಕ್ಯಾನ್ಸರ್‍ನಿಂದ ಮಾತು ಕಳೆದುಕೊಂಡು, ಮೂಕರಾಗಿ ಹಾಡುತ್ತಾ, ಎಲ್ಲಾ ಸ್ಲೇಟ್‍ನಲ್ಲಿ ಬರೆದು ತೋರಿಸ್ತಿದ್ದ ಸ್ಥಿತಿ ಕಣ್ಣೀರು ತರಿಸುತ್ತಿತ್ತು.

ಧ್ವನಿಯ ಬಳಕೆ ನಮ್ಮ ಧ್ವನಿಗಳನ್ನು ಪರಸ್ಪರ ಸಂವಹಿಸಲು, ಶಾಲೆಯಲ್ಲಿ, ಕೆಲಸದಲ್ಲಿ, ಸಾಮಾಜಿಕವಾಗಿ ಬಳಸುತ್ತೇವೆ. ನಗಲು, ಅಳಲು, ಹಾಡಲು, ಅಪಾಯ ಸ್ಥಳದಲ್ಲಿ ಚೀರಲು, ಜನರನ್ನು ಕೂಗಲು ಧ್ವನಿ ಬೇಕು. ಧ್ವನಿ ಹಾಳಾದರೆ ಹಾಳಾಗಿ ಹೋಗುತ್ತೇವೆ. ಆದ್ದರಿಂದ ಧ್ವನಿ, ಧ್ವನಿ ಪೆಟ್ಟಿಗೆ, ಧ್ವನಿ ತಂತುಗಳು, ಇವುಗಳನ್ನು ರಕ್ಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 1999ರಿಂದ ಪ್ರತಿ ವರ್ಷ ವಿಶ್ವದಲ್ಲಿ ವಿಶ್ವ ಧ್ವನಿ ದಿನಾಚರಣೆಯನ್ನು ಏಪ್ರಿಲ್ 16ರಂದು ಆಚರಿಸುತ್ತಾರೆ. ಧ್ವನಿಯ ನಿರ್ವಹಣೆ ಹಾಗೂ ರಕ್ಷಣೆ, ಕಿವಿ ಮೂಗು ಗಂಟಲು ತಜ್ಞರು, ವಾಕ್ ಶ್ರವಣ ಕ್ಷೇತ್ರದಲ್ಲಿರುವ ವೈದ್ಯರು ಇವರುಗಳಿಗೆ ಮಾತ್ರವೇ ಸಂಬಂಧಿಸಿರದೇ, ಧ್ವನಿ ಇರುವ, ಧ್ವನಿ ಬಳಸುವ, ಧ್ವನಿ ದೋಷ ಹಾಗೂ ಶ್ರವಣ ದೋಷ ಇರುವ ಎಲ್ಲರಿಗೂ ಇವು ಅನ್ವಯಿಸುತ್ತವೆ.

ಧ್ವನಿ ದೋಷಗಳು-ವಯಸ್ಸಾದಂತೆ ಧ್ವನಿ 

Namma-Dhwani-Navu-ariyonaವಯಸ್ಸಾದವರ ಧ್ವನಿಯಾಗಿ ದುರ್ಬಲವಾಗುತ್ತದೆ. ಶ್ರವಣ ದೋಷ ಇದ್ದವರಿಗೆ ನಮ್ಮ ಧ್ವನಿ ಕೇಳಲು ತೊಂದರೆ. 65 ಹಾಗೂ ಅದಕಿಂತ ಹೆಚ್ಚು ವಯಸ್ಸಾದವರಲ್ಲಿ, ಶೇಕಡಾ 12 ರಿಂದ 35 ರವರೆಗೆ ಧ್ವನಿಯ ಸಮಸ್ಯೆ ಇರುತ್ತೆ. ಧ್ವನಿಪೆಟ್ಟಿಗೆ ಹಾಗೂ ಧ್ವನಿ ಉತ್ಪಾದನೆಗೆ ಮೂಲವಾಗಿದ್ದು, ಅದರ ಎರಡೂ ಪಕ್ಕದ ಸ್ನಾಯುಗಳು, ಧ್ವನಿಯ ಸಾಂದ್ರತೆ, ಮಟ್ಟ, ಉತ್ತಮ ಪರಿಣಾಮ ನಿಯಂತ್ರಿಸುತ್ತವೆ. ಧ್ವನಿಯೇ ವ್ಯಕ್ತಿತ್ವದ ಕನ್ನಡಿ. ಆರೋಗ್ಯವಂತ ಹಿರಿಯ ವ್ಯಕ್ತಿಗಳು, ಸಂಗೀತಗಾರರು, ಅನಾರೋಗ್ಯದ ಕಿರಿಯ ವ್ಯಕ್ತಿಗಳು ಸಂಗೀತಗಾರರಿಗಿಂತ, ಮೃದು ಯುವ ಧ್ವನಿ ಹೊಂದಿರುತ್ತಾರೆ. ಧ್ವನಿ ತರಬೇತಿ ಕಾರ್ಯಕ್ರಮಗಳ ಸಹಾಯದಿಂದ, ವಯಸ್ಸಾದ ಧ್ವನಿ ಪರಿಣಾಮ, ಕಡಿಮೆ ಮಾಡಿಕೊಳ್ಳಬಹುದು. ಸಾಂಪ್ರದಾಯಿಕ ಧ್ವನಿ ಚಿಕಿತ್ಸೆ, ಹಾಡುವ ತರಬೇತಿ ಅಭಿನಯ, ಧ್ವನಿ ತಂತ್ರಗಳು, ಕೆಲವು ರೀತಿಯ ವ್ಯಾಯಾಮಗಳು-ಇಲ್ಲಿ ಪ್ರಸ್ತುತ.

ಗಾಯಕರು, ನಟರು, ನಟಿಯರು, ರೇಡಿಯೋ ಹಾಗೂ ದೂರದರ್ಶನ, ಕೇಬಲ್ ವಾಹಿನಿಗಳಲ್ಲಿ ಉದ್ಘೋಷಕರು, ವಾರ್ತಾ ವಾಚಕರು, ಸಂದರ್ಶಕರು, ಭಾಷಣಕಾರರು, ಶಿಕ್ಷಕರು, ಪಾದ್ರಿಗಳು, ಮಾರಾಟಗಾರರು, ಸ್ವಾಗತಕಾರರು, ಕೋರ್ಟಿನಲ್ಲಿರುವ ಅಮೀನ, ದೂರವಾಣಿ ಕ್ಷೇತ್ರದಲ್ಲಿರುವವರು ತಮ್ಮ ಧ್ವನಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸಾಮಾನ್ಯ. ರೋಗಿಗೆ ವಿವರವಾಗಿ ತಿಳಿಹೇಳುವ ವೃದ್ಯರು, ವ್ಯಾಪಾರೀ ಕ್ಷೇತ್ರದ ಹಿರಿಯ ನಿರ್ವಾಹಕ ಸಭೆಯಲ್ಲಿ ಮಾತಾಡಬೇಕಾದಾಗ, ಧ್ವನಿ ಇಲ್ಲದೇ ಇರಲು ಸಾಧ್ಯವೇ? ಕೆಲಸದಲ್ಲಿ ಸತತವಾಗಿ ತೊಡಗಿದ್ದರಿಂದ ನನ್ನ ಮನೆಯಲ್ಲಿ, ಹೊರಗೆ ಸತತ ನಾಟಕಗಳ ರಿಹರ್ಸಲ್, ರೇಡಿಯೋ ನಾಟಕಗಳ ಆಲಿಸುವಿಕೆ, ರಂಗನಾಟಕಗಳ ದರ್ಶನ ಇವೆಲ್ಲವುಗಳಿಂದ ಈ ಧ್ವನಿಯಲ್ಲೇ ಏನೇ ಗಮ್ಮತ್ತಿದೆ ಇದನ್ನು ಅರಿಯಬೇಕೆಂಬ ಕುತೂಹಲ ನನ್ನಲ್ಲಿ ಮೂಡಿತ್ತು.

ಇಂದಿನ ವಿಚಿತ್ರ ಪರಿಸ್ಥಿತಿ ಹಾಗೂ ಧ್ವನಿಯ ಬಳಕೆ

ಸಾಮಾನ್ಯವಾಗಿ, ನೇರವಾಗಿ ಕೇಳುವಾಗ, ಮೃದುಮಧುರ ಮಂಜುಳ ಧ್ವನಿ ಹೊಂದಿದವರು, ಸೌಮ್ಯಮುಖದೊಂದಿಗೆ ಸೌಮ್ಯ ಧ್ವನಿ ಹೊಂದಿದವರು, ಒಳ್ಳೆಯವರು ಎಂದು ಸಾಮಾನ್ಯವಾಗಿ ನಾವಂದುಕೊಳ್ಲುತ್ತೇವೆ. ಆದರೆ ಬಸ್‍ಗಳಲ್ಲಿ, ರೈಲುಗಳಲ್ಲಿ, ಮಹಿಳೆಯರ ಆಭರಣಗಳನ್ನು ದೋಚ ಬಯಸುವವರು, ವೃದ್ಧರು ಹಿರಿಯ ನಾಗರಿಕರಿಗೆ, ಮಂಕು ತರಿಸುವ ಔಷಧವನ್ನು ಹಾಕಿರುವ ಪ್ರಸಾದ ನೀಡಿ, ಅವರ ಹಣ, ಆಭರಣ ದೋಚ ಬಯಸುವವರು, ಅತಿ ನಯವಾದ ಮೃದು ಧ್ವನಿ, ಬಳಸಿ, ಮೋಸ ಮಾಡುತ್ತಿರುವುದು ವಿಪರ್ಯಾಸ. “ಬಾ ಮರಿ ಈ ಚಾಕಲೇಟ್ ತಿನ್ನು ನಿಮ್ಮ ಅಂಕಲ್ ನಾನೂ ಸ್ನೇಹಿತರುು” ಎಂದು ಮೃದುವಾಗಿ ಉಲಿಯುತ್ತ ಮಗುವನ್ನು ಅಪಹರಿಸುವ ಕಳ್ಳ, ಸಹ ಮೃದು ಧ್ವನಿ ಬಳಸಿ ನಾಟಕವಾಡಿ ಮೋಸ ಮಾಡುತ್ತಾನೆ.

ಇಂದಿನ ವಿವಿದ ಮೊಬೈಲ್ ಕಂಪನಿಗಳು, ಪ್ರವಾಸಿ ಸಂಸ್ಥೆಗಳು, ಟಿ.ವಿ ಚಾನೆಲ್‍ಗಳಲ್ಲಿ, ಸೈಟು – ಮನೆ ಮಾರುವ ರಿಯಲ್ ಎಸ್ಟೇಟ್ ಕಂಪನಿಗಳು, ಸಾರ್ವಜನಿಕ ಉದ್ದಿಮೆ, ಖಾಸಗಿ ಸಂಸ್ಥೆಗಳ ಸ್ವಾಗತಕಾರರು, ಫೋನ್‍ನಲ್ಲಿ ಹಾಗೂ ನೇರವಾಗಿ ಗ್ರಾಹಕರೊಂದಿಗೆ, ಸ್ವಲ್ಪ ಕೃತಕವೆನಿಸಿದರೂ ಅತಿ ಮಧುರ ಧ್ವನಿಯಲ್ಲಿ, ಒಳ್ಳೆಯ ಶಬ್ದಗಳನ್ನು ಹಾಕಿ ಮಾತನಾಡುತ್ತಾರೆ. ನಿಮಗೆ ಬೇಕೋ ಬೇಡವೋ, ಅವರ ಉಲಿಯುವ ಧ್ವನಿಯ ಮಧುರ ಮಾತು ನಿಮ್ಮನ್ನು ಅವರು ಹೇಳಿದಂತೆ ಕೇಳುವಂತೆ ಮಾಡಿಸುತ್ತದೆ. ಇದನ್ನು ಆಧುನಿಕ ಮಾರುಕಟ್ಟೆ ತಂತ್ರ ಎನ್ನಬಹುದು. High frequencies ಇರುವುದರಿಂದ, ಯುವತಿ/ಮಹಿಳೆಯ ಧ್ವನಿ ಕೀರಲಾಗಿ ಮಧುರವಾಗಿರುವುದು ಸಹಜ. ಅದನ್ನೇ ಬಳಸಿ ಬಂಡವಾಳ ಮಾಡಿಕೊಂಡು ವ್ಯಾಪಾರ – ವ್ಯವಹಾರ ನಡೆಸುವುದು ವಾಡಿಕೆಯಾಗಿದೆ.

ಗೊಗ್ಗರು ಧ್ವನಿ ಇರುವವರು ಎಷ್ಟೇ ಒಳ್ಳೆಯವರಾಗಿದ್ದರೂ,  ಅವರ ಧ್ವನಿಯನ್ನು ಯಾರೂ ಇಷ್ಟ ಪಡುವುದಿಲ್ಲ. ದೂರವಾಣಿಯಲ್ಲಿ ಯಾರದಾದರೂ ಗೊಗ್ಗರು ಧ್ವನಿ ಕೇಳಿಸಿದಲ್ಲಿ, ತಕ್ಷಣ ಜನ ಫೋನ್ ಕಟ್ ಮಾಡ್ತಾರೆ. ಇತ್ತೀಚೆಗೆ ವಿವಿಧ ಮೊಬೈಲ್ ಕಂಪನಿ ಜಾಹೀರಾತುಗಳು, ಸ್ಥಿರ ದೂರವಾಣಿ ಕೇಂದ್ರಗಳಿಂದ ಸತತ ನಿಮ್ಮ ಮೊಬೈಲ್‍ಗೆ, ಸ್ಥಿರ ದೂರವಾಣಿಗೆ ಬರುವ ಸೂಚನೆಗಳು, ಗ್ಯಾಸ್ ಕಂಪನಿಗಳಿಗೆ ಸಿಲೆಂಡರ್ ಬುಕಿಂಗ್‍ಗಾಗಿ ಪ್ರಯತ್ನ ಮಾಡುವಾಗ ಸಿಗುವ ಸೂಚನೆಗಳು, ಇಲ್ಲೆಲ್ಲಾ ತರಬೇತಿಯಾದ ಉತ್ತಮ ಧ್ವನಿ, ಮೂಲಕ ಸಂದೇಶಗಳನ್ನು ಕಳಿಸುವ, ನಿಮಗೆ ಸೂಚನೆ, ನಿರ್ದೇಶನಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

ಹಿಂದೆಲ್ಲ ಮೂಕಿ ಚಲನಚಿತ್ರಗಳಲ್ಲಿ ಮಾತಿರಲಿಲ್ಲ. ಧ್ವನಿ ಬಳಕೆ ಇರಲಿಲ್ಲ. ಟಾಕಿ ಚಲನಚಿತ್ರಗಳಲ್ಲಿ ಅವರದೇ ಆದ ಧ್ವನಿಯಲ್ಲಿ ಸಂಭಾಷಣೆಗಳ ಹಾಗೂ ಹಾಡುಗಳ ನೇರ ಧ್ವನಿ ಮುದ್ರಣವಿತ್ತು. ನಂತರ ಕಲಾವಿದರಿಗೆ ಬೇರೆಯವರು ಹಾಡುವ ಪರಿಪಾಠ ಶುರುವಾಯಿತು. ಹಲವು ದಶಕಗಳ ಈಚೆಗೆ ಪಾತ್ರಧಾರಿಗಳಿಗೆ ಸಂಭಾಷಣೆಗಳನ್ನೂ ಬೇರೆಯವರ ಮಧುರ ಧ್ವನಿಯಲ್ಲಿ ಹೊಂದಿಸುವ ರೂಢಿ ಆರಂಭವಾಗಿದೆ. ಕನ್ನಡ ಭಾಷೆ ಮಾತನಾಡಲು ಬಾರದ, ಮಧುರ ಧ್ವನಿಯಿರದ, ನಾಯಕ, ನಾಯಕಿ, ಪೋಷಕ ಪಾತ್ರಧಾರಿಗಳಿಗೆ ಸೂಕ್ತ ಧ್ವನಿ ದಾನ ಮಾಡುವ ಕಲಾವಿದರಿಗೆ ಈಗ ಹೆಚ್ಚಿನ ಬೇಡಿಕೆ ಇದೆ

ಧ್ವನಿ ಬಳಕೆಗೆ ಕಿವಿಮಾತುಗಳು

ನಮ್ಮ ಧ್ವನಿಯನ್ನು ನಾವು ಅರಿಯೋಣ

1. ನಿಮ್ಮ ನಿಜವಾದ ಧ್ವನಿಯಲ್ಲಿ ಸೂಕ್ತ ಎತ್ತರ, ಮಟ್ಟದಲ್ಲಿಯೇ, ಮಾತನಾಡಿ.

2. ನಿಮ್ಮದಲ್ಲದ ಕೃತಕ ಧ್ವನಿಯಲ್ಲಿ ಮಾತಾಡುವುದನ್ನು ನಿಲ್ಲಿಸಿ.

3. ಯಾರು ಯಾರನ್ನೋ ಅನುಕರಿಸಿದರೆ ನಿಮ್ಮ ಮೂಲ ಧ್ವನಿ ಕಳೆದುಹೋಗುತ್ತದೆ.

4. ರಂಗಕಲಾವಿದರು, ಬಾಷಣಕಾರರು, ಸಂಗೀತಗಾರರು, ತಮ್ಮ ಧ್ವನಿಯನ್ನು ಸದಾ ಬಿಸಿಯಾಗಿ ಇಟ್ಟುಕೊಂಡಿರಬೇಕು.

5. ಧ್ವನಿಗೆ ದಣಿವಾದರೆ,. ಶೀತವಾದರೆ ಕಟ್ಟಿಕೊಂಡರೆ, ಪ್ರಯಾಸ ಪಟ್ಟು ಮಾತಾಡಿದರೆ ಧ್ವನಿ ತಂತುಗಳಿಗೆ ಅಪಾಯವಿದೆ.

6. ಆಗಾಗ ಧ್ವನಿಗೆ ಸ್ವಲ್ಪ ರೆಸ್ಟ್ ಕೊಟ್ಟು ಮೌನವ್ರತ ಆಚರಿಸಿರಿ.

7. ಮಾತಾಡುವ ಧ್ವನಿ ಉಚಿತ ಎಂದುಕೊಂಡು ಅತಿಯಾಗಿ ಸತತ ಬಳಸಬೇಡಿ.

8. ತೀರ ಶೀತದ ತಣ್ಣನೆಯ ಪಾನೀಯ, ಫ್ರಿಜ್ ನೀರು, ಐಸ್ ಕ್ರೀಂ, ಸೇವಿಸಬೇಡಿ.

9. ಬಿಸಿ ಬಿಸಿ ಶುಚಿ ಊಟ ಮಾಡಿ. ಹೊರಗೆ ಎಲ್ಲೆಲ್ಲೋ ರಸ್ತೆಯಲ್ಲಿ ಇರುವ ತಳ್ಳುಗಾಡಿಯ ಆಹಾರ ಪಾನೀಯ, ಸ್ವೀಕರಿಸಬೇಡಿ.

10. ಬೇರೆ ಬೇರೆ ಊರಿಗೆ ಹೋದಾಗ ನೀರು ಬದಲಾಗುತ್ತದೆ. ಹೀಗಾಗಿ ಮನೆಯಿಂದ ಕಾಸಿ ಆರಿಸಿ, ಸೋಸಿದ ನೀರು ಜೊತೆಗೆ ಕೊಂಡೊಯ್ಯಿರಿ.

11. ಎಲ್ಲೆಲ್ಲೋ ಕಲ್ಮಶ ನೀರು ಕುಡಿದು ಧ್ವನಿ ಕಟ್ಟಿಕೊಂಡು ಒದ್ದಾಡಬೇಡಿ..

12. ಧ್ವನಿ ಉತ್ತಮವಾಗಲು, ಹದವಾದ ಬಿಸಿನೀರು ಕುಡಿಯಿರಿ

13. ಕೆಂಪುಕಲ್ಲು ಸಕ್ಕರೆ ಸೇವಿಸಿ. ಮೆಣಸು ಕಷಾಯ ಕುಡಿಯಿರಿ.

14. ಜೇಷ್ಠ ಮಧುವಿನ ಬೇರು ಅಥವಾ ಪುಡಿ ಆಗಾಗ ಅಗಿದರೆ, ಗಂಟಲು ಒಣಗದೇ ಹಸಿಯಾಗಿದ್ದು ಧ್ವನಿ ಹಾಳಾಗುವುದಿಲ್ಲ.

15. ಬಹಳ ಜಿಡ್ಡು, ಎಣ್ಣೆ, ತುಪ್ಪ, ಮಸಾಲೆ ಬಳಸಬೇಡಿ

16. ಕರಿದ ತಿಂಡಿ, ಚೀಸ್, ಬೇಕರಿ ಪದಾರ್ಥಗಳನ್ನು ಬಳಸಬೇಡಿ.

ಎನ್.ವ್ಹಿ ರಮೇಶ್, ಮೈಸೂರು ಮೊ: 9845565238

ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!